ಜೀವವೆಂದರೆ ಬರಿ ಒಡಲು ಅಲ್ಲ
ಒಡಲಿಲ್ಲದೆ ಜೀವವು ಇಲ್ಲ
ಒಡಲು ಜೀವಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಫಲವೆಂದರೆ ಬರಿ ವೃಕ್ಷವಲ್ಲ
ವೃಕ್ಷವಿಲ್ಲದೆ ಫಲವು ಇಲ್ಲ
ವೃಕ್ಷ ಫಲಗಳ ಸಂಬಂಧವೇ
ಜೀವನಾನುಬಂಧ
ಅದು ಎನಿತು ಸುಂದರ

ಅರ್ಥವೆಂದರೆ ಬರಿ ವಾಕ್ಯವಲ್ಲ
ವಾಕ್ಯವಿಲ್ಲದೆ ಅರ್ಥವು ಇಲ್ಲ
ವಾಗರ್ಥ ಸಂಬಂಧ
ಅದು ಎನಿತು ಸುಂದರ

ದಯೆಯೆಂದರೆ ಬರಿ ದಾನವಲ್ಲ
ದಾನವಿಲ್ಲದೆ ದಯೆಯು ಇಲ್ಲ
ದಾನ ದಯೆಗಳ ಸಂಬಂಧ
ಅದು ಎನಿತು ಸುಂದರ

ಪ್ರೀತಿಯೆಂದರೆ ಬರಿ ನೀತಿಯಲ್ಲ
ನೀತಿಯಿಲ್ಲದೆ ಪ್ರೀತಿಯು ಇಲ್ಲ
ನೀತಿ ಪ್ರೀತಿಗಳ ಸಂಬಂಧ
ಅದು ಎನಿತು ಸುಂದರ

ಜ್ಞಾನವೆಂದರೆ ಬರಿ ಯೋಗವಲ್ಲ
ಯೋಗವಿಲ್ಲದೆ ಜ್ಞಾನವು ಇಲ್ಲ
ಯೋಗ ಜ್ಞಾನ ಸಂಬಂಧ
ಅದು ಎನಿತು ಸುಂದರ
*****