“ಓಹೋ! ಇಂದು ಆಷಾಢ ಏಕಾದಶಿ, ತಪ್ತಮುದ್ರಾಧಾರಣೆಯಾಗ ಬೇಕು. ಇದಕ್ಕಾಗಿಯೇ ವಾಗ್ದೇವಿಯು ನದೀ ತೀರದಲ್ಲಿ ಸ್ನಾನ ಮಾಡುತ್ತಿರು ವಳು. ಬಹು ಜನರು ಆ ನದೀ ತೀರದಲ್ಲಿ ಕೂಡಿರುವದು ಇದೇ ಉದ್ದಿಶ್ಯ ವಾಗಿರಬೇಕು.” ಎಂದು ಚಂಚಲನೇತ್ರರು ಹೇಳಿದರು. ಈ ಮಾತನ್ನು ಕೇಳಿ ತನ್ನ ಮಠದಲ್ಲಿ ನಡಿಯಬೇಕಾಗಿರುವ ಮುದ್ರಾಧಾರಣಗೋಷ್ಠಿಯೇ ಇವರಿಗೆ ಫಕ್ಕನೆ ಮರೆತು ಹೋಗುವದು ಸ್ವಲ್ಪ ಆಶ್ಚರ್ಯವಾಗಿ ವೆಂಕಟ ಪತಿಗೆ ತೋರಿತು. ಚಂಚಲನೇತ್ರರ ಮನಸ್ಸನ್ನು ಪೂರ್ಣವಾಗಿ ವಾಗ್ದೇವಿಯು ಆಕರ್ಷಣೆ ಮಾಡಿಕೊಂಡಿರುವ ದೆಸೆಯಿಂದ ತಾನು ಯಾವ ತಾವಿಗೆ ಹೋಗ ಬೇಕು, ಏನು ಮಾಡಬೇಕು ಎಂಬ ಗೊಡವೆಯೇ ಇಲ್ಲದೆ ಅವರು ಒಂದು ಗೊಂಬೆಯಂತೆ, ಹಿಂದಿನಿಂದ ಆಚಾರ್ಯ ಮುಂದಿನಿಂನ ಮಾಣಿ ಇವರೊಡನೆ ಮೆಲ್ಲಮೆಲ್ಲನೆ ಅಡಿಯಿಡುತ್ತಾ ತಮ್ಮ ಮಠವನ್ನು ಹೇಗಾದರೂ ಪ್ರವೇಶ ಮಾಡಿದರು. ಅಲ್ಲಿ ಆಗಬೇಕಾಗಿರುವ ನಿತ್ಯ ಕರ್ಮಾನುಷ್ಠಾನಗಳನ್ನು ನಡಿಸುವಾಗ ಈ ಯತಿಗಳು ಎಂದಿನಂತೆ ಜಾಗರೂಕತೆ ಯುಳ್ಳವ ಕಾಣಲಿಲ್ಲ. ಅವರು ಒಬ್ಬನ ಕೂಡೆ ಇನ್ನೊಬ್ಬನು ಕುಸುಗುಟ್ಟಲಿಕ್ಕೆ ತೊಡಗಿದನು.
ವಾಗ್ದೇವಿಯು ಜತಿ ಅಂಚಿನ ಹೊಂಬಣ್ಣದ ಶಾಲೆಯನ್ನುಟ್ಟು ಜರತಾರಿ ಕುಪ್ಪಸವನ್ನು ತೊಟ್ಟುಕೊಂಡು, ಉಂಗುರ ಕೂದಲು ಎಳೆದು,
ದುಂಡಗಾದ ತುರುಬು ಕಟ್ಟಿಕೊಂಡಿದ್ದಳು. ಅದರಲ್ಲಿ ಒಂದು ಗುಲಾಬಿ ಹೂವು ಮುಡಿಸಿತ್ತು. ಹಣೆಯಲ್ಲಿ ದಿವ್ಯವಾಗಿ ಕುಂಕುಮದಬೊಟ್ಟು ಅತೀ ಸಪೂರವಾಗಿ ಹಚ್ಚಿಕೊಂಡು, ಮಂದಸ್ಮಿತವದನವುಳ್ಳವಳಾಗಿ ಸೆರಗನ್ನು ಎಳಕೊಳ್ಳುತ್ತಾ, ಒಂದು ಕಣ್ಣಿನದೃಷ್ಟಿಯು ಸ್ವಲ್ಪ ಓರೆಯಾಗಿರುವದರಿಂದ ಮುಖದ ಕಾಂತಿಯು ಮತ್ತಷ್ಟು ವೃದ್ಧಿಯಾಗಿ ಅಪೂರ್ವವಾದ ಸ್ತ್ರೀರತ್ನನೆಂದು ಎಲ್ಲರು ಸಮ್ಮತ ಪಡುವ ಹಾಗೆ ಕಾಲಿನ ಉಂಗುರಗಳ ಝಣತ್ಕಾರದಿಂದಲೇ ಗುಂಪಿನ ಮಧ್ಯದಿಂದ ಕ್ಷಣಮಾತ್ರದಲ್ಲಿ ದಾರಿಯನ್ನು ಬಿಡಿಸಿಕೊಂಡು, ಮುದ್ರಾಧಾರಣೆ ಯಾಗತಕ್ಕ ಸ್ಥಲಕ್ಕೆ ಮದದಾನೆಯೋಪಾದಿ ನಡೆದಳು. ಚಂಚಲನೇತ್ರರಿಗೂ ಒಂದು ಓರೆಕಣ್ಣಿರುವದು. ಗುಂಪಿನ ಮಧ್ಯದಿಂದ ಯಾರೋ ಒಬ್ಬನು-
“ಕ್ವಚಿತ್ ಕಾಣಾ ಭವೇಶ್ ಸಾಧು ಕ್ವಚಿಶ್ ಕಾಣಿ ಪತಿವ್ರತಾ” ಎಂದು ದೊಡ ಸ್ವರದಿಂದ ಒದರಿದನು.
ಆಗ ಚಂಚಲನೇತ್ರರು ಮುದ್ರಾಧಾರಣೆಯ ಸ್ಥಾನಕ್ಕೆ ಬಂದು, ಆಸನಾರೂಢರಾಗಿದ್ದರಷ್ಟೆ. ಪ್ರಥಮದಲ್ಲಿಯೇ ಅವಳ ದೃಷ್ಟಿಯು ಅವರ ದೃಷ್ಟಿಗೆ ಸಮ್ಮಿಳಿತವಾಯಿತು. ತಮ್ಮಿಬ್ಬರಿಗೂ ತುಸು ಓರೆದೃಷ್ಟಿಯಿರುವ ಕಾರಣ ಈ ಹಾಸ್ಯರೂಪದ ಶ್ಲೋಕವು ಯಾರ ಬಾಯಿಯಿಂದ ಬಂದುದೆಂದು ಅವರು ಮನಸ್ಸಿನಲ್ಲಿಯೇ ಕೊಂಚ ಖಿನ್ನರಾದರು. ಆದರೂ ಯತಿಶ್ರೇಷ್ಟರು ಇನ್ನೊಮ್ಮೆ ವಾಗ್ದೇವಿಯ ಮುಖಾವಲೋಕನಮಾಡುತ್ತಲೇ ಹಿಂದೆ ನಡ ದದ್ದೆಲ್ಲ ಮರವೆಗೆ ಬಂದು ಆನಂದಾಬ್ಧಿಯಲ್ಲಿ ಮನಸ್ಸನ್ನು ಓಲಾಡಿಸಿಬಿಟ್ಟರು.
ಮುದ್ರಾಧಾರಣೆಯನ್ನು ಮಾಡಿಸಿಕೊಳ್ಳುವದಕ್ಕಾಗಿ ಮಠದ ಶಿಷ್ಯ ದೊಡ್ಡ ಸಮೂಹವು ನೆರೆದಿತ್ತು. ಒಂದೊಂದು ಸಾರಿ ಮೂವರನ್ನು ಸಾಲಾಗಿ ನಿಲ್ಲಿಸಿ, ಮುದ್ರಾಂಕಿತವು ಎಡೆಬಿಡದೆ ನಡೆಯುತ್ತಿತ್ತು. ಶ್ರೀಪಾದಂಗಳ ಸಮೀಪವಿದ್ದ ವೈದಿಕರು
ಸುದರ್ಶನಮಹಾಜ್ವಾಲಾ ಕೋಟಿಸೂರ್ಯಸಮಪ್ರಭಾ
ಅಜ್ಞಾನಾ ಧಶಮೇನ್ನಿತ್ಯಂ ವಿಷ್ಣುರ್ಮಾರ್ಗಂಪ್ರದರ್ಶಯ॥
ಎಂದು ಗಂಭೀರಸ್ತರದಿಂದ ಘೋಷಿಸುತ್ತಲಿದ್ದರು. ಆವರ ಎದುರಿಗೆ ಒಂದು ಹರಿವಾಣವಿತ್ತು. ಆಗಾಗ ಪಾರಪತ್ಯಗಾರನು ಹರಿವಾಣದಿಂದ ಕಾಣಿಕೆಯ ಹಣವನ್ನು ರಿಕ್ತಮಾಡಿ, ಪುನಃ ಅದನ್ನೇ ಇಡುತ್ತಿದ್ದನು. ಬೆಳ್ಳಿಯ ಮತ್ತು ಭಂಗಾರದ ಉದ್ದವಾದ ಹಿಡಿಗಳುಳ್ಳ ಶಂಕಚಕ್ರ ಮುದ್ರೆಗಳನ್ನು ಮುದ್ರಾ ಧಾರಣೆಯ ಹೋಮಾಗ್ನಿಯಲ್ಲಿ ಚೆನ್ನಾಗಿ ಕಾಯಿಸಿ, ಶ್ರೀಪಾದಂಗಳ ಕೈಯಲ್ಲಿ ವೈದಿಕರು ಕೊಡುತ್ತಲೇ, ಅವರು ಸಮ್ಮುಖದಲ್ಲಿ ನಿಂತಿರುವ ಶಿಷ್ಯರಿಗೆ ಜಾಗ್ರತೆ ಯಾಗಿ ಮುದ್ರೆಯೊತ್ತಿಬಿಡುವರು. ಧೈರ್ಯಸ್ತರು ಮೈಯನ್ನು ರವೆಯಷ್ಟಾದ ರೂ ಅಲುಗಿಸದೆ ಸ್ತಬ್ಧರಾಗಿ ನಿಂತುಕೊಂಡು, ನೋಡುವವರ ಶ್ಲಾಘನೆಗೆ ಪಾತ್ರ ರಾಗುವರು. ಪುಕ್ಕರು ಹೆದರಿ ತಮ್ಮನ್ನು ಸುಟ್ಟು ತೆಗೆಯುವರೆಂಬ ಭ್ರಮೆಯಿಂದ ಹಿಂದೆಸರಿಯುವರು. ಆಗ ಬಲಿಷ್ಟರು ಅವರ ತೋಳುಗಳನ್ನು ಹಿಡಿದು ಸರಿ ಯಾಗಿ ನಿಲ್ಲಿಸಿ, ಹಾಸ್ಯವದನರಾಗಿ ವಿನೋದವನ್ನುಂಟು ಮಾಡುವರು. ಗಂಡಸರೇ ಹೀಗೆ ಹೆದರಿ ಬಿಟ್ಟರೆ ತಮ್ಮ ಅವಸ್ಥೆ ಇನ್ನು ಹೇಗಾಗುವದೋ ಎಂಬ ಅನುಮಾನದಿಂದ ಅಬಲೆಯರನೇಕರು ಹಿಂಜಿ ಹಿಂದೆ ಸರಿಯ ತೊಡಗಿದರು. ವಾಗ್ದೇವಿಗೆ ಅಂಥಾ ಭಯ ಲೇಶವಾದರೂ ಇರಲಿಲ್ಲ. ಆದರೂ ತಾನೊಬ್ಬಳೇ ಮುಂದೆ ಬಿದ್ದರೆ, ಬೇರೆ ಹೆಂಗಸರೂ ಗಂಡಸರೂ ತನ್ನ ಧೈರ್ಯ ವನ್ನು ಕಂತು ಯದ್ವಾ ತದ್ವಾ ಆಡಿಬಿಡುವರೆಂಬ ಅಂಜಿಕೆಯಿಂದಲೋ ಇನ್ನಾವ ಕಾರಣದಿಂದಲೋ ಎಲ್ಲರಿಗಿಂತಲೂ ಹಿಂದೆ ನಿಂತುಕೊಂಡಿದ್ದಳು. ಆಕಾಶದಲ್ಲಿ ಅಸಂಖ್ಯಾತ ನಕ್ಷತ್ರಗಳ ಪ್ರಭೆಯಿಂದ ಚಂದ್ರನ ಕಾಂತಿಯಾಗಲೀ ಬಿಂಬವಾಗಲೀ ಕುಂದುವ ಹಾಗಿಲ್ಲವಷ್ಟೆ. ಹಾಗೆಯೇ ವಾಗ್ದೇವಿಯು ಎಲ್ಲರ ಹಿಂದೆ ಅವಿತುಕೊಂಡವಳಂತೆ ನಿಂತುಕೊಂಡಿದ್ದರೂ ಅವಳ ಪ್ರಸನ್ನತೆಯು ಯಾರಿಗೂ ಮರೆಯಾಗಿರಲಿಲ್ಲ. ಅವಳ ಕಟಾಕ್ಷವನ್ನೇ ಈಕ್ಷಿಸಿಕೊಂಡಿರುವ ಚಂಚಲನೇತ್ರರಿಗನಕ ಸಂಪೂರ್ಣವಾಗಿ ಗೋಚರವಾಗುತ್ತಿತ್ತು. ಅಲ್ಲಿ ನೆರೆದ ಅಬಲಾವೃ೦ದದಲ್ಲಿ ಈ ಯುವತಿಯ ಮೋಹನಶಕ್ತಿಯೂ ಲಾವಣ್ಯವೂ ಇನ್ನೊಬ್ಬ ಸ್ತ್ರೀಯಲ್ಲಿ ಇರುತ್ತಿದ್ದರೆ ಚಂಚಲನೇತ್ರಯತಿಗಳ ಹೃದಯದಲ್ಲಿ ಅವಳ ಅನುಬಿಂಬನು ಸರ್ವಥಾ ನೆಲೆಯಾಗದೆ ಲೋಕದಲ್ಲಿ ಸೌಂದರ್ಯದಲ್ಲಿ ಒಬ್ಬಳಿಗಿಂತ ಮತ್ತೊಬ್ಬಳು ಉತ್ಕೃಷ್ಟವಾಗಿರುವಳೆಂಬ ಪರಿಜ್ಞಾನವು ಉತ್ಪತ್ತಿ ಯಾಗಿ, ಅವರ ಮನಸ್ಸು ಸುಸ್ಥಿರವಾಗುತ್ತಿತ್ತು.
ಗಂಡಸರೆಲ್ಲರೂ ಮುದ್ರಾಧಾರಣೆ ಮಾಡಿಸಿಕೊಂಡರು. ಹೆಂಗಸ ರಲ್ಲಿಯೂ ಅನೇಕರು ಮುದ್ರಾಂಕಿತ ಹೊಂದಿ ಕೆಲಸಾರಿದರು. ಬಹು ಮಂದಿ ಸ್ತ್ರೀಯರು ಉಳಿದರು. ಅವರೆಲ್ಲರಿಗೂ ಬೇಗ ಬೇಗ ಸುಧಾರಿಸೋಣಾಯಿತು. ಕಟ್ಟಕಡೆಯಲ್ಲಿ ವಾಗ್ದೇವಿಯು ಮಾಯಾಜಾಲವನ್ನು ಬೀಸುತ್ತಾ ಎದುಗಿಗೆ ಬಂದು ತಲೆಬಾಗಿಸಿ ನಿಂತುಕೊಂಡಳು. ಚಂಚಲನೇತ್ರರು ತಪ್ತಮುದ್ರೆಯನ್ನು ಒದ್ದೆ ಅಂಗವಸ್ತ್ರದ ಗಳಿಗೆ ಮೇಲೆ ಚೆನ್ನಾಗಿ ಒತ್ತುವದರಿಂದ ಅದರ ಉಷ್ಣತೆ ಯನ್ನು ಆದಷ್ಟು ತಣಿಸಿ, ಒಂದೊಂದು ಕೈಮೇಲೆ ಒಂದೊಂದು ಮುದ್ರೆ ಯನ್ನು ಬಹುಸೂಕ್ಷ್ಮವಾಗಿ ಒತ್ತಿಬಿಟ್ಟು, ತೀರ್ಥಪ್ರಸಾದವನ್ನು ಪ್ರೀತಿ ಪೂರ್ವಕವಾಗಿ ಅನುಗ್ರಹಿಸಿ, ಅವಳ ಕೃತಜ್ಞತೆಗೆ ಪಾತ್ರರಾದರು ಮುದ್ರಾ ಧಾರಣೆಯ ಕೆಲಸವು ತೀರಿದ ತರುವಾಯ ಶ್ರೀಪಾದಂಗಳ ಫಲಹಾರವು ಮುಗಿಯಿತು. ಸಾಯಂಕಾಲ ವೆಂಕಟಪತಿ ಆಚಾರ್ಯನು ಪ್ರಣಾಮಮಾಡಿ ನಿಂತುಕೊಂಡಾಗ ತನ್ನ ಸಮೀಪದಲ್ಲಿ ಕೂತು ಕೊಳ್ಳುವದಕ್ಕೆ ಶ್ರೀ ಪಾದಂಗಳ ಆಜ್ಞೆಯಾಯಿತು. ಹಾಗೆಯೇ ಅವರಲ್ಲಿ ಗುಪ್ತ ಸಂಭಾಷಣೆಗೆ ಪ್ರಾರಂಭ ವಾಯಿತು.
*****
ಮುಂದುವರೆಯುವುದು