ಆರೋಪ – ೮

ಆರೋಪ – ೮

ಚಿತ್ರ: ಜೆರಾರ್ಡ ಗೆಲ್ಹಿಂಗರ್‍

ಅಧ್ಯಾಯ ೧೫

ಇಂಟರ್ವ್ಯೂಗೆ ಇನ್ನೂ ಎರಡು ದಿನಗಳಿರುವಾಗಲೇ ಅರವಿಂದ ಹೈದರಾಬಾದು ತಲುಪಿದ. ಬೆಂಗಳೂರಿಗೆ ಬಸ್ಸಿನಲ್ಲಿ ಬಂದು ಅಲ್ಲಿಂದ ರೈಲು ಹತ್ತಿದ್ದ. ಬೇಸಿಗೆ ರಜೆಯಲ್ಲಿ ಓಡಾಡುವ ಮಂದಿ ಸ್ಟೇಷನಿನಲ್ಲಿ ಗಿಜಿಗಿಜಿ ತುಂಬಿದ್ದರು. ರಿಸರ್ವೇಶನಿಗೆ ಪ್ರಯತ್ನಿಸಿ ದೊರಕದೆ ಕೊನೆಗೊಬ್ಬ ಪೋರ್ಟರನಿಗೆ ಐದು ರೂಪಾಯಿಕೊಟ್ಟು ಜನತಾ ಡಬ್ಬಿಯಲ್ಲಿ ಕಿಟಿಕಿ ಬದಿಯ ಒಂದು ಸೀಟು ಸಂಪಾದಿಸಿಕೊಂಡ, ಸೂಟ್ ಕೇಸನ್ನು ಕಾಲಕೆಳಗೆ ತುರುಕಿದ್ದಾಯಿತು. ಐದು ರೂಪಾಯಿಗೆ ಪೋರ್ಟ‍ರ ಸೂಟ್ ಕೇಸು ಹುಶಾರ್ ಎಂಬ ಉಪದೇಶವನ್ನೂ ಕೊಟ್ಟ. ಬೇಸಿಗೆಯ ಸೆಕೆ, ನೆಲದಲ್ಲೂ ಕುಳಿತು, ನಿಂತು ಪ್ರಯಾಣಿಸುವ ಜನ. ಎಲ್ಲಿಂದ ಬರುತ್ತಾರೆ ಎಲ್ಲಿಗೆ ಹೋಗುತ್ತಾರೆ ಎಂದು ತಿಳಿಯದು. ಕೂತಲ್ಲಿಂದ ಏಳುವಂತಿಲ್ಲ. ಎದ್ದು ಬಾತ್ರೂಮಿಗೆ ಹೋದರೆ ವಾಪಸು ಬರುವುದು ಸಾಹಸವೇ ಸರಿ.

ಹಾಗೆ ನೋಡಿದರೆ ಈ ಯಾತ್ರೆಯೂ ಅವನ ಮಟ್ಟಿಗೆ ದೊಡ್ಡದೊಂದು ಸಾಹಸವೇ. ಪಿ‌ಎಚ್. ಡಿ. ಯ ಮರೀಚಿಕೆಯ ಬೆನ್ನು ಹತ್ತಿ ಹೊರಟ ಹುಚ್ಚು ಸಾಹಸ, ಇಂಟರ್ವ್ಯೂ ಅಂದರೆ ಸೀಟಿನ ಗ್ಯಾರಂಟಿಯೇನೂ ಅಲ್ಲ. ಇದ್ದ ಕೆಲಸಕ್ಕೆ ರಾಜೀನಾಮೆ ಕೊಟ್ಟು ಕೈತೊಳೆದುಕೊಂಡುದಾಗಿತ್ತು. ಇನ್ನು ಹಿಂತಿರುಗಿ ನೋಡು ವಂತಿಲ್ಲ. ಗಾಡಿಯ ಗತಿಗೆ ನಿದ್ದೆ ತೂಗುತ್ತಿತ್ತು. ನಿದ್ರಿಸುವಷ್ಟು ಸ್ಥಳವಿಲ್ಲ. “ಹೈದರಾಬಾದು ಯಾವಾಗ ತಲುಪುತ್ತದೆ?” ಎಂದು ಯಾರನ್ನೋ ವಿಚಾರಿಸಿದ “ಬೆಳಿಗ್ಗೆ ಎಂಟು ಎಂಟೂವರೆಗೆ, ಕೆಲವೊಮ್ಮೆ ಲೇಟಾಗುತ್ತದೆ,” ಎಂಬ ಉತ್ತರ ಬಂತು. ರಾತ್ರಿಯೆಲ್ಲಾ ಮಕ್ಕಳು ಕಿರುಚುತ್ತಿದ್ದವು. ಯಾವ ಯಾವುದೋ ಟ್ರೈನುಗಳು ಬರುತ್ತಿದ್ದುವು ಹೋಗುತ್ತಿದ್ದುವು. ಕೆಲವೆಡೆ ಗಾಡಿ ಎಷ್ಟೋ ಹೊತ್ತಿನ ತನಕ ಸುಮ್ಮನೆ ನಿಂತು ಬಿಡುತ್ತಿತ್ತು. ಹೊರಗೆ ತಿಂಗಳ ಬೆಳಕು, ಅಪರಿಚಿತ ಪ್ರದೇಶ, ಸಮನಾಗಿ ಹರಡಿದ ದಖ್ಖಣದ ಭೂಮಿ. ಕಿಟಕಿಗೆ ಮುಖವಿಟ್ಟು ನೋಡು ತಿದ್ದಂತೆಯೇ ಯಾಕೋ ಮನಸ್ಸು ತುಂಬಾ ಬೇಸರ.

“ನೀವು ಹೈದರಾಬಾದು ಇಳಿಯಬೇಕೆಂದಿರಲ್ಲ? ಹೈದರಾಬಾದಾದರೆ ಇಲ್ಲೇ ಇಳೀರಿ. ಮುಂದಿನ ಸ್ಟೇಷನು ಸಿಕಂದರಾಬಾದು,” ಎಂದೊಬ್ಬ ಎಚ್ಚರಿಸಿದ.

ಗಂಟೆ ಎಂಟೂವರೆ ದಾಟಿತ್ತು. ಸೂಟ್‌ಕೇಸ್ ತೆಗೆದುಕೊಂಡು ಗಡಿಬಿಡಿಯಿಂದ ಹೊರಗಿಳಿದ. ದಾರಿ ಮಾಡಿಕೊಂಡು ಸ್ಟೇಷನ್‌ನಿಂದ ಹೊರಬಂದ ಆಟೊ, ಸೈಕಲ್ ರಿಕ್ಷಾಗಳ ಧಾಳಿ, “ಕಿಧರ್‌ ಜಾನಾ?’ ಎಂಬ ಪ್ರಶ್ನೆ. ಒಬ್ಬ ಸೈಕಲ್ ರಿಕ್ಷಾದವನಿಗೆ ಹೇಳಿದ : “ಯಾವುದಾದರೂ ಒಂದು ಹೋಟೆಲಿಗೆ ಕರೆದುಕೊಂಡು ಹೋಗು.”
“ದೊಡ್ಡ ಹೋಟೆಲಿಗೋ ಸಣ್ಣದಕೊ?”
“ಸಣ್ಣದು ಸಾಕು.”
“ತೀನ್ ರುಪಯಾ.”

ಹತ್ತಿ ಕುಳಿತ. ಜನಜಂಗುಳಿಯ ಮಧ್ಯೆ ಸೈಕಲ್ ರಿಕ್ಷಾ ಸಾಗಿತು. ಹಲವು ಓಣಿಗಳನ್ನು ಸುತ್ತಿದ ಮೇಲೆ ಎರಡಂತಸ್ತಿನ ಒಂದು ಕಟ್ಟಡದ ಎದುರು ನಿಂತಿತು. ರಿಕ್ಷಾದವ ಸೂಟ್‌ಕೇಸ್ ತೆಗೆದುಕೊಂಡು ಹೋಗಿ ಹೋಟೆಲಿನ ಕೌಂಟರಿನ ಪಕ್ಕದಲ್ಲಿರಿಸಿದ. ಏನೋ ತೆಲುಗಿನಲ್ಲಿ ಮಾಲಿಕನಿಗೆ ಹೇಳಿದ. ಮಾಲಿಕ ರೂಮ್ ಬಾಯನ್ನ ಕರೆದು ರೂಮು ತೋರಿಸುವಂತೆ ಅಪ್ಪಣೆ ಮಾಡಿದ. ಬಾಯ್ ಸೂಟ್ ಕೇಸನ್ನು ತೆಗೆದುಕೊಂಡು ಮಾಳಿಗೆಯೇರಿದೆ. ಅರವಿಂದ ಅವನನ್ನು ಅನುಸರಿಸಿದ.

ಅದೊಂದು ಹಳೆ ಕಾಲದ ಕಟ್ಟಡ. ರೂಮು ಸಾಕಷ್ಟು ಕೊಳಕಾಗಿತ್ತು. ಗೋಡೆಯಿಂದ ಎದ್ದು ನಿಂತ ಗಾರೆ. ಆಚೀಚೆ ಹಾರಾಡುವ ಸೊಳ್ಳೆಗಳು. ರೂಮಿನ ಪಕ್ಕದಲ್ಲೇ ಬಾತ್ ರೂಮ್ ಇತ್ತು. ಇಲ್ಲೇ ಹೆಚ್ಚು ದಿನಗಳನ್ನು ಕಳೆಯುವಂತಿಲ್ಲ.

ಸ್ನಾನ ಉಪಹಾರ ಮುಗಿಸಿಕೊಂಡು ಸಂಸ್ಥೆಯನ್ನು ಹುಡುಕುತ್ತ ಹೊರಟ. ಯಾರಿಗೂ ಗೊತ್ತಿದ್ದಂತೆ ಕಾಣಿಸಲಿಲ್ಲ. ಕೊನೆಗೊಬ್ಬರು ದಾರಿ ಹೇಳಿದರು. ಬಸ್ಸು ಹಿಡಿದು ಅವರು ಹೇಳಿದ ಕಡೆ ಇಳಿದ. ಪಕ್ಕದಲ್ಲೇ ಇತ್ತು ನ್ಯಾಶನಲ್ ಇನ್‌ಸ್ಪಿಟೂಟ್ ಆಫ್ ಹಿಸ್ಟಾರಿಕಲ್ ರಿಸರ್ಚ್ನ ಬೃಹತ್ತಾದ ಕ್ಯಾಂಪಸ್, ಬೂದು ಬಣ್ಣದ ಗೋಡೆಯ ಆವರಣ. ಗೇಟಿನಲ್ಲಿ ಯೂನಿಫಾರ್ಮ್ ತೊಟ್ಟ ಕಾವಲುಗಾರ ಹೊಸಬನನ್ನು ಹುಬ್ಬೇರಿಸಿ ನೋಡಿದ. ನಂತರ ಹೋಗಲು ಬಿಟ್ಟ. ಒಳಗೆ ಡಾಮರು ಹಾಕಿದ ರೋಡುಗಳು, ಸುಂದರವಾದ ಉದ್ಯಾನಗಳು, ನಡುವೆ ಸುಣ್ಣ ಬಣ್ಣ ಮಾಡಿದ ಆಧುನಿಕ ಕಟ್ಟಡಗಳು. ಒಂದು ಅದ್ಭುತ ಜಗತ್ತನ್ನು ಪ್ರವೇಶಿಸಿದ ಅನುಭವವಾಯಿತು ಅರವಿಂದನಿಗೆ.

ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಇತಿಹಾಸದ ಸಂಶೋಧನೆಗೆಂದೇ ಸ್ಥಾಪಿತವಾದ ಸಂಸ್ಥೆ. ಲೈಬ್ರರಿ, ಆಡಳಿತ ಕಛೇರಿ, ಪ್ರೆಸ್ಸು, ಹಾಸ್ಟೆಲು, ಅಧ್ಯಾಪಕರ ವಸತಿಗೃಹಗಳೆಂದು ಹಲವಾರು ಎಕರೆಗಳನ್ನು ವ್ಯಾಪಿಸಿ ಕೊಂಡಿತ್ತು. ಅರವಿಂದ ಕ್ಯಾಂಪಸ್‌ನಲ್ಲಿ ಸುತ್ತಾಡಿದ. ಲೈಬ್ರರಿಯನ್ನು ಹೊಕ್ಕು ಹೊರಟ. ಕಾರಿಡಾರುಗಳಲ್ಲಿ ಗಂಭೀರವಾಗಿ ನಡೆದಾಡುವ ಮಂದಿಯನ್ನು ನೋಡಿದ. ಕೂಲರಿನಿಂದ ತಣ್ಣನೆ ನೀರು ಕುಡಿದ.

ರಿಸೆಪ್ಯನ್ ಲೌಂಜಿನಲ್ಲಿ ಕುಳಿತು ಸೀಗರೇಟು ಹಚ್ಚಿದೆ. ಈ ಸಂಸ್ಥೆಯಲ್ಲಿ ಸೀಟು ದೊರಕಿಸಿಕೊಳ್ಳಲೇ ಬೇಕು. ಆದರೆ ಹೇಗೆ?
ರಿಸೆಪ್ಶನಿಸ್ಟ್ ಹುಡುಗಿ ಅವನ ಕಡೆ ಕುತೂಹಲದಿಂದ ನೋಡಿದಳು. “ಕ್ಯಾನ್ ಐ ಹೆಲ್ಫ್ ಯು?”

ಕ್ಯಾನ್ ಯೂ ಎಂದು ಕೇಳಬೇಕೆಂದೆನಿಸಿತು. ನಸುನಕ್ಕ. ಬಂದ ಕೆಲಸ ಹೇಳಿದ. ಅವಳು ಇಂಟರ್ವ್ಯೂ ಕಾಗದ ನೋಡಿದಳು.
“ಇನ್ನೂ ಎರಡು ದಿನ ಇದೆ,” ಅಂದಳು.
“ಹೌದು.”
ಅಷ್ಟರಲ್ಲಿ ಯಾವುದೋ ಫೋನು ಸದ್ದು ಮಾಡಿತು. ಎಕ್ಸೂಸ್‌ಮಿ ಎಂದು ಫೋನು ಕೈಗೆತ್ತಿಕೊಂಡಳು.

ಅರವಿಂದ ಎದ್ದು ಕ್ಯಾಂಟೀನಿಗೆ ಹೋದ. ಕೌಂಟರಿನಿಂದ ಕಾಫಿಯ ಮಗ್ಗನ್ನು ಇಸಿದುಕೊಂಡು ಕುಳಿತುಕೊಳ್ಳಲು ಜಾಗ ಹುಡುಕುತ್ತಿದ್ದಾಗ ಒಂದೆಡೆ ಒಂಟಿಯಾಗಿ ಕುಳಿತಿದ್ದ ಯುವತಿಯೊಬ್ಬಳು ದೃಷ್ಟಿಗೆ ಬಿದ್ದಳು. ಅವಳನ್ನು ಹೋಗಿ ಮಾತಾಡಿಸಿದರೆ ಹೇಗೆ ಅಂದುಕೊಂಡ. ಮೈಸೂರಿನ ಮಿತ್ರ ಜೋಷಿ ಒಮ್ಮೆ ಹೇಳಿದ ಮಾತು ನೆನಪಾಯಿತು : ಬೇರೇನೂ ಕೆಲಸವಿಲ್ಲದಿದ್ದರೆ ಮಾತಾಡುತ್ತಾ ಇರು. ಜನ ತಮ್ಮನ್ನು ಮೊದಲಾಗಿ ಮಾತಾಡಿಸಿದವರನ್ನು ಎಂದೂ ಮರೆಯುವುದಿಲ್ಲ.

ಜೋಷಿಗೆ ಸಂಕೋಚ ಬಿಗುಮಾನಗಳಿರಲಿಲ್ಲ. ಅವಮಾನಗಳನ್ನು ನುಂಗಿ ಕೊಳ್ಳುತ್ತಿದ್ದ. ಅವನ ಮುಖದಲ್ಲಿ ಖಾಯಮ್ಮಾದ ಮುಗುಳ್ನಗೆಯಿತ್ತು. ತನಗಿರುವುದು ಇದೊಂದೇ ಬಂಡವಾಳ ಅಂದುಕೊಳ್ಳುತ್ತಿದ್ದ. ಧಾರಾಳವಾಗಿ ಸುಳ್ಳುಗಳನ್ನು ಹೇಳಲು ಹಿಂಜರಿಯುತ್ತಿರಲಿಲ್ಲ. ಈಗ ಫಕ್ಕನೆ ಜೋಷಿಯ ನೆನಪು ಯಾಕೆ ಆಯಿತೆಂದು ಅರವಿಂದನಿಗೆ ತುಸು ಮುಜುಗರವಾಯಿತು. ಜೋಷಿಯ ಸಣ್ಣತನವನ್ನು ಅವನು ಯಾವಾಗಲೂ ತಿರಸ್ಕಾರ ದೃಷ್ಟಿಯಿಂದಲೇ ಕಂಡಿದ್ದ.

ಕಾಲುಗಳು ಆಕೆಯ ಕಡೆ ಎಳೆದುವು.

“ಮೇ ಐ ಜ್ಯಾಯಿನ್ ಯೂ?”

ಆಕೆ ಒಂದು ಕ್ಷಣ ಅವನತ್ತ ನೋಡಿದಳು.
“ವೈ ನಾಟ್.”
ಅವಳೆದುರು ಕುಳಿತ. ತನಗಿಂತ ಒಂದೆರಡು ವರ್ಷ ಚಿಕ್ಕವಳಿರಬಹುದು. ನೋಡುವುದಕ್ಕೆ ಲಕ್ಷಣವಾಗಿದ್ದಳು. ಮಾತಿನಲ್ಲಿ ಕಾನ್ವೆಂಟ್ ರಾಗ ಇತ್ತು. ಅರವಿಂದ ತನ್ನ ಪರಿಚಯ ಹೇಳಿದ.
ಅವಳೆಂದಳು :
“ನನ್ನ ಹೆಸರು ಕವಿತ, ಕವಿತಾ ದೇಶಪಾಂಡೆ.”
ಅವಳ ಮಗ್‌ನಲ್ಲಿ ಕಾಫಿ ಮುಗಿದಿತ್ತು.
“ನಿಮಗಿನ್ನೊಂದು ಕಾಫಿ ತರಲೆ?” ಎಂದು ಕೇಳಿದ.
ಬೇಡ ಅಂದಳು, ಒತ್ತಾಯಿಸಿದ ನಂತರ ಹೂಂ ಅಂದಳು. ಕಾಫಿ ತಂದು ಅವಳ ಮುಂದಿರಿಸಿದ. ಹಸಿರು ಸೀರೆ ತೊಟ್ಟುಕೊಂಡಿದ್ದಳು. ಕೂದಲು ಕಿತ್ತು ತೀಡಿದ ಹುಬ್ಬು, ಕುತೂಹಲ ತುಂಬಿದ ಕಣ್ಣುಗಳು, ಅರವಿಂದ ತಾನು ಹೈದರಾಬಾದಿಗೆ ಬಂದ ಉದ್ದೇಶ ವಿವರಿಸಿದ.
ತುಟಿಗಳಿಗೆ ತೆಳುವಾಗಿ ಬಣ್ಣ ಬಳಿದುಕೊಂಡಿದ್ದಳು. ತೋಳಿಲ್ಲದ ರವಿಕೆ, ಹರಳಿನ ಮಾಲೆ. ಕವಿತ ನಕ್ಕಳು.
ಅರವಿಂದ ಸೋಜಿಗದಿಂದ ನೋಡಿದ.
“ಇಬ್ಬರೂ ಒಂದೇ ಇಂಟರ್ವ್ಯೂ ತೆಗೆದುಕೊಳ್ಳುತ್ತಿದ್ದೇವೆ!” ಎಂದಳು. “ಅಂದರೆ?”
“ನಾನೂ ಒಬ್ಬ ಕ್ಯಾಂಡಿಡೇಟು.”
“ಎಂಥ ಆಕಸ್ಮಿಕ!”
“ಯಾಕೆ?”
“ಒಂದು ಕ್ಷಣದ ಹಿಂದೆ ನನಗೆ ನಿಮ್ಮ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ ನಿಮ್ಮನ್ನು ಕಂಡೊಡನೆ ಮಾತಾಡಬೇಕೆನಿಸಿತು.”
“ನಿಮಗೆ ಆರನೆ ಸೆನ್ಸ್ ಇರಬೇಕು!”
ಇರಬಹುದೆ? ಅರವಿಂದ ನಕ್ಕ, ಮತ್ತೆ ಜೋಷಿಯ ನೆನಪಾಯಿತು, ಆಕಸ್ಮಿಕವೆಂಬುದು ಅವಕಾಶಕ್ಕೆ ಇನ್ನೊಂದು ಹೆಸರು. ಅವಕಾಶವನ್ನು ಯಾರೂ ತಂದುಕೊಡುವುದಿಲ್ಲ. ಅವಕಾಶವನ್ನು ಪಡೆದುಕೊಳ್ಳಬೇಕು ಎಂದು. ಕವಿತಳ ಬಗ್ಗೆ ಅಸೂಯೆಯೂ ಆಗದಿರಲಿಲ್ಲ. ಅವಳ ವರ್ತನೆಯಲ್ಲಿ ಇನ್ನಿಲ್ಲದ ಆತ್ಮವಿಶ್ವಾಸ ತುಂಬಿತ್ತು. ಸೀಟಿನ ಬಗ್ಗೆ ಅವಳು ತಲೆಕೆಡಿಸಿಕೊಂಡಂತೆ ಕಾಣಿಸಲಿಲ್ಲ.

ಅವಳ ಬಗ್ಗೆ ಕೇಳಿದ.
ಹೈದರಾಬಾದಿನಲ್ಲೇ ಹುಟ್ಟಿ ಬೆಳೆದವಳು, ಮರಾಠಿ ಮೂಲ. ತಂದೆ ವಕೀಲರು. ಹಲವು ವರ್ಷಗಳಿಂದ ಇಲ್ಲಿ ನೆಲಸಿದ್ದರು. ಕವಿತ ಇಲ್ಲೇ ಓದಿದಳು, ಹಿಸ್ಟರಿ ಯಲ್ಲಿ ಎಂ. ಎ. ಮಾಡಿಕೊಂಡಿದ್ದಳು, ಎಂ. ಎ. ಯಲ್ಲಿ ಫಸ್ಟ್ ಕ್ಲಾಸ್ ಬಂದಿತ್ತು. ಈಗಲೇ ಕೆಲಸಕ್ಕೆ ಸೇರುವುದಕ್ಕೆ ಮನಸ್ಸಿರಲಿಲ್ಲ. ಆದ್ದರಿಂದ ರಿಸರ್ಚ್ ಮಡೋಣವೆನಿಸಿತ್ತು. ಸಂಸ್ಥೆ ಆಕೆಗೆ ಹೊಸದೇನಲ್ಲ. ಇಲ್ಲಿನ ಲೈಬ್ರರಿಗೆ ಅವಳು ಆಗಾಗ ಓದಲು ಬರುತ್ತಿದಳು.

ಅವನ ಬಗ್ಗೆ ಕೇಳಿದಳು. ಅರವಿಂದ ತನ್ನ ಮೈಸೂರು ವಿದ್ಯಾಭ್ಯಾಸದ ಕುರಿತು ಹೇಳಿದ.

“ಎಂ. ಎ. ಆದ ನಂತರ ಏನು ಮಾಡಿದಿರಿ?” ಒಂದು ಕ್ಷಣ ಏನು ಹೇಳುವುದೆಂದು ತೋಚಲಿಲ್ಲ.
“ಲೆಕ್ಚರರ್ ಆಗಿದ್ದೆ,” ಎಂದ.
“ಈಗ?”
“ಈಗ ಕೆಲಸವಿಲ್ಲ. ಲೆಕ್ಚರರ್ ಕೆಲಸಕ್ಕೆ ರಾಜಿನಾಮೆ ಕೊಟ್ಟೆ.” “ಯಾಕೆ?”
“ತಾತ್ವಿಕ ಕಾರಣಗಳಿಂದ… ನೀವೆಂದಾದರೂ ಪ್ರೈವೇಟ್ ಕಾಲೇಜಿನಲ್ಲಿ ಕೆಲಸಮಾಡಿದ್ದೀರ?”

“ಇಲ್ಲ. ನಾನಿನ್ನೂ ಫ್ರೆಶರ್ ಅಂದೆನಲ್ಲ”
“ಪ್ರೈವೇಟ್ ಕಾಲೇಜಿನಲ್ಲಿ ಕೆಲಸ ಮಾಡೋದು ಕಷ್ಟ, ಅಲ್ಲಿನ ಸಹೋದ್ಯೋಗಿಗಳು, ಪ್ರಿನ್ಸಿಪಾಲರು, ವಿಧ್ಯಾರ್ಥಿಗಳು, ಮ್ಯಾನೇಜ್‌ಮೆಂಟ್-ಹೀಗೆ ಜಗಳ ಆಗ್ತಾನೇ ಇರುತ್ತದೆ.”

ತನ್ನ ಕಾಲ್ಪನಿಕ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಚಳುವಳಿ, ಮ್ಯಾನೇಜ್‍ಮೆಂಟ್ ಮತ್ತು ಪ್ರಿನ್ಸಿಪಾಲರು ಸೇರಿ ಅದನ್ನು ದಮನಿಸಲು ನಡೆಸಿದ ಯತ್ನ, ಅಧ್ಯಾಪಕರ ಇಬ್ಬಂದಿತನ-ಎಲ್ಲವನ್ನೂ ವಿವರಿಸಿದ. ಇಂಥ ಪರಿಸರದಲ್ಲಿ ಕೆಲಸ ಮಾಡುವುದು ಹೇಗೆ? ರಾಜಿನಾಮೆ ಕೊಟ್ಟು ಹೊರಟು ಬಂದಿದ್ದ.

ಎಲ್ಲವನ್ನೂ ಕೇಳುತ್ತ ಕೈಮೇಲೆ ಮುಖವಿಟ್ಟು ಕುಳಿತಿದ್ದಳು ಕವಿತ, ಅವನ ಮಾತಿನ ವೈಖರಿಯನ್ನು ಆಲಿಸುತ್ತಿದ್ದಳು. ಅವನು ವಿವರಿಸುತ್ತಿದ್ದ ಜಗತ್ತು ಆಕೆಗೆ ಹೊಸತು. ಎಲ್ಲಿಂದಲೋ ಬಂದೊದಗಿದ ಈ ಆಕರ್ಷಕ ತರುಣ ಅವಳಲ್ಲಿ ಸಾಕಷ್ಟು ಕುತೂಹಲವನ್ನು ಎಬ್ಬಿಸಿದ್ದ. ಆದರೂ ಅವನ ಮಾತಿನ ಹಿಂದಿದ್ದ ಆತಂಕಗಳು ಅವಳ ಗಮನಕ್ಕೆ ಬರದಿರಲಿಲ್ಲ. ಅವನು ಸಹಾಯವನ್ನು ನೀರಿಕ್ಷಿಸುವಂತಿತ್ತು.
ರಿಸರ್ಚ್ ಫೆಲೋಶಿಪ್ ಬಗ್ಗೆ ತುಂಬ ಕೀನ್ ಆಗಿದ್ದರೇನು?” ಅವನು ಕಾಫಿಯ ಕೊನೆಯ ಗುಟುಕನ್ನು ಕುಡಿದ.
“ಹೌದು.”
“ಪ್ರೊಫೆಸರ್ ಖಾಡಿಲ್ಕರ್ ಗೊತ್ತೆ?”
“ಇಲ್ಲ… ನನಗಿಲ್ಲಿ ಯಾರೂ ಗೊತ್ತಿಲ್ಲ.”
“ಅವರನ್ನು ಹೋಗಿ ನೋಡುವುದು ಒಳ್ಳೆಯದು.”
ಕವಿತ ಪ್ರೊಫೆಸರು ಖಾಡಿಲ್ಕರರ ಬಗ್ಗೆ ಹೇಳಿದಳು. ಖಾಡಿಲ್ಕರ್‌ ಸಂಸ್ಥೆ ಯಲ್ಲಿ ಸೌತ್ ಇಂಡಿಯನ್ ಹಿಸ್ಟರಿ ವಿಭಾಗದ ಮುಖ್ಯಸ್ಥರು. ಸಿಲೆಕ್ಷನ್ ಕಮಿಟಿಯಲ್ಲಿ ಇರುತ್ತಾರೆ. ಅವರು ಮನಸ್ಸು ಮಾಡಿದರೆ ಸೀಟು ಸಿಗುವುದು ಕಷ್ಟವಲ್ಲ. ಸಂಸ್ಥೆಯಲ್ಲಿ ಅವರಿಗೆ ಸಾಕಷ್ಟು ಪ್ರಭಾವವಿದೆ.

“ಅವರನ್ನು ನೋಡುವುದು ಹೇಗೆ?” ಕವಿತ ತುಸು ಯೋಚಿಸಿದಳು.
“ಎಲ್ಲಿ ಇಳಿದುಕೊಂಡಿದ್ದೀರಿ?”
ಹೋಟೆಲಿನ ವಿಳಾಸ ಹೇಳಿದ.
“ನಾಳೆ ಸಂಡೆ, ಪ್ರೊಫೆಸರರು ಮನೆಯಲ್ಲಿ ಸಿಗುತ್ತಾರೆ. ಬೆಳಿಗ್ಗೆ ರೆಡಿಯಾಗಿರಿ, ನಾನು ಬಂದು ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ.”
“ಥ್ಯಾಂಕ್ಯೂ!”
ಕವಿತ ಎದ್ದು ಹೋದ ಬಹಳ ಹೊತ್ತಿನ ತನಕವೂ ಅವಳು ತೊಟ್ಟಸೆಂಟಿನ ಪರಿಮಳ ಅಲ್ಲಿ ಹರಡಿತ್ತು. ಅವಳು ನಾಳೆ ಬರುತ್ತಾಳೆಯೆ ಇಲ್ಲವೆ ಎಂಬ ಪ್ರಶ್ನೆಯನ್ನು ಹೊತ್ತುಕೊಂಡೇ ಹೋಟೆಲಿಗೆ ಮರಳಿದ. ತನ್ನ ಇಡಿಯ ಭವಿಷ್ಯವೇ ಇದರ ಮೇಲೆ ನಿಂತ ಹಾಗೆ ಅನಿಸಿತು.
*****

ಅಧ್ಯಾಯ ೧೬

ಕವಿತ ಹೇಳಿದ ಮಾತಿಗೆ ತಪ್ಪಲಿಲ್ಲ. ಮುಂಜಾನೆ ಒಂಬತ್ತರ ಸುಮಾರಿಗೆ ಕಾರಿನಲ್ಲಿ ಬಂದಿಳಿದಳು. ಹೋಟೆಲನ್ನು ಕಂಡು ಹುಡುಕಲು ಅವಳು ಸಾಕಷ್ಟು ಸುತ್ತಾಡಿದ್ದಳು. ಕೊಳಕು ಕಟ್ಟಡ, ಸುಣ್ಣ ಬಣ್ಣ ಕಾಣದೆ ವರ್ಷಗಳೇ ಸಂದಿದ್ದವು.

ಅರವಿಂದ ಕಾಯುತ್ತ ಹೊರಗೆ ನಿಂತಿದ್ದ.
“ಇಂಥ ಕೆಟ್ಟ ಹೋಟೆಲಿನಲ್ಲಿ ಇಳಿದುಕೊಂಡಿದ್ದೀರ!”
ಅವಳೇಕೊ ತುಸು ರೇಗಿದಂತಿತ್ತು. ಅರವಿಂದ ರಿಕ್ಷದವನು ತನ್ನಲ್ಲಿಗೆ ತಂದು ಬಿಟ್ಟುದನ್ನು ಹೇಳಿದ. ಇದು ತನಗೆ ಹೊಸ ಊರು ಎಂದು ಇನ್ನೊಮ್ಮೆ ಹೇಳಿದೆ.

ಕವಿತ ವಾಚು ನೋಡಿಕೊಂಡಳು.
“ಬನ್ನಿ.”
ಅವಳ ಪಕ್ಕದಲ್ಲಿ ಕುಳಿತ.
“ಡ್ಯಾಡಿ ಎಲ್ಲಿಗೋ ಹೋಗೋದಿದೆ. ಒಂದು ಗಂಟೆಯಲ್ಲಿ ಕಾರು ವಾಪಸು ತರುತ್ತೇನೆ ಎಂದಿದ್ದೇನೆ.” ಕವಿತ ಗೊಣಗಿದಳು.

ಕಾರನ್ನು ಸರ್ವೀಸ್ ಸ್ಟೇಷನಿಗೆ ತಿರುಗಿಸಿದಳು. ಪೆಟ್ರೋಲಿನ ಹುಡುಗ ಓಡಿಕೊಂಡು ಬಂದ. “ತುಂಬಿಸು” ಅಂದಳು. ಬಿಲ್ಲು ತೆತ್ತು ಕಾರನ್ನು ರೋಡಿಗೆ ತರುವಷ್ಟರಲ್ಲಿ ಕವಿತಳ ಬಿಗು ಸಡಿಲಾಗಿತ್ತು.

ಪ್ರೊಫೆಸರರ ಬಗ್ಗೆ ಮಾತಾಡಲು ತೊಡಗಿದಳು. ಅವರು ಆಕೆಗೆ ತಂದೆಯ ಮೂಲಕ ಮೊದಲಿಂದಲೇ ಪರಿಚಯ. ಖಾಡಿಲ್ಕರ್‌ ಕೂಡ ಮರಾಠಿ ಮೂಲದವರು. ಕವಿತಳ ತಂದೆ ಹೈದರಾಬಾದಿನ ಮರಾಠಿ ಸಮಾಜದ ಒಬ್ಬ ಕಾರ್ಯಕರ್ತರು. ಖಾಡಿಲ್ಕರ್‌ ಫ್ಯಾಮಿಲಿ ಫ್ರೆಂಡ್ ಇದ್ದ ಹಾಗೆ.

ಪಂಜಾಬಿ ಉಡುಗೆ ತೊಟ್ಟಿದ್ದಳು. ಬಿಳಿ ಮೈಯಲ್ಲಿ ಕಂದು ಬೊಟ್ಟುಗಳಿರುವ ಬಟ್ಟೆ.

ಯಾವನೋ ಸೈಕಲಿನವ ಅಡ್ಡಹಾದಾಗ ಬಯ್ದಳು.

ಮುಂದೆ ಟ್ರಾಫಿಕ್ ಜಾಮ್ ಆಗಿತ್ತು. ಉದ್ದಕ್ಕೆ ಬಂದು ನಿಂತ ಬಸ್ಸುಗಳು, ಆಟೋ, ಸೈಕಲ್ ರಿಕ್ಷಾಗಳು ಮುಂದೇನಾಗಿದೆಯೆಂದು ಯಾರಿಗೂ ಗೊತ್ತಿರಲಿಲ್ಲ. ಕವಿತ ತಲೆ ಹೊರಹಾಕಿ ಯಾರನ್ನೊ ಕೇಳಿದಳು. ಆಕ್ಸಿಡೆಂಟ್ ಎಂದ ಆತ. ಡ್ಯಾಮಿಟ್ ಅಂದು ಯಂತ್ರವನ್ನು ನಿಲ್ಲಿಸಿದಳು.

ಅರವಿಂದ ಕಸಿವಿಸಿಗೊಂಡ. ಆಕ್ಸಿಡೆಂಟಿಗೆ ತಾನೇ ಕಾರಣವೆಂಬಂತೆ. ಟ್ರಾಫಿಕ್ ಪೋಲೀಸಿನವನೊಬ್ಬ ಒಂದೇ ಸವನ ವಿಸಿಲು ಊದುತ್ತಿದ್ದ. ಕವಿತ ಸ್ಟೀಯರಿಂಗ್ ವೀಲ್‌ನ ಮೇಲ್ಗಡೆಯಿಂದ ಕನ್ನಡಿಯನ್ನು ಸರಿಸಿ ಮುಖ ನೋಡಿಕೊಂಡಳು. ಟ್ರಾಫಿಕ್ಕನ್ನು ಬಯ್ಯತೊಡಗಿದಳು.

“ನೋಡಿದಿರ! ಬಿಸಿ ಅವರ್‍ಸ್‌ನಲ್ಲಿ ಹೀಗೇನೇ. ಈ ಟ್ರಾಫಿಕ್ ಪೋಲೀಸರೊಂದು ಕೇಡು, ಆ ಮನುಷ್ಯನ್ನು ನೋಡಿ, ಲ್ಯಾಂಕಿ ಗಾಳಿಗೆ ಬೀಳೋಹಾಗಿದ್ದಾನೆ. ಇವರೆಲ್ಲ ನೈಜಾಮ ಕುದುರೆಲಾಯ ತೊಳೆಯುತ್ತಿದ್ದವರು…”

ಎದುರು ನಿಂತಿದ್ದ ಬಸ್ಸು ಸ್ಟಾರ್ಟ್ ಆಯಿತು. ಅದರ ಬೆನ್ನ ಮೇಲೆ ಯಾರೋ ಬರೆದಿದ್ದರು ; ಡೌನ್ ವಿದ್ ಇಂಪೀರಿಯಲಿಸಂ, ಬಸ್ಸು ಹೊರಟಿತು. ಕವಿತ ಕಾರನ್ನು ಚಾಲೂ ಮಾಡಿದಳು. ನಿಧಾನವಾಗಿ ಮುಂದರಿಯುತ್ತಿದ್ದಾಗ ಒಂದ
ರಸ್ತೆ ಸಾರಿಗೆ ಬಸ್ಸು.

ಒಂದು ದೊಡ್ಡ ಮನೆ ಕಾಂಪೌಂಡಿನೆದುರು ಕವಿತ ಕಾರು ನಿಲ್ಲಿಸಿದಳು. ಎರಕದ ಕಬ್ಬಿಣದ ಗೇಟು. ಈಚೆಗೆ ಹೊಸತಾಗಿ ಪೈಂಟು ಮಾಡಿದಂತಿತ್ತು.

“ಪ್ರೊಫೆಸರರ ಪ್ರಶ್ನೆಗಳಿಗೆ ಸಿಂಪಲ್ ಅಂಡ್ ಸ್ಟ್ರೇಟ್ ಆಗಿ ಉತ್ತರ ಕೊಡಿ. ಆಯಿತೆ? ನೀವಾಗಿ ಯಾವ ಪ್ರಶ್ನೆಯನ್ನೂ ಕೇಳದಿರೋದು ಒಳ್ಳೇದು.” ಕವಿತ ಸಲಹ ಮಾಡಿದಳು.

ಇದೆಲ್ಲ ಒಂದು ಪಿತೂರಿಯಂತಿತ್ತು.
ಅರವಿಂದ ಗೇಟನ್ನು ಬಹಳ ಪ್ರಯಾಸದಿಂದ ತರೆದ. ಒಳಗೆ ಏನೇನೋ ಮರಗಿಡಗಳು, ಹೂವುಗಳು.

ಕವಿತ ಕರೆಗಂಟೆ ಒತ್ತಿದಳು. ಆಂಟೀ ಎಂದು ಒಂದಿಗೇ ಗಟ್ಟಿಯಾಗಿ ಕೂಗಿದಳು. ದಪ್ಪ ಹೆಂಗಸೊಬ್ಬಳು ಬಾಗಿಲು ತೆರೆದು ಕವಿತಳನ್ನು ಕಂಡು ಸಂತೋಷ ವ್ಯಕ್ತಪಡಿಸಿದಳು. ಕೊರಳಲ್ಲಿ ನಾಲ್ಕು ಸುತ್ತಿನ ಕರಿಮಣಿ ಸರ, ಕೈಗೆ ಚಿನ್ನದ ಬಳೆ.

ಆವರು ಮರಾಠಿಯಲ್ಲಿ ಮಾತಾಡಿಕೊಂಡರು.

ಅರವಿಂದನನ್ನ ಕವಿತಳನ್ನೂ ಡ್ರಾಯಿಂಗ್ ರೂಮಿನಲ್ಲಿ ಕುಳಿತುಕೊಳ್ಳುವಂತೆ ಕೇಳಲಾಯಿತು.

“ಪ್ರೊಫೆಸರರು ಕ್ಲಾಸಿನಲ್ಲಿದ್ದಾರೆ. ಈಗ ಬರುತ್ತಾರೆ.” ಕವಿತ ಅರವಿಂದನಿಗೆ ಹೇಳಿದಳು. ಒಳಗಿನ ಕೋಣೆಯಿಂದ ಕ್ಲಾಸಿನ ಸದ್ದು ಕೇಳಿಸುತ್ತಿತ್ತು, ಗಂಭೀರವಾದ ಕಂಠದಲ್ಲಿ ಉಕ್ತಲೇಖನ, ಭಾರತದ ಸ್ವಾತಂತ್ರ್ಯ ಸಂಗ್ರಾಮ.

ಅರವಿಂದ ಏನೋ ಕೇಳಲು ಬಾಯಿ ತೆರೆದ, ಕವಿತ ಅವನಿಗೆ ಸುಮ್ಮನಿರುವಂತೆ ಸಂಜ್ಞೆ ಮಾಡಿದಳು. ಸ್ವಲ್ಪ ಹೊತ್ತು ಸುಮ್ಮನಿದ್ದು ನಂತರ ಅವಳು ಎದ್ದು ಒಳಗೆ ಹೋದಳು. ಅರವಿಂದ ಡ್ರಾಯಿಂಗ್ ರೂಮಿನ ವಿವಿಧ ವಸ್ತುಗಳನ್ನು ನೋಡುತ್ತ ಕುಳಿತ, ಶೋಕೇಸ್ ತುಂಬ ಬೇರೆ ಬೇರೆ ಮೃಗಗಳ ಬೊಂಬೆಗಳು, ಸ್ಟಫ್ ಮಾಡಿದ ಒಂದು ಮುಂಗಸಿ,

ಸಿಗರೇಟು ಸೇದುವ ಆಸೆಯನ್ನು ಅದುಮಿಕೊಂಡ.
ಸ್ವಲ್ಪ ಹೊತ್ತಿನಲ್ಲಿ ಪ್ರೊಫೆಸರರನ್ನು ಮುಂದೆ ಮಾಡಿಕೊಂಡು ಕವಿತ ಬಂದಳು.

“ಇವರೇ,” ಎಂದಳು.
“ಹೌಡುಡು!” ಕೇಳಿದರು,
ಅವರೊಂದಿಗೆ ಕೈಕುಲುಕಿದ.
ಪ್ರೊಫೆಸರ್ ಖಾಡಿಲ್ಕರ್‌ ತಮ್ಮ ಜಯಂಟ್ ಸೈಜಿನ ಕುರ್ಚಿಯನ್ನು ತುಂಬಾ ಕುಳಿತರು. ಅರವತ್ತರ ಸಮೀಪದ ವಯಸ್ಸು. ದಪ್ಪವಾದ ಪೊದೆಯಂತಹ ಹುಚ್ಚು ಬೇಟೆನಾಯಿಯ ಮುಖ.
“ಕ್ಲಾಸಿದೆಯೆ?”
“ಸೆಕೆಂಡ್ ಕ್ಲಾಸ್….ಹೈಸೆಕೆಂಡ ಕ್ಲಾಸ್.” ಅರವಿಂದ ತೊದಲಿದ.
“ದಾಟ್ ಈಸ್ ಬ್ಯಾಡ್.”
ಅರವಿಂದ ಕವಿತಳ ಕಡೆ ನೋಡಿದ.
ಅವಳು ಪ್ರೊಫೆಸರರ ಕಡೆ ನೋಡಿದಳು.
“ಟೀಚಿಂಗ್ ಎಕ್ಸ್‍ಪೀರಿಯೆನ್ಸ್?”
“ಒಂದು ವರ್ಷ.”
“ರಿಸರ್ಚ್ ಎಕ್ಸ್‍ಪೀರಿಯೆನ್ಸ್?”
“ಒಂದೆರಡು ಲೇಖನಗಳನ್ನು ಬರೆದಿದ್ದೇನೆ.”
“ರಿಸರ್ಚ್ ಟಾಪಿಕ್?”
ಭಾರತೀಯ ಸ್ವಾತಂತ್ರ ಸಂಗ್ರಾಮದಲ್ಲಿ ಎಡಪಕ್ಷಗಳ ಪಾತ್ರದ ಬಗ್ಗೆ ಅಭ್ಯಾಸ ಮಾಡಬೇಕೆಂದಿದ್ದೇನೆ….
“ನಾನ್ಸೆನ್ಸ್.”

ಸ್ವಲ್ಪ ಹೊತ್ತು ಯಾರೂ ಮಾತಾಡಲಿಲ್ಲ. ಪ್ರೊಫೆಸರರು ಗಾಢವಾದ ಯೋಚನೆಯಲ್ಲಿ ಮುಳುಗಿರುವಂತೆ ಕಂಡಿತು. ಒಳಗಿನಿಂದ ಅವರ ಟ್ಯೂಷನ್
ವಿದ್ಯಾರ್ಥಿಗಳ ಗದ್ದಲ. ಪ್ರೊಫೆಸರರ ಹೆಂಡತಿ ಒಂದು ಟ್ರೇಯಲ್ಲಿ ಮೂರು ಗ್ಲಾಸು ನಿಂಬೆ ಹಣ್ಣಿನ ಶರಬತ್ತು ತಂದು ಮುಂದಿರಿಸಿ ತಗೊಳ್ಳಿ ಅಂದಳು.

ತಗೊಳ್ಳಿ ಅಂದರು ಪ್ರೊಫೆಸರರು. “ಟಾಪಿಕ್ ಚೇಂಜ್ ಮಾಡಿ, ಹೈದರಾಬಾದಿನ ಇತಿಹಾಸ ಓದಿದ್ದೀರಾ?”
“ಸ್ವಲ್ಪ ಮಟ್ಟಿಗೆ ಓದಿದ್ದೇನೆ.”
“ಟಾಪಿಕ್ ಚೇಂಜ್ ಮಾಡುತ್ತೇನೆಂದು ಇಂಟರ್ವ್ಯೂನಲ್ಲಿ ಹೇಳಿ, ಹೈದರಾಬಾದ್ ಇತಿಹಾಸಕ್ಕೆ ಸಂಬಂಧಿಸಿ ಏನಾದರೊಂದು ಪ್ರಾಬ್ಲೆಮ್ ತೆಗೆದುಕೊಳ್ಳ ಬಹುದು. ಕವಿತಾಗೂ ಅದನ್ನೇ ಹೇಳಿದ್ದೇನೆ. ಇಂಟರ್ವ್ಯೂ ಚೆನ್ನಾಗಿ ಮಾಡಿ, ಇನ್ನೊಂದು ವಿಷಯ…”

ಪ್ರೊಫೆಸರರು ಏನೋ ಮುಖ್ಯವಾದ್ದನ್ನು ಹೇಳಲು ಹೊರಟವರು ಫೋನು ಸದ್ದಾದುದರಿಂದ ಅದನ್ನು ಕೈಗೆತ್ತಿಕೊಂಡರು.

“ಆಕ್ಸಿಡೆಂಟೇ! ಓ ಗಾಡ್ ! ಹೇಗೆ?… ಬರ್ತೇನೆ….ಓಕೇ..?”
ಕವಿತಳ ಕಡೆ ತಿರುಗಿ ಹೇಳಿದರು.
“ನನ್ನ ಫ್ರೆಂಡ್ ಒಬ್ಬರು ಆಕ್ಸಿಡೆಂಟ್ ಆಗಿ ಆಸ್ಪತ್ರೆಯಲ್ಲಿದ್ದಾರಂತೆ. ನಾನ್ ಹೋಗಿ ನೋಡಬೇಕು.”
“ದಾರಿಯಲ್ಲಿ ನಾವೊಂದು ಆಕ್ಸಿಡೆಂಟ್ ಆದ್ದನ್ನು ನೋಡಿದೆವು.”

ಪ್ರೊಫೆಸರರು ಏನೋ ನೆನಪು ಮಾಡಿಕೊಳ್ಳುವವರಂತೆ ಅರವಿಂದನ ಕಡೆ ತಿರುಗಿ, “ನಿಮ್ಮ ಇಂಟರ್ವ್ಯೂ ಬಗ್ಗೆ ಏನೋ ಜ್ಞಾಪಿಸಿಕೊಳ್ಳುತ್ತಿದ್ದೆ, ಇನ್ನಷ್ಟು ಟೀಚಿಂಗ್ ಎಕ್ಸ್ಪೀರಿಯೆನ್ಸ್ ಬೇಕು ನಿಮಗೆ ಇದ್ದರೆ ಚೆನ್ನಾಗಿರುತ್ತದೆ. ಈಗ ನೋಡಿ ನಾನು ಅರ್ಜೆಂಟಾಗಿ ಆಸ್ಪತ್ರೆಗೆ ಹೋಗಬೇಕಾಗಿದೆ. ಆ ರೂಮಿನಲ್ಲಿ ಕೆಲವು ವಿದ್ಯಾರ್ಥಿಗಳಿದ್ದಾರೆ. ಅವರನ್ನು ಸ್ವಲ್ಪ ಎಂಗೇಜ್ ಮಾಡಿ. ಇಂಟರ್ವ್ಯೂ ಬಗ್ಗೆ ತಲೆಕೆಡಿಸಿಕೊಳ್ಳೋದು ಬೇಡ,” ಎಂದು ನುಡಿದು ಆಸ್ಪತ್ರೆಗೆ ಹೊರಡುವ ತಯಾರಿಯಲ್ಲಿ ಒಳಗೆ ಹೋದರು.

ಅರವಿಂದ ಕವಿತಳ ಕಡೆ ನೋಡಿದ. ಅವಳು, “ಪ್ರೊಫೆಸರರು ಹೇಳಿದಂತೆ ಮಾಡಿ, ಗಾಬರಿಯೇನೂ ಬೇಡ. ಇಲ್ಲಿ ಬಂದು ಒಂದಷ್ಟು ಟ್ಯೂಷನಿಗೆ ಸಹಾಯ ಮಾಡಬೇಕಾಗಿ ಬರಬಹುದು. ಪಾಪ ಪ್ರೊಫೆಸರರಿಗೆ ಮೂರು ಮಂದಿ ಹೆಣ್ಣು ಮಕ್ಕಳು, ಇನ್ನೇನು ಮಾಡುತ್ತಾರೆ ! ನಾನೀಗ ಹೊರಡುತ್ತೇನೆ. ಡ್ಯಾಡಿ ಕಾದಿರುತ್ತಾರೆ. ನಾಳೆ ಇಂಟರ್ವ್ಯೂ ಸಮಯ ಸಿಗುತ್ತೇನೆ. ಗುಡ್ ಲಕ್” ಎಂದು ಹೇಳಿ ಪ್ರೊಫೆಸರರ ಹೆಂಡತಿಗೆ ತಿಳಿಸಿ ಹೊರಟು ಹೋದಳು.

ಅರವಿಂದ ಏನು ಮಾಡುವುದೆಂದು ತಿಳಿಯದೆ ಕೊನೆಗೆ ಪಕ್ಕದ ಕೋಣೆಯತ್ತ ಕಾಲೆಳೆದ, ಇಪ್ಪತ್ತು ಮಂದಿ ವಿದ್ಯಾರ್ಥಿಗಳು ಯಾವ ಆಸಕ್ತಿಯನ್ನೂ ತೋರಿಸದೆ ಹೊಸ ವ್ಯಕ್ತಿಯ ಕಡೆ ನೋಡಿದರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವರ್ಣ ಕಾಲ
Next post ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ

ಸಣ್ಣ ಕತೆ

 • ಅಹಮ್ ಬ್ರಹ್ಮಾಸ್ಮಿ

  ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

 • ಆಪ್ತಮಿತ್ರ

  ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

cheap jordans|wholesale air max|wholesale jordans|wholesale jewelry|wholesale jerseys