ನೀವು ಹೆಂಗಸರಂತು ಎಳೆಯ ಮಕ್ಕಳಹಾಗೆ
ಹಿಡಿದ ಹಟವನು ಬಿಡದೆ, ಬೇಡಿದುದು ದೊರೆವನಕ
ಕಾಡುವುದು ಮುನಿಯುವುದು, ಬೇಡಿದುದು ದೊರಕಿದೊಡೆ
ಹಿಗ್ಗಿಗೆಣೆಯೇ ಇಲ್ಲ. ಕುಣಿ ಕುಣಿದು ಆಡುತ್ತ
ನಿಮ್ಮನೇ ಮೈಮರೆತು ನವಿಲಂತೆ ನಲಿಯುವಿರಿ.
ನಿಮ್ಮದಾದುದ ಮತ್ತೆ, ಎಲ್ಲರಿಗೆ ತೋರುತ್ತ
ಹೊಗಳಿಕೆಯ ಹೊಂದೋಣ, ಎನುವ ಒಳ ಆಸೆಯಲಿ
ಎಲ್ಲೆಲ್ಲು ಮೆರೆಯುವಿರಿ- ಹೆಣ್ತನದ ಎಳ ಚಪಲ!

ನೀನಂದು ಹೊಸ ಸೀರೆ- ಬಿಳಿಯ ಖಾದಿಯ ಸೀರೆ,
ಕೆಂಪು ರಂಗಿನದಂಚು, ಅಂಚಿನಲ್ಲಿ ಬಿಡಿಸಿರುವ
ಹೂಗಳನು ಮುತ್ತಿಡಲು, ಹೊಂಚುತಿಹ ದುಂಬಿ ಗಣ-
ಉಟ್ಟು, ಮೇಲಕೆ ವಿವಿಧ ಹೂರಂಗಿನಾ ರವಿಕೆ
ತೊಟ್ಟು ಮೆರೆಯುತ ಬರಲು, ನಿನ್ನ ಹಿಗ್ಗಿ ನಿನ್ನ
ಮಾತುಗಳು ಮುತ್ತಾಯ್ತು, ಮೌನ ಒಲವಿಗೆ ಚೆನ್ನ !
*****