ಸಂಜೆ ಸಮಯ.

ಅವನು ಒಳಗೆ ಬಂದ. ತನ್ನ ಮಾದಕ ನೋಟದಿಂದ ಅವಳು ಅವನನ್ನು ಬಾಗಿಲಲ್ಲಿಯೇ ಸ್ವಾಗತಿಸಿದಳು. ಅವಳ ಲಿಪ್‌ಸ್ಟಿಕ್ ತುಟಿ, ಪೌಡರ್‍ ಮೆತ್ತಿದ ಕೆನ್ನೆಯ ಗುಳಿ ಅವನನ್ನು ರೋಮಾಂಚನಗೊಳಿಸಿದವು. ಆಕೆಯ ತುರುಬು ಶೃಂಗರಿಸಿದ್ದ ಮಲ್ಲಿಗೆಯ ಗಜರಾವನ್ನು ಅವನು ಮೂಸಿದ.

ಪಲ್ಲಂಗದ ಮೇಲೆ ಕುಳಿತುಕೊಳ್ಳುತ್ತ ಅವಳನ್ನು ಬರಸೆಳೆದು ತಬ್ಬಿಕೊಂಡು ಇಡೀ ಮೈಯನನ್ನು ಮುದ್ದಿಸತೊಡಗಿದ. ಅವನೊಂದಿಗೆ ಅವಳೂ ತೀವ್ರವಾಗಿ ಸ್ಪಂದಿಸತೊಡಗಿದಳು.

ಅವಳ ದೇಹ ಸೊಬಗಿಗೆ ಸಂಪೂರ್ಣ ಸೋತುಹೋದ ಅವನು ಉತ್ಕಟವಾಗಿ ಉಲಿತ “ನೀನಿಲ್ಲದ ಪ್ರತಿಯೊಂದು ಕ್ಷಣಗಳು ನನಗೆ ಶೂನ್ಯ.”

“ನನಗೂ ಅಷ್ಟೆ” ಆಕೆ ಮೋಹಕವಾಗಿ ಪ್ರತಿಕ್ರಿಯಿಸಿದಳು.

“ನನ್ನ ನಿನ್ನ ಸಂಬಂಧ ಜನ್ಮಾಂತರದ್ದು ಅನಿಸುವುದು.”

“ಹೌದು”.

“ನನ್ನ ಹೆಂಡತಿಯಲ್ಲಿ ಇಲ್ಲದ ಆಕರ್ಷಣೆ ನಿನ್ನಲ್ಲಿದೆ.”

“ಎಲ್ಲರೂ ಹಾಗೆ ಹೇಳುವರು.”

“ಎಲ್ಲರಂತಲ್ಲ ನಾನು. ನಿನ್ನನ್ನು ತುಂಬಾ ಇಷ್ಟಪಡುತ್ತೇನೆ.”

“ನಾನೂ ಅಷ್ಟೇ.”

“ನಿನಗಾಗಿ ನನ್ನ ಹೆಂಡತಿಯನ್ನು ಬಿಡುತ್ತೇನೆ ನಾನು.”

“ಏಕೆ?”

“ನನ್ನೆದೆಯಲ್ಲಿ ನೀನು ಹೆಪ್ಪುಗಟ್ಟಿರುವೆ.”

ಆಕೆ ಮಾತನಾಡದೆ ಅವನೆದೆಯ ಮೇಲೆ ಒರಗಿ ತನ್ನ ಕಣ್ಣು ರೆಪ್ಪೆ ಪಿಳುಕಿಸಿದಳು.

“ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ.”

ಅವಳು ಉತ್ಸಾಹದಿಂದ ಕೆನ್ನೆ ಕುಣಿಸಿ ನಕ್ಕಳು.

“ನೀನು…..?” ಅವನು ಕೇಳಿದ.

“ನಾನು ನಿನ್ನ ಹಾಗೆ ಸುಳ್ಳು ಹೇಳುವುದಿಲ್ಲ” ಆಕೆ ಎದ್ದು ಕುಳಿತಳು.

“ಅಂದರೆ….?” ಗಲಿಬಿಲಿಯಾಗಿ ಕೇಳಿದ ಅವನು.

“ನಾನು ನಿನ್ನ ಹಣವನ್ನು ಪ್ರೀತಿಸುತ್ತೇನೆ” ಎದೆಯ ಮಾತು ಹೇಳಿದಳಾಕೆ.

ಆಕಾಶದಿಂದ ಬಿದ್ದವನಂತೆ ತತ್ತರಿಸಿದ ಅವನು ಭ್ರಮೆಯ ಪದರುಗಳಿಂದ ಹೊರಬಂದಂತೆ ಕಣ್ಣು ಹಿಗ್ಗಿಸಿ ಹೇಳಿದ “ನೀನು ಪಕ್ಕಾ ವೇಶ್ಯೆ!”

“ಅದು ಜಗತ್ತಿಗೆ ಗೊತ್ತು” ಎಂದಾಕೆ ಅವನು ಮೂಸಿದ ಗಜರಾ ಕಿತ್ತೆಸೆದು ಬಾಗಿಲಿನತ್ತ ಒಗೆದಳು.

*****

 

Latest posts by ಅಬ್ಬಾಸ್ ಮೇಲಿನಮನಿ (see all)