ರಾವಣಾಂತರಂಗ – ೧೯

ರಾವಣಾಂತರಂಗ – ೧೯

ಕುಂಬಕರ್‍ಣನ ಕಾಳಗ

ನಾಳೆಯ ಯುದ್ಧಕ್ಕೆ ನಾನೇ ಹೋಗುತ್ತೇನೆ, ಸಹಾಯಕರಾಗಿ ಅತಿಕಾಯ, ದೇವಾಂತಕ, ಮಹಾಕಾಯ, ನರಾಂತಕ ಮೊದಲಾದ ಸಹಸ್ರವೀರರು ಜೊತೆಯಲ್ಲಿರುತ್ತಾರೆಂದು ನಿಶ್ಚಯಿಸಿ, ಸಮರಾಂಗಣಕ್ಕೆ ಕಾಲಿಟ್ಟೆ. ಒಂದು ಲಕ್ಷ ಯೋಧರು ಆಯುಧಪಾಣಿಗಳಾಗಿ ನನ್ನ ಹಿಂದೆ ಬಂದರು ರಣರಂಗದಲ್ಲಿ ಆಜಾನುಬಾಹು, ದಶಮುಖಗಳನ್ನು ಹೊತ್ತ ವಜ್ರಕಾಯನಾದ ನನ್ನನ್ನು ನೋಡಿ ಶ್ರೀರಾಮನು “ವಿಭೀಷಣ, ಈ ರಣರಂಗದಲ್ಲಿ ನಿಂತಿರುವ ಮಹಾವೀರನಾರು? ಇವನ ಪರಿವಾರದವರಾರು? ರಾಕ್ಷಸರಲ್ಲೇ ಭಯಂಕರ ರಾಕ್ಷಸನಿರಬೇಕು? ವಿಭೀಷಣನು, ಅದಕ್ಕುತ್ತರವಾಗಿ “ಶ್ರೀರಾಮಚಂದ್ರ ಅವನೇ ನಮ್ಮಣ್ಣ ರಾವಣಾಸುರ ಇವನು ಯುದ್ಧದಲ್ಲಿ ಮಹಾಸಮರ್ಥನು ಇವನ ಮಗನೇ ಇಂದ್ರಜಿತು ಇವನಿಗೆ ಸಹಾಯಕರಾಗಿ ಹಿಂಬಾಲಿಸುವ ರಾಜರು, ರಾಜಕುಮಾರರು ಸಾಮಾನ್ಯರಲ್ಲ. ಇವರೆಲ್ಲರನ್ನು ಯುದ್ಧದಲ್ಲಿ ಸೋಲಿಸುವುದು ಸುಲಭದ ಮಾತಲ್ಲ ತಮ್ಮ ಪಾಪಗಳಿಂದಲೇ ಸಾಯಬೇಕು ಬೇರೆ ಮಾರ್ಗವಿಲ್ಲ” ಎಂದನು.

ಎಷ್ಟೋ ದಿನಗಳಾಗಿದ್ದವು ರಣರಂಗದಲ್ಲಿ ಶತ್ರುಗಳ ರುಂಡಮುಂಡಗಳನ್ನು ಚೆಲ್ಲಾಡಿ, ಈ ದಿನ ಮೈಯಲ್ಲಿ ಭೂತ ಹೊಕ್ಕವನಂತೆ ಕಪಿಗಳನ್ನು ಸಂಹರಿಸಿದೆ. ಸುಗ್ರೀವನು ದೊಡ್ಡದೊಂದು ಪರ್ವತವನ್ನೆತ್ತಿ ನನ್ನ ಮೇಲೆ ಎಸೆಯಲು ಬಂದಾಗ ಬಾಣಗಳ ಸುರಿಮಳೆಯಿಂದ ಪುಡಿಪುಡಿ ಮಾಡಿದೆನು. ಸಾವಿರಾರು ಬಾಣಗಳನ್ನು ಪುಂಖಾನುಪುಂಖವಾಗಿ ಎಸೆದು ಸುಗ್ರೀವನು ಮೂರ್ಚೆ ಹೋಗುವಂತೆ ಮಾಡಿದೆ. ಆಗ ವಜ್ರಕಾಯನಾದ ಹನುಮಂತನು ನನ್ನ ಮೇಲೆ ಹಾರಿ ತನ್ನ ವಜ್ರಮುಷ್ಠಿಯಿಂದ ತಿವಿದು “ರಾವಣಾಸುರನೇ ಲಂಕಾನಗರವನ್ನು ಸುಟ್ಟು ಅಕ್ಷಯಕುಮಾರನನ್ನು ಸಂಹರಿಸಿದ ನನ್ನನ್ನು ಮರೆತೆಯಾ? ಎಂದನು. “ನಿನ್ನಂತಹ ನೂರಾರು ಕಪಿಗಳನ್ನು, ಅವರ ಒಡೆಯನನ್ನು ಸಂಹರಿಸುವ ಶಕ್ತಿ ನನಗಿದೆ ಎಂದು ಶಕ್ತಿಬಾಣವನ್ನು ಬಿಡಲು ಹನುಮಂತನು ಪ್ರಜ್ಞಾಹೀನನಾದನು. ಆ ಬಳಿಕ ಲಕ್ಷ್ಮಣನು ಬಾಣಗಳನ್ನು ನನ್ನ ಮೇಲೆ ಬಿಡಲು “ತಮ್ಮ ನೀನಿನ್ನು ಬಾಲಕನು ನೀನು ಯುದ್ಧಕ್ಕೆ ಬರಬೇಡ. ನಿಮ್ಮಣ್ಣನನ್ನು ಕಳುಹಿಸು” ಎಂದೆನು. ಲಕ್ಷ್ಮಣನು “ನಾನು ಸಣ್ಣವನಾದರೇನು? ನನ್ನ ಬಾಣಗಳು ಸಣ್ಣವಲ್ಲ, ಅವುಗಳ ರುಚಿನೋಡು” ಎಂದು ಬಾಣಗಳನ್ನು ಬಿಟ್ಟನು. ಅವುಗಳನ್ನು ಕತ್ತರಿಸಿ ಗಾಯಗೊಳಿಸಿದೆ. ಲಕ್ಷ್ಮಣನೂ ಎಚ್ಚರದಪ್ಪಿ ಬಿದ್ದನು. ತಮ್ಮನಿಗಾದ ಗತಿಯನ್ನು ನೋಡಿ ಶ್ರೀರಾಮನು ಧನುರ್ಧಾರಿಯಾಗಿ ಮುಖಾಮುಖಿಯಾದನು. ಅವನನ್ನು ಮೊದಲಬಾರಿಗೆ ತೀರ ಹತ್ತಿರದಿಂದ ನೋಡಿದೆ. ಆಹಾ! ಎಂತಹ ಅದ್ಭುತವಾದ ತೇಜಸ್ಸು! ನೀಲಮೇಘಶ್ಯಾಮನಾದ ರಾಮಚಂದ್ರನನ್ನು ನೋಡಿ ಬೆರಗಾದೆ. ಇಂತಹ ಮಗನಾದರೂ ನನಗಿರಬಾರದಿತ್ತೆ ಹೋಗಲಿ. ನನಗೊಬ್ಬ ಮಗಳಿದ್ದಿದ್ದರೆ ಶ್ರೀರಾಮನಿಗೆ ಕೊಟ್ಟು ಅಳಿಯನಾಗಿ ಮಾಡಿಕೊಳ್ಳುತ್ತಿದ್ದೆ. ಜಗತ್ತಿನಲ್ಲಿರುವ ಶಾಂತಿಯೆಲ್ಲಾ ಶ್ರೀರಾಮನ ಕಣ್ಣುಗಳಲ್ಲೇ ತುಂಬಿದೆ. ಆ ಭವ್ಯವಾದ ಆಕಾರ, ಧನಸ್ಸನ್ನು ಭುಜಕ್ಕೆ ನೇತುಹಾಕಿ ಬಲಗೈಯಲ್ಲಿ ಬಾಣ ಹಿಡಿದಿರುವ ರಾಮನು ಯುದ್ಧ ಮಾಡಲು ಬಂದಂತೆ ಕಾಣುತ್ತಿಲ್ಲ. ದುಷ್ಟರಿಗೆಲ್ಲಾ ನೀತಿ ಬೋಧಿಸುವ ಗುರುವಂತೆ ಕಾಣುತ್ತಿದ್ದಾನೆ. ನನಗೇನೋ ಈತ ಜನ್ಮ ಜನ್ಮದ ಬಂಧುವಿನಂತೆ ಗುರುವಿನಂತೆ ಕಾಣುತ್ತಿದ್ದಾನೆ. ಶ್ರೀರಾಮಚಂದ್ರ ನಿನ್ನ ವ್ಯಕ್ತಿತ್ವಕ್ಕೆ ನಿನ್ನ ಕಣ್ಣುಗಳ ಅಮೋಘಕಾಂತಿಗೆ ನಮೋನಮಃ “ಮನಸ್ಸಿನಲ್ಲಿ ನಮಿಸಿ ಬಾಣಗಳನ್ನು ಕೈಗೆತ್ತಿಕೊಂಡೆ. ನಾನು ರಥದ ಮೇಲೆ ಶ್ರೀರಾಮ ನೆಲದ ಮೇಲೆ ನಿಂತು ಯುದ್ಧ ಮಾಡುವುದನ್ನು ನೋಡಲಾಗದೆ ಆಂಜನೇಯನು “ಪ್ರಭೂ ನಿನಗೆ ರಥವಿಲ್ಲದಿದ್ದರೇನು? ನನ್ನ ಹೆಗಲ ಮೇಲೆ ಕುಳ್ಳಿರಿಸಿಕೊಂಡನು” ಎಂತಹ ಅಪರೂಪವಾದ ದೃಶ್ಯ ಹನುಮಂತ ನೀನೇ ಧನ್ಯ! ಶ್ರೀರಾಮನು ನನ್ನನ್ನು ಕುರಿತು “ನಾರೀಚೋರನೇ ನಿನ್ನ ಪಾಪದ ಕೊಡ ತುಂಬಿದೆ ಪುಣ್ಯವೆಲ್ಲಾ ತೀರಿದೆ. ಇನ್ನು ನೀ ಮಾಡಿದ ಪಾಪಗಳ ಫಲವಾಗಿ ಶಿಕ್ಷೆಯನ್ನು ಅನುಭವಿಸು” ಎಂದನು. “ನನ್ನನ್ನು ಪಾಪಿಯನ್ನಬೇಡ ನೀನು ದೊಡ್ಡಪಾಪಿ, ಅನ್ಯಾಯವಾಗಿ ನಿರಪರಾಧಿಯಾಗಿದ್ದ ನನ್ನ ಮಿತ್ರನನ್ನು ಮೋಸದಿಂದ ಮರದ ಮರೆಯಲ್ಲಿ ಕೊಂದೆ, ಒಂದು ಹೆಣ್ಣನ್ನು ವಿರೂಪಗೊಳಿಸಿದೆ. ನನ್ನ ಬಾಣಗಳಿಗೆ ನಿನ್ನ ಆಹುತಿ” ಎಂದವನೇ ಬಾಣದಿಂದ ಗುರಿಯಿಟ್ಟು ಹೊಡೆದೆ. ಹನುಮಂತನು ತನ್ನ ಯಜಮಾನನನ್ನು ಬಾಣಗಳು ತಗುಲದಂತೆ ರಕ್ಷಿಸುತ್ತಿದ್ದನು. ಅವನ ಸ್ವಾಮಿನಿಷ್ಠೆಯನ್ನು ನೋಡಿ ಮೆಚ್ಚಿಗೆಯಾಯಿತು. ನನಗೆ ಇಂತಹ ಸ್ವಾಮಿನಿಷ್ಠೆ ಸೇವಕನಿರಬಾರದಿತ್ತೆ ಎಂದು ಹಲುಬಿದೆ. ಎಲ್ಲದಕ್ಕೂ ಪಡೆದು ಬಂದಿರಬೇಕು. ಕ್ಷಣಕಾಲ ಮೈಮರೆತು ನನ್ನ ಮುಂದಿರುವ ಅದ್ಭುತ ದೃಶ್ಯವನ್ನು ಕುಣ್ತುಂಬಿಕೊಂಡೆ. ಅಷ್ಟರಲ್ಲಿ ಶ್ರೀರಾಮನ ಬಾಣಗಳ ವರ್ಷಾಧಾರೆಯಿಂದ ನನ್ನ ರಥವು ನುಚ್ಚು ನೂರಾಯಿತು. ಸಾರಧಿಯ ಯಮನನ್ನು ನೋಡಲು ಹೋದನು. ನನ್ನ ಎದೆಗೆ ಬಲವಾದ ಬಾಣ ನಾಟಿ ದೊಡ್ಡ ಗಾಯವಾದ್ದರಿಂದ ಎಚ್ಚರತಪ್ಪಿತು. ಆಗ ದಯಾಭರಿತನಾದ ಶ್ರೀರಾಮನು “ರಾವಣಾಸುರನೇ ನೀನು ನನ್ನ ಬದ್ಧ ವೈರಿಯಾದರೂ ಈಗ ನಿನ್ನನ್ನು ಕೊಲ್ಲುವುದಿಲ್ಲ. ನಿನಗಿನ್ನು ಅಂತಿಮಗಡಿ ಬಂದಿಲ್ಲ. ಸುಧಾರಿಸಿಕೊಂಡು ನಾಳೆ ಬಾ” ಎಂದು ಶರವೃಷ್ಟಿಯನ್ನು ನಿಲ್ಲಿಸಿದನು. ಆ ನನ್ನನ್ನು ಅಲ್ಲಿದ್ದ ರಕ್ಕಸ ಸೇನಾಧಿಪತಿಗಳು ಔಷಧೋಪಚಾರಗಳಿಂದ ಎಬ್ಬಿಸಿ ಮನೆಗೆ ಕರೆತಂದರು. ವಿಶ್ರಾಂತಿ ಪಡೆದ ಬಳಿಕ ನಾಳೆ ಯುದ್ಧಕ್ಕೆ ಯಾರನ್ನು ಕಳಿಸುವುದು. ಈ ದಿನವಂತೂ ತುಂಬಾ ಆಯಾಸವಾಗಿದೆ. ಶರೀರ ಜರ್ಜರಿತವಾಗಿದೆ. ನಾಳೆ ನಿಂತು ಯುದ್ಧ ಮಾಡುವ ಸ್ಥಿತಿಯಲ್ಲಿಲ್ಲ. ಮನಸ್ಸೇಕೋ ವಿಚಲಿತವಾಗುತ್ತಿದೆ. ಕಲಿತ ವಿದ್ಯೆಯಲ್ಲಿ ಮರೆತು ಹೋದಂತಿದೆ. ಈಗ ಯಾರು ಉಳಿದಿರುವವರು? ಶ್ರೀರಾಮನ ಬಲವಾದ ಸೇನೆಯನ್ನು ಎದುರಿಸಲು ಗಂಡೆದೆ ಇರಬೇಕು. ಉಳಿದಿರುವವರು ನಾನು ಇಂದ್ರಜಿತು ಅತಿಕಾಯ, ಆಹಾ! ಕುಂಬಕರ್ಣ! ಅವನ ನೆನಪನ್ನೇ ಮರೆತಿದ್ದೆ, ಆದರೆ ಎಂತಹ ಕೆಲಸವಾಯಿತು? ಕುಂಬಕರ್ಣ ನಿದ್ದೆ ಹೋಗಿ ಇನ್ನು ಆರುತಿಂಗಳಾಗಿಲ್ಲ. ಹಾಳಾದವನು ತಪಸ್ಸು ಮಾಡಿ ಬಲವಾದ ವರ ಕೇಳೆಂದರೆ ಆರುತಿಂಗಳು ನಿದ್ದೆ; ಇನ್ನಾರು ತಿಂಗಳು ಎಚ್ಚರ! ಹೀಗೆ ವರ ಕೇಳಿದ್ದಾನೆ. ಈಗ ಅರ್ಧ ನಿದ್ದೆಯಲ್ಲಿಯೇ ಅವನನ್ನು ಎಚ್ಚರಿಸಿದರೆ ಅವನ ಪ್ರಾಣಕ್ಕೆ ಅಪಾಯ! ಅಪಾಯವೆಂದು ಸುಮ್ಮನಿದ್ದರೆ ಶತ್ರು ಗಟ್ಟಿಯಾಗುತ್ತಾನೆ. ಉಪಾಯದಿಂದ ಗೆಲ್ಲಬೇಕು. ಕುಂಬಕರ್ಣನ್ನು ಏಳಿಸುವುದೇ ಸರಿಯಾದ ದಾರಿ. ಅನೇಕ ಜನ ರಕ್ಕಸರನ್ನು ಕರೆದು ಕೂಡಲೇ ಕುಂಭಕರ್ಣನನ್ನು ಏಳಿಸುವಂತೆ ಆಜ್ಞೆ ಮಾಡಿದೆ. ಸಾವಿರಾರು ರಕ್ಕಸರು ಒಟ್ಟುಗೂಡಿ ಅವನು ಎದ್ದಕೂಡಲೇ ತಿನ್ನಲು ನೂರಾರು ಬಂಡಿ ಅನ್ನವನ್ನು ಸಾವಿರಾರು ಕುರಿ ಕೋಳಿಗಳ ಮಾಂಸವನ್ನು ಬೇಯಿಸಿಟ್ಟರು. ಕುಡಿಯಲು ಕೊಳಗಗಳಲ್ಲಿ ಮದ್ಯವನ್ನು ತುಂಬಿಟ್ಟರು. ರೊಟ್ಟಿಗಳ ರಾಶಿ, ಅನೇಕ ರೀತಿಯ ಪಕ್ವಾನ್ನಗಳನ್ನು ಸಿದ್ಧಪಡಿಸಿ ಅವನನ್ನು ಏಳಿಸಲು ತರತರಹದ ಸಿದ್ಧತೆಗಳನ್ನು ಮಾಡಿದರು. ಅವನ ಕಿವಿಯಲ್ಲಿ ನಗಾರಿ ಬಾರಿಸಿದರು. ಕಹಳೆಯನ್ನೂದಿದರು. ಡೋಲು ತಮ್ಮಟೆಗಳಿಂದ ಬಡಿದರು. ಚಮ್ಮಟಿಗೆಗಳಿಂದ ಹೊಡೆದು, ಶೂಲ, ಕೈಗೆತ್ತಿಯಿಂದ ತಿವಿದರು. ಆನೆಗಳಿಂದ ತುಳಿಸಿದರು. ಯಾರೇನು ಮಾಡಿದರೂ ಕುಂಭಕರ್ಣ ಹರಾಶಿವಾ ಎನ್ನಲಿಲ್ಲ. ಇನ್ನು ಮೈ ನಚ್ಚಗಾಗಿ ಚೆನ್ನಾಗಿ ಗೊರಕೆ ಹೊಡೆಯುತ್ತಾ ಗಡದ್ದಾಗಿ ನಿದ್ದೆ ಮಾಡಿದನು. ಸೇವಕರ ಮೈಯಿಂದ ಬೆವರು ಸೆಲೆಯೊಡಿಯಿತು. ಎಲ್ಲರೂ ದಾರಿಗಾಣದೆ ಬಂದು ನನಗೆ ಅರಿಕೆ ಮಾಡಿದರು. ಇದೇನು ಸಂಕಟ! ಇವನನ್ನು ಏಳಿಸಲು ಸರಿಯಾದ ದಾರಿ ಯಾವುದು? ಎಷ್ಟು ತಲೆಚಚ್ಚಿಕೊಂಡರೂ ಉಪಾಯ ಹೊಳೆಯಲಿಲ್ಲ. ದಾರಿಗಾಣದೆ ನೀನೇ ಗತಿಯೆಂದು ಬ್ರಹ್ಮದೇವನಿಗೆ ಮೊರೆ ಹೋದೆ. ನನ್ನ ಪ್ರಾರ್ಥನೆಗೆ ಓಗೊಟ್ಟು ಪ್ರತ್ಯಕ್ಷನಾದಾಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ವಿನಂತಿಸಿದೆ “ರಾವಣಾಸುರ, ಇನ್ನೊಮ್ಮೆ ಯೋಚಿಸು ಕುಂಭಕರ್ಣನನ್ನು ಅರ್ಧನಿದ್ದೆಯಲ್ಲಿ ಏಳಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ; ಅವನಿಗೆ ಪ್ರಾಣಾಪಾಯ ಬರುವ ಸಂಭವವಿದೆ. “ಅಜ್ಜನೇ ಏನಾದರಾಗಲಿ ಈಗ ಒದಗಿ ಬಂದಿರುವ ವಿಪತ್ತಿನಿಂದ ಪಾರಾಗಲು ಇವನೊಬ್ಬನಿಂದಲೇ ಸಾಧ್ಯ. ದಯವಿಟ್ಟು ಅವನನ್ನು ಏಳಿಸುವ ಕೃಪೆ ಮಾಡು.”

“ಆಯಿತು. ನಿನ್ನಿಚ್ಚೆಯಿದ್ದಂತಾಗಲಿ” ಕಮಂಡಲುವಿನಿಂದ ಜಲವನ್ನು ತೆಗೆದು ಮಂತ್ರಿಸಿ ಕುಂಭಕರ್ಣನ ಮೇಲೆ ಪ್ರೋಕ್ಷಿಸಿದರು. ಜಡತೆ ನೀಗಿ ಎಚ್ಚೆತ್ತು ಕಣ್ಣುಗಳನ್ನು ತೆರೆದು ಕುಂಭಕರ್ಣನು ಎದ್ದು ಕುಳಿತನು ಸಿಟ್ಟಿನಿಂದ ಕುದಿದು “ಯಾರದು ಪಾಪಿಗಳು ನನ್ನ ನಿದ್ದೆಯನ್ನು ಕೆಡಿಸಿದವರು? ಎಂದು ಸಿಡಿಲಿನಂತೆ ಗರ್ಜಿಸಲು ಅಲ್ಲೇ ನಿಂತಿದ್ದ ಸೇವಕರು ಗಡಗಡ ನಡುಗಿ ಕೆಳಗೆ ಬಿದ್ದರು. ಇನ್ನು ಕೆಲವರು ಮಲಮೂತ್ರ ವಿಸರ್ಜಿಸುತ್ತಾ ಓಡಿಹೋದರು. ಕುಂಭಕರ್ಣನಿಗೆ ಅಲ್ಲಿಟ್ಟಿದ್ದ ಅನ್ನ ಆಹಾರಗಳು ಕಣ್ಣಿಗೆ ಬಿದ್ದವು. ಪಕ್ವಾನ್ನದ ಪರಿಮಳ ಮೂಗಗಳ ಹೊಳ್ಳೆಯನ್ನು ಅರಳಿಸಿದವು. ಒಂದೇ ನಿಮಿಷಕ್ಕೆ ಅಲ್ಲಲ್ಲಿದ್ದ ಅನ್ನದ ರಾಶಿಯನ್ನು ಗಬಗಬನೆ ನುಂಗಿಬಿಟ್ಟನು. ಮಾಂಸದ ರಾಶಿ ಮಾಯವಾಯಿತು. ಪಕ್ವಾನ್ನಗಳು ಹೊಟ್ಟೆ ಸೇರಿದವು. ಮದ್ಯದ ಕೊಳಗಗಳು ಖಾಲಿಯಾದವು. ಆದರೂ ಹಸಿವೆ, ನೀರಡಿಕೆಗಳು ಸಿಗಲಿಲ್ಲವೆಂದು ಥೈಥೈ ಕುಣಿಯತೊಡಗಿದನು. ಇವನ ಕುಣಿದಾಟ, ಹಾರಾಟ, ಚೀರಾಟ ನೋಡಲಾರದೆ ಇದಕ್ಕೇನು ಪರಿಹಾರ” ಕಾಣದೆ ಗುರುಗಳಾದ ಶುಕ್ರಾಚಾರ್ಯರನ್ನು ಕರೆಸಿ ಬೇಡಿಕೊಳ್ಳಲು ಅವರು ಅಭಿಮಂತ್ರಿಸಿದ ಒಂದು ಗುಳಿಗೆಯನ್ನು ಕೊಟ್ಟು ಶಾಂತವಾಗಿಸಿದರು. ನಂತರ ರಾವಣಾಸುರನ ಆಜ್ಞೆಯಂತೆ ರಥಾರೂಢನಾಗಿ ಓಲಗಕ್ಕೆ ಬಂದನು. ಅಲ್ಲಿ ಓಲಗದಲ್ಲಿ ಒಂದು ನರಪಿಳ್ಳೆಯು ಕಾಣದೆ ಸ್ಮಶಾನ ಸದೃಶವಾಗಿತ್ತು.

“ಅಗ್ರಜನೇ ಇದೇನಿದು ನಿನ್ನ ಸಭೆಯು ಚಂದ್ರನಿಲ್ಲದ ರಾತ್ರಿಯಂತೆ ತಾವರೆಗಳಿಲ್ಲದ ಸರೋವರದಂತೆ ಕಳೆಗುಂದಿದೆಯೆಲ್ಲಾ ಸೂರ್ಯನಂತೆ ಪ್ರಕಾಶಿಸುವ ನಿಮ್ಮ ವದನವು ಗ್ರಹಣ ಹಿಡಿದ ರವಿಯಂತೆ ಖಿನ್ನವಾಗಿದೆಯಲ್ಲ. ಏನಾಯಿತು ಅಣ್ಣಾ ಹೀಗೇಕಿರುವಿರಿ? ಮಾತನಾಡಿ ಎನ್ನಲು ಹೃದಯ ತುಂಬಿ ಬಂತು. ಅಷ್ಟು ದಿನಗಳಿಂದ ಮಡುಗಟ್ಟಿದ್ದ ದುಃಖದ ಕಟ್ಟೆ ಒಡೆಯಿತು. ತಮ್ಮನನ್ನು ಅಪ್ಪಿಕೊಂಡು ಕಣ್ಣೀರು ಮಿಡಿದೆ “ಅಣ್ಣಾ ನಿಮ್ಮ ಕಣ್ಣಲ್ಲಿ ನೀರು! ಏನಾಯಿತು? ಮಕ್ಕಳು ಸೌಖ್ಯವೇ? ಅಮ್ಮ ಅತ್ತಿಗೆ ಕ್ಷೇಮವೇ ? ದೇವತೆಗಳಿಂದ ಏನಾದರೂ ತೊಂದರೆಯಾ? ಹೇಳಿ ತ್ರಿಭುವನಗಂಡ ರಣ ಪ್ರಚಂಡ ರಾವಣೇಶ್ವರನಿಗೆ ಬಂದ ಕಷ್ಟಗಳಾದರೂ ಯಾವುದು? ನನ್ನ ಮುಂದೆ ಹೇಳಿ ನಿಮ್ಮ ಕಣ್ಣಲ್ಲಿ ನೀರು ಒರಿಸಿದವರ ಕಣ್ಣಲ್ಲಿ ರಕ್ತ ಸುರಿಸುತ್ತೇನೆ. ಅವರ ರುಂಡ ಮುಂಡಗಳನ್ನು ಚೆಲ್ಲಾಡಿ ಮಾರಿಗೌತಣ ನೀಡುತ್ತೇನೆ” ಎಂದನು. ಕೆರಳಿದ ಕೇಸರಿಯಂತೆ ಗರ್ಜಿಸುತ್ತಿರುವ ತಮ್ಮನನ್ನು ಸಮಾಧಾನ ಮಾಡಿ, ಸೀತಾಪಹರಣದಿಂದ ಇಲ್ಲಿಯವರೆಗೆ ನಡೆದ ವಿಷಯಗಳನ್ನು ಕೂಲಂಕಷವಾಗಿ ವಿವರಿಸಿದಾಗ ಕುಂಭಕರ್ಣನ ಮುಖವು ಇಂಗು ತಿಂದ ಮಂಗನಂತಾಯಿತು.

“ಅಗ್ರಜನೇ ನೀನು ದೊಡ್ಡ ತಪ್ಪು ಮಾಡಿದೆ. ನಿನಗೆ ಗೊತ್ತಿದೆ. ಶ್ರೀರಾಮನೇ ಮಹಾವಿಷ್ಣುವಿನ ಅವತಾರ, ಸೀತಾದೇವಿಯೇ ಆದಿಲಕ್ಷ್ಮಿಯೆಂದು ವಾನರರೆಲ್ಲರೂ ದೇವಾಂಶಸಂಭೂತರೆಂದು. ನಾರದ ಮಹರ್ಷಿಗಳು ಅನೇಕ ಸಲ ಹೇಳಿದ್ದರೂ ನೀನು ನಂಬಲಿಲ್ಲ. ಈಗ ಆದದ್ದು ಆಗಿ ಹೋಯಿತು. ಹಠವನ್ನು ಬಿಟ್ಟುಬಿಡು ಈಗಲಾದರೂ ಸೀತಾದೇವಿಯನ್ನು ರಾಮನಿಗೆ ಒಪ್ಪಿಸಿದರೆ ಮುಂದೆ ನಡೆಯುವ ಅನರ್ಥಗಳನ್ನು ತಪ್ಪಿಸಬಹುದು. ನಡೆಯುವ ಕಾಲು ಎಡವಬಹುದು. ಆದರೆ ಮುಂದೆ ಎಡವದಂತೆ ಎಚ್ಚರಿಕೆ ವಹಿಸಬೇಕು. ನಾನು ತಿಳಿದಂತೆ ಹೇಳಿದ್ದೇನೆ. ಇದರ ಮೇಲೆ ನಿನ್ನ ಇಷ್ಟ” “ನಿನ್ನ ಪುರಾಣವನ್ನು ಕೇಳಲಿಕ್ಕೆ ಇಷ್ಟೊಂದು ಕಷ್ಟಪಟ್ಟು ನಿನ್ನನ್ನು ಎಬ್ಬಿಸಲಿಲ್ಲ. ಇದನ್ನೇ ಹೇಳಿದ ವಿಭೀಷಣನು ಬೆನ್ನಿಗೆ ಚೂರಿಹಾಕಿ ಶತ್ರುವನ್ನು ಕೂಡಿಕೊಂಡು ಮಸಿ ಬಳಿದನು, ನೀನಾದರೂ ನನಗೆ ಬೆಂಬಲವಾಗಿ ನಿಲ್ಲುತ್ತೀಯಾ ಎಂದರೆ ನೀನು ಅದೇ ಮಾರ್ಗವನ್ನು ತುಳಿಯುತ್ತಿರುವೆ, ಹೋಗು ಚೆನ್ನಾಗಿ ತಿಂದಿದ್ದೀಯಾ ಮಲಗಿ ನಿದ್ದೆ ಮಾಡು. ಊಟ, ನಿದ್ದೆ ಇಷ್ಟೇ ನಿನ್ನ ಕಥೆ. ಅಣ್ಣ ಹಾಳಾದರೇನು? ರಾಜ್ಯ ಮುಳುಗಿದರೇನು? ಹೋಗು ಹೋಗು? ನಿಷ್ಟುರವಾಗಿ ನುಡಿಯಲು ಮನನೊಂದ ಕುಂಭಕರ್ಣನು “ಅಗ್ರಜಾ ರಣಕ್ಕೆ ಹೆದರಿ, ಪ್ರಾಣಕ್ಕೆ ಅಂಜಿ ನಾನೀ ಮಾತುಗಳನ್ನಾಡಲಿಲ್ಲ. ಮನಷ್ಯರಾಗಲೀ ರಕ್ಕಸರಾಗಲೀ ನೀತಿಯನ್ನು ಬಿಡಬಾರದೆಂದು ಹೇಳಿದೆ. ಅಪ್ಪಣೆ ಕೊಡು ನನ್ನ ಕೈಲಾದಷ್ಟು ಶಕ್ತಿ ಪ್ರದರ್ಶನ ಮಾಡಿ ಶತ್ರುಗಳನ್ನು ಹಿಮ್ಮೆಟ್ಟಿಸುತ್ತೇನೆ” ಎಂದ ತಮ್ಮನ ಮಾತು ಕೇಳಿ ಆನಂದದಿಂದ ರಣರಂಗಕ್ಕೆ ವೀಳ್ಯವನ್ನು ಕೊಟ್ಟು, ಅವನ ಸಹಾಯಕ್ಕೆ ಅನೇಕ ಕೋಟಿ ರಾಕ್ಷಸರನ್ನು ಕಳುಹಿಸಿದೆ. ಕುಂಭಕರ್ಣನು ಉಕ್ಕಿನ ಕವಚ ತೊಟ್ಟು ಬ್ರಹ್ಮನಿಂದ ಪಡೆದ ಧನುರ್ಭಾಣಗಳನ್ನು ಧರಿಸಿ ಸುರುರನೆಂಬ ಸಾರಥಿಯೊಂದಿಗೆ ಹತ್ತು ಸಾವಿರ ಕುದುರೆಗಳು ಹೂಡಿದ ರಥದಲ್ಲಿ ಕುಳಿತು ರಣರಂಗಕ್ಕೆ ಬಂದಾಗ ಅವನ ಬರುವಿಕೆ ನೋಡಿ, ಕಪಿಸೇನೆ ದಿಕ್ಕುಪಾಲಾಯಿತು. ಜಾಂಭವಂತಾದಿಗಳು ಧೈರ್‍ಯಗೆಟ್ಟರು. ಆಗ ಶ್ರೀರಾಮನು ವಿಭೀಷಣನನ್ನು ಕುರಿತು “ಮಿತ್ರಾ ಈ ಪರ್ವತಾಕಾರದ ಭಯಂಕರ ಮನುಷ್ಯರಾರು?”

“ಸ್ವಾಮಿ ಇವನು ರಾವಣನ ತಮ್ಮನು. ನನಗೆ ಅಣ್ಣನು, ಇವನು ಸಂಗ್ರಾಮದಲ್ಲಿ ಸಮರ್ಥನು. ಕಾಲಯಮನಿಗೂ ಹಿಂಜರಿಯುವುದಿಲ್ಲ. ಇವನಿಗೆ ಬ್ರಹ್ಮದೇವ ಆರುತಿಂಗಳು ನಿದ್ದೆ ಒಂದು ದಿನ ಎಚ್ಚರ, ಹೀಗೆ ವರವಾಗಿದ್ದು ನಿದ್ದೆಗೆ ಅಡ್ಡಿ ಬಂದ ದಿವಸ ಇವನಿಗೆ ಮರಣವೆಂದು ವರವಾಗಿದೆ. ಇವನೊಂದಿಗೆ ತಾವೇ ಹೋರಾಡಬೇಕು” ಎಂದು ತಾನೇ ಸಮರಕ್ಕೆ ಸಿದ್ಧನಾದನು. ಸುಗ್ರೀವ, ಹನುಮಂತ, ಜಾಂಬವಂತ ಮೊದಲಾದವರು ವಿಭೀಷಣನಿಗೆ ಟೊಂಕ ಕಟ್ಟಿ ನಿಂತರು. ಕುಂಭಕರ್ಣನಾದರೋ ತನ್ನತ್ತ ಬಂದ ಕಪಿಗಳನ್ನು ಹಿಡಿದು ನುಂಗಿಬಿಟ್ಟುನು. ಕೆಲವರನ್ನು ಬಾಯಲ್ಲಿ ಹಾಕಿಕೊಂಡು ತಾಂಬೂಲದಂತೆ ಜಗಿದನು. ಸುಗ್ರೀವನು ಮುಂದೆ ಬಂದು ದೊಡ್ಡ ಬೆಟ್ಟವನ್ನು ತಲೆಯಮೇಲೆ ಹಾಕಿದನು. ಇವನನ್ನು ಎಳೆದೊಯ್ದರೆ ಯುದ್ಧವೇ ನಿಂತು ಹೋಗುವುದೆಂದು ಪರ್ವತಧಾರಿಯಾಗಿ ನಿಂತಿದ್ದ ಸುಗ್ರೀವನನ್ನು ಮಗುವನ್ನು ಕಂಕುಳಲ್ಲಿಟ್ಟುಕೊಳ್ಳುವಂತೆ ಇಟ್ಟುಕೊಂಡು ಲಂಕೆ ಸೇರಿದನು. ತಮ್ಮ ರಾಜನನ್ನು ಹಿಡಿದೊಯ್ದರಿಂದ ಕಪಿಸೇನೆ ಕಂಗಾಲಾಯಿತು. “ಹೆದರಬೇಡಿ ನಾನು ಹೇಗಾದರೂ ತಪ್ಪಿಸಿಕೊಂಡು ಬರುತ್ತೇನೆಂದು ಸುಗ್ರೀವ ಕೂಗಿ ಹೇಳಿದನು. ಜಯಶಾಲಿಯಾಗಿ ಬಂದ ಕುಂಭಕರ್ಣನಿಗೆ ವಿಜಯೋತ್ಸವ ಪುರನಾರಿಯರು ಆರತಿಯೆತ್ತಿ ಶ್ರೇಷ್ಠವಾದ ಮಧು ಮದ್ಯವನ್ನು ತಂದುಕೊಟ್ಟರು. ಅದನ್ನು ಕುಡಿದು ಎಚ್ಚರಗೆಟ್ಟ ಕುಂಬಕರ್ಣನು ಕಂಕುಳಲ್ಲಿ ಸುಗ್ರೀವನಿರುವುದೇ ಮರೆತುಬಿಟ್ಟನು. ಆಗ ಸುಗ್ರೀವನು ಮೆಲ್ಲನೆ ಜಾರಿ, ಅವನ ಕಿವಿ, ಮೂಗು ಕಚ್ಚಿ ಗಾಯ ಮಾಡಿ ಅಲ್ಲಿಂದ ಪಾರಾಗಿ ಶ್ರೀರಾಮನಿಗೆ ಸಾಷ್ಟಾಂಗವೆರಗಿದನು. ಕೆಲಹೊತ್ತಿನ ಮೇಲೆ ಕುಂಭಕರ್ಣನು ರಾವಣನನ್ನು ಬೆಟ್ಟಿಯಾಗಿ “ಅಣ್ಣಾ ನೋಡು ಶತ್ರುಗಳಲ್ಲಿ ಒಬ್ಬನಾದ ಸುಗ್ರೀವನನ್ನು ಹಿಡಿದು ತಂದಿದ್ದೇನೆ” ಎಂದು ಕಂಕುಳವೆತ್ತಿದಾಗ ಅಲ್ಲಿ ಸುಗ್ರೀವನಿರಲಿಲ್ಲ. ಅಷ್ಟೇ ಅಲ್ಲ ತನ್ನ ಕಿವಿ, ಮೂಗುಗಳು ಗಾಯವಾಗಿದ್ದನ್ನು ಕಂಡು ನಾಚಿಕೆಯಿಂದ ತಲೆತಗ್ಗಿಸಿದನು. ನನಗೆ ಕೋಪ ತಡೆಯಲಾಗಲಿಲ್ಲ. ಕುಂಬಕರ್ಣನಿಗೆ ಛೀಮಾರಿ ಹಾಕಿದೆ. ಶೂರ್ಪನಖಿಯ ಕಿವಿ ಮೂಗುಗಳು ಹೋದದ್ದನ್ನು ನೋಡಿದ್ದೆ. ಈಗ ಅವಳ ಸ್ಥಿತಿಯೂ ನನಗೆ ಬಂದಿತಲ್ಲ. ಆ ಸುಗ್ರೀವನನ್ನು ರಾಮಲಕ್ಷ್ಮಣರನ್ನು ಸುಮ್ಮನೆ ಬಿಡುವುದಿಲ್ಲ. ಏನು ಮಾಡಲಿ ಅವರನ್ನು ತುಂಡುತುಂಡಾಗಿ ಕತ್ತರಿಸಿದರೂ ಕೋಪ ಹಿಂಗುವುದಿಲ್ಲ” ಎಂದು ರಣರಂಗಕ್ಕೆ ಬಂದನು ಕುಂಭಕರ್ಣನು. ಮತ್ತೆ ರಣರಂಗಕ್ಕೆ ಬಂದುದನ್ನು ಕಂಡು ಕಪಿಗಳ ಜಂಘಾಬಲವೇ ಉಡುಗಿತು. ವಾನರರು ಜೀವಭಯದಿಂದ ರಣಭೂಮಿಯನ್ನು ಬಿಟ್ಟು ಓಡಿಹೋದರು. ಆಗ ಶ್ರೀರಾಮನು ಲಕ್ಷ್ಮಣ, ಸುಗ್ರೀವರನ್ನು ಕರೆದು “ನಾನು ಇವನೊಂದಿಗೆ ಯುದ್ಧ ಮಾಡುವೆ. ಉಳಿದ ರಕ್ಕಸ ಸೇನೆಯನ್ನು ನೀವು ನೋಡಿಕೊಳ್ಳಿ ಎಂದು ವಾಯುವ್ಯಾಸ್ತ್ರವನ್ನು ಹೊಡೆಯಲು ರಕ್ಕಸಸೇನೆ ಹಾರಿಹೋಯಿತು. ಕುಂಭಕರ್ಣನು “ಭಲೇ ಶ್ರೀರಾಮ ರಣಭೀಮ ರಘುಕುಲ ಸೋಮ! ನಿನ್ನಂತಹ ಬಿಲ್ಲುಗಾರರನ್ನು ನಾನು ಎಂದಿಗೂ ನೋಡಿಲ್ಲ ನನ್ನ ಬಿಲ್ಲುಗಾರಿಕೆಯ ರುಚಿನೋಡು” ಎಂದು ಅಸ್ತ್ರ ಪ್ರಯೋಗಿಸಲು ಶ್ರೀರಾಮನ ಶರೀರದಲ್ಲಿ ರಕ್ತದ ಹೊಳೆಯೇ ಹರಿಯಿತು. ಆಗ ಶ್ರೀರಾಮನು “ಭಲೇ ಕುಂಭಕರ್ಣ ನಿನ್ನನ್ನು ಈಗ ಲಂಬಕರ್ಣನನ್ನಾಗಿ ಮಾಡುತ್ತೇನೆ ನೋಡು” ಎಂದು ಕುಂಬಕರ್ಣನ ಬಿಲ್ಲನ್ನು ಮುರಿದು ಹಾಕಿದನು. ಹೀಗೆ ಒಬ್ಬರಿಗೊಬ್ಬರು ಅಸ್ತ್ರಕ್ಕೆ ಪ್ರತಿ ಅಸ್ತ್ರಗಳನ್ನು ಹೂಡುತ್ತಾ ಯುದ್ಧ ಮಾಡಿದರು. ಹೀಗೆ ಯುದ್ಧವು ಮೂರುದಿನ ನಿರಂತರವಾಗಿ ನಡೆಯಿತು. ಕಡೆಗೆ ವಿಭೀಷಣನು “ಶ್ರೀರಾಮಚಂದ್ರ ಈ ದುರುಳನ ಜೊತೆ ಎಷ್ಟು ದಿವಸ ಆಟವಾಡುವೆ. ಶೀಘ್ರವಾಗಿ ದುಷ್ಟನನ್ನು ಸಂಹರಿಸಿ ಲೋಕಕಲ್ಯಾಣವನ್ನುಂಟುಮಾಡು” ಎಂದು ಪ್ರಾರ್ಥಿಸಲು ಶ್ರೀರಾಮನು ನಾರಾಯಣಾಸ್ತ್ರವನ್ನು ಪ್ರಯೋಗಿಸಿ ಅವನ ಕಂಠವನ್ನು ಕತ್ತರಿಸಿದನು. ದೇವತೆಗಳು ಹೂಮಳೆಗರೆದರು. ಸಾಧುಸಜ್ಜನರು ಶ್ರೀರಾಮನನ್ನು ಹೊಗಳಿದರು. ಉಳಿದ ರಕ್ಕಸರು ಓಡಿ ಬಂದು ಕುಂಭಕರ್ಣನ ಮರಣವಾರ್ತೆಯನ್ನು ಬಂದು ನನಗೆ ತಿಳಿಸಿದರು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರುದ್ರಪ್ರಯಾಗ
Next post ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ವಲಯ

    ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…