ನಿನ್ನ ನಿಷ್ಠೆಯ ನಂಬಿ, ವಂಚಿತಪತಿಯ ಹಾಗೆ
ಹೀಗೇ ಉಳಿವೆ ನಾನು, ನೀನು ಬದಲಾದರೂ;
ಒಲಿದ ಮುಖ ಕಾಣುವುದು ಒಲಿದ ಮುಖವಾಗಿಯೇ –
ಮುಖ ನನಗೆ, ಹೃದಯ ಅನ್ಯರಿಗಾಗಿ ಇದ್ದರೂ.
ದ್ವೇಷ ನಿನ್ನೀ ಕಣ್ಣಿನಲಿ ಎಂದೂ ಬಾಳದಿದೆ,
ಒಳಗೆ ಬದಲಾದರೂ ತಿಳಿಯದದು ಕಣ್ಣಿಂದ,
ಎಷ್ಟೋ ನೋಟಗಳಲ್ಲಿ ಹುಸಿಹೃದಯದೆಲ್ಲ ಕಥೆ
ಸುಸ್ಪಷ್ಟ, ಮುಖದ ನಿಸ್ನೇಹ ಬಿಗಿತಗಳಿಂದ.
ಆದರಾ ದೈವವೋ ಸ್ನೇಹವೊಂದೇ ನಿನ್ನ
ದೃಷ್ಟಿಯೊಳು ಹೊಳೆವಂತೆ ಸೃಷ್ಟಿಸಿದೆ ನಿನ್ನನ್ನು,
ಅಂತರಂಗದ ಭಾವ ಏನೇ ಇರಲಿ ನಿನ್ನ
ಮುಖವು ಧ್ವನಿಸುವುದು ಕೇವಲ ಸ್ನೇಹಭಾವವನು.
ಮುಖದ ಸವಿಭಾವವನು ಗುಣವು ನಿಜಗೊಳಿಸದಿರೆ
ನಿನ್ನ ಚೆಲುವೆಲ್ಲ ‘ಈವ್’ ಪಡೆದ ಸೇಬಿನ ಥರವೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 93
So shall i live, supposing thou art true
















