ಯಶಸ್ಸು

ಯಶಸ್ಸು

ಯಶಸ್ಸು ಅಂದರೆ ಏನು? ಯಶಸ್ಸನ್ನು ಹೇಗೆ ಸಿದ್ಧಾಂತಿಕರಿಸುತ್ತೇವೆ? ಯಶಸ್ಸು ಅಂದರೆ ಲೆಕ್ಕವಿಡಲಾಗದಷ್ಟು ಹಣ ಗಳಿಕೆಯೇ? ಸಮಾಜದಲ್ಲಿ ಹೆಸರು ಗಳಿಕೆಯೇ? ವೃತ್ತಿ ಜೀವನದಲ್ಲಿ ಅತ್ಯುನ್ನತ ಪದವಿಗೆ ಏರುವುದೇ? ದೊಡ್ಡ ಬಂಗಲೆ, ನಾಲ್ಕಾರು ಕಾರು, ಸುಂದರ ಹೆಂಡತಿ, ಮನೆ ತುಂಬ ಆಳು-ಕಾಳು; ಹೊರದೇಶಕ್ಕೆ ಹಾರಿದ ಡಾಕ್ಟರು, ಇಂಜಿನಿಯರ್ ಮಕ್ಕಳು ಇವಿಷ್ಟೆಯೇ?

ಯಾರಿಗೂ ಅಂಜದೆ ತನ್ನತನವನ್ನು, ಸತ್ಯ, ನೀತಿ, ನ್ಯಾಯ, ಧರ್ಮವನ್ನು ಉಳಿಸಿಕೊಂಡು ಉತ್ತಮವಾಗಿ ಜೀವಿಸಿದವರು ಯಶಸ್ವಿ ಗಳಲ್ಲವೇ? ಉತ್ತಮ ಮಕ್ಕಳನ್ನು ಸಮಾಜಕ್ಕಿತ್ತ ತಾಯಿ ಯಶಸ್ವಿ ಅಲ್ಲವೇ? ಮೊದಲ ಸ್ಥಾನ ಗಳಿಸುವುದೇ ಯಶಸ್ಸು ಎಂದಾದರೆ ಆ ಸ್ಥಾನ ಯಾರಾದರೂ ಒಬ್ಬನಿಗೆ ಮಾತ್ರ ಸಿಗುವುದು ಸಾಧ್ಯ. ಹಾಗಂತ ಎರಡನೇ, ಮೂರನೇ, ನಾಲ್ಕನೇ ಸ್ಥಾನಗಳಿಸಿದವರು ಯಶಸ್ವಿ ಅಲ್ಲವೆಂದು ಹೇಳುವುದು ಹೇಗೆ? ಸ್ಪರ್ಧೆಯಲ್ಲಿ ಮೊದಲ ಸ್ಥಾನ ಸಿಗದಿದ್ದರೂ ಅವರ ಸಾಧನೆಯಲ್ಲಿ ಅವರಿಗೆ ತೃಪ್ತಿ ಇದೆ ಎಂದಾದರೆ ಅವರು ಯಶಸ್ವಿಗಳೆಂದು ಹೇಳುವುದರಲ್ಲಿ ತಪ್ಪಿದೆಯೇ?

ಯಶಸ್ಸು ಮತ್ತು ಮಾನಸಿಕ ತೃಪ್ತಿ ಎರಡರ ಸಂಬಂಧ ಇಲ್ಲಿ ಮುಖ್ಯವಾಗುತ್ತದೆ. ‘ಕರ್‍ಮಣ್ಯೇ ವಾಧಿಕಾರಸ್ತೇ ನಾ ಫಲೇಶು ಕದಾಚನ’ ಎನ್ನುವ ಗೀತೆಯ ಮಾತುಗಳು ಇಲ್ಲಿ ಸಮರ್‍ಪಕವೆನಿಸುತ್ತವೆ. ಫಲದ ಆಸೆಯನ್ನು ಬದಿಗಿಟ್ಟು ನಿನ್ನ ಕೆಲಸ ನೀನು ಮಾಡು. ಕರ್‍ಮದ ಫಲವನ್ನು ದೂರ ನಿಂತು ನೋಡುವಂತಹ ಒಂದು ರೀತಿಯ ನಿರ್ಲಿಪ್ತತೆ ಬೆಳೆಸಿಕೋ. ಹೀಗಿದ್ದಾಗ ಸೋಲಿನ ಹೆದರಿಕೆ ಇಲ್ಲ. ನಿರಾಸೆಯಿಲ್ಲ. ಯಶಸ್ವಿಯಾಗಬೇಕಾದರೆ ಮೊದಲು ಕಲಿಯಬೇಕಾದದ್ದು ಮುಂದಿನ ಯಶಸ್ಸಿಗೆ ಇಂದಿನ ಸೋಲುಗಳು ಸೋಪಾನಗಳು ಎನ್ನುವ ಸತ್ಯವನ್ನು ಒಪ್ಪಿಕೊಂಡು ಸೋಲುಗಳನ್ನು ನಿರ್‍ವಿಕಾರವಾಗಿ ಸ್ವೀಕರಿಸಿ, ಅದನ್ನು ಮರೆಯುವ ಸ್ಥಿತಪ್ರಜ್ಞತೆ ಹಾಗೂ ದಿಟ್ಟತನ. ಇದೇ ಯಶಸ್ಸಿನ ಗುಟ್ಟು.

ನನಗೆ ಈಗೀಗ ತುಂಬ ಸಲ ಅನಿಸುತ್ತದೆ. ಯಶಸ್ವಿಯಾಗಬೇಕಾದರೆ ನಾವು ಮೊದಲು ಕಲಿಯಬೇಕಾದದ್ದು ‘ಸೋತಿದ್ದೇವೆ ಎಂದು ಸೊರಗದೆ ನಮ್ಮ ಸೋಲುಗಳನ್ನು ಸ್ಥಿತಪ್ರಜ್ಞತೆಯಿಂದ ಸ್ವೀಕರಿಸುವುದು.’ ‘learn to accept defeat without being defeated’. ಹಾಗೆಯೇ ಮುಂದಿನ ಯಶಸ್ಸಿಗೆ ಹಿಂದಿನ ಸೋಲುಗಳನ್ನು ಮರೆಯುವುದೂ ಅಷ್ಟೇ ಮುಖ್ಯ. ‘forget what you have lost to achieve what still remains. ಯಶಸ್ಸಿನ ಗುಟ್ಟು ಇಲ್ಲಿದೆ ಎಂದು ಅನಿಸುವುದಿಲ್ಲವೇ?

ಅಂತರಾಳದಿಂದ ಹೊರಹೊಮ್ಮುವ ಅಗಾಧ ಆತ್ಮಶಕ್ತಿ- ಮಾನಸಿಕ ಬಲ, ಏನನ್ನಾದರೂ ಎದುರಿಸುವ ಛಲ, ಮುಂದಕ್ಕೆ ನೆಗೆಯುವ ಉತ್ಸಾಹ, ಸಾಧಿಸಬೇಕಾದ ಗುರಿಗಳ ಸ್ಪಷ್ಟವಾದ ಅರಿವು, ಸತತ ಸಾಧನೆ, ನಿರ್ದಿಷ್ಟವಾದ ನಿಲುವು, ಗುರಿ ತಲುಪಲೇಬೇಕು ಎನ್ನುವ ದೃಢವಾದ ನಿರ್ಧಾರ ಯಶಸ್ಸಿನ ನೆಗೆತಕ್ಕೆ ಶಕ್ತಿಕೊಡುವ ಅಡಿಗಲ್ಲುಗಳು.

ಪ್ರತಿಯೊಬ್ಬರಲ್ಲೂ ಇತಿಮಿತಿಗಳು ಇದ್ದೇ ಇವೆ. ತಮ್ಮ-ತಮ್ಮ ಇತಿಮಿತಿಗಳ ಅರಿವಿನೊಡನೆ ತಮ್ಮೊಳಗಿರುವ ಶಕ್ತಿಯ ಅರಿವು, ಅದರಲ್ಲಿ ನಂಬುಗೆ ಬೆಳೆಸಿಕೊಳ್ಳುವುದು ಬಹಳ ಮುಖ್ಯ. ತಮ್ಮಲ್ಲಿರುವ ನಿಶ್ಯಕ್ತಿಗಳನ್ನು ಕಿತ್ತು ಬಿಸಾಕಿ, ಇತ್ಯಾತ್ಮಕ ಶಕ್ತಿಗಳನ್ನು ಸಮೀಕರಿಸುವ ಸಂಕಲನ ಶಕ್ತಿ ಬಲವಾಗಿರುವವನು, ಸದಾ ನಿಶ್ಚಿತವಾದ, ನಿರ್ದಿಷ್ಟವಾದ, ಇತ್ಯಾತ್ಮಕ ಆಲೋಚನೆಗಳನ್ನು ಮನದಲ್ಲಿ ತುಂಬಿಕೊಂಡಿರುವವನು ಯಶಸ್ಸಿನ ಮೆಟ್ಟಲುಗಳನ್ನು ಸುಲಭವಾಗಿ ಏರಬಲ್ಲ. ನಕಾರಾತ್ಮಕ ಆಲೋಚನೆಗಳು ಒಂದು ಅರ್‍ಬುದ ರೋಗದಂತೆ. ಅದು ಯಾರನ್ನೂ ಬೆಳೆಯಲೇ ಬಿಡುವುದಿಲ್ಲ. ನಕಾರಾತ್ಮಕವಾಗಿ ಯೋಚಿಸುವನು ಯಾವಾಗಲೂ ತನ್ನ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಎಷ್ಟೇ ಇತಿ-ಮಿತಿಗಳಿದ್ದರೂ ಎಲ್ಲರಲ್ಲೂ ಒಂದೊಂದು ಪ್ರತಿಭೆ ಸುಪ್ತವಾಗಿರುತ್ತೆ. ಆ ಸುಪ್ತ ಪ್ರತಿಭೆಗೆ ಸಾಧನೆಯ ಚಕ್ರ ಕಟ್ಟಿ, ಆತ್ಮವಿಶ್ವಾಸದ ಸಾರಥಿತನ ಕೊಟ್ಟು ನಿಶ್ಚಿತ ಗುರಿಯತ್ತ ಓಡಿಸಿದರೆ ಆ ಓಟವನ್ನು ಯಾರೂ ತಡೆಯಲಾಗದು.

ನಾವಿಡುವ ಪ್ರತಿ ಹೆಜ್ಜೆಗೂ ಒಂದು ಗತಿಯಿರಬೇಕು, ಗುರಿಯಿರಬೇಕು. ಪ್ರತಿ ಹೆಜ್ಜೆಯಲ್ಲೂ ಗುರಿಯನ್ನು ಸಾಧಿಸುವ ಛಲವಿದ್ದರೆ ಮಾತ್ರ ಜೀವನದಲ್ಲಿ ಎದುರಾಗುವ ಎಲ್ಲ ಏರು-ಪೇರುಗಳನ್ನು ದಾಟಿ ಯಶಸ್ಸು ಗಳಿಸುವುದು ಸಾಧ್ಯ. ಯಶಸ್ಸು ಅಂದರೆ ಜಾಗತಿಕವಾಗಿ, ಪ್ರಾದೇಶಿಕವಾಗಿ, ಸಾಮಾಜಿಕವಾಗಿ ಗುರುತಿಸಲ್ಪಡುವುದು, ಹಲವಾರು ಪ್ರಶಸ್ತಿ ಬಹುಮಾನಗಳನ್ನು ಗಳಿಸುವುದು, ಹಣ ಸಂಪಾದಿಸುವುದು ಎಂದು ಭಾವಿಸಿದರೆ ಅದು ತಪ್ಪು. ಜೀವನದ ಹೋರಾಟದಲ್ಲಿ ಜಯಗಳಿಸಿ ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದೇ ಯಶಸ್ಸು.

ಜೀವನವೆನ್ನುವುದು ಸುಲಭವಲ್ಲ. ನಮ್ಮ ಸುತ್ತಲೂ ನೋಡಿದರೆ ಎಲ್ಲರ ಜೀವನದಲ್ಲೂ ಒಂದಲ್ಲ ಒಂದು ನ್ಯೂನತೆಯನ್ನು, ಕಷ್ಟವನ್ನು ನೋಡುತ್ತೇವೆ. ಎಲ್ಲರ ಜೀವನದಲ್ಲೂ ಹೋರಾಟವಿದೆ. ಕೆಲವು ಹಂತಗಳಲ್ಲಿ ಕುರುಕ್ಷೇತ್ರದ ರೀತಿಯ ಕದನವಿದೆ. ಒಂದೇ ವ್ಯತ್ಯಾಸವೆಂದರೆ ಕೃಷ್ಣನಂತಹ ಮಾರ್ಗದರ್ಶಕರು ಎಲ್ಲರಿಗೂ ಸಿಗುವುದಿಲ್ಲ. ಹೆಚ್ಚಿನವರ ಜೀವನ ಒಬ್ಬಂಟಿ ಹೋರಾಟ, ನಮ್ಮ ಸುತ್ತಲೂ ಜೀವನದ ಕದನದಲ್ಲಿ ಅವರದ್ದೇ ರೀತಿಯಲ್ಲಿ ಹೋರಾಡಿ ಗೆಲುವು ಸಾಧಿಸಿದವರು ಬಹಳ ಮಂದಿ ಇದ್ದಾರೆ. ಅವರು ಎಲ್ಲರ ಗಮನ ಸೆಳೆದಿಲ್ಲದಿರಬಹುದು. ಆದರೆ, ಅವರ ಹೋರಾಟ ಇನ್ನೊಬ್ಬರಲ್ಲಿ ಧೈರ್‍ಯ ತುಂಬಿರಬಹುದು; ಆದರ್ಶವಾಗಿರಬಹುದು. ಅವರ ಸೋಲು, ಗೆಲುವು ಇನ್ನೊಬ್ಬರಿಗೆ ಪಾಠ ಕಲಿಸಿರಬಹುದು. ಮಾರ್ಗದರ್ಶನ ನೀಡಿರಬಹುದು. ಅಂಥವರ ಜೀವನವೇ ಯಶಸ್ವೀ ಜೀವನ.

ಯಶಸ್ಸು ಯಾರನ್ನೂ ಹುಡುಕಿಕೊಂಡು ಬರುವುದಿಲ್ಲ. ಯಶಸ್ವಿ ಯಾಗಬೇಕಾದರೆ ಸತತ ಸಾಧನೆ, ತನ್ಮಯತೆ, ಏಕಾಗ್ರಚಿತ್ತ ಸ್ಥಿರತೆ, ಧ್ಯಾನಸ್ಥ ಮನಸ್ಸು, ಕಾರ್‍ಯತತ್ಪರತೆ, ಇವತ್ತಿನ ಕೆಲಸ. ಇವತ್ತೇ ಆಗಬೇಕೆನ್ನುವ ಛಲ ಮುಖ್ಯ. ಸಮಯದ ಮಹತ್ವಕ್ಕೆ ಬೆಲೆಕೊಟ್ಟು ಮಾಡುವ ಕೆಲಸಗಳನ್ನು ಮನಸ್ಸಿಟ್ಟು, ನಿಷ್ಠೆಯಿಂದ, ನಿಖರತೆಯಿಂದ, ಅಭಿಮಾನದಿಂದ ಮಾಡಿದರೆ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಹೀಗೆ ಮಾಡಿದ್ದರಿಂದಲೇ ಹಲವಾರು ಅನ್ವೇಷಣೆಗಳಾದದ್ದು. ಹಲವಾರು ಮೇಧಾವಿಗಳು ಗುರುತಿಸಲ್ಪಟ್ಟದ್ದು, ಹಲವಾರು ಕ್ರೀಡಾಪಟುಗಳು ಜಾಗತಿಕವಾಗಿ ಉತ್ತಮರಾಗಿ ಗಮನ ಸೆಳೆದದ್ದು.

ಯಶಸ್ವಿಯಾಗಬೇಕಾದರೆ ಜೀವನಪ್ರೀತಿ ಇರಬೇಕು. ಜೀವನವನ್ನು ದ್ವೇಷಿಸುವವನು ಯಶಸ್ವಿಯಾಗಲಾರ. ವಿನಾಕಾರಣ ನಮ್ಮ ಶಕ್ತಿಯನ್ನು ಕುಗ್ಗಿಸುವ ಹೆದರಿಕೆಯಿಂದ ಬಳಲುವವನು ಯಶಸ್ವಿಯಾಗಲಾರ. ಸಾಧ್ಯವಾಗದ್ದನ್ನು ಸಾಧಿಸುತ್ತೇನೆ ಎಂದು ಆಶಿಸಿದರೆ ಯಾವತ್ತೂ ಏನನ್ನೂ ಸಾಧಿಸುವುದೇ ಇಲ್ಲ. ತೋರಿಕೆಯ ವ್ಯಕ್ತಿತ್ವದಿಂದ ಅಪಹಾಸ್ಯಕ್ಕೆ ಈಡಾಗುವ ಪ್ರಮೇಯಗಳೇ ಜಾಸ್ತಿ.

ಯಶಸ್ಸು ಎಲ್ಲರಿಗೂ ಬೇಕು ನಿಜ. ಆದರೆ ಯಶಸ್ಸು ಪಡೆದ ಮೇಲೆ ಯಶಸ್ಸಿನ ಬಗ್ಗೆ ಅಭಿಮಾನವಿರಲಿ ಅಹಂಕಾರ ಬೇಡ, ಜಂಭ ಬೇಡ. ಯಶಸ್ಸು ಪಡೆದವನ ವ್ಯಕ್ತಿತ್ವಕ್ಕೆ ನಮ್ರತೆಯ ಅಲಂಕಾರವಿದ್ದರೆ ಅದು ಅವನನ್ನು ಜನರ ಕಣ್ಣಲ್ಲಿ ಗೌರವದ ಸ್ಥಾನಕ್ಕೇರಿಸುತ್ತದೆ. ಯಶಸ್ಸು ತಲೆಗೆ ಏರಬಾರದು. ಹೃದಯದಲ್ಲಿ ಉಳಿಯಬೇಕು. ಯಶಸ್ಸು ನಮ್ಮನ್ನು ಆಳಬಾರದು ಅದನ್ನು ನಾವು ಆಳಬೇಕು. ಯಶಸ್ಸಿನ ಹಿಂದೆ ನಾವು ಓಡಬಾರದು ಅದು ನಮ್ಮನ್ನು ಹುಡುಕಿಕೊಂಡು ಬರಬೇಕು. ಹುಡುಕಿಕೊಂಡು ಬರುವಂತೆ ನಮ್ಮನ್ನು ತಯಾರಿಗೊಳಿಸಿರಬೇಕು. ಆಗಲೇ ಯಶಸ್ಸಿಗೆ ಮಹತ್ವ, ಯಶಸ್ವೀ ವ್ಯಕ್ತಿಗೆ ಗೌರವ.
*****
(ಮಂತಣಿ)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪರಿವರ್ತನೆ
Next post ಬೆಂದಮನೆ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

cheap jordans|wholesale air max|wholesale jordans|wholesale jewelry|wholesale jerseys