ಚಿತ್ರ: ರೂಬೆನ್ ಲಗಾಡಾನ್

ಎಲ್‌ಐಸಿ ಹಣ, ವಿಸ್ಮಯ ಕೊಟ್ಟ ಹಣ ಎಲ್ಲಾ ಸೇರಿಸಿ ಬ್ಯಾಂಕಿಗೆ ಕಟ್ಟಿದರು. ಕೈಯಲ್ಲಿ ಎರಡು ಲಕ್ಷ ಖರ್ಚಿಗೆಂದು ಇಟ್ಟುಕೊಳ್ಳುವಂತೆ ದೊಡ್ಡಪ್ಪ ಹೇಳಿದ್ದರಿಂದ ಇಳಾ ತನ್ನದೊಂದು ಅಕೌಂಟ್‌ನ್ನು ಸಕಲೇಶಪುರದ ಬ್ಯಾಂಕಿನಲ್ಲಿ ತೆಗೆದು ಎರಡು ಲಕ್ಷ ಅಲ್ಲಿ ಇರಿಸಿದಳು. ಹತ್ತೊಂಬತ್ತು ಲಕ್ಷ ಬ್ಯಾಂಕಿನ ಸಾಲ ತೀರಿ ಇನ್ನೂ ಏಳು ಲಕ್ಷ ಉಳಿಯಿತು. ಎದೆಯ ಮೇಲೊಂದು ಭಾರ ಕಳೆದಂತಾಗಿ ನೀಲಾ ಹಾಗೂ ಇಳಾ ಸಮಾಧಾನದ ಉಸಿರುಬಿಟ್ಟರು. ‘ಅಮ್ಮಾ ನಾನೊಂದು ಗಾಡಿ ತಗೊಳ್ಳೋಣ ಅಂತ ಇದ್ದೀನಿ. ಇಲ್ಲದೆ ಇದ್ರೆ ಓಡಾಡೋಕೆ ಕಷ್ಟವಾಗುತ್ತೆ. ಬಸ್ಸಿಗೆ ಕಾಯುತ್ತಾ ಇದ್ರೆ ಇಡೀ ಸಮಯ ಎಲ್ಲಾ ವ್ಯರ್ಥವಾಗುತ್ತೆ’ ಇಳಾ ನೀಲಾಳ ಮುಂದೆ ತನ್ನ ಬೇಡಿಕೆ ಇಟ್ಟಳು.

ಗಾಡಿ ತಗೋಬೇಕು ಅಂದ್ರೆ ಐವತ್ತು ಸಾವಿರ ಬೇಕು. ಇರೋ ಹಣದಲ್ಲಿ ಐವತ್ತು ಸಾವಿರನ ಗಾಡಿಗೆ ಹಾಕಿಬಿಟ್ಟರೆ ಮುಂದಿನ ಖರ್ಚು, ಮನೆ ಖರ್ಚು, ತೋಟದ ಖರ್ಚು ಕಡಿಮೆನಾ, ಕಾಫಿ ಮಾರಿದ ಹಣ ಸಿಗೋದು ಯಾವಾಗಲೋ… ಯೋಚನೆಗೆ ಒಳಗಾದಳು. ‘ಅಮ್ಮ ಯೋಚ್ನೆ ಮಾಡಬೇಡ, ನನ್ನ ಫ್ರೆಂಡ್ ಅವಳ ಗಾಡಿನಾ ಮಾರ್ತಾ ಇದ್ದಾಳಂತೆ, ನಂಗೆ ಕೊಡು ಅಂತ ಹೇಳಿದ್ದೀನಿ, ದುಡ್ಡನ್ನ ನಿಧಾನವಾಗಿ ಕೊಡು ಪರ್ವಾಗಿಲ್ಲ ಅಂದಿದ್ದಾಳೆ. ಅರ್ಧ ರೇಟು ಕೊಟ್ರಾಯಿತು. ಅವಳಿಗೆ ಕಳುಹಿಸಿ ಕೊಡೋಕೆ ಹೆಳ್ಲಾ’ ಎಂದಾಗ, ಅರ್ಧ ಹಣ ಉಳಿಯುತ್ತಲ್ಲ ಅಂತ ‘ಸರಿ ಹೇಳಿಬಿಡು’ ಅಂತ ನೀಲಾ ಒಪ್ಪಿಕೊಂಡಳು. ಒಂದೇ ವಾರದಲ್ಲಿ ಆಕ್ಟಿವ್ ಹೊಂಡಾ ಬಂದಿಳಿಯಿತು. ಗಾಡಿ ಹೊಸದಾಗಿಯೇ ಕಾಣುತ್ತಿತ್ತು. ಫ್ರೆಂಡ್ ಹೆಚ್ಚು ಓಡಿಸದೆ ಇದ್ದುದರಿಂದ ಹೊಂಡಾ ಹಾಳಾಗಿರಲಿಲ್ಲ. ಹೇಗೋ ಮಗಳ ಈ ಒಂದು ಸಣ್ಣ ಆಸೆಯಾದರೂ ಈಡೇರಿತಲ್ಲ ಅಂತ ಸಮಾಧಾನಗೊಂಡಳು ನೀಲಾ.

ಈಗ ಇಳಾ ಬೆಳಿಗ್ಗೆ ತಿಂಡಿ ತಿಂದವಳೇ ತಲೆಗೊಂದು ಸ್ಕಾರ್ಪ್ ಸುತ್ತಿಕೊಂಡು ತೋಟಕ್ಕೆ ಹೊರಟುಬಿಡುತ್ತಾಳೆ. ಇಡೀ ತೋಟ ಸುತ್ತಿ ಕೆಲಸ ಮಾಡುವ ಆಳುಗಳಿಂದ ಏನೇನು ಕೆಲಸ ಹೇಗೆ ಮಾಡಬೇಕು, ಯಾವಾಗ ಮಾಡಬೇಕು ಎಂದೆಲ್ಲ ಕೇಳಿ ಕೇಳಿ ತಿಳಿದುಕೊಳ್ಳುತ್ತಾಳೆ. ಅವರೊಂದಿಗೆ ತಾವೂ ಕೆಲಸ ಮಾಡಲು ಪ್ರಯತ್ನಿಸಿ, ಸ್ವಲ್ಪ ಮಾಡುವುದರೊಳಗಾಗಿ ಸುಸ್ತಾಗಿ ಕುಳಿತುಬಿಡುತ್ತಾಳೆ.

‘ನೀವ್ಯಾಕೆ ಮಾಡೋಕೆ ಬರ್ತೀರಿ, ಸುಮ್ನೆ ಮನೆಗೆ ಹೋಗಿ ತಣ್ಣಗೆ ಟಿ.ವಿ. ನೋಡ್ಕೊಂಡು ಕುತ್ಕೊ ಹೋಗಿ, ನಾವಿಲ್ವಾ ಎಲ್ಲಾ ಮಾಡ್ಕೊತಿವಿ. ತಲೆ ಕೆಡಿಸಿಕೊಳ್ಳಬೇಡಿ’ ಅಂತ ಎಷ್ಟು ಹೇಳಿದ್ರು ಇಳಾ ಕೇಳ್ತ ಇರಲಿಲ್ಲ.

‘ತೋಟದ ಕೆಲಸ ನಾನು ಕಲ್ತ್‍ಕೋ ಬೇಕು. ಮುಂದಿನ ವರ್ಷದಿಂದ ನಂಗೆ ಎಲ್ಲಾ ಕೆಲಸ ಮಾಡೋಕೆ ಬರಬೇಕು. ಅದನ್ನ ಕಲೀದೇ ಹೋದ್ರೆ ನಾನು ತೋಟ ನೋಡಿಕೊಳ್ಳೋದು ಹೇಗೆ’ ಅವರ ಬಾಯಿ ಮುಚ್ಚಿಸಿಬಿಡುತ್ತಿದ್ದಳು.

ಧೂಳು ಆಗತೆ ಅಂದ್ರೆ ಏನು? ಮರಗಸಿ ಅಂದ್ರೆ ಏನು? ಅಂತ ತಾನು ಕೆಲಸ ಮಾಡುವುದರ ಮೂಲಕ ತಿಳಿದುಕೊಂಡಳು. ಆಳುಗಳೆಲ್ಲ ಸೇರಿಕೊಂಡು ಕಾಫಿ ಗಿಡದ ಸುತ್ತ ಅಗೆದು ಕಳೆ ಹುಟ್ಟದಂತೆ ಮಾಡುವುದು, ಇದ್ದ ಕಳೆ ಒಣಗಿ ಹೋಗುವಂತೆ ಮಾಡಿ ಮಣ್ಣಿನ ಸಾರವೆಲ್ಲ ಗಿಡಗಳಿಗೆ ಹೋಗುವಂತೆ ಮೂಡುವುದನ್ನೇ ನೊಡುತ್ತಾ ಧೂಳು ಅಗತೆ ಬಗ್ಗೆ ತಿಳಿದುಕೊಂಡಳು. ಮರದ ನೆರಳು ಹೆಚ್ಚು ಕಾಫಿ ಗಿಡದ ಮೇಲೆ ಬೀಳದಂತೆ ಮರಗಸಿ ಮಾಡೋದನ್ನ ನೋಡಿದಳು. ನೆರಳು ಹೆಚ್ಚಾಗಿರುವ ಮರದ ಕೂಂಬೆಗಳನ್ನು ಕಡಿದು ನೆರಳು ಹದವಾಗಿ ಗಿಡದ ಮೇಲೆ ಬಿದ್ದು, ಅದರ ಜೊತೆ ಬಿಸಿಲು ಕೂಡ ಬರುವಂತೆ ಗಿಡಗಳ ರೆಂಬೆಗಳನ್ನು ಕತ್ತರಿಸುವುದು ಒಂದು ಜಾಣ್ಮೆ ಕೆಲಸ. ಅದನ್ನು ಕೆಲಸ ಬಲ್ಲವರೇ ಮಾಡಬೇಕು. ಅಂತು ತೋಟದಲ್ಲಿ ಆಗಬೇಕಾದ ಕೆಲಸಗಳೆಲ್ಲ ಯಾವ ಅಡೆ ತಡೆಯೂ ಇಲ್ಲದೆ ನಡೆದು ತೋಟ ನಳನಳಿಸತೊಡಗಿತು. ಕೂಲಿ ಇಲ್ಲದೆ ಕೆಲಸ ಮಾಡುವುದಾಗಿ ಎಲ್ಲಾ ಆಳುಗಳು ಅಂದುಕೊಂಡಿದ್ದರೂ, ಇಳಾ ಆಗಲಿ, ನೀಲಾ ಆಗಲಿ ದುಡ್ಡು ಕೊಡದೆ ಕೆಲಸ ಮಾಡಿಸಿಕೊಳ್ಳಲು ಸಿದ್ಧರಿರಲಿಲ್ಲ. ಹೇಗೂ ಎರಡು ಲಕ್ಷ ಖರ್ಚಿಗೆಂದೇ ಹಣ ಇಟ್ಟಾಗಿತ್ತು. ಇನ್ನ ಕಾಫಿ ಹಣ ಕಡಿಮೆ ಎಂದರೂ ಎರಡು ಲಕ್ಷ ಬರಬಹುದು. ಮೊದಲೇ ಒಂದು ಲಕ್ಷ ಇಸ್ಕೊಂಡು ಮೋಹನ ಖರ್ಚು ಮಾಡಿ ಆಗಿತ್ತು. ಇನ್ನು ಬರೋ ಒಂದು ಲಕ್ಷವನ್ನು ಬ್ಯಾಂಕಿಗೆ ಕಟ್ಟಿದರೆ ಬಡ್ಡಿ ಕಳೆದು ಒಂದಿಷ್ಟು ಅಸಲಿಗೆ ಜಮೆ ಆಗುತ್ತಿತ್ತು. ಹಾಗಾಗಿ ಕೂಲಿಕೊಡದೆ ಕೆಲಸ ಮಾಡಿಸಿಕೊಳ್ಳುವ ಪರಿಸ್ಥಿತಿ ಏನೂ ಇರಲಿಲ್ಲ. ಹಾಗೂ ಅದರ ಅಗತ್ಯ ಕೂಡ ಇರಲಿಲ್ಲ. ಹಾಗೆಂದೇ ಅದೆಷ್ಟೆ ಬೇಡ ಎಂದರೂ ವಾರದ ದಿನ ಅವರ ಸಂಬಳವನ್ನು ಚುಕ್ತ ಮಾಡಿಬಿಡುತಿದ್ದರು.

ಹದಿನೈದು ಎಕರೆ ತೋಟದಲ್ಲಿ ಬರೀ ಇಷ್ಟು ಕಡಿಮೆ ಫಸಲೇ?… ಚೆನ್ನಾಗಿ ಬೆಳೆದರೆ ಏಳು-ಎಂಟು ಲಕ್ಷ ಹಣ ಪಡೆಯಬಹುದು ಅಂತ ಇತ್ತೀಚೆಗೆ ತಿಳಿದುಕೊಂಡಿದ್ದಳು. ಈಗಿನಿಂದಲೇ ತೋಟವನ್ನು ಚೆನ್ನಾಗಿ ಮಾಡಿಸಬೇಕು. ಫಸಲು ಹೆಚ್ಚಿಸಲು ಏನೇನು ಕ್ರಮ ತಗೋಬೇಕೋ, ಅದನ್ನ ತಗೋಬೇಕು. ನಾಳೆನೇ ಕಾಫಿ ರ್ಬೊರ್ಡಿಗೆ ಹೋಗಿ ಸುಧಾರಣೆಗೆ ಏನು ಮಾಡಬೇಕು ಅಂತ ತಜ್ಞರಿಂದ ತಿಳಿದುಕೊಂಡು ಬರಬೇಕೆಂದು ನಿಶ್ಚಯಿಸಿಕೊಂಡಳು. ಕಾಫಿ ಜೊತೆಗೆ ಇತರೇ ಆದಾಯ ಹೆಚ್ಚಿಸಲು ಮತ್ತೇನು ಮಾಡಬಹುದು ಅಂತ ಚಿಂತಿಸಿದಳು.

ಜಾಗ ಕೊಂಡುಕೊಂಡಿದ್ದ ವಿಸ್ಮಯ ತನ್ನ ಕೆಲಸ ಶುರು ಮಾಡಿಸಿದ್ದ. ಹೆಚ್ಚು ಕಡಿಮೆ ಇಳಾಗೆ ದಿನಾ ವಿಸ್ಮಯ ಸಿಗ್ತಾ ಇದ್ದ. ಸಣ್ಣ ನಗೆ ಬೀರಿ ಹೊರಟುಬಿಡುತ್ತಿದ್ದ. ಯಾವತ್ತೂ ಅನಾವಶ್ಯಕವಾಗಿ ಮಾತಿಗಿಳಿಯುತ್ತಿರಲಿಲ್ಲ. ಸದಾ ಕೆಲಸ ನಡೆಯುವ ಜಾಗದಲ್ಲಿದ್ದುಕೊಂಡು ಪ್ರತಿಯೊಂದನ್ನು ತಾನೇ ಮುಂದೆ ನಿಂತು ನಿರ್ದೇಶಿಸುತ್ತಿದ್ದ. ತಾವು ಕೊಟ್ಟ ಜಾಗದಲ್ಲೊಂದು ಹಳ್ಳಿಯಲ್ಲಿರುವಂತೆ ಕಂಬದ ಮನೆ ತಲೆ ಎತ್ತುತ್ತಿರುವುದನ್ನು ತನ್ನ ತೋಟದಿಂದಲೇ ನೋಡುತ್ತಿದ್ದಳು. ಇದೇನಿದು ಇವನು ತೋಟದ ಮನೆ ತರ ಕಂಬದ ಮನೆ ಕಟ್ಟಿಸುತ್ತ ಇದ್ದಾನೆ. ಹೀಗೆ ಕಟ್ಟಿದ್ರೆ ಇಲ್ಯಾರು ಬರ್ತಾರಪ್ಪ ಅಂತ ಅಂದುಕೊಂಡಳು. ರಸ್ತೆಗೆ ಹೊಂದುಕೊಂಡಂತಿದ್ದ ಜಾಗ ಹಾಗೇ ಖಾಲಿ ಇತ್ತು. ಇಲ್ಲೇನು ಮಾಡುತ್ತಾನೋ ಪುಣ್ಯಾತ್ಮ ಅಂತ ಇಳಾ ಹಾನುಬಾಳಿಗೆ ಹೋಗಿ ಬರುವಾಗಲೆಲ್ಲ ಅಂದುಕೊಳ್ಳುತ್ತ ಇದ್ದಳು. ದಿನೇ ದಿನೇ ಅಲ್ಲಿನ ವಾತಾಮಣ ಬದಲಾಗುತ್ತಿತ್ತು. ತಗ್ಗಿದ್ದ ಜಾಗದಲ್ಲಿ ಜೆಸಿಬಿ ಅಗೆದು ಮತ್ತಷ್ಟು ಆಳ ಮಾಡುತ್ತಿದ್ದರು. ಯಾಕಪ್ಪ ಇದು ಅಂದುಕೊಂಡಳು. ಕುತೂಹಲ ತಡೆಯಲಾರದೆ ವಿಸ್ಮಯ ಬೆಳಿಗ್ಗೆ ಸಿಕ್ಕಾಗ ಕೇಳಿಯೇಬಿಟ್ಟಳು. ಅಲ್ಲೊಂದು ಕೆರೆ ನಿರ್ಮಿಸಿ, ಬೋಟಿಂಗ್ ಸೌಕರ್ಯ ನಿರ್ಮಿಸುವುದಾಗಿ ಹೇಳಿದಾಗ ಹೌದಾ! ಅಂತ ಬೆರಗುಗೊಂಡಳು.

ಅದೊಂದು ದಿನ ತೋಟದಿಂದ ಬರುವಷ್ಟರಲ್ಲಿ ವಿಸ್ಮಯ ಮತ್ತು ವಿನಾಯಕ ಮನೆಯೊಳಗೆ ಅಜ್ಜಿ ಜೊತೆ ಮಾತಾಡುತ್ತಾ ಕುಳಿತಿರುವುದು ಕಂಡು ಇದೇನಪ್ಪ ಗಾಳಿ ಇತ್ತ ಬೀಸಿಬಿಟ್ಟಿದೆ- ಗೋಡೆ ಮೇಲೆ ಹರಿದಾಡುತ್ತಿದ್ದ ಹಲ್ಲಿ ಟಪ್ಪೆಂದು ನೆಲದ ಮೇಲೆ ಬಿದ್ದಂತೆ ವಿಸ್ಮಯ ಆ ಮನೆಗೆ ಕಾಲಿರಿಸಿದ್ದ ಎಂದು ತನ್ನ ಹೋಲಿಕೆಗೆ ತಾನೇ ನಗುತ್ತಾ ಇಳಾ ಒಳಬಂದಳು. ಇಳಾಳನ್ನು ಕಂಡಕೂಡಲೇ ವಿನಾಯಕ ‘ಏನಮ್ಮ ತೋಟಾನಾ ಅಷ್ಟೊಂದು ಚೆನ್ನಾಗಿ ನೋಡಿಕೊಳ್ತ ಇದ್ದೀಯಂತೆ. ಯಾವಾಗಲೂ ತೋಟದಲ್ಲೇ ಇರ್ತೀಯಂತೆ. ಸುತ್ತಮುತ್ತ ಎಲ್ಲಾ ನಿಂದೇ ಸುದ್ದೀ, ಅಂತೂ ಮಣ್ಣಿನ ಮಗಳಾಗ್ತ ಇದ್ದೀಯಾ ಅಮ್ಮ’ ಬಡಬಡನೆ ಒಂದೇ ಸಮ ಮಾತಾಡಿದ.

ಅವನ ಮಾತಿಗೆ ಸುಮ್ಮನೆ ನಕ್ಕಳು ಇಳಾ.

ವಿಸ್ಮಯ ಸುಮ್ಮನೆ ನೋಡುತ್ತ ನಸುನಗುತ್ತಿದ್ದ. ಅಷ್ಟರೊಳಗೆ ಬಿಸ್ಕತ್ತು, ಕಾಫಿ ತೆಗೆದುಕೊಂಡು ಬಂದ ನೀಲಾ-

‘ಕಾಫಿ ತಗೊಳ್ಳಿ, ಇಳಾ ನೀನೂ ತಗೋ. ಅಪರೂಪಕ್ಕೆ ಇವತ್ತು ರೆಸಾರ್ಟ್ ಓನರ್ ನಮ್ಮ ಮನೆಗೆ ಬಂದಿದ್ದಾರೆ. ಊಟ ಮಾಡಿಕೊಂಡೇ ಹೋಗಬೇಕು’ ಅಂತ ಆತ್ಮೀಯವಾಗಿ ಒತ್ತಾಯಿಸಿದಳು.

“ಇಲ್ಲಾ ಮೇಡಂ, ಇನ್ನೂಂದು ದಿನ ಊಟಕ್ಕೆ ಅಂತಲೇ ಬರ್ತೀನಿ. ನಾವು ಈಗ ಯಾಕೆ ಬಂದಿದ್ದು ಅಂದ್ರೆ ನಾಳೆ ಒಂದು ಪೂಜೆ ಇಡಿಸಿದ್ದೇನೆ. ನೀವು, ಅಜ್ಜಿ, ನಿಮ್ಮ ಮಗಳು ತಪ್ಪದೆ ಬೆಳಿಗ್ಗೆ ಎಂಟು ಗಂಟೆಗೇ ಬರಬೇಕು. ಅಲ್ಲಿಯೇ ತಿಂಡಿ ಅರೆಂಜ್ ಮಾಡಿದ್ದೇವೆ. ಮನೆಯವರೆಲ್ಲ ಬರಲೇಬೇಕು” ಆಹ್ವಾನ ನೀಡಿದ ವಿಸ್ಮಯ್.

ಈಗೆಂತ ಪೂಜೇನಪ್ಪಾ… ಗೃಹಪ್ರವೇಶಾನೋ? ರೆಸಾರ್ಟ್ ಓಪನಿಂಗ್ ಅಂದ್ರೆ, ಕೆಲಸವೇ ಇನ್ನೂ ಮುಗಿದಿಲ್ಲ-ನೀಲಾ ಕೇಳಿದಳು.

‘ಬೆಳಿಗ್ಗೆ ಬನ್ನಿ ಮೆಡಂ. ಎಲ್ಲಾ ಗೊತ್ತಾಗುತ್ತೆ’ ಎಂದು ಹೇಳಿ ಎದ್ದು ನಿಂತ.

‘ಅದೇನಪ್ಪ ಸಸ್ಪೆನ್ಸ್ ಅಂತಾದ್ದು, ನೀವಾದ್ರೂ ಹೇಳಿ ವಿನಾಯಕಣ್ಣ’ ಕೇಳಿದಳು ಇಳಾ. ‘ನಂಗೂ ಗೊತ್ತಿಲ್ಲ ಕಣಮ್ಮ ಇಳಾ. ನಾಳೇನೇ ನಂಗೂ ಗೊತ್ತಾಗೋದು. ಈ ಮಹಾನುಭಾವ ಅದೇನು ಮಾಡ್ತ ಇದ್ದಾರೋ ಗೊತ್ತಿಲ್ಲ’ ಅಮಾಯಕನಂತೆ ನುಡಿದು ಹೊರನಡೆದ. ಅವನ ಹಿಂದೆಯೇ ವಿಸ್ಮಯ ಹೆಜ್ಜೆ ಹಾಕಿದ.

‘ಅಷ್ಟು ದೊಡ್ಡ ಶ್ರೀಮಂತನಾದ್ರೂ ಸ್ವಲ್ಪಾನೂ ಜಂಬ ಇಲ್ಲಾ ಅಲ್ವಾ ಇಳಾ. ಪಾಪ ನಾವು ಜಾಗ ಕೊಟ್ಟ ಮೇಲೂ ನಮ್ಮನ್ನು ಮರೆಯದೆ ಕರೆಯೋಕೆ ಬಂದಿದ್ದಾನಲ್ಲ, ಒಳ್ಳೆ ಹುಡುಗ’ ನೀಲಾ ಹೇಳ್ತ ಇದ್ದರೆ-

ಅಂಬುಜಮ್ಮ ‘ಬೆಂಗಳೂರಿನಲ್ಲಿ ಬೇಕಾದಷ್ಟು ಆಸ್ತಿ ಇದೆಯಂತೆ. ಅಲ್ಲಿರೋಕೆ ಈ ಹುಡುಗನಿಗೆ ಇಷ್ಟಾನೇ ಇಲ್ಲವಂತೆ. ಇಲ್ಲೆ ತನಗೊಂದು ಮನೆನೂ ಕಟ್ಟಿಸಿಕೊಳ್ತಾ ಇದ್ದಾನಂತೆ. ಅದಕ್ಕೆ ನಮ್ಮ ಜಾಗದ ಜೊತೆ ಆ ಗಣೇಶನ ಜಾಗ, ಶೇಖರನ ಜಾಗ ಎಲ್ಲಾನೂ ಹೆಚ್ಚು ರೇಟು ಕೊಟ್ಟು ಕೊಂಡುಕೊಂಡಿದ್ದಾನಂತೆ. ಹಾಗಂತ ಆಳುಗಳು ಮಾತಾಡಿಕೊಳ್ಳುತ್ತ ಇದ್ದರು. ಪಟ್ಟಣದ ಹುಡುಗನಿಗೆ ಈ ಕಾಡಲ್ಲಿ ಅದೇನು ಸ್ವರ್ಗಕಾಣಿಸುತ್ತ ಇದೆಯೋ’ ಎಂದರು.

‘ಹೋಗ್ಲಿ ಬಿಡಿ ದೊಡ್ಡಮ್ಮ. ಇಲ್ಲಿ ಹುಡುಗರಿಗೆ ಪಟ್ಟಣಕ್ಕೆ ಸೇರೋ ಆಸೆ, ಅಲ್ಲಿರೋ ಹುಡುಗರಿಗೆ ಇಲ್ಲಿ ಬರೋ ಆಸೆ, ಬದುಕೇ ಹಾಗೇ ಅಲ್ಲವೇ. ಇರದುದೆಡೆಗೆ ತುಡಿಯುವುದೇ ಜೀವನ…’ ಅನ್ನೋ ಕವಿವಾಣಿ ನಿಜವೇ ಅಲ್ಲವೇ? ಹೇಗೂ ನಿಂಗೆ ಬೆಳಿಗ್ಗೆ ತಿಂಡಿ ಮಾಡೋ ತೊಂದರೆ ತಪ್ಪಿತು. ಬೇಗ ಎದ್ದು ರೆಡಿಯಾಗಿ ಹೋಗೋಣ. ಪಕ್ಕದಲ್ಲೇ ಅಲ್ವೆ ಹೋಗದೆ ಇದ್ರೆ ಆ ಹುಡುಗ ಬೇಸರ ಪಟ್ಕೊತಾನೆ. ಬೇರೆ ಕಡೆ ಆಗಿದ್ರೆ ನಾನಂತು ಹೋಗ್ತ ಇರಲಿಲ್ಲ. ನಾಳೆ ಹೇಗೂ ಗುರುವಾರ ಕೆಲಸದವರೂ ಬರೋದಿಲ್ಲ. ತೋಟದ ಕೆಲಸಾನೂ ಇಲ್ಲ. ಆರಾಮವಾಗಿ ಹೋಗಿ ಬರೋಣ’ ಅಂತ ಹೇಳಿದಳು.

ಬೆಳಿಗ್ಗೆ ಬೇಗ ಎದ್ದು ತಲೆಗೆ ಸ್ನಾನ ಮಾಡಿ ಕೂದಲನ್ನ ಹಾಗೇ ಒಣಗಲು ಬಿಟ್ಟು ಅಪರೂಪಕ್ಕೆ ಡ್ರೆಸ್ಸಿನ ಬಗ್ಗೆ ವಿಶೇಷ ಆಸಕ್ತಿ ತಗೊಂಡು ತನ್ನ ಮೆಚ್ಚಿನ ಕಡುನೀಲಿ ಚೂಡಿದಾರ್ ಹಾಕಿಕೊಂಡಳು.

‘ನನ್ನ ದೃಷ್ಟಿನೇ ಬಡಿಯೋ ಹಾಗಿದೆಯಲ್ಲೇ ತಾಯಿ ಬಾ ಮೊದ್ಲು ಮೆಣಸಿನಕಾಯಿ ನೀವಾಳಿಸ್ತೀನಿ’ ಅಂತ ಅಜ್ಜಿ ಬಲವಂತಿಸಿದಾಗ

‘ಹೋಗಜ್ಜಿ ನೀನೊಬ್ಬಳು ದೃಷ್ಟಿಗಿಷ್ಟಿ ಅಂತ ತಲೆ ಕೆಡಿಸಬೇಡ, ಬೇಗ ಹೊರಡು ಲೇಟಾಗುತ್ತೆ’ ಅಂತ ಅವಸರಿಸಿದಳು. ಮೂರು ಜನರೂ ಅಲ್ಲಿಗೆ ಬರೋ ಅಷ್ಟರಲ್ಲಿ ತೋಟದ ಆಳುಗಳೆಲ್ಲ ಸೇರಿಬಿಟ್ಟಿದ್ದರು. ಇವರನ್ನು ಕಂಡ ಕೂಡಲೇ ಸಡಗರದಿಂದ ಸ್ವಾಗತಿಸಿದರು.

‘ಬನ್ನಿ, ಬನ್ನಿ, ನಿಮ್ಮನ್ನೆ ಕಾಯ್ತಾ ಇದ್ವಿ. ಪೂಜೆ ಶುರು ಮಾಡೋಣ’ ವಿಸ್ಮಯ ಬರಮಾಡಿಕೊಂಡ. ರಸ್ತೆಗೆ ಸೇರಿದಂತೆ ಇದ್ದ ಜಾಗದಲ್ಲಿ ಅಗೆದು ಸ್ವಚ್ಛ ಮಾಡಲಾಗಿತ್ತು. ಅಲ್ಲೊಂದು ಮೂಲೆಯಲ್ಲಿ ಕಳಸ ಜೋಡಿಸಿ ಪೂಜಾ ಸಾಮಾಗ್ರಿ ಇಡಲಾಗಿತ್ತು. ಏನು ಅಂತ ಅರ್ಥವಾಗದೆ ತಾಯಿ ಮಗಳು ಮುಖ ನೋಡಿಕೊಂಡರು.

‘ಮೇಡಂ ನೀವು ಹೀಗೆ ಬನ್ನಿ! ಭಟ್ಟರೇ ನೀವು ಪೂಚೆ ಶುರು ಮಾಡಿ. ಇಳಾ ನೀವೂ ಬನ್ನಿ ಇಲ್ಲಿಗೆ’ ಕರೆದ ವಿಸ್ಮಯ. ಭಟ್ಟರು ಮಂತ್ರ ಹೇಳುತ್ತ ಪೂಜೆ ಶುರು ಹಚ್ಚಿಕೊಂಡರು. ಗುದ್ದಲಿಯನ್ನು ನೀಲಾಳ ಕೈಲಿ ಕೊಟ್ಟು ‘ಮೆಡಂ ನೀವು ಇಲ್ಲಿ ಗುದ್ದಲಿಯಿಂದ ಸ್ವಲ್ಪ ಅಗೆಯಿರಿ. ನಿಮ್ಮಿಂದಲೇ ನಿಮ್ಮ ಪತಿಯ ಕನಸಿನ ಶಾಲೆಯ ಕಟ್ಟಡ ಪ್ರಾರಂಭೋತ್ಸವ ನಡೆಯಲಿ’ ಎಂದನು. ದಂಗಾಗಿ ನಿಂತುಬಿಟ್ಟಳು ನೀಲಾ.

ತಾನು ಗುದ್ದಲಿ ಹಿಡಿದು ಅಗೆಯುವುದು, ಪತಿಯ ಕನಸು ಒಂದೂ ಅರ್ಥವಾಗದೆ ವಿಸ್ಮಯನನ್ನೆ ಅಚ್ಚರಿಯಿಂದ ನೋಡುತ್ತ ನಿಂತುಬಿಟ್ಟಳು. ಇಳಾಗೂ ಆಶ್ಚರ್ಯವಾಗಿತ್ತು. ಅಮ್ಮ ಯಾಕೆ ಈ ಪೂಜೆಯಲ್ಲಿ ಪಾಲ್ಗೊಳ್ಳಬೇಕು. ವಿಸ್ಮಯ ಯಾಕೆ ಹೀಗೆ ಕರೆಯುತ್ತಿದ್ದಾನೆ ಎಂದೇ ಗೊತ್ತಾಗದೆ ತಬ್ಬಿಬ್ಬುಗೊಂಡಳು.

‘ಬನ್ನಿ ಮೇಡಂ, ನಿಮ್ಮ ಭಾವ ನಂಗೆ ಈ ಜಾಗ ಮಾರುವಾಗ ನಿಮ್ಮ ಪತಿಯ ಕನಸನ್ನು ಮಾರ್ತಾ ಇದ್ದೀವಿ ಅಂತ ಹೇಳಿದ್ದರು ನೆನಪಿದೆಯಾ… ಮೋಹನನ ಕನಸುಗಳನ್ನು ನಾನು ಕೊಂಡಕೊಂಡ ಮೇಲೆ ಅದನ್ನು ಸಾಕಾರಗೊಳಿಸಬೇಕು ಅಲ್ಲವೆ? ಆಚರ್ಯಪಡಬೇಡಿ. ಈ ಜಾಗದಲ್ಲಿ ಮೋಹನನ ಆಸೆಯಂತೆ ಶಾಲೆಯೊಂದನ್ನು ಕಟ್ಟೋಣವೆಂದು ತೀರ್ಮಾನಿಸಿದ್ದೇವೆ. ಆ ಶಾಲೆಯ ಕಟ್ಟಡಕ್ಕಾಗಿಯೇ ಈ ಗುದ್ದಲಿ ಪೂಜೆ, ಈ ಪೂಜೆಯನ್ನು ನಿಮ್ಮಿಂದಲೇ ನೆರವೇರಿಸಿದರೆ ಮೋಹನನ ಅತ್ಮ ಸಂತೋಷಪಡುತ್ತೆ, ನನ್ನ ಆಶೀರ್ವದಿಸುತ್ತಾರೆ ಅಂತ ಈ ಪೂಜೆಯನ್ನು ನಿಮ್ಮಿಂದ ಮಾಡಿಸುತ್ತ ಇದ್ದೀವಿ. ಬನ್ನಿ ತಡವಾಗುತ್ತೆ’ ಎಂದು ದೀರ್ಘವಾಗಿ ಹೇಳಿದಾಗ ನೀಲಾಳ ಕಣ್ಣುಗಳಿಂದ ಪಳಪಳನೆ ಕಣ್ಣೀರು ಉದುರಿದವು. ಅದು ದುಃಖದ ಕಣ್ಣೀರೋ, ಆನಂದಭಾಷ್ಪವೋ ತಿಳಿಯದೆ, ಮೌನವಾಗಿ ವಿನ್ಮಯದಿಂದ ಗುದ್ದಲಿ ಪಡೆದು ಅವರು ತೋರಿಸಿದ ಜಾಗಕ್ಕೆ ಏಟು ಹಾಕಿದಳು.

ಇಳಾಳಂತು ಬೆರಗಿನಿಂದ ನಿಂತು ಬಿಟ್ಟಿದ್ದಳು. ದೊಡ್ಡಪ್ಪ ಅವತ್ತು ಹೇಳಿದಾಗಲೇ ಅಪ್ಪನ ಕನಸು ಗೊತ್ತಾಗಿದ್ದು. ಸಧ್ಯಕ್ಕಂತೂ ಆ ಕನಸು ಈಡೇರಲು ಎಲ್ಲಿ ಸಾಧ್ಯ! ಮುಂದೆ ಎಲ್ಲ ಅನುಕೂಲವಾದರೆ ಅಪ್ಪನ ಕನಸಿನ ಬಗ್ಗೆ ಆಲೋಚಿಸೋಣ ಎಂದುಕೊಂಡಿದ್ದಳು. ಆದರೆ ವಿಸ್ಮಯ ತಮಗೆ ಯಾವುದೇ ರೀತಿಯ ಸಂಬಂಧಿಯಲ್ಲ, ಸ್ನೇಹಿತನಲ್ಲ, ಬರೀ ತಮ್ಮ ಜಾಗ ಕೊಂಡ ಒಬ್ಬ ಗಿರಾಕಿಯಷ್ಟೇ. ಅಷ್ಟಕ್ಕೆ ತನ್ನ ತಂದೆಯ ಆಸೆಯನ್ನು ನೆರವೇರಿಸಲು ಶಾಲೆ ಕಟ್ಟುತ್ತಿದ್ದಾನೆಯೇ? ಇಷ್ಟೊಂದು ಒಳ್ಳೆಯ ಮನಸ್ಸಿದೆಯೇ ಅವನಿಗೆ? ತಾನು ಅಪಾರ್ಥ ಮಾಡಿಕೊಂಡಿದ್ದನೇ? ದುಡಿಯಲು ಬಂದು ಹಣಕ್ಕಷ್ಟೇ ಪ್ರಾಮುಖ್ಯತೆ ಕೊಡುತ್ತಾನೆ ಎಂದುಕೊಂಡಿದ್ದು ತಪ್ಪೇ. ಸೇವೆಯ ಮನಸ್ಸು ಇದೆಯಲ್ಲ ಅವನಿಗೆ. ಹೇಗೊ… ಅಪ್ಪನ ಕನಸು ನನಸಾಗುತ್ತದೆ. ಇಲ್ಲಿರುವ ಮಕ್ಕಳಿಗೂ ಅನುಕೂಲವಾಗುತ್ತದೆ. ಒಂದು ಒಳ್ಳೆಯ ಕೆಲಸ ಆಗುತ್ತಿದೆಯಲ್ಲ ಅಷ್ಟೇ ಸಾಕು – ಅಂತ ಅಂದುಕೊಳ್ಳುತ್ತ ಅಭಿಮಾನದಿಂದ ವಿಸ್ಮಯನ ಕಡೆ ನೋಡಿದಳು.

ಪೂಜೆ ಸಾಂಗವಾಗಿ ನೆರವೇರಿತು. ಇಳಾಳೇ ಮುಂದೆ ನಿಂತು ಎಲ್ಲರಿಗೂ ದೇವರ ಪ್ರಸಾದ ನೀಡಿದಳು. ಅಷ್ಟೊತ್ತಿಗೆ ವಿನಾಯಕ ತಿಂಡಿ ಸಿದ್ದಪಡಿಸಿಕೊಂಡು ಕ್ಯಾರಿಯರ್‌ಗಳಲ್ಲಿಟ್ಟುಕೊಂಡು ತನ್ನ ಕಾರಿನಲ್ಲಿ ಬಂದಿಳಿದ.

‘ಆರೆ, ಪೂಜೆ ಆಗಿಹೋಯಿತೇ, ಸ್ವಲ್ಪ ತಡ ಆಯ್ತು. ನಂಗೂ ಪ್ರಸಾದ ಕೊಟ್ಟುಬಿಡಮ್ಮ’ ಅಂತ ಇಳಾಳ ಬಳಿ ಬಂದು ದೇವರ ಪ್ರಸಾದ ಸ್ವೀಕರಿಸಿ ಕಣ್ಣಿಗೊತ್ತಿಕೊಂಡ. ಅಲ್ಲಿಗೆ ಬಂದಿದ್ದವರಿಗೆಲ್ಲ ಉಪ್ಪಿಟ್ಟು, ಕೇಸರಿಬಾತನ್ನು ಹಂಚಿದರು. ಆಳುಗಳೆಲ್ಲ ಚಪ್ಪರಿಸಿ ತಿಂದರು. ವಿಸ್ಮಯ ನಿಂತು ಬಲವಂತವಾಗಿ ಎರಡೆರಡು ಸಲ ಹಾಕಿಸಿ ತಿನ್ನಿಸಿದನು. ಇಳಾ, ನೀಲಾ, ಅಂಬುಜಮ್ಮನೂ ರುಚಿಯಾಗಿದೆ ಅಲ್ವಾ, ಅಂತ ಸ್ವಲ್ಪ ಹೆಚ್ಚಾಗಿಯೇ ತಿಂದರು. ವಿನಾಯಕ, ವಿಸ್ಮಯರ ಬಲವಂತವೂ ಸೇರಿ ತಿಂಡಿ ಜಾಸ್ತಿ ಆಯಿತು ಎನಿಸುತ್ತಿತ್ತು. ‘ಇನ್ನಾರು ತಿಂಗಳಲ್ಲಿ ಕಟ್ಟಡ ಪೂರ್ಣಗೊಳ್ಳುತ್ತದೆ. ಅಷ್ಟರೊಳಗೆ ಶಾಲೆ ಪ್ರಾರಂಭಿಸಬೇಕು. ಈ ಕಟ್ಟಡ ಆಗೋತನಕ ಇಲ್ಲಿ ಯಾವುದಾದರೂ ಕಟ್ಟಡದಲ್ಲಿ ಸ್ಕೂಲ್ ಶುರು ಮಾಡೋಣ ಅಂದುಕೊಂಡಿದ್ದೇನೆ. ಸರಕಾರದಿಂದ ಪರ್ಮಿಶನ್ ತಗೋಬೇಕು, ಒಳ್ಳೆ ಟೀಚರ್ ಬೇಕು. ನೀವೇ ಸ್ವಲ್ಪ ಆಸಕ್ತಿವಹಿಸಿ ಇಲ್ಲಿ ಯಾರಾದ್ರೂ ಎಸ್‌ಎಸ್‌ಎಲ್‌ಸಿನೋ, ಪಿಯುಸಿನೋ ಆಗಿರೋರು ಇದ್ದರೆ ಹೇಳಿ, ಒಳ್ಳೆ ಸಂಬಳ ಕೊಡೋಣ’ ಅಂತ ವಿಸ್ಮಯ ನೀಲಾಳ ಸಲಹೆ ಕೇಳಿದ.

ನಮ್ಮದೇ ಹಳೇ ಮನೆ ಇದೆ, ಭಾವನನ್ನು ಕೇಳ್ತೀನಿ, ಎಂದಳು.

‘ಭೈರಪ್ಪನ ಮಗಳು ಪಿಯುಸಿ ಮಾಡ್ಕೊಂಡಿದ್ದಾಳೆ, ಮನೆಯಲ್ಲಿದ್ದಾಳೆ. ಮದ್ವೆ ಆಗೋ ತನಕ ಕೆಲಸ ಮಾಡಬಹುದು. ಅವಳ್ನ ಕೇಳಿ ಹೇಳ್ತೀನಿ’ ನೀಲಾ ಭರವಸೆ ನೀಡಿದಳು. ‘ದೊಡ್ಡಪ್ಪ ಖಂಡಿತಾ ಒಪ್ತಾರೆ. ಅವರನ್ನ ಒಪ್ಪಿಸೋ ಭಾರ ನಂದು. ಬೇಗನೇ ಸ್ಕೂಲ್ ಶುರು ಮಾಡೋಣ. ಆ ಮಕ್ಕಳು ಮಳೆ ಬಿಸಿಲಲ್ಲಿ ನಡ್ಕೊಂಡು ಹಾನುಬಾಳಿನವರೆಗೂ ಹೋಗಬೇಕು ಪಾಪ. ಸುತ್ತಮುತ್ತ ಸುಮಾರು ಇಪ್ಪತ್ತು ಮಕ್ಕಳು ಹೋಗ್ತವೆ ಅವರಿಗೆಲ್ಲ ಅನುಕೂಲವಾಗುತ್ತೆ-ಇಳಾ ಅತ್ಯಂತ ಉತ್ಸಾಹ ತೋರಿದಳು.

ವಿನಾಯಕ ಬೇಗ ಲೈಸನ್ಸನ್ನು ತರಿಸಿಕೊಡುವುದಾಗಿ ಆಶ್ವಾಸನೆ ನೀಡಿದ. ಅಂತೂ ಈ ಊರಿನಲ್ಲಿ ಒಂದು ಶಾಲೆ ಪ್ರಾರಂಭವಾಗುವುದು ಎಲ್ಲರಿಗೂ ಸಂತೋಷ ತಂದಿತ್ತು. ಶಾಲೆಗೆ ಬರುವ ಮಕ್ಕಳು ಸಿಕ್ಕಿದ ಮೇಲೆ ಇನ್ನು ಶಾಲೆಯ ಪ್ರಾರಂಭೋತ್ಸವ ಸಧ್ಯಯದಲ್ಲಿಯೇ ಅಂತ ತೀರ್ಮಾನವಾಯ್ತು. ತಾವು ಉಪಯೋಗಿಸದೆ ಇದ್ದ ಹಳೆ ಮನೆಯನ್ನು ಶಾಲೆಗಾಗಿ ಕೊಡಲು ಸುಂದರೇಶ್ ಸಂತೋಷವಾಗಿಯೇ ಒಪ್ಪಿಕೊಂಡರು- ಭೈರಪ್ಪನ ಮಗಳು ಗಂಗಾ ಮಕ್ಕಳಿಗೆ ಪಾಠ ಮಾಡಲು ಕುಣಿಯುತ್ತ ಬಂದಳು. ಹಳೆ ಮನೆಯು ಯಾರೂ ವಾಸಿಸದೆ ಪಾಳು ಬಿದ್ದಿತ್ತು. ಈವತ್ತು ರಜೆ ಇದ್ದುದರಿಂದ ತೋಟದ ಆಳುಗಳು ಮನೆಯನ್ನು ಸ್ವಚ್ಛಗೊಳಿಸಿ, ಮನೆಯ ಸುತ್ತಮುತ್ತ ಕೂಡ ಸ್ವಚ್ಛಿಗೊಳಿಸಿ ಒಂದು ಹೊಸ ರೂಪ ನೀಡಿದರು. ಮರುದಿನ ಶುಕ್ರವಾರವಾದ್ದರಿಂದ ಶಾಲೆಯನ್ನು ಸಾಂಕೇತಿಕವಾಗಿ ಪ್ರಾರಂಭಿಸಲು ನಿರ್ಧರಿಸಿದರು. ಶಾಲೆಗೆ ಬೇಕಾದ ಕುರ್ಚಿ ಟೇಬಲ್ಲು ನೀಲಾ ತಮ್ಮ ಮನೆಯಿಂದಲೇ ನೀಡಿದಳು. ವಿನಾಯಕನ ಮನೆಯಲ್ಲಿ ಒಂದಿಷ್ಟು ಸುಣ್ಣ ಇದ್ದು ಅದನ್ನು ಆಳುಗಳಿಂದ ಮನೆಗೆ ಹೊಡೆಸಿದ್ದರಿಂದ ಹಳೆ ಮನೆ ಕಳೆಕಳೆಯಾಗಿ ಕಾಣುತ್ತಿತ್ತು. ಶಾಲೆಗೆ ‘ವಿದ್ಯಾನಿಕೇತನ’ ಎಂದು ಹೆಸರಿಡಲಾಯಿತು.

ಒಂದು ಸರಳ ಸಮಾರಂಭದಲ್ಲಿ ಸುಂದರೇಶರು ಶಾಲೆಯನ್ನು ಉದ್ಘಾಟಿಸಿಯೇ ಬಿಟ್ಟರು. ಮೊದಲ ದಿನವೇ ಎಂಟು ಮಕ್ಕಳು ನರ್ಸರಿಗೆ ಸೇರಿಕೊಂಡವು. ಒಂದು ಬೋರ್ಡು ಸಿದ್ದಪಡಿಸುವ ತನಕ ನೇತುಹಾಕುವ ಬೋರ್ಡು, ಮಕ್ಕಳಿಗೆ ಬರೆಯಲು ಸ್ಲೇಟ್, ಬಳಪ, ಪುಸ್ತಕ ಎಲ್ಲವನ್ನು ವಿಸ್ಮಯ ಕೊಂಡು ತಂದು ಶಾಲೆಗೆ ನೀಡಿದ. ಶಾಲೆಯ ಉಸ್ತುವಾರಿಯನ್ನು ನೀಲಾ ನೋಡಿಕೊಳ್ಳಬೇಕು ಎಂದು ಅಲ್ಲಿ ಎಲ್ಲರೂ ತೀರ್ಮಾನಿಸಿದಾಗ, ತನ್ನಿಂದ ಅದೆಲ್ಲ ಸಾಧ್ಯವೇ ಅಂತ ಹಿಂತೆಗೆದಳು. ಆದರೆ ಇಳಾಳ ಬಲವಂತ ಹಾಗೂ ವಿಸ್ಮಯನ ಒತ್ತಾಯಕ್ಕೆ ಅಳುಕುತ್ತಲೇ ಒಪ್ಪಿಕೊಂಡಳು.

ಅಮ್ಮ ಸದಾ ಅಪ್ಪನ ನೆನಪಿನಲ್ಲಿ ಕೊರಗುತ್ತ ಇರುವ ಬದಲು ಶಾಲೆಗೆ ಬಂದರೆ ಆ ಮಕ್ಕಳ ಒಟನಾಟದಲ್ಲಿ ಶಾಲೆಯ ಜವಾಬ್ಧಾರಿಯಲ್ಲಿ ಹೊಸ ವ್ಯಕ್ತಿಯಾಗಲು ಸಾಧ್ಯ ಎಂದು ತರ್ಕಿಸಿ ಇಳಾ ನೀಲಾಳನ್ನು ಒಪ್ಪಿಸಿದಳು. ನರ್ಸರಿ ಮಕ್ಕಳನ್ನು ನೀಲಾ ನೋಡಿಕೊಳ್ಳುವುದು, ಒಂದರಿಂದ ಮುಂದಿನ ತರಗತಿಯ ಮಕ್ಕಳನ್ನು ಗಂಗಾ ನೋಡಿಕೊಳ್ಳುವುದು ಅಂತ ಎಲ್ಲರೂ ತೀರ್ಮಾನಿಸಿದರು. ಶಾಲಾಭಿವೃದ್ಧಿ ಕಮಿಟಿಯಲ್ಲಿ ಸುಂದರೇಶ್, ವಿನ್ಸೆಂಟ್, ವಿನಾಯಕ ಹಾಗೂ ಮಕ್ಕಳ ಕೆಲವು ಪೋಷಕರನ್ನು ಸೇರಿಸಿಕೊಂಡರು. ಶಾಲೆ ಪ್ರಾರಂಭವಾದ ಮೇಲೆ ಅಲ್ಲಿನ ಪರಿಸ್ಥಿತಿಯೇ ಬದಲಾಗಿ ಹೋಗಿತ್ತು. ಮಕ್ಕಳ ಕಲರವದಿಂದ ಅಲ್ಲಿ ಹೊಸ ಚೈತನ್ಯವೊಂದು ಉದಯಿಸಿದಂತೆ ಕಾಣುತ್ತಿತ್ತು.

ಬೇಗನೇ ಶಾಲೆಗೆ ಲೈಸನ್ಸ್ ಕೂಡ ಸಿಕ್ಕಿದ್ದರಿಂದ ಸುತ್ತಮುತ್ತ ಶಾಲೆಗೆ ಹೋಗುತ್ತಿದ್ದ ಮಕ್ಕಳೆಲ್ಲ ಬಂದು ಸೇರಿದರು. ಶಾಲೆಯ ಒಟ್ಟು ಸಂಖ್ಯೆ ನಲವತ್ತಾಯಿತು. ಇನ್ನೊಬ್ಬ ಶಿಕ್ಷಕರ ಅವಶ್ಯಕತೆ ಮನಗಂಡು ಹತ್ತಿರದಲ್ಲಿಯೇ ಇರುವ ಯಾರಿಗಾದರೂ ಆಸಕ್ತಿ ಇದ್ದು ಬರುವಂತಾದರೆ ಒಳ್ಳೆಯ ಸಂಬಳ ನೀಡುವೆನೆಂದು ವಿಸ್ಮಯ ಆಶ್ವಾಸನೆ ನೀಡಿದ. ಆದರೆ ಸುತ್ತಮುತ್ತಲೆಲ್ಲೂ ಓದಿದವರು ಇರಲಿಲ್ಲ. ಓದಿದವರು ಈ ಊರುಗಳಲ್ಲಿಯೇ ಇರುತ್ತಿರಲಿಲ್ಲ. ಹೊರಗಿನಿಂದ ಇಲ್ಲಿ ಬಂದಿರಲು ಒಪ್ಪುವಂತಹವರು ಸಿಗುವುದು ಕಷ್ಟವಿತ್ತು.

ಈಗ ಹೊಸದೊಂದು ಚಿಂತೆ ಶುರುವಾಯಿತು. ಆದರೂ ಶಾಲೆಯ ಕೆಲಸವೇನೂ ನಿಂತಿರಲಿಲ್ಲ. ಇದೆಲ್ಲ ಆದದ್ದು ಕೇವಲ ಇಷ್ಟು ಕಡಿಮೆ ಅವಧಿಯಲ್ಲಿ! ಆಶ್ಚರ್ಯ ಅನಿಸಿದರೂ ನಿಖರವಾಗಿತ್ತು. ಅದೆಷ್ಟೋ ಮಕ್ಕಳ ಶಾಲೆಯ ಕನಸು ಅಲ್ಲಿ ಸಾಕಾರವಾಗಿತ್ತು. ತೋಟದ ಆಳುಗಳ ಮಕ್ಕಳಿಗೆ ಶಿಕ್ಷಣ ನೀಡುವ ಕಾಮಧೇನುವಾಗಿತ್ತು ಈ ಶಾಲೆ. ಮಧ್ಯಾಹ್ನ ಎಲ್ಲಾ ಶಾಲೆಗಳಲ್ಲೂ ಬಿಸಿಯೂಟದ ವ್ಯವಸ್ಥೆ ಇರುವುದರಿಂದ ನಮ್ಮ ಶಾಲೆಯಲ್ಲಿ ಆ ವ್ಯವಸ್ಥೆ ಮಾಡಬೇಕು ಎಂದು ವಿಸ್ಮಯ ಪ್ರಯತ್ನ ನಡೆಸಿದ. ಅದು ಅಷ್ಟು ಸುಲಭವಾಗಿರಲಿಲ್ಲ. ಸರ್ಕಾರದ ಶಾಲೆಗಳಾದರೆ ಸರ್ಕಾರವೇ ಎಲ್ಲವನ್ನೂ ಕೊಡುತ್ತಿತ್ತು. ಆದರೆ ಈ ಶಾಲೆ ಈಗಿನ್ನು ಪ್ರಾರಂಭವಾಗಿದೆ. ಸರ್ಕಾರದ ಅನುದಾನ ಸಿಗುವುದು ಕೆಲವು ವರ್ಷಗಳ ನಂತರವೇ. ಅಲ್ಲಿವರೆಗೂ ಪರ್ಯಾಯ ವ್ಯವಸ್ಥೆ ಮಾಡಲು ಪಣತೊಟ್ಟ. ತನ್ನ ರೆಸಾರ್ಟ್ ನಿರ್ಮಾಣದ ನಡುವೆಯೂ ಶಾಲೆಗಾಗಿ ತೋರುತ್ತಿರುವ ಕಾಳಜಿ ಎಲ್ಲರೂ ಅಚ್ಚರಿಪಡುವಂತಿತ್ತು.

ಮನೆ ಇರುವ ಜಾಗದಲ್ಲಿಯೇ ಶಾಲೆಯ ಎಲ್ಲಾ ವ್ಯವಸ್ಥೆಯನ್ನು ನೀಲಾ ಹಾಗೂ ಗಂಗಾ ಮಾಡಿಕೊಂಡಿದ್ದರು. ಮೊದಲಿಗೆ ಸಿಗುವ ಕೋಣೆಯನ್ನು ಆಫೀಸ್ ರೂಂ ಮಾಡಿಕೊಂಡಿದ್ದರು. ಹಾಲಿನಲ್ಲಿ ೧ ರಿಂದ ೭ನೇ ತರಗತಿಯ ಮಕ್ಕಳನ್ನು ಕೂರಿಸಲಾಗಿತ್ತು. ಒಳಭಾಗದ ಅಡುಗೆ ಕೋಣೆಗೆ ಸೇರಿದ್ದ ಊಟದ ಮನೆಯನ್ನು ನರ್ಸರಿ ಮಕ್ಕಳಿಗೆ ವ್ಯವಸ್ಥೆ ಮಾಡಲಾಗಿತ್ತು.

ಶಾಲೆಯ ಕಸಗುಡಿಸಿ ಪುಟ್ಟಮಕ್ಕಳನ್ನು ನೋಡಿಕೂಳ್ಳುವ ಸಲುವಾಗಿ ಒಂಟಿಯಾಗಿ ಕೂಲಿನಾಲಿ ಮಾಡಿಕೊಂಡು ಬದುಕು ಸಾಗಿಸುತ್ತಿದ್ದ ಕುಪ್ಪಮ್ಮನನ್ನು ಆಯಾಳಾಗಿ ನೇಮಿಸಿಕೊಳ್ಳಲಾಗಿತ್ತು. ಕುಪ್ಪಮ್ಮ ಈ ಕಡೆಯವಳಲ್ಲ. ತಮಿಳುನಾಡಿನವಳಾದ ಅವಳನ್ನು ಗಂಡ ಸ್ವಾಮಿ ಮದುವೆಯಾಗಿ ಕರೆತಂದಿದ್ದ. ಕನ್ನಡವೇ ಬಾರದ ಕುಪ್ಪಮ್ಮ ಕನ್ನಡ ಕಲಿತು ಇಲ್ಲಿಯವಳೇ ಆಗಿಬಿಟ್ಟಿದ್ದಳು. ಮಗ ಬೆಂಗಳೂರು ಸೇರಿ ಇತ್ತ ತಲೆಹಾಕಿರಲಿಲ್ಲ. ಸ್ವಾಮಿ ಸತ್ತು ಸ್ವರ್ಗ ಸೇರಿದ್ದ. ಇರುವ ಒಬ್ಬಳು ಈ ವಯಸ್ಸಿನಲ್ಲಿ ಕೂಲಿ ಮಾಡಿ ಕಷ್ಟಪಡುತ್ತಿದ್ದಳು. ಈ ಕೆಲಸ ಸಿಕ್ಕಿದ್ದು ಒಳಿತೇ ಆಗಿತ್ತು. ಬಿಸಿಲು ಮಳೆಯಲ್ಲಿ ಕಷ್ಟಪಡುವ ರಗಳೆಯೇ ಇಲ್ಲವೆಂದು ಸಂತೋಷವಾಗಿಯೇ ಆಯಾ ಕೆಲಸಕ್ಕೆ ಸೇರಿದ್ದಳು. ಮಕ್ಕಳನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಳು. ಶಾಲೆಗೆ ಬರೀ ಕೂಲಿಕಾರರ ಮಕ್ಕಳಷ್ಟೇ ಅಲ್ಲ, ಸಣ್ಣಪುಟ್ಟ ತೋಟದ ಮಾಲೀಕರ ಮಕ್ಕಳೂ ಕೂಡ ಸೇರಿದ್ದರು.

ಈ ಶಾಲೆ ಒಂದು ಒಳ್ಳೆಯ ಶಾಲೆ ಅಂತ ಹೆಸರಾದರೆ ಬೋರ್ಡಿಂಗ್ನಲ್ಲಿರುವ ಮಕ್ಕಳು ಕೂಡ ಬಂದು ಸೇರುವರೆಂಬ ಆಶಾಭಾವನೆ ವಿನ್ಮಯನದ್ದು. ಅವನ ಈ ಅಪಾರ ಆಸಕ್ತಿಯಿಂದಾಗಿಯೇ ಶಾಲೆಯು ಇಷ್ಟುಬೇಗ ನಲವತ್ತು ಮಕ್ಕಳ ಸಂಖ್ಯೆಯನ್ನು ಕಾಣುವಂತಾಗಿದ್ದು. ಹೊಸ ಕಟ್ಟಡವಾದ ಮೇಲೆ ತರಬೇತಿ ಹೊಂದಿದ ಶಿಕ್ಷಕರನ್ನು ನೇಮಿಸಿಕೊಂಡು, ಪಟ್ಟಣದ ಶಾಲೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯವನ್ನು ಶಾಲೆಗೆ ನೀಡಬೇಕು. ಶಾಲೆಯನ್ನು ಹುಡುಕಿಕೊಂಡು ಬಂದು ಮಕ್ಕಳನ್ನು ಅಡ್ಮಿಷನ್ ಮಾಡುವಂತಾಗಬೇಕು- ಅದಕ್ಕಾಗಿ ಎಷ್ಟು ಶ್ರಮವಾದರೂ, ಎಷ್ಟು ಹಣ ಖರ್ಚಾದರೂ ಮಾಡಲು ಸಿದ್ಧನಾದ. ಒಟ್ಟಿನಲ್ಲಿ ಮೋಹನನ ಕನಸು ಈಡೇರಲಿ ಎಂಬುದು ಒಂದು ಆಸೆಯಾದರೆ, ಬಿಸಿಲಿನಲ್ಲಿ ಮಳೆಯಲ್ಲಿ ನಡೆದು ಹೋಗುವ ಪುಟ್ಟ ಕಂದಮ್ಮಗಳನ್ನು ನೋಡಿ ಅವನ ಅಂತಃಕರಣ ಕರಗಿತು. ಸುತ್ತಮುತ್ತಲು ಎಲ್ಲಿಯೂ ಒಳ್ಳೆ ಶಾಲೆ ಇಲ್ಲ ಎಂಬುದನ್ನು ಮನಗಂಡು ಈ ಶಾಲೆ ತೆರೆಯಲು ಮನಸ್ಸು ಮಾಡಿದ್ದ. ಅದು ಒಳ್ಳೆ ರೀತಿಯಲ್ಲಿ ನಡೆಯುವ ಶುಭ ಸೂಚನೆ ತೋರಿಸಿತ್ತು.
*****