ರಾವಣಾಂತರಂಗ – ೫

ರಾವಣಾಂತರಂಗ – ೫

ತಪ್ಪು ನೆಪ್ಪುಗಳ ನಡುವೆ

“ಮಹಾರಾಜ ಮಹಾರಾಜ ರಾವಣೇಶ್ವರ” ಕರೆಗೆ ಕಿವಿಗೊಟ್ಟು ತಟ್ಟನೆ ತಿರುಗಿದೆ. ನೆನಪಿನ ತಂತುಗಳು ತುಂಡಾಗಿ ವಾಸ್ತವ ಜಗತ್ತಿಗೆ ಬಂದಾಗ ಸಖಿಯೊಬ್ಬಳು ಏನನ್ನೋ ಭಿನ್ನವಿಸುತ್ತಿದ್ದಾಳೆ. “ಏನು ವಿಷಯ”?

“ಮಹಾರಾಣಿ ಮಂಡೋದರಿಯವರು ತಮ್ಮೊಂದಿಗೆ ಮಾತಾಡಲು ಏಕಾಂತ ಕೋಣೆಯಲ್ಲಿ ಕಾಯುತ್ತಿದ್ದಾರೆ. ತಾವು ತಡಮಾಡದೆ… “ಸರಿ” ತಲೆಯಾಡಿಸಿ ತನ್ನ ಪರಿಚಿತ, ಪ್ರಿಯವಾದ ಸ್ಥಳಕ್ಕೆ ಒಳಹೋದೊಡನೆ ದೇವಿಯವರು ಎದ್ದು ಕಾಲಿಗೆ ನಮಸ್ಕರಿಸಿದರು. ನಿಂತೇ ಅವಳನ್ನು ಕಂಡು “ಕುಳಿತುಕೋ ದೇವಿ” ಮಾತಾಡಲು ಪದಗಳು ಸೃಷ್ಟಿಯಾಗುತ್ತಿಲ್ಲ. ಎಷ್ಟು ಹೊತ್ತು ಒದ್ದಾಟ, ಮಂಡೋದರಿಯೇ ಮೌನ ಮಾತನಾಡಬಾರದೇ! “ದೇವಿ ಸೌಖ್ಯವೇ”

“ರಾವಣೇಶ್ವರನ ರಾಜ್ಯದಲ್ಲಿ ಸೌಖ್ಯಕ್ಕೇನು ಕೊರತೆ ಪರಮೇಶ್ವರನ ದಯದಿಂದ ನಾನಿನ್ನು ಬದುಕಿದ್ದೇನೆ” ವ್ಯಂಗದ ಮಾತುಗಳು ಎದೆಯನ್ನು ಇರಿದವು.

“ಮಹಾರಾಣಿಯವರು ಭೋಜನ ಶಾಲೆಗೂ ಬರುತ್ತಿಲ್ಲ. ತಮ್ಮನ್ನು ಕಾಣುವುದು ದುರ್ಲಭವಾಗಿದೆ”.

“ಇಲ್ಲ; ಊಟೋಪಚಾರದಲ್ಲಿ ಆಸಕ್ತಿಯೇ ಇಲ್ಲ ಯಾವ ಸುಖಕ್ಕಾಗಿ ತಿನ್ನಬೇಕು? ಯಾತಕ್ಕಾಗಿ ಬದುಕಿರಬೇಕು? ಎನಿಸಿಬಿಟ್ಟಿದೆ.”

“ಮಹಾರಾಣಿ ಈ ವೈರಾಗ್ಯದ ಮಾತೇಕೆ? ನಮ್ಮಿಂದೇನಾದರೂ ತಪ್ಪು ನಡೆದು ಮನಸ್ಸಿಗೆ ನೋವಾಗಿದ್ದರೆ ಕ್ಷಮಿಸಿಬಿಡಿ”

“ಕ್ಷಮಿಸಲು ನಾನಾರು? ಮಹಾರಾಜ ನಿಮ್ಮ ಪರಿಚಾರಿಕೆಯಲ್ಲವೇ ನೀವು ಹೇಳಿದಂತೆ ಕೇಳಬೇಕು. ನೀವು ಮಾಡಿದ್ದೆಲ್ಲಾ ನೋಡಬೇಕು ವಿರುದ್ಧವಾಗಿ ನಡೆಯುವ ಧೈರ್ಯ ಯಾರಿಗುಂಟು ಹೇಳಿ?

“ದೇವಿ ನೀನು ನಿನ್ನನ್ನು ತಪ್ಪು ತಿಳಿದುಕೊಂಡಿದ್ದೀಯಾ ಯಾವ ಕೆಟ್ಟ ಉದ್ದೇಶದಿಂದ ನಾನು ಸೀತೆಯನ್ನು ಅಪಹರಿಸಲಿಲ್ಲ. ನೀನೇ ಯೋಚನೆ ಮಾಡಿ ನೋಡು ಶೂರ್ಪನಿಗಾದ ಅವಮಾನವನ್ನು ಯಾವ ಅಣ್ಣತಾನೆ ಸಹಿಸುತ್ತಾನೆ. ನನ್ನ ಸ್ನೇಹಿತ ವಾಲಿಯವಧೆಯ ಹಿಂದೆ ಯಾರ ಕೈವಾಡವಿದೆಯೆಂದು”

“ಯಾರ ತಪ್ಪಿಗೆ ಯಾರಿಗೆ ಶಿಕ್ಷೆ ಮಹಾರಾಜ! ಗಂಡ ಮಾಡಿದ ತಪ್ಪಿಗೆ ನಿರಪರಾಧಿಯಾದ ಹೆಣ್ಣಿಗೆ ಶಿಕ್ಷೆ ಯಾವ ಪುರುಷಾರ್ಥ ಹೆಣ್ಣನ್ನು ಮುಂದಿಟ್ಟುಕೊಂಡು ರಾಮಲಕ್ಷ್ಮಣರನ್ನು ಜಯಿಸುವ ನಿಮ್ಮ ತಂತ್ರ ನೀವೇ ಮೆಚ್ಚಿಸಿಕೊಳ್ಳಬೇಕು ಇದುವರೆವಿಗೂ ಮದುವೆಯಾಗದ ಹೆಣ್ಣುಮಕ್ಕಳ ಮೇಲಿತ್ತು ನಿಮ್ಮ ಕಣ್ಣು. ಈಗ ವಿವಾಹಿತ ಸ್ತ್ರೀಯರ ಮೇಲೆ ನಿಮ್ಮ ಪೌರುಷ ಪ್ರದರ್ಶನ”

“ಮಹಾರಾಣಿ ಇದುವರೆವಿಗೂ ನಾನು ಯಾರನ್ನು ಬಲತ್ಕಾರದಿಂದ ವಶ ಮಾಡಿಕೊಂಡಿಲ್ಲ ಅದು ನಿಮಗೂ ಗೊತ್ತು! ಪರಿಸ್ಥಿತಿ ಮನುಷ್ಯನನ್ನು ಬದಲಾಗುವಂತೆ ಮಾಡುತ್ತದೆ. ಶೂರ್ಪನಖಿಗಾದ ಅವಮಾನ ನಿಮಗಾಗಿದ್ದರೆ ನೀವೇನು ಮಾಡುತ್ತಿದ್ದೀರಿ? ಒಂದು ಹೆಣ್ಣಿಗೆ ಮುಖ್ಯವಾದುದು ಅವಳ ರೂಪ ರೂಪವೇ ವಿರೂಪವಾದರೆ ಆ ಹೆಣ್ಣಿಗೆಷ್ಟು ನೋವಾಗಿರಬೇಕು. ಅದರ ಪ್ರಜ್ಞೆಯಾದರೂ ಇದೆಯೇ ರಾಮಲಕ್ಷ್ಮಣರಿಗೆ? ಅವರಿಗೂ ಅಕ್ಕತಂಗಿಯರಿದ್ದಿದ್ದರೆ ಅವಳ ವೇದನೆ ಅರಿವಾಗುತ್ತಿತ್ತು ಮಹಾವೀರರಂತೆ ವೀರರು!”

“ಶೂರ್ಪನಖಿ ಎಂತಹವಳೆಂದು ಎಲ್ಲರಿಗೂ ಗೊತ್ತು ರಾಮಲಕ್ಷ್ಮಣರು ಮದುವೆಯಾದವರೆಂದು ಗೊತ್ತಿದ್ದರೂ ಮದುವೆ ಮಾಡಿಕೊಳ್ಳಿರೆಂದು ಬಲವಂತ ಮಾಡಿದ್ದಾಳೆ. ಸೀತೆಯನ್ನು ಕೊಲ್ಲಲು ಹೋದಾಗ ಅವರೇನು ಮಾಡಬೇಕಿತ್ತು. ಹೆಂಡತಿಯನ್ನು ರಕ್ಷಿಸುವುದು ಗಂಡನ ಧರ್ಮವಲ್ಲವೇ. ಅವರಾಗಿದ್ದಕ್ಕೆ ಸಾಯಿಸದೆ ಮೂಗು ಮುರಿದು ಕಳಿಸಿದ್ದಾರೆ. ಒಳ್ಳೆಯ ಕೆಲಸ ಮಾಡಿದ್ದಾರೆ. ನೀವೇ ಅವರ ಸ್ಥಾನದಲ್ಲಿದ್ದರೂ ಸುಮ್ಮನೆ ಬಿಡುತ್ತಿರಲಿಲ್ಲ. ತಂಗಿಯೆಂದು ವಹಿಸಿಕೊಂಡು ಮಾತಾಡಬೇಡಿ” “ಎಂತಹ ಒಳ್ಳೆಯ ಕೆಲಸ ನನ್ನ ಮಿತ್ರ ವಾಲಿಯನ್ನು ಮರದ ಮರೆಯಲ್ಲಿ ನಿಂತು ಕೊಂದು ಹಾಕಿದ್ದು ಒಳ್ಳೆಯ ಕೆಲಸವೇ! ಧೀರರಾದವರು ಮಾಡುವ ಉದಾತ್ತಕಾರ್ಯವೇ”

“ನಿಮ್ಮ ಮೂಗಿನ ನೇರಕ್ಕೆ ಮಾತನಾಡಬೇಡಿ” ವಾಲಿಯವಧೆಗಿಂತಲೂ ಮೊದಲೇ ಸೀತಾಪಹರಣ ಮಾಡಿ ತಪ್ಪನ್ನು ಸಮರ್ಥಿಸಿಕೊಳ್ಳಬೇಡಿ. ವಾಲಿ ತಪ್ಪು ಮಾಡದೆ ಶಿಕ್ಷಿಸುವಂತಹ ಕಠೋರ ಮನಸ್ಸಿನವರಲ್ಲ ಶ್ರೀರಾಮಚಂದ್ರ! ನೀವೇ ಅವರನ್ನು ತಪ್ಪಾಗಿ ಅರ್ಥೈಸಿದ್ದೀರಿ! ಶೂರ್ಪನಖಿ ಎಲ್ಲಾ ಹೇಳಿದಳು ನನಗೆ. ಸೀತೆಯ ಚೆಲುವಿಗೆ ಮಾರುಹೋಗಿ ಅಣ್ಣ ಅವಳನ್ನು ಮದುವೆ ಯಾಗಲು ತಂದಿಟ್ಟಿದ್ದಾನೆಂದು ಊರೆಲ್ಲಾ ಸಾರಿಕೊಂಡು ಬರುತ್ತಿದ್ದಾಳೆ. ಈ ಮಾತು ಸುಳ್ಳೇನು?”

“ದೇವಿ ಅವಳನ್ನು ಮದುವೆಯಾಗುವ ಉದ್ದೇಶವಿದ್ದಿದ್ದರೆ ಕರೆತಂದ ದಿನವೇ ಬಲವಂತದಿಂದ ಮದುವೆಯಾಗುತ್ತಿದ್ದೆ. ನನಗೇನು ಸೀತೆಯ ಮೇಲೆ ವ್ಯಾಮೋಹವಿಲ್ಲ. ಕೋಪ ರಾಮಲಕ್ಷ್ಮಣರ ಮೇಲೆ. ಹೆಣ್ಣು ತಾನಾಗಿಯೇ ಒಲಿದುಬರಬೇಕು? ಒಪ್ಪಿ ಮದುವೆಯಾಗಬೇಕು”

“ಮಂಡೋದರಿ ಸೀತೆ ರಂತೆ ಆಸ್ತಿ ಅಧಿಕಾರ ಐಶ್ವರ್ಯಕ್ಕೆ ಮರುಳಾಗುವ ಹೆಣ್ಣಲ್ಲ. ಇದುವರೆವಿಗೂ ಅವಳು ನನ್ನನ್ನು ಕಣ್ಣೆತ್ತಿಯೂ ನೋಡಿಲ್ಲ. ಮುಖಕೊಟ್ಟು ನೇರವಾಗಿ ಮಾತಾಡಿಲ್ಲ ತನ್ನ ಪ್ರಾಣವನ್ನಾದರೂ ಕಳೆದುಕೊಳ್ಳುತ್ತಾಳೆಯೇ ವಿನಹ ನನ್ನನ್ನು ಮದುವೆಯಾಗಲು ಒಪ್ಪುತ್ತಾಳೆಂದು ಹೇಗೆ ನಂಬಿದಿರಿ?

“ಗೊತ್ತು ರಾವಣೇಶ್ವರ, ಮಾನವಂತ ಹೆಣ್ಣು, ಮಾನ ಹೋಗುವ ಮುನ್ನ ಪ್ರಾಣಕಳೆದುಕೊಳ್ಳುತ್ತಾಳೆ. ಇಷ್ಟೆಲ್ಲಾ ಗೊತ್ತಿದ್ದು ಅವಳನ್ನು ತಂದಿಟ್ಟುಕೊಂಡಿರುವುದರಿಂದ ನಿಮಗ್ಯಾವ ಲಾಭ ಹೇಳಿ?”

ಲಾಭವಿಲ್ಲದೆ ಯಾವ ಕೆಲಸವನ್ನು ಮಾಡುವುದಿಲ್ಲ ಈ ದಶಾನನ, ರಾಮಲಕ್ಷ್ಮಣರೊಡನೆ ಯುದ್ಧ ಮಾಡಬೇಕು. ಸೋಲಿಸಿ ಸೆರೆಯಲ್ಲಿ ಬಂಧಿಸಿಡಬೇಕು, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು ಶರಣಾಗತ ರಾಗಬೇಕು ಅದೇ ನನ್ನ ಉದ್ದೇಶ! ಅದೇ ನನ್ನ ಗುರಿ!”

ಚೆನ್ನಾಗಿದೆ! ಬಹಳ ಚೆನ್ನಾಗಿದೆ ಹೆಂಗಸರನ್ನು ಮುಂದಿಟ್ಟುಕೊಂಡು ಹೋರಾಡಲು ಬಯಸುವ ನಿಮ್ಮ ಪರಾಕ್ರಮಕ್ಕೆ ಧಿಕ್ಕಾರ ! ನಿಮ್ಮ ಗೌರವ ಘನತೆಗೆ ತಕ್ಕ ಕೆಲಸವನ್ನೇ ಮಾಡುತ್ತಿರುವಿರಿ, ಅದ್ಭುತ! ಕೇಳಿ ನಾನು ಆನಂದದಿಂದ ಕುಣಿಯಬೇಕು. ನಿಮ್ಮನ್ನು ಹೆತ್ತಿದ್ದಕ್ಕೆ ನಿಮ್ಮ ತಾಯಿಹೊಟ್ಟೆ ತುಂಬಾ ಹಾಲು ಕುಡಿಯಬೇಕು. ತಮ್ಮಂದಿರು ನಿಮ್ಮ ದಾರಿಯನ್ನೇ ಅನುಸರಿಸಬೇಕು”

“ಮಹಾರಾಣಿ ನೀವು ನನ್ನ ಆತ್ಮಾಭಿಮಾನವನ್ನು ಕೆಣಕುತ್ತಿರುವಿರಿ” “ಎಲ್ಲಿದೆ ಮಾನ! ಅಭಿಮಾನ! ನೀವು ನಿಜವಾಗಿಯೂ ಗಂಡೆದೆಯವರಾಗಿದ್ದು ವೀರಾಧಿವೀರರಾಗಿದ್ದರೆ ರಣರಂಗದಲ್ಲಿ ಅವರನ್ನು ಎದುರಿಸಿ ಯುದ್ಧ ಮಾಡಬೇಕಿತ್ತು. ಹೋರಾಡಿ ಗೆಲ್ಲಬೇಕಿತ್ತು. ಒಂದು ಪಕ್ಷ ಸೋತಿದ್ದರೂ ಅವಮಾನವಾಗುತ್ತಿರಲಿಲ್ಲ. ಆಗ ನನ್ನ ಗಂಡ ಕೆಚ್ಚೆದೆಯ ಕಲಿಯೆಂದು ಹೆಮ್ಮೆಯಿಂದ ಬೀಗುತ್ತಿದ್ದೆ. “ಯಾರು ಇಲ್ಲದಾಗ ಹೋಗಿ ಕುತಂತ್ರದಿಂದ ಅಬಲೆಯನ್ನು ಕದ್ದು ತಂದಿರಲ್ಲ! ಹಾಡಿ ಹೊಗಳಬೇಕು ನಿಮ್ಮ ಶೌರ್ಯ ಪರಾಕ್ರಮಗಳನ್ನು! ಧೈರ್ಯ ಸಾಹಸಗಳನ್ನು!”

“ಕಡಲು ದಾಟಿ ಸೈನ್ಯ ಸೇರಿಸಿ ಯುದ್ಧಮಾಡುವುದು ಸುಲಭದ ಮಾತಲ್ಲ. ಸೀತೆಯ ರಕ್ಷಣೆಗೆ ಅವರು ಹೇಗಾದರೂ ಲಂಕೆಗೆ ಬಂದೇ ಬರುತ್ತಾರೆ. ಕಪಿಗಳನ್ನು ಕಟ್ಟಿಕೊಂಡು ಅದು ಹೇಗೆ ರಾವಣಾಸುರನನ್ನು ಜಯಿಸುತ್ತಾರೆ ನೋಡೋಣ. ನನ್ನ ಕೈಗೆ ಸಿಕ್ಕ ಮೇಲೆ ಯುದ್ಧವೋ ಸಂಧಿಯೋ ಆಗ ನೋಡಿದರಾಯ್ತು”.

“ನಿಮ್ಮ ಹಠ ಒಳ್ಳೆಯದಲ್ಲ, ವಿನಾಶಕಾಲೇ ವಿಪರೀತಬುದ್ಧಿ” ಎನ್ನುತ್ತಾರೆ. ನಿಮ್ಮ ನಿರ್ಧಾರದಿಂದ ಯಾರಿಗೂ ಒಳ್ಳೆಯದಾಗುವುದಿಲ್ಲ. ವಿನಾಕಾರಣ ರಕ್ತಪಾತ! ಅಮಾಯಕ ಜನ, ಬಂಧು ಬಳಗದವರ ನಾಶ, ಮುಂದೇನಾಗುವುದೋ ಹೇಳುವವರಾರು”. “ಏನೂ ಆಗುವುದಿಲ್ಲ. ನಾನೇನೂ ಹೊಸದಾಗಿ ಯುದ್ಧ ಮಾಡುತ್ತಿಲ್ಲ ಎಂತೆಂತಹ ಕಷ್ಟಗಳಿಂದ ಪಾರಾಗಿ ಬಂದಿದ್ದೇನೆ. ವೈರಿಗಳೆಲ್ಲ ಮಿತ್ರರಾಗಿದ್ದಾರೆ. ಯುದ್ಧವೆಂದರೆ ಅದೇಕೆ ಅಷ್ಟೊಂದು ಭಯಪಡುತ್ತೀಯಾ” “ಭಯಪಡಲು ಕಾರಣಗಳುಂಟು. ನನಗೇಕೋ ಅಶುಭ ಸೂಚನೆಗಳೇ ಕಾಣುತ್ತಿವೆ. ಮುಂದೆ ಭಯಂಕರ ವಿಪತ್ತು ಕಾದಿದೆಯೆಂದು ಮನಸ್ಸು ಹೇಳುತ್ತಿದೆ. ಕೆಟ್ಟಕಾಲ ಬಂದಾಗ ದೈವವೂ ಕಣ್ಣುಮುಚ್ಚಿಕೊಳ್ಳುತ್ತದೆ. ನಿಮ್ಮ ಒಳ್ಳೆಯ ದಿನಗಳಲ್ಲಿ ಶುಭ ಫಲಗಳನ್ನು ಪಡೆದಿರಿ. ಆದರೀಗ ನೀವು ದೈವವೂ ಕ್ಷಮಿಸಲಾರದಂತಹ ತಪ್ಪು ಮಾಡಿದ್ದೀರಾ, ಆ ತಪ್ಪಿಗೆ ಎಂತಹ ಶಿಕ್ಷೆ ಕಾದಿದೆಯೋ; ನೀವೆಂತಹ ಅಪಾಯಕ್ಕೆ ಅನಾಹುತಕ್ಕೆ ಸಿಕ್ಕಿ ಬೀಳುವಿರಿ. ನಿಮ್ಮನ್ನು ನಂಬಿದವರ ಗತಿಯೇನಾಗುವುದೋ ಎಂಬ ಭಯ! ಆತಂಕ! ಸ್ವಾಮಿ. ನನ್ನ ಮಾತು ಕೇಳಿ ಇಲ್ಲಿಯವರೆಗೂ ನಾನು ಏನನ್ನೂ ಕೇಳಿಲ್ಲ. ಕೈಮುಗಿದು ಬೇಡಿಕೊಳ್ಳುತ್ತೇನೆ. ಸೀತೆಯನ್ನು ಗೌರವ ಪೂರ್ವಕವಾಗಿ ಶ್ರೀ ರಾಮಚಂದ್ರನಿಗೆ ಒಪ್ಪಿಸಿಬಿಡಿ ಸ್ನೇಹಿತರನ್ನಾಗಿ ಮಾಡಿಕೊಳ್ಳಿ. ಇದರಿಂದ ಎಲ್ಲರಿಗೂ ಕ್ಷೇಮ ನನಗೂ ನೆಮ್ಮದಿ”.

“ಮಂಡೋದರಿ ವಿನಾಕಾರಣ ತಲೆಕೆಡಿಸಿಕೊಳ್ಳುತ್ತೀದ್ದೀಯಾ, ನನಗೇನು ನನ್ನ ಮಕ್ಕಳ, ತಮ್ಮಂದಿರ ಪ್ರಜೆಗಳ ಮೇಲೆ ಪ್ರೀತಿಯಿಲ್ಲವೆಂದು ತಿಳಿದಿರುವೆಯಾ ಲಂಕೇಶ್ವರನಾದ ನಾನು ಅಷ್ಟು ಸುಲಭವಾಗಿ ಲಂಕೆಯನ್ನು ಹಾಳು ಮಾಡಿಕೊಳ್ಳುತ್ತೇನೆಯೇ ಏನೂ ಆಗುವುದಿಲ್ಲ. ಸೀತೆಯನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಎಷ್ಟೋ ದಿನಗಳ ಮೇಲೆ ರಣರಂಗದಲ್ಲಿ ಹೋರಾಡುವ ಶತ್ರುಗಳನ್ನು ಸದೆಬಡಿಯುವ, ಸುಸಮಯ ಹತ್ತಿರವಾಗುತ್ತಿದೆ. ಅಂತಹ ಸಂದರ್ಭವನ್ನು ಕಳೆದುಕೊಳ್ಳುವಷ್ಟು ಮೂರ್ಖನಾನಲ್ಲ”

“ನಿಮಗೆ ಯುದ್ಧದ ಹುಚ್ಚು! ಸಾಹಸ ಪ್ರದರ್ಶನದ ಹುಚ್ಚು! ನಿಮ್ಮ ಹುಚ್ಚಿನಿಂದ ಏನೆಲ್ಲಾ ಅನಾಹುತಗಳಾಗುತ್ತವೆಂದು ನಿಮಗೇನು ಗೊತ್ತು; ಹಿಂದಿನ ಘಟನೆಗಳನ್ನೇ ನೆನಪಿಗೆ ತಂದುಕೊಳ್ಳಿ. ನೀವು ಸೋತು ಬಂಧಿಯಾದಾಗೆಲ್ಲಾ ಯಾರಾದರೊಬ್ಬರು ಬಿಡಿಸುವುದು, ಇಲ್ಲಾ ಕಾಪಾಡುವುದು; ನಂತರ ಮಾಡಿದ್ದಕ್ಕೆ ಪಶ್ಚಾತ್ತಾಪ ಪಡುವುದು, ಅವಿವೇಕದಿಂದ ಮಾಡುವ ಕೆಲಸಕ್ಕೆ ಬೇರೊಬ್ಬರು ತಲೆಕೊಡಬೇಕು. ಹೀಗೆ ಮಾಡುತ್ತಾ ಹೋದರೆ ನಿಮ್ಮ ಬಗ್ಗೆ, ನಿಮ್ಮ ವರ್ತನೆಯ ಬಗ್ಗೆ ಸಹೋದರರು, ಮಕ್ಕಳು, ಪ್ರಜೆಗಳು, ನಿಮ್ಮ ಹಿಂದೆ ಕೇವಲವಾಗಿ ಮಾತನಾಡುತ್ತಾರೆ. ಅಸಮಾಧಾನ ವ್ಯಕ್ತಪಡಿಸುತ್ತಾರೆ. ಇದು ನಿಮಗೆ ಶೋಭಾಯಮಾನವಲ್ಲ”.

“ಯಾರು ನನ್ನ ಬಗ್ಗೆ ಹೀನಾಯವಾಗಿ ಮಾತನಾಡಿದವರು ನನ್ನ ಮುಂದೆ ತಂದು ನಿಲ್ಲಿಸು, ಅವರ ನಾಲಗೆಯನ್ನು ಕತ್ತರಿಸುತ್ತೇನೆ”.

“ಹೇಳುತ್ತಾ ಹೋದರೆ ಬೆಳಕು ಹರಿಯುತ್ತದೆ. ನಿಮಗೆ ಬುದ್ಧಿಹೇಳಲು ಆ ಬ್ರಹ್ಮದೇವರೇ ಬರಬೇಕೆಂದು ತೋರುತ್ತದೆ. ಬ್ರಹ್ಮದೇವರಲ್ಲಿ ಏನೆಂದು ವರ ಕೇಳಿದಿರಿ? ಸಾವಿಲ್ಲವೆಂದೇ? ಚಿರಂಜೀವಿಯೆಂದೇ?

ನೆನಪಾಗುತ್ತಿಲ್ಲ ಏನಾಯಿತು ನನ್ನ ಬುದ್ಧಿಗೆ ಮಂಕು ಕವಿಯಿತೇ! ಇಲ್ಲ ಮಂಡೋದರಿಯ ವಾಗ್ಬಾಣಕ್ಕೆ ನಾಲಿಗೆ, ಮನಸ್ಸು ಎರಡೂ ಮರಗಟ್ಟಿತೇ. ಯೌವ್ವನದ ಪ್ರಾರಂಭದ ದಿನಗಳವು; ಹದಿನೆಂಟು, ಇಪ್ಪತ್ತು ವರ್ಷ ವಯಸ್ಸಿರಬಹುದು, ತಂದೆಯವರು ಸಕಲ ವಿದ್ಯೆಗಳನ್ನು ಹೇಳಿಕೊಟ್ಟು ಸಕಲ ವೇದ ಪಾರಂಗತನಾಗಿಸಿದರು. ಧರ್ಮೋಪದೇಶವನ್ನು ಮಾಡಿದರು ತಪಸ್ಸಿನಿಂದಾಗುವ ಪ್ರಯೋಜನಗಳನ್ನು ತಿಳಿಸಿ, ತಪಸ್ಸಿಗಳಾದ, ಮಹಾತ್ಮರ ವೃತ್ತಾಂತವನ್ನು ತಿಳಿಸಿದರು. ಬ್ರಹ್ಮದೇವನನ್ನು ಕುರಿತು ಘೋರವಾದ ತಪಸ್ಸನ್ನು ಆಚರಿಸಬೇಕೆಂದು ಹೇಳಿದರು. ನಾನೂ ಕಠಿಣಮನಸ್ಸಿನಿಂದ ನಿಷ್ಠೆಯಿಂದ ಏಕಾಗ್ರತೆಯಿಂದ ಬೇಸಿಗೆಯಲ್ಲಿ ಅಗ್ನಿಯನಡುವೆ, ಮಳೆಗಾಲದಲ್ಲಿ ನೀರಿನಲ್ಲಿ, ಚಳಿಗಾಲದಲ್ಲಿ ಒದ್ದೆಬಟ್ಟೆಯನ್ನಿಟ್ಟು ತರಗೆಲೆಗಳನ್ನು ತಿಂದು ತಪಸ್ಸು ಮಾಡಿದೆನು. ನೂರುವರ್ಷಗಳವರೆಗೆ ತಪಸ್ಸು ಮಾಡಲು ಬ್ರಹ್ಮನು ಪ್ರತ್ಯಕ್ಷನಾಗಿ “ವತ್ಸಾ, ನಿನಗೇನು ವರಬೇಕು? ಬೇಡು “ಸ್ವಾಮಿ ಬ್ರಹ್ಮದೇವ ನಿನಗೆ ಮೆಚ್ಚಿಗೆಯಾಗಿದ್ದರೆ ನನಗೆ ಮರಣವೇ ಬಾರದಂತೆ ವರವನ್ನು ಕೊಡು” ಎಂದು ಕೇಳಿದನು. “ಮಗುವೇ! ದೇವತೆಗಳಲ್ಲಿ ಸಹ ಮರಣವಿಲ್ಲದವರು ಯಾರೂ ಇಲ್ಲ. ನನಗೂ, ಶ್ರೀಮನ್ನಾರಾಯಣನಿಗೂ ಸಹ ಮರಣವುಂಟು; ಹುಟ್ಟು ಸಾವು ಸೃಷ್ಠಿಯ ಸಹಜಕ್ರಿಯೆ ಸಾವಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಇದನ್ನು ಬಿಟ್ಟು ಬೇರೆ ವರವನ್ನು ಬೇಡು” ಎಂದನು. ಆಗ ನಾನು ನರರು, ರಾಕ್ಷಸರು, ಉರಗರು, ನನ್ನ ಮಟ್ಟಿಗೆ ಅವರಿಂದ ನನಗ್ಯಾವ ತೊಂದರೆಯಿಲ್ಲ. ದೇವತೆಗಳಿಂದ, ದೇವರುಗಳಿಂದ ನನಗೆ ಸಾವು ಬಾರದಂತೆ ವರವನ್ನು ಕೊಡು” “ತಥಾಸ್ತು” ಎಂದೇಳಿ ಅಂತರ್ಧಾನನಾದನು.

“ಹೌದು ಈಗ ನೆನಪಿಗೆ ಬಂತು ನನಗೆ ಯಾರಿಂದಲೂ ಸಾವಿಲ್ಲ ಬ್ರಹ್ಮದೇವನ ವರ ಸುಳ್ಳಾಗುವುದಿಲ್ಲ”

“ಸಾವಿಲ್ಲವೆಂದು ಯಾವ ದೇವರೂ ಯಾರಿಗೂ ವರ ಕೊಟ್ಟಿಲ್ಲ ಯಾರಿಂದಲಾದರೂ ಯಾವ ರೂಪದಲ್ಲಾದರೂ ಸಾವು ಬಂದೇ ಬರುತ್ತದೆ”.

“ಬರಲಿಬಿಡು ಸಾವಿಗೆ ಹೆದರಿ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ಪರಮೇಶ್ವರನು ಪ್ರತ್ಯಕ್ಷವಾಗಿ ಹೇಳಿದರೂ ನನಗೆ ಸರಿ ಕಂಡ ದಾರಿಯಲ್ಲಿಯೇ ನಾನು ನಡೆಯುವುದು”

“ಪರಮೇಶ್ವರನಿಗೆ ಪ್ರಿಯವಾದ ಕೆಲಸ ಮಾಡಿದರೆ ತಾನೇ ಅವರ ಅನುಗ್ರಹ ದೊರಕುವುದು. ಹೇಳಿಕೊಳ್ಳಲು ದೊಡ್ಡ ಶಿವಭಕ್ತರು ನೀವು ಶಿವನನ್ನು ಮೆಚ್ಚಿಸಿ ಚಂದ್ರಹಾಸವನ್ನು ಪಡೆದವರು “ವತ್ಸಾ ಈ ಖಡ್ಗವನ್ನು ಪಾಪಿಗಳ ಮೇಲೆ, ದುಷ್ಟರ ಮೇಲೆ ಮಾತ್ರ ಪ್ರಯೋಗಿಸತಕ್ಕದ್ದು, ನಿರಪರಾಧಿಗಳ ಅಮಾಯಕರ ಮೆಲೆ ಖಡ್ಗ ಎತ್ತಿದರೆ ನಿನಗೇ ಮುಳುವಾಗುತ್ತದೆ” ಈಶ್ವರನ ವಾಣಿ ಮರೆತುಹೋಯಿತೇ ? ದೇವರ ಭಯವೇ ಜ್ಞಾನದ ಮೂಲವೆಂದು ತಿಳಿದವರು ಹೇಳುತ್ತಾರೆ. ಪರಮಾತ್ಮನಿಗೆ ಹೆದರಿಯಾದರೂ ನೀವು ನೀಚ ಕೆಲಸಗಳನ್ನು ಬಿಟ್ಟು ಸನ್ಮಾರ್ಗದಲ್ಲಿ ನಡೆಯಬೇಕು.”

“ಮಂಡೋದರಿ ಈಗೇನಾಗಿ ಹೋಯಿತೆಂದು ಇಷ್ಟೊಂದು ಉಪದೇಶ ಮಾಡುತ್ತಿರುವೆ. ತಲೆಯ ಮೇಲೆ ಪರ್ವತವೇ ಬಿದ್ದಂತೆ”

“ಬೇರೆಯವರು ಉಪದೇಶ ಕೊಡಬಾರದೆಂದೇ ನಾನೀ ಮಾತು ಹೇಳುತ್ತಿದ್ದೇನೆ. ಯಾವ ಹೆಂಡತಿಗಾಗಲಿ ಗಂಡನನ್ನು ಇನ್ನೊಬ್ಬರು ದೂಶಿಸುವುದನ್ನು ಸಹಿಸಲಾರಳು, ಮದುವೆಯಾದ ಮೇಲೆ ಹೆಂಡತಿಗೆ ಗಂಡನೇ ಸರ್ವಸ್ವ! ಗಂಡ ಒಳ್ಳೆಯ ದಾರಿಯಲ್ಲಿ ನಡೆಯಲೆಂದು ಅವನ ಮೇಲೆ ಯಾವ ಕಳಂಕವೂ ಬರದಿರಲೆಂದು ಹಗಲಿರುಳು ಪ್ರಾರ್ಥಿಸುತ್ತಿರುತ್ತಾಳೆ. ನಾನೀಗ ನನ್ನ ಎಲ್ಲಾ ಸುಖ ಸಂತೋಷಗಳನ್ನು ಬದಿಗಿಟ್ಟು ಮೂರೊತ್ತು ಮುಕ್ಕಣ್ಣನನ್ನು ಸ್ಮರಿಸುತ್ತಿದ್ದೇನೆ. ನಿಮಗೆ ಕೆಡುಕಾಗದಿರಲೆಂದು ನಮ್ಮ ಸುವರ್ಣ ನಗರಿ ಲಂಕೆ ಶಾಶ್ವತವಾಗಿ ಉಳಿದು ನಮ್ಮ ಮಕ್ಕಳು, ಮೊಮ್ಮಕ್ಕಳು ಸುಖ ಸಂತೋಷದಿಂದ ಬಾಳಲೆಂದು ಅನವರತ ಬೇಡುತ್ತಿದ್ದೇನೆ. ನನ್ನ ಮನಸ್ಸಿನ ವೇದನೆ ನಿಮಗರಿವಾದರೆ ಅಷ್ಟೆ ಸಾಕು”

“ಮಹಾರಾಜ, ನಿಮ್ಮ ತಾಯಿ (ಕೈಕಸೆ) ನಿಮ್ಮ ಮೇಲೆ ಅಪಾರ ಭರವಸೆಯಿಟ್ಟು ಜಗದೇಶವೀರರಾದ ಮಕ್ಕಳನ್ನು ಪಡೆದನೆಂದು ನೆಮ್ಮದಿ ಯಿಂದಿದ್ದಾರೆ. ಕೊನೆಗಾಲದಲ್ಲಿ ನನ್ನ ಮಗ ನೀಚಕೆಲಸ ಮಾಡಿ ನನ್ನ ವಂಶಕ್ಕೆ ಕಳಂಕ ತಂದನೆಂದು ಕೊರಗುವ ಹಾಗೆ ಮಾಡಬೇಡಿ.” “ನನಗೆ ನನ್ನ ಹೆತ್ತ ತಾಯಿಯೇ ಸರ್ವಸ್ವ, ನನ್ನ ಎದೆಯಲ್ಲಿ ಅಮೃತವನ್ನು ನೀಡಿದವಳು ಅವಳಿಗೆ ವಿಷವುಣಿಸಲಾರೆ, ಅವಳ ನಿರೀಕ್ಷೆಯನ್ನು ಸುಳ್ಳು ಮಾಡುವುದಿಲ್ಲ. ಹೆತ್ತತಾಯಿಗೋಸ್ಕರ ಅವಳ ಕೋರಿಕೆ ಈಡೇರಿಸಲು ಪ್ರಾಣವನ್ನೇ ಅರ್ಪಿಸುತ್ತೇನೆ” ಎಂದು ಹೃದಯ ಬಿಚ್ಚಿ ಹೇಳಿದವರು ನೀವು. ಅಂತಹ ತ್ಯಾಗಮಯಿ ತಾಯಿಯ ಕನಸುಗಳನ್ನು ಕಡಿಯಬೇಡಿ, ಹಿರಿಯರು, ಕಿರಿಯರು, ನಿಮ್ಮ ಮೇಲಿಟ್ಟಿರುವ ಅಭಿಮಾನ, ಪ್ರೀತಿಯನ್ನು ಕಳೆದುಕೊಳ್ಳಬೇಡಿ. ನೀವು ಮಾಡಿರುವ, ಮಾಡುತ್ತಿರುವ ಕಾರ್ಯ ಸರಿಯೋ ತಪ್ಪೋ ಎಂದು ನಿಧಾನವಾಗಿ ಕುಳಿತು ಯೋಚನೆ ಮಾಡಿ ಒಂದು ನಿರ್ಧಾರಕ್ಕೆ ಬನ್ನಿ” “ಆಯಿತು ನಾನಿನ್ನು ಬರುತ್ತೇನೆ, ರಾಜಕಾರ್ಯಗಳನ್ನು ಬದಿಗಿಟ್ಟು ಇಲ್ಲಿಗೆ ಬಂದೆ. ನಾನು ಬಂದ ಗಳಿಗೆಯೇ ಸರಿಯಿಲ್ಲ”.

“ಒಳ್ಳೆಯದು ಹೋಗಿ ಬನ್ನಿ, ಕೊನೆಯದಾಗಿ ಒಂದು ಮಾತು ಹೇಳುತ್ತೇನೆ. ಈಗಾಗಲೇ ಸಾಕಷ್ಟು ಜನರಿಂದ ಶಾಪವನ್ನು ಪಡೆದಿದ್ದೀರಿ ನಿಮ್ಮ ಚಪಲಕ್ಕೆ ಪ್ರತಿಷ್ಠೆಗೆ ಅನೇಕ ಪತಿವ್ರತಾ ಸ್ತ್ರೀಯರನ್ನು ಅಪಹರಿಸಿ ತಂದು ಗೋಳಾಡಿಸಿದಿರಿ. ಅವರ ನಿಟ್ಟುಸಿರಿನ ಜ್ವಾಲೆಯಿಂದ ನಮ್ಮ ವಂಶವೇ ಸುಟ್ಟುಹೋಗುವ ಮುನ್ನ ಎಚ್ಚೆತ್ತುಕೊಳ್ಳಿ.”
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೂಸು
Next post ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ

ಸಣ್ಣ ಕತೆ

 • ಉರಿವ ಮಹಡಿಯ ಒಳಗೆ

  ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

 • ಎರಡು ಪರಿವಾರಗಳು

  ಇದು ಎರಡು ಪರಿವಾರದ ಕತೆ. ಒಂದು ಹಕ್ಕಿ ಪರಿವಾರ, ಇನ್ನೊಂದು ಮನುಷ್ಯ ಪರಿವಾರದ್ದು. ಒಂದು ಸುಂದರ ತೋಟ; ವಿಧವಿಧದ ಗಿಡ ಮರಗಳು; ಅವುಗಳ ಕವಲು ಬಿಟ್ಟ ರೆಂಬೆಗಳಲ್ಲಿ… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ಬಾಗಿಲು ತೆರೆದಿತ್ತು

  ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

cheap jordans|wholesale air max|wholesale jordans|wholesale jewelry|wholesale jerseys