ಮುಸ್ಸಂಜೆಯ ಮಿಂಚು – ೧೨

ಮುಸ್ಸಂಜೆಯ ಮಿಂಚು – ೧೨

ಅಧ್ಯಾಯ ೧೨ ಮುರಿದುಬಿದ್ದ ಮದುವೆ

ಸಂಜೆ ರಿತು ಮನೆಗೆ ಬರುವಷ್ಟರಲ್ಲಿ ಜಸ್ಸು ಬಂದು ಕುಳಿತಿದ್ದ. ಎಂದಿನ ನಗು, ಆಕರ್ಷಣೆ, ಇದೇ ನಗುವಿಗಲ್ಲವೇ ತಾನು ಸೋತುಹೋಗಿದ್ದು. ಆ ಸ್ನೇಹಪರತೆ, ಸರಳತೆ, ನೇರ ಮಾತು, ದಿಟ್ಟ ನಡೆ ಎಲ್ಲವೂ ತನಗೆ ಮೆಚ್ಚುಗೆಯಾಗಿತ್ತು. ತನ್ನ ಆಯ್ಕೆ ಅಪ್ಪ-ಅಮ್ಮನಿಗೂ ಸಮ್ಮತವೇ ಆಗಿತ್ತು. ಯೋಗ್ಯ ಹುಡುಗ, ಒಳ್ಳೆಯ ಮನೆತನ, ವಿದ್ಯೆಗೆ ತಕ್ಕ ವಿನಯ ಎಲ್ಲವೂ ಇಷ್ಟವಾಗಿಯೇ ತಾವೇ ಹುಡುಕಿದರೂ ಇಂಥ ವರ ಸಿಗುತ್ತಿರಲಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದರು. ಜಸ್ಸುವಿನ ಹೆತ್ತವರು ಕೂಡ ಇದಕ್ಕಿಂತ ಭಿನ್ನವಾದ ಅಭಿಪ್ರಾಯ ತಳೆದಿರಲಿಲ್ಲ. ರಿತು ಅವರಿಗೆ ಒಪ್ಪಿಗೆಯಾಗಿದ್ದಳು. ಜಸ್ವಂತನ ಎಂ.ಟೆಕ್. ಮುಗಿದ ನಂತರವೇ ಮದುವೆ ಎಂದು ನಿಶ್ಚಯಿಸಿಬಿಟ್ಟಿದ್ದರು. ಹಾಗಾಗಿ ರಿತು-ಜಸ್ವಂತರ ಓಡಾಟಕ್ಕೆ ಯಾವ ಅಡ್ಡಿ ಇರಲಿಲ್ಲ. ಒಳ್ಳೆಯ ಸ್ನೇಹಿತರಂತೆ ಆರಾಮಾಗಿ ಓಡಾಡಿಕೊಂಡಿದ್ದರು. ರಿತುವಿನ ಕೈಹಿಡಿಯಲು ಜಸ್ವಂತ್ ಓದು ಎಷ್ಟು ಬೇಗ ಮುಗಿಯುವುದೋ ಎಂದು ಕಾತರದಿಂದ ಕಾಯುತ್ತಿದ್ದ. ಈಗಷ್ಟೇ ಪರೀಕ್ಷೆ ಮುಗಿದಿತ್ತು. ಮುಂದೆ ವಿದೇಶದಲ್ಲಿ ದುಡಿಯುವ ಹಂಬಲದಿಂದಿದ್ದ ಜಸ್ವಂತ್ ರಿತುಳನ್ನು ಮದುವೆಯಾಗಿ ಅಮೆರಿಕಾಕ್ಕೆ ಹಾರಲು ತವಕಿಸುತ್ತಿದ್ದ.

ರಿತು ಗಂಭೀರವಾಗಿ ಬಂದು ಜಸ್ವಂತನ ಮುಂದೆ ಕುಳಿತಳು. ಮೌನಕ್ಕೆ ಶರಣಾಗಿದ್ದಳು. ಬೆಳಗ್ಗೆ ಆಶ್ರಮಕ್ಕೆ ಬರಲಿಲ್ಲ ಎಂಬ ಅಸಮಾಧಾನ ಅವಳಲ್ಲಿ ಇನ್ನೂ ಇತ್ತು.

“ಕೋಪಾನಾ? ತುಂಬಾ ಕೆಲ್ಸ ಇತ್ತು ಕಣೆ. ಅದೂ ಅಲ್ಲದೆ ಆ ಮುದುಕರ ಜತೆ ನೀ ಆಚರಿಸಿಕೊಳ್ಳೋ ಹುಟ್ಟಿದ ಹಬ್ಬ ನೋಡೋ ಸಹನೆ ನಂಗಿರಲಿಲ್ಲಮ್ಮ ನೋಡು, ಈಗ ಬಂದಿದ್ದೀನಿ. ಹೊರಗಡೆ ಹೋಗೋಣ ಬಾ. ನಿನ್ನ ಬರ್ತ್‌ಡೇಗೆ ನಾನೇ ಪಾರ್ಟಿ ಕೊಡ್ತೀನಿ” ಸಮಾಧಾನಿಸಲೆತ್ನಿಸಿದ.

ಮುದುಕರ ಜತೆ ಅಂದದ್ದು ಯಾಕೋ ರಿತುವಿಗೆ ಸರಿಕಾಣಲಿಲ್ಲ. ಬಂದಿದ್ರೆ ತಾನೇ ಗೊತ್ತಾಗೋದು ಎಷ್ಟು ಚೆನ್ನಾಗಿತ್ತು ಅಂತ.

“ಏಯ್, ನೀನ್ಯಾಕೆ ನಂಗೆ ಪಾರ್ಟಿ ಕೊಡಿಸಬೇಕು? ಬೇಕಾದ್ರೆ ನಾನೇ ಕೊಡುತ್ತೀನಿ. ಮೊದ್ಲೇ ಒಂದು ಪಾರ್ಟಿ ಡ್ಯೂ ಇದೆ. ನಂಗೆ ಕೆಲ್ಸ ಸಿಕ್ಕಿದ್ದು, ಈಗ ಇದು ಸೇರಿಸಿ ಒಟ್ಟಿಗೆ ಕೊಡಿಸ್ತೀನಿ ಬಾ.”

“ಅಲ್ವೆ ರಿತು, ಇವತ್ತು ರಜೆಹಾಕಿ ಜುಮ್ಮಂತ ನನ್ನ ಜತೆ ಎಂಜಾಯ್ ಮಾಡೋದು ಬಿಟ್ಟು ಅದೇನೇ ಅದು ಆಶ್ರಮದಲ್ಲಿ, ಆ ಮುದುಕರ ಜತೆ ಹುಟ್ಟಿದ ಹಬ್ಬ ಮಾಡಿಕೊಂಡಿದೀಯಾ. ನಂಗಂತೂ ಸ್ವಲ್ಪನೂ ಇಷ್ಟ ಇರಲಿಲ್ಲ. ನೀನೆಲ್ಲ ಆರೇಂಜ್ ಮಾಡ್ಕೊಂಡಿರ್ತಿಯಾ ಅಂತ ಸುಮ್ಮನಾದೆ. ಇಲ್ದೆ ಇದ್ದಿದ್ರೆ ಅದಕ್ಕೆಲ್ಲ ಅವಕಾಶನೇ ಕೊಡ್ತಾ ಇರಲಿಲ್ಲ” ಕುಹಕವಾಗಿ ಹೇಳಿದ.

“ಯಾಕೊ ಹಾಗಂತೀಯಾ? ಅವರ ಸಂಭ್ರಮ, ಸಡಗರ ನೀನು ನೋಡಬೆಕಿತ್ತು. ತಮ್ಮಮನೆಯದ್ದೇನೋ ಅನ್ನೋ ಥರ ಓಡಾಡ್ತಾ ಇದ್ದರು. ಆ ಸಂತೋಷ, ಆ ಉತ್ಸಾಹ ನಾ ನೋಡಿದ್ದೆ ಇವತ್ತು. ನಿಜವಾಗಿಯೂ ಜಸ್ಸು ಈ ಇಳಿವಯಸ್ಸಿನಲ್ಲಿಯೂ ಇಷ್ಟೊಂದು ಉತ್ಸಾಹ ಸಾಧ್ಯನಾ ಅನ್ನಿಸುತ್ತೆ. ನಾನು ಹೋಗುವಷ್ಟರೊಳಗೆ ಹೇಗೆ ಡೆಕೊರೇಶನ ಮಾಡಿದ್ರು ಗೊತ್ತಾ ಜಸ್ಸು? ಬಣ್ಣಬಣ್ಣದ ಪೇಪರ್ ಅಂಟಿಸಿ, ಸ್ಟೇಜ್ ಮೇಲೆಲ್ಲ ಪಾಟ್ಗಳನ್ನ ಜೋಡಿಸಿ, ಟೇಬಲ್ ಇಟ್ಟು, ತೋಟದಲ್ಲಿದ್ದ ಹೂಗಳನ್ನೆಲ್ಲ ತಂದು ಇಟ್ರು. ಅಬ್ಬಾ! ಹೇಳೋಕೆ ಅಸಾಧ್ಯ ಜಸ್ಸು. ನಾ ಕೇಕ್ ಕಟ್ ಮಾಡಿದಾಗಂತೂ ಸಣ್ಣ ಮಕ್ಕಳಂತೆ ಚಪ್ಪಾಳೆ ತಟ್ಟುತ್ತ, ಕೇಕೆ ಹಾಕಿದ್ರು. ನಾನು ಒಬ್ಬೊಬ್ಬರಿಗೂ ಕೇಕ್ ತಿನ್ನಿಸುವಾಗ ಸಂತೋಷ ತಡೆಯಲಾರದೆ ಅತ್ತೇ ಬಿಟ್ರು ಜಸ್ಸು. ಇಲ್ಲಿ ನೋಡು, ಈ ವಜ್ರದ ಉಂಗುರನಾ ನಮ್ಮ ವೆಂಕಟೇಶ್ ಸರ್ ತಮ್ಮ ಕೈಯಿಂದ ತೆಗೆದು ನನ್ನ ಬೆರಳಿಗೆ ತೊಡಿಸಿದ್ರು. ನಾನು, ಅವರ ಹೆಂಡ್ತಿ ವಸು ಇದ್ದ ಹಾಗಿದ್ದಿನಂತೆ. ಅವಳೇ ಮತ್ತೊಮ್ಮೆ ಹುಟ್ಟಿ ಬಂದಿದ್ದಾಳೆ ಅನ್ನಿಸ್ತಾ ಇದೆ ಅಂದ್ರು. ಅವರಿಗೆ ಎಷ್ಟೊಂದು ಪ್ರೀತಿ ನೋಡು ನನ್ನ ಮೇಲೆ” ಆಪ್ಯಾಯಮಾನವಾಗಿ ಉಂಗುರವನ್ನು ಸವರುತ್ತ ಜಸ್ವಂತ್‌ಗೆ ತೋರಿಸಿದಳು.

ಅಷ್ಟೇನು ಉತ್ಸಾಹ ತೋರದ ಜಸ್ವಂತ್, “ತುಂಬಾ ಸಂತೋಷ, ನೀನೇನೋ ತುಂಬಾ ಖುಶೀಲಿ ಇದ್ದೀಯಾ. ನಾನು ಖುಷಿಪಡಬೇಡವಾ?” ಎಂದವನೇ ಜೇಬಿನಿಂದ ಬಾಕ್ಸ್ ಒಂದನ್ನು ತೆಗೆದು ರಿತುವಿನ ಕೈಹಿಡಿದು ಅವಳ ಕೈಗೆ ಸುಂದರವಾದ ಬಂಗಾರದ ಕೆಂಪು ಹರಳಿರುವ ಕಡಗವನ್ನು ತೊಡಿಸಿದನು.

“ಈಗ ನೋಡು ಈ ಕಡಗಕ್ಕೆ ಎಷ್ಟೊಂದು ಸೌಂದರ್ಯ ಬಂದಿದೆ. ಮುದ್ದಾದ ಈ ಕೈ ಅಪ್ಪಿಕೊಂಡಿರುವ ಕಡಗವೇ ಧನ್ಯ.”

“ತೊಡಿಸಿದ ನೀನೂ ಧನ್ಯ ಆಯ್ತಾ. ತುಂಬಾ ಚೆನ್ನಾಗಿದೆ ಕಣೋ. ಆದ್ರೆ ಇಷ್ಟೊಂದು ಬೆಲೆಬಾಳುವಂಥದ್ದನ್ಯಾಕೆ ತಂದೆ? ಪ್ರತಿಸಾರಿನೂ ಬಂಗಾರದ್ದೇ ಕೊಡಬೇಕಾ? ಸರ, ಉಂಗುರ, ಓಲೆ ಅಂತ ಪ್ರತಿ ವರ್ಷನೂ ಕೊಡ್ತಾನೇ ಇದ್ದೀಯಾ” ಉಡುಗೊರೆ ಚೆನ್ನಾಗಿದ್ದರೂ ಅಷ್ಟೊಂದು ದುಡ್ಡಿನದು ಎಂದಾಗ ಯಾಕೋ ಮನ ಹಿಂಜರಿಯಿತು.

“ನಾನು ಇನ್ಯಾರಿಗೆ ಕೊಡಿಸಲಿ ನಿನಗಲ್ಲದೆ? ಅದೂ ಇಂಥ ವಿಶೇಷ ದಿನದಲ್ಲಿ ಅಲ್ಲದೆ, ಮತ್ಯಾವಾಗ ಹೇಳು ಕೊಡೋದು? ಇದು ಅಮ್ಮನ ಸೆಲೆಕ್ಷನ್, ಅಮ್ಮನೇ ಪ್ರೀತಿಯಿಂದ ತನ್ನ ಮೆಚ್ಚಿನ ಸೊಸೆಗೆ ಕಳುಹಿಸಿಕೊಟ್ಟಿರುವುದು. ಸಮಾಧಾನ ಆಯ್ತಾ?”

ಅತ್ತೆಯೇ ಕಳುಹಿಸಿರುವುದು ಎಂದ ಮೇಲೆ ಸುಮ್ಮನಾದಳು. ಅವನಾಸೆಯಂತೆ ರಾತ್ರಿ ಎಲ್ಲರೂ ಹೊರಗೆ ಊಟ ಮುಗಿಸಿ ಬಂದರು. ಇಬ್ಬರೇ ಹೋಗಿ ಎಂದರೂ ಜಸ್ವಂತ್ ಬಿಡದೇ “ನಾವಿಬ್ಬರೂ ಯಾವಾಗಲೂ ಹೋಗ್ತಾನೇ ಇರ್ತಿವಿ. ಇವತ್ತು ವಿಶೇಷ ದಿನ ಅಲ್ಲವೇ? ಸಿಹಿ ಸುದ್ದಿ ಬಂದಿದೆ. ಎಲ್ಲರಿಗೂ ಸಿಹಿ ಕೊಡಿಸಿಯೇ ಹೇಳ್ತೀನಿ” ಎಂದು ಬಲವಂತದಿಂದ ಕರೆದೊಯ್ದು ಮುಂದಿನ ತಿಂಗಳೇ ತಾನು ಅಮೆರಿಕಾಕ್ಕೆ ಹೋಗಲಿರುವ ವಿಷಯ ತಿಳಿಸಿದ. ಹೆಂಡತಿ ಜತೆನೇ ಹೋಗಬೇಕು ಅಂತ ಅಪ್ಪ-ಅಮ್ಮ ಕಡ್ಡಾಯ ಮಾಡಿಬಿಟ್ಟಿದ್ದಾರೆ. ಮದ್ವೆ ಫಿಕ್ಸ್ ಆದರೆ ಮತ್ತೊಂದು ತಿಂಗಳ ಸಮಯ ತಗೋಬಹುದು. ಆದ್ರೆ ಎರಡು ತಿಂಗಳಲ್ಲಿ ನಾನು ಹೋಗ್ಲೇಬೇಕು. ಅಪ್ಪ-ಅಮ್ಮ ನಾಳೆ ಮಾತಾಡೋಕೆ ನಿಮ್ಮ ಮನೆಗೆ ಬರ್ತಾ ಇದ್ದಾರೆ ಎಂದು ತಿಳಿಸಿದಾಗ ಒಮ್ಮೆಲೇ ಉಂಟಾದ ಈ ಸಂದರ್ಭಕ್ಕೆ ಏನೂ ತೋಚದೆ ಕೇಳಿಸಿಕೊಂಡರು ಅಷ್ಟೇ. ಉತ್ತರಿಸಲು ಅವರಿಂದಾಗಲೇ ಇಲ್ಲ. ಮುದ್ದಿನ ಮಗಳು ಇನ್ನೆರಡು ತಿಂಗಳಲ್ಲಿ ಗಂಡನೊಂದಿಗೆ ವಿದೇಶಕ್ಕೆ ಹೊರಟು ಬಿಡುವುದನ್ನು ಅಷ್ಟು ಸುಲಭವಾಗಿ ಅರಗಿಸಿಕೊಳ್ಳದಾದರು. ಜಸ್ವಂತ್ ವಿದೇಶಕ್ಕೆ ಹೊರಟುನಿಂತಿರುವ ವಿಷಯ ಅವರಿಗೆ ಹೊಸದೆ.

ಇತ್ತ ರಿತು ಕೂಡ ಗೊಂದಲಕ್ಕೊಳಗಾಗಿದ್ದಾಳೆ. ಈ ದೇಶ ಬಿಟ್ಟು, ಹೆತ್ತವರನ್ನು ಬಿಟ್ಟು, ಕಾಣದ ದೇಶದಲ್ಲಿರುವ ಕಲ್ಪನೆ ಕೂಡ ಮಾಡಿರದ ರಿತು, ಹೀಗೆ ಒಮ್ಮೆಲೆ ಜಸ್ವಂತ ಹಾಕಿದ ಬಾಂಬಿನಿಂದಾಗಿ ತಬ್ಬಿಬ್ಬಾಗಿದ್ದಾಳೆ. ತಾನು ವಿದೇಶಕ್ಕೆ ಹೊರಟಿರುವ ಸುದ್ದಿ ಅವರಲ್ಲೇನೂ ವಿಶೇಷ ಸ್ಪಂದನೆ ಮಾಡದಿರುವುದು, ಕಂಗ್ರಾಟ್ಸ್ ಅಂತ ನೀರಸವಾಗಿ ಹೇಳಿ ಪ್ರತಿಕ್ರಿಯಿಸಿದ ರೀತಿ ಜಸ್ವಂತ್‌ಗೆ ನಿರಾಶೆ ತಂದರೂ ತಾನು ಹೀಗೆ ಸಸ್ಪೆನ್ಸ್‌ನಲ್ಲಿಟ್ಟು ಇದ್ದಕ್ಕಿದ್ದಂತೆ ಸ್ಫೋಟಿಸಿದರೆ ಆಘಾತವಾಗದಿರುವುದೇ? ಹಾಗಾಗಿಯೇ ಕೊಂಚ ರಿಯಾಕ್ಷನ್ ತಣ್ಣಗಿದೆ ಎಂದು ಸಮಾಧಾನಿಸಿಕೊಂಡ. ಆದರೆ ರಿತುವಿನ ಗಂಭೀರ ವರ್ತನೆ ಮಾತ್ರ ಸಹಿಸದಾದ. ಇವಳೆಂಥ ಹುಡುಗಿ? ಬೇರೆ ಯಾರೇ ಹುಡುಗಿಯಾಗಿದ್ದರೆ, ತನ್ನ ಮದುವೆಯಾಗುವಾತ ಅಮೆರಿಕಾಕ್ಕೆ ಹೋಗುತ್ತಿದ್ದಾನೆ ಅಂದರೆ, ಕುಣಿದು ಕುಪ್ಪಳಿಸುತ್ತಿದ್ದರು. ಆದರೆ ತನ್ನ ಹುಡುಗಿ ಹಿಗೇಕೆ ಎಂದು ತಲೆಕೆಡಿಸಿಕೊಂಡ. ಅಪ್ಪ-ಅಮ್ಮನನ್ನು ಎಂದೂ ಬಿಟ್ಟಿರದ ರಿತು ಬಿಟ್ಟು ಹೋಗಬೇಕು ಎಂಬ ಆಲೋಚನೆಯಿಂದ ಡಲ್ ಆಗಿದ್ದಾಳೆಯೇ? ಛೆ, ನನ್ನದೇ ತಪ್ಪು. ಸರ್‌ಪ್ರೆಸ್ ಕೊಡಬೇಕೆಂದು ಅವಳನ್ನು ವಿದೇಶಕ್ಕೆ ಹೋಗುವುದರ ಬಗ್ಗೆ ಮಾನಸಿಕವಾಗಿ ಪ್ರಿಪೇರ್ ಮಾಡದೆ ಇದ್ದದ್ದು. ತಾನು ಮುಂಚಿನಿಂದಲೂ ಹೇಳುತ್ತಾ ಬರಬೇಕಿತ್ತು. ಇಷ್ಟೆಲ್ಲ ಓದಿ ಯಾರು ಈ ದೇಶದಲ್ಲಿರುತ್ತಾರೆ? ಇಲ್ಲಿ ಸಿಗುವ ಸಂಬಳವಾದರೂ ಎಷ್ಟು? ತನ್ನ ಆಸೆ, ಕನಸು ಎಲ್ಲವೂ ಸಾಕಾರವಾಗಬೇಕಾದರೆ ಅಮೆರಿಕಾಕ್ಕೆ ಹೋಗಲೇಬೇಕು. ಎಲ್ಲರ ಕನಸು ಅದೇ ತಾನೆ? ಆದರೆ ಎಷ್ಟು ಜನಕ್ಕೆ ಇಂಥ ಅವಕಾಶ ಸಿಕ್ಕೀತು ? ಅಪ್ಪ-ಅಮ್ಮನನ್ನು ಎಲ್ಲಾ ಹೆಣ್ಣುಮಕ್ಕಳು ತೊರೆದು ಗಂಡನ ಮನೆಗೆ ಹೋಗಲೇಬೇಕು ತಾನೆ? ನನ್ನ ಜತೆ ರಿತು ಬಂದೇ ಬರುತ್ತಾಳೆ. ಹೆತ್ತವರನ್ನು ಬಿಟ್ಟು ಬರುವುದು ಕಷ್ಟವಾದರೂ ತನಗಾಗಿ ಬಂದೇಬರುತ್ತಾಳೆ ಎಂಬ ಧೈರ್ಯ ತಾಳಿದ.

ರಾತ್ರಿ ರಿತು, ಮನು, ತನುಜಾ ಎಲ್ಲರೂ ಗಂಭೀರವಾಗಿದ್ದರು. ಒಬ್ಬೊಬ್ಬರಿಗೆ ಒಂದೊಂದು ಚಿಂತೆ. ಇಷ್ಟು ಬೇಗ ಹೇಗೆ ಮದುವೆ ಮಾಡುವುದು? ಮದುವೆಯಾದ ಕೂಡಲೇ ಮಗಳು ವಿದೇಶಕ್ಕೆ ಹಾರಬೇಕು. ಅವಳಿಲ್ಲದೆ ತಾವಿರುವುದು ಹೇಗೆ? ಜಸ್ವಂತ್ ಒಂದು ಬಾರಿಯಾದರೂ ಈ ವಿಷಯ ಹೇಳಿರಲಿಲ್ಲ. ಮದುವೆಯಾದರೂ ತಮ್ಮ ಮಗಳು ಇದೇ ಊರಿನಲ್ಲಿ ತಮ್ಮ ಕಣ್ಮುಂದೆಯೇ ಇರುತ್ತಾಳೆ ಎಂದೆಲ್ಲ ಅಂದುಕೊಂಡದ್ದು ಸುಳ್ಳಾಗಿಬಿಟ್ಟಿತ್ತು. ಒಮ್ಮೆ ವಿದೇಶಕ್ಕೆ ಹೋಗಿಬಿಟ್ಟರೆ ಮತ್ತೆ ಬರುವುದು ಯಾವಾಗಲೋ? ಅಲ್ಲಿಯೇ ನೆಲೆಸಿಬಿಟ್ಟರಂತೂ ತಾವು ನಿಜವಾಗಿಯೂ ಅನಾಥರಾಗಿಬಿಡುತ್ತೇವೆ. ಆದರೆ, ತಮ್ಮ ಸ್ವಾರ್ಥ ಗಮನಿಸಿಕೊಂಡರೆ ಮಗಳ ಭವಿಷ್ಯದ ಗತಿ? ತಮ್ಮ ಸ್ವಾರ್ಥಕ್ಕಿಂತ ಮಗಳು ತಾನೇ ಮುಖ್ಯ. ರಿತು-ಜಸ್ವಂತ್‌ರ ಪ್ರೀತಿ ಬಹಳ ದಿನಗಳದು. ಈ ಮದುವೆ ಬೇಡ ಎಂದರೆ ಮಗಳು ನೊಂದುಕೊಳ್ಳುತ್ತಾಳೆ. ಮಗಳನ್ನು ನೋಯಿಸಬಾರದೆಂದರೆ ತಾವು ಮಗಳ ಅಗಲುವಿಕೆಗೆ ಸಿದ್ದರಾಗಲೇಬೇಕಾಗುತ್ತದೆ. ಮಗಳು-ಅಳಿಯ-ಮೊಮ್ಮಕ್ಕಳು ಎಂಬ ಕನಸು ನಮ್ಮಿಂದ ಸ್ವಲ್ಪ ದೂರವೇ ಇನ್ನು. ಎಲ್ಲೊ ಎರಡು ದಿನದ ಅತಿಥಿ ಮಾತ್ರ ಇನ್ನು ಮಗಳು. ಅಲ್ಲಿ ಊಟ ಮಾಡುತ್ತಿದ್ದರೂ ಮನು-ತನುಜಾಳಿಗೆ ಈ ಚಿಂತೆಯೇ ಕಾಡುತ್ತಿತ್ತು.

ಇತ್ತ ರಿತು ರಾತ್ರಿ ಇಡೀ ನಿದ್ದೆ ಇಲ್ಲದೆ ಕಳೆದಳು. ಮನಸ್ಸು ಸಂಪೂರ್ಣ ಗೊಂದಲದ ಗೂಡಾಗಿತ್ತು. ಅವಳು ಯಾವತ್ತೂ ಹೊರ ದೇಶದ ಕನಸನ್ನು ಕಂಡವಳಲ್ಲ. ಇಲ್ಲಿಂದ ಹೋಗುವ ವಿಷಯವನ್ನು ಕನಸಿನಲ್ಲಿಯೂ ಎಣಿಸದವಳಿಗೆ ಈಗ ಧುತ್ತೆಂದು ವಿದೇಶಕ್ಕೆ ಹೋಗುವ ಸಂದರ್ಭ ಎದುರಾಗಿತ್ತು. ತಂದೆ-ತಾಯಿ, ಅದಕ್ಕಿಂತ ಹೆಚ್ಚಾಗಿ ಆಶ್ರಮ, ಆಶ್ರಮದಲ್ಲಿರುವ, ಈಗ ತನ್ನವರೆಂದೇ ಅನ್ನಿಸಿರುವವರನ್ನೆಲ್ಲ ಬಿಟ್ಟು ತನ್ನ ಧೇಯ, ಆದರ್ಶಗಳಿಗೆಲ್ಲ ತಿಲಾಂಜಲಿಯನ್ನಿತ್ತು ಜಸ್ವಂತನ ಹಿಂದ ಹೊರಟುಬಿಡುವುದೇ? ಇದು ಸರಿಯೇ? ವೆಂಕಟೇಶ್‌ ಸರ್‌ರವರು ತನ್ನ ಬಗ್ಗೆ ಎಷ್ಟೊಂದು ಭರವಸೆಗಳನ್ನಿಟ್ಟುಕೊಂಡಿದ್ದಾರೆ? ತನ್ನಂಥವಳ ಅಗತ್ಯ ಎಷ್ಟೆಂದು ಸ್ಪಷ್ಟಪಡಿಸಿದ್ದಾರೆ. ಈಗ ಆರ್ಧದಲ್ಲಿಯೇ ಕೈಕೊಟ್ಟು ಹೋಗಿಬಿಡುವುದು. ಹೀಗೆ ಮಾಡಿದರೆ ಮೊಸ ಮಾಡಿದಂತಾಗುವುದಿಲ್ಲವೇ? ಆತ್ಮಸಾಕ್ಷಿಗೆ ವಿರುದ್ಧವಾಗಿ ನಿಂತಂತಾಗುವುದಿಲ್ಲವೇ? ಹಾಗೆಂದು ಬರಲೊಲ್ಲೆ ಎಂದುಬಿಟ್ಟರೆ, ಜಸ್ವಂತನಿಗೆಷ್ಟು ಆಘಾತವಾಗಬಹುದು. ತಾವಿಬ್ಬರೂ ಭವ್ಯಭವಿಷ್ಯದ ಬಗ್ಗೆ ಕಂಡ ಕನಸುಗಳಿಗೆಲ್ಲ ನಾನೇ ಕೈಯಾರೆ ಕೊಳ್ಳಿ ಇಟ್ಟಂತಾಗುವುದಿಲ್ಲವೇ? ಅಪ್ಪ-ಅಮ್ಮ ಕೂಡ ಜಸ್ಸುವೇ ಅಳಿಯ ಎಂದು ತಿಳಿದುಕೊಂಡುಬಿಟ್ಟಿದ್ದಾರೆ. ಇಂಥ ಅಳಿಯ ಸಿಗುತ್ತಿರುವುದು ಯಾವುದೋ ಜನ್ಮದ ಪುಣ್ಯ ಎಂದೇ ಭಾವಿಸಿದ್ದಾರೆ. ಇನ್ನು ಜಸ್ಸುವಿನ ಅಪ್ಪ-ಅಮ್ಮನಿಗೆಷ್ಟು ನಿರಾಸೆಯಾಗಬಹುದು? ಅವರದೆಷ್ಟು ಒಳ್ಳೆಯ ಹೃದಯ. ಸೊಸೆ ಎಂದು ಅದೆಷ್ಟು ಪ್ರೀತಿ, ಆದರ ತೋರಿಸುತ್ತಿದ್ದಾರೆ. ನನ್ನ ಹುಟ್ಟುಹಬ್ಬ ಕೂಡ ನೆನಪಿಟ್ಟುಕೊಂಡು ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಎಲ್ಲರಿಗೂ ನಾನೇ ಸೊಸೆ ಎಂದು ಸಾರಿಕೊಂಡು ಬಂದಿದ್ದಾರೆ. ತಾನೀಗ ಏನು ಮಾಡಲಿ? ಕೊನೆ ಗಳಿಗೆಯಲ್ಲಿ ಅಮೆರಿಕಾಕ್ಕೆ ಹೋಗುವ ವಿಷಯ ತಿಳಿಸಿದ್ದಾನೆ. ಎಲ್ಲಾ ಏರ್ಪಾಡು ಮಾಡಿಕೊಂಡಾಗಿದೆ. ಈಗ ಹೋಗುವುದು ಬೇಡವೆಂದರೆ ಕೇಳಿಯಾನೇ. ಮುಂಚೆಯೇ ತಿಳಿಸಿದ್ದರೆ ಇಲ್ಲಿಯೇ ಇರೋಣ, ಅಲ್ಲಿ ಸಾಧಿಸುವುದನ್ನು ಇಲ್ಲಿಯೇ ಇದ್ದು ಸಾಧಿಸೋಣ ಎಂದು ಹೇಳಿ ಅವನ ಪ್ರಯತ್ನವನ್ನು ತಡೆಯಬಹುದಿತ್ತು. ಈಗ ನೀನು ಹೋಗಲೇ ಬೇಡವೆನ್ನುವುದು ಸಭ್ಯತೆಯಲ್ಲ. ನನಗಾಗಿ ನಿನ್ನ ಕನಸುಗಳನ್ನು ಬಿಟ್ಟುಬಿಡು ಎನ್ನುವುದು ಸರಿಯಲ್ಲ. ತಾನೀಗ ಯಾವ ನಿರ್ಧಾರ ಕೈಗೊಳ್ಳಲಿ? ತನ್ನ ಯಾವುದೇ ನಿರ್ಧಾರ ತನ್ನ ಭಾವನೆಗಳಿಗೆ, ಭವಿಷ್ಯಕ್ಕೆ ಧಕ್ಕೆ ಆಗಬಾರದು. ಅಪ್ಪ-ಅಮ್ಮನನ್ನು ಕೇಳಿದರೆ, ಅವರು ಮಗಳು ದೂರಾಗುವ ದುಃಖವನ್ನು ನುಂಗಿಕೊಂಡು ಜಸ್ಸುವಿನೊಂದಿಗೆ ಹೋಗು ಎನ್ನುವಂಥವರೇ. ಅವರನ್ನು ಕೇಳಿ ಪ್ರಯೋಜನವಿಲ್ಲ. ತಮ್ಮ ಸೆಂಟಿಮೆಂಟ್ಸ್ ಮಗಳ ಬಾಳಿಗೆ ಮುಳ್ಳಾಗುವುದನ್ನು ಎಂದೂ ಬಯಸರು. ಸುಮ್ಮನೆ ಹೊರಟುಬಿಡಲಿ, ಒಂದಷ್ಟು ವರ್ಷ ಇದ್ದು ಮತ್ತೆ ಮರಳಿ ಬಂದರಾಯಿತು. ಹೀಗಾದರೆ ಎಲ್ಲರಿಗೂ ನೆಮ್ಮದಿ, ಶಾಂತಿ, ಸಮಾಧಾನ, ತಾನು ಇಚ್ಚಿಸಿದವನೊಂದಿಗೆ ಮದುವೆ ಆದ ಹಾಗೂ ಆಗುತ್ತದೆ, ವಿದೇಶ ಸುತ್ತಿದಂತೆಯೂ ಆಗುತ್ತದೆ, ಹೆತ್ತವರ ಕಡೇಗಾಲದಲ್ಲಿ ತಾನಿರುವ ಹಾಗೆಯೂ ಆಗುತ್ತದೆ. ಯಾವುದಕ್ಕೂ ಒಮ್ಮೆ ಜಸ್ವಂತನೊಂದಿಗೆ ಮಾತಾಡಿದರೆ ಒಳ್ಳೆಯದೆಂದು, ಬೆಳಗ್ಗೆ ಎದ್ದ ಕೂಡಲೇ ರಿಂಗ್ ಮಾಡಿ ಜಸ್ಸುವಿನ ತಂದೆ-ತಾಯಿ ಇಂದು ಮನೆಗೆ ಬರುವುದು ಬೇಡ. ನಾವಿಬ್ಬರೂ ಮೊದಲು ಮಾತನಾಡಿಕೊಳ್ಳೋಣ ಎಂದು ತಿಳಿಸಿದಳು.

ಸರಿ ಎಂದು ಒಪ್ಪಿದ ಜಸ್ವಂತ್ ಸಂಜೆ ಸಿಗುವೆನೆಂದು ಹೇಳಿದ. ಸಂಜೆ ಇಬ್ಬರೂ ಏಕಾಂತವಾಗಿರುವ ಸ್ಥಳ ಆರಿಸಿ ಕುಳಿತುಕೊಂಡರು. ಇಬ್ಬರ ಮನಸ್ಸು ಅಶಾಂತವಾಗಿತ್ತು. ಏನು ಹೇಳಲಿರುವಳೋ ಎಂಬ ಆತಂಕ. ಇನ್ನೇನು ಹೇಳಿಯಾಳು ಎಂಬ ಧೈರ್ಯ ಎರಡೂ ಸೇರಿತ್ತು ಅವನಲ್ಲಿ. ತನ್ನ ಮಾತು ಕೇಳಿಯಾನೇ? ತನ್ನ ಪ್ರೀತಿಗೆ ವಿಜಯ ಸಿಕ್ಕೀತೇ ಎಂಬ ತಳಮಳ ಅವಳನ್ನು ಹಣ್ಣು ಮಾಡಿತ್ತು.

ಸ್ವಲ್ಪ ಹೊತ್ತು ಯಾರೂ ಮಾತನಾಡಲಿಲ್ಲ. ಯಾರು ಮೊದಲು ಪ್ರಾರಂಭಿಸಬೇಕೆಂದು ತೊಳಲಾಡುತ್ತಿದ್ದರು.

“ಜಸ್ಸು, ನೀನು ಅಮೆರಿಕಾಕ್ಕೆ ಹೋಗುವ ನಿರ್ಧಾರಾನಾ ಯಾವಾಗ ಮಾಡ್ದೆ? ಒಂದು ಸಲನಾದ್ರೂ ನನ್ನತ್ರ ಹೇಳಿರಲಿಲ್ಲವಲ್ಲ” ಆರೋಪಿಸಿದಳು.

“ಸ್ಸಾರಿ ರಿತು, ನಿಂಗೆ ಸರ್‌ಪೈಸ್ ಕೊಡಬೇಕು, ಆ ಥ್ರಿಲ್ ಹೇಗಿರುತ್ತೆ ನೋಡಬೇಕು ಅನ್ನೋ ಕುತೂಹಲದಲ್ಲಿ ಹೇಳಿರಲಿಲ್ಲ. ಹೇಗೋ ಆಸೆ ಏನೊ ಬೆಟ್ಟದಷ್ಟಿದ್ದರೂ ಅದೆಲ್ಲಿ ನೆರವೇರುತ್ತೆ ಅನ್ನೋ ಅನುಮಾನದಿಂದ ಸುಮ್ಮನಿದ್ದೆ. ಆದ್ರೆ ಅವಕಾಶ ನೇರವಾಗಿ ನನ್ನ ಹುಡುಕಿಕೊಂಡು ಬಂತು. ಅವಕಾಶ ಸಿಕ್ಕಾಗ ಯಾರು ಬಿಡುತ್ತಾರೆ ಹೇಳು? ವೀಸಾ, ಪಾಸ್‌ಪೋರ್ಟ್ ಎಲ್ಲಾ ಸಿದ್ಧವಾಗಿದೆ. ನಿನಗೆ ತಾಳಿ ಕಟ್ಟಿ ಹೊರಡೋದೇ ಬಾಕಿ.”

“ಅಲ್ಲಿಗೆ ಹೋಗಲೇಬೇಕಾ ಜಸ್ಸು? ಇಲ್ಲೇ ನಿಂಗೆ ಒಂದು ಒಳ್ಳೆ ಕೆಲ್ಸ ಸಿಗಲ್ಲವಾ?”

“ಎಷ್ಟೇ ಒಳ್ಳೆ ಕೆಲಸ ಸಿಕ್ಕಿದರೂ ಅಲ್ಲಿ ಕೊಡುವಷ್ಟು ಸಂಬಳ ಕೊಡ್ತಾರಾ ರಿತು? ಅಲ್ಲಿರುವ ಅನುಕೂಲ, ಸೌಕರ್ಯ, ಅವಕಾಶಗಳು ಇಲ್ಲೆಲ್ಲ ಸಿಗುತ್ತಾ? ನನ್ನಂಥ ಬುದ್ದಿವಂತರನ್ನು ಇಟ್ಕೊಳ್ಳೋ ಯೋಗ್ಯತೆ ಈ ದೇಶಕ್ಕೆಲ್ಲಿದೆ? ಅದಕ್ಕೆ ಅಲ್ಲವಾ ಎಲ್ಲರೂ ವಿದೇಶಕ್ಕೆ ಹೊರಡಲು ಹಾತೊರೆಯುವುದು. ನನ್ನ ಪ್ಯೂಚರ್ ಚೆನ್ನಾಗಿರಬೇಕು ಅಂದ್ರೆ. ನನ್ನ ಕೆರಿಯರ್‌ಗೆ ಒಳ್ಳೆಯದಾಗಬೇಕು ಅಂದ್ರೆ ಸಿಕ್ಕಿರೋ ಅವಕಾಶಾನ ಉಪಯೋಗಿಸಿಕೊಳ್ಳಲೇಬೇಕು ರಿತು.”

“ಕೆರಿಯರ್ ಒಂದೇ ಮುಖ್ಯನಾ ಜಸ್ಸು? ನೀನು ಒಬ್ಬನೇ ಮಗ, ನಾನೂ ಒಬ್ಬಳೇ ಮಗಳು. ನಾವಿಬ್ಬರೇ ಅವರಿಗೆ ಆಧಾರ. ಕೊನೆಗಾಲದಲ್ಲಿ ನಮ್ಮ ಆಶ್ರಯದಲ್ಲಿ ತಾನೇ ಅವರಿರಬೇಕು? ಅವರನ್ನ ಒಂಟಿಯಾಗಿ ಬಿಟ್ಟು ಹ್ಯಾಗೆ ಹೋಗೋದು? ಅವರ ಕಷ್ಟ-ಸುಖ, ಯೋಗಕ್ಷೇಮ ನೋಡಿಕೊಳ್ಳೋರು ಯಾರು?”

“ಅಯ್ಯೋ ಹುಚ್ಚಿ, ಇದಕ್ಕೆ ಇಷ್ಟೊಂದು ಚಿಂತೆ ಮಾಡ್ತಾ ಇದ್ದೀಯಾ ಪೂರ್ ಗರ್ಲ್” ಎಂದವನೇ ನಕ್ಕುಬಿಟ್ಟ.

“ನಗು ನಿಲ್ಸು ಜಸ್ಸು ನನ್ನ ಆತಂಕ ನಿಂಗೆ ಅರ್ಥವಾಗಲ್ಲ” ಮುಖ ಊದಿಸಿಕೊಂಡಳು.

“ಮೈ ಡಿಯರ್ ರಿತು, ನಂಗೆ ಅರ್ಥವಾಗುತ್ತೆ. ನೀನೊಂದು ಸಲ ಅಮೆರಿಕಾಕ್ಕೆ ಬಂದು ನೋಡು, ಆಮೇಲೆ ಅಲ್ಲಿಂದ ಮತ್ತೆ ವಾಪಸ್ಸು ಬರೋಕೆ ಮನಸ್ಸು ಬರಲ್ಲ.”

“ಅಂದ್ರೆ, ನೀನು ಹಾಗೇನಾ? ಮತ್ತೆ ಇಲ್ಲಿಗೆ ಬರೋ ಆಲೋಚನೆ ಇಟ್ಟುಕೊಳ್ಳದೆ ಹೋಗ್ತಾ ಇದ್ದೀಯಾ?” ಆತಂಕದಿಂದ ಕೇಳಿದಳು.

“ಅಲ್ಲಿಗೆ ಹೋದ ಮೇಲೆ ಮುಂದಿನದ್ದು. ಸದ್ಯಕ್ಕಂತೂ ಹೊರಡ್ತಾ ಇದ್ದೀನಿ” ಮಾತು ತೇಲಿಸಿದ.

“ಜಸ್ಸು, ನಂಗೆ ಇಲ್ಲಿ ತುಂಬಾ ಆಟಾಚ್ಮೆಂಟ್ ಬೆಳೆದುಕೊಂಡುಬಿಟ್ಟಿದೆ. ನಮ್ಮ ಅಮ್ಮ-ಅಪ್ಪ, ನಮ್ಮ ಮನೆ… ಹೀಗೆ ಬಿಟ್ಟು ಹೋಗೋ ಕಲ್ಪನೇನೇ ಮಾಡಿಲ್ಲ ನಾನು. ಅದೂ ಅಲ್ಲದೆ, ನಾನು ಕೆಲ್ಸಕ್ಕೆ ಬೇರೆ ಸೇರಿಕೊಂಡಿದ್ದೀನಿ. ಆ ಕೆಲ್ಸ ಬಿಡೋದೋ ಹೇಗೆ? ಇದೂ ಒಂದು ಸೋಶಿಯಲ್ ವರ್ಕ್ ಅಂತ ತಾನೇ ನಾನು ಅಲ್ಲಿ ಕೆಲ್ಸಕ್ಕೆ ಸೇರಿರೋದು. ನನ್ನ ಬಗ್ಗೆ ಎಷ್ಟೊಂದು ಭರವಸೆ ಇಟ್ಟುಕೊಂಡಿದ್ದಾರೆ ಗೊತ್ತಾ?”

“ರಿತು, ರಿತು, ನೀನು ಹೆಣ್ಣಾಗಿ ಹುಟ್ಟಿ ಅಪ್ಪ-ಅಮ್ಮನ್ನ ಬಿಟ್ಟು ಹೋಗಲ್ಲ ಅಂದ್ರೆ ಹೇಗೆ? ಮುಂಚೆನೇ ನಿನ್ನಲ್ಲಿ ಮದ್ವೆ ಆದ ಮೇಲೆ ಗಂಡನ ಮನೆಗೆ ಹೋಗಬೇಕು, ಅಪ್ಪನ ಮನೆ ಶಾಶ್ವತ ಅಲ್ಲ ಅನ್ನೋ ಕಲ್ಪನೆ ಇರಲಿಲ್ಲವೇ? ಗಂಡಸಾದ ನಾನೇ ಎಲ್ಲರನ್ನೂ ಬಿಟ್ಟು ಹೋಗ್ತಾ ಇದ್ದೇನೆ. ಇನ್ನು ನೀನ್ಯಾಕೆ ಅನುಮಾನಿಸುತ್ತಾ ಇದ್ದೀಯಾ ?” ಬೇಸರಿಸಿದ.

“ಅದೊಂದೇ ಅಲ್ಲ ಜಸ್ಸು, ನಂಗೆ ಆಶ್ರಮ ಬಿಟ್ಟು ಬರೋ ಮನಸ್ಸಿಲ್ಲ. ಅಲ್ಲಿರೋರೆಲ್ಲ ನನ್ನ ಎಷ್ಟೊಂದು ಹಚ್ಚಿಕೊಂಡಿದ್ದಾರೆ.”

“ಸ್ಟಾಪ್ ದ ನಾನ್‌ಸೆನ್ಸ್, ಸಿಲ್ಲಿಯಾಗಿ ಮಾತಾಡಬೇಡ. ಅವರೇನು ಶಾಶ್ವತನಾ? ಮೊದ್ಲೇ ವಯಸ್ಸಾಗಿರೋ ಮುದುಕರು, ನಾಳೆ ಸತ್ತು ಹೋಗ್ತಾರೆ. ಅವರಿಗೋಸ್ಕರ ನನ್ನ ದೂರ ಮಾಡ್ತಾ ಇದ್ದೀಯಾ? ಅಷ್ಟಕ್ಕೂ ಅಂಥ ಮುದುಕರ ಸೇವೆ ಮಾಡೋಕು ಅಂದ್ರೆ ಅಲ್ಲಿ ಕೂಡ ವೃದ್ದಾಶ್ರಮಗಳಿವೆ. ಅಲ್ಲಿಯೇ ಕೆಲ್ಸಕ್ಕೆ ಸೇರಿಕೊಳ್ಳುವಿಯಂತೆ. ಅದು ನಿನ್ನ ಕರ್ಮ” ಸಹನೆ ಕಳೆದುಕೊಂಡು ಧ್ವನಿ ಎತ್ತರಿಸಿದ.

“ಕರ್ಮ ಅಂತ ಯಾಕೆ ಅನ್ತಿಯಾ ಜಸ್ಸು. ಅದು ನನ್ನ ಆದರ್ಶ. ದುಡ್ಡು, ಕೀರ್ತಿ, ಅನುಕೂಲವೇ ನಿಂಗೆ ಹೆಚ್ಚಾದ್ರೆ ಅದಕ್ಕೆ ಯಾವತ್ತೂ ನಾನು ಬೆಲೆ ಕೊಡಲ್ಲ. ನಂಗೆ ನನ್ನ ಧ್ಯೇಯ, ಆದರ್ಶ, ನನ್ನ ದೇಶ, ನನ್ನ ಜನವೇ ಹೆಚ್ಚು. ನನ್ನವರನ್ನೆಲ್ಲ ಬಿಟ್ಟು ಯಾವುದೋ ದೇಶದಲ್ಲಿ ಕೇವಲ ಹಣಕ್ಕಾಗಿ, ಶ್ರೀಮಂತಿಕೆಗಾಗಿ ಪರಕೀಯತೆಯಿಂದ ಬಾಳೊಕೆ ನಂಗಿಷ್ಟ ಇಲ್ಲ ಜಸ್ಸು. ನನ್ನ ಯಾವತ್ತೂ ವಿದೇಶ ಆಕರ್ಷಿಸಿಲ್ಲ. ನನ್ನ ಓದಿಗೆ, ನನ್ನ ಪ್ರತಿಭೆಗೆ ನಿಂಗಿಂತಲೂ ಹೆಚ್ಚಿನ ಅವಕಾಶ ಇದೆ ನಂಗೆ. ಫಾರಿನ್‌ಗೆ ಹೋಗೋದೇ ಮುಖ್ಯ ಆಗಿದ್ದಿದ್ದರೆ ನಾನು ಯಾವತ್ತೋ ಓಗಬಹುದಿತ್ತು. ಇಲ್ಲಿನ ಸಂಸ್ಕೃತಿ ನಂಗೆ ಹೆಚ್ಚು. ನನ್ನ ತಂದೆ-ತಾಯಿ ನಂಗೆ ಹೆಚ್ಚು. ಆಮೇಲೆ ನನ್ನ ಗಂಡ, ನನ್ನ ಸಂಸಾರ. ನನ್ನಮ್ಮ ನನ್ನ ಬೆಳೆಸಿರೋದು ಮದರ್ ಥೆರೆಸಾ ಥರ ಆಗಬೇಕು ಅಂತ, ವಿದೇಶದ ಹಣಕ್ಕೆ ನನ್ನ ಮಾರ್ಕೋ ಅಂತ ಯಾವತ್ತೂ ಹೇಳಿಲ್ಲ: ಯಾಕೊ ರೋಷ ಉಕ್ಕಿ ಬಂದಿತ್ತು.

ತನ್ನ ಬಗ್ಗೆ, ತನ್ನ ಆದರ್ಶದ ಬಗ್ಗೆ, ತನ್ನ ಅನಿಸಿಕೆಯ ಬಗ್ಗೆ, ತನ್ನ ಧೈಯದ ಬಗ್ಗೆ ಜಸ್ಸು ಯಾವಾಗಲೂ ಹೀಗೆಯೇ ಕೇವಲವಾಗಿಯೇ ಮಾತನಾಡುತ್ತಾನೆ. ತನ್ನ ಆದರ್ಶವನ್ನು ಲೇವಡಿ ಮಾಡುತ್ತಾನೆ. ಇನ್ನೊಬ್ಬರ ಭಾವನೆಗಳಿಗೆ ಗೌರವ ಕೊಡಬೇಕೆಂಬ ಸಾಮಾನ್ಯ ಪ್ರಜ್ಞೆಯೂ ಇವನಿಗಿಲ್ಲವಲ್ಲ. ಪ್ರೀತಿಯ ಪೊರೆ ಮುಚ್ಚಿಕೊಂಡ ನಾನು ಅವೆಲ್ಲವನ್ನು ಅಲಕ್ಷಿಸಿದ್ದೆ. ನನ್ನ ಭಾವನೆಗಳಿಗೆ ಬೆಲೆ ಕೊಡಲಾರದವನು, ನನ್ನ ಸೇವೆಯನ್ನು ಕರ್ಮ ಎಂದು ಹೀಗಳೆಯುವವನು ಮುಂದೆ ನನ್ನ ಹೇಗೆ ಬಾಳೆಸಿಯಾನು? ಬರೀ ಪ್ರೀತಿ ಇದ್ದರಾಯಿತೆ? ಪರಸ್ಪರ ಸ್ಪಂದಿಸುವಿಕೆ ಬೇಡವೇ? ಪರಸ್ಪರ ಗೌರವ, ಆದರ ಬೇಡವೇ? ತನಗೀಗ ಪರೀಕ್ಷಾ ಕಾಲ. ಪ್ರೀತಿ ಮುಖ್ಯವೋ, ವ್ಯಕ್ತಿತ್ವ ಮುಖ್ಯವೋ ನಿರ್ಧರಿಸಬೇಕಾಗಿದೆ.

“ಜಸ್ಸು, ನಾವಿಷ್ಟು ದಿನ ಯಾವ ವಿಷಯವನ್ನೂ ಸೀರಿಯಸ್ಸಾಗಿ ತೆಗೆದುಕೊಂಡಿರಲೇ ಇಲ್ಲ ಅಲ್ಲವಾ? ಬರೀ ಪ್ರೀತಿ, ಸಿನೆಮಾ, ಹೊಟೇಲ್, ಚಾಟಿಂಗ್ ಅಂತ ಕಾಲ ಕಳೆದುಬಿಟ್ವಿ, ನಿನ್ನ ಸ್ವಭಾವ, ಧೋರಣೆ, ನಿನ್ನ ಕನಸು, ನಿನ್ನ ಭವಿಷ್ಯ ಇದ್ಯಾವುದನ್ನೂ ನೀನು ತೋರಿಸದೆ ಬರೀ ಪ್ರೀತಿಯ ಮಳೆ ಮಾತ್ರ ಸುರಿಸುತ್ತಿದ್ದೆ. ನಾನೂ ನನ್ನ ಆದರ್ಶ, ಭಾವನೆಗಳನ್ನು, ಸ್ವಭಾವಗಳನ್ನು ಮುಚ್ಚಿಟ್ಟುಬಿಟ್ಟೆ. ನೀನೇ ನಾನು, ನಾನೇ ನೀನು ಎಂಬ ಭ್ರಮೆಯಲ್ಲಿ ತೇಲ್ತಾ ಇದ್ದೆ. ನೀನು ಹಾಗೆ ಅಂದುಕೊಂಡಿದ್ದೆ ಅಲ್ವಾ? ನಾವಿಬ್ಬರೂ ಇಷ್ಟೊಂದು ಬುದ್ಧಿವಂತರಾಗಿ ಒಂದೇ ಒಂದು ದಿನ ಕೂಡ ಮನದಾಳವನ್ನು ತೆರೆದಿಡಲಿಲ್ಲ. ಭವಿಷ್ಯದ ಬಗ್ಗೆ ಕನಸು ಕಂಡಿದ್ದೇವೆ ವಿನಾ ಇದು ಹೀಗೆಯೇ ಇರಬೇಕು ಅನ್ನೋ ಕಲ್ಪನೆ ಕೂಡ ನಾನು ಪರಸ್ಪರ ಹೆಣೆಯಲಿಲ್ಲ. ಬರೀ ಪ್ರೇಮಿಗಳಾಗಿ ಉಳಿದುಬಿಟ್ಟೆವು.”

“ಈಗೇನಾಯ್ತು ಅಂತ ಭಾಷಣ ಮಾಡ್ತಾ ಇದ್ದಿಯಾ ರಿತು? ಇವತ್ತಲದಿದ್ದರೆ ನಾಳೆ ಅರ್ಥ ಮಾಡಿಕೊಂಡರೆ ಆಯ್ತು ಬಿಡು, ಇಡೀ ಬದುಕೇ ನಮ್ಮ ಮುಂದಿದೆ. ನಾವೇನು ಅನ್ನೋದು. ನಿಧಾನವಾಗಿ ಸ್ಟಡೀ ಮಾಡಿದ್ರೆ ಆಯಿತು.”

“ಅಷ್ಟು ಹೊತ್ತಿಗೆ ತಡವಾಗಿಬಿಟ್ರೆ ಹಿಂದಕ್ಕೆ ವಾಪಸ್ಸು ಬರಲಾರದಷ್ಟು ಮುಂದೆ ಹೋಗಿ ಪಶ್ಚಾತಾಪಪಡೋ ಹಾಗಾದ್ರೆ?” ಒಗಟಿನಂತೆ ನುಡಿದಳು.

“ಏನು ಹಾಗಂದ್ರೆ?” ಅರ್ಥವಾಗದೆ ಕೇಳಿದ.

“ನಮ್ಮಿಬ್ಬರ ಭಿನ್ನತೆ ಸ್ಪಷ್ಟವಾಗಿ ನನಗರಿವಾಗುತ್ತಾ ಇದೆ. ನೀನು ಬಯಸೋ ಹೆಂಡತಿಯಂತೆ ನಾನಿರಲಾರೆ. ನಾನು ಬಯಸೋ ಗಂಡನಂತೆ ನಿನ್ನಿಂದ ಇರಲು ಅಸಾಧ್ಯ. ಅದಕ್ಕೆ ನಾವು ಈಗಲೇ ತೀರ್ಮಾನ ತಗೊಂಡುಬಿಡೋಣ.”

“ಏನು ತೀರ್ಮಾನ ಈಗ ತಗೊಳ್ಳೋದು? ನಾವಿಬ್ಬರು ಮದ್ವೆ ಆಗಬೇಕು ಅನ್ನೋ ತೀರ್ಮಾನ ತಗೊಂಡು ಎಷ್ಟೊಂದು ದಿನಗಳಾದವು?” ಕೋಪದಿಂದ ಮುಖ ಕೆಂಪಾಯಿತು.

“ಸಿಟ್ಟಾಗಬೇಡ ಜಸ್ಸು. ವಿದೇಶದಲ್ಲಿರೋ ಗಂಡ ಸಿಗ್ತಾನೆ ಅಂದ್ರೆ ಕುಣಿದಾಡ್ಕೊಂಡು ಬರೋ ಹೆಣ್ಣು ನಿಂಗೆ ಹೆಂಡತಿಯಾಗಬೇಕು. ಹಣ, ಒಡವೆ, ಆಸ್ತೀನೇ ಹೆಚ್ಚು ಅನ್ನೋ ಹೆಣ್ಣು ನಿಂಗೆ ಸಿಗಬೇಕು. ನನ್ನ ಆದರ್ಶಗಳನ್ನು ಮೆಚ್ಚುವ, ಗೌರವಿಸುವ ಗಂಡು ನನ್ನ ಗಂಡನಾಗಬೇಕು. ಹಣ, ಆಸ್ತಿ ಅಂದ್ರೆ ಅಲಕ್ಷಿಸುವ, ಮನುಷ್ಯತ್ವಕ್ಕೆ ಸ್ಪಂದಿಸುವ, ಕರುಣೆ, ಅನುಕಂಪ ತುಂಬಿರೋ ಆದರ್ಶ ವ್ಯಕ್ತಿ ನನಗೆ ಸಿಗಬೇಕು.”

“ಅದೆಲ್ಲ ಈಗ ಹೇಗೆ ಸಾಧ್ಯ? ನೀನೇ ಅಂಥ ಹೆಣ್ಣಾಗಿ ಬದಲಾಗಬೇಕು. ನಂಗಾಗಿ ಅಷ್ಟು ಮಾಡೋಕೆ ಆಗಲ್ವಾ?” ಒತ್ತಾಯವಿತ್ತು ಧ್ವನಿಯಲ್ಲಿ.

“ಅದೇ ಬೇಡಿಕೆ ನಾನು ಇತ್ತರೆ? ಅಂದ್ರೆ ನೀನು ನನಗಾಗಿ ಬದಲಾದ್ರೆ?”

“ಸಾಧ್ಯವೇ ಇಲ್ಲ. ನಿನಗೋಸ್ಕರ ನನ್ನ ಇಷ್ಟು ದಿನದ ಕನಸು ಸಾಕಾರವಾಗ್ತ ಇರೋದನ್ನು ಬಿಟ್ಟು ನಿನ್ನ ಒಣ ಆದರ್ಶಗಳಿಗೆ ಬೆಲೆ ಕೊಡೋಕೆ ಸಾಧ್ಯನೇ ಇಲ್ಲ ರಿತು” ಕಡ್ಡಿ ತುಂಡಾದಂತೆ ಮಾತುಗಳು ಹೊರಟವು.

“ಥ್ಯಾಂಕ್ಸ್ ಜಸ್ಸು. ನೇರವಾಗಿ ಅಭಿಪ್ರಾಯ ತಿಳಿಸಿದ್ದಕ್ಕೆ. ನಿನ್ನಿಂದ ಅಸಾಧ್ಯವಾದದ್ದು ನನ್ನಿಂದ ಸಾಧ್ಯ ಎಂದು ಹೇಗೆ ನಿರೀಕ್ಷಿಸುತ್ತಿ? ಅದಕ್ಕೆ ಹೇಳಿದ್ದು ನಾವು ಈಗಲೇ ತೀರ್ಮಾನ ಕೈಗೊಳೋಣ ಅಂದದ್ದು. ಪ್ರೀತಿಸಿದ್ವಿ, ಒಳ್ಳೆಯ ಸ್ನೇಹಿತರಾಗಿದ್ದೆವು. ಮುಂದೆ ಕೂಡ ಸ್ನೇಹಿತರಾಗಿಯೇ ಇದ್ದುಬಿಡೋಣ. ನಿನ್ನ ಸ್ವಭಾವಕ್ಕೆ ಹೊಂದುವ ಹೆಣ್ಣು ನಿಂಗೆ ಸಿಗಲಿ ಅಂತ ಹಾರೈಸುತ್ತೇನೆ” ಎಂದವಳೇ ಮುಂದೆ ಮಾತು ಬೇಡವೆನ್ನುವಂತೆ ಎದ್ದು ನಿಂತಳು.

ಅವಾಕ್ಕಾಗಿ ನಿಂತುಬಿಟ್ಟ ಜಸ್ವಂತ್. ಶಾಕ್‌ನಿಂದ ತಕ್ಷಣವೇ ಹೊರಬರಲಾಗಲಿಲ್ಲ. ರಿತು ಇಷ್ಟೊಂದು ಕಠಿಣಳಾಗಬಹುದೇ? ನಸುನಗು ಚೆಲ್ಲುತ್ತ, ಮಿದು ಮಾತನಾಡುವ ಸ್ನೇಹಮಯ ರಿತುವನು ಇದುವರೆಗೆ ನೋಡಿದ್ದನೇ ವಿನಾ ಖಂಡಿತವಾಗಿಯೂ ಕಡ್ಡಿ ತುಂಡಾದಂತೆ ನಿಷ್ಟುರವಾಗಿಯೂ ಮಾತಾಡಬಲ್ಲ, ಯಾರಿಗಾಗಿಯೂ ತನ್ನ ಸ್ವಂತಿಕೆಯನ್ನು ಬಿಡಲಾರದ ಛಲವಂತ ರಿತುವನ್ನು ನೋಡಿದ್ದೆ ಈಗ. ಅದೂ ಬಾಳಿನ ನಿರ್ಧಾರದ ಪ್ರಶ್ನೆ ಬಂದಾಗ ಈ ರೀತಿ ವರ್ತಿಸಿಯಾಳೆಂಬ ಸುಳಿವು ಕೂಡ ಸಿಕ್ಕಿರಲಿಲ್ಲ. ಇನ್ನೇನು ಮೆಚ್ಚಿದವಳನ್ನು ಕೈಹಿಡಿದು ಇಷ್ಟು ದಿನಗಳ ಪ್ರೇಮವನ್ನು ಸಾರ್ಥಕಪಡಿಸಿಕೊಂಡು ವಿದೇಶಕ್ಕೆ ಹೆಂಡತಿಯೊಂದಿಗೆ ಹಾರಿ, ಅಲ್ಲಿ ಹೊಸ ಬದುಕು, ಅದು ತನ್ನ ಒಲುಮೆಯ ರಿತುವಿನೊಂದಿಗೆ ಹೊಸ ಸಂಸಾರ ಎಂದು ಕನಸು ಕಂಡಿದ್ದವನಿಗೆ ಈಗ ಇದೆಲ್ಲ ಮರೀಚಿಕೆಯಾಗುತ್ತಿದೆಯೇ ಎನಿಸಿ ಖೇದವಾಯಿತು, ದುಃಖವಾಯಿತು.

ಯಾರು ಎಷ್ಟೇ ಹೇಳಿದರೂ ರಿತು ತನ್ನ ನಿರ್ಧಾರ ಬದಲಾಯಿಸದಾದಳು. ಮದುವೆಯೊಂದೇ ಅಂತಿಮ ಗುರಿಯಲ್ಲ. ಅದಿಲ್ಲದಿದ್ದರೂ ನಾನು ಬಾಳಬಲ್ಲೆ. ತನ್ನ ಮುಂದೆ ಗುರಿಯಿದೆ. ಆ ಗುರಿಯತ್ತ ಸಾಗಿ ತನ್ನ ಬದುಕನ್ನು ಸಾರ್ಥಕಪಡಿಸಿಕೊಳ್ಳುತ್ತೇನೆ ಎಂದುಬಿಟ್ಟಳು. ಮನು, ತನುಜಾ ಇವರ್ಯಾರಿಗೂ ರಿತುವಿನ ನಿರ್ಧಾರ ಸರಿ ಕಾಣಲಿಲ್ಲ. ಆದರ್ಶ ಮುಖ್ಯ. ಆದರೆ ಅದಕ್ಕಾಗಿ ಅಷ್ಟೊಂದು ವರ್ಷಗಳ ಪ್ರೇಮವನ್ನು ತ್ಯಾಗ ಮಾಡುವ ಅನಿವಾರ್ಯತೆ ಇಲ್ಲ. ಜಸ್ವಂತನ ತಂದೆ-ತಾಯಿ ಕೂಡ ಬಂದು ಪರಿಪರಿಯಾಗಿ ಪ್ರಯತ್ನಿಸಿ ವಿಫಲರಾದರು. ಈ ಹೆಣ್ಣು ಒಂದು ಮೂರ್ಖ ಹೆಣ್ಣು ಎಂದೇ ಭಾವಿಸಿ ಪ್ರಯತ್ನ ಕೈಬಿಟ್ಟರು.

ಜಸ್ವಂತ್ ಹೊರಡುವ ದಿನ ರಿತು ಕೂಡ ಬಂದು ಶುಭ ಹಾರೈಸಿದಳು. “ನಿಂಗೆ ಎಲ್ಲಾ ಒಳ್ಳೆಯದಾಗಲಿ. ಆದಷ್ಟು ಬೇಗ ನಿನಗೊಪ್ಪುವಂಥ ಹುಡುಗಿಯನ್ನು ಮದುವೆ ಆಗಿ ಅಪ್ಪ-ಅಮ್ಮನ ಆಸೆನಾ ಈಡೇರಿಸು” ಎಂದಳು.

ವಿಷಾದ ಮಡುಗಟ್ಟಿದ ಕಣ್ಣುಗಳಿಂದ ರಿತುವನ್ನು ದಿಟ್ಟಿಸಿ, ‘ನೀನು ತುಂಬಾ ಕಟುಕಳು ರಿತು. ನನ್ನ ಈ ರೀತಿ ಒಂಟಿ ಮಾಡುವ ಕೆಟ್ಟ ಬುದ್ದಿ ನಿನಗ್ಯಾಕೆ ಬಂತೋ? ನನ್ನ ಜತ ನೀನು ಬರುವಂತಿದ್ದರೆ’ ನಿರಾಶೆ ತುಂಬಿದ ಮಾತುಗಳು, ಆ ವಿಷಾದ, ಆ ನೋವು ಕ್ಷಣ ರಿತುವನ್ನು ಅಲುಗಾಡಿಸಿಬಿಟ್ಟವು. ಆ ವಿಷಾದ ತುಂಬಿದ ಕಂಗಳಲ್ಲಿ ತಾನೊಂದೇ ಒಂದು ಮಾತು ನುಡಿದು ಮಿಂಚು ಹರಿಸಲೇ, ಅವನಾಸೆಗೆ ಸ್ಪಂದಿಸಿಬಿಡಲೇ ಎಂದುಕೊಂಡಳು. ಆದರೆ ಈ ಗಳಿಗೆಯಲ್ಲಿ ನಾನು ದುರ್ಬಲಳಾಗಿ ಬಿಟ್ಟರೆ, ಸೆಂಟಿಮೆಂಟ್‌ಗೆ ಬಲಿಯಾಗಿಬಿಟ್ಟರೆ ಮುಂದೆ ಬಹಳ ಪಶ್ಚಾತ್ತಾಪಪಡಬೇಕಾದೀತು ಎಂದು ಮನಸ್ಸು ಎಚ್ಚರಿಸಿದಾಗ, ನೋವು ತುಂಬಿದ ಮನಸ್ಸಿನಿಂದಲೇ ಬೀಳ್ಕೊಟ್ಟಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆಯೆಂದರೆ
Next post ಗಂಡು

ಸಣ್ಣ ಕತೆ

 • ಹಳ್ಳಿ…

  ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಬೆಟ್ಟಿ

  ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

 • ಬಾಳ ಚಕ್ರ ನಿಲ್ಲಲಿಲ್ಲ

  ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys