ಬಾಳಿಗಾಹಾರ ಹೇಗೋ ಹಾಗೆ ನೀ ನನಗೆ,
ಬೇಸಿಗೆಯ ನೆಲಕೆ ಮಳೆಧಾರೆ ಸುರಿದಂತೆ;
ನನ್ನ ಈ ತುಯ್ತಗಳು ಎಲ್ಲವೂ ನಿನಗಾಗೇ
ಜಿಪುಣನಿಗು ಅವನ ನಿಧಿಗೂ ನಡುವೆ ಇರುವಂತೆ.
ನಿನ್ನ ಬಗೆಗಿನ ಹೆಮ್ಮೆ ಒಮ್ಮೆ, ಮರುಗಳಿಗೆಯೇ
ಕಾಲ ನಿನ್ನೀ ಚೆಲುವ ಕದಿವನೆನ್ನುವ ಶಂಕೆ;
ನಿನ್ನೊಬ್ಬನೊಂದಿಗೇ ಇರುವ ಅಪೇಕ್ಷೆ ಒಡನೆ
ಜಗವೆಲ್ಲ ನನ್ನ ಭಾಗ್ಯವ ಕಾಣಲೆಂಬಾಸೆ;
ನಿತ್ಯ ಕಾಣುತ್ತ ಕಣ್ಣಿಗೆ ಹಬ್ಬ ಕೆಲವು ಸಲ,
ದೂರವಿದ್ದಾಗಲೋ ಉಪವಾಸ ಹಲವು ಸಲ;
ಏನು ಗಳಿಸುವ ಯತ್ನದೊಳಗೂ ಹರ್‍ಷವೆ ಇಲ್ಲ,
ನಿನ್ನಿಂದ ಪಡೆದದ್ದೆ, ಪಡೆಯಲಿರುವುದೆ ಎಲ್ಲ.
ಭೂರಿಭೋಜನ ಅಥವ ಉಪವಾಸ ಹೀಗಿರುವೆ,
ತಿಂದು ತೇಗುವೆ, ಇಲ್ಲ ಏನೂ ಇರದಿರುವೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 75
So are you to my thoughts as food to life
















