ಚಿನ್ನೂ,
ಅಷ್ಟಕ್ಕೂ ಏನನ್ನು ಹುಡುಕಿಕೊಂಡು ದಾವಣಗೆರೆಗೆ ಹಿಂದಿರುಗಿ ಹೊರಟಿದ್ದೆ? ಅವ್ವನ ಪ್ರೀತಿಯನ್ನು, ವಿಶ್ವಾಸವನ್ನು ಮರಳಿ ಪಡೆಯುವುದಕ್ಕಾ? ಕಳಚಿಕೊಂಡು ಹೋಗಿದ್ದ ಬಾಂಧವ್ಯದ ಕೊಂಡಿಗಳನ್ನು ಮತ್ತೆ ಒಂದುಗೂಡಿಸಿ ನಿಷ್ಕಲ್ಮಷ ಪ್ರೀತಿಯನ್ನು ಪಡೆಯುವುದಕ್ಕಾ? ನನಗೆ ತಿಳಿಯಲಿಲ್ಲ. ಮುರಿದ ಬಾಂಧವ್ಯದ ಸರಳಿಯ ಸರಪಳಿ ಕಿತ್ತು ಹೋಗಿತ್ತು. ಮತ್ತೆಂದೂ ಸೇರಿಸಲಾರದಂತೆ…! ಅದು ಅರ್ಥವಾದಾಗ ತುಂಬಾ ತಡವಾಗಿತ್ತು. ನಾನು ಯಾವಾಗಲೂ ಹಾಗೆಯೇ Impulsive ಯೋಚನೆಗಳನ್ನು ಕಟ್ಟಿಹಾಕಬಹುದು… ತಡೆದು ಹಿಡಿಯಬಹುದೆಂದು ಕೊಂಡಿದ್ದೆ. ಪ್ರಬುದ್ಧಳಾಗಿದ್ದೀನೀಂತ ಅಂಡ್ಕೊಂಡಿದ್ದೆ… ಇಲ್ಲ… ಪೆದ್ದಿಯಾಗಿದ್ದೆ. ಎಲ್ಲವೂ, ಎಲ್ಲರ ಮನಸ್ಸು ಸ್ವಾರ್ಥ… ಕಡೆಗಣಿಸುವಿಕೆ… ನಿಚ್ಚಳವಾಗಿ ಕಾಣುತ್ತಿತ್ತು. ಇರುಳು ಕಂಡ ಬಾವಿಗೆ ಹಗಲು ಹೋಗಿ ಬೀಳುವಂತೆ… ಹೌದು… ನಾನಿದ್ದಿದ್ದೇ ಹಾಗೆ… ನನ್ನ ಪ್ರಕೃತಿಯೇ ಹಾಗಿತ್ತು. ಅವರುಗಳು ಬೆನ್ನಿಗಿರಲಿ, ಎದುರಿಗೇ ಬಂದು ಚೂರಿ ಹಾಕಿದರೂ ಪ್ರೀತಿಸುತ್ತಿದ್ದೆ. ಬಾಂಧವ್ಯದ ನಂಟು ಎಂದುಕೊಂಡೆ.
ಆದರೆ ನಂಬಿಕೆ, ವಿಶ್ವಾಸ ಯಾವಾಗಲೋ ಸತ್ತು ಹೋಗಿತ್ತು. ಯಾರನ್ನೂ ನಂಬದಿರಲು ನಾನೇನು Paranoid ಆಗಿರಲಿಲ್ಲ. ಒಂದೊಂದು ಸಂದರ್ಭದಲ್ಲಿ ಒಬ್ಬೊಬ್ಬರು ತಮಗೆ ತೋಚಿದ ರೀತಿಯಲ್ಲಿ ನಂಬಿಕೆಯನ್ನು ಕೊಂದು ಹಾಕಿದ್ದರು! ನಾನು ನಂಬುತ್ತೇನೆಂದೇ ಮಾತನಾಡಲು ಬರುತ್ತಿದ್ದರು. ನಾನೂ ನಂಬಿದಂತೆ ನಟಿಸುತ್ತಿದ್ದೆ… ಪ್ರೀತಿ, ಬಾಂಧವ್ಯ ಕಳೆಗಟ್ಟಲು ಹಣ, ಆಸ್ತಿಯೊಂದಿದ್ದರೆ ಸಾಕೆನ್ನಿಸಿತ್ತು ಅವರುಗಳಿಗೆ. ಅಷ್ಟಕ್ಕೂ ನನಗದೆಲ್ಲಾ ಬೇಕೇ ಆಗಿರಲಿಲ್ಲ ನಿಂಗೆ ಗೊತ್ತಲ್ವಾ ಚಿನ್ನು? ಹೊನ್ನು, ಮಣ್ಣು… ಬಟ್ಟೆಗಳಿಗೆ ಎಂದೂ ನಾನು ಆಕರ್ಷಿತಳಾಗಿರಲಿಲ್ಲ… ತುತ್ತು ಅನ್ನ ಬೊಗಸೆ ತಿನ್ನೋಕೆ, ನೀರು ಮಾನ ಮುಚ್ಚಲು ಒಂದು ತುಂಡು ಬಟ್ಟೆ ಸಾಕು ಎನ್ನುವಷ್ಟು ವೈರಾಗ್ಯ ಬಂದುಬಿಟ್ಟಿತ್ತು ದಾವಣಗೆರೆಗೆ ಬಂದ ಕೆಲವು ದಿನಗಳಲ್ಲಿ!
ಏನೇನೋ ಬರೀತಾ ಇದ್ದೀನಿ ಅಲ್ವಾ? ಬೆಂಗಳೂರಿನಲ್ಲಿದ್ದ ‘ಅಪಾರ್ಟ್‌ಮೆಂಟ್’ ಮಾರಿಬಿಟ್ಟು, ಅದೇ ಹಣದಿಂದ ದಾವಣಗೆರೆಯಲ್ಲೊಂದು ಮನೆ ಕೊಂಡುಕೊಳ್ಳ ಬೇಕಿತ್ತು… ಬೆಂಗಳೂರು ಬದಲಾಗಿತ್ತು. ದೊಡ್ಡ ದೊಡ್ಡ ಬಂಗಲೆಗಳು, ಮನೆಗಳು, ಸ್ಮಶಾನದ ಜಾಗದಲ್ಲೂ ಮನೆ ಎದ್ದು ನಿಂತಿದ್ದವು. ಜನಸಂಖ್ಯೆಯೂ ಬೆಂಗಳೂರಿನಂತೆ ಹೆಚ್ಚಾಗಿತ್ತು. ಪೂರ್ತಿ ಬದಲಾಗಿತ್ತು. ಪ್ರಜಾವಾಣಿ ಕಛೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಮಂಗಳಾ ಪ್ರಕಾಶ್ ಅವರು ದಾವಣಗೆರೆಯವರು, ನನ್ನ ಸ್ನೇಹಿತೆಯೂ ಕೂಡಾ… ಅವರ ಸಂಬಂಧಿಕರೊಬ್ಬರಿಗೆ ಫೋನ್ ಮಾಡಿ ‘ರಿಯಲ್ ಎಸ್ಟೇಟ್ ಮೂಲಕ, ಬಡಾವಣೆಯೊಂದರಲ್ಲಿ ಮನೆಯೊಂದು ನನಗೆ ದೊರಕುವಂತೆ ಮಾಡಿದ್ದರು. ಅಪಾರ್ಟ್‌ಮೆಂಟನ್ನು ವೃದ್ಧ ದಂಪತಿಗಳು ಕೊಂಡುಕೊಂಡರು. ಒಂದು ತಿಂಗಳೊಳಗೆ ಮನೆ ಮಾರಿ ದಾವಣಗೆರೆಯಲ್ಲೊಂದು ಕೊಂಡು ಕೊಂಡಾಗಿತ್ತು. ಸಾಮಾನುಗಳನ್ನೆಲ್ಲಾ ಲಾರಿಗೆ ತುಂಬಿ ಅಲ್ಲಿಂದ ಹೊರಟಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಮಲ್ಲೇಶ್… ಆಗಲೇ ಲಾರಿಯಲ್ಲಿ ಕುಳಿತಿದ್ದ. ಮಲ್ಲೇಶ್ ನಿಂಗೆ ನೆನಪಿರಬೇಕಲ್ವಾ ಚಿನ್ನು?
ಆಟೋ ಓಡಿಸುತ್ತಿದ್ದ ಯುವಕ ತುಂಬಾ ಒಳ್ಳೆಯವರು, ಶಿಸ್ತು, ಸಂಯಮವನ್ನು ಅವನಿಂದ ಕಲಿಯಬೇಕು. ನನಗೆ ಕಾರು ಡ್ರೈವಿಂಗ್ ಸರಿಯಾಗಿ ಬರುತ್ತಿರಲಿಲ್ಲವಲ್ಲವಾ? ಬೇಕೆನಿಸಿದಾಗ ಅವನು ಡ್ರೈವಿಂಗ್‌ಗೆ ಬರುತ್ತಿದ್ದ. ಅವನೀಗ ಕೋಟ್ಯಾಧಿಪತಿ ಆಗಿದ್ದಾನೆ. ಬಿಡು… ಎಷ್ಟೋ ಎಕರೆ ಜಮೀನನ್ನು ಬಿಲ್ಡರ್ಸ್ ಗೆ ಕೊಟ್ಟು ಹತ್ತು ಅಪಾರ್ಟ್‌ಮೆಂಟುಗಳನ್ನು ತಾನಿಟ್ಟುಕೊಂಡಿದ್ದಾನಂತೆ. ಅದೇ ಸರಳತೆ, ಪ್ರೀತಿ, ವಾತ್ಸಲ್ಯ ಅಂತಹ ಒಬ್ಬ ಮಗನಿದ್ದವರೇ ಪುಣ್ಯವಂತರು ಎಂದೆನ್ನಿಸುತ್ತಿತ್ತು. ಒಬ್ಬಳೇ ದಾವಣಗೆರೆಗೆ ಹೊರಟಿರೋದು ತಿಳಿದು ಇಡೀ ದಿನಾ ನನ್ನ ಜೊತೆಯೇ ಇದ್ದ ಮನೆ ಸಾಮಾನುಗಳನ್ನು ಜೋಡಿಸುವುದರಲ್ಲಿ ‘ಷಿಫ್ಟ್’ ಮಾಡುವಲ್ಲಿ ತುಂಬಾ ಸಹಾಯ ಮಾಡಿದ್ದ. ನಂಜೊತೆಗೆ ದಾವಣಗೆರೆ ಯವರೆಗೂ ಬಂದಿದ್ದ… ಮನೆ ಸಜ್ಜು ಮಾಡುವತನಕವೂ ನಂಜೊತೆಯಿದ್ದು ಮರುದಿನ ಹೋಗಿದ್ದ.
ಚಿನ್ನೂ, ಮನೆಗಾಗಲೇ ಸುಣ್ಣ ಬಳಿದಿದ್ದರು. ಅವ್ವನನ್ನು ಕರೆದುಕೊಂಡು ಬಂದಿದ್ದೆ. ಯಾಕೋ ಪ್ರತಿಭಟಿಸಿರಲಿಲ್ಲ. ನನಗೆ ಆಶ್ಚರ್ಯವಾಗಿತ್ತು. ಆದರೆ ಬಾಯ್ಬಿಟ್ಟು ಕೇಳಲಿಲ್ಲ. ತುಂಬಾ ದೊಡ್ಡ ಮನೆ… ದೊಡ್ಡ ದೊಡ್ಡ ರೂಮುಗಳು, ಹಾಲ್, ಕಾರ್ ಪಾರ್ಕಿಗೆ ಕಾಂಪೌಂಡ್ ಇದ್ದ ಮನೆ. ನೀನೂ ನೋಡಿದ್ದೀಯಲ್ಲವಾ?
ಸ್ವಂತ ಮನೆ ಅವ್ವನ ಸಾಂಗತ್ಯ ನನಗೆ ಭದ್ರಕೋಟೆಯಲ್ಲಿದ್ದಂತೆ ಬೀಗಿದ್ದೆ. ಕಳೆದು ಹೋದ ದಿನಗಳೇ ಇನ್ನು ಮುಂದೆ ಬರಲಾರವು… ಅವ್ವನ ಇಚ್ಛೆಯಂತೆ ಗಣ ಹೋಮ ಮಾಡಿಸಿದ್ದೆ. ಕರೆದವರೆಲ್ಲಾ ಬಂದಿದ್ದರು. ಆದರೆ ನನ್ನ ತಂಗಿ, ಮತ್ತವಳ ಕುಟುಂಬದವರು ಮಾತ್ರ ಬಂದಿರಲಿಲ್ಲ.
“ಎಲ್ಲರೂ ಮೊದಲಿನ ಹಾಗೆ ಒಟ್ಟಿಗೇ ಇರಬಹುದೂಂತ ಇಷ್ಟು ದೊಡ್ಡ ಮನೆ ತಗೊಂಡಿದ್ದಾಯ್ತು. ಆದರವರು ಪೂಜೆಗೇ ಬರಲಿಲ್ಲ. ನನ್ನ ಮೇಲ್ಯಾಕೆ ಸಿಟ್ಟು? ದ್ವೇಷ? ನಾನ್ಯಾರಿಗೂ ಏನನ್ನೂ ಕೆಟ್ಟದ್ದು ಮಾಡಿದ ನೆನಪಿಲ್ಲ…” ಹೇಳತೊಡಗಿದ್ದ ನನ್ನ ಮಾತನ್ನು ಅರ್ಧದಲ್ಲಿಯೇ ತಡೆದ ಅವ್ವ,
“ನೀನು ಅವಳ ಬಗ್ಗೆ ಏನನ್ನೂ ಕೇಳಬಾರದು. ನಾನು ಹೇಳುವುದೂ ಇಲ್ಲ. ನನಗವಳ ಮೇಲೆ ಯಾವ ಸಿಟ್ಟು ಬೇಸರವಿಲ್ಲ. ನಿನ್ನ ಬಗ್ಗೆ ಹಾಗೇಕೆ ನಡ್ಕೋತಿದ್ದಾಳೇಂತ ನನ್ನನ್ನು ಕೇಳಲೇಬೇಡಾ… ನಾನು ಸೋತು ಬಂದಿಲ್ಲ. ಹೆದರ್ಕೊಂಡು ಬರ್ಲಿಲ್ಲ… ನೀನು ಒಂಟಿಯಾಗಿಬಿಡ್ತೀಯಾಂತ ಬಂದಿದ್ದೀನಿ” – ನಿಷ್ಠುರವಾಗಿ ಹೇಳಿದ್ದಳು.
ಆ ಕ್ಷಣ ನಾನು ಚಳಿಯಲ್ಲಿದ್ದವಳಂತೆ ನಡುಗಿದ್ದೆ…! ಮುಂದೆಂದೂ ನನ್ನ ತಂಗಿಯ ಬಗ್ಗೆ ಅವ್ವನೊಡನೆ ಮಾತನಾಡಲಿಲ್ಲ. ಅದರ ಅಗತ್ಯವೂ ನನಗಿರಲಿಲ್ಲ. ತನ್ನ ಕುಟುಂಬದೊಂದಿಗೆ ಸುಖವಾಗಿದ್ದರೆ ಸಾಕು ಎಂದುಕೊಂಡಿದ್ದೆ. ಅವಳಿಗೂ ಅವಳದ್ದೇ ಆದ ಆಸೆ-ಆಕಾಂಕ್ಷೆಗಳು ಇವೆ ಅಲ್ವಾ ಚಿನ್ನೂ. ಏನೇ ಆದರೂ ಅವಳು ನನ್ನ ತಂಗಿಯಾಗಿದ್ದಳು. ನಾನು ಅವಳ ತಾಯಿಯಂತೇ ಇರಬೇಕೆಂದು ಕೊಂಡಿದ್ದೆ. ಏಕೋ… ಏನೋ… ಅವಳಿಗೆ ನನ್ನ ಸಹವಾಸ ಬೇಡವಾಗಿತ್ತು. ಹೋಗಲಿ ಬಿಡು. ತಂಗಿಯ ದೊಡ್ಡ ಮಗಳು ತನ್ನ ಗಂಡನೊಂದಿಗೆ ಪೂಜೆ ನಡೆಸಿಕೊಟ್ಟಳು. ಅವ್ವನಿಗೆ ಮೊಮ್ಮಗಳು, ಮೊಮ್ಮಗ ಅಂದರೆ ಪ್ರಾಣ. ಅವರೊಡನೆ ಸಣ್ಣಪುಟ್ಟ ಜಗಳ, ನಂತರದ ರಾಜಿಯಲ್ಲಿಯೇ ದಿನ ಕಳೆದುಹೋಗುತ್ತಿತ್ತು. ಅವರನ್ನು ನೋಡದೇ ಅವ್ವ ಮಂಕಾಗುತ್ತಿದ್ದಳು.
ಅವ್ವನನ್ನು ಕರೆದುಕೊಂಡು ಎಲ್ಲಾ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿ ಮಾತ್ರೆಗಳನ್ನು ತೆಗೆದುಕೊಂಡು ಬಂದಿದ್ದೆ. ಅವ್ವನಿಗೆ ದೊಡ್ಡ ರೂಮೊಂದನ್ನು ತೆರವು ಮಾಡಿಸಿ ಎಲ್ಲಾ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿರುವ ಸ್ಪೆಷಲ್ ವಾರ್ಡಿನಂತೆ ತಯಾರು ಮಾಡಿದ್ದೆ. ಆ ರೂಮಿಗೆ ಅಟ್ಯಾಚ್ ಬಾತ್‌ರೂಂ ಇದೆ. ಅಲ್ಲಿಗೇ ಟಿವಿಯನ್ನು ಹಾಕಿಸಿದ್ದೆ. ಹಣ್ಣುಗಳನ್ನು, ನೀರು ಎಲ್ಲವೂ ಆಕೆಯ ಕೈಗೆಟುಕುವಂತೆ ಟೀಪಾಯ್ ಮೇಲೆ ಜೋಡಿಸಿಟ್ಟೆ, ಸಮಾಧಾನವಾಗಿತ್ತು. ಪ್ರತಿದಿನಾ ಬೆಳಿಗ್ಗೆ ಅವ್ವನೇ ಸ್ನಾನಕ್ಕೆ ಹೋಗುತ್ತಿದ್ದರೂ ನಾನೇ ಸಹಾಯ ಮಾಡುತ್ತಿದ್ದೆ. ತಲೆ ಬಾಚುತ್ತಿದ್ದೆ. ದಿನವೂ ಮೇಲು-ಹೊದಿಕೆಗಳನ್ನು ಬದಲಾಯಿಸುತ್ತಿದ್ದೆ. ಅವ್ವ ಹಾಯಾಗಿರುವಂತೆ ನೋಡಿಕೊಳ್ಳುವ ಪ್ರಯತ್ನ ನನ್ನದಾಗಿತ್ತು. ಅವ್ವನ ರೂಮಿನ ಪಕ್ಕದ ರೂಮಿನಲ್ಲಿ ನನ್ನ ವಾಸ್ತವ್ಯ. ರಾತ್ರಿಯಿಡೀ ಮೆಲುವಾಗಿ ಹಾಡುಗಳನ್ನು ಕೇಳುವುದು, ಓದುವುದು ನನಗಂಟಿದ್ದ ಕೆಟ್ಟ ಅಭ್ಯಾಸವಾಗಿತ್ತು. ಅವ್ವ, ಯಾವುದಕ್ಕಾದರೂ ಕರೆದರೆ ಹೋಗುವಂತಾಗಿತ್ತು.
ದಿನಗಳು ಅದೆಷ್ಟು ಬೇಗನೆ ಕಳೆದುಹೋಗಿದ್ದವು ಚಿನ್ನು. ಮನೆ, ಅಡಿಗೆ ಊಟ ಅವ್ವನ ಆರೈಕೆಯಲ್ಲಿ ನಾನು ನೆಮ್ಮದಿಯನ್ನು ಕಂಡುಕೊಳ್ಳತೊಡಗಿದ್ದೆ. ಆ ಸುಖವೂ ವಿಧಾತನಿಗೆ ಸಹ್ಯವಾಗಿರಲಿಲ್ಲವೋ… ಏನೋ…?
ಅವ್ವನ ಆರೋಗ್ಯ ಇದ್ದಕ್ಕಿದ್ದ ಹಾಗೆ ಹದಗೆಟ್ಟಿತ್ತು. ಹೃದಯ ರೋಗ ತಜ್ಞರು `Heart Block’ ಆಗಿದೆ, Pace Makerನ್ನು ಅಳವಡಿಸಬೇಕಾಗುತ್ತದೆ ಎಂದರು. ನಾನು ಹೆದರಿಬಿಟ್ಟಿದ್ದೆ. ‘Pace Maker’ ಅಳವಡಿಸುವ ಶಸ್ತ್ರಕ್ರಿಯೆ ಸಾಮಾನ್ಯವಾಗಿರಲಿಲ್ಲ! ಹಾಕಿಸದಿದ್ದರೂ ಕಷ್ಟ ಹಾಕಿಸುವುದು ಕಷ್ಟವಾಗಿತ್ತು. ನಾನೇನೋ ಧೈರ್ಯ ಮಾಡಿದ್ದೆ. ಆದರೆ ಉಳಿದವರನ್ನು ಕೇಳಬೇಕಾಗಿರುವುದು ನನ್ನ ಕರ್ತವ್ಯವಾಗಿತ್ತು. ನನ್ನ ತಂಗಿ, ನನ್ನ ಅವ್ವ ಪ್ರೀತಿಯಿಂದ ಬೆಳೆಸಿದ ನನ್ನ ಚಿಕ್ಕಮ್ಮನ ಮಕ್ಕಳು, ನನ್ನ ಚಿಕ್ಕಮ್ಮ ಎಲ್ಲರಿಗೂ ವಿಷಯ ತಿಳಿಸಿ ವಿಷಯದ ಬಗ್ಗೆ ಮಾಹಿತಿ ಕೊಟ್ಟೆ ಎಲ್ಲರಿಗೂ ಒಂದು ಕ್ಷಣ ಗಾಬರಿಯಾಗಿತ್ತು. ನಂತರ ಎಲ್ಲರೂ ಮಾತನಾಡಿಕೊಂಡು ಬಂದು ನಿರ್ಧಾರಕ್ಕೆ ಬಂದರೂಂತ ಕಾಣುತ್ತೆ.
“ಮನೆಗೇ ನೀನೇ ದೊಡ್ಡವಳು… ಡಾಕ್ಟರ್ ಕೂಡಾ. ನಮಗೇನು ತಿಳಿಯುತ್ತೆ? ನಿಂಗೇನು ಅನ್ನಿಸಿತ್ತೋ ಹಾಗೆ ಮಾಡು. ಆಪ್ರೇಷನ್ ಅಂದ್ರೆ ರಿಸ್ಕ್ ಇದ್ದೇ ಇರುತ್ತಲ್ವಾ?”-ಎಂದು ನನ್ನ ತಂಗಿ ಎಲ್ಲರ, ಪರವಾಗಿ ಹೇಳಿದ್ದಳು.
ನನಗೆ ಗೊತ್ತಿತ್ತು. ನನ್ನ ಜವಾಬ್ದಾರಿಯೇ ಹೆಚ್ಚು ಹಾಗೂ ಮುಖ್ಯವಾಗುತ್ತೆ. ಶಸ್ತ್ರ ಕ್ರಿಯೆಯ ರಿಸ್ಕ್ ನನಗೆ ಗೊತ್ತಿದ್ದರಿಂದ ನನಗೆ ಆತಂಕ… ಭಯ ಶುರುವಾಗಿತ್ತು. ಅವ್ವನ ಜೊತೆಯಿರಲು ಎಲ್ಲವನ್ನೂ ಎಲ್ಲರನ್ನೂ ಬಿಟ್ಟು, ಎಲ್ಲೋ ಒಂದು ಕಡೆ ಇದ್ದರಾಯ್ತು ಎಂದು ಬೆಂಗಳೂರಿನಲ್ಲೇ ಉಳಿದುಕೊಳ್ಳುವ ತೀರ್ಮಾನಕ್ಕೆ ಬಂದಿದ್ದೆ. ಆದರೆ ಅವ್ವನ ಸ್ಥಿತಿ ನೋಡಿ ನನ್ನ ನಿರ್ಧಾರ ಬದಲಾಗಿತ್ತು. ಈಗಲಾದರೂ ಆರಾಮವಾಗಿರಬಹುದೆಂದುಕೊಂಡಿದ್ದೆ. ಈಗ ನೆಮ್ಮದಿಯೂ ಹೋಗಿ ಬಿಡುವಂತಾಗಿತ್ತು. ಅವ್ವನನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾನಿರಲಿಲ್ಲ. ನನಗೆ ಅವ್ವನ ಇರುವು ಸುಭದ್ರವಾದ ಕೋಟೆಯಂತಿತ್ತು… ಇಲ್ಲದಿದ್ದರೆ ನಾನು ಈ ಜನಾರಣ್ಯದಲ್ಲಿ ಒಂಟಿಯಾಗಿ ಮೃಗಗಳಿಗೆ ಸುಲಭವಾದ ಬೇಟೆಯಂತಾಗಿಬಿಡುವ ಭಯವಿತ್ತು. ಯಾಕೆ ಹೀಗೆ ಆಗ್ತಿದೆ ನನ್ನ ಬದುಕಿನಲ್ಲಿ? ಯಾಕೆ? ಪೂರ್ವಜನ್ಮದ ಶಾಪ, ಪಾಪವೇ ಇಲ್ಲ ಅವ್ವನ ಕನಸುಗಳನ್ನು ಸಮಾಧಿ ಮಾಡಿದ್ದರ ಪಾಪವೇ? ಯಾಕೋ ತುಂಬಾ ಅಳು ಬಂದುಬಿಟ್ಟಿತ್ತು. ಮೂಲೆಗೆ ಆತುಕೊಂಡು ಅತ್ತುಬಿಟ್ಟಿದ್ದೆ. ನಾನು ಅಳುವುದನ್ನು ಉಳಿದವರು ನೋಡಬಾರದಿತ್ತು ಎಂಬ ಭಾವನೆಯಿಂದ ನಡುಗುತ್ತಿದ್ದ ಕೈಗಳಿಂದ ಶಸ್ತ್ರಕ್ರಿಯೆಯ ಒಪ್ಪಿಗೆಯ ಪುಟಕ್ಕೆ ಸಹಿ ಮಾಡಿದ್ದೆ. ಸಂಕಟವನ್ನು ಹತ್ತಿಕ್ಕಿಕೊಂಡಿದ್ದೆ. ಅವ್ವನಿಗೆ ಯಾವುದೇ ವಿಷಯವನ್ನು ಹೇಳುವ ಕೇಳುವ ಸ್ಥಿತಿಯಲ್ಲಿರಲಿಲ್ಲ ಚಿನ್ನು.
*****
ಮುಂದುವರೆಯುವುದು