ಆಂಗ್ಲರಾ ರಾಕ್ಷಸೀ ರಾಜಕಾರಣ ನಿಪುಣ!
ಆಂಗ್ಲರಾ ಸಾಮ್ರಾಜ್ಯಮದ ಹೆತ್ತ ಚಾಣಿಕ್ಯ!
ಕೃಷ್ಣ ಕಾರಸ್ಥಾನಿ! ತೃಷ್ಣೆಯಿಂದ ಸುರಗಣ-
ವಿಟ್ಟಾಕಿರೀಟದಲಿ ಕೆಚ್ಚಿರುವ ಮಾಣಿಕ್ಯ!

ವೈಶ್ಯಪುತ್ರರ ಕೈಲಿ ಕುಣಿವ ಕುಹಕ ಕುತಂತ್ರಿ!
ಆಂಗ್ಲವೀರರ ಕೀರ್‍ತಿಯನ್ನೆ ನುಂಗುವ ರಾಹು!
ಸೈತಾನನನುವಂಶದನುದಿನದ ಧನ್ವಂತ್ರಿ!
ನಿನ್ನಂಥ ಕೇತುಗಳಿಗೂ ಭೂಮಿಯಲಿ ಠಾವು!

ನೋಡದೋ, ರೋದಿಸುವರಾಂಗ್ಲ ಕವಿವರರೆಲ್ಲ
ತಮ್ಮ ನಾಡಿನಲೆಂತು ಕೇಡಿದುದಯಿಸಿತೆಂದು!
ಕಣ್ಣಿಲ್ಲ, ಕಿವಿಯಿಲ್ಲ, ತಲೆಯಿಲ್ಲ ಚರ್‍ಚಿಲ್ಲ!
ಬಾಯೊಂದೆ ನರಕದಗಲದಿ ತೆರೆಯುತಿಹುದೆಂದು:

ಶೆಲ್ಲಿ ರಸ್ಕಿನ್ನರಾ ಶಲ್ಯಕ್ಕೆ ನಿನ್ನ ಹರಣ
ತಲ್ಲಣಿಸೆ, ನಿಲ್ಲುವದು ಅನ್ಯರಾಜ್ಯಾಪಹರಣ
*****