Home / ಲೇಖನ / ಇತರೆ / ಧರ್ಮ ಪರಿಪಾಲಕನಾರು ?

ಧರ್ಮ ಪರಿಪಾಲಕನಾರು ?

ಪ್ರಿಯ ಸಖಿ,
ಜನರ ಓಡಾಟವಿಲ್ಲದ ರಸ್ತೆ ಮಧ್ಯದಲ್ಲಿ ವ್ಯಕ್ತಿಯೊಬ್ಬ, ಗಾಯಗೊಂಡು ಬಿದ್ದು ನರಳಾಡುತ್ತಿದ್ದಾನೆ. ಆ ದಾರಿಯಲ್ಲಿ ಬಂದ ಸನ್ಯಾಸಿಯೊಬ್ಬ ಮರುಕಗೊಂಡರೂ ತನಗೂ ಈ ವ್ಯಕ್ತಿಗೂ ಸಂಬಂಧವೇನು? ನನ್ನದೇನಿದ್ದರೂ ವೈರಾಗ್ಯ ಸಾಧನೆ, ಮೋಕ್ಷ ಪ್ರಾಪ್ತಿಯೇ ಗುರಿ ಎಂದುಕೊಂಡು ದೇವರ ನಾಮ ಸ್ಮರಿಸುತ್ತಾ ಮುನ್ನಡೆಯುತ್ತಾನೆ. ಮುಂದೆ ಇದೇ ಹಾದಿಯಲ್ಲಿ ಬಂದ ಧಾರ್ಮಿಕನೊಬ್ಬ ಗಾಯಾಳುವನ್ನು ನೋಡಿ ಕನಿಕರಗೊಂಡರೂ ಅವನು ಮಾಡಿದ ಕರ್ಮದಿಂದ ಹೋದ ಜನ್ಮದ ಪಾಪದಿಂದ ಅವನು ಸಂಕಟ ಅನುಭವಿಸುತ್ತಿದ್ದಾನೆ. ಇದಕ್ಕೂ ನನಗೂ ಏನೇನೂ ಸಂಬಂಧವಿಲ್ಲ ಎಂದುಕೊಂಡು ದೇವರ ಪೂಜೆಗೆ ಹೊತ್ತಾಗುತ್ತದೆ ಎಂದು ಗಡಿಬಿಡಿಯಿಂದ ಮುಂದೆ ಹೋಗುತ್ತಾನೆ. ಅದೇ ದಾರಿಯಲ್ಲಿ ಬಂದ ಸಾಮಾನ್ಯ ಮನುಷ್ಯನೊಬ್ಬ ಗಾಯಾಳುವನ್ನು ಕಂಡು ಹಿಂದೆ ಮುಂದೆ ನೋಡದೇ ತಕ್ಷಣವೇ ಅವನಿಗೆ ತುರ್ತು ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ನಡೆಸುತ್ತಾನೆ.

ಸಖಿ, ಈಗ ಹೇಳು ಇವರು ಮೂವರಲ್ಲಿ ನಿಜವಾದ ಧರ್ಮ ಪರಿಪಾಲಕನಾರು? ಖಂಡಿತವಾಗಿ ಗಾಯಾಳುವಿಗೆ ನೆರವಾದ ಕೊನೆಯ ಸಾಮಾನ್ಯ ವ್ಯಕ್ತಿಯೇ ನಿಜವಾದ ಧರ್ಮಪರಿಪಾಲಕ.

ಧರ್ಮವೆಂಬುದು ಒಳ್ಳೆತನವನ್ನೆಲ್ಲಾ ಎರಕಹೊಯ್ದು ನಾವೇ ಹಾಕಿಕೊಂಡಿರುವ ಒಂದು ಕಟ್ಟುಪಾಡು, ಅಥವಾ ನಿಗ್ರಹ. ಜಗತ್ತಿನ ಎಲ್ಲ ಧರ್ಮಗಳು ಸದಾ ಒಳಿತನ್ನೇ ಪ್ರತಿಪಾದಿಸಿದೆ. ಹಿಂಸೆ ಮಾಡಬೇಡ, ಸುಳ್ಳು ಹೇಳಬೇಡ. ಮೋಸ ಮಾಡಬೇಡ, ಕೊಲ್ಲಬೇಡ… ಇತ್ಯಾದಿ ಅನಾಚಾರಗಳು ಬೇಡವೆಂದು ಎಲ್ಲ ಧರ್ಮಗಳೂ ಹೇಳುತ್ತವೆ. ಹಾಗೇ ಸಜ್ಜನನಾಗಿರು, ಪರೋಪಕಾರಿಯಾಗಿರು, ಶುದ್ಧ ಮನಸ್ಕನಾಗಿರು, ಇತರರ ಹಿತಚಿಂತಕನಾಗಿರು, ಇತರರಿಗೆ ಒಳಿತನ್ನೇ ಮಾಡುವವನಾಗಿರು…. ಇತ್ಯಾದಿ ಒಳ್ಳೆಯತನದ ಉಪದೇಶಗಳು ಎಲ್ಲ ಧರ್ಮದಲ್ಲೂ ಇದೆ.  ಕೆಟ್ಟದ್ದನ್ನು ಮಾಡೆಂದು ಯಾವ ಧರ್ಮವೂ ಉಪದೇಶಿಸುವುದಿಲ್ಲ. ಹಾಗೇ ಎಲ್ಲ ಧರ್ಮಗಳ ಆಧಾರಸ್ತಂಭ ಮಾನವೀಯತೆಯೇ!

ಆದರೆ ನಾವು ಧರ್ಮವನ್ನು ಅರ್ಧೈಸಿಕೊಳ್ಳುವುವರಲ್ಲಿ ತಪ್ಪಿದ್ದೇವೆ. ಹಾಗೂ ಅದರ ಆಚರಣೆಯಲ್ಲಿ ತಪ್ಪಿದ್ದೇವೆ. ಎಲ್ಲ ತಪ್ಪುಗಳನ್ನು ಮಾಡಿಯೂ ದೇವರಿಗೆ ಕೈ ಮುಗಿದರೆ ಪಾಪ ಪರಿಹಾರವೆಂದು ಸಮಜಾಯಿಷಿ ಮಾಡಿಕೊಂಡಿದ್ದೇವೆ. ಹೀಗೆಂದೇ ಇಂದು ಎಲ್ಲೆಡೆ ಅನಾಚಾರ, ಅಶಾಂತಿ ಮನೆ ಮಾಡಿದೆ. ಧರ್ಮವನ್ನು ಆಡಂಬರಕ್ಕಾಗಿ, ತೋರ್ಪಡೆಗಾಗಿ, ಬಾಯಿ ಮಾತಿಗಾಗಿ, ಉಪಯೋಗಿಸುತ್ತಿರುವ ನಾವು ಅದರ ಒಳ ಅರ್ಥವನ್ನು ತಿಳಿದುಕೊಳ್ಳುವುದನ್ನು ಮರೆಯುತ್ತಿದ್ದೇವೆ. ಧರ್ಮವನ್ನು ದೇವರು, ಪೂಜೆ, ಮಂತ್ರ, ವ್ರತ, ಮೋಕ್ಷ ಮುಂತಾದವಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದೇವೆ. ಇವೆಲ್ಲವುಗಳ ಮೂಲ ಒಳಾರ್ಥ ಮಾನವೀಯತೆಯೇ. ಅದನ್ನು ಒಳಗೊಂಡ ಒಳ್ಳೆಯ ವ್ಯಕ್ತಿಯೇ ನಿಜವಾದ ಧರ್ಮದ ಪರಿಪಾಲಕ ಆದ್ದರಿಂದಲೇ ಹುಟ್ಟಿನಿಂದಾದವನಲ್ಲ ಧಾರ್ಮಿಕ. ಆಚರಣೆಯಿಂದಾದವನೇ ಧಾರ್ಮಿಕ !

ಸಖಿ, ಕಣ್ಣ ಮುಂದೆ ನರಳುತ್ತಾ ಬಿದ್ದಿರುವ ಗಾಯಾಳುವನ್ನು ಮೊದಲು ಉಪಚರಿಸುವುದು ಧರ್ಮವೋ, ಲೌಕಿಕದ ಎಲ್ಲವನ್ನೂ ಬಿಟ್ಟು ಕಣ್ಮುಚ್ಚಿ ದೇವರನ್ನು ಜಪಿಸುತ್ತಾ ಕೂರುವುದು ಧರ್ಮವೋ ಇನ್ನಾದರೂ ವಿವೇಚಿಸಬೇಕಲ್ಲವೇ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...