ಮಾತುಗಳ ಮೋಡಿಗಳ ಒಳಗಿಣುಕು
ಮನೆಗಳ ಕಚೇರಿಗಳ ಖಾನೆ ಖಾನೆ ಏಕತಾನದೊಳಹೊಕ್ಕು
ಫೈಲುಗಳ ಸ್ಮೈಲುಗಳ ನಡುವೆ ತಲೆಹುದುಗಿಸಿಕೊಂಡ
ನಾಕು ಮಂದಿಯಂತೆ ವೇಷ ಭೂಷಗಳ ಸಿಕ್ಕಿಸಿಕೊಂಡ
ದೇಶಾವರಿ ಯೋಗಕ್ಷೇಮದ ಗಿಳಿಯೋದುಗಳ
ಸ್ವಲ್ಪ ಅತ್ತತ್ತ ಸರಿಸಿ,
ಉರುಳಿಸುವ ಬುರುಡೆಗಳ
ಈಜಾಡಿ ನೂಕಿ ಅವನ ನೀರಿನೊಳಹೊಗು

ಸಮಾಜದ ಪಡಿಯಚ್ಚು ಮುದ್ರೆಗಳ ಒರೆಸಿ ಸೋಡು
ಹೊಟ್ಟೆಯ ಹಾಡಿನ ಜಾಡು ಹಿಡಿದು
ಮಿಡುಕುವ ಹಣ್ಣ ಮುಟ್ಟಿನೋಡು
ಮೌನದಿಂದ ಮಾತನ್ನು, ಮಾತುಗಳಿಂದ ಮನವನ್ನು
ಹಿಚುಕಿ ನೋಡು,
ವ್ಯಕ್ತಿಯೊಳಗಿನ ಶಕ್ತಿಯನೆಳೆದು ನೋಡು
ಆ ಹಣ್ಣು ಎಷ್ಟು ಮಾಗಿದೆಯೋ ಅಥವಾ
ಆ ತೋಟ ಯಾವ ಯಾವ ಮೃಗಗಳಿಗೆ
ಆಡುಂಬೊಲವಾಗಿದೆಯೋ ಹೊಕ್ಕು ನೋಡು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)