ಮಳೆ ಸುರಿಯುತ್ತಿದೆ. ಮನೆಯಿಂದ ಹೊರಬೀಳುವುದು ಕಷ್ಟ ಎನ್ನುವಷ್ಟು ಮಳೆ. ನೆಲ ಮುಗಿಲುಗಳ ಸಲ್ಲಾಪ ನಿರಂತರ. ಭೂಮಿತಾಯಿ ಹಸಿರು ಸೆರಗು ಹೊದ್ದು ನಗುತ್ತಿರುವಾಗಲೇ ನೆನಪುಗಳು ಸುಗ್ಗಿ. ಮಳೆ ನೀರಿಗೆ ಸಮುದ್ರ ಸೇರುವ ಆತುರ. ಸುರಿವ ಮಳೆಯಲ್ಲೂ ರೇನ್ ಕೋಟ್ ತೊಟ್ಟು ಸಮುದ್ರದ ಆರ್ಭಟ ನೋಡಲು ಕಡಲದಂಡೆಗೆ ಬಂದಾಗಿತ್ತು. ಭೂಭಾಗವನ್ನು ಕ್ಶಣರ್ಧದಲ್ಲಿ ನುಂಗಿ ಹಾಕುವಂತೆ ಬೋರ್ಗರೆವ ಕಡಲ ಅಲೆ. ಮುಂಗಾರಿನ ವೇಳೆ ಸ್ನೇಹದಿಂದ ತನ್ನ ರೂಪವನ್ನೇ ಬದಲಿಸಿಕೊಂಡ ಕಡಲು. ಒಂದೆ ಸಮನೇ ರೋಧಿಸುತ್ತಿತ್ತು. ದಂಡೆ ಬಳಿ ನಿಂತವರ ಎದೆ ನಡುಗಿಸುವಂಥ ಮೊರೆತ.

ಕಳೆದ ಹೋದ ಮಾತುಗಳನ್ನು ಹುಡುಕಲು ಆತ ಯತ್ನಿಸಿದ. ಬೊಗಸೆಯಲ್ಲಿನ ನೀರು ಸೋರಿಹೋದಂತೆ ಒಮ್ಮೆ ಖಾಲಿ ಖಾಲಿ ಭಾವನೆ. ಎಲ್ಲವನ್ನು ಕಳೆದುಕೊಂದು ಹಗುರವಾದಂತೆ. ಮತ್ತೊಮ್ಮೆ ಕಡಲು ಎದೆಯೊಳಗೆ ಹೊಕ್ಕಂತೆ. ಬದುಕು ಎಷ್ಟೊಂದು ರುದ್ರರಮಣೀಯವಾಗಿತ್ತಲ್ಲ. ಆ ನೆನಪುಗಳೇ ಮಧುರ. ಏನೂ ಇಲ್ಲದ ದಿನಗಳಲ್ಲೂ ಅಂದಿನ ಪಿಸು ಮಾತು, ಭ್ರಮೆ, ಆ ಕ್ಷಣದ ಸತ್ಯ, ಕನಸು ನಿಜವಾದ ಘಳಿಗೆ, ಅದು ಅಷ್ಟೇ ಬೇಗ ಕರಿಗಿಹೋದದ್ದು…. ನೆನಪುಗಳು ಇಡೀ ಜೀವಮಾನಕ್ಕಾಗುವವಷ್ಟು ಇವೆಯಲ್ಲಾ ಎಂಬ ಸಮಾಧಾನವೂ ಮನದಲ್ಲಿ ಸುಳಿಯಿತು.

ಸುಖ ಎನ್ನುವುದೇ ಹಾಗೆ…. ಮರಳ ಮೇಲೆ ಬರೆದ ಹೆಸರಂತೆ, ಮಕ್ಕಳು ಕಟ್ಟಿದ ಮನೆಯಂತೆ. ಕ್ಷಣಿಕ…. ಆದರೆ ಪಿಸುಮಾತು ಸುಸ್ತಾಗದ ಅಲೆಯಂತೆ. ಅದೆಷ್ಟು ನಿಟ್ಟುಸಿರುಗಳಿಗೆ ಸಾಕ್ಷಿಯಾಗಿದೆ ಕಡಲು. ಪ್ರೇಮ ಸಲ್ಲಾಪಗಳಿಗೆ, ಸಾವಿರ ಸಾವಿರ ಕನಸುಗಳಿಗೆ, ಆತ್ಮಹತ್ಯೆಗಳಿಗೆ, ಆಕಸ್ಮಿಕ ಬಂದೆರಗುವ ಸಾವುಗಳಿಗೆ ಮುನ್ನುಡಿ, ಹಿನ್ನುಡಿ ಬರೆದು ತನ್ನೊಡಲೊಳಗೆ ಹುದುಗಿಸಿಕೊಂಡಿದೆಯಲ್ಲಾ ಎಂದುಕೊಂಡ ಕೃಷ್ಣ.
* * * *
ಮೈಸೂರು ಸೀಮೆಯಿಂದ ಬಂದು ಕರಾವಳಿಯಲ್ಲಿ ನೆಲೆಕಂಡಿದ್ದ ಕೃಷ್ಣ ಚಾಮರಜ ನಗರದ ಗೀಜಗನಗೂಡು ಗ್ರಾಮದವನು. ವೃತ್ತಿಯಿಂದ ಬ್ಯಾಂಕ್ ಮ್ಯಾನೇಜರ್. ಬಾಲ್ಯದಲ್ಲೇ ತಾಯಿಯನ್ನು ಕಳೆದುಕೊಂಡು ಮಲತಾಯಿಯ ಸಂಬಂಧಿಕರ ಆಶ್ರಯದಲ್ಲಿ ಬೆಳೆದಾತ. ತನ್ನ ಬದುಕೇ ವಿಸ್ಮಯಗಳ ಗೂಡು ಎಂದು ಸ್ನೇಹಿತರ ಮುಂದೆ ಹಲವು ಸಲ ಗುಂಡಿನ ಪಾರ್ಟೀಯಲ್ಲಿ ಹೇಳಿಕೊಂಡದ್ದುಂಟು. ತಂದೆ ಮೈಸೂರು ನಗರಪಾಲಿಕೆಯ ಸಾಮಾನ್ಯ ನೌಕರ. ಮಹಾರಾಜರ ಔದಾರ್ಯದಲ್ಲಿ ಸಾವಿರಾರು ಕುಟುಂಬಗಳು ಅಕ್ಷರದ ಬೆಳಕು ಕಂಡು ಬದುಕು ಕಟ್ಟಿಕೊಂಡಿದ್ದವು. ಆ ಬೆಳಕಿನಲ್ಲಿ ಕೃಷ್ಣರ ತಂದೆ ಹೊಸ ಬದುಕು ಕಂಡಿದ್ದರು. ಕೃಷ್ಣನ ಅಜ್ಜನ ಕಾಲಕ್ಕೆ ಅರಮನೆಯ ನಂಟು ಬೆಸೆದಿತ್ತು. ಅಜ್ಜನ ಕಾಲಕ್ಕೆ ಚಾಮರಾಜನಗರದಿಂದ ದೂರಸರಿದು ಮೈಸೂರು ನಂಟುಕೃಷ್ಣನ ತಂದೆಗೆ. ಮೈಸೂರಿನ ಮಹಾರಾಜ ಕಾಲೇಜ ನಲ್ಲಿ ಪದವಿ ಪಡೆದಿದ್ದ ಕೃಷ್ಣ ಬ್ಯಾಂಕ್ ನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಗಿ ನೌಕರಿ ನಿಮಿತ್ತ ಕರಾವಳಿಗೆ ಬಂದು ನಿಂತಿದ್ದ. ಗೀಜಗನಗೂಡಿನ ಸಂಪರ್ಕ ಕಡಿದುಹೋಗಿತ್ತು. ಪ್ರೀತಿಸುವ ತಂದೆ ಮಗನ ಏಳ್ಗೆಯಲ್ಲಿ ಸುಖ ಕಂಡಿದ್ದರು, ಅದೇಕೋ ಕೃಷ್ಣ ಊರಿನ ನಂಟು ಕಡಿದುಕೊಂಡು ಅಲ್ಲಿನ ಬದುಕಿಗೆ ವಿಮುಖನಾಗಿದ್ದ. ಊರಿನ ಸೆಳೆತ ಉಳಿಸುಕೊಳ್ಳುವಷ್ಟು ಗಟ್ಟಿಯಾದ ಬೇರುಗಳು ಅಜ್ಜನ ಊರಲ್ಲಿ ಇರದಿದ್ದ ಕಾರಣವೋ ಏನೋ, ಅಲ್ಲಿನ ಸಂಬಂಧದ ಬೆಸುಗೆ ಉಳಿದಿರಲಿಲ್ಲ.

ಕೃಷ್ಣನ ಬದುಕಿನಲ್ಲಿ ಕರಾವಳಿ ಜನರು, ವಿಸ್ಮಯಗಳ ಕಡಲು, ಸದಾಶಿವಗಡದ ಕೋಟೆ, ಗುಡ್ಡಳ್ಳಿ, ದೇವಭಾಗ ಬೀಚ್, ಕೂರ್ಮಗಡ, ಲೈಟ್ ಹೌಸ್ ಪೊಳೆಂ ಕಡಲಗಳು, ಮುಕ್ತ ಬದುಕಿನ ಕಾಣಕೋಣ ತೀರ ಬೇರೆತು ಹೋಗಿತ್ತು.

ತಿಂಗಳಲ್ಲಿ ಎರಡು ರವಿವಾರಗಳು ಕಾಣಕೋಣದ ವಿದೇಶಿ ಪ್ರಜೆಗಳ ಸ್ನೇಹದಲ್ಲಿ, ಗೆಳತಿ ಮೃಣಾಲಿನಿ ಜೊತೆ ಕಳೆದು ಹೋಗುತ್ತಿತ್ತು. ಅಷ್ಟರಮಟ್ಟಿಗೆ ಕೃಷ್ಣ ವಿದೇಶಿ ಮನಸ್ಸುಗಳೊಂದಿಗೆ ಬೆಸೆದುಕೊಂಡಿದ್ದ. ಹೀಗ ಅಚಾನಕ್ ಬೆಳೆದ ಸಂಬಂಧಗಳಲ್ಲಿ ಸಿಕ್ಕವಳು ಸ್ಪ್ಟೆಫ಼ಿ. ಐರಾಲಂಡ್ ಮೂಲದ ತಾಯಿ, ಗೋವಾ ಮೂಲದ ತಂದೆಗೆ ಹುಟ್ಟಿ ಬೆಳದ ಸ್ಟೆಫೆ, ಕಾಣಕೋಣದಲ್ಲಿದ್ದ ತಂದೆಯ ಬಾರ್ ನಿಬಾಯಿಸುತ್ತಿದ್ದಳು. ಸ್ಟೆಫಿ ತಂದೆ ಬಾರ್ ನ ಕೌಂಟರ್ ನಲ್ಲಿ ಯಜಮಾನನಾಗಿ ಕೀಳಿತು ವಿದೇಶಿ ಪ್ರಜೆಗಳಿಗೆ ಅಗತ್ಯ ತಿಂಡಿ ತಿನಿಸು ಮದ್ಯ ಪೂರೈಸುತ್ತಾ ಜೀವನ ಕಟ್ಟಿಕೊಂಡಿದ್ದರು. ತಂದೆಯ ವ್ಯವಹಾರದಲ್ಲಿ ಸ್ಟೆಫ಼ಿ ಆಗಾಗ ನೆರವಾಗುತ್ತಿದ್ದು ನಡೆಯುತ್ತಿತ್ತು. ಕಾಣಕೋಣದ ಸಿವ್ಯೂವ್ ಬರ್ ಬಹುತೇಕ ವಿದೇಶಿ ಗಿರಾಕಿಗಳ ಮಧ್ಯೆ ದೇಶೀಯ ಮಾಮೂಲಿ ಗಿರಾಕಿಯಾಗಿದ್ದ ಕೃಷ್ಣ, ಸ್ಟೆಫಿ ತಂದೆ ಸ್ಟೀವೆನ್ ಗೆ ಚಿರಪರಿಚಿತನಾಗಿದ್ದ. ತಿಂಗಳಲ್ಲಿ ೨ ಸಲ ಸಿವ್ಯೂವ್ ನಲ್ಲಿ ಬೀಯರ್ ಕುಡಿಯದೇ ಮರಳಿದ ಉದಾಹರಣೆಯೇ ಇಲ್ಲ. ತನ್ನ ಬದುಕಿಗೆ ತಿರುವು ತಂದ ಮೃಣಾಲಿನಿ ಜೊತೆ ಕಾಣಕೋಣ ಕಡಲತೀರದಲ್ಲಿ ಕಟ್ಟಿದ ಕನಸುಗಳಿಗೆ ಲೆಕ್ಕವೇ ಇರಲಿಲ್ಲ. ಮೃಣಾಲಿನಿ ಇಲ್ಲದೇ ಕೃಷ್ಣ ಕಾಣಕೋಣದ ಬೀಚ್ ನಲ್ಲಿ ತಲ್ಲಣದ ಕ್ಷಣ ಅನುಭವಿಸುತ್ತಾ, ಮೌನಿಯಾಗಿ ಕಡಲ ಅಲೆಯ ಅಬ್ಬರದತ್ತ ತೀಕ್ಷ್ಣ ದೃಷ್ಟಿನೆಟ್ಟಿದ್ದಾಗ ಭುಜದ ಮೇಲೆ ಯಾರೋ ಕೈಯಿಟ್ಟಂತಾಯ್ತು. ತಿರುಗಿ ನೋಡಿದ್ರೆ ಸ್ಟೆಫಿ ನಿಂತಿದ್ದಳು…..
***
ಏಕೆ ಹೀಗಾಯ್ತು ಸ್ಟೆಫ಼ಿ? ನೀನು ನನ್ನ ಎರಡು ವರ್ಷಗಳಿಂದ ಗಮನಿಸಿರುವೆ. ಬದುಕಿನ ವಿಶಾಲತೆ ನಿನಗೆ ತಿಳಿದಿದೆ. ನೂರಾರು ವಿದೇಶಿ ಪ್ರೇಮಿಗಳ ಹೆಜ್ಜೆ ಕಂಡವಳು ನೀನು. ಯಾಕೆ ಮೃಣಾಲಿನಿ ಹೀಗೆ ಮಾಡಿದ್ಲು? ಬದುಕು ಇಷ್ಟು ಕಠೋರವಾಗಿರಲು ಸಾಧ್ಯವೇ? ನೀನೇ ಹೇಳು? ನಾನೇನು ಮಾಡಲಿ ಎಂದು ಒಂದೇ ಸಮನೇ ಸ್ಟೆಫಿಯನ್ನು ಪ್ರಶ್ನಿಸಿದ ಕೃಷ್ಣ.

ಮೃಣಾಲಿನಿ… ಎಂಬ ಯುವತಿ ಕೃಷ್ಣನ ಬ್ಯಾಂಕ್ ನ ಸಹೋದ್ಯೋಗಿಯಾಗಿ ಬಂದವಳು. ಆಕೆ ಹರಿವ ನದಿ. ನಿಂತಲ್ಲಿ ನಿಲ್ಲದ ಹರಿಣಿಯಂತಿದ್ದಳು. ಮನಮೋಹಕ ಜಲಪಾತದಂತಿದ್ದ ಆಕೆ ಕೆಲಸಕ್ಕೆ ಜಾಯಿನ್ ಆದ ದಿನವೇ ’ಬಣ್ಣದ ಚಿಟ್ಟೆ’ ಎಂಬ ಹೆಸರನ್ನು ಕೃಷ್ಣನ ಮತ್ತೋರ್ವ ಸಹೋದ್ಯೋಗಿ ಭುಜಂಗರಾವ್ ಇಟ್ಟಿದ್ರು. ಒಂದೇ ವಾರದಲ್ಲಿ ಬ್ಯಾಂಕ್ ನ ಎಲ್ಲರಿಗೂ ಮೃಣಾಲಿನಿಯ ಪ್ರೆಂಡ್ ಆಗಿದ್ಲು. ಮೋಹಕ ನದಿ ಜೀವಂತವಾಗಿ ಕಚೇರಿಯಲ್ಲಿ ಹರಿಯುತ್ತಿದ್ದರೆ ಯಾರಿಗೆ ಬೇಡ ಆ ಚೆಲುವು? ಪ್ರತಿದಿನವೂ ಒಬ್ಬೊಬ್ಬ ಸಹೋದ್ಯೋಗಿಗಳ ಮನೆಯಲ್ಲಿ ಆತಿಥ್ಯವಾಯ್ತು. ಕೆಲಸಕ್ಕೆ ನೆಲೆ ನಿಂತ ಮೃಣಾಲಿನಿಗೆ ನಿಧಾನಕ್ಕೆ ಊರು ಆವರಸಿಕೊಳ್ಳತೊಡಗಿತು. ಹೊಸ ವಾತಾವರಣದಲ್ಲಿ ಮೃಣಾಲಿನಿಗೆ ಅಪ್ಯಾಯಮಾನ ಅನ್ನಿಸಿದ್ದು ಕೃಷ್ಣನ ಸ್ನೇಹ.

ಸಮಾನಾಸಕ್ತಿ ಕಾರಣವೋ ಏನೋ, ಪ್ಲೋಟಾನಿಕ್ ಅನ್ನಿಸುವಷ್ಟರ ಮಟ್ಟಿಗೆ ಈರ್ವರ ನಡುವೆ ಸಂಬಂಧ ಒಸುಗೆ ಹಾಕಿಕೊಳ್ಳತೊಡಗಿತು. ಮೃಣಾಲಿನಿ-ಕೃಷ್ಣ ಜೋಡಿ ಕಾರವಾರದ ಸುತ್ತಣದ ಏಕಾಂತ ಸ್ಥಳಗಳನ್ನು ರಜೆಯ ದಿನಗಳಲ್ಲಿ ಸುತ್ತುವುದು ಮಾಮೂಲಾಯ್ತು. ಅವರೀರ್ವರ ಜೋಡಿ ಪ್ರವೇಶಿಸದ ತಾಣಗಳೇ ಇಲ್ಲ ಎಂಬಂತೆ ಪ್ರಕೃತಿಗೆ ಪರಿಚಿತರಾಗಿದ್ದವರು.
***
’ನಿನ್ನ ನಡಿಗೆ ಕಡಲಿನಷ್ಟೆ ಮೋಹಕವಾಗಿದೆ. ಹೀಗೆ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದರೆ…. ’ಎಂದ ಕೃಷ್ಣ.

’ನಸು ನಕ್ಕಳು ಮೃಣಾಲಿನಿ’

ನಿದ್ರಿಸುವಂತೆ ಶಾಂತವಾಗಿತ್ತು ಕಾಣಕೋಣ ಕಡಲು. ಅಪರಿಚಿತ ಮುಖಗಳ ನಡುವೆ, ಪರಿಚಿತ ಮುಖಗಳು ಕಾಣಲಿಲ್ಲ. ಟು ಪೀಸ್ ನಲ್ಲಿ ಮರಳ ದಂಡೆಯ ಮೇಲೆ ಮೋಹಕ ವಿದೇಶಿ ಯುವತಿಯರು, ಯುವಕರು, ಮದ್ಯ ವಯಸ್ಸು ದಾಟಿದವರು ಮಲಗಿ ತಮ್ಮದೇ ಕ್ರಿಯೆಗಳಲ್ಲಿ ಮಗ್ನರಾಗಿದ್ದರು. ಓದುತ್ತಿರುವವರು, ಮಕ್ಕಳೊಡನೆ ಆಡುತ್ತಿರುವವರು, ಕಡಲಿಗೆ ಧುಮುಕುತ್ತಿರುವವರು, ಬೀಯರ್ ಹೀರುತ್ತಿರುವವರು, ಬೋರಲಾಗಿ ಬಿದ್ದವರು…. ಹೀಗೆ ನೋಡಿದಲ್ಲೆಲ್ಲಾ ವಿದೇಶೀಯರ ದಂಡು ಕಡಲದಂಡೆಯನ್ನು ಆವರಿಸಿತ್ತು.

ಬಯಲಿಗೆ ಬೆತ್ತಲಾದವರ ಮುಕ್ತತೆ ಮೃಣಾಲಿನಿಗೆ ಕೊಂಚ ನಾಚಿಗೆ ಎನಿಸಿತು. ವಿದೇಶಿಗರ ದಿಟ್ಟತನಕ್ಕೆ ಮೆಚ್ಚುಗೆಯೂ ಮೂಡಿತು.

ಮೌನವಾಗಿ ಹೆಜ್ಜೆಗಳನ್ನಿಡುತ್ತಾ ’ಸ್ವಚ್ಛಂದತೆ ಎಷ್ಟು ಸೆಕ್ಸಿ ಅಲ್ವಾ?’ ಎಂದ್ಲು.

’ತಾಯ್ನೆಲದಲ್ಲಿ ಬಿಸಿಲನ್ನೇ ಕಾಣದವರು, ಇಲ್ಲಿ ಬೆತ್ತಲಾಗುತ್ತಾರೆಂದು ಕಾರಣ ಹುಡುಕಿದ ಕೃಷ್ಣ.

’ನಾವು ಇಂಥ ಮುಕ್ತತೆಗೆ ತೆರೆದುಕೊಳ್ಳಬೇಕೆನ್ನಿಸುತ್ತೇ’

’ಅದಕ್ಕೆ ಇನ್ನು ಒಂದು ಶತಮಾನ ಬೇಕು.’

’ಈಗ ಬಯಲಲ್ಲಿ ಬೆತ್ತಲಾದವರನ್ನ ನೋಡುವುದಷ್ಟೆ’

’ನಿಜ ಹೇಳ್ಲಾ ಮೃಣಾಲಿನಿ, ನನಗೆ ಬೆತ್ತಲಾಗಿ ಕಡಲಲ್ಲಿ ಓಡಬೇಕೆನ್ಸುತ್ತೆ.’

’ಫ಼ೆಂಟಾಸ್ಟಿಕ್, ಬೆತ್ತಲಾಗಿ ಓಡಿದ್ದ ಪ್ರತಿಮಾ ಬೇಡಿ ನೆನಪಾಗಿರ್ಬೇಕು ನಿನ್ಗೆ, ಬಾತ್ ರೂಂ ನಲ್ಲಿ, ಬೆಡ್ ರೂಂ ನಲ್ಲಿ ಬೆತ್ತಲಾಗುವುದೇ ಮೋಹಕ, ನಮ್ಮ ದೇಹ ನಮ್ಗೆ ಎಷ್ಟು ಸೆಕ್ಸಿ ಅನ್ಸುತ್ತೆ. ಕೆಲ ಸಲ.’ ಯಾವುದೇ ಸಂಕೋಚವಿಲ್ಲದೇ ನುಡಿದ್ಲು ಮೃಣಾಲಿನಿ.

’ಮೃಣಾಲಿನಿ, ನೀನು ಭಾಳ ವೈಚಾರಿಕವಾಗಿ ಯೋಚಿಸುತ್ತಿ.’

’ಹೌದು, ಕಮಲಾದಾಸ್ ಕತೆ ಗಳನ್ನ ಓದಿದ ಪ್ರಭಾವ ಇರ್ಬೇಕು’ ಬೋಲ್ಡ್ ಆಗಿಯೇ ಪ್ರತ್ಯುತ್ತರ ನೀಡಿದ್ಲು. ಕಡಲಲ್ಲಿ ಸುತ್ತುತ್ತಲೇ ಅವರ ಮಾತು ಸಾಗಿತ್ತು….’

ಮೃಣಾಲಿನಿ ಸ್ವಚ್ಛ ಆಕಾಶದಲ್ಲಿ ತಣ್ಣನೆಯ ಗಾಳಿಯಂತಿದ್ದಳು. ಉತ್ಸಾಹ ಆಕೆಯ ಮೈಮನಗಳಲ್ಲಿ ಲಾಸ್ಯವಾಡುತ್ತಿತ್ತು. ಕಡಲಲ್ಲಿ ತಿರುಗುವ ಹರೆಯ ಬಂದ ಹುಡುಗರು ಆಕೆಯ ಭುಜ ಸವರಿಕೊಂಡು ಹೋಗಲು ಯತ್ನಿಸುತ್ತಿದ್ದರು. ಕೃಷ್ಣ ಮೃಣಾಲಿನಿಯನ್ನೇ ದಿಟ್ಟಿಸಿ ’ನಾವಲ್ಲಿ ಕುಳಿತುಕೊಳ್ಳೋಣ’ ಎಂದ. ಕಣ್ನಲೇ ಸಮ್ಮತಿಸಿದ್ಲು ಮೃಣಾಲಿನಿ.
***
’ನಿಜ ಹೇಳ್ತಿನಿ. ಒಂದು ಸಲ, ಒಂದೇ ಒಂದು ಸಲ ಅಲ್ಲಾ, ಜೀವನ ಪೂರ್ತಿ ನಿನ್ನ ನುಣುಪಾದ ಕೆನ್ನೆಗಳನ್ನ ಮುಟ್ಬೇಕು ಅನ್ಸುತ್ತೆ. ಎದೆಯೊಳಗೆ ಹರಿವ ಭಾವನೆಗಳನ್ನು ಕಿತ್ತು ನಿನ್ನೆದೆಯೊಳಗೆ ಬಿತ್ತಬೇಕು. ಹೊಸ ಬದುಕು ಕಟ್ಬೇಕು, ನಿನ್ನ ಮನದೊಳಗೇನಿದೆ?’

’ನಿನ್ನ ಕಲ್ಪನೆಗಳು ನಿಜವಾಗಬಹುದು. ಆಗದೆಯೂ ಇರ್ಬಹುದು. ವಾಸ್ತವತೆಯನ್ನ ಒಪ್ಪಿಕೋ. ಯೌವ್ವನದಲ್ಲಿ ದೇಹ, ಮನಸ್ಸು ನೀಡುವ ಮುದ ನಂತರ ಉಳಿಯಲ್ಲಾ. ಕಾಲ ಬೆರಳುಗಳಿಂದ ನೆತ್ತಿಯವರೆಗೆ ಅನಿಶ್ಚಿತತೆಯಿದೆ. ಆರಾಮವಾಗಿ ನಾನು ನಿನ್ನ ತಲೆ, ನೀನು ನನ್ನ ತಲೆ ನೇವರಿಸುವಾಗ, ನನ್ನ ಮೃದು ಬೆನ್ನು ಸವರುವಾಗ, ದೇಹದಲ್ಲಿ ವಿದ್ಯುತ್ ಹರಿದಂತಾಗುತ್ತದೆ. ರೋಮಾಂಚನ ಅಂತೀವಲ್ಲ ಅದು. ನನ್ನೆದುರು ಗಂಡಾದ ನಿನ್ನ ರೂಪ ಇದ್ದಾಗ ಒಂದು ವೇದನೆ. ಇಲ್ಲದಾಗ ಹರಿತ ಮುಳ್ಳು ತಿವಿದಾಗಿನ ನೋವು ಮೊನೆ ಮಾಡುತ್ತದೆ. ಮಳೆಗಾಲದಲ್ಲಿ ಈ ದಂಡೆ ತೊಳೆದುಹೋದ ಹಾಗೆ. ಕಾಲ ಜೀವವನ್ನು ನುಂಗಿದ ಹಾಗೆ…”

ಜೀವನದಾಹ. ಭೂತ ಮತ್ತು ಭವಿಷ್ಯದ ಹಂಗು ತೊರೆದು ವರ್ತಮಾನವೆಂಬ ಊಹೆಯಲ್ಲಿ ಬದುಕುತ್ತಿದ್ದೇವೆ ಅಷ್ಟೆ. ತೀವ್ರವಾಗಿ ಬದುಕ್ಬೇಕು ಅಷ್ಟೆ. ದೇಹದಲ್ಲಿ ಕೊನೆಯ ಹನಿಯ ಚೈತನ್ಯ ಇರುವವರೆಗೆ. ಕಲ್ಪನೆಗೆ ದಕ್ಕಿದ್ದನ್ನ ಪಡೆಯಬೇಕಷ್ಟೆ.” ಮೃಣಾಲಿನಿ ಮಾತು ದೀರ್ಘವಾಗಿತ್ತು.

ಆಕೆಯ ನೀಳವಾದ ಮೂಗು, ಹೊಳೆವ ಕಣ್ಣುಗಳು, ಉದ್ದನೆಯ ಕೂದಲು, ಆಕೆಯ ಉಲ್ಲಾಸದ ದೇಹ, ಸಂಭ್ರಮದ ಮನಸ್ಸು ಕೃಷ್ಣನ ಉಸಿರಾಗತೊಡಗಿತು.

’ನೋಡು ಕೃಷ್ಣಾ, ಸಂಬಂಧಗಳು ಹೀಗೆ ಇರುತ್ತವೆ ಎಂದು ಭರವಸೆ ಇಟ್ಟುಕೊಳ್ಳಬೇಡ. ಈಗ ಜೊತೆಯಾಗಿದ್ದೇವೆ. ಇರೋಣ. ಇರುವಸಮಯ ನಮಗಾಗಿ ಎಂದು ತಿಳಿ. ಈ ಸಂಬಂಧ ಉಳಿಸಿಕೊಳ್ಳಲು ಪ್ರಯತ್ನಿಸೋಣ. ಆಗದಿದ್ದರೆ ದುಃಖಿಸ ಬಾಡ. ಬದುಕು ಮುಗಿದುಹೋಯ್ತು ಎಂದು ತಿಳಿಯಬೇಡ. ಈ ಕಡಲು ಸಾಕ್ಷಿಯಾಗಿರಲಿ ಪ್ರೇಮಕ್ಕೆ…. ಕಾಮಕ್ಕೆ…. ಎರ ವರ್ಷದಿಂದ ಜೊತೆಯಾಗಿ ಸುತ್ತಿದ್ದೇವೆ. ಆಡುವವರ ಬಾಯಿಗೆ, ನೋಡುವವರ ಕಲ್ಪನೆಗೆ ಕತೆಯಾಗಿದ್ದೇವೆ. ಮತ್ತೊಬ್ಬರಿಗೆ ಕತೆ ಯಾಗುವುದು ಎಷ್ಟು ಸೊಗಸು ಎಂದು ಜನರಿಗೆ , ನಮ್ಮ ಪರಿಚಿತರಿಗೆ ಗೊತ್ತಿಲ್ಲ.

ನಾವು ದೂರವಾದರೆ ಪ್ರತಿ ತಿಂಗಳ ಬೆಳಕು ನಮ್ಮ ಮಾತಿಗಳಿಗೆ ಸಾಕ್ಷಿಯಾಗಿರಲಿ. ಪ್ರತಿ ಬೆಳುದಿಂಗಳತ್ತ ನನ್ನ ದೃಷ್ಟಿ ಹರಿದಾಗ ನಮ್ಮ ಪಿಸುಮಾತಿನ ನೆನಪಾಗಲಿ. ನಾವು ಕಟ್ಟಿದ ಕನಸು, ನನಸಾಗದ ಕನಸು ಉಸಿರಾಗಲಿ. ಚಿರಂತನ ದಾಹದ ;ಪ್ರೇಮ’ ಚಂದ್ರ ಸಂಕೇತವಾಗಿ ಉಳಿದುಬಿಡಲಿ. ನಮ್ಮ ಹೆಜ್ಜೆಗಳನ್ನುಹುಗಿದಿಟ್ಟುಕೊಂಡಿರುವ ಈದಂಡೆ ಪ್ರೇಮಕ್ಕೆ ಪ್ರತಿಮೆ ಯಾಗಿರಲಿ….. ಮೃಣಾಲಿನಿ ಭಾವುಕವಾಗಿ ಮಾತನಾಡುತ್ತಿದ್ದಳು. ….

ಮೃಣಾಲಿನಿಯ ಮೈ ಮನಗಳಲ್ಲಿ ಕೃಷ್ಣ ಲೀನನಾಗಿದ್ದ. ಆಕೆಯ ನೀಳ ಕಪ್ಪು ಕೂದಲು ಆತನನ್ನು ಮುಚ್ಚಿಕೊಂಡಿದ್ದವು. ಆಕೆಯ ಚೇತನವನ್ನು ನುಂಗಿಯಾಗಿತ್ತು.

’ಮನುಷ್ಯ ಸಹ ಪ್ರಾಣಿಯಂತೆ. ಪ್ರಾಣಿ – ಪಕ್ಷಿಗಳಿಗೆ ನೀತಿ ಕಲಿಸಲು ಸಾಧ್ಯವೇ? ’ ಮೃಣಾಲಿನಿ ಪ್ರಶ್ನಿಸಿದಳು.

’ಅದೆಲ್ಲಾ ಗೊತ್ತಿಲ್ಲ…. ನನ್ಗೆ ಜೀವನ ಪೂರ್ತಿ ಬೇಕಷ್ಟೆ.’

’ನಿಶ್ಚಿತವಾಗಿ ಸಿಗುವ ಬಗ್ಗೆ ಹೇಳಲಾರೆ , ನೋಡೋಣ.’
******
ಮೃಣಾಲಿನಿಗೆ ದೂರದ ಅಸ್ಸಾಂಗೆ ವರ್ಗಾವಾಗಿತ್ತು. ಹೊರಡುವಾಗ ಒಂದು ಮಾತು ಹೇಳದೆ ಹೊರಟುಹೋಗಿದ್ದಳು. ಕೃಷ್ಣನ ಜೊತೆ ಸಂಪರ್ಕ ಕಡಿದುಹೋಗಿತ್ತು. ಒಂದು ವಾರವಾಯ್ತು….. ತಿಂಗಳಾಯ್ತು… ವರ್ಷವಾಯ್ತು… ಒಂದು ಮಾತಿಲ್ಲ, ಕತೆ ಯಿಲ್ಲ. ಕೃಷ್ಣ ಎಂದಿನಂತೆ ಕಾಣಕೋಣಕ್ಕೆ ವೀಕ್ ಎಂಡ್ ಗೆ ಬಂದು ಒಂಟಿಯಾಗಿ ಬೀಯರ್ ಕುಡಿದು ಮರಳತೊಡಗಿದ.

ಹೆಣ್ಣು ನಿಗೂಢ. ಆಕೆಯ ಹೆಜ್ಜೆಗಳಿಗೆ, ತಾಳುವ ನಿಲುವುಗಳಿಗೆ ನಿರ್ಧಿಷ್ಟ ಕಾರಣಗಳನ್ನು ಕೇಳಲೂ ಬಾರದು, ಹುಡುಕಲು ಬಾರದು. ಮೃಣಾಲಿನಿಯನ್ನು ಶೋಧ ಮಾಡುವುದು ವ್ಯರ್ಥ. ಕತ್ತಲ ಜಗತ್ತನ್ನು ಹೊಕ್ಕು ಬೆಳಕಿನ ದಾರಿಗಳನ್ನು ಮುಚ್ಚಿಕೊಳ್ಳುವುದು ಬೇಡ ಎಂದ್ಲು ಸ್ಟೆಫಿ.

ಏನು ಹೇಳ್ಬೇಕೆಂಬುದು ಗೊತ್ತಾಗದೇ ನಿರುತ್ತರನಾದ ಕೃಷ್ಣ.
*****
(ಸೆಪ್ಟೆಂಬರ್ ೨೦೦೯)