ಬಂದೆಯಾ, ಮೋಹವೆಲ್ಲವನುಳಿದು? ಇಲ್ಲದಿರೆ
ನಿಲ್ಲು ಈ ಗೆರೆದಾಂಟಿ, ಬಾರದಿರು ಬಾರದಿರು!
ಉತ್ತುಂಗ ಶಿಖರಕ್ಕೆ ಹುಲುಬಿಂಬಿ ನೆಗೆದಂತೆ
ನಿನ್ನ ಗತಿಯಾದೀತು ಎಚ್ಚರಿಕೆ ಎಚ್ಚರಿಕೆ
ಮದಮೋಹಗಳನೆಲ್ಲ ಹೆಣಮಾಡಿ ಸುಟ್ಟೊಗೆದು
ರಸವರ್ಜ್ಯ ನೀನಾಗಿ, ಎದೆಯತಾಣವನೊಂದು
ರುದ್ರಭೂಮಿಯಮಾಡಿ ಆತ್ಮಶಿವನಾಗಲ್ಕೆ
ಹೆದರದೆಯೆ ಬಂದೊಡನೆ ಸಾಧ್ಯವಾಗುವದಲ್ತೆ?
ಇಂತು ಶಿವದೀಕ್ಷೆಯನು ನೀಡಲ್ಕೆ ನಿಂತಿರುವ
ರುದ್ರಪ್ರಯಾಗವನು ಕಂಡು ಅಪರಾಪೃಕೃತಿ
ಕುರುಸೈನ್ಯ ಕಂಡಂಜಿ ನಿಂತ ಉತ್ತರನಂತೆ
ತತ್ತರಿಸಿ ತಳಮಳಿಸಿ ಕಳವಳಕೆ ತುತ್ತಾಯ್ತು
ಓ ಗುರುವೆ ಈ ಕ್ಲೈಬ್ಯವನ್ನು ನೀ ಕಳೆದೊಗೆದು
ನನ್ನ ಮೇಲೆತ್ತಯ್ಯ ಗತಿನೀಡು ಮಾರ್ಗದಲಿ
*****