ಕಳ್ಳನ ಮಗಳು

ತಾಯಿಗೊಬ್ಬ ಮಗ ಇದ್ದನು. “ಗಳಿಸಿಕೊಂಡು ಬರುತ್ತೇನೆ. ರೂಕ್ಕ ತರುತ್ತೇನೆ. ನೂರು ರೂಪಾಯಿಕೊಡು” ಎಂದು ಮಗನು ತಾಯಿಗೆ ಕೇಳುತ್ತಾನೆ. “ಮಗನೇ, ನೀನು ಮೊದಲೇ ಮರುಳ. ನೀನು ಗಳಿಸುವುದು ಸುಳ್ಳು. ಸುಮ್ಮನೇ ಮನೆಯಲ್ಲಿ ಕುಳಿತುಕೊಳ್ಳಬಾರದೇ” – ಎಂದು ಅವ್ವ ಹೇಳಿದಳು. ಆದರೂ ಒತ್ತಾಯ ಮಾಡಿದ್ದರಿಂದ ತಾಯಿ ರೊಕ್ಕ ಕೊಟ್ಟು ಕಳುಹಿಸುತ್ತಾಳೆ.

ಹಾದಿಯಲ್ಲಿ ಒಬ್ಬ ಹುಡುಗನು ಸೀಸೆಯಲ್ಲಿ ನೀರುಹಾಕಿ ಅದರೊಳಗೆ ಕಪ್ಪೆ ಬಿಟ್ಟು ಓಡಾಡಿಸುತ್ತಿದ್ದನು. ಮಗನು ಆತನಿಗೆ ನೂರು ರೂಪಾಯಿಕೊಟ್ಟು ಸೀಸೆ ತೆಗೆದುಕೊಂಡು ಮನೆಗೆ ಬಂದನು. ತಾಯಿ ಸಿಟ್ಟಗೆ ಬಂದು ಸೀಸೆ ಒಡೆದುಬಿಟ್ಟಳು. ಕಪ್ಪೆ ಜಿಗಿಯಲಿಕ್ಕೆ ಹತ್ತಿತು. ಕಪ್ಪೆ ಅಂದಿತು. . “ನನ್ನನ್ನು ನೀರೂಳಗಿಂದ ಹೊರಗೆ ಹಾಕಿದೆ. ನಾನು ಹೇಗೆ ಇರಲಿ? ನನ್ನನ್ನು ಒಂದು ಭಾರಂಗ ಬಾವಿಯಲ್ಲಿ ಬಿಡು. ಹಾಗೆ ಮಾಡಿದರೆ ನಾನು ನಿನಗೆ ಎರಡು ಬಂಗಾರಲಾಲ ಕೊಡುತ್ತೇನೆ” ಸೆಲ್ಲೆಯೊಳಗೆ ಕಪ್ಪೆ ಸುತ್ತಿಕೊಂಡು ಹೋಗಿ ಬಾವಿಯೊಳಗೆ ಬಿಟ್ಟನು. ಕಪ್ಪೆಯು ಆತನಿಗೆ ಎರಡು ಬಂಗಾರಲಾಲ ಕೊಟ್ಟು ನೀರಲ್ಲಿ ಜಿಗಿಯಿತು. ಬಂಗಾರದ ಲಾಲಗಳನ್ನು ತೆಗೆದುಕೊಂಡು ಆ ತಾಯಿಯ ಮಗನು ಮನೆಯ ಹಾದಿ ಹಿಡಿದನು.

ಕಪ್ಪೆಯು ಆತನಿಗೆ ಬಂಗಾರದ ಲಾಲಗಳನ್ನು ಕೊಡುವಾಗ ಒಬ್ಬ ಕಳ್ಳನು ಕಣ್ಣಿಟ್ಟಿದ್ದನು. ಮಗನು ಮನೆಗೆ ಹೊರಟಾಗ ಕಳ್ಳನು ಅವನ ಬೆನ್ನು ಹತ್ತಿಬಿಟ್ಟನು. ಆ ಕಳ್ಳನ ಕೈಯೊಳಗಿಂದ ಹೇಗೆ ಪಾರಾಗಬೇಕೆನ್ನುವುದೇ ಅವನಿಗೆ ದಿಗಿಲು ಹಿಡಿದಿತ್ತು. ಸರಕ್ಕನೇ ಓಡಿಬಂದು ಹತ್ತಿಪ್ಪತ್ತು ಜನರಿದ್ದಲ್ಲಿ ಹೋಗಿ ಕುಳಿತನು. “ಯಾಕಪ್ಪ ಈತ ಹೀಗೇಕೆ ನನ್ನ ಬೆನ್ನ ಬಿಡವೊಲ್ಲದಾಗಿದ್ದಾನೆ” ಎಂದು ಬಾಯಿ ಹೊಲಿದುಕೊಂಡು ಕುಳಿತಾಗ ಕಳ್ಳನು ಆ ಹತ್ತುಮಂದಿ ಮುಂದೆ ಬಂದು ಹೇಳುತ್ತಾನೆ.

“ಈ ಹುಡುಗನಿಗೆ ನನ್ನ ಮಗಳನ್ನು ಕೊಟ್ಟಿದೆ. ಒಲ್ಲೆನೆಂದು ಓಡಿ ಹೊರಟಿದ್ದಾನೆ. ನೀವಾದರೂ ಇವನಿಗೆ ಬುದ್ದಿ ಹೇಳುವಂತಿದ್ದರೆ ಹೇಳಿರಿ.” ಅದನ್ನು ಕೇಳಿ ಆ ಹುಡುಗನು ಗಾಬರಿಗೊಂಡು ಹೇಳುತ್ತಾನೆ . “ಈತನೇನು ನನ್ನ ಮಾವ ಅಲ್ಲ. ನಾನು ಇವನಿಗೆ ಅಳಿಯನಲ್ಲ. ನನ್ನ ಹೆಂಡತಿ ಮನಯಲ್ಲಿದ್ದಾಳೆ.” “ನಿಜವಾಗಿಯೂ ಈತ ನನ್ನ ಅಳಿಯ. ಈಗ ಓಡಿಹೊರಟಿದ್ದಾನೆ” ಎಂದು ನುಡಿದನು ಆ ಕಳ್ಳ.

ನೆರೆದ ಮಂದಿ ಅಂದಿತು . “ನಿನ್ನ ಮಗಳನ್ನು ಕರೆತಾ. ಆಕೆ ಬಂದು ಈತನ ಕೈಹಿಡಿದಳೆಂದರೆ ಇವನೇ ಅವಳಗಂಡ ಎಂದು ಖಾತರಿಯಾಗುತ್ತದೆ.”

ಕಳ್ಳನು ಮನೆಗೆ ಹೋಗಿ ಮಗಳಿಗೆ ಹೇಳುತ್ತಾನೆ . “ಅಲ್ಲೊಬ್ಬ ಬೆಳ್ಳಗೆ ತೆಳ್ಳಗೆ ಇದ್ದಾನೆ. ಬಗಲಲ್ಲಿ ಸೆಲ್ಲಿ ಹಿಡಿದಿದ್ದಾನೆ. ಹೊತ್ತ ಹೊರಡುವ ದಿಕ್ಕಿಗೆ ಮುಖ ಮಾಡಿದ್ದಾನೆ. ನೀನು ಹೋಗಿ ಅವನ ಕೈಹಿಡಿ. ನೆರೆದ ಮಂದಿಯೆಲ್ಲ ಅವನು ನಿನ್ನ ಗಂಡನೆಂದು ನಿಶ್ಚಯಿಸಿ ಅವನನ್ನು ನಮ್ಮೊಡನೆ ಕಳಿಸುತ್ತಾರೆ. ಅವನನ್ನು ಕೊಂದು ಅವನ ಹತ್ತಿರವಿರುವ ಬಂಗಾರದ ಲಾಲಗಳನ್ನು ತೆಗೆದುಕೊಳ್ಳೋಣ.”

ಆ ಯುಕ್ತಿಯಂತೆ ಕಳ್ಳನಮಗಳು ಬಂದು ಆತನ ಕೈಹಿಡಿಯುತ್ತಾಳೆ. – “ನೀನು ಸಿಟ್ಟುಸಿಟ್ಟಿನಿಂದ ನನ್ನನ್ನು ಬಿಟ್ಟು ಬಂದರೆ, ನಾ ಹೇಗೆ ಇರಲಿ ನಿನ್ನ ಬಿಟ್ಟು” ಎಂದು ರಾಗ ತೆಗೆಯುತ್ತಾಳೆ. ಆದ್ದರಿಂದ ಆತನು ಕಳ್ಳನಮಗಳ ಬೆನ್ನು ಹತ್ತಲೇ ಬೇಕಾಯಿತು.

ಕಳ್ಳನು ಮಗಳನ್ನೂ `ಅಳಿಯ’ನನ್ನೂ ಕರಕೊಂಡು ಹೋಗುತ್ತಾನೆ, ಮಗಳನ್ನು ಒತ್ತಟ್ಟಿಗೆ ಕರೆದು ಯುಕ್ತಿ ಹೇಳುತ್ತಾನೆ . “ಪ್ರೀತಿಮಾಡಲಿಕ್ಕೆ ಹೋದಾಗ ಆತನನ್ನು ಕೊಡಲಿಯಿಂದ ಕಡಿ”.

ಕಳ್ಳನ ಮಗಳು ಬೇರೊಂದು ಉಪಾಯ ಹೇಳುವಳು . “ಜೋರಾಬಾರಿ ಮಾಡಿ ಇವನ ಹೊಟ್ಯಾಗ ವಿಷ ಹಾಕಬೇಕು. ಎರಡು ದುಡ್ಡಿನ ವಿಷ ತೆಗೆದುಕೊಂಡು ಬಾ. ನಾ ರೊಟ್ಟಿ ಮಾಡಿ ಇವನಿಗೆ ಉಣಸತೀನಿ.”

ವಿಷ ತರುವುದಕ್ಕೆ ಕಳ್ಳನು ಹೋಗಲು, ಆತನ ಮಗಳು ಈತನಿಗೆ ಹೇಳುತ್ತಾಳೆ.- “ಬುಟ್ಯಾಗ ನಾಕು ರೊಟ್ಟಿ ಇಟ್ಟಿರತೀನು. ಮ್ಯಾಲಿನ ಎರಡು ವಿಷದ್ದು.
ಅವನ್ನು ಬಿಟ್ಟು ತೆಳಗಿನ ಎರಡುರೊಟ್ಟಿ ತಿನ್ನು”.

ಈಗ ಅವಳ ಮನಸ್ಸು ಇವನಲ್ಲಿ ನೆಟ್ಟಿತ್ತು.

ಮಗಳು ರೊಟ್ಟಿ ಮಾಡಿದಳು. ತಂದಿ-ಮಗಳು ರೊಟ್ಟಿ ಉಂಡರು; ನೀರು ಕೊಂಡರು. ಬುಟ್ಟಿಯಲ್ಲಿ ನಾಲ್ಕು ರೊಟ್ಟೆಯಿಟ್ಟು ಬುಟ್ಟಿಯನ್ನೇ ಆತನಿಗೆ ಕೊಟ್ಟರು. ಕಳ್ಳನ ಮಗಳು ಹೇಳಿದಂತೆ, ಮೇಲಿನ ಎರಡುರೊಟ್ಟಿ ಬಿಟ್ಟು, ತೆಳಗಿನ ಎರಡುರೊಟ್ಟಿ ಉಂಡು, ಸ್ವಸ್ಥವಾಗಿ ಬಂಕಿನಲ್ಲಿ ಮಲಗಿಕೊಂಡನು. ಅಪ್ಪನೂ ಮಲಗಿಕೊಂಡನು.

ಕಳ್ಳನ ಮಗಳು ಯೋಚಿಸಿ ಆತನ ಕಡೆ ಬಂದು – “ನಡೆ, ಒತ್ತರಮಾಡು. ಮನೆಯಲ್ಲಿ ಎರಡು ಕುದುರೆ ಅವೆ. ಒಂದು ಚೌವೀಸಹರಿ ಓಡುವ ಕುದುರೆ, ಇನ್ನೊಂದು ಬಾರಾಹರಿ ನಡೆಯುವ ಕುದುರೆ. ನೀನು ಚೌವೀಸ ಹರಿ ನಡೆಯುವ ಕುದುರೆ ತಗೊ೦ಡು ಊರ ಹೊರಗೆ ಬಾ. ನಾ ಅಲ್ಲಿ ಇರತೀನಿ. ಇಬ್ಬರೂ ಕೂಡಿ ಮುಂದಕ್ಕೆ ಹೋಗೋಣು.”

ಕತ್ತಲೆಯಲ್ಲಿ ಗಡಬಡಿಸಿ ಆತನು ಚೌವೀಸಹರಿಯ ಕುದುರೆಬಿಟ್ಟು ಬಾರಾಹರಿ ನಡೆಯುವ ಕುದುರೆ ಬಿಟ್ಟುಕೊಂಡು ಬಂದನು. “ಹೀಂಗ್ಯಾಕೆ ಮಾಡಿದೀ” ಎಂದು ಕಳ್ಳನಮಗಳು ಕೇಳಿದಳು. ಇಬ್ಬರೂ ಕುದುರೆ ಮೇಲೆ ಕುಳಿತುಕೊಳ್ಳುತ್ತಲೆ ಬಾರಾಹರಿ ಕುದುರೆ ಒಂದೇ ಓಟದಲ್ಲಿ ಹೋಗಿ ನಿಂತುಬಿಟ್ಟಿತು.

ತನ್ನ ಮನೆಯಲ್ಲಿ ಆ ಹುಡುಗ ಮತ್ತು ಮಗಳು ಇಲ್ಲದ್ದನ್ನು ನೋಡಿ ಕಳ್ಳನು, ಚೌವೀಸಹರಿ ನಡೆಯುವ ಕುದುರೆ ಹತ್ತಿ ಹೊರಟನು. ಒಮ್ಮಿಂದೊಮ್ಮೆ ಅವರಿದ್ದಲ್ಲಿಗೆ ಬಂದನು.

“ಈಗ ನಮ್ಮಪ್ಪ ಹೊಂಟಾನ. ನೀ ಗಪ್ಪನೆ ಗಿಡ ಏರಿ ನಿಲ್ಲು. ಆತನು ಕುದುರೆ ಬಿಟ್ಟು ನಿನ್ನ ಹಿಡೀಲಿಕ್ಕೆ ಬರತಾನ. ಅದಕ್ಕಿಂತ ಮೊದಲೇ ನಾನು ಕುದುರೆ ಹತ್ತಿ ಗಿಡದ ಕೆಳಗೆ ಬರತೀನಿ. ನೀ ಆಗ ಗಿಡದ ಮೇಲಿಂದ ಕುದುರೆ ಮ್ಯಾಗ ಜಿಗಿ” ಎಂದು ಕಳ್ಳನ ಮಗಳು ಆತನಿಗೆ ಹೇಳಿಟ್ಟಿದ್ದಳು.

ಕುದುರೆಯ ಮೇಲೆ ಕಳ್ಳ ಬಂದಾಗ ಅವನ ಮಗಳು ಅಲ್ಲೇ ನಿಂತಿದ್ದಳು – “ಎಲೆ ಮಗಾ, ನೀ ಹಿಂಗ್ಯಾಕ ಬಂದೀ ? ನಿನಗೆ ಈಸು ದಿನ ಜೋಕೆ ಜನ ಮಾಡಿದ್ದು ಸುಳ್ಳು ಮಾಡಿದೆಲ್ಲ?” ಎಂದಾಗ ಕಳ್ಳನ ಮಗಳು ಹೇಳುತ್ತಾಳೆ. “ಅಪ್ಪ, ಈತ ಈಗ ಗಿಡ ಏರ್ಯಾನ ನೋಡಪ್ಪ ಬದಮಾಶ. ನನಗೆ ಓಡಿಸಿಕೊಂಡು ಬಂದಾನ ನೋಡಪ್ಪ.”

ತಂದೆ ಕಳ್ಳನ ಕಡೆಗೆ ಹೊರಟನು. ಮಗಳು ಚೌವೀಸಹರಿ ಓಡುವ ಕುದುರೆಯೇರಿ, ಹುಡುಗನೇರಿದ ಗಿಡದ ಕೆಳಗೆ ನಿಲ್ಲಿಸಿ, ಅವನನ್ನೂ ಕರಕೊಂಡು ಕುದುರೆಗೆ ಸಪ್ ಎಂದು ಚಬಕಿಯಿಂದ ಹೊಡೆದು ಓಡಿಸಿದಳು.

ಚೌವೀಸಹರಿ ಓಡುವ ಕುದುರೆಯೇರಿ ಮಗಳು ಹೋಗಿದ್ದನ್ನು ಕಳ್ಳ ನೋಡಿದನು. ಇವರಂತೂ ದಕ್ಕಿ ಹೋದರು. ಇನ್ನು ನನ್ನ ಹಣೆಬರಹ ಏನಾಗಬೇಕು ಎಂದು ಹಳಹಳಿಪಟ್ಟನು.

ಅವನ ಪಾಲಿಗೆ ಉಳಿದದ್ದು ಬಾರಾಹರಿ ನಡೆಯುವ ಕುದುರೆ. ಅದರ ಮೇಲೇರಿ ಬಾರಾಹರಿ ನೆಲ ದಾಟಿದನು. ಹನ್ನೆರಡು ಮೊಳದ ಹಚ್ಚಡ ಹೊಚ್ಚಿಕೊಂಡು ಹೊರಟನು. ಹಾದಿಯಲ್ಲಿ ಒಂದು ಘಟನೆ ನಡೆಯಿತು.

ಇಬ್ಬರು ಗಂಡಹೆಂಡರು. ಅವರಿಗೆ ಇಬ್ಬರು ಮಕ್ಕಳು. ಅವರಿಗೆ ಬಹಳ ಬಡತನ. ಹಚ್ಚಡ ಹೊದ್ದುಕೊಂಡು ಕಳ್ಳ ಹೊರಟಾಗ, ಗಂಡನು ಹೆಂಡತಿಗೆ ಹೇಳುತ್ತಾನೆ . “ಸಣ್ಣ ಮಿಣಿ ಚೀಲು, ದೊಡ್ಡ ಮಿಣಿ ಚೀಲು ತೆಗೆದಿಡು. ಹಾಗೇ ಸರಾದೀಪ ತಗಿ” ಸಣ್ಣ ಮಿಣಿ ಚೀಲು, ದೊಡ್ಡ ಮಿಣಿ ಚೀಲ ಎಂದು ತನ್ನ ಮಕ್ಕಳನ್ನು ಕುರಿತೇ ಅಂದಿದ್ದನು. ಆದರೆ ಕಳ್ಳನು ತಿಳಿಕೊಂಡಿದ್ದೇ ಬೇರೆ. ಬಹುತೇಕ ಇವರ ಮನೆಯಲ್ಲಿ ಬಹಳ ದುಡ್ಡು ಅದೆಯೆಂದು ತಿಳಕೊಂಡನು. ಅದರಂತೆ ಸರಿರಾತ್ರಿ ಆದಾಗ ಬಡವನ ಮನೆಯೊಳಗೆ ಹೊಕ್ಕನು. ಆದರೆ ಅಲ್ಲಿ ಏನೇನೂ ಸಿಗಲಿಲ್ಲ. ಪಡಸಾಲೆಯ ಮೂಲೆಯಲ್ಲಿ ಎಳ್ಳಿನ ಹೊರತು ಯಾವ ದಾಣಿಯೂ
ಸಿಗಲಿಲ್ಲ. ಬಾರಾಮೊಳದ ಹಚ್ಚಡ ನೆಲದ ಮೇಲೆ ಹಾಸಿ ಎಳ್ಳು ಬರುಕಬೇಕೆಂದಿರುವಾಗ ಗಂಡನು ಕೆಮ್ಮಿದನು. ಹೆಂಡತಿ ಹಚ್ಚಡ ಎಳಕೊಂಡುಬಿಟ್ಟಳು. ಎಳ್ಳು ಬರುಕಿದರೂ ಅವೆಲ್ಲ ನೆಲದ ಮೇಲೆಯೇ ಬಿದ್ದುಬಿಟ್ಟವು. ಸಿಳ್ಳೋ ಎಂದು ಕಳ್ಳ ಮನೆಯ ಕಡೆಗೆ ಹೊರಟನು.

ಕಳ್ಳನ ಮಗಳು ಹಾಗೂ ಆ ಹುಡುಗ ಕೂಡಿ ಚೌವೀಸಹರಿ ನಡಯುವ ಕುದುರೆ ತಕ್ಕೊಂಡು ಮುಂದೆ ಸಾಗಿದರು. ಪಟೇಲರ ತೋಟಕ್ಕೆ ಹೋದರು. ಕುದುರೆ ಕಟ್ಟಿದರು. ಆ ಹೊತ್ತು ಅಲ್ಲೇ ವಸತಿ ಒಗೆದರು ಮಜಕೂರಿ ಆಕೆಯನ್ನು ನೋಡಿದನು. ಮನಸ್ಸಿನಲ್ಲಿ ನೆಟ್ಟುಬಿಟ್ಟಿತು ಅವಳ ರೂಪ. “ನಿಂದು ಯಾವೂರು” ಎಂದು ಕೇಳಿದನು. “ನಮ್ಮದು ಬಾಳ ದೂರ” ಅಂತ ಆಕೆ ಹೇಳಿದಳು. ಬಹಳ ಚಪಲಳಾಗಿದ್ದಂತೆ ಕಾಣುತ್ತದೆ “ನಿನ್ನ ಚೌಕಿ ಎಷ್ಟು” ಎಂದು ಮಜಕೂರಿ ಆಕೆಯನ್ನು ಕೇಳಿದನು. ನೂರು ಎಂದಳು ಕಳ್ಳನ ಮಗಳು. ಮಜಕೂರಿ ಅಷ್ಟು ರೂಪಾಯಿ ತೆಗೆದು ಅವಳ ಕೈಯಲ್ಲಿಟ್ಟನು; ಸಂಜೆಮಾಡಿ ಬರತೀನಿ ಎಂದು ಹೇಳಿದನು.

ಮಜಕೂರಿ ಚೌಕಿದಾರನ ಮುಂದೆ ಹೇಳುತ್ತಾನೆ . `ಅಬಬಾ, ತೋಟದಾಗ ಒಂದು ಹೆಣ್ಣು ಬಂದಿದೆ. ಮುಟ್ಟಿದರೆ ಮಾಸುವಂತೆ ಇದ್ದಾಳೆ.’

ಚೌಕಿದಾರ ಕೇಳುತ್ತಾನೆ ಕಳ್ಳನ ಮಗಳಿಗೆ – “ನಿನ್ನ ಚೌಕಿ ಎಷ್ಟು?”, “ಇನ್ನೂರು”, ಎಂದಳಾಕೆ.

ದೀಪ ಹಚ್ಚಿದ ಒಂದು ತಾಸಿನ ಮೇಲೆ ಬರಬೇಕೆಂದು ಹೇಳಲು ಚೌಕಿದಾರನು ಪಟೇಲನ ಬಳಿಗೆ ಹೋಗಿ ಚಲುವೆಯನ್ನು ವರ್ಣಿಸಿದನು. ಪಟೀಲನು ಬಂದು ಕೇಳುತ್ತಾನೆ . “ನಿನ್ನ ಚೌಕಿ ಎಷ್ಟು?”,
“ಮುನ್ನೂರು” ದೀಪ ಹಚ್ಚಿದ ಮೇಲೆ ಎರಡು ತಾಸಿಗೆ ಬರಬೇಕು ಎಂದಳು ಪಟೇಲನಿಗೆ. ಅದರಂತೆ ಕುಲಕರ್ಣಿಗೆ ನಾನೂರು ಎಂದು ಹೇಳಿ ನಾಲ್ಕು ತಾಸು ರಾತ್ರಿಗೆ ಬರ ಹೇಳುತ್ತಾಳೆ.

ಮಜಕೂರಿ, ಚೌಕಿದಾರ, ಪಟೇಲ, ಕುಲಕರ್ಣಿ ಹೀಗೆ ನಾಲ್ಕರಿಂದಲೂ ರೊಕ್ಕ ವಸೂಲ ಮಾಡುತ್ತಾಳೆ. ಮೊದಲಿಗೆ ಮಜಕೂರಿ ಬಂದನು. ಹೊರಸಿನ ಮೇಲೆ, ಪ್ರೀತಿತೋರಿಸಿ ಕುಳ್ಳರಿಸುತ್ತಾಳೆ; ಕೆನ್ನೆಗೊಂದು ಏಟುಕೊಡುತ್ತಾಳೆ. ಮಜಕೂರಿ ಹೊರಸಿನ ಮೇಲಿಂದ ಗಕ್ಕನೆ ಕೆಳಗೆ ಬೀಳುತ್ತಾನೆ. ಅಷ್ಟರಲ್ಲಿ ಚೌಕೀದಾರ ಬಂದು ಕೆಮ್ಮುತ್ತಾನೆ. ಮಜಕೂರಿಗೆ ಒಂದು ಸೀರೆ ಸುತ್ತಿಕೊಳ್ಳಲು ಹೇಳಿ, ಕಡಲೆ ಒಡೆಯುವ ಬೀಸುವ ಕಲ್ಲಿನ ಮುಂದೆ ಕುಳ್ಳಿರಿಸುತ್ತಾಳೆ.

ಎರಡನೆಯವನಾದ ಚೌಕಿದಾರನಿಗೆ ಮೆಲುಕಿನ ಮೇಲೆ ಕಡಬುಕೊಟ್ಟು ಹೊರಗಿನಿಂದ ಕೆಳಗೆ ಕೆಡಹುತ್ತಾಳೆ. ಅದೇ ಹೊತ್ತಿಗೆ ಪಟೇಲ ಬರುವ ಸಪ್ಪಳ ಕೇಳಿದ ಕೂಡಲೇ ಚೌಕೀದಾರನನ್ನು ಚಾಪೆಯಲ್ಲಿ ಸುತ್ತಿ, ಅವನ ತಲೆಯ ಮೇಲೆ ದೀಪದ ಹಣತಿ ಇಟ್ಟು ಮೂಲೆಯಲ್ಲಿ ನಿಲ್ಲಿಸುತ್ತಾಳೆ. ಪಟೇಲ ಬಂದು ಹೊರಸಿನ ಮೇಲೆ ಕುಳಿತನು. ಅವನ ಗೆಬ್ಬೆಗೊಂದು ಗುದ್ದಿಕೆ ಕೊಟ್ಟು ಕೆಳಗೆ ಬೀಳಿಸುವಳು. ಕುಲಕರ್ಣಿ ಕೆಮ್ಮುತ್ತ ಬರಲು, ಪಟೇಲನನ್ನು ಹೊರಸಿನ ಕೆಳಗೆ ಕಳಿಸುವಳು.

ಕುಲಕರ್ಣಿ ಹೊರಸಿನ ಮೇಲೆ ಕುಳಿತನು. ಅವನಿಗೆ ವೀಳ್ಯೆ ಮಡಚಿ ತಿನ್ನಲು ಕೊಟ್ಟಳು. ಇಬ್ಬರೂ ವೀಳ್ಯೆಮೆದ್ದು ಹೊರಸಿನ ಕೆಳಗೆ ಉಗುಳಿದರು. ಪಟೇಲನ ಮೈಯೆಲ್ಲ ಉಗುಳೇ ಉಗುಳು. ಆಕೆ ಕಾಲು ಮಡಿದು ಬರುವೆನೆಂದಳು.

ಕುದುರೆಯನ್ನು ಬಿಟ್ಟುಕೊಂಡು ಚಪರಕಿ ಬಾರಿಸಿ ಕಳ್ಳನ ಮಗಳು ತನ್ನ ಪ್ರಿಯನೊಡನೆ ಚೌವೀಸಹರಿ ಮುಂದೆ ಹೋದಳು.

ಮಜಕೂರನ ಕಡಲೆ ಒಡೆಯುವ ಕೆಲಸ ಮುಗಿಯಲೊಲ್ಲದು. ಹಣತೆಯಿಂದ ಸುಡುವ ಎಣ್ಣೆ ಚೌಕೀದಾರನ ತಲೆಯ ಮೇಲೆ ಬೀಳಹತ್ತಿದೆ, ವೀಳ್ಯದ ಉಗುಳಿನಲ್ಲಿ ಪಟೇಲನು ಉರುಳಾಡುತ್ತಿದ್ದಾನೆ. ಚೆಲುವಿಯ ಹಾದಿ ನೋಡುತ್ತ ಕುಲಕರ್ಣಿ ಹೊರಸಿನ ಮೇಲೆ ಕುಳಿತಿದ್ದಾನೆ. ಹೀಗೆ ನಾಲ್ವರಿಗೂ ಕೈಕೊಟ್ಟು ಕಳ್ಳನ ಮಗಳು
ಅಲ್ಲಿಂದ ಓಡಿಹೋದಳು.

ಇಪ್ಪತ್ತುನಾಲ್ಕು ಹರದಾರಿ ಬಂದು ಕುದುರೆ ನಿಂತಲ್ಲಿ ಒಂದೂರು ಇತ್ತು. ಅಲ್ಲಿ ಕೋಮಟಿಗರ ಹುಡುಗನು ಆ ಕಳ್ಳನ ಮಗಳ ಮೇಲೆ ಮನಸ್ಸು ಮಾಡುತ್ತಾನೆ. ಅಂದು ರಾತ್ರಿ ಅವರಿಬ್ಬರೂ ಆಗ್ರಹಮಾಡಿ ವಸತಿ ಮಾಡಹಚ್ಚುತ್ತಾನೆ, ನೀರು ತರಲಿಕ್ಕೆ ಗುಂಡರಿಗೆ ಕೊಡುತ್ತಾನೆ. ಅಡಿಗೆ ಮಾಡಿ ಊಟಮಾಡುತ್ತಾರೆ. ಕೋಮಟಿಗರ ಹುಡುಗನು ಅವರಿಬ್ಬರೂ ಮಲಗಿದ ಕೋಣೆಯಲ್ಲಿ ಮಲಗುತ್ತಾನೆ. ಕಳ್ಳನ ಮಗಳ ಕೈಮೇಲೆಕೈ ಚಲ್ಲುತ್ತಾನೆ. ಆಗ ಆಕೆ ತನ್ನವನನ್ನು ಎಬ್ಬಿಸುವ
ಪ್ರಯತ್ನ ಮಾಡುತ್ತಾಳೆ. ಆದರೆ ಅವನಿಗೆ ಗಾಢನಿದ್ರೆ ಹತ್ತಿದೆ. ಇನ್ನು ಹೊತ್ತು ಹೊರಡಲು ಒಂದು ತಾಸು ವೇಳೆ ಇದ್ದಾಗ ಕಳ್ಳನ ಮಗಳು, ಕುದುರೆ ಕೋಗೀರು ಹಚ್ಚಿ ಊರ ಬೀಡಬೇಕೆನ್ನುತ್ತಾಳೆ. ಅವಳವನೂ ಸಿದ್ಧನಾದನು. ಹೊತ್ತರಳುವ ವೇಳೆಯಲ್ಲಿ ಹೊರಟುನಿಂತಾಗ – “ಯಾವುದಾದರೂ ನಿಮ್ಮ ಸಾಮಾನು ಬಿಟ್ಟರುವಿರೇನು ನೋಡಿರಿ” ಎಂದು ಕೋಮಟಿಗರವನು ಕೇಳುವನು. ಒಂದು ಗಂಟು ಕಾಣಿಸಲಿಲ್ಲ. ಅದನ್ನು ನೋಡಲಿಕ್ಕೆ ಆ ಹುಡುಗನು ಕುದುರೆ ಹತ್ತಿ, ಕಳ್ಳನ ಮಗಳ ಸಂಗಡ ಹೋಗಿಬಿಟ್ಟನು.

ಆ ಹುಡುಗನು ಇಳಕೊಂಡ ಮನೆಯಲ್ಲಿ ಹೋಗಿ ನೋಡುವಷ್ಟರಲ್ಲಿ ಬಂಗಾರದ ಒಂದು ಲಾಲ ಸಿಗುತ್ತದೆ. ಅದನ್ನು ಕಿಸೆಯಲ್ಲಿರಿಸಿಕೊಂಡು ಮನೆಗೆ ತೆರಳುತ್ತಾನೆ. ಅಪ್ಪನಿಗೆ ಹೇಳುತ್ತಾನೆ . ಇದೊಂದು ಲಾಲ ತಂದೀನಪ್ಪ. ಏಕಲಾಲ, ಪೃಥ್ವಿಕಾ ಮೋಲ – ಎಂದು ಒಗಟು ಹೇಳುತ್ತಾನೆ.

ಹೆಂಡತಿ ಊಟಕ್ಕೆ ಕೊಡುತ್ತಾಳೆ. ಆಕೆ ನೆರೆಮನೆಯ ಅಕ್ಕಸಾಲೆಯ ಮುಂದೆ ತನ್ನ ಗಂಡ ತಂದ ಬಂಗಾರದ ಲಾಲದ ಕಥೆ ಹೇಳುತ್ತಾಳೆ ಮತ್ತು ಅದನ್ನು ತೋರಿಸುತ್ತಾಳೆ. ಅಕ್ಕ ಸಾಲಿಗನು ಆ ಲಾಲವನ್ನು ಬದಲಿಸಿ ಖೊಟ್ಟಿ ಲಾಲವನ್ನು ಅಲ್ಲಿಡುತ್ತಾನೆ.

ತಾಯಿತಂದೆಗಳು ಲಾಲವನ್ನು ಪರೀಕ್ಷಿಸಲು ಆದು ಜೋಡಿಗೆ ಹಾಕುವ ಲಾಲವೆಂದು ಗೊತ್ತಾಯ್ತು. ಅವರಿಗೆ ಬಹಳ ಸಿಟ್ಟುಬಂತು . “ಇಪ್ಪತ್ತುನಾಲ್ಕು ವರ್ಷ ಕಷ್ಟಪಟ್ಟು ಇದೊಂದು ಬಿಕನಾಶಿ ಲಾಲ ತಂದಿರುವಿ. ಇಂದಿನಿಂದ ಈ ಕೊಡಲಿ ಒಯ್ದು, ಕಟ್ಟಿಗೆ ಕಡಿದುತಂದು, ಮಾರಾಟ ಮಾಡಿಕೊಂಡು ಬಾ” ಎಂದು ಅವನನ್ನು ಕಳಿಸುತ್ತಾರೆ.

ಹುಡುಗನು ಕೋಟೆಗೆ ಹೋಗುತ್ತಾನೆ. ಅಲ್ಲಿ ಅವನು ಕೋಮಟಿಗನ ಮುಂದೆ ಕಟ್ಟಿಗೆಯ ಹೊರೆಹೊತ್ತು ಸಾಗಿರುವಾಗ, ಕಳ್ಳನ ಮಗಳು ಕೋಮಟಿಗರವನಿಗೆ. “ಹೇಗೂ ನನ್ನನ್ನು ಮೋಸ ಮಾಡಿ ತಂದಿರುವಿ. ಇನ್ನು ಸೀರೆ ತಾ, ಕುಬಸ ತಾ. ನಾಲ್ಲು ಒಡ್ಡಿ ಅಕ್ಕಿ ತಾ”, ಎಂದು ಹೇಳಿ ಅವನನ್ನು ಪೇಟೆಗೆ ಕಳಿಸುತ್ತಾಳೆ.

ಮೂವರು ಹಾದಿಯಲ್ಲಿ ಹೊರಟಾಗ ಆಕೆ ಕೇಳುತ್ತಾಳೆ . “ಒಂದು ತಿಂಗಳು ನಮ್ಮಲ್ಲಿ ನೌಕರಿ ಮಾಡುವಿರೇನು?” “ತಗ್ಗಿಗೆ ಹೋಗಿ ತಲೆ ಹೊಡೆಯಬೇಕಾಗುತ್ತದೆ” ಎಂದು ಹೇಳುತ್ತಾಳೆ.

“ಯಾಕಾಗಲೊಲ್ಲದು” ಎಂದು ಹೇಳಲು ತಿಪಲು ಮಾಡಿ, ಕೋಮಟಿಗರ ಹುಡುಗನನ್ನು ಹೊಡೆದು ಹಾಕುತ್ತಾರೆ.

ಬೇಳೆ, ಅಕ್ಕಿ ತಂದು ಕಡಾಯಿ ಏರಿಸಿ ಹುಗ್ಗಿ ತಯಾರು ಮಾಡುತ್ತಾಳೆ. ಊರಿಗೇ ಊಟ ಕೊಡುತ್ತಾಳೆ. ಕಟ್ಟಿಗೆ ಮಾರುತ್ತ ಬಂದ ಹುಡುಗನನ್ನು ಕೇಳುತ್ತಾಳೆ, ನಿನ್ನ ಪರಿಸ್ಥಿತಿ ಹೀಗೇಕೆ ಎಂದು. ಅವನು ತನ್ನ ಕಥೆಯನ್ನೆಲ್ಲ ಹೇಳುತ್ತಾನೆ. ಆಗ ತಾನು ಅವನ ಹೆಂಡತಿಯೆಂದು ಸ್ಪಷ್ಟಮಾಡುತ್ತಾಳೆ.

ಊರಮಂದಿಯೆಲ್ಲ ಊಟಕ್ಕೆ ಬಂದರು. ಆದರೆ ಅಕ್ಕಸಾಲಿಗನು ಬಂದಿರಲಿಲ್ಲ. ಇಬ್ಬರು ಗುಮಾಸ್ತರು ಅವನ ಮನೆಗೆ ಹೋಗಿ ಅವನಿಗೆ ಕೋಮಟಿಗನ ಹೆಣ ತೋರಿಸಿದರು. ಆಗ ಅಕ್ಕಸಾಲಿಗನು ಬಂಗಾರದ ಲಾಲ ಕೊಡುತ್ತಾನೆ. ಆಗ ಕಳ್ಳನ ಮಗಳು ಅನ್ನುತ್ತಾಳೆ ಮಾವನಿಗೆ. “ನಾನು ನಿನ್ನ ಮಗನ ಹೆಂಡತಿ ಗಟ್ಟಿ.. ನೀವು ಅತ್ತೆಮಾವ ಗಟ್ಟಿ. ನಾ ನಿಮ್ಮ ಸೂಸೆ ಗಟ್ಟಿ”.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಲುಮೆಯ ಹೂವು
Next post ಆಡೋನು ಬಾ ಅಲಾವಿ

ಸಣ್ಣ ಕತೆ

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…