ಪ್ರಿಯ ಸಖಿ,

ಪ್ರಪಂಚದಲ್ಲೇ ಅತಿ ಶ್ರೇಷ್ಠ ಜೀವಿ ಮಾನವನೆನ್ನುತ್ತಾರೆ. ಏಕೆಂದರೆ ಅವನು ಚಿಂತಿಸಬಲ್ಲ, ಮಾತಾಡಬಲ್ಲ, ವಿವೇಚಿಸಬಲ್ಲ  ಎಲ್ಲಕ್ಕಿಂತಾ ಹೆಚ್ಚಾಗಿ ಎಲ್ಲವನ್ನೂ ಪ್ರೀತಿಸಬಲ್ಲ ಮನಸ್ಸೊಂದು ಅವನಲ್ಲಿದೆ. ಅದೇ ಅವನ ಹಿರಿಮೆಯನ್ನು ಹೆಚ್ಚಿಸಿದೆ. ಕವಿ ಕುವೆಂಪು ಅವರು ತಮ್ಮ ಒಂದು ಕವನದಲ್ಲಿ,

ಕಡಲಿನಾಳವು ಮಿಗಿಲುManasu
ಕಡಲಿಗಿಂತಲು ಮಿಗಿಲು
ಮನಸಿನಾಳ
ಬಾನಿನಗಲವು ಮಿಗಿಲು
ಬಾನಿಗಿಂತಲು ಮಿಗಿಲು
ಮನುಜನೆದೆಯು

ಎಂದಿದ್ದಾರೆ. ಕಡಲಿನ ಆಳವನ್ನು ಬಾನಿನ ಅಗಲವನ್ನು ಯಾರಿಂದಲೂ ಅಳೆಯಲಾಗಲಿಲ್ಲ. ಅದಕ್ಕಿಂತಾ ಆಳ ಹಾಗೂ ಅಗಲವಾದದ್ದು ಮಾನವನ ಮನಸ್ಸು ಎಂದಿದ್ದಾರೆ ಕವಿ. ನಿಜಕ್ಕೂ ಹೀಗಾದರೆ ಎಷ್ಟು ಚೆನ್ನ ಅಲ್ಲವೇ ಸಖೀ? ಈ ಮಟ್ಟಕ್ಕೆ ನಮ್ಮ ಮನಸ್ಸನ್ನು ನಾವು ಉಪಯೋಗಿಸಿಕೊಳ್ಳುತ್ತಿದ್ದೇವೆಯೇ? ಎಂದು ಒಂದು ಪ್ರಶ್ನೆ ಹಾಕಿಕೊಳ್ಳಲೇಬೇಕು. ನಮ್ಮ ಜನ್ಮವನ್ನು ವ್ಯರ್ಥವಾಗಿಸುತ್ತಿರುವುದನ್ನು ಕಂಡೇ ದಾಸರು “ಮನುಜ ಜನ್ಮ ದೊಡ್ಡದು ಅದ ಹಾನಿ ಮಾಡಬೇಡಿರೋ
ಹುಚ್ಚಪ್ಪಗಳಿರಾ” ಎಂದಿರುವುದು.

ಒಳಿತು-ಕೆಡಕುಗಳೆರಡೂ ವ್ಯಕ್ತಿಯೊಬ್ಬನಲ್ಲಿ ಸಮಪ್ರಮಾಣದಲ್ಲಿ ಮಿಳಿತವಾಗಿರುತ್ತದೆ. ಯಾವುದಕ್ಕೆ ನಾವು ಬದುಕಿನಲ್ಲಿ ಹೆಚ್ಚು ಪ್ರಾಶಸ್ತ್ಯ ನೀಡುತ್ತಾ ಹೋಗುತ್ತೇವೋ ಅದು ನಮ್ಮಲ್ಲಿ ಒಂದಾಗುತ್ತಾ ಹೋಗುತ್ತದೆ. ನಮ್ಮ ವ್ಯಕ್ತಿತ್ವವಾಗಿ, ಗುಣವಾಗಿ ನಾವು ಬೆಳೆದಂತೆಲ್ಲಾ ಬೆಳೆಯ ತೊಡಗುತ್ತದೆ. ನಾವು ಮನಃಪೂರ್ವಕವಾಗಿ ತಿರಸ್ಕರಿಸಿದ್ದು ನಮ್ಮಿಂದ ಕಳೆದುಹೋಗುತ್ತಾ ಬರುತ್ತದೆ. ಆದ್ದರಿಂದಲೇ ಇಲ್ಲಿ ಆಯ್ಕೆಗೆ ಹೆಚ್ಚಿನ ಮಹತ್ವವಿದೆ.

ಸಾಫೋಕ್ಲಿಸ್ ಹೀಗೆ ಹೇಳುತ್ತಾನೆ. “ಅದ್ಭುತಗಳು ಅನೇಕ. ಆದರೆ ಮನುಷ್ಯನನ್ನು ಮೀರಿದ ಅದ್ಭುತ ಇಲ್ಲ” ಎಂದು ವ್ಯಕ್ತಿಯೊಬ್ಬನಲ್ಲಿ ಎಷ್ಟೊಂದು ಅದ್ಭುತ ಶಕ್ತಿಗಳು ಇರಬಹುದು. ಅದನ್ನು ಕಂಡುಕೊಳ್ಳುವ ಜವಾಬ್ದಾರಿ ವ್ಯಕ್ತಿಯದೇ ಆಗಿರುತ್ತದೆ. ಅವನು ಮನಸ್ಸು ಮಾಡಿದರೆ ಯಾವುದನ್ನೂ ಸಾಧಿಸಬಲ್ಲ. ತನ್ನಲ್ಲಿರುವ ಒಳಿತನ್ನು, ಪ್ರೀತಿಯನ್ನು ಜಾಗೃತಗೊಳಿಸಿ ಕಡಲಿನ ಆಳಕಿಂತಲೂ ಮಿಗಿಲು, ಬಾನಿನಗಲಕ್ಕಿಂತಲೂ ಮಿಗಿಲಾದ ಮನಸ್ಸನ್ನು ಹೊಂದಿದರೆ ಸಾಮಾನ್ಯ ಮಾನವನೂ ವಿಶ್ವಮಾನವನಾಗುವುದರಲ್ಲಿ ಸಂದೇಹವೇ ಇಲ್ಲ. ನೀನೇನೆನ್ನುತ್ತೀ ಸಖೀ?
*****