ಮೂರ್‍ಖರಾಗದೇ ಉಳಿವೆವೇ ?

ಮೂರ್‍ಖರಾಗದೇ ಉಳಿವೆವೇ ?

ಪ್ರಿಯ ಸಖಿ,

ಜ್ಞಾನಪೀಠ ಪ್ರಶಸ್ತಿ ವಿಜೇತರಾದ ಲೇಖಕ ಯು. ಆರ್. ಅನಂತಮೂರ್‍ತಿಯವರು ಸಂವಾದಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ನಮ್ಮ ದೇಶದ ದುರಂತವೆಂದರೆ ಜನರಿಗೆ ಮೊದಲು ದೂರದರ್‍ಶನವನ್ನು ನೀಡಿದ್ದು! ಮೊದಲು ನಾವು ಜನರಿಗೆ ವೈಚಾರಿಕ ಪ್ರಜ್ಞೆಯನ್ನು, ವಿವೇಚನೆಯನ್ನು ಮೂಡಿಸುವಂತಹ ಉತ್ತಮ ಶಿಕ್ಷಣವನ್ನು ನೀಡಬೇಕಿತ್ತು. ಆದರೆ ಯೋಚನೆ ಮಾಡದೇ ಅಂಧರಾಗಿ ಮೂರ್‍ಖರ ಪೆಟ್ಟಿಗೆಯನ್ನು ನೀಡಿಬಿಟ್ಟಿದ್ದೇವೆ ಎಂದು ವಿಷಾದಿಸಿದರು.

ದೂರದರ್‍ಶನ ಹಾವಳಿಯಿಂದ ಇಂದು ಮನೆಗಳಲ್ಲಿ ಆರೋಗ್ಯ ಪೂರ್‍ಣ ಮಾತುಕತೆ, ಚರ್‍ಚೆ, ನಗುಹರಟೆಗಳು ಹೆಚ್ಚು ಕಡಿಮೆ ನಿಂತೇ ಹೋಗಿವೆ. ಕಿರಿಯರಲ್ಲಿ ಬುದ್ಧಿ ಕೌಶಲ್ಯವನ್ನು ಹೆಚ್ಚಿಸುತ್ತಿದ್ದ ನಮ್ಮ ಅನೇಕ ಒಳಾಂಗಣ ಆಟಗಳಾದ ಚೌಕಾಬಾರ, ಪಗಡೆ, ಅಳುಗುಳಿ ಮನೆ, ಹುಲಿ ಕುರಿ, ಇತ್ಯಾದಿ ಆಟಗಳು ಎಂದೋ ಮೂಲೆ ಸೇರಿವೆ. ಇಂದಿನ ಪೀಳಿಗೆಯ ಮಕ್ಕಳು ಬಹುಶಃ ಈ ಆಟಗಳ ಹೆಸರನ್ನೂ ಕೇಳಲಿಲ್ಲವೇನೋ? ಜೊತೆಗೆ ದೂರದರ್‍ಶನ ಈ ಪೀಳಿಗೆಯವರಿಂದ ಅತ್ಯಂತ ಮಹತ್ವದ ಓದಿನ ಹವ್ಯಾಸವನ್ನೇ ನುಂಗಿಬಿಟ್ಟಿದೆ. ಅಗಾಧ ಸಾಹಿತ್ಯ ಭಂಡಾರವನ್ನು ಹೊಂದಿರುವ ಕನ್ನಡ ಸಾಹಿತ್ಯ ಕ್ಷೇತ್ರ, ಓದುವವರು ಕಡಿಮೆಯಾಗಿ ದಿನದಿಂದ ದಿನಕ್ಕೆ ಸೊರಗುತ್ತಿದೆ. ನಮ್ಮ ಸಂಸ್ಕೃತಿಯ ಒಂದು ಭಾಗವಾಗಿರುವ ಜನಪದರಿಂದ ಬಳುವಳಿ ಬಂದ ಒಗಟು, ಗಾದೆ, ನುಡಿಗಟ್ಟು, ಒಡಪಿನ ಹಾಡುಗಳು ಮಕ್ಕಳಿಗಿರಲಿ ದೊಡ್ಡವರಿಗೇ ಬೇಡವಾಗುತ್ತಿದೆ.

ಕ್ರೌರ್‍ಯ, ಹಿಂಸೆ, ಅನೈತಿಕ ಸಂಬಂಧಗಳನ್ನು ವೈಭವೀಕರಿಸುವ ಚಲನಚಿತ್ರ, ದೂರದರ್‍ಶನ ಧಾರಾವಾಹಿಗಳು ನೂರೆಂಟು ಚಾನೆಲ್ಗಳಲ್ಲಿ ಹರಿದು ಬರುವ ಹಾಡು ಕುಣಿತಗಳು ನಮ್ಮ ಸಂಸ್ಕೃತಿಯ ಔನ್ನತ್ಯವನ್ನು ಕ್ರಮೇಣ ನುಂಗಿಹಾಕುತ್ತಿವೆ. ಒಂದಾದ ನಂತರ ಒಂದು ಹರಿದು ಬರುವ ಧಾರಾವಾಹಿಗಳನ್ನು ನೋಡುತ್ತಾ ಅಮೂಲ್ಯ ಸಮಯ, ಕಲೆಗಾರಿಕೆ, ಹವ್ಯಾಸಗಳು, ಹೊಸದನ್ನು ಆವಿಷ್ಕರಿಸುವ ಮನೋಭಾವವನ್ನು ನಮ್ಮ ಪೀಳಿಗೆಯವರು ಕಳೆದುಕೊಳ್ಳುತ್ತಿರುವುದು ಅರಿವಿಗೆ ಬರುವುದು ಯಾವಾಗ ? ಧಾರಾವಾಹಿಗಳು ಬರುತ್ತಿರುವಾಗ ಮನೆಗೆ ಬಂದ ಅತಿಥಿ, ಸ್ನೇಹಿತರನ್ನು ಮಾತನಾಡಿಸುವ ತಾಳ್ಮೆ, ವ್ಯವಧಾನವೂ ಮನೆಯವರಿಗೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಯೋಚಿಸಿದಾಗ ಸಾಮಾಜಿಕ ಸಮ್ಮಿಲನದ ಮೂಲ ಕೊಂಡಿಯೂ ಈ ಮೂಲಕ ಕಳೆದುಕೊಳ್ಳುತ್ತಿರುವುದು ತಿಳಿಯುತ್ತದೆ. ದೂರದರ್‍ಶನದ ನಿರಂತರ ನೋಡುವಿಕೆಯಿಂದ ಇತ್ತೀಚಿನ ದಿನಗಳಲ್ಲಿ ನೇತ್ರ ಸಂಬಂಧಿ ರೋಗಗಳು ಹೆಚ್ಚಿರುವುದನ್ನು, ಅವರ ಮುಂದೆ ಕುಳಿತು ಏಕಾಗ್ರತೆಯಿಲ್ಲದೆ ಊಟ, ತಿಂಡಿ ಮಾಡುವುದರಿಂದ ಜೀರ್‍ಣ ಕ್ರಿಯೆಗೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತಿರುವುದನ್ನು ಸಂಶೋಧನೆಗಳು ದೃಢಪಡಿಸಿವೆ.

ಸಖಿ, ದೂರದರ್‍ಶನದ ಕಪಿಮುಷ್ಠಿಗೆ ಸಿಲುಕಿರುವ ನಮ್ಮ ಸಮುದಾಯ ನಾವು ಊಹಿಸಲೂ ಸಾಧ್ಯವಿಲ್ಲದಂತಹ ಮಾನಸಿಕ ದಾಸ್ಯಕ್ಕೆ ಒಳಗಾಗಿಬಿಟ್ಟಿದೆ. ಇಂದು ಕಣ್ಣಿಗೆ ಕಾಣದಂತಹ ಆದರೆ ನಾಳೆ ನಮ್ಮ ಸುಂದರ ಭವಿಷ್ಯವನ್ನು ಸದ್ದಿಲ್ಲದಂತೆ ನಿರ್‍ನಾಮ ಮಾಡಬಲ್ಲ ಶಕ್ತಿ ದೂರದರ್‍ಶನಕ್ಕಿದೆ. ಹಾಗೆಂದು ಅದರಲ್ಲಿ ಬರುತ್ತಿರುವ ಒಳಿತು, ಮಾಹಿತಿ, ತಿಳುವಳಿಕೆ, ಅವಶ್ಯವಿರುವಷ್ಟು ಆರೋಗ್ಯ ಪೂರ್‍ಣವಾದ ಮನರಂಜನೆಯನ್ನಷ್ಟೇ ತೆಗೆದುಕೊಂಡು ಮಿಕ್ಕಿದ್ದನ್ನು ಬಿಟ್ಟು ಬಿಡುವ ವಿವೇಚನೆ ನಮ್ಮಲ್ಲಿದೆಯೇ ಎಂಬುದೇ ಮುಖ್ಯ ಪ್ರಶ್ನೆ. ಸಖಿ, ಮೂರ್‍ಖರ ಪೆಟ್ಟಿಗೆಯನ್ನು ನೋಡುತ್ತಾ ಮೂರ್‍ಖರೂ ಆಗಬಹುದು, ಅದರಲ್ಲಿ ಬೇಕಷ್ಟನ್ನು ನೋಡಿ ಜಾಣರೂ ಆಗಬಹುದು. ಆಯ್ಕೆ ನಮ್ಮ ಮುಂದಿದೆ. ಮೂರ್‍ಖರಾಗದೇ ಉಳಿಯೋಣ ಆಲ್ಲವೇ ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರುಭೂಮಿ
Next post ಒಂದು ದ್ರುಢವಚನ

ಸಣ್ಣ ಕತೆ

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…