ಪರಮದಾನಿಗಳ ಬೀಡು, ವಾಣಿಜ್ಯೋದ್ಯಮಿಗಳ ನಾಡು, ಲಲಿತಕಲೆಗಳ ತವರೂರು ವಿದ್ವಜ್ಜನರ ಕೂಡಲ ಸಂಗಮವೆಂದೇ ಪ್ರಖ್ಯಾತವಾದ ದಾವಣಗೆರೆ ನಗರದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಮಾಜದ ಮಹಾಸಮ್ಮೇಳನ ನಡೆಯುತ್ತಿದೆ. ಅದ್ದೂರಿ ಜಾತಿ ಸಮ್ಮೇಳನಗಳಿಂದ ಸಂಬಂಧಪಟ್ಟ ಜನಾಂಗದ ಅಭಿವೃದ್ಧಿಗೆ ಎಷ್ಟರಮಟ್ಟಿಗೆ ಸಹಾಯವಾಗುತ್ತದೆಂಬ ಜಿಜ್ಞಾಸೆಯ ಜೊತೆಗೆ ಸಮಾಜಕ್ಕಂತೂ ಯಾವುದೇ ಲಾಭವಾಗದೆಂಬುದಂತೂ ಪರಮಸತ್ಯ. ಜಾತಿಗಳು ನಾಶವಾಗಬೇಕು ಮಾನವಕುಲ ತಾನೊಂದೆವಲಂ ಎಂದು ಬೊಬ್ಬೆ ಹೊಡೆವವರ ನಡುವೆಯೂ ಇಂತಹ ಸಮ್ಮೇಳನಗಳು ಕಾಲ ಕಾಲಕ್ಕೆ ನಡೆದು ಜನರಲ್ಲಿ ಜಾತಿ ಬಲದ ಪ್ರದರ್ಶನವಾಗಿ, ಜಾತೀಯತೆ ಮತ್ತೆ ತಲೆ ಎತ್ತಲು ಕಾರಣವಾಗುತ್ತದೆಂಬ ಕಸಿವಿಸಿಯಾಗದಿರದು. ಜಾತಿಗೊಬ್ಬ ಜಗದ್ಗುರುಗಳು ಹುಟ್ಟಿಕೊಳ್ಳುತ್ತಿರುವ ೨೧ನೇ ಶತಮಾನದಲ್ಲಿ ಜಾತಿಯ ವಿಷವೃಕ್ಷಕ್ಕೆ ನೀರೆರವ ಮಠಾಧೀಶರು, ರಾಜಕಾರಣಿಗಳು, ಜಾತಾಂಧರ ಆಟಾಟೋಪ ದೌರ್ಜನ್ಯಗಳು ಅಧಿಕವಾಗುತ್ತಿರುವುದನ್ನು ಅವಲೋಕಿಸುವಾಗ ಮುಂದೆ ಇಂತಹ ಸಮ್ಮೇಳನಗಳು ಸಮಾಜವನ್ನು ಎತ್ತಕೊಂಡೂಯ್ಯುತ್ತವೋ ಎಂಬ ಭೀತಿ ಉಂಟಾಗದಿರದು. ಕೇವಲ ರಾಜಕೀಯ ಲಾಭಕ್ಕೆ ಎಲ್ಲಾ ಜಾತಿಗಳಲ್ಲಿಯೂ ಇಂತಹ ಸಮ್ಮೇಳನಗಳನ್ನು ಉಳಿಸಿಕೊಳ್ಳಲೆಂದೇ ಹರಸಾಹಸ ಮಾಡುವ ದೊಡ್ಡ ಮಂದಿಗಳದ್ದೇ ಕಾರುಬಾರು-ದರ್ಬಾರು.

ಇದೆಲ್ಲಾ ಏನೇ ಇರಲಿ ವಾಲ್ಮೀಕಿ – ನಾಯಕ ಸಮಾಜ ಹೆಮ್ಮೆ ಪಡುವಂತಹ ಐತಿಹ್ಯ ಪ್ರಾಗೈತಿಹಾಸ ಇತಿಹಾಸವನ್ನು ಹೊಂದಿರುವುದು ಅತ್ಯಂತ ಅಭಿಮಾನದ ಸಂಗತಿ.

ಮಹರ್ಷಿ ವಾಲ್ಮಿಕಿ : ವಾಲ್ಮೀಕಿಯಂತಹ ಮಹರ್ಷಿ ವಿಶ್ವಮಾನವನ ಜನಾಂಗವಿದು ಎಂಬುದೇ ಒಂದೇ ಹೆಗ್ಗಳಿಕೆಯ ವಿಷಯ. ಮಹಾಬಲ ಅತುಳ ಪರಾಕ್ರಮ ಧನುರ್ವಿದ್ಯಾ ಪ್ರವೀಣ ಶಂಖಚೂಡನೆಂಬ ವ್ಯಾಧ ದಾರಿಯ ನಡುವೆ ದಟ್ಟಡವಿಯಲ್ಲಿದ್ದು ದಾರಿಹೋಕರ ತಲೆಯೊಡೆದು ಜೀವನವನ್ನು ಸಾಗಿಸುತ್ತಿದ್ದಂತಹ ಮಹಾಕ್ರೂರಿ. ಇಂತಹ ಅಮಾನುಷ ವ್ಯಕ್ತಿ ಒಮ್ಮೆ ಹಾದಿಯಲ್ಲಿ ಬಂದ ಸಪ್ತ ಋಷಿಗಳನ್ನೂ ಬಿಡಲಿಲ್ಲವಂತೆ. ಆದರೆ ಅವರ ತಪಸ್ಸಿನ ಪ್ರಭಾವದಿಂದಾಗಿ ವಾಲ್ಮೀಕಿ ಸಂಸ್ಕಾರಗೊಂಡ ಎಂಬುದು ಐತಿಹ್ಯ. ಒಮ್ಮೆ ಕ್ರೌಂಚ ಪಕ್ಷಿಗಳೆರಡು ಪ್ರಣಯದಾಟದಲ್ಲಿದ್ದಾಗ ಒಂದಕ್ಕೆ ಬಾಣ ತಗುಲಿ ಅದು ವಿಲವಿಲನೆ ಒದಾಡಿ ಅಸು ನೀಗಿದ್ದನ್ನು ಅದರ ಸುತ್ತ ಪರಿತಪಿಸುತ್ತ ಹಾರಾಡಿದ ಹೆಣ್ಣು ಪಕ್ಷಿಯ ವೇದನೆಯನ್ನು ಕಂಡು ಶಂಖಚೂಡನ ಮನಃಪರಿವರ್ತನೆಯಾಯಿತು. ಕ್ರೌರ್ಯದ ಜಾಗದಲ್ಲಿ ಕಾರುಣ್ಯ ತುಂಬಿಕೊಂಡಿತು. ಜನರ ತಲೆಯೊಡೆದು ಬದುಕುತ್ತಿದ್ದವನ ಬದುಕಿನಲ್ಲಿ ಸಾಹಿತ್ಯದ ಬೆಳಗು ಹರಿಯಿತು. ಕಾಠಿಣ್ಯ ತುಂಬಿ ತುಳುಕುತ್ತಿದ್ದ ಅವನ ಮನ ಕಾವ್ಯದ ಕಡಲಾಯಿತು. ಇದೇ ಪ್ರಸಂಗ ರಾಮಾಯಣದಂತಹ ಸರ್ವೊತೃಷ್ಟ ಸರ್ವಕಾಲಿಕ ಗ್ರಂಥವನ್ನು ಬರೆಯಲು ನಾಂದಿಯಾಯಿತೆಂಬ ಐತಿಹ್ಯವಿದೆ. ಶಂಖ ಚೂಡ ನಾರದ ಮಹರ್ಷಿಗಳ ಭೇಟಿ ಮತ್ತವರ ಪ್ರೇರಣೆಯಿಂದ ತಪಸ್ಸಿಗೆ ಕುಳಿತುಬಿಡುತ್ತಾನೆ. ಅವನ ಸುತ್ತ ಹುತ್ತ ಬೆಳೆದುಕೊಳ್ಳುತ್ತದೆ. ತಪಸ್ಸು ಮುಗಿಸಿ ಹುತ್ತದಿಂದ (ವಾಲ್ಮೀಕದಿಂದ) ಹೊರಬಂದ ಅವನನ್ನು ವಾಲ್ಮೀಕಿ ಎಂದು ಕರೆದು ಸಪ್ತ‌ಋಷಿಗಳು ಹರಸಿದರೆಂಬ ಪ್ರತೀತಿ ಇದೆ.

ವಾಲ್ಮೀಕಿ ಮಹಾಮಾನವತಾವಾದಿ ಆದರ್ಶ ಪುರುಷ, ನುಡಿದಂತೆ ನಡೆದವ. ಮಹಿಳಾ ಕುಲದ ಬಗ್ಗೆತುಂಬು ಗೌರವವೆಂಬುದಕ್ಕೆ ಆತ ಸೀತಾಮಾತೆಗೆ ನೆಲೆಕೊಟ್ಟಿದ್ದೇ ಸಾಕ್ಷಿ.

ಮಕ್ಕಳ ಬಗ್ಗೆ ತುಂಬು ಅಂತಃಕರಣ, ಲವ-ಕುಶರ ಸಾಕು ತಂದೆಯಿದ್ದಂತೆ ವಾಲ್ಮೀಕಿಗೆ ಪ್ರಾಣಿ ಪಕ್ಷಿಗಳಲ್ಲಿ ಅಪಾರ ಕರುಣೆ, ಇಂತಹ ಮೇರುಗುಣಗಳ ವ್ಯಕ್ತಿ ತನ್ನ ಕಾವ್ಯಕ್ಕೆ ಆರಿಸಿಕೊಂಡದ್ದು ದೇವ ಗುಣಗಳ ಶ್ರೀರಾಮ ಚಂದ್ರನನ್ನೇ. ರಾಮ ಸರಳ ಸುಂದರ ಪ್ರಾಮಾಣಿಕ, ಮಾತಿಗೆ ತಪ್ಪದ ನುಡಿನಿಷ್ಟ, ಜನಹಿತವನ್ನೇ ಗುರಿಯಾನ್ನಾಗಿಸಿಕೊಂಡ ಮಹಾ ಸಜ್ಜನ. ಅಂತೆಯೇ ಕೆಣಕಿದವರನ್ನು ಸದೆಬಡಿಯುವಂತಹ ಪರಾಕ್ರಮಿ. ಕಾಡಿನ ಜೀವನ ಬಲ್ಲ ವಾಲ್ಮೀಕಿ ಶ್ರೀರಾಮ ಕಾಡಿನಲ್ಲಿ ಅನುಭವಿಸಿದ ವನವಾಸವನ್ನು ನೈಜವಾಗಿ ಸೃಷ್ಟಿಸಿದ್ದಾನಲ್ಲದೇ ದಟ್ಟವಾದ ಕಾಡನ್ನು ನಮ್ಮ ಕಣ್ಣುಂದೆ ತಂದು ನಿಲ್ಲಿಸುತ್ತಾನೆ. ಜೊತೆಗೆ ಚಿತ್ರ ವಿಚಿತ್ರ ಪ್ರಾಣಿ ಪಾತ್ರಗಳ ಸೃಷ್ಟಿ ! ಹತ್ತು ತಲೆಯ ರಾವಣ! ಅವನ ಅಟ್ಟಹಾಸ : ಕೋತಿ ತಲೆಯ ಮನುಷ್ಯ ಹನುಮಂತನ ಸಾಹಸ ! ಮಾತನಾಡುವ ಪಕ್ಷಿ ಜಟಾಯು ; ವಾಲಿ, ಸುಗ್ರೀವರ ಬಡಿದಾಟ, ಮಾಯಾವಿ ರಾಕ್ಷಸರ ಚಮತ್ಕಾರ, ಶೂರ್ಪನಖಿ, ಲಂಕಿಣಿಯರ ಮಾಯಾ ಜಾಲ ! ಕುಂಭಕರ್ಣನ ಗಾಢ ನಿದ್ರೆಯ ಸ್ವಭಾವ ಇಂತಹ ವೈವಿಧ್ಯಮಯ ಪಾತ್ರಗಳಿಂದ ರಾಮಾಯಣ ಪುಟ್ಟ ಮಕ್ಕಳನ್ನೂ ಆಕರ್ಷಿಸುವಷ್ಟು ಚೇತೋಹಾರಿ. ರಾಮಯಣದಲ್ಲಿ ಏನಿಲ್ಲ? ಪಿತೃಭಕ್ತಿ, ಮಾತೃ ವಾತ್ಸಲ್ಯ, ಭಾತೃ ಪ್ರೇಮ , ಸತಿಯ ಮೇಲೂ ಅಷ್ಟೇ ಪ್ರೇಮ. ಏಕ ಪತ್ನಿ ವ್ರತಸ್ಥನೆಂದೇ ರಾಮ ಜನಜನಿತ. ಸೇವಕರ ಸೇವಕ ಪ್ರಚಾರ ಚಿಂತಕ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನನ್ನು ದೇವನನ್ನಾಗಿಸಿದ ಮಹಾದೇವ ವಾಲ್ಮೀಕಿ. ಇಂದು ರಾಮಾಯಣವನ್ನು ಓದದವರಿಲ್ಲ, ನಾಡಿನಲ್ಲಿ ಪೂಜಿಸದವರಿಲ್ಲ. ಇಂತಹ ವಿಶೇಷವಾದ ಗ್ರಂಥವನ್ನು ನೀಡಿದ ವಾಲ್ಮೀಕಿಯನ್ನು ‘ನಾಯಕರವನು’ ಎಂದು ಒಂದು ಜನಾಂಗಕ್ಕೆ ಸೀಮಿತ ಗೊಳಿಸುವುದು ಅವಿವೇಕ. ಆತ ವಿಶ್ವಮಾನವ, ಅಂತಹ ವ್ಯಕ್ತಿ “ನಮ್ಮವನು” ಎಂದು ಜನಾಂಗ ಹೆಮ್ಮೆಪಟ್ಟುಕೊಳ್ಳುವುದು ವಿವೇಕ.

ನಾಯಕ ಅಂದರೆ ಲೀಡರ್ ಎಂದೇ ಅರ್ಥ. ನಾಯಕರು ಶಕ್ತಿ – ಭಕ್ತಿಗಳ ಸಂಗಮ. ವಾಲ್ಮೀಕಿಯ ರಾಮಾಯಣದ ಪ್ರೇರಣೆಯಿಂದಾಗಿ ದೇಶದ ಅನೇಕ ಭಾಷೆಗಳಲ್ಲಿ ರಾಮಾಯಣ ಮಹಾಕಾವ್ಯದ ರಚನೆಯಾಗಿದೆ. ತುಳಸಿ ರಾಮಾಯಣ, ಜೈನ ರಾಮಾಯಣ, ಪರ್ಶಿಯನ್, ಚೈನ ಭಾಷೆಯಲ್ಲಿ ಕೂಡ ರಾಮಾಯಣ ಸೃಷ್ಟಿಯಾಗಿದೆ. ರಾಷ್ಟ್ರಕವಿ ಕುವೆಂಪು ‘ರಾಮಾಯಣ ದರ್ಶನಂ’ ಬರೆದು ಜ್ಞಾನಪೀಠಕ್ಕೆ ಅರ್ಹರಾದದ್ದು ಎಂತಹ ಹೆಮ್ಮೆಯ ವಿಷಯ. ಮಹಾತ್ಯಾಗಾಂಧಿಗೆ ಸ್ಪೂರ್ತಿಯಾದವನು ರಾಮ. ಅವರು ರಾಮರಾಜ್ಯದ ಕನಸನ್ನೇ ಕಂಡವರು, ಅಸುನೀಗುವಾಗಲು “ಹೇರಾಮ್” ಎಂದೇ ಸ್ಮರಿಸಿದ ಮಹಾತ್ಮ.

ಶಕ್ತಿ- ಭಕ್ತಿಗಳ ಸಂಗಮ : ಇನ್ನು ಶಕ್ತಿ- ಭಕ್ತಿಯ ವಿಷಯಕ್ಕೆ ಬಂದರೆ ಕೋಟೆ ಕಟ್ಟಿ ಆಳಿದ ನಾಯಕಮಣಿಗಳ ಸರಮಾಲೆಯೇ ನಮ್ಮೆದುರು ಬಂದು ನಿಲ್ಲುತ್ತದೆ. ಚಿತ್ರದುರ್ಗವನ್ನಾಳಿದ ವೀರಪಾಳೆಗಾರರ ಇತಿಹಾಸದ ಬಗ್ಗೆ ಕೇಳದವರಾರು? ಹನ್ನೊಂದು ಜನ ಪಾಳೇಗಾರರಲ್ಲಿ ಮದಿಸಿದ ಆನೆಯ ಮದವಡಗಿಸಿ ‘ಮದಕರಿ’ಗಳೆಂದೇ ಖ್ಯಾತಿಯನ್ನು ತನ್ನವರಿಗೆ ಉಳಿಸಿಹೋದ ಚಿತ್ರ ನಾಯಕ, ನಾಯಕ ಕುಲತಿಲಕ ಶತ್ರು ಪಾಳೆಯಕ್ಕೆ ನುಗ್ಗಿ ಸಾಳ್ಳ ನರಸಿಂಗನ ಪಟ್ಟದ ಕುದುರೆಯನ್ನು ಹಾರಿಸಿಕೊಂಡು ಬಂದ ಅರಿಭಯಂಕರ ಮೋಟುಗೈ ತಿಮ್ಮಣ್ಣ ಜನಾಂಗದ ದೊಡ್ಡಣ್ಣ ಒರೆಗೆ ಕತ್ತಿ ಇಡದೆ ಸದಾ ಶತೃಗಳ ರಕ್ತದಿಂದ ಮಜ್ಜನ ಮಾಡಿಸುತ್ತಿದ್ದ ‘ಸಮರಭೂಪ’ ನೆಂದೇ ಮಿಂಚಿ ಮರೆಯಾದ ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ನಾಯಕ ಕುಲಕ್ಕೆ ಕಳಶಪ್ರಾಯ. ನವಾಬ್, ಹೈದರಾಲಿಖಾನ್ ನಂತಹ ಅತುಳ ಪರಾಕ್ರಮಿಯನ್ನೇ ಕ್ರಿಮಿಯಂತೆ ಕಂಡು ೪ ಸಾರಿ ದಂಡೆತ್ತಿ ಬಂದರೂ ಹೊಡೆದೋಡಿಸಿದ ಗಂಡುಗಲಿ ಮದಕರಿ ದುರ್ಗದ ಐಸಿರಿ. ಕೊನೆಗೂ ಹೈದರಾಲಿಯ ಕುತಂತ್ರಕ್ಕೆ ಬಲಿಯಾದ ಮದಕರಿ ನಾಯಕನ ಕೀರ್ತಿ ಪರಾಕ್ರಮ ದುರ್ಗ ವಿರುವವರೆಗೂ ಆಚಂದ್ರಾರ್ಕ, ದುರ್ಗದ ಪಾಳೇಗಾರರು ಬರೀ ಪರಾಕ್ರಮಿಗಳಷ್ಟೇ ಅಲ್ಲ ಧರ್ಮ ಭೀರುಗಳು ಎಂಬುದಕ್ಕೆ ಅವರು ದುರ್ಗದಲ್ಲಿ ಪ್ರತಿಷ್ಠಾಪಿಸಿದ ಅಷ್ಟಮಠಗಳೇ ಸಾಕ್ಷಿ. ಜಾತಿಯನ್ನು ದೂರವಿಟ್ಟವರು ನೀತಿವಂತರಿಗೆ ಬೆಲೆ ಕೊಟ್ಟವರು ಪಾಳೇಗಾರರು.

ದುರ್ಗದ ಪಾಳೇಗಾರರಷ್ಟೆ ಅಲ್ಲ. ಕಂಪ್ಲಿಯ ಕಂಪಿಲರಾಯ, ತರೀಕೆರೆಯ ಸರ್ಜಾ ಹನುಮಪ್ಪ ನಾಯಕ, ವಿಜಯನಗರದ ಎಚ್ಚಮ ನಾಯಕ, ಹರಪನಹಳ್ಳಿ ಸೋಮಶೇಖರ ನಾಯಕ, ಮುಸ್ಲಿಮರ ವಿರುದ್ಧ ಹೋರಾಡಿದ ರಣಕಲಿಗಳು.

ಬ್ರಿಟಿಷರ ವಿರುದ್ಧ ಹೋರಾಡಿ ರಕ್ತ ತರ್ಪಣ ನೀಡಿದ ರಾಜಾ ಸುರಪುರದ ವೆಂಕಟಪ್ಪ ನಾಯಕ, ಅಂತೆಯೇ ವೀರಸಿಂಧೂರ ಲಕ್ಷ್ಮಣ, ಹಲಗಲಿ ಬೇಡರು ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಗಂಡುಗಲಿಗಳು.

ಐತಿಹ್ಯಕ್ಕೆ ಬಂದರೆ ಜಗತ್ತಿಗೇ ಕಣ್ಣಾದ ಕಾಪಾಲೇಶ್ವರನಿಗೇ ಕಣ್ಣುಕೊಟ್ಟ ಮಹಾದೈವ ಭಕ್ತ ಬೇಡರ ಕಣ್ಣಪ್ಪ – ನಾಯಕನ ಗುರುಭಕ್ತಿ ಇಂದಿಗೂ ಅಜರಾಮರ ಹೆಸರಾದ ಧನುರ್ವಿದ್ಯಾ ಪ್ರವೀಣ ಏಕಲವ್ಯ ಸಹ ನಾಯಕ ಮಣಿ. ಈತನ ಹೆಸರಿನಲ್ಲೀಗ ಸರ್ಕಾರ ಪ್ರಶಸ್ತಿ ನೀಡುತ್ತಿದೆ. ಶ್ರೀ ರಾಮನಿಗಾಗಿ ಹಗಲಿರುಳು ಕಾದಿದ್ದ ಭಕ್ತಿ ಮುಗ್ದೆ ಶಬರಿ, ಧರ್ಮವ್ಯಾದ ಇವರೆಲ್ಲಾ ಭಕ್ತಿಗೆ ಹಸರಾದವರು, ಈ ಕಾರಣಗಳಿಂದಾಗಿಯೇ ನಾಯಕರು ಶಕ್ತಿ-ಭಕ್ತಿಗಳ ಸಂಗಮವೆಂದರೆ ಉತ್ಪ್ರೇಕ್ಷೆಯಾಗದಲ್ಲವೆ ?

ನಾಯಕರು ಅಂದು-ಇಂದು : ಇಂತಹ ಅದ್ಭುತ ಐತಿಹ್ಯ ಇತಿಹಾಸವನ್ನು ಹೊಂದಿರುವ ನಾಯಕರು ಇಂದು ಏನಾಗಿದ್ದಾರೆ ? ಕೋಟೆ ಕೊತ್ತಲಗಳನ್ನು ಕಟ್ಟಿ ಆಳುತ್ತಿದ್ದ ಜನಾಂಗವಿಂದು ಕುರಿ ಮೇಕೆ ಕಾಯುತ್ತಿದ್ದಾರೆ. ಕತ್ತಿ ಕಠಾರಿಗಳು ಅಟ್ಟದ ಮೇಲೆ ಧೂಳು ತಿನ್ನತಾ ಕೂತಿವೆ. ಗಲ್ಲಿ ಮೀಸೆಗಳು ನಿಮಿರಿನಿಲ್ಲದೆ ನಿತ್ರಾಣವಾಗಿ ಹೊಟ್ಟೆಗಿಲ್ಲದೆ ಸೊರಗಿವೆ. ಭಕ್ತಿ-ಶಕ್ತಿಗೆ ದಾಸರಾದ ನಾಯಕರು ಈವತ್ತು ಹೆಂಡಕ್ಕೆ ಖಂಡಕ್ಕೆ ದಾಸರಾಗಿದ್ದಾರೆ. ಕಾರಣ? ಕಾರಣ ಇಷ್ಟೇ; ನಮ್ಮಲ್ಲಿ ವಿದ್ಯಾವಂತರು ಕಡಿಮೆ. ಇದ್ದರೂ ರಾಜಕೀಯ ಪ್ರಜ್ಞೆ ಮತ್ತೂ ಕಡಿಮೆ. ರಾಜ್ಯದಲ್ಲಿ ೬೮ ಲಕ್ಷದಷ್ಟು ಜನಾಂಗವಿದ್ದರೂ ಒಗ್ಗಟ್ಟಿಲ್ಲ. ನಾಯಕರು ಮಂತ್ರಿಗಳಾಗಿದ್ದೂ ವಿರಳ. ಆದವರು ತಮ್ಮ ಉದ್ಧಾರ ಮಾಡಿಕೊಂಡರೇ ವಿನಃ ಜನಾಂಗಕ್ಕಾಗಿ ಮಾಡಿದ್ದು ಸೊನ್ನೆ. ಒಬ್ಬ ಭೀಮಪ್ಪನಾಯಕರಂತವರನ್ನು ಬಿಟ್ಟರೆ ಅವರಂತೆ ಜನಾಂಗಕ್ಕಾಗಿ ದುಡಿದವರು ಇಲ್ಲವೇ ಇಲ್ಲವೆಂದರೂ ಯಾರೂ ಸಂಶಯಿಸಲಾರರು. ನಾಯಕರಲ್ಲಿಗ ೭ ಜನ ಶಾಸಕರಿದ್ದರೂ ಒಬ್ಬರಿಗಾದರೂ ಮಂತ್ರಿ ಪದವಿ ದಕ್ಕಲಿಲ್ಲ. ಹೋರಾಡಲೆಂದೇ ಹುಟ್ಟಿದ ಜನಾಂಗವೀಗ ಹೋರಾಟದ ಮನೋಭಾವ, ಪ್ರತಿಭಟಿಸುವ ಪರಾಕ್ರಮವನ್ನೇ ಕಳೆದುಕೊಂಡುಬಿಟ್ಟಿದೆ. ವಿದ್ಯಾಲಯಗಳನ್ನು ಕಟ್ಟಿ ಬೆಳೆಸಬೇಕಾದ ಪರ್ವಕಾಲದಲ್ಲಿ ದೇವಾಲಯಗಳನ್ನು ಕಟ್ಟುತ್ತಿದ್ದಾರೆ. ಜಗದ್ಗುರುಗಳಲ್ಲಿ ಒಬ್ಬರೀಗ ಪತ್ತೆಯೇ ಇಲ್ಲ. ಅವರೇನಾದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜನಾಂಗದ ನಾಯಕರಿಗಿದ್ದಂತಿಲ್ಲ. ಅಸಲು ನಾಯಕ ಜನಾಂಗದಲ್ಲಿ ಸರಿಯಾದ ನಾಯಕರಾದರೂ ಎಲ್ಲಿದ್ದಾರೆ? ವಿದ್ಯಾಲಯ ಪ್ರಸಾದ ನಿಲಯಗಳಾಗಬೇಕು, ವಿದ್ಯಾದಾನಕ್ಕೆ ಮುಂದಾಗಬೇಕು, ಶೈಕ್ಷಣಿಕವಾಗಿ ಮುಂದುವರೆದಾಗ ಮಾತ್ರ ಯಾವುದೇ ಜನಾಂಗದ ಏಳ್ಗೆ ಸಾಧ್ಯ. ಈ ದಿಸೆಯಲ್ಲಿ ಪೂಜ್ಯ ಶ್ರೀ ಪುಣ್ಯಾನಂದಪುರಿ ಗಳವರು ಶ್ರಮಿಸಬೇಕಿದೆ. ಅಡ್ಡ ಪಲ್ಲಕ್ಕಿ ಅದ್ದೂರಿ ಮೆರವಣಿಗೆ, ಸಮ್ಮೇಳನಗಳಿಂದ ಯಾವ ಪುರುಷಾರ್ಥ ಸಾಧನೆಯೂ ಆಗುವುದಿಲ್ಲ. ಮಹಾಸಾಮಿಗಳು ವೈಚಾರಿಕ ನೆಲೆಯಲ್ಲಿ ನಿಂತು ದೀನ, ದಲಿತರ ದನಿಯಾಗಿ ಚಿಂತಿಸಿ ಜನಾಂಗಕ್ಕೆ ಮೌಲ್ಯಯುತ ಕೊಡುಗೆಯನ್ನು ಪ್ರಸಾದಿಸುವ ಅಗತ್ಯವಿದೆ. ಅಂತೆಯೇ ಈಗಾಗಲೇ ಮಠದಲ್ಲಿ ಸೇರಿಕೊಂಡಿರುವ ಹೆಗ್ಗಣಗಳನ್ನು ನಿಯಂತ್ರಿಸುವ, ವಿಚಾರವಂತರ, ವಿದ್ವಾಂಸರ ಒಡನಾಟ ಬೆಳೆಸುವ ಅವಶ್ಯಕತೆಯಿದೆ. ಸರಿಯಾದ ನಾಯಕರೇ ಇಲ್ಲದ ನಾಯಕ ಜನಾಂಗವನ್ನು ಸಂರಕ್ಷಿಸುವ ಸಾಮರ್ಥ್ಯವನ್ನು ಮಹಾಸಾಮಿಗಳಿಗೆ ಮಹಾದೇವ ವಾಲ್ಮೀಕಿ ಪ್ರಸಾದಿಸಲಿ. ಜನಾಂಗಕ್ಕೆ ಒಳ್ಳೆಯದಾಗಲಿ ಎಂಬುದಷ್ಟೆ ಈ ಲೇಖನದ ಆಶಯ.
*****