ಚತುರ್ಯುಗಗಳು

“ಸಾಮಾನ್ಯ ಜೀವನವನ್ನು ಸಾಗಿಸುವದಕ್ಕೇ ಜೀವಿಗಳೆಲ್ಲರೂ ಭಾರ ತಾಳಲಾರದೆ ಬಾಗಿ, ಬಸವಳಿದು ಏದುತ್ತಿರುವಾಗ ನಿಚ್ಚಶಿವರಾತ್ರಿಯಂಥ ಉಚ್ಚ ಜೀವನಕ್ಕೆ ಕೈಯೊಡ್ಡುವದು ಎಲ್ಲರಿಗೂ  ಸಾಧ್ಯವೇ? ಅದು ಸಾಮಾನ್ಯರ ತುತ್ತಲ್ಲ. ಅದನ್ನು ಸಾಮಾನ್ಯರು ಆಶಿಸುವದು ಸಹ ಹಾಸ್ಯಾಸ್ಪದವೇ ಎಂದು ತೋರುತ್ತದೆ. ಸಾಮಾನ್ಯರಿಗೆ ಸಾಮಾನ್ಯ ಜೀವನವೇ ಉಂಬಳಿಯಾಗಿ ದೊರತಿರುವದು. ಅದನ್ನು ಹಿಡಿಯುವದೇ ಅಸಾಧ್ಯವಾಗಿರುವಾಗ ಬಿಡುವುದಂತೂ ತೀರ ಅಸಾಧ್ಯದ ಮಾತಾಗಿರುವದು. ಆ ದಾರಿಯೇ ನಮಗಾಗಿ ಹಾಕಿಲ್ಲದಿದ್ದರೆ ಆ ದಾರಿಯ ಸುದ್ಧಿ ಕೇಳಿಯಾದರೂ ಮಾಡುವದೇನು? ಸಾಮಾನ್ಯ ಜೀವನಕ್ಕೂ ಅಂಥ ಸೌಭಾಗ್ಯವು ಪ್ರಾಪ್ತವಾಗಲಿಕ್ಕೆ ಸಾಧ್ಯವಿದ್ಧರೆ ಆ ಕಾಲವು ಎಂದು ಬರುವದು, ಹೇಗೆ ಬರುವದು ತಿಳಿಸುವ ಕೃಪೆಮಾಡಬೇಕೆಂದು ಬಿನ್ನಯಿಸುತ್ತೇವೆ” ಎಂದು ಜನಜಂಗುಳಿಯಿಂದ ಒ೦ದು ಧ್ವನಿ ಕೇಳ ಬಂದಿತು.

ಸಂಗಮಶರಣನು ಅನುಮಾನಿಸುತ್ತಲೇ ಜಗಜ್ಜನನಿಯ ಸನ್ನಿಧಿಗೆ ಎರಗಿ, ತಾಯಿ ನುಡಿಸಿದಂತೆ ನುಡಿಯುನ ವೀಣೆ ತಾನೆಂದು ಬಗೆದು ಭಾವಿಸಿ, ತಾನರಿತ ಜ್ಞಾನವನ್ನು ಜನಜಂಗುಳಿಯ ಮುಂದೆ ಬಿತ್ತರಿಸ್ಲಲು ಅನುವಾದನು.
ಅದು ಹೇಗೆಂದರೆ-
” ಈ ವಿಷಯವನ್ನು ವಿವರಿಸುವಾಗ ನನ್ನ ಅನುಭವಕ್ಕಿಂತ ನಾನರಿತ ಜ್ಞಾನವನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತೇನೆ. ತಾಯಿ-ತಂದೆಗಳಿಂದ ಅರಿತ ಜ್ಞಾನವನ್ನು ತಾಯಿ-ತಂದೆಗಳ ಸನ್ನಿಧಿಗೆ ಅರ್ಪಿಸಿ, ಅವರ ಪರೀಕ್ಷೆಗೆ ಈಡಾಗುತ್ತೇನೆ. ಅದರಲ್ಲಿ ತೇರ್ಗಡೆಯಾದರೆ ನಾನು ಧನ್ಯನೆಂದೇ ಭಾವಿಸುತ್ತೇನೆ. ಸಾಮಾನ್ಯ ಜೀವನವು ಬಹು ಭಾರವಾಗಿರುವದಕ್ಕೆ ಅಸಾಮಾನ್ಯದ ತಿಳಿಬೆಳಕು ಬಳಸಿಕೊಳ್ಳದಿರುವದೇ ಕಾರಣನೆಂದು ನನಗೆ ತೋರುತ್ತದೆ. ಸಾಮಾನ್ಯ ಜೀವಿಯು ನಾನು ಹೇಳಿದ ತಿಳಿಬೆಳಕನ್ನು ನೆರವಿಗೆ ತಂದುಕೊಂಡ ಕ್ಷಣವೇ ಸಾಮಾನ್ಯ ಜೀವನವನ್ನು ಕಳೆದು, ಅಸಾಮಾನ್ಯ ಜೀವನ ಪಥದಲ್ಲಿ ಕಾಲಿರಿಸುತ್ತಾನೆ.  ಆ ಮೇಲೆ ಅದು ಹಾಸ್ಯಾಸ್ಪದವೂ ಆಗಿರಲಾರದು. ಅದರಿ೦ದ ನಗೆಗೀಡೂ ಉ೦ಟಾಗಲಾರದು,

ಸಾಮಾನ್ಯಜೀನನವೇ ಸಾಮಾನ್ಯವಾಗಿ ಹಾಕಿಕೊಟ್ಟ ಉಂಬಳಿಯೇ ನಲ್ಲ. ಸಾಮಾನ್ಯ ಜೀವಿಯೇ ಅಸಾಮಾನ್ಯ -ನಾಗುವದಕ್ಕೆ ಸಾಧ್ಯವಿದೆ. ಅಸಾಮಾನ್ಯನಾದವನು ಆಗುವದೇನು ಉಳಿದಿದೆ ? ಸಾಮಾನ್ಯಜೀವನವೇ ಅಸಾ-
ಮಾನ್ಯಮಾಗುವದಕ್ಕೆ ನಡೆಸಿದ ಎತ್ತುಗಡೆಯು ಜಗತ್ತಿನ ಹೋರಾಟವೆನಿಸುತ್ತದೆ. ಜಗತ್ತಿನ ವಿಕಾಸಕ್ಕೆ ಅದೇ ಹೋರಾಟವೇ ಕಾರಣವಾಗಿದೆ.

ಸಾವಿರದಲ್ಲಿ ಒಬ್ಬನು ಹೋರಾಟಕ್ಕೆ ನಿಲ್ಲಬಹುದಾಗಿದೆ. ಹಾಗೆ ಹೋರಾಟಕ್ಕೆ ನಿಂತ ಸಾವಿರದಲ್ಲಿ ಒಬ್ಬನು ಜಯಶೀಲವಾಗಬಹುದಾಗಿದೆ. ಅದರೇನು? ಅದರ ಫಲವು ಹೋರಾಡಿದನನಿಗೆ ಮಾತ್ರ ಸೇರಿದ ಸೊತ್ತಲ್ಲ. ಆ ಗೆಲುವು
ಹೋರಾಡಿ ಜಯಶೀಲವಾದವನಿಗೆ ಮಾತ್ರ  ಪ್ರಾಪ್ತವಾಗುವ ಮೊತ್ತವಲ್ಲ. ಅದು ಜಗತ್ತಿನ ಆಸ್ತಿ, ಮಾನವಲೋಕದ ಸವೆಯದ ಸಂಪತ್ತು.

ಆದರೆ ಸಾವಿರ ಜನರೆಲ್ಲ ಹೋರಾಟ ನಡೆಸಿದರೆ, ಸಾವಿರ ಕೈಗಳೆಲ್ಲ ಹೋರಾಟಕ್ಕೆ ಅಣಿಯಾದರೆ ಜಗತ್ತಿನ ವಿಕಾಸಕ್ಕೆ ಅದೆಂಥ  ದೊರಕೊಳ್ಳುವದು ? ಮಾನನನ ಅಭ್ಯುದಯಕ್ಕೆ ಅದೆಂಥ ಪೌಷ್ಟಿಕವು ಪ್ರಾಪ್ತವಾಗುವದು? ವಿಕಾಸಕ್ರಮವು ಇಷ್ಟೊಂದು ಮಂದವಾಗಿ ಸಾಗುವ ಕಾರಣವೇ ಉಳಿಯಲಾರದು.

ವರ್ಷದಲ್ಲಿ ಬೇಸಗೆ, ಮಳೆಗಾಲ, ಚಳಿಗಾಲಗಳಿರುವಂತೆ ಮಹಾ ಕಾಲದಲ್ಲಿ ಸತ್ಯಯುಗವೇ ಮೊದಲಾದ ನಾಲ್ಕು ಯುಗಗಳಿರುತ್ತವೆ. ಬೇಸಗೆಯ ಕಡು ಬಿಸಿಲಿನ ಒಡಲಲ್ಲಿಯೇ ಮಳೆಗಾಲವು ಹುಟ್ಟಕೊಂಡು ಹೊರಬರುವದನ್ನೂ, ಮಳೆಗಾಲದ ಬಸಿರಲ್ಲಿಯೇ ಚಳಿಗಾಲದ ಶಿಶುವು ಬೆಳೆದು ಬರುವದನ್ನೂ ನಾವು ಕಾಣುತ್ತಿದ್ದೇನೆ. ಅದು ಸಹಜದ ಮಾರ್ಪಾಟು. ಅದು ತನ್ನಿಂದ ತಾನೇಸಾಗಿರುವ ಮುಂದುವರಿಕೆ. ಹಾಗೆಯೇ ಸತ್ಯಯುಗದ ಹೊಟ್ಟೆಯಲ್ಲಿಯೇ
ತ್ರೇತಾಯುಗವೂ, ಅದರ ಹೊಟ್ಟೆಯಲ್ಲಿ ದ್ವಾಪರವೂ ಮೂಡಿಬರುವದಲ್ಲವೆ, ದ್ವಾಪರದೊಳಗೇ ಕಲಿಯುಗವು ಮೈದಳೆದು ಹೊರಗೆ ಬರುತ್ತದೆಂಬುದು ಲಕ್ಷಿಸತಕ್ಕ ಮಾತಾಗಿದೆ.

ಬೇಸಗೆಯ ಹೊಟ್ಟೆಯಲ್ಲಿ ಮಳೆಗಾಲ ಹುಟ್ಟಿಬರುವದು ಅದೆಷ್ಟು ಅಶ್ಚರ್ಯಕರವೂ ಅಸಾಮಾನ್ಯವೂ ಆದ ಘಟನೆಯಾಗಿದೆ. ಅದರ೦ತೆ ಕಲಿಯುಗದ ಹೊಟ್ಟೆಯಿಂದ ಸತ್ಯಯುಗವು ತಲೆಯೆತ್ತುವದೆನ್ನುವದು ಸಹ ಅಷ್ಟೇ ಆಶ್ಚರ್ಯಕರವೂ ಅಸಾಮಾನ್ಯವೂ ಆದ ಘಟನೆಯಾಗಿದೆ. ಬೇಸಗೆಯ ಕಾಲವೆಂದರೆ ನೆಲ ನಿಗಿನಿಗಿ! ಮುಗಿಲು ನಿಗಿನಿಗಿ! ಬೆಳಕು ನಿಗಿನಿಗಿ! ಹಸುರೆಲ್ಲ ಹಾರಿಹೋಗಿ, ಹಸಿಯೆಲ್ಲ ಆರಿಹೋಗಿ ಎಲ್ಲೆಲ್ಲೂ ಒಣಕಲು! ಎಲ್ಲಿಲ್ಲೂ ಹುಡಿಯ ಹಾಸಿಗೆ! ಗಾಳಿ ಬೀಸಿದರೆ ಧೂಳಿಯ ದಾಳಿ. ಗಾಳಿ ನಿಂತರೆ ಕುದಿತದ ತೊತ್ತಳಿ. ಹನಿಯುದರಿಸುವದಕ್ಕೆ ಕಣ್ಣಿಗೂ ಅಸಾಧ್ಯವಾಗಿರುವಾಗ ಮುಗಿಲು-ಮೋಡಗಳು ಅದೆಲ್ಲಿಂದ ಬರುವವು? ಆ ಕಡು ಬಿಸಿಲೇ ಮೋಡಗಳ ಜನನಕ್ಕೆ ಕಾರಣವಾಗಿ ಗಾಳಿಯ ಓಡಾಟಕ್ಕೆ ಪ್ರೇರಕವಾಗಿ, ಮೋಡ ಬಂದು ಮಳೆ ಸುರಿದು ಅಲಕ್ಕನೆ ಮಳೆಗಾಲ ಬಂದುಬಿಡುತ್ತದೆ. ಸರಕ್ಕನೆ ಬೇಸಗೆ ಸರಿದು ಹೋಗಿರುತ್ತದೆ. ಹುಡಿಹುಡಿಗೂ- ಹಸಿರು ಮುಗುಳು. ಕಲ್ಲುಗಳ ಒಡಲಲ್ಲಿಯೂ ತಿಳಿ ನೀರಿನ ಬುಗ್ಗೆ. ವೈಹಾಳಿಗೆ ಬರುವ ಗಾಳಿಯು ಆಪ್ತ-ನ್ನೇಹಿತನಂತೆ ತಲೆಯನ್ನು ತಡ
ವುತ್ತ, ಮೈಯನ್ನು ಮುಂಡಾಡುತ್ತ ತಂಗಾಳಿಯಾಗಿ ಸುಳಿಯುವದು. ಅಡರಂತೆ ಕಟ್ಟಕಲಿಯುಗದ ಅಸಾಮರಸ್ಯದಲ್ಲಿ ಸಮರತೆಯ ಬಯಕೆಯುಂಟಾಗಿ ಹೊಟ್ಟಿಕಿಚ್ಚಿನಲ್ಲಿಯೇ ಅಗ್ನಿ ಪುತ್ರಿಯಾದ ದ್ರೌಪದಿಯಂಥ ಜಗದೇಕ ಮಾತೆಯ
ಮೈದೋರಿ ನೂರು ಕೌರವರನ್ನು ಕೌರವಕ್ಕಿಳಿಸಿ, ಪಂಚಪಾಂಡವರ ಅಭಿಮಾನವನ್ನುಳಿಸಿ ಧರ್ಮವನ್ನು ರಕ್ಷಿಸುವ, ಭೀಮಸಾಹಸನನ್ನು ಕೆರಳಿಸುವ, ಧನುರ್ಧಾರಿಯನ್ನು ಯೋಗೀಶ್ವರನಿಗೆ ಸಂಬಂಧಿಸುವ ಸಂಸ೦ಧಿಯನ್ನು
ತರುತ್ತಾಳೆ.

ಬೇಸಗೆಯ ಕಾಲದಲ್ಲಿ ಮಾಡಿಕೊಂಡ ನಿತ್ಯದ ನಿಯಮಾವಳಿಗಳು, ಮಳೆಗಾಲಕ್ಕೆ ಹಾಳತವಾಗಲಾರವು. ಬೇಸಗೆಯ ಅಂಬಲಿ-ಹುಳಿತಿಳಿಗಳು, ಮಳೆಗಾಲಕ್ಕೆ ಒಗ್ಗವು. ಬೇಸಗೆಯ ಬಯಲು ನಿದ್ರೆ ಸಾಕಾಗಿ, ಮನೆಯ ಆಸರವು ಬೇಕೆನಿಸುತ್ತದೆ. ಅದರಂತೆ ಕಲಿಯುಗದಲ್ಲಿ ಕಾಣಬರುತ್ತಿದ್ದ ಮಾತ್ಸರ್ಯದ ಉರವಣೆಯಡಗಿ, ಸತ್ಯಯುಗದ ಆತ್ಮೀಯತೆಯ ಪ್ರಶಾಂತತೆಯು ಹಣಿಕಿ ಹಾಕುತ್ತಿದೆ. ದ್ವೇಷ-ಮೋಸಗಳ ಬದಲು ಪ್ರೇಮ-ಪ್ರಾಮಾಣಿಕತೆಗಳು
ಮೊಳೆದೋರುತ್ತವೆ. ಆಗ ಸಾನಿರಕ್ಕೊಬ್ಬ ಶರಣೆನ್ನುವ ಮಾತು, ಸಾವಿರ ಗಟ್ಟಳೆ ಶರಣೆನ್ನುವ ಸೊಲ್ಲಾಗಿ ನಿನದಿಸುತ್ತದೆ. ಬೇಸಿಗೆಯ ಆರಬು ಕಳೆದು ಮಳೆಗಾಲದ ಮಡುವುಗಳು ಗೋಚರಿಸುವಂತೆ, ಕಲಿಯುಗದ ಪಾಪಿಗಳೆಲ್ಲ
ಸತ್ಯಯುಗದ ಬರುವಿನಲ್ಲಿ ಪುಣ್ಯದ ಶಿಶುಗಳಾಗಿ ತೋರ್ಪಡಿಸಿಕೊಳ್ಳುವರು. ಆಗ ಎಲ್ಲಿ ನೋಡಿದಲ್ಲಿ ಶರಣರು-ಸತ್ಪುರುಷರು! ಎಲ್ಲಿ ನೋಡಿದಲ್ಲಿ ಧರ್ಮವಂತಿಕೆ-ನೀತಿವಂತಿಕೆ!  ಎಲ್ಲಿ ಸೋಡಿದಲ್ಲಿ ಪ್ರೇಮ  -ಕಕ್ಕುಲತೆಗಳು! ಅದೇ
ಆತ್ಮನ ರಾಜ್ಯ. ಸತ್ಯಯುಗವೆ೦ದರೂ ಅದೇ. ಸ್ವರ್ಗರಾಜ್ಯವೆಂದರೂ ಅದೇ.

ನಾಲ್ಕು ಯುಗಗಳಲ್ಲಿ ಸತ್ಯಯುಗವೇ ಎಲ್ಲಕ್ಕೂ ಉನ್ನತ ದೆಶೆಯನ್ನು ಭೂಮಿಗೆ ತಂದಿಳಿಸುವದು. ಅದೇ ಮಾನವರಲ್ಲಿ ಪ್ರೇಮಸಾಮರಸ್ಯಗಳನ್ನು ತುಂಬುವದು. ಜಗತ್ತಿನ ಒಳಗೆ-ಹೊರಗೆನ್ನದೆ ಎಲ್ಲೆಲ್ಲಿಯೂ ಆತ್ಮನಾಳಿಕೆ. ಆತ್ಮನಾಳಿಕೆ ನಡೆದಿರುವಾಗ ಆಸಾಮಂಜಸ್ಯವಾಗಲಿ, ಅವಹೇಳನವಾಗಲಿ, ಈರ್ಷೆ-ಮಾತ್ಸರ್ಯಗಳಾಗಲಿ ಔಷಥಕ್ಕೂ ಸಿಗಲರಿಯವು. ಮಳೆಗಾಲದಲ್ಲಿ ಎತ್ತನೋಡಿದತ್ತ ಹಸುರೇ ಕಂಗೊಳಿಸುವಂತೆ, ಆತ್ಮನಾಳಿಕೆಗೆ ಒಳಪಟ್ಟ ಜಗತ್ತಿನಲ್ಲಿ ಎತ್ತ ನೋಡಿದರೂ ಕಲ್ಯಾಣರಾಜ್ಯವೇ ಕಂಗೊಳಿಸುವದು. ಸತ್ಯಶರಣರೇ ಎಲ್ಲಿಲ್ಲಿಯೂ ಗೋಚರಿಸುವರು. ಮೇಲು-ಕೀಳೆನ್ನದೆ ಎಲ್ಲರಲ್ಲಿಯೂ ಆತ್ಮನು ಹಸಿದು ಧರ್ಮ-ಆಧ್ಯಾತ್ಮಗಳ ತುತ್ತಿಗಾಗಿಬಾಯ್ದೆರೆಯುವನು. ಹೀಗೆ
ಲೆಕ್ಕವಿಲ್ಲದಷ್ಟು ಕಾಲವು ಆತ್ಮನಾಳಿಕೆಯಲ್ಲಿ ಗತಿಸುವದು. ರಾಜರು ಸಿರಿವಂತರು ತಮ್ಮ ಧರ್ಮವನ್ನು ತಪ್ಪಿ ನಡೆಯರು. ಬಡವರು-ದರಿದ್ರರು ತಮ್ಮ ನೀತಿಯನ್ನು ಬಿಟ್ಟು ಅಡಿಯಿಡರು.

ಸತ್ಯಯುಗದ ಈ ಬಹುಕಾಲದ ಬಸಿರಿನಲ್ಲಿ ಬೇರೊ೦ದು ಯುಗದ ಭ್ರೂಣವು ಬೆಳೆದು, ಶಿಶುವಾಗಿ ಭೂಮಿಗೆ ಬರುವದು. ಅದೇ ತ್ರೇತಾಯುಗವೆಸಿಸುವದು. ಆತ್ಮನಾಳಿಕೆಯು ಕುಗ್ಗಿ ಬುದ್ಧಿಯು ಇಲ್ಲವೆ ಮನದ ಆಳಿಕೆಯು ಅಧಿಕಾರವನ್ನು ಕೈಯಲ್ಲಿ ತೆಗೆದುಕೊಳ್ಳುನದು. ಪ್ರೇಮ-ಸಾಮರಸ್ಯಗಳ ಸಹಜಪ್ರವೃತ್ತಿಯು ಮಾಯವಾಗಿ  ಅವು ವಿಚಾರ ಮಾಡಿದಾಗ, ವಿಚಾರ ಕೇಳಿದಾಗ ಬುದ್ಧಿಯು ಒಪ್ಪಿ ಅದರಂತೆ ಆಚರಣೆಯನ್ನು ನಡೆಸುವದು. ಬುದ್ದಿಗೆ ಮಬ್ಬುಕವಿದಾಗ ಮತ್ತೆ ಅವು ಮಸಕಾಗುವವು. ವಿಧಿಪೂರ್ಪಕವಾಗಿ ಇಲ್ಲವೆ ಉದ್ದೇಶಪೂರಿತವಾಗಿ ಬುದ್ಧಿಗೆ ಬೆಳಕು ಒದಗಿಸಿದರೆ ಮಾತ್ರ ಪ್ರೇಮ-ಸಾಮರಸ್ಯಗಳ ಎಚ್ಚರಿಕೆ ಉಳಿಯುವದು. ಆ ಯುಗಕ್ಕೂ ಅನಂತಕಾಲದ ಆಯುಷ್ಯ ವಿರುತ್ತದೆ. ಅದು ಬಾಲ್ಯ ಯೌವನಗಳನ್ನು ಕಳೆದು ವೃದ್ಧಾಪ್ಯಕ್ಕೆ ಬರುತ್ತಲೆ ಬುದ್ಧಿಯ ಹಸಿ ಇಂಗುವದು. ಆಗ ಪ್ರೇಮಸಾಮರಸ್ಯಗಳು ಬುದ್ಧಿಗೂ ನಿಲುಕದಂತೆ ಆಳದಲ್ಲಿಳಿದು ತಳ ಕಾಣುವವು.

ಅಲ್ಲಿಯೇ ದ್ವಾಪಾರಯುಗದ ಅರಂಭ.ದ್ವಾಪಾರದಲ್ಲಿ ಪ್ರಾಣಶಕ್ತಿಯು ಆಧಿಪತ್ಯವನ್ನು ನಡೆಸುವದು. ಪ್ರಾಣಶಕ್ತಿಯು ಸರ್ವಾಧಿಕಾರಿಯಂತೆ ದಂಡನೆ, ಯುದ್ದಗಳಿಂದ ಜಗತ್ತನ್ನು ಸಾಮಂಜಸ್ಯದಲ್ಲಿ ಇರಿಸುವದಕ್ಕೆ ಪ್ರಯತ್ನಿಸುವದು. ಅದಕ್ಕೆ ಪ್ರತಿಫಲವಾಗಿ ಶಿಕ್ಷೆಗೆ ಪ್ರತಿಶಿಕ್ಷೆ, ದಂಡನೆಗೆ ಫ್ರತಿ ದಂಡನೆ, ಯುದ್ದಕ್ಕೆ ಪ್ರತಿಯುದ್ದ ನಡೆದು ವೈರಿ ವೈರಿಗಳಲ್ಲಿ ಅಷ್ಟೇ ಅಲ್ಲದೆ, ಮಿತ್ರ ಮಿತ್ರರಲ್ಲಿ, ಆಪ್ತ ಆಪ್ತರಲ್ಲಿ ವಿರಸವು ತಲೆದೋರಿದಾಗ, ಯಾದವೀ ಕಲಹಗಳು ಕಾಣಿಸಿಕೊಂಡು ಜೀವನವನ್ನು ಸಮತಾಲಕ್ಕೆ ತರಲು ಎತ್ತುಗಡೆ ನಡೆಸುವದು.ತ್ರೇತಾಯುಗವೂ ಅಗಣಿತವಾದ ವರ್ಷಗಳನ್ನು ಕಳೆಯುತ್ತ ಇರಲು, ಕಲಿಯುಗವು  ಗರ್ಭಾವಸ್ಥೆಯಲ್ಲಿ ಬೆಳೆದು ಬರತೊಡಗುವದು.

ಕಲಿಯುಗಕ್ಕೆ ಸ್ಥೂಲವೇ ಅಧಿಕಾರಿ. ಆತ್ಮನು  ಅಡಗಿದ್ದಾನೆ. ಬುದ್ಧಿಗೆ ಮಂಕುಕವಿದಿವೆ. ಪ್ರಾಣವು ವಿಕಾರಗೊಂಡಿದೆ. ಸ್ಥೂಲವು ಮಾತ್ರ ಸಮತಾಲವನ್ನು ಕಾಯ್ದುಕೊಳ್ಳುವದಕ್ಕೆ  ಸಮರ್ಥವಾಗದೆ ಅರಾಜಕತೆಯ ತಾಂಡವ ನ್ಯತ್ಯಕ್ಕೆ ನೆಲೆಯಾಗುವದು. ಆತ್ಮಸಂಶೋಥಕರು ಎಲ್ಲಿಯೋ ದೂರದ ಗುಹೆಯಲ್ಲಿ ತಮ್ಮಮಟ್ಟಿಗಿನ ಜ್ಞಾನಾಂಶವನ್ನು ಉಳಿಸಿಕೊ೦ಡು ಮೈಮರೆಸಿದ್ದಾರೆ. ಬುದ್ಧಿ ಹೇಳುವದರೇ ಇಲ್ಲದಂತಾಗುವದು. ಬುದ್ಧಿ ಹೇಳಿದರೂ ಕೇಳುವವರೇ
ಇಲ್ಲದಾಗುವದು. ಶಿಕ್ಷಗೆ ಬೆದರುವವರಿಲ್ಲ. ಎಲ್ಲವೂ ಅಷ್ಟೇ. ಇ೦ಥ ಅಸಾಮಂಜಸ್ಯದಲ್ಲಿ ಜೀವನಕ್ಕೆ ಉಳಿಗಾಲವೆಲ್ಲಿ? ಜೀವಿಗೆ ಉಸಿರಾಟವೂ ಕಷ್ಣದ ಕೆಲಸವಾಗಿ ಬಿಡುತ್ತದೆ. ದ್ವೇಷ, ಅಸೂಯೆ, ಅನೈಕ್ಯಗಳ ಪರಿಸರದಲ್ಲಿ ಬದುಕು
ಭಾರವಾಗಿ, ಬಾಳುವೆ ಬರಿದಾಗಿ, ಅನ್ನಬಟ್ಟೆಗಳೂ ಆಕಾಶ ಕುಸುಮವಾಗಿ ನಿಲ್ಲತ್ತವೆ, ಘೋರಕಷ್ಟದಲ್ಲಿ ಪಾಡಾಗಿ, ಕಳವಳಿಸಿ, ಒದೆದಾಡಿ ಇದರೊಳಗಿಂದ ಕಡೆಗಾಗುವ ದಾರಿಯೇ ಇಲ್ಲವೇ? ಅದನ್ನು ತೋರಿಸಿಕೊಡುವವರು
ಯಾರೂ ಇಲ್ಲವೇ? ಇಂಥ ಘೋರಜೀವನವನ್ನು ನಿರ್ಮಿಸಿದವರಾರು? ಅಸಹ್ಯ ಅರಾಜಕತೆಯುಂಟಾದರೂ ಅದನ್ನು ಸರಿಪಡಿಸದ ಪ್ರಭುವು ಎಂಥವನಿದ್ದಾನು? ಅವನು ಇದ್ದುದೇ ಆದರೆ ಅವನ ಸ್ಥಾನ ಯಾವುದು? ಈ ಘೋರ ನರಕವನ್ನು
ತಪ್ಪಿಸಲಿಕ್ಕೆ ಆಗದೇ?- ಎ೦ದು ಚಡಪಡಿಸುತ್ತ ಜೀವವು ಹೊಸಬೆಳಕಿನ ಕಡೆಗೆ ದೃಷ್ಟಿಯಿಟ್ಟು, ಹೊಸಗಾಳಿಯತ್ತ ಹೊರಳಿ ನಿಂತು ಸಿಕ್ಕಲ್ಲಿ, ಸಿಕ್ಕಂತೆ ಸಿಕ್ಕಾಪಟ್ಟಯಾಗಿ ಧಾವತಿಗೊಳ್ಳುವದಕ್ಕೆ ಆರಂಭಿಸುತ್ತದೆ. ಅದೇ ಸತ್ಯಯುಗದ ಗರ್ಭಾವಸ್ಥೆ.

ಬೇಸಗೆಯು ಮಳೆಗಾಲದ ಸಿದ್ಧತೆ ಮಾತ್ರ ನಡೆಸಿಬಿಡದೆ, ಮುಂದಿನ ಕಾಲದ ಕೃಷಿಗೆ ಬೇಕಾಗುವ ನೆಲ, ಗೊಬ್ಬರ, ಬೀಜ ಮೊದಲಾದವುಗಳ ಸಲ ಕರಣೆಯನ್ನು ಅಣಿಗೊಳಿಸುವದಕ್ಕೆ  ಕಾಲವೂ ಆಗಿರುತ್ತದೆ. ಅದರಂತೆ ಕಲಿಯುಗವು ಕೋಲಾಹಲದ ಕಾಲಮಾತ್ರ ಆಗಿರದೆ, ಸತ್ಯಯುಗದ ಪೂರ್ವ ಸಿದ್ಧತೆ ನಡೆಸುವ ಸುವರ್ಣಸಂಧಿಯೂ ಆಗಿರುತ್ತದೆ. ಆತ್ಮನ ಬರುವಿಕೆಗೆ ಹದವಾದ ಕ್ಷೇತ್ರ ಸಿದ್ದತೆ ನಡೆದಿರುದದು ಆಗಲೇ. ದೂರದ ಗುಹೆಯಲ್ಲಿ ಕಾದಿಟ್ಟ ಆಧ್ಯಾತ್ಮದ ಹಿಡಿದೆನೆಗಳ ಬೀಜವನ್ನು ಆರಿಸಿದೆಗೆದು ಹಸಿಗೊಂಡ ಭೂಮಿಗೆ ಬಿತ್ತಿ ವಿಪುಲವಾದ ಬೆಳೆಯನ್ನು ಒಕ್ಕುವುದಕ್ಕೆ ನಡುಗಟ್ಟಿ ನಿಂತಿರುವ ಜೀವನಕ್ಕೆ ಸತ್ಯಯುಗದ ಆಗಮನವಿಲ್ಲದೆ ಕಲ್ಯಾಣವೇ ಇಲ್ಲ.

ನಾಲ್ಕು ಯುಗಗಳಲ್ಲಿ ಜಗತ್ತಿನ ವಿಕಾಸವು ಇಳಿಮುಖವಾದಂತೆ ಕಂಡು ಬಂದರೂ, ವಿಕಾಸವು ಯಾನ ಕಾಲಕ್ಕೂ ತಡೆದು ನಿಲ್ಲುವಂತಿಲ್ಲ. ವಿಕಾಸವು ಒಂದು ಕಾಲಕ್ಕೆ ಮಂದವಾಗಿಯೂ, ಇನ್ನೊಂದು ಕಾಲಕ್ಕೆ ತೀವ್ರವಾಗಿಯೂ,
ಬೇರೊಂದು ಕಾಲಕ್ಕೆ ಅತಿ ತೀವ್ರವಾಗಿಯೂ ಸಾಗಿರುತ್ತದೆ. ಜೀವನವು ಕ್ಷಣ ಕ್ಷಣಕ್ಕೂ ವಿಕಾಸಗೊಳ್ಳುತ್ತಲೇ ಸಾಗಿರುನದು. ವರ್ತಮಾನಕಾಲದ ಕ್ಷಣವು ಕೋಲಾಹಲದಲ್ಲಿ ಗಲಿಬಿಲಿಯಲ್ಲಿಯೂ ತೊಳಲುವಂತೆ ಕಂಡುಬರುವದು
ನಿಜವೇ. ಆದರೆ ಭೂತಕಾಲದ ಕಡೆಗೆ ಹೊರಳಿ ಸೋಡಿದರೆ ದಾಟಿ ಬಂದ ಕೋಲಾಹಲವೂ, ಕಡೆಗೆ ಹಾಯ್ದು ಬಂದ ಗಲಿಬಿಲಿಯೂ ಜೀವನ ವಿಕಾಸದ ಒಂದು ಸುಂದರ ಭಾಗವಾಗಿ ಕಂಗೊಳಿಸುತ್ತಿರುವದನ್ನು ಕಾಣಬಲ್ಲೆವು. ಗಲಿ
ಬಿಲಿಯಾಗಲಿ, ಕೋಲಾಹಲವಾಗಲಿ ಇಲ್ಲದಿರುವ ಕಾಲವೇ ವಿಕಾಸವಿಹೀನ ಕಾಲವೆಂದು ಬಗೆಯುವದಕ್ಕೆ ಏನೇನೂ ಅಡ್ಡಿಯೇ ತೋರುವೆದಿಲ್ಲನೆನ್ನುವದು ಸ್ಪಷ್ಟವಾಗಿದೆ.

ವಿಕಾಸವೆಂದರೆ ಜೀವನದ ಮಹಾಕೃಷಿ. ನೆಲದ ಅಗೆತ, ಬೀಜದ ಬಿರುಕು, ನೀರಿನ ಹರಹು, ಗಾಳಿಯಿ ಮೇಳಯಿಕೆ, ತೋಟಿಗನ ಕಣ್ಣಿನರಿಕೆ. ಇವೆಲ್ಲ ಸಾಧಿಸಿದಾಗ ಆ ಮಹಾಕೃಷಿಯು ಸಫಲವಾಗುವದು. ಸಫಲತೆಯೇ ದುಡಿಮೆಯ ಅಳೆಗೋಲು.

ತನುವ ತೋಂಟನಮಾಡಿ, ಮನವ ಗುದ್ದಲಿ ಮಾಡಿ,
ಅಗಿದು ಕಳೆದೆನಯ್ಯ.
ಭ್ರಾಂತಿನ ಬೇರು ಒಡೆದು, ಸಂಸಾರದ ಹೆಂಟಿಯ ಬಗಿದು
ಬಿತ್ತಿದೆನಯ್ಯ ಬ್ರಹ್ಮಬೀಜವ.
ಅಖಂಡಮಂಡಲವೆಂಬ  ಬಾವಿ, ಪವನವೇ ರಾಟಾಳ.
ಸುಹುಮ್ನದಿಂದುದಕವ ತಿದ್ದಿ, ಬಸವಗಳೈವರು
ಹಸಗೆಡಿಸಿಹವೆಂದು.
ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ ಆವಾಗಲೂ
ಈ ತೋಂಟದಲಿ ಜಾಗರವಿದ್ದು,
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ.

ಸಸಿಯ ಸಲಹುವದೇ ಜೀವನದ ಹಿರಿಯ ಕೆಲಸ. ಅದಕ್ಕೆ ಬೇಕಾಗುವದು ಎಚ್ಚರಿಕೆ; ಮಹಾ ಎಚ್ಚರಿಕೆ. ಕಷ್ಟಕ್ಕೆ ದಣಿಯದವರಿದ್ದಾರೆ; ಕೆಲಸಕ್ಕೆ ಬೇಸರಿಯದವರಿದ್ದಾರೆ; ಬೀಜಗಳನ್ನು ಹುಡಿಯಲ್ಲೆರಚುವ ಧೌರ್ಯವಂತರಿದ್ದಾರೆ. ಅವು ಮೊಳೆತು ಬರುವನೆಂಬ ಅಖಂಡಶ್ರದ್ಧೆಯುಳ್ಳವರಿದ್ದಾರೆ. ಬೇಕಾಗಿರುವಲ್ಲಿ ಬೇಕಾದ ಕೈದು ಬೇಕಾಗುವಷ್ಟು ಬಳಸುವ ಕುಶಲರಿದ್ದಾರೆ. ಇಲ್ಲದ ನಾಡಿನಿಂದ ಗಟ್ಟಿಗಾವಲಿನ ಬೇಲಿಯ ತರಿಸಿ ಇಕ್ಕುವವರಿದ್ದಾರೆ. ಆದರೆ ಸಸಿಯ ಸಲಹುವ ಎಚ್ಚರಿಕೆಯುಳ್ಳವರು ಕಡಿಮೆ.

ಸಸಿಯ ಸಲಹುವ ಎಚ್ಚರವೊ೦ದಿಲ್ಲದಿದ್ಧರೆ, ಇಲ್ಲವೆ ಪೂರ್ಣ ಎಚ್ಚರವೊ೦ದಿಲ್ಲದಿದ್ದರೆ ಎಲ್ಲವೂ ವ್ಯರ್ಥವಾಗುವದು; ಅನರ್ಥವಾಗುವದು. ಮಾಡಿದ್ಧಕ್ಕೆ ಫಲವಿಲ್ಲ. ಪಡೆದುದಕ್ಕೆ ಸಫಲತೆ ಇಲ್ಲ.

ತನು ಎಂಬ ಏರಿಗೆ ಮನವೆಂಬ ಕಟ್ಟೆ,
ಆಚಾರವೆಂಬ ಸೋಪಾನ, ಪರಮಾನಂದವೆಂಬ
ಜಲವ ತುಂಬಿ,
ಕೆರೆಯ ಕಟ್ಟಬಲ್ಲವರನಾರನೂ ಕಾಣೆ.
ನಾ ಕಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರಾ.

ಎಂದು ಸ್ಪಷ್ಟವಾಗಿ ಹೇಳುವ ಗಂಡುಗಲಿತನಬೇಕು. ಅಂಥ ಗಂಡುಗಲಿ ಗಳೇ ಜೀವನದ ಹೋರಾಟವನ್ನು ಸಾರ್ಥಕಗೊಳಿಸತಕ್ಕವರು. ಜೀವನವೆಂದರೆ ಕಣ್ಣುಮುಚ್ಚಿ ಹುಟ್ಟಿ, ಕಣ್ತೆರೆದರೂ ನೋಢದೆ ಕಣ್ಣುಮುಚ್ಚಿಕೊ೦ಡು
ಹೋಗುವದಲ್ಲ. ಅದಕ್ಕೊಂದು ಅರ್ಥವಿದೆ.

ಜೀವನವು ವ್ಯರ್ಥಹೋರಾಟವಲ್ಲ; ಅರ್ಥವಿಲ್ಲದ ದಾವತಿಯಲ್ಲ. ಅದೊಂದು ಅದ್ಭುತ ರಸಾಯನ, ಅಲ್ಲಿ ವಿಲಕ್ಷಣ ಸಪ್ಪಳ, ಅಸಹ್ಯ ಕಾವು, ಮೂಗು ಮುಚ್ಚಿಕೊಳ್ಳುವಂಥ ದುರ್ವಾಸನೆ, ನೋಡಲಿಕ್ಕಾಗದ ಓಡಾಟ ನಡೆಯಲೇಬೇಕು. ಅವು ನಡೆದಿರುವವೆಂತಲೇ ಜೀವನವೊಂದು ಅದ್ಭುತ ರಸಾಯನ. ಆ ಅದ್ಭುತ ರಸಾಯನದಲ್ಲಿಯೇ ಹೊಸದು ಕಾಣಿಸಿಕೊಳ್ಳಬೇಕು. ಅದಕ್ಕಾಗಿಯೇ ಜೀವನು ಒಡಲು ತೊಟ್ಟದ್ದಾನೆ. ಒಡಲುಗೊಂಡಿರುವದರಿಂದಲೇ ಜೀವನು ಇಂಥ ಘೋರ ಖಟಾಟೋಪಕ್ಕೆ ಗುರಿಯಾಗಿದ್ದಾನೆ. ದೇವನು ಸಹ ಇಂದು ಒಡಲುತೊಟ್ಟರೆ ಹಾಗೆ ಧಾವತಿಗೊಳ್ಳಲೇ- ಬೇಕಾಗುತ್ತದೆ.

ಒಡಲುಗೊಂಡವ ಹಸಿವ, ಒಡಲುಗೊಂಡವ ಹುಸಿವ,
ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ.
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಧಾ.

ಒಡಲುಗೊಂಡು ಬಂದ ಜೀವನು, ಬಯಲಲ್ಲಿ ಆಡಿಆಡಿ ಒಡಲನ್ನು ಕರಗಿಸಿ ನೀರುಮಾಡಿಕೊಳ್ಳಬೇಕಾಗುತ್ತದೆ. ತೇದು ತೇದು ಸುಗಂಧಮಾಡಿ ತೂರಿ ಬಿಡಬೇಕಾಗುತ್ತದೆ. ಕಟೆದು ಕಟೆದು ಮಿ೦ಚು ಹುಟ್ಟಸಬೇಕಾಗುತ್ತದೆ.
ನುಡಿದು ನುಡಿದು ಮುಗಿಲವರೆಗೆ ಪಸರಿಸಬೇಕಾಗುತ್ತದೆ. ಸವೆದು ಸವೆದು ನೆಲವನ್ನು ಕೂಡಿಕೊಳ್ಳಬೇಕಾಗುತ್ತದೆ.

ಬೇಸಗೆಯಿದ್ದರೂ ಒಮ್ಮೊಮ್ಮೆ ಮಳಿ ಬರುವದುಂಟು. ಬೆಳಗು ಮುಂಚಾನೆ ಚಳಿ ಬೀಸುವದುಂಟು. ಯಾವ ಯುಗವಾಗಿದ್ದರೇನು? ಇನ್ನುಳಿದ ಯುಗಗಳ ಸುಳುಹು ತಲೆಹಾಕದೆ ಇರಲಾರದು. ಪಂಚತತ್ವಗಳ ಒಡಲು,
ಆಡಿ ಆಡಿ ತೀಡಿ ತೀಡಿ ಪಂಚತತ್ವಗಳಲ್ಲಿ ಬೆರೆತುಬಿಡುವ ಕೆಲಸವೇ ನಾಲ್ಕು ಯುಗಗಳಲ್ಲಿ ನಡೆದಿರುತ್ತದೆ.

ಆಡ ಬಾರದ ಬಯಲು, ನೋಡಬಾರದ ಬಯಲು.
ನುಡಿಯಬಾರದ ಬಯಲು, ಹಿಡಿಯಬಾರದ ಬಯಲು.
ಈ ಒಡಲಿಲ್ಲದ ಬಯಲೊಳಗಡಗಿಪ್ಪ ಭೇದವ
ಈ ಲೋಕದ ಜಡರೆತ್ತ ಬಲ್ಲರೈ ರಾಮನಾಥ.

ಲೋಕದ ಜಡರು ಮೊದಲಿಗೆ ಈ ಗುಟ್ಟನ್ನು ಅರಿತುಕೊಳ್ಳಲಿ.”

ಮಹಾಶಕ್ತಿಮಯಿಯಾದ ಜಗದೀಶ್ವರಿಯೂ ಬಹು ಗಂಭೀರವಾದ ನುಡಿಗಳಲ್ಲಿ ವಿಷಯವನ್ನು ಅದೆಂತು ಪೂರ್ತಿಗೊಳಿಸದಳೆಂದರೆ –

“ಜೀವನದಲ್ಲಿ ಚಿತ್ತದ ವಿಕಾಸವೇ ಮಾನವಕುಲದ ಮುನ್ನಡೆ. ಚಿತ್ತವು ಹೊರಗಡೆ ಕಾಣಿಸಿಕೊಂಡಾಗ ಮಾನವಲೋಕದ ವೈಭವದ ವಸಂತ. ಆ ದೇವ ನಿಮಿಷದಲ್ಲಿ ಮಾನವನ ಪ್ರಗತಿಯು ತೀವ್ರಗತಿಯಲ್ಲಿ ಸಾಗುತ್ತದೆ. ಪ್ರಾಣಶಕ್ತಿ ಭೌತಶಕ್ತಿಗಳ ಮೂಲಕವಾಗಿಯೇ ತನ್ನ ನಿರೀಕ್ಷೆಗಳನ್ನು ಈಡೇರಿಸಿಕೊಳ್ಳುವದು; ಬಾಳು ಮಂದವಾಗುವದು; ತಾಮಸಯುತವಾಗುವದು; ಪ್ರಮಾದಮಯವಾಗುವದು.”

 

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಣದ ಕಬ್ಬು
Next post ನಗೆ ಡಂಗುರ-೧೬೧

ಸಣ್ಣ ಕತೆ

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

cheap jordans|wholesale air max|wholesale jordans|wholesale jewelry|wholesale jerseys