ದೈವವೇ! ಬ್ರಹ್ಮಾಂಡಗಳನು ಮುತ್ತಿಡುವಂಥ
ಭವ್ಯ ಅಪರಂಪಾರ ಶಕ್ತಿಯೇ! ದೇವನಲಿ
ಮೇಲಾಟವನು ಹೂಡಿ ಮೇಲೆಕೆಳಗಾದಂಥ
ಮೇಲ್ಮೆಯೇ! ನೀನೆ ಬೆಂಗಾವಲಿಗ! ಕಾವನಲಿ
ಸ್ಪರ್‍ಧೆಯೇ? ನಿನ್ನ ತಿರುಳೆನ್ನ ಎದೆಹೊಗಲಿನ್ನು.
ನಿನ್ನ ಹುರುಳೆನ್ನ ಕೊರಳುಸಿರಾಗಿ ಪಸರಿಸಲಿ?
ನಿನ್ನ ಹೆಸರನೆ ಹೇಳಿ ಸೊಗಸು-ಕೋಟಲೆಯಿನ್ನು
ಬಂದು ಬಾಗಿಲವನ್ನು ನೂಕಿರಲಿ! ಭುವನದಲಿ
ನಿನ್ನ ಎದೆಗಾರಿಕೆಯ ಬೆರಗು ಬಿದ್ದಣವಿರಲು
ಹೆದೆಯೇರಿಸಲು ನಾನು ಹಿಂದೆಗೆಯುವೆನೆ? ನನ್ನ
ಬಾಳುವೆಯು ನಿನಗೆಂದು ಮೀಸಲಾಗಿರುವರಳು!
ಕಿರಿದಹುದು, ಇರಲೇನು? ಅರಳಲಿದೆ. ಅರಿದೆನ್ನ
ನೆತ್ತಿಕೊಳೆ ನನ್ನ ನರುಗಂಪು ವಿಭ್ರಮಿಸಿ
ಬಿಡಬಹುದು ಹದಿನಾಲ್ಕು ಲೋಕಗಳ ತಣಿಸಿ!
*****



















