ನಾನೊಬ್ಬನೇ ನಿನ್ನ ನೆರವ ಪಡೆದಿದ್ದಾಗ
ನನ್ನ ಹಾಡೊಂದಕೇ ನಿನ್ನೆಲ್ಲ ಕೃಪೆ ಇತ್ತು ;
ಅಂಥ ಘನತೆಗಳಿಲ್ಲ ನನ್ನ ಕವಿತೆಗೆ ಈಗ
ಕಳೆಗುಂದಿ ಅದರ ಸ್ಥಳ ಈಗ ಅನ್ಯರ ಸೊತ್ತು
ಒಪ್ಪಿದೆನು ಒಲವೆ ನಿನ್ನೆಲ್ಲ ಪ್ರಿಯ ಚರ್‍ಚೆಗಳು
ಮೇಲು ಪ್ರತಿಭೆಯ ಲೀಲೆಗರ್‍ಹವೆನ್ನಿಸಿದವು ;
ಆದರೂ ನಿನ್ನ ಕವಿ ಕಂಡ ಹೊಸ ಹೊಳವುಗಳು
ನಿನ್ನಿಂದ ಕಳಚಿ ನಿನಗೇ ಮತ್ತೆ ತೊಡಿಸಿದವು ;
ಗುಣಶೀಲನೆಂದರೂ ನಿನ್ನ ನಡೆನುಡಿಯಲ್ಲೆ
ಇದ್ದದ್ದ ನೋಡಿ ಕದ್ದದ್ದು ; ಚೆನ್ನಿಗನೆಂದು
ಕೀರ್ತಿಸಿದರೂ, ಚೆಲುವ ನಿನ್ನ ಕೆನ್ನೆಗಳಲ್ಲೆ
ಕಂಡದ್ದು; ನಿನ್ನಲಿದ್ದದ್ದನ್ನೆ ಹೊಗಳಿದ್ದು.
ಅವನ ಮಾತಿಗೆ ಕೃತಜ್ಞತೆ ಹೇಳಲೇಕಿನ್ನು ,
ನೀನೆ ನೀಡಿರಲು ಅವ ಸಲಿಸಬೇಕಾದ್ದನ್ನು?
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 79
Whilst I alone did call upon thy aid