ಎಲೆಯ ಮೇಲೆ ಎಲೆಯು ಉರುಳಿವೆ
ಬಿಸಿಲ ಕಾಲವು ಬಂದಿತೆ
ಹಕ್ಕಿ ಗೂಡು ಒಣಗಿ ಹೋಗಿದೆ
ಮುಗಿಲು ಕೆಂಡವ ಕಾರಿತೆ
ಎಲ್ಲಿ ಹೋಯಿತು ಹಸಿರು ಹೂಬನ
ಎಲ್ಲಿ ಅಡಗಿತು ಕೂಜನ
ಎಲ್ಲಿ ಮುಳುಗಿತು ಮಳೆಯ ಠಂಠಣ
ತಂಪು ಹನಿಗಳ ಸಿಂಚನ
ನೆಲಕೆ ಹೊಲಕೆ ಜಲಕೆ ಸುರಿದಿವೆ
ಬರಿಯ ಬಣಬಣ ಎಲೆಗಳು
ಬೆಂಕಿ ಬಿದ್ದರೆ ಬಗ್ಗನುರಿವವು
ಬಯಲು ಬಾನಿನ ನೆಲೆಗಳು
ಬಣ್ಣ ಬಣ್ಣದ ದಿಡುಗು ಗುಡುಗಿಗೆ
ಕಡೆಗೆ ಬಂದಿತೆ ಈ ಗತಿ
ಯೌವನೋತ್ಸವ ಹರ್ಷಹಾಡಿಗೆ
ಕಡೆಗೆ ತಿರುಗಿತೆ ಈ ಮತಿ
ಮತ್ತೆ ನಗುವಳೆ ವಸುಮತಿಽಽಽಽ
ಮತ್ತೆ ತರುವಳೆ ರಸಗತಿಽಽಽಽ
*****