ದೀಪಿಕಾ
ನಿನ್ನ ನಗೆಯೆಂದರೆ
ನಿನ್ನ ಬಗೆಯಂಥದು;
ನಿನ್ನ ಬಗೆಯೆಂದರೆ
ಮಲ್ಲಿಗೆ ಧಗೆಯಂಥದು;
ಮೈಯನ್ನ ಕೆರಳಿಸಿ ಕೊರಗಿಸಿ
ಒಳಗಿನ ಕಣ್ಣನ್ನು ತೆರೆಸುವ
ನಿನ್ನ ಚೆಲುವು ನವಿಲುಗರಿಯ ಪತ್ರದಂಥದು,
ಕತ್ತಲೆ ಬಾನಿನ ಚುಕ್ಕಿಯ ಛತ್ರಿಯಂಥದು
ನನ್ನೊಳಗಿನ ಪದರ ಪದರಗಳು ಸೀಳಿ ಎದ್ದು ಬರುವ
ನೀನೂ ನಾನೇ ಎಂದರೆ ಒಗಟುಮಾತೆ ಹೇಳು?
ನನ್ನ ರತಿವಿರತಿಯನ್ನ ನೆನಪಿನಲ್ಲಿ ಕಚ್ಚಿ
ಹುಗಿದ ಕಾಮನೆಯನ್ನೆ ಕನಸಿನಲ್ಲಿ ಬಿಚ್ಚಿ
ತಕ್ಕ ಮಾತಿಗೆ ತಡಕಿ
ನಡುಕ ಗದ್ಗದದಲ್ಲಿ ಬಡಬಡಿಸುವಾಗ,
ಮೆಲ್ಲಗೇಳುತ್ತೀಯ ಮಲ್ಲಿಗೆ ಪರಿಮಳಿಸುತ್ತ
ಸುತ್ತ ತೆರೆಯುತ್ತ ಶೃಂಗಾರಲೋಕ;
ಬೆಳಕಿಗೆ ಮಂಜನ್ನು ಬೆರೆಸಿ
ಬಿಸಿಲಿಗೆ ತಂಪನ್ನು ಕಲೆಸಿ
ಬಾಳನ್ನೇ ಹೋಳಿ ಎನಿಸುತ್ತ ದೀಪಿಕಾ.
*****
ದೀಪಿಕಾ ಕವನಗುಚ್ಛ