ಕಷ್ಟ ದೈವವೆ ನನ್ನಿಷ್ಟ ದೈವವೆಂದು
ಬದುಕ ಸ್ವೀಕರಿಸಿಕೊಂಡೆ
ಬದುಕು ಅನಿಷ್ಟಗಳ ಸರಮಾಲೆಯಾಯಿತು
ಬೆಳೆ ನಷ್ಟವಾಯಿತು
ಕಳೆ ತುಂಬಿ ಹೋಯಿತು
ಬರ ಬಂತು ಮಳೆ ಬಂತು
ನನ್ನಿಳೆಯಲೆಲ್ಲವೂ ನಾಶವಾಯಿತು
ದುಡಿತಕೆ ಮೈಯೊಗ್ಗಿತು
ಬೆನ್ನು ಬಗ್ಗಿತು ಕೈ ಬಡ್ಡಾಯಿತು
ಕಾಲು ನೋಯಿತು
ಕಾಲಕ್ಕೆ ಮೊದಲೆ ವೃದ್ಧಾಪ್ಯ ಪ್ರಾಪ್ತವಾಯಿತು
ರೋಗರುಜಿನು ಬಲು ಆಪ್ತವಾಯಿತು
ಜನರೆದುರು ನಾ ಭ್ರಷ್ಟನಾದೆನು
ದೇಶಭ್ರಷ್ಟನೆನಿಸಿದೆನು
ಇಷ್ಟವಾದವರ ಕಳೆದುಕೊಂಡೆನು
ಇಷ್ಟಾದರೂ ಭವಕೆ ಅಂಟಿಕೊಂಡಿರುವೆನು
ಕಷ್ಟದೈವವೆ ನನ್ನಿಷ್ಟದೈವವೆಂದು
ಮುಷ್ಟಿಯನ್ನವನೆ ಮೃಷ್ಟಾನ್ನ ಮಾಡಿಕೊಂಡು
ಓ ದೇವರೆ
ಆಗಾಗ ನಿನ್ನ ಗುಣವ ಹಾಡಿಕೊಂಡು
ಹೊಗಳಿಕೊಂಡು
*****