(ನವಯುವಕನ ಹಾಡು)

ಓ ನಲ್ಲೆ ಬಾ ಇಲ್ಲೆ
ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ!

ಹಾ ಎನ್ನೊಲವೇ ಎನ್ನಲು ಬಾಯಿಲ್ಲೇ
ಸೆಳೆದೊಯ್ಯಲು ದಿಟ್ಟಿಗೆ ಬಲವಿಲ್ಲೇ
ಹಾಹಾ ನಿನಗೆನ್ನೊಳು ದಯವಿಲ್ಲೇ
ಎನಗೆನ್ನ ಸು ದಕ್ಕದೆ ಇದೆಯಲ್ಲೇ
ನನ್ನೆಲ್ಲವನೀ ಮಿಕ್ಕಿಹೆಯಲ್ಲೇ
ಓ ನಲ್ಲೆ ಬಾ ಇಲ್ಲೆ
ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ?

ತಂಪಿನಿರುಳು ಕಂಪಿನೆಲರು ಮೈದುಂಬಿದೆ ಚೆಲುವು
ನೀನೆ ಹುರುಳು ನಾನೊ ಮರುಳು ನಿನ್ನೊಂದಿಗೆ ನಲವು
ಮೈಯ ಸೋಂಕಿ ಎಲರೊಯ್ಯುತ್ತಿದೆ ಹರಣ
ಹೂವಿಗಾಯ್ತು, ಹಾಡಿಗಾಯ್ತು ಕಿವಿಕಣ್‌ಕರಣ
ಈ ಬೆಳುದಿಂಗಳ ಸೊಗಕೆನ್ನಿರವೆ ಋಣ
ಆ ಜೋಡಿ ನೋಡಿ ಪರಿದೋಡುವುದೆನ್ನ ಮನ
ಹಾ ಪಂಚಪ್ರಾಣ ಹಂಚಿಹೋಗುತ್ತಿದೆ ಹರಿದು
ಅದ ಮರಳಿಸೆ ನಿನಗಲ್ಲದೆ ಮಿಕ್ಕರಿಗರಿದು
ಆದೊಡೆ ‘ನಿನ್ನ ನೊಲ್ಲೆ ನಿನ್ನ ನೊಲ್ಲೆ’ ಎನುವಂತಿದೆಯಲ್ಲೆ
ನೀನವರಿವರೊಡನಾಡುವ ಬರಿಲಲ್ಲೆ
ನೀನೆ ನಲ್ಲೆ ನನ್ನಾಣೆಗು ನಿನ್ನುಳಿದೆನಗಿಲ್ಲೆ
ಇದ ನೀ ಬಲ್ಲೆ!

ಓ ನಲ್ಲೆ ಬಾ ಇಲ್ಲೆ
ಆ ಕ್ಷುಲ್ಲರೊಡನೆ ನಿನಗೇತಕೆ ಲಲ್ಲೆ!
*****