ನೆನೆಯಬೇಕು

ನೆನೆಯಬೇಕು

ಡಾನ್ ಉರ್‍ಬಾನೋನ ಮಗ, ಡಿಮಾಸ್‌ನ ಮೊಮ್ಮಗ, ಚರ್‍ಚಿನಲ್ಲಿ ನಾಟಕಗಳನ್ನು ಹೇಳಿಕೊಡುತ್ತಿದ್ದನಲ್ಲ, ಇನ್‌ಫ್ಲೋಯೆಂಜಾ ಬಂದಾಗ ‘ಶಪಿತ ದೇವತೆ ನರಳುವಳು,’ ಅನ್ನುವ ಹಾಡು ಹೇಳುತ್ತಲೇ ತೀರಿಕೊಂಡ ಉರ್‍ಬಾನೋ ಗೋಮೆಝ್‍ನನ್ನು ನೆನೆಯಬೇಕು. ಬಹಳ ಕಾಲ, ಹದಿನೈದು ವರ್‍ಷವೇ ಆಯಿತು. ಆದರೂ ಅವನನ್ನು ನೆನೆಯಬೇಕು. ಅವನನ್ನು ತಾತ ಅಂತ ನಾವು ಕರೆಯುತ್ತ ಇದ್ದದ್ದು, ಡಾನ್ ಉರ್‍ಬಾನ್‌ನ ಇನ್ನೊಬ್ಬ ಮಗ, ಫೆಡಿನ್ಸಿಯೋ ಗೋಮೆಝ್‍ಗೆ ಇಬ್ಬರು ತರಲೆ ಹೆಣ್ಣುಮಕ್ಕಳಿದ್ದರು. ಒಬ್ಬಳು ಕಪ್ಪಗೆ, ಗಿಡ್ಡ. ಅವಳಿಗೆ, ಪಾಪ, ಕುನ್ನಿ ಅಂತ ಕರೆಯುತ್ತಾ ಇದ್ದದ್ದು, ಇನ್ನೊಬ್ಬ ಮಗಳು ನಿಜವಾಗಿ ಎತ್ತರವಾಗಿ ನೀಲಿ ಕಣ್ಣು ಇದ್ದು ಅವನ ಮಗಳೇನಾ ಅಂತ ಅನುಮಾನ ಪಡುತ್ತಾ ಇದ್ದದ್ದು. ಅದೇ, ಯಾವಾಗಲೂ ಬಿಕ್ಕಳಿಕೆ ಬರತಾ ಇತ್ತಲ್ಲ ಅವಳು, ಅದನ್ನೆಲ್ಲ ನೆನೆಯಬೇಕು. ಅವತ್ತು ಚರ್‍ಚಿನಲ್ಲಿ ಸಾಮೂಹಿಕ ಪ್ರಾರ್‍ಥನೆ ಮಾಡುತಿದ್ದಾಗ ಅವಳಿಗೆ ಬಿಕ್ಕಳಿಕೆ ಬಂದು ಅವಳು ಅಳುತಾನೂ ಇದಾಳೆ ನಗುತಾನೂ ಇದಾಳೆ ಅನ್ನುವ ಹಾಗೆ ಶಬ್ದ ಮಾಡುತ್ತ ಏನು ಮಾಡಿದರೂ ಬಿಕ್ಕಳಿಕೆ ನಿಲ್ಲದೆ ಕೊನೆಗೆ ಆಚೆ ಕರಕೊಂಡು ಹೋಗಿ ಸಕ್ಕರೆ, ನೀರು ಕೊಟ್ಟಮೇಲೆ ಸಮಾಧಾನವಾಗಿದ್ದು ನೆನೆಯಬೇಕು. ಅವಳು ಲೂಸಿಯೋ ಚಿಕೋನ, ಈಗ ನದಿಯ ದಡದ ಮೇಲೆ ಎಣ್ಣೆ ಮಿಲ್ಲು ಇದೆಯಲ್ಲ ಅಲ್ಲಿ ಮೊದಲು ಲಿಬ್ರಾಡೋಗೆ ಸೇರಿದ್ದ ಹೆಂಡದಂಗಡಿ ಇತ್ತಲ್ಲ, ಅದನ್ನು ಖರೀದಿ ಮಾಡಿದವನನ್ನು ಮದುವೆಯಾದಳು.

ಅವನ ಅಮ್ಮನನ್ನ ಬದನೆ ಗಿಡ ಅನ್ನುತ್ತಾ ಇದ್ದದ್ದು ನೆನೆಯಬೇಕು. ಯಾಕೆ ಅಂದರೆ ಯಾವಾಗಲೂ ತೊಂದರೆಗೆ ಸಿಕ್ಕಿಬೀಳತಾ ಇದ್ದಳು, ಒಂದಾದ ಮೇಲೆ ಒಂದು ಮಗು ಆಗತಾನೇ ಇತ್ತು. ಅವಳ ಹತ್ತಿರ ಒಂದಷ್ಟು ದುಡ್ಡಿದೆ ಅನ್ನತಿದ್ದರು. ಅದನ್ನೆಲ್ಲ ಅವಳು ಸಾವಿಗೇ ಖರ್‍ಚುಮಾಡಿದಳು. ಅವಳ ಮಕ್ಕಳೆಲ್ಲ ಹುಟ್ಟಿದ ಒಂದೆರಡು ತಿಂಗಳಲ್ಲೇ ಸಾಯುತಿದ್ದವು, ಅವಳು ಮಕ್ಕಳ ಹೆಸರಿನಲ್ಲಿ ಪೂಜೆ ಮಾಡಿಸುತಿದ್ದಳು, ಹೆಣ ತಗೊಂಡು ಹೋಗುವಾಗ ಹಾಡು ಕೀರ್‍ತನೆ, ಅದೇ, ‘ಪ್ರಭೂ ಮತ್ತೊಬ್ಬ ಪುಟ್ಟ ದೇವತೆಯ ಕಳುಹಿರುವೆ ನಿನ್ನೆಡೆಗೆ,’ ಅನ್ನುವಂಥವು, ಹೇಳಿಸುತ್ತಿದ್ದಳು, ಹೀಗೆ ಮಾಡುತ್ತ ಬಡವಳಾದಳು. ಒಂದೊಂದು ಸಂಸ್ಕಾರಕ್ಕೂ ತುಂಬ ದುಡ್ಡು ಖರ್‍ಚಾಗುತಿತ್ತು. ಊಟಕ್ಕೆ ಬಂದವರಿಗೆಲ್ಲ ಧಾರಾಳವಾಗಿ ವೈನು ಕೊಡುತಿದ್ದಳು. ಅವಳಿಗೆ ಉಳಿದದ್ದು ಇಬ್ಬರೇ ಮಕ್ಕಳು-ಅರ್‍ಬಾನೋ ಒಬ್ಬ ಇನ್ನೊಬ್ಬಳು ನತಾಲಿಯಾ. ಅವರಿಬ್ಬರೂ ಹುಟ್ಟಾ ಬಡವರು. ಅವರನ್ನ ಅವಳು ಸಾಕಲೂ ಇಲ್ಲ. ಯಾಕೆ ಅಂದರೆ ಸುಮಾರು ಐವತ್ತನೆ ವಯಸಿನಲ್ಲಿ ಕೊನೆಯ ಮಗುವಿನ ಹೆರಿಗೆಯಲ್ಲಿ ತೀರಿಕೊಂಡಳು.

ನಿಮಗೂ ಗೊತ್ತಿರಬಹುದು. ಅವಳು ಜಗಳಗಂಟಿ, ಮಾರ್‍ಕೆಟ್ಟಿನಲ್ಲಿ ಎಲ್ಲರ ಹತ್ತಿರ ವಾದ ಮಾಡುತ್ತಾ ಇದ್ದಳು. ತರಕಾರಿ ಮಾರುವ ಹೆಂಗಸು ಟೊಮೆಟೋಗೆ ಬೆಲೆ ಜಾಸ್ತಿ ಹೇಳಿದರೆ ದರೋಡೆ ಮಾಡುತ್ತೀರಲ್ಲ ಅಂತ ಜಗಳ ತೆಗೆಯುತಿದ್ದಳು. ಬಡತನ ಬಂದಮೇಲೆ ಅವಳು ಮಾರ್‍ಕೆಟ್ಟಿನ ಕಸದ ಗುಂಡಿ ತಡಕುತ್ತ ಅಲ್ಲಿ ಸಿಕ್ಕುವ ಈರುಳ್ಳಿ, ಹುರಳಿ ಕಾಯಿ, ಮಕ್ಕಳ ಬಾಯಿ ಸಿಹಿಯಾಗಲಿ ಅಂತ ಕಬ್ಬಿನ ಚೂರು ಆಯ್ದುಕೊಳ್ಳುತಿದ್ದಳು. ಆಗಲೇ ಹೇಳಿದೆನಲ್ಲ, ಇಬ್ಬರು ಮಕ್ಕಳಿದ್ದರು. ಉಳಿದ್ದು ಒಂದೇ. ಆಮೇಲೆ ಅವಳ ಬಗ್ಗೆ ಮತ್ತೇನೂ ಗೊತ್ತಾಗಲಿಲ್ಲ.

ಅವಳ ಮಗ ಅರ್‍ಬಾನೊ ಗೋಮೆಝ್ ಸುಮಾರಾಗಿ ನಮ್ಮ ವಯಸಿನವನು. ಹೆಚ್ಚೆಂದರೆ ಒಂದೆರಡು ತಿಂಗಳಿಗೆ ದೊಡ್ಡವನಿದ್ದಾನು. ಕಾಸು ಎಸೆಯುವ ಆಟದಿಂದ ಹಿಡಿದು ಎಲ್ಲಾ ಥರದ ಜಾಣ ಆಟಗಳಲ್ಲೂ ನಿಪುಣ. ಅವನು ನಮಗೆ ಡಾಲಿಯಾ ಹೂವು ಮಾರುತಿದ್ದದ್ದು ನೆನೆಯಬೇಕು. ಅವನ್ನು ಅವನ ಹತ್ತಿರ ಕೊಳ್ಳುತ್ತಾ ಇದ್ದೆವು. ಬೆಟ್ಟಕ್ಕೆ ಹೋದರೆ ಬೇಕಾದಷ್ಟು ಕಿತ್ತುಕೊಳ್ಳಬಹುದಾಗಿತ್ತು. ಸ್ಕೂಲಿನ ಅಂಗಳದಲ್ಲಿದ್ದ ಮಾವಿನ ಗಿಡದಿಂದ ಕಾಯಿ ಕಿತ್ತುಕೊಂಡು ಬಂದು ನಮಗೆ ಮಾರುತ್ತಾ ಇದ್ದ. ಹಾಗೇ ಸ್ಕೂಲಿನ ಗೇಟಿನ ಹತ್ತಿರ ಮಾರುತ್ತಾ ಇದ್ದ ಚಿಲಿಯ ಕಿತ್ತಳೆ ಹಣ್ಣು ಎರಡು ಸೆಂಟ್‌ಗೆ ತಂದು ನಮಗೆ ಐದು ಸೆಂಟ್‌ಗೆ ಮಾರುತ್ತಾ ಇದ್ದ. ಅವನ ಜೇಬಿನಲ್ಲಿರುತಿದ್ದ ಗೋಲಿ, ಬುಗುರಿ, ದೂರ ಹಾರದಿರಲೆಂದು ಕಾಲಿಗೆ ಬಣ್ಣದ ದಾರ ಕಟ್ಟಿದ ಜೀರುಂಡೆ ಇಂಥವನ್ನೆಲ್ಲ ನಮಗೆ ಮಾರುತ್ತಾ ಇದ್ದ.

ಅವನು ಎಲ್ಲಾರ ಜೊತೆಗೂ ವ್ಯಾಪಾರ ವ್ಯವಹಾರ ನಡೆಸತಾ ಇದ್ದ ಅನ್ನುವುದು
ನೆನೆಯಬೇಕು.

ಅವನು ನಾಚಿಟೋ ರಿವೆರೋನ ಭಾವಮೈದುನ. ಅದೇ, ಮದುವೆಯಾದ ಒಂದಷ್ಟು ದಿನಕ್ಕೆ ಬುದ್ಧಿಯ ಸ್ಥಿಮಿತ ಕಳಕೊಂಡನಲ್ಲ, ಅವನ ಹೆಂಡತಿ ಇನೆಸ್ ತನ್ನ ಹೊಟ್ಟೆಯ ಪಾಡಿಗೆ ಮೇನ್ ರೋಡಿನ ಪಕ್ಕದಲ್ಲಿ ಜ್ಯೂಸ್ ಅಂಗಡಿ ಇಟ್ಟು ನಾಚಿಟೋ ಅಲ್ಲಿ ಕೂತು ಡಾನ್ ರೆಫ್ಯೂಜಿಯೋನ ಕ್ಷೌರದಂಗಡಿಯಲ್ಲಿ ಕಲಿತ ಹಾಡುಗಳನ್ನು ಮ್ಯಾಂಡೊಲಿನ್ ಹಿಡಿದು ಅಪಸ್ವರದಲ್ಲಿ ಹಾಡುತಿದ್ದ.

ನಾವು ಅರ್‍ಬಾನೋ ಜೊತೆಯಲ್ಲಿ ಅವನ ಒಡಹುಟ್ಟಿದವಳನ್ನು ನೋಡುವುದಕ್ಕೆ ಹೋಗುತಿದ್ದೆವು. ಜ್ಯೂಸು ಕುಡಿಯುವುದಕ್ಕೆ ಹೋಗುತಿದ್ದೆವು. ಜ್ಯೂಸಿಗೆ ನಾವು ಯಾವತ್ತೂ ದುಡ್ಡು ಕೊಡುತ್ತಿರಲಿಲ್ಲ. ಯಾಕೆ ಅಂದರೆ ನಮ್ಮ ಹತ್ತಿರ ದುಡ್ಡು ಇರಲಿಲ್ಲ. ಆಮೇಲೆ ಅವನಿಗೆ ಸ್ನೇಹಿತರೇ ಇಲ್ಲದ ಹಾಗಾದರು. ಯಾಕೆ ಅಂದರೆ ಅವನು ಕಂಡರೆ ಸಾಕು ಎಲ್ಲಿ ದುಡ್ಡು ಕೇಳುತ್ತಾನೋ ಅಂತ ನಾವು ಕಣ್ಣು ತಪ್ಪಿಸಿ ಓಡಾಡುತಿದ್ದೆವು.

ಆವಾಗಲೇ ಅಂತ ಕಾಣತದೆ ಅವನ ಬದುಕು ಕೆಟ್ಟಿದ್ದು. ಇಲ್ಲಾ, ಹುಟ್ಟಿದಾಗಿನಿಂದಲೂ ಹಾಗೇ ಇತ್ತೋ ಏನೋ.

ಐದನೆಯ ಕ್ಲಾಸಿನಲ್ಲಿದ್ದಾಗ ಅವನನ್ನು ಸ್ಕೂಲಿನಿಂದ ಹೊರಗೆ ಹಾಕಿದರು. ಸ್ಕೂಲಿನ ಲ್ಯಾವೆಟ್ರಿಯ ಹಿಂದೆ ಒಣಗಿದ ಬಾವಿಯಲ್ಲಿ ಅವನು ಕಸಿನ್ ಜೊತೆ, ಅದೇ ಗಿಡ್ಡಿಯ ಜೊತೆ ಗಂಡ ಹೆಂಡತಿ ಆಟ ಆಡುತಿದ್ದ. ಅವನ ಕಿವಿ ಹಿಡಿದು ಎಳೆದುಕೊಂಡು ಬಂದರು. ಅವನಿಗೆ ಅವಮಾನ ಆಗುವ ಹಾಗೆ ಸ್ಕೂಲಿನ ಹುಡುಗರು, ಹುಡುಗಿಯರ ನಡುವೆ ನಡೆಸಿಕೊಂಡು ಬಂದು ಹೊರಗೆ ದಬ್ಬಿದರು. ಅವನು ತಲೆ ಎತ್ತಿಕೊಂಡು, ಮಾಡತೀನಿ ನಿಮಗೆ ಅನ್ನುವ ಹಾಗೆ ನಮ್ಮ ಕಡೆಗೆ ದುರುಗುಟ್ಟಿ ನೋಡುತ್ತಾ ಹೊರಟು
ಹೋದ.

ಆಮೇಲೆ ಅವಳು ಬಂದಳು. ಮುಖ ಊದಿಸಿಕೊಂಡಿದ್ದಳು. ನೋಟದ ಚೂರಿಯಲ್ಲಿ ಇರಿಯುವ ಹಾಗೆ ನೋಡುತ್ತಿದ್ದಳು. ಕಣ್ಣು ಮಾತ್ರ ನೆಲದ ಇಟ್ಟಿಗೆಗಳನ್ನ ನೋಡುತಿತ್ತು. ಬಾಗಿಲ ಹತ್ತಿರ ಹೋಗುತಿದ್ದ ಹಾಗೆ ಕಣ್ಣಲ್ಲಿ ದಳದಳ ನೀರು ಬಂತು. ಇಡೀ ಮಧ್ಯಾಹ್ನ ತೋಳದ ಹಾಗೆ ಊಳಿಡತಾ ಇದ್ದಳು.

ಜ್ಞಾಪಕಶಕ್ತಿ ತೀರ ಕೈ ಕೊಡದೆ ಇದ್ದರೆ ಮಾತ್ರ ಇಂಥದ್ದು ಮರೆತು ಹೋಗತ್ತೆ.

ಅವನ ಚಿಕ್ಕಪ್ಪ, ಫೆಡೆನ್ಸಿಯೋ, ಎಣ್ಣೆ ಗಿರಣಿ ಇಟ್ಟುಕೊಂಡಿದ್ದವನು, ಅರ್‍ಬಾನೋ ಎಚ್ಚರ ತಪ್ಪುವ ಹಾಗೆ ಹೊಡೆದ. ಏಟು ತಿಂದು ತಲೆ ಕೆಟ್ಟು ಊರು ಬಿಟ್ಟು ಹೊರಟು
ಹೋದ.

ಅವನು ಪೋಲೀಸು ಕೆಲಸಕ್ಕೆ ಸೇರಿ ಇಲ್ಲಿಗೆ ಬರುವ ತನಕ ನಾವು ಮತ್ತೆ ಅವನನ್ನು ನೋಡಲೇ ಇಲ್ಲ. ಅವನು ಊರಿನ ಸರ್‍ಕಲ್ಲಿನಲ್ಲಿ ಬೆಂಚಿನ ಮೇಲೆ ಕೂತಿರುತಿದ್ದ. ರೈಫಲ್ಲು ತೊಡೆಗಳ ನಡುವೆ ಒರಗಿಸಿ ಇಟ್ಟುಕೊಂಡಿರುತಿದ್ದ. ನಮ್ಮೆಲ್ಲಾರನ್ನೂ ದ್ವೇಷದಿಂದ ನೋಡುತ್ತಾ ಇದ್ದ. ಯಾರ ಜೊತೆಗೂ ಮಾತಾಡತಾ ಇರಲಿಲ್ಲ. ಯಾರಾದರೂ ಅವನ ಮುಖಕ್ಕೆ ಮುಖ ಕೊಟ್ಟು ನೋಡಿದರೆ ಅವರು ಪರಿಚಯವೇ ಇಲ್ಲವೇನೋ ಅನ್ನುವ ಹಾಗೆ ಆಡತಾ ಇದ್ದ.

ಆವಾಗಲೇ ಅವನು ಭಾವಮೈದುನನ್ನ ಕೊಂದಿದ್ದು. ಅದೇ, ಮ್ಯಾಂಡಲಿನ್ ಬಾರಿಸುತ್ತ ಅಪಸ್ವರದಲ್ಲಿ ಹಾಡತಾ ಇದ್ದನಲ್ಲ ಅವನನ್ನ. ಆಗಲೇ ರಾತ್ರಿಯಾಗಿತ್ತು, ಎಂಟು ಗಂಟೆ ಸುಮಾರು. ನಾಚಿಟೋಗೆ ಅವನ ಹತ್ತಿರ ಹೋಗಿ ಶೃಂಗಾರ ಗೀತೆ ಹಾಡಬೇಕು ಅನ್ನಿಸಿತು. ಚರ್‍ಚಿನಲ್ಲಿ ಇನ್ನೂ ಹಾಡು ಹೇಳುತ್ತಾ ಇದ್ದರು. ಚರ್‍ಚಿನ ಒಳಗೆ ಪ್ರಾರ್‍ಥನೆ ಮಾಡುತಿದ್ದವರು ಹೊರಗೆ ಓಡಿ ಬಂದರು. ನೋಡಿದರೆ ನಾಚಿಟೋ ಅಂಗಾತ ಬಿದಿದ್ದ, ಮ್ಯಾಂಡಲಿನ್ ಅಡ್ಡ ಹಿಡಿದು ಏಟು ತಪ್ಪಿಸಿಕೊಳ್ಳಲು ಹೆಣಗುತ್ತಿದ್ದ. ಅರ್‍ಬಾನೋ ರೈಫಲಿನ ಹಿಂಭಾಗದಿಂದ ಮತ್ತೆ ಮತ್ತೆ ಹೊಡೆಯುತ್ತಲೇ ಇದ್ದ. ಜನದ ಕೂಗಾಟ ಕೂಡ ಅವನ ಕಿವಿಗೆ ಬೀಳಲಿಲ್ಲ. ಹುಚ್ಚು ನಾಯಿಯ ಥರ ಆಡುತಿದ್ದ. ಕೊನೆಗೆ ಯಾರೋ, ನಮ್ಮೂರಿನವರೂ ಅಲ್ಲ, ಬಂದು ಅವನ ಕೈಯಲ್ಲಿದ್ದ ಬಂದೂಕುಕಿತ್ತುಕೊಂಡು ಒಂದೇಟು ಕೊಟ್ಟರು. ಅವನು ಎಚ್ಚರವಿಲ್ಲದೆ ಅಲ್ಲೇ ಬೆಂಚಿನ ಮೇಲೆ ಬಿದ್ದುಕೊಂಡ.

ರಾತ್ರಿಯೆಲ್ಲ ಅಲ್ಲೇ ಬಿದ್ದಿದ್ದ. ಬೆಳಗಾದಾಗ ಎದ್ದು ಹೋದ. ಮೊದಲು ಚರ್‍ಚಿಗೆ ಹೋದ, ಪಾದ್ರಿಯ ಆಶೀರ್‍ವಾದ ಕೇಳಿದ, ಪಾದ್ರಿ ಹರಸಲಿಲ್ಲ ಅನ್ನುತ್ತಾರೆ.

ನಡೆದು ಸುಸ್ತಾಗಿ, ಕುಂಟುತ್ತ ಹೋಗಿ ಮರದ ಕೆಳಗೆ ಸ್ವಲ್ಪ ಹೊತ್ತು ಕೂತಿದ್ದಾಗ ಅವರು ಬಂದು ಅವನನ್ನು ಹಿಡಿದರು. ಅವನು ಒಂದಿಷ್ಟೂ ವಿರೋಧಮಾಡಲಿಲ್ಲ. ತನ್ನ ಕೊರಳ ಸುತ್ತ ಸ್ವತಃ ತಾನೇ ಹಗ್ಗ ಹಾಕಿಕೊಂಡ, ಯಾವ ಮರಕ್ಕೆ ತನ್ನನ್ನು ನೇಣು ಹಾಕಬೇಕು ಅಂತ ಕೂಡ ಅವನೇ ತೋರಿಸಿದ ಅನ್ನುತ್ತಾರೆ.

ನಿಮಗೂ ಅವನು ಚೆನ್ನಾಗಿ ಗೊತ್ತಿರಬಹುದು. ಯಾಕೆ ಅಂದರೆ ನಾವೆಲ್ಲ ಸ್ಕೂಲಿನಲ್ಲಿ ಒಟ್ಟಿಗೆ ಓದಿದವರು. ನನ್ನಷ್ಟೇ ಚೆನ್ನಾಗಿ ಅವನು ನಿಮಗೂ ಗೊತ್ತು.
*****
ಸ್ಪಾನಿಷ್ ಮೂಲ: ಹ್ವಾನ್ ರುಲ್ಫೋ Juan Rulfo
ಕಥೆ ಹೆಸರು : Acuérdate / Remember

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇತ್ಯಾದಿ ಏನಿಲ್ಲ… ಪ್ರೀತಿಯಷ್ಟೆ! – ೧೪೬
Next post ಕಾದಿದೆ ಬಹುಮಾನ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಗಿಣಿಯ ಸಾಕ್ಷಿ

    ಹತ್ತಿರವಿದ್ದ ನೆರೆಹೊರೆಯ ಮನೆಯವರಿಗೆ ಗಿಣಿಯ ಕೀರಲು ಕಿರುಚಾಟ ಕೂಗಾಟ ಸತತವಾಗಿ ಕೇಳಿಬಂದಾಗ ಅವರು ಅಲ್ಲಿಗೆ ಧಾವಿಸಿ ಬಂದಿದ್ದರು. ಗೌರಿಯು ಕಳೇಬರವಾಗಿ ಬಿದ್ದಿರುವುದು ನೋಡಿ ಅವರಿಗೆ ದಿಗ್ಭ್ರಾಂತಿಯಾಯಿತು. ಅವಳ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…