ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು
ಬಂದವನ ಘನಕಾವ್ಯ ಹಾರಿಸಿದ ಹೆಮ್ಮೆಯ
ತುಂಬು ಹಾಯಿಯೆ ನನ್ನ ಭಾವಗಳ ಹೂಳಿದ್ದು
ಹೊತ್ತ ಬಸಿರೊಳೆ ಅದಕೆ ಗೋರಿಯನು ಕಟ್ಟಿದ್ದು ?
ಇರುಳ ಶಕ್ತಿಗಳ ನೆರವಿಂದ ಮರ್ತ್ಯರ ಮೀರಿ
ಬರೆಯಬಲ್ಲವನ ಸತ್ವವೆ ನನ್ನಮೆಟ್ಟಿದ್ದು ?
ಅಲ್ಲ ಖಂಡಿತ ಅಲ್ಲ ನನ್ನ ಕವಿತೆಯ ದಾರಿ
ಅವನಲ್ಲ, ಇರುಳ ಕೆಳೆಯೂ ಅಲ್ಲ ಮುಚ್ಚಿದ್ದು.
ನನ್ನ ಮೌನ ತಮ್ಮ ಗೆಲುವು ಎನ್ನುವ ಕೂಗು
ಸಲ್ಲದ್ದು ಅವನಿಗೂ, ರಾತ್ರಿ ಪ್ರೇರಣೆ ನೀಡಿ
ಮಂಕು ಚೆಲ್ಲುವ ಅವನ ನಗುಮೊಗದ ಮರುಳಿಗೂ,
ನಾನಾಗಲಿಲ್ಲ ಅವರೆದುರು ಎಂದೂ ಹೇಡಿ.
ನಿನ್ನ ಸಿರಿಮೊಗ ಅವನ ಕವಿತೆಯನು ತುಂಬಿತು
ಉಳಿಯಿತೇನೆನಗೆ, ಆಗೆನ್ನ ಎದೆ ಕುಂದಿತು.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 86
Was it the proud full sail of his great verse