ರಾವಣಾಂತರಂಗ – ೧೩

ರಾವಣಾಂತರಂಗ – ೧೩

ವಾಲಿಯ ವದೆ

ಪೂರ್ವದಲ್ಲಿ ಮಹಿಷಾಸುರನೆಂಬ ರಾಕ್ಷಸನಿದ್ದನು. ಅವನ ತಮ್ಮನ ಹೆಸರು ದುಂದುಬಿ, ದುಂದುಬಿಗೆ ಮಾಯಾವಿಯೆಂಬ ಮಗನಿದ್ದನು. ಒಂದು ಸಲ ಅವನು ಯಕ್ಷನ ಮಗಳನ್ನು ಎಳೆದೊಯ್ಯುತ್ತಿರುವಾಗ ಅವಳ ದುಃಖದ ಆಕ್ರೋಶವನ್ನು ಕೇಳಿ ವಾಲಿಯು ಅವಳನ್ನು ಬಿಡಿಸಬೇಕೆಂದು ಯುದ್ಧ ಮಾಡಿದನು. ವಾಲಿಯ ಪರಾಕ್ರಮದೆದುರು ಮಾಯಾವಿಯ ಆಟ ನಡೆಯಲಿಲ್ಲ. ಸೋತು ಒಂದು ಗವಿಯನ್ನು ಸೇರಿದನು. ವಾಲಿಯು ಬೆನ್ನು ಹತ್ತಿ ಗವಿಯನ್ನು ಹೊಕ್ಕನು. ಹದಿನೈದು ವರ್ಷಗಳವರೆಗೆ ಒಂದೇ ಸಮನೆ ಯುದ್ಧಸಾಗಿತು. ಗವಿಯೊಳಗೆ ಹೋಗುವಾಗ ವಾಲಿಯು ಸುಗ್ರೀವನನ್ನು ಕರೆದು “ನಾನು ಬರುವವರೆಗೂ ಈ ಗವಿ ಬಾಗಿಲಲ್ಲೇ ಕಾದಿರು” ಎಂದು ಹೇಳಿ ಹೋಗಿದ್ದನು. ಅದರಂತೆ ಸುಗ್ರೀವನು ಕಾದಿದ್ದನು. ಒಂದು ದಿನ ಗವಿಯೊಳಗಿಂದ “ಹಾ ! ಸತ್ತೆ! ಕಾಪಾಡಿ ಎನ್ನುವ ಆರ್ತನಾದ ಕೇಳಿ ವಾಲಿಯೇ ಸತ್ತಿರಬೇಕೆಂದು ಹೆದರಿ ಗವಿಯ ಬಾಗಿಲಿಗೆ ದೊಡ್ಡ ಬಂಡೆಯನ್ನಿರಿಸಿ, ಕಿಂಧೆಗೆ ಬಂದು ರಾಜನಾಗಿ ಪಟ್ಟದ ಮೇಲೆ ಕುಳಿತನು. ವಾಲಿಯ ಕೈಯಿಂದ ಮರಣ ಹೊಂದುವಾಗ ಮಾಯಾವಿಯೇ ಹಾಗೆ ಕೂಗಿದ್ದನು. ವಾಲಿಯು ಮಾಯಾವಿಯನ್ನು ಕೊಂದು ಗವಿಯ ಬಾಗಿಲಿಗಿಕ್ಕಿದ ಕಲ್ಲನೊದೆದು ಕಿಂಧೆಗೆ ಬಂದು ಸುಗ್ರೀವನು ಅರಸನಾಗಿ ಮೆರೆಯುತ್ತಿದ್ದುದನ್ನು ಕಂಡು ಕ್ರೋಧದಿಂದ ಸುಗ್ರೀವನನ್ನು ಕೊಲ್ಲಲು ಬಂದನು. ಯಾರು ಹೇಳಿದರೂ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಅವನ ಕ್ರೋಧಕ್ಕೆ ಹೆದರಿ ಸುಗ್ರೀವ ಕಾಡಿನಲ್ಲಿ ತಲೆಮರೆಸಿ ಕೊಂಡನು. ಅಷ್ಟೇ ಅಲ್ಲದೆ ತಮ್ಮ ಸುಗ್ರೀವನ ಹೆಂಡತಿಯಾದ ತಾರೆಯನ್ನು ಅಪಹರಿಸಿ ಮದುವೆಯಾದನು. ಸುಗ್ರೀವನು ವಾಲಿಯ ಭಯಕ್ಕೆ ಋಷ್ಯಮೂಕ ಪರ್ವತದಲ್ಲಿ ನೆಲೆಸಿದ್ದನು. ವಾಲಿ ಅಲ್ಲಿಗೆ ಬರುವ ಸಾಧ್ಯತೆಯಿರಲಿಲ್ಲ. ಅದಕ್ಕೊಂದು ಕಥೆಯಿದೆ. ತನ್ನ ಮಗನನ್ನು ಕೊಂದ ವಾಲಿಯನ್ನು ದುಂದುಬಿ ಎದುರಿಸಿ ಯುದ್ಧಕ್ಕೆ ನಿಲ್ಲಲು ವಾಲಿಯು ದುಂದುಬಿಯನ್ನು ಕೊಂದು ಹಾಕಿ ಅವನ ಶವವನ್ನು ಎಡಗಾಲಿನಿಂದೊದೆಯಲು ಅದು ಋಷ್ಯಮೂಕ ಪರ್ವತದ ಹತ್ತಿರ ಬಿತ್ತು. ಅಲ್ಲಿ ಈಶ್ವರ ಸಮಾನರಾದ ಮತಂಗ ಮುನಿಗಳು ತಪಸ್ಸು ಮಾಡುತ್ತಿದ್ದರು. ದುಂದುಬಿಯ ಶವವನ್ನು ರಕ್ತಸ್ರಾವವನ್ನು ಕಂಡು ಕೆಂಡಾಮಂಡಲವಾಗಿ ಈ ಕಾರ್‍ಯ ಮಾಡಿದವನು ಇಲ್ಲಿಗೆ ಬಂದರೆ ಅವನ ತಲೆಯೊಡೆದು ಅವನಿಗೆ ಮರಣವುಂಟಾಗಲಿ ಎಂದು ಶಾಪಕೊಟ್ಟನು. ಈ ಸುದ್ದಿ ಕೇಳಿದ ವಾಲಿ ಭಯದಿಂದ ಅಲ್ಲಿಗೆ ಹೋಗಲಿಲ್ಲ. ಇದರಿಂದಾಗಿ ಸುಗ್ರೀವನು ಅವನ ಅನುಚರರಾದ ನಳ, ನೀಲ, ಜಾಂಬವಂತ ಹನುಮಂತಾದಿ ಗಳೊಡನೆ ಕ್ಷೇಮವಾಗಿದ್ದನು. ಸೀತೆಯನ್ನು ಕಳೆದುಕೊಂಡು ಅಲೆದಾಡುತ್ತಿದ್ದ ರಾಮಲಕ್ಷ್ಮಣರ ಸ್ನೇಹವನ್ನು ಪಡೆದರು. ಸೀತಾನ್ವೇಷಣ ಕಾರ್ಯದಲ್ಲಿ ತಾನು ನೆರವಾಗುವೆನೆಂದು ತನ್ನ ದೂತರ ಮುಖಾಂತರ ಸೀತೆಯನ್ನು ಹುಡುಕಿಸಿಕೊಡುವುದಾಗಿ ಮಾತು ಕೊಟ್ಟನು. ರಾಮಲಕ್ಷ್ಮಣರನ್ನು ಯೋಗ್ಯ ರೀತಿಯಿಂದ ಉಪಚರಿಸಿ ಅವರ ಸೇವೆಗಾಗಿ ಹನುಮಂತನನ್ನು ನೇಮಿಸಿದನು. ಅದಕ್ಕೆ ಬದಲಾಗಿ ವಾಲಿಯನ್ನು ಕೊಂದು ಕಿಷ್ಕಂದಾರಾಜ್ಯವನ್ನು ತನ್ನ ಸತಿಯಾದ ತಾರಾದೇವಿಯನ್ನು ಪಡೆಯಲು ಸಹಾಯಮಾಡಬೇಕೆಂದು ಕೇಳಿಕೊಂಡನು. ಶ್ರೀರಾಮನು ಅದಕ್ಕೆ ಒಪ್ಪಿ ಸ್ನೇಹ ಹಸ್ತ ಚಾಚಿದನು. ಅಷ್ಟರಲ್ಲಿ ಹನುಮಂತನು ಬಂದು, ಆಕಾಶ ಮಾರ್ಗದಲ್ಲಿ ರಾವಣಾಸುರನು ದೇವಿಯನ್ನು ಒಯ್ಯುವ ಕಾಲದಲ್ಲಿ “ನನ್ನ ಪತಿಯಾದ ರಾಘವನು ಹುಡುಕುತ್ತಾ ನಿಮ್ಮಲ್ಲಿಗೆ ಬಂದರೆ ಈ ಆಭರಣಗಳನ್ನು ಕೊಡಿರೆಂದು “ನಮ್ಮತ್ತ ಚೆಲ್ಲಿದರು. ಇವು ಸೀತಾಮಾತೆಯ ಒಡವೆಗಳಿರಬಹುದು ನೋಡಿ” ಎಂದು ರಾಮಲಕ್ಷ್ಮಣರ ಮುಂದೆ ಇರಿಸಿದನು. ಆಗ ಲಕ್ಷ್ಮಣನು “ಕಿವಿ ಹಣೆ, ಕಂಠದ ಆಭರಣಗಳು ನನಗೆ ತಿಳಿಯದು. ಆದರೆ ಈ ನೂಪುರಗಳು, ಕಾಲುಂಗುರಗಳು ಮಾತ್ರ ಅತ್ತಿಗೆಯದು ಎನ್ನಲು” ತಮ್ಮನೇ ಇದೇನು ಜಾನಕಿಯ ಒಡವೆಗಳನ್ನು ಮರೆತುಬಿಟ್ಟೆಯಲ್ಲ ಎನ್ನಲು “ಅಣ್ಣಾ ಅತ್ತಿಗೆ ಸೀತಾಮಾತೆಯನ್ನು ನಿತ್ಯ ನಮಸ್ಕರಿಸುವಾಗ ನೋಡುತ್ತಿದ್ದೆನಾದ್ದರಿಂದ ಇವು ನನಗೆ ಗುರುತಿವೆ” ಎಂದು ವಿನಂತಿಸಿದಾಗ ಅಲ್ಲಿದ್ದವರು ಲಕ್ಷ್ಮಣನ ಮಾತೃಭಕ್ತಿಗೆ ಮನದಣಿಯೆ ಹೊಗಳಿದರು.

ಮುಂದೊಂದು ದಿನ ಶ್ರೀರಾಮನು “ಸುಗ್ರೀವನೇ ನೀನು ಹೋಗಿ ನಿನ್ನ ಅಣ್ಣನಾದ ವಾಲಿಯನ್ನು ಯುದ್ಧಕ್ಕೆ ಕರೆ ಅವನನ್ನು ಕೊಲ್ಲುವ ಜವಾಬ್ದಾರಿ ನನಗಿರಲಿ ಹೆದರಬೇಡ” ಎಂದು ಆಶ್ವಾಸನೆಯನ್ನಿತ್ತನು. ಸುಗ್ರೀವನು ಅಣ್ಣನಾದ ವಾಲಿಯನ್ನು ಕೊಲ್ಲಿಸಿ ತಾನು ಕಿಷ್ಕಿಂದೆಯ ಅರಸನಾಗಬೇಕೆಂದು ಕಪಿಸೈನ್ಯವನ್ನು ಕೂಡಿಸಿ ಒಂದು ಮುಂಜಾನೆ ಕಿಷ್ಕಂಧೆಯನ್ನು ಮುತ್ತಿದನು. ತಮ್ಮನು ತನ್ನ ಮೇಲೆ ಯುದ್ಧಕ್ಕೆ ಬಂದಿರುವನೆಂದು ತಿಳಿದು ವಾಲಿಯು ಪ್ರಳಯ ರುದ್ರನಾಗಿ ಎದುರು ಬಂದನು. ಒಂದು ಹೆಣ್ಣಿನ ಕಾರಣಕ್ಕಾಗಿ ಇಬ್ಬರ ಮನಸ್ಸಿನಲ್ಲಿ ವೈರವು ಮನೆ ಮಾಡಿತ್ತು. ನಾ ಹೆಚ್ಚು ನಾ ಹೆಚ್ಚೆಂದು ದ್ವೇಷದಿಂದ ಕಾದಾಡಿದರು. ಉಭಯತರರ ಯುದ್ಧದ ಆರ್ಭಟಕ್ಕೆ ಮೂರು ಲೋಕಗಳು ಗಡಗಡ ನಡುಗಿದವು. ರಾಮಲಕ್ಷ್ಮಣರೂ ತಲೆದೂಗಿದರು. ವಾಲಿಯು ಸುಗ್ರೀವನಿಗಿಂತಲೂ ಬಲಿಷ್ಠನಾಗಿದ್ದನು. ವಾಲಿಯ ಕೈಯೇ ಮೇಲಾಗುತ್ತಿತ್ತು. ಮರದ ಮರೆಯಲ್ಲಿ ಇಬ್ಬರ ಸಮರವನ್ನು ನೋಡುತ್ತಿದ್ದ ರಾಮಚಂದ್ರನಿಗೆ ರೂಪದಲ್ಲಿಯೂ ಶಬ್ದದಲ್ಲಿಯೂ ಆಕಾರದಲ್ಲಿಯೂ ವ್ಯತ್ಯಾಸ ತಿಳಿಯದೇ ಬಾಣ ಪ್ರಯೋಗ ಮಾಡುವುದಕ್ಕಾಗದೆ ಸುಮ್ಮನಾದನು. ಸುಗ್ರೀವನು ಶಕ್ತಿಹೀನವಾಗಿ ಕೆಳಗೆ ಬಿದ್ದನು. ವಾಲಿಯು ಸುಗ್ರೀವನನ್ನು ಕಾಲಿನಿಂದೊದೆಯಲು ಒಂದೇ ಒದೆತಕ್ಕೆ ತತ್ತರಿಸಿ ಸುಗ್ರೀವನು ಹಾರಿ ಹೋಗಿ ಋಷ್ಯಮೂಕ ಪರ್ವತದಲ್ಲಿ ಬಿದ್ದನು. ವಾಲಿಯು ಜಯಶಾಲಿಯಾಗಿ ಮನೆ ಸೇರಿದನು. ಸುಗ್ರೀವನ ಶರೀರವೆಲ್ಲಾ ಜರ್ಜರಿತವಾಗಿ ಮೈಯೆಲ್ಲಾ ಹುಣಸೇ ಹಣ್ಣಾಗಿತ್ತು. ನೋವಿನಿಂದ ನರಳುತ್ತಾ “ಶ್ರೀರಾಮ ಪ್ರಾಣಸಖನೆಂದು ನಿನ್ನನ್ನು ನಂಬಿದ್ದಕ್ಕೆ ಹೀಗೆ ಮಾಡಬಹುದೇ. ವಾಲಿಯನ್ನು ಎದಿರುನಿಂತು ಗೆಲ್ಲಲು ತ್ರಿಮೂರ್ತಿಗಳಿಂದಲೂ ಸಾಧ್ಯವಿಲ್ಲ. ಅಂದ ಬಳಿಕ ನನ್ನಂತಹವರ ಪಾಡೇನು? ಬಿಟ್ಟು ಬಿಡು ನನ್ನ ಹಣೆಯ ಬರಹವಿದ್ದಂತಾಗಲಿ” ಎಂದನು. “ನನ್ನಿಂದ ತಪ್ಪಾಯಿತು, ನನ್ನ ಪ್ರೀತಿಯ ತಮ್ಮನಾಣೆ, ನೀವಿಬ್ಬರೂ ಒಂದೇ ರೀತಿಯಾಗಿ ಕಂಡದ್ದರಿಂದ ಬಾಣ ನಿನಗೆಲ್ಲಿ ತಾಕಿ ಪ್ರಿಯ ಮಿತ್ರನನ್ನು ಕಳೆದುಕೊಳ್ಳುತ್ತೇನೋ ಎಂಬ ಆತಂಕದಿಂದ ಹಾಗೆ ಮಾಡಿದೆ. ಸುಗ್ರೀವನೇ ನನ್ನ ತಾಯಿ ಕೌಸಲ್ಯೆಯ ಮೇಲಾಣೆ, ನಾಳೆ ದಿನ ವಾಲಿಯನ್ನು ಕೊಲ್ಲುತ್ತೇನೆ. ನೀನು ಯುದ್ಧ ಮಾಡುವಾಗ ಪುಷ್ಪ ಮಾಲಿಕೆಯನ್ನು ಹಾಕಿಕೊಂಡು ಹೋಗ ಈ ಸಲ ವಾಲಿಯ ಪ್ರಾಣವನ್ನು ತೆಗೆಯುವೆನು ನನ್ನ ಮಾತನ್ನು ನಂಬು” ರಾಮನ ಆಶ್ವಾಸನೆಗೆ ಮಣಿದ ಸುಗ್ರೀವನು ಧೈರ್ಯದಿಂದ ಮತ್ತೆ ಸಕಲ ಸೈನ್ಯ ಸಮೇತನಾಗಿ ಕಿಷ್ಕಂಧೆಯನ್ನು ಮುತ್ತಿದನು. ವಾಲಿಯು ಕೋಪ, ಆಶ್ಚರ್ಯದಿಂದ “ಇವನಿಗೇನಾಗಿದೆ. ನಿನ್ನೆ ತಾನೇ ಸೊಂಟ ಮುರಿಸಿಕೊಂಡು ಹೋದವನು ಮತ್ತೊಮ್ಮೆ ಯುದ್ಧಕ್ಕೆ ಬರಬೇಕೆಂದರೆ ಹೇಗೆ ಸಾಧ್ಯ? ಯಾರದೋ ಬೆಂಬಲ ಸಿಕ್ಕಿರಬೇಕು. ದಶರಥನ ಮಗನಾದ ರಾಮಚಂದ್ರನಿಗೂ ಸುಗ್ರೀವನಿಗೂ ಸ್ನೇಹವಾಗಿದೆಯಂತೆ, ಶ್ರೀರಾಮನ ಸತಿಯನ್ನು ದಶಮುಖನು ಅಪಹರಿಸಿರುವನಂತೆ ತಮ್ಮನ ಹೆಂಡತಿಯನ್ನು ನಾನು ಅಪಹರಿಸಿ, ವೈರತ್ವ ಬೆಳೆಸಿಕೊಂಡೇ ಶ್ರೀರಾಮನ ಬೆಂಬಲದಿಂದ ಸುಗ್ರೀವನು ಕಾಲು ಕೆರೆದುಕೊಂಡು ಯುದ್ಧಕ್ಕೆ ಬಂದಿದ್ದಾನೆ. ಹರಿಹರ ಬ್ರಹ್ಮಾದಿಗಳೂ ಯುದ್ಧಕ್ಕೆ ಬಂದರೆ ಹೆದರುವುದಿಲ್ಲ. ಈ ಸುಗ್ರೀವನ್ಯಾವ ಲೆಕ್ಕ ! ಎಂದು ತನ್ನನ್ನೇ ಸಮರ್ಥಿಸಿಕೊಂಡು ರಣರಂಗಕ್ಕೆ ಬಂದನು. ಇಬ್ಬರ ಯುದ್ಧ ಆರಂಭವಾಯಿತು. ಬ್ರಹ್ಮ ರುದ್ರ ದೇವಾನುದೇವತೆಗಳು ಸಮರವನ್ನು ವೀಕ್ಷಿಸಲು ಗಗನದಲ್ಲಿ ನಿಂತರು. ಇವರ ಕಾಲ್ತುಳಿತಕ್ಕೆ ಭೂಮಿ ಬಿರುಕುಬಿಟ್ಟಿತು. ಸಮುದ್ರ ಉಕ್ಕಿತು, ಆಕಾಶ ಭೂಮಿ ನಡುಗಿದವು. ಇಂದ್ರ ಹಾಗೂ ಸೂರ್ಯ ಪುತ್ರರ ಪರಾಕ್ರಮವನ್ನು ಹೇಗೆ ಬಣ್ಣಿಸುವುದು. ಬ್ರಹ್ಮಸೃಷ್ಠಿಯಲ್ಲಿ ಇವರಿಬ್ಬರಿಗೆ ಸಮಾನರಾದ ವೀರರೂ ಇರಲಿಕ್ಕಿಲ್ಲ. ವಿಜಯಲಕ್ಷ್ಮಿಯನ್ನು ವರಿಸಲು ಉಭಯವೀರರು ತಮ್ಮ ಶಕ್ತಿಪ್ರದರ್ಶನ ಮಾಡಿದರು. ಕೆಲವರು ವಾಲಿ ಗೆಲ್ಲುವನೆಂದು, ಇನ್ನು ಕೆಲವು ಸುಗ್ರೀವನೇ ಗೆಲ್ಲುವನೆಂದು ಪಂಥ ಕಟ್ಟುತ್ತಿದ್ದರು. ಎರಡು ಮುದ್ದಾನೆಗಳು ಕಾದಾಡಿದಂತೆ ಸೆಣಸಿದರು. ಇಬ್ಬರ ಶಕ್ತಿಯು ಕುಂದುತ್ತಾ ಬಂತು. ಸುಗ್ರೀವನು ಆರ್ತನಾಗಿ ರಾಮನತ್ತ ನೋಡಿದನು. ಶ್ರೀರಾಮನು ಧನಸ್ಸಿಗೆ ಬಾಣ ಹೂಡಿ ವಾಲಿಯ ಎದೆಗೆ ಗುರಿಯಿಟ್ಟು ಹೊಡೆದನು. ವಾಲಿಯು ನೆಲಕ್ಕೊರಗಿದ ಹೆಮ್ಮರದಂತೆ ಭೂಮಿಯ ಮೇಲೆ ಬಿದ್ದನು. “ತಪ್ಪು ಮಾಡಿದ ನನಗೆ ತಕ್ಕ ಶಾಸ್ತಿಯಾಯಿತು. ಪರಸ್ತ್ರೀಯನ್ನು ಅಪಹರಿಸಿದ ನನಗೆ ಜಯಶ್ರೀಯು ಅಸಹ್ಯಪಟ್ಟು ನನ್ನ ಬಿಟ್ಟು ಹೋದಳು” ಎಂದು ನೋವಿನಿಂದ ನರಳಿದನು. ಶ್ರೀರಾಮನು ಎದುರಿಗೆ ಬಂದು ನಿಂತಾಗ ಕಣ್ಣು ತೆರೆದು “ನೀನು ಯಾರು? ಏತಕ್ಕೆ ಬಂದಿರುವೆ? ಈ ರೀತಿಯ ಕಪಟ ವಿದ್ಯೆಯನ್ನು ಎಲ್ಲಿ ಕಲಿತೆ? ನಿನಗೆ ಕಲಿಸಿದ ಗುರು ಯಾರು? ಯಾವ ರೀತಿಯಿಂದಲೂ ನಾನು ನಿನಗೆ ಅನ್ಯಾಯಮಾಡಿಲ್ಲ. ಆದರೂ ನಿನಗೇಕೆ ನನ್ನ ಮೇಲೆ ಈ ದ್ವೇಷ, ಯಾವ ತಪ್ಪಿಗಾಗಿ ನನಗೀ ಶಿಕ್ಷೆ? ನೀನು ನನ್ನ ಸ್ನೇಹ ಮಾಡಿದ್ದರೆ ನಿನ್ನ ಭತ್ಯನಾಗಿ ಎಲ್ಲಾ ಕೆಲಸಗಳನ್ನು ಕ್ಷಣದಲ್ಲಿ ಮಾಡಿಕೊಡುತ್ತಿದ್ದೆ. ನನ್ನ ಸಂಗಡ ನೇರವಾಗಿ ಯುದ್ಧ ಮಾಡಬೇಕಿತ್ತು. ನಿನ್ನ ಶೌರ ಪರಾಕ್ರಮಗಳನ್ನು ನಾನು ನೋಡುತ್ತಿದ್ದೆ. ವೃಕ್ಷದ ಮರೆಯಲ್ಲಡಗಿ ಬಾಣ ಬಿಟ್ಟು ನನ್ನ ಕೊಂದೆಯಲ್ಲ, ವೀರರಿಗದು ಯೋಗ್ಯವೇ? ಸೂರ್ಯವಂಶದ ರಾಜರ ಕುಲಕ್ಕೆ ಮಸಿ ಬಳಿದೆ. ನೋಡಿದರೆ ಋಷಿಮುನಿಯಂತೆ ವೇಷ. ಆಕಾರವೇ ಬೇರೆ ಆಚಾರವೇ ಬೇರೆ, ರಾಮನೆಂಬ ಹೆಸರು ನಿನಗೆ ತಕ್ಕುದಲ್ಲ. ರಾವಣನು ನಿನ್ನ ವೈರಿಯೆಂದು ತಿಳಿಸಿದ್ದರೆ ನನ್ನ ಬಾಲವನ್ನು ಕಳಿಸಿ ಅವನನ್ನು ಎಳೆ ತಂದು ನಿನ್ನ ಮುಂದೆ ನಿಲ್ಲಿಸುತ್ತಿದ್ದೆ” ವಾಲಿಯ ಮರ್ಮ ಬೇಧಕಮಾತುಗಳನ್ನು ಕೇಳಿ ಶ್ರೀರಾಮನು ಕಿಂಚಿತ್ತು ವಿಚಲಿತನಾಗದೆ “ನಿನ್ನಂತಹ ಪಾತಕಿಗಳನ್ನು ಶಿಕ್ಷಿಸುವುದೇ ನನ್ನ ಕೆಲಸ, ಪರಸ್ತ್ರೀಯರನ್ನು ವರಿಸುವ ಮೊದಲು ನೀನು ವಿವೇಕ ತಾಳದೆ ನಮ್ಮ ಮೇಲೆ ಅನ್ಯಾಯ ಹೊರಿಸುತ್ತೀಯಲ್ಲ. ನೀನೆಷ್ಟೇ ಸಜ್ಜನನಾದರೂ ನಿನ್ನ ಶ್ರೇಷ್ಠಗುಣಗಳು ಪರಸತಿಯರತಿಯಿಂದ ನಾಶ ಹೊಂದುವುವು. ನೀನೆಷ್ಟೇ ಸತ್ಕಾರ್ಯ ಮಾಡಿದರೂ ವ್ಯರ್ಥ ರಾತ್ರಿಯಲ್ಲಿ ಕಳವು ಮಾಡುವುದು ಹಗಲು ಧರ್ಮಾಚರಣೆ ಮಾಡುವುದು ನ್ಯಾಯಸಮ್ಮತವಲ್ಲ. ಆದ್ದರಿಂದಲೇ ನೀನು ಶಿಕ್ಷೆಗೆ ಅರ್ಹನಾದೆ ಎನ್ನಲು ವಾಲಿಯು ರಾಮಲಕ್ಷ್ಮಣರನ್ನು ದಿಟ್ಟಿಸಿ ನೋಡಿದನು. “ಇವರು ಸಾಮಾನ್ಯ ಮಾನವರಲ್ಲಿ ಭೂಭಾರ ಇಳಿಸಲು, ದುಷ್ಟರಶಿಕ್ಷೆ, ಶಿಷ್ಟರರಕ್ಷಣೆಗಾಗಿ ಅವತಾರವೆತ್ತಿರುವ ನಾರಾಯಣ ಮತ್ತು ಆದಿಶೇಷರ ಅವತಾರವೆಂದು ಶ್ರೀರಾಮನ ಮಂಗಳ ಮೂರ್ತಿಯನ್ನು ಕಣ್ಣು ತುಂಬಾ ನೋಡಿ ಪರಮಾನಂದದಿಂದ “ಇಹಕ್ಕೂ ಪರಕ್ಕೂ ಸಲ್ಲದ ದುರಾಚಾರಿ, ದುರಾಗ್ರಹ, ನೀಚಕರ್ಮಚಾರಿಯಾದ ನನ್ನ ತಪ್ಪನ್ನು ಕ್ಷಮಿಸಿ ಮುಕ್ತಿನ್ನು ಕರುಣಿಸು” ಎಂದು ಬೇಡಿಕೊಂಡನು. ಸುಗ್ರೀವನನ್ನು ಕರೆದು “ತಮ್ಮನೇ ಇಲ್ಲಿ ಬಾ ನಿನ್ನ ಮೇಲೆ ನನಗೀಗ ದ್ವೇಷವಿಲ್ಲ. ಈ ಪರಬ್ರಹ್ಮ ಸ್ವರೂಪನಾದ ಪರಮಾತ್ಮನೆದುರು ನನ್ನ ದ್ವೇಷ, ಅಹಂಕಾರ ಬಿಟ್ಟು ಹೋಯಿತು. ಶ್ರೀರಾಮಚಂದ್ರನ ಸೇವೆಗಾಗಿ ನಿನ್ನ ದೇಹವನ್ನು ಸವೆಸು, ನನ್ನ ಮಗ ಅಂಗದನನ್ನು ಪ್ರೇಮದಿಂದ ಕಾಪಾಡು, ಅವನೀಗ ನಿನ್ನ ಮಗನು ಅಂಗದನನ್ನು ಅಪ್ಪಿಕೊಂಡು “ರಘೋತ್ತಮನ ಪಾದ ಸೇವಕನಾಗು ಸುಗ್ರೀವನು ಹೇಳಿದಂತೆ ಕೇಳು” ಎಂದು ತನ್ನ ಕೊರಳಲ್ಲಿದ್ದ ರತ್ನ ಮಾಲಿಕೆಯನ್ನು ಅಂಗದದ ಕೊರಳಿಗೆ ಹಾಕಿ ಆಶೀರ್ವದಿಸಿ, ದೈನ್ಯದಿಂದ ಶ್ರೀರಾಮನ ಪಾದಗಳನ್ನು ಸ್ಪರ್ಶಿಸಿ “ದೇವಾದಿದೇವ ಈ ಅಂಗದನು ಸಣ್ಣ ಬಾಲಕನು. ಸುಗ್ರೀವನು ಅಲಕ್ಷಿಸಿದರೆ ಇವನನ್ನು ಅಯೋದ್ಯೆಗೆ ಕರೆದೊಯ್ದು ಪಾಲಿಸು, ನಿನ್ನನ್ನೇ ನಂಬಿ ಪ್ರಾಣ ಬಿಡುತ್ತಿದ್ದೇನೆ. ನನ್ನ ಮೊರೆಯನ್ನು ಆಲಿಸು. ನನ್ನ ಕೊನೆಯ ಕೋರಿಕೆಯನ್ನು ನೆರವೇರಿಸು” ಎಂದು ಕಣ್ಣುಗಳನ್ನು ಮುಚ್ಚಲು ಶ್ರೀರಾಮನು ಎದೆಯಲ್ಲಿ ನೆಟ್ಟಿದ್ದ ಬಾಣವನ್ನು ಇರಿದು ತೆಗೆದನು. ವಾಲಿಯು ನೆಮ್ಮದಿಯಿಂದ ಶ್ರೀರಾಮನ ತೊಡೆಗಳ ಮೇಲೆ ಪ್ರಾಣವನ್ನು ಬಿಟ್ಟನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯ ಕಾಮ
Next post ಬಲು ದೊಡ್ಡ ಬಹುಮಾನ ನೀನು, ಅದಕ್ಕೆ ಎದ್ದು

ಸಣ್ಣ ಕತೆ

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಯಾರು ಹೊಣೆ?

    "ಧಡ್....... ಧಡಲ್........ ಧಡಕ್" ಗಾಡಿ ನಿಂತಿತು. ಹೊರಗೆ ಮೋರೆಹಾಕಿ ನೋಡಿದೆ. ಕತ್ತಲು ಕವಿದಿತ್ತು. ಚುಕ್ಕೆಗಳು ಪಕಪಕ ಕಣ್ಣು ಬಿಡುತ್ತಿದ್ದವು. ಮೂಡಲ ಗಾಳಿ "ಸಿಳ್" ಎಂದು ಬೀಸುತ್ತಿತ್ತು. ನಾನು… Read more…

  • ಬಲಿ

    ಅವಳು ಭಾಗಶಃ ಚಟ್ಟೆಯಾದ ಕಪ್ಪು ಬಣ್ಣಕ್ಕೆ ತಿರುಗಿದ ಅಲ್ಯೂಮೀನಿಯಂ ತಟ್ಟೆಯೊಳಗೆ ಸ್ವಲ್ಪ ಹಾಲು ಸುರಿದು ಅದಕ್ಕೆ ಸ್ವಲ್ಪ ನೀರನ್ನು ಬೆರೆಸಿ, ಒಲೆಯ ಮೇಲಿಟ್ಟು ಮುಚ್ಚಳ ಮುಚ್ಚಿದಳು. ಒಲೆಯ… Read more…

  • ಬ್ರಿಟನ್ ದಂಪತಿಗಳ ಪ್ರೇಮ ದಾಖಲೆ

    ಫ್ರಾಂಕ್ ಆಗ ಇನ್ನು ಹದಿನಾಲ್ಕು ವರ್ಷದ ಹುಡುಗ ತೆಳ್ಳಗೆ ಬೆಳ್ಳಗೆ ಇದ್ದು, ಕರಿಯ ಬಣ್ಣದ ದಟ್ಟ ಕೂದಲಿನ ಬ್ರಿಟಿಷ್ ಬಾಲಕ. ಹೈಸ್ಕೂಲಿನಲ್ಲಿ ಓದುತ್ತಿದ್ದ ಫ್ರಾಂಕ್‌ಗೆ ಕಾಲ್ಚೆಂಡು ಆಟ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys