ಕನ್ನಡಾಂಬೆ ಎಲ್ಲಿರುವಳೊ ಅಣ್ಣ
ಕರ್ನಾಟಕದಲ್ಲಿ
ದಿಕ್ಕು ದಿಕ್ಕಲೂ ಹುಡುಕಿದರಲ್ಲ
ಕಾಣೆಯಾದಳೆಲ್ಲಿ?

ಬೆಂಗಳೂರಲಿ ಸುತ್ತಿ ನೋಡಿದೆ
ಕಡತಗಳಲ್ಲಿ ಕಣ್ಣಾಡಿಸಿದೆ
ವಿಧಾನಸೌಧ ಮೆಟ್ಟಿಲೇರಿದೆ
ಎಲ್ಲು ಕಾಣಲಿಲ್ಲ.

ನಾಡಗೌಡ ಆ ಕೆಂಪೇಗೌಡ
ಅವನ ಕೂಡ ನಾ ತೋಡಿದೆ ದುಗುಡ
ಕನ್ನಡಾಂಬೆ ಎಲ್ಲಿ? ನನ್
ಕನ್ನಡಾಂಬೆ ಎಲ್ಲಿ??

ಕಲ್ಲು ಮೂರ್ತಿ ಮಾತಾಡಿದನಲ್ಲಿ
ಖಡ್ಗ ಹಿಡಿದ ಕೈ ಕೆಳಕ್ಕೆ ಚೆಲ್ಲಿ
ಕಂಪನಿಯನು ಚೆಲ್ಲಿ!

“ಕನ್ನಡಾಂಬೆ ಎಲ್ಲಿರುವಳೊ ಇಲ್ಲಿ
ನಿನ್ನ ಹಾಗೆ ನಾನ್ ತಬ್ಬಲಿ ಇಲ್ಲಿ”
ತೆರಳು ತೆರಳು ಹುಚ್ಚ!
ನೋಡಿ ನನ್ನ, ಹುಚ್ಚ!

ಬೆಳಗಾವಿಯಲ್ಲಿ ಕನ್ನಡ ಇಲ್ಲ
ಬಳ್ಳಾರಿಯಲಿ ತೆಲುಗೇ ಎಲ್ಲ
ಕೊಡಗಿನಲಿ ಮಲಯಾಳಿ ಸೊಲ್ಲ…
ತಲೆಗೇರಿತು ಅಮಲು!

ಇಲ್ಲಿಲ್ಲದ ಕನ್ನಡತಿಯ ಅರಸಿ
ಪರನಾಡಿಗೆ ನಾ ಪಯಣವ ಬೆಳೆಸಿ
ಹುಡುಕಿದೆ ಎಲ್ಲೆಲ್ಲೂ!

ಆಂಧ್ರದಲೆಲ್ಲಾ ತೆಲುಗು ತಾಯೆ
ದ್ರಾವಿಡ ದೇಶದಿ ತಮಿಳಿನ ಮಾಯೆ
ಆಯಾ ನಾಡಲಿ ಆ ತಾಯ್ ವೈಭವ…
ಸೋಲುಂಡಿತು ಜೀವ!

ಅಲ್ಲೂ ಇಲ್ಲ ಇಲ್ಲೂ ಇಲ್ಲ
ಕನ್ನಡಾಂಬೆ ಎಲ್ಲೆಲ್ಲೂ ಇಲ್ಲ

ಅವಳ ಸುಳಿವನು ಕೊಟ್ಟಂತವರಿಗೆ
ಕಾದಿದೆ ಬಹುಮಾನ! ನನ್
ಎದೆಯಲಿ ಸನ್ಮಾನ!
*****