ಸಿಗ್ನೋರಿನಾ ಪಿಯಾ ಟೊಲೋಸಾನಿ ಕಾದಂಬರಿಗಳಲ್ಲಿ ಅಚ್ಚಾದ ಪಾತ್ರಗಳನ್ನು ತನ್ನ ಸ್ವಂತದ ಬದುಕಿನ ಖಾಲಿಪುಟಗಳೊಂದಿಗೆ ಹೋಲಿಸಿಕೊಳ್ಳುತ್ತಿದ್ದಾಳೆ ಅಥವಾ ವಿಪರೀತ ಓದುವ ಹವ್ಯಾಸ ಇರುವವರಲ್ಲಿ ಹುಟ್ಟಿ ಕೊಳ್ಳುವ ಖಿನ್ನತೆಯಿಂದ ಬಳಲುತ್ತಿದ್ದಾಳೆ ಎಂದು ಅವಳ ಅನೇಕ ಗೆಳಯರಿಗೆ-ಅದರಲ್ಲೂ ಪಾಮೊಲೋ ಬಾಲ್ಡಿಯಾಗೆ-ಅನಿಸಿತು. ಆದರೆ ಜಾರ್ಜಿಯೋ ಡೌಲಾ ಎಂಬ ಮತ್ತೊಬ್ಬ ಗೆಳೆಯನಿಗೆ ಮಾತ್ರ ಯಾಕೋ ಇದು ಅವಳ ಸಹಜ ಬದುಕನ್ನು ಹಾಳು ಮಾಡುವಷ್ಟರ ಮಟ್ಟದ್ದಲ್ಲ ಎಂದನಿಸಿತ್ತು. ಅಲ್ಲದೆ, ದೂರದೃಷ್ಟಿತ್ವವಿರುವ ಹುಡುಗಿಯಲ್ಲಿ ಇಂಥ ಖಿನ್ನತೆ ಕ್ಷಮಾರ್ಹವೆ! ಯಾಕೆಂದರೆ, ಮದುವೆಗೆ ಡೌರಿ ಹಣವಿಲ್ಲದೆ, ಆಗಲೇ ಇಪ್ಪತ್ತಾರು ವರ್ಷವಾಗಿರುವ ಇವಳಿಗೆ ವಯಸ್ಸಾದ ತಂದೆ-ತಾಯಿಗಳಿದ್ದರು. ವಕೀಲ ಫಿಲಿಪ್ಪೋ ವೆನ್ಜಿ ಕೂಡ ಇದೇ ಒಂದು ಕಾರಣದಿಂದ ಅವಳ ಬಗ್ಗೆ ಕ್ಷಮಾಭಾವನೆ ತಾಳಿದ್ದ.

ಈ ಟೊಲೋಸಾನಿ ಕುಟುಂಬಕ್ಕೆ ಭೆಟ್ಟಿ ನೀಡುತ್ತಿದ್ದ ಯಾವ ಯುವಕನೂ ಪಿಯಾಳ ಕೈ ಹಿಡಿಯುವ ಧೈರ್ಯವನ್ನು ಮಾತ್ರ ಸ್ವಲ್ಪವೂ ಮಾಡಿರಲಿಲ್ಲ. ಒಂದೋ, ಅವಳ ಅಪ್ಪನ ಮೇಲಿದ್ದ ನಂಬಿಕೆ, ಸ್ನೇಹ ಅಥವಾ ಅಮ್ಮನ ಮಿತಭಾಷಿ ಸ್ವಭಾವದಿಂದಾಗಿ ಅವರೆಲ್ಲ ಹಿಂದೇಟು ಹಾಕುತ್ತಿದ್ದರು. ಅಥವಾ ಯಾವುದೇ ಚಿಕ್ಕ ಪ್ರಣಯಚೇಷ್ಟೆಗೂ ಎಡೆಕೊಡುವಂಥ ಮಾತು ಕೃತಿಗಳಿಗೆ ತಾನು ಸೊಪ್ಪು ಹಾಕಲೇಬಾರದೆಂಬ ದೃಢನಿರ್ಧಾರ ಪಿಯಾಳ ಮನಸ್ಸನ್ನು ತುಂಬಿ ಕೊಂಡಿದ್ದರಿಂದ ಮನೆಗೆ ಬರುವ ಯುವಕರಿಗೆ ಅವಳು ಅಗತ್ಯಕ್ಕಿಂತ ಜಾಸ್ತಿಯೇ ಗೌರವ ಕೊಡುತ್ತಿದ್ದಳು. ಹೀಗಾಗಿ, ಯಾರಿಗೂ ಧೈರ್ಯವೇ ಸಾಲುತ್ತಿರಲಿಲ್ಲ. ಇಷ್ಟೊಂದು ಮೌನಿಯಾಗಿದ್ದರೂ ಅವಳ ವರ್ತನೆಯಲ್ಲೊಂದು ವಿಶಿಷ್ಟ ಸೊಬಗಿತ್ತು. ಅವಳ ಅತ್ಯಂತ ಸೌಜನ್ಯದ ಉಪಚಾರವೂ ಬಂದವರೆಲ್ಲರ ಸಂಕೋಚವನ್ನೂ ಕಿತ್ತೆಸೆಯುವಷ್ಟು ಆತ್ಮೀಯವಾಗಿರುತ್ತಿತ್ತು. ಇಷ್ಟಾಗಿಯೂ ಅವರೆಲ್ಲರೂ ಅವಳಲ್ಲೊಬ್ಬ ಚುರುಕಾದ ಬುದ್ಧಿವಂತ ಹಂಡತಿಯನ್ನು ಕಾಣುತ್ತಿದ್ದರು. ಅವಳೂ ಕೂಡ ಅಂಥ ಹೆಂಡತಿಯಾಗಲು ಸ್ವತಃ ಪ್ರಯತ್ನ ಪಡುತ್ತಿರುವವಳಂತೆ ಕಾಣುತ್ತಿದ್ದಳು. ಅಂದರೆ, ಯಾರದ್ದಾದರೂ ಚಿಕ್ಕದೃಷ್ಟಿ, ಅಥವಾ ಒಂದು ಮುಗುಳ್ನಗು ಅಥವಾ ಒಂದು ಸಣ್ಣಮಾತಿನ ಸೂಚನೆ ಇಲ್ಲದಾಗ್ಯೂ ಕ್ರಮೇಣ ಯಾರಾದರೂ ಮನಸ್ಸುಮಾಡಿ ಒಂದು ನಿರ್ಧಾರಕ್ಕೆ ಬಂದರೆ ತಕ್ಷಣ ಅಂಥವರಲ್ಲೊಬ್ಬಳಾಗಲು ಅವಳೂ ತುದಿಗಾಲಲ್ಲಿರುವಂತೆ ಕಾಣುತ್ತಿದ್ದಳು.

ತನ್ನ ಅಪ್ಪಟ ಬಿಳಿಕೈಗಳಿಂದ ಮನೆಯನ್ನು ಪ್ರತಿಕ್ಷಣವೂ ನೀಟಾಗಿ ಇಡುತ್ತಿದ್ದುದರಿಂದ ಬಂದವರೆಲ್ಲ ಅದರ ಅಚ್ಚು ಕಟ್ಟುತನವನ್ನು ಮನಸಾರೆ ಮೆಚ್ಚಿದ್ದರು. ಅಲ್ಲಿನ ಸರಳತೆಯನ್ನು ಎಲ್ಲರೂ ಗಮನಿಸಿದ್ದರು. ಆದರೆ ಯಾರೂ ಅವಳ ಮದುವೆಯ ವಿಚಾರವನ್ನು ಮಾತ್ರ ಎತ್ತಿರಲಿಲ್ಲ. ಹೊಗಳಿಕೆಯ ಮಾತುಗಳು ಸ್ನೇಹ ಎಲ್ಲ ಸಹಜವಾಗೇ ಸಾಗುತ್ತಿತ್ತು. ಹಾಗಾಗಿ ಯಾರೂ ಹೆಚ್ಚಿಗೇನನ್ನೂ ಬಯಸುತ್ತಿರಲಿಲ್ಲ.

ಇದಲ್ಲದೆ, ಪಿಯಾ ಟೊಲೋಸಾನಿ ಕೂಡ ಯಾರನ್ನೂ ಮೆಚ್ಚಿರಲಿಲ್ಲ.

“ಭೇಟಿ ಕೊಡುವ ಇಷ್ಟೊಂದು ಜನರಲ್ಲಿ ಅವಳು ಬಹುಶಃ ನನ್ನನ್ನೇ ಮದುವೆಯಾಗ ಬಹುದು” ಎಂದು ಪ್ರತಿಯೊಬ್ಬನೂ ಯೋಚಿಸುತ್ತಿದ್ದ. ಯಾರಾದ್ರೂ ಅವಳ ಸೊಬಗನ್ನು ಗಮನಿಸಿ ಸ್ವಲ್ಪ ಮುಂದುವರಿಯಲು ಪ್ರಯತ್ನಿಸಿದರೂ ಸಾಕು, ತಕ್ಷಣ ಅವರಿಂದ ದೂರ ಸರಿಯುತ್ತ, ಯಾವ ಗಾಸಿಪ್‍ಗೂ ತಾನು ಆಸ್ಪದ ಕೊಡಲು ಸಿದ್ಧಳಿಲ್ಲ ಎಂಬಂತೆ ಒಂದು ಬಗೆಯ ನಿರ್ದಯತೆಯನ್ನು ಪ್ರದರ್ಶಿಸುತ್ತಿದ್ದಳು.

ಈಗ ವಿವಾಹಿತನಾಗಿರುವ ಫಿಲಿಪ್ಪೋ ವೆನ್ಜಿ ಗೆ ಅವಳ ಈ ರೀತಿಯ ವರ್ತನೆಯಿಂದಾಗಿಯೇ ಅವಳು ಸಿಗದೆ ಹೋಗಿದ್ದು. ಬಹಳ ಅಪೇಕ್ಷೆಯಿಟ್ಟುಕೊಂಡಿದ್ದ ಆತ. ವೆನ್ಜಿಗೂ ಮೊದಲು ಇಬ್ಬರು ಆಕಾಂಕ್ಷಿಗಳಿದ್ದರು. ನಂತರದ ಸರದಿ ಬಾಲ್ಡಿಯಾನದ್ದು.

ಟೊಲೋಸಾನಿ ಕುಟುಂಬಕ್ಕೆ ಬಹುಕಾಲದಿಂದಲೂ ಗೆಳೆಯನಾಗಿದ್ದ ಜಾರ್ಜಿಯಾ ಡೌಲಾ ಪಾವೊಲೋ ಬಾಲ್ಡಿಯಾನ ಆಪ್ತಗೆಳೆಯನೂ ಆಗಿದ್ದ. ‘ಪ್ರೇಮದಲ್ಲಿ ಸಿಲುಕುವುದೆ! ನೀನೊಬ್ಬ ನಿಜವಾಗಿಯೂ ಮೂರ್ಖ!’ ಎಂದು ಬಾಲ್ಡಿಯಾಗೆ ಡೌಲಾ ಹೇಳಿದ್ದ.

ಇದಕ್ಕೆ ಬಾಲ್ಡಿಯಾ, “ನಾನು ಎರಡು ಬಾರಿ ಪ್ರಯತ್ನಿಸಿದೆ ಮಾರಾಯಾ. ಅದು ಅಂಥ ಕಿರಿಕಿರಿಯಾದ್ದು ಗೊತ್ತಾ?” ಎಂದ.

“ಹಾಗಾದರೆ ಮೂರನೇ ಬಾರಿ ಪ್ರಯತ್ನ ಮಾಡಿಬಿಡು!”

“ಯಾರ ಜತೆ ಪ್ರೇಮಪಾಶದಲ್ಲಿ ಬೀಳಬೇಕು ಅಂತಿಯಾ?”

“ಅಯ್ಯೋ ಮತ್ತಿನ್ಯಾರು? ಪಿಯಾ ಟೊಲೋಸಾನಿ.”

ಹೀಗೆ, ಅವನ ಆಜ್ಞಾನುವರ್ತಿಯಂತೆ, ಬಾಲ್ಡಿಯಾ ತನ್ನ ಪ್ರಯತ್ನವನ್ನು ಸಣ್ಣಗೆ ಆರಂಭಿಸಿದ್ದ. ಇವನನ್ನು ಪಿಯಾ ಟೊಲೋಸಾನಿ ಗಮನಿಸಿದ್ದಳೆ? ಗಮನಿಸಿದ್ದಾಳೆಂದು ಜಾರ್ಜಿಯಾ ಡೌಲಾನಿಗೆ ಖಾತರಿಯಿತ್ತು. ತನ್ನನ್ನೇ,
ಅಂದರೆ ತನ್ನ ಭಾವನೆಗಳನ್ನೇ ಮೋಸ ಗೊಳಿಸಿಕೊಂಡು ಅವಳು ಇವನಲ್ಲಿ ಆಸಕ್ತಿ ತೋರಿಸುತ್ತಿದ್ದಷ್ಣು ವೆನ್ಜಿಯಲ್ಲೂ ತೋರಿಸಿರಲಿಲ್ಲ.

“ಏನು ಹೇಳ್ತಾ ಇದೀಯ? ಅವಳಿಗೆ ಭಾವನೆಗಳಿವೆಯಾ? ಅವಳು ಎಷ್ಟೊಂದು ಭಾವ ಶೂನ್ಯಳು ಮಾರಾಯಾ?” ಎಂದುದ್ಗರಿಸಿದ ಬಾಲ್ಡಿಯಾ.

“ಹಾಗೇನೂ ಇಲ್ಲ! ನಿನಗೆ ಗೊತ್ತಾಗುತ್ತದೆ. ಅಲ್ಲದೆ, ನೀನು ಅವಳನ್ನು ಮದುವೆಯಾಗುತ್ತೀ ಎಂದಾದರೆ ಈ ಭಾವಶೂನ್ಯತೆಯೇ ನಿನಗೆ ಭರವಸೆ ಇದ್ದಂತೆ.”

“ಕ್ಷಮಿಸಬೇಕು…. ಅಂದ ಹಾಗೆ ನೀನೇ ಯಾಕೆ ಅವಳನ್ನು ಮದುವೆಯಾಗಬಾರದು?”

“ನನಗೆ ಸಾಧ್ಯವಿಲ್ಲ ಎಂದು ನಿನಗೂ ಗೊತ್ತಿದೆ! ನಿನ್ನೆ ಹಾಗೆ ನನಗೂ ಸಾಧ್ಯವಿದ್ದಿದ್ದರೆ….”

-೨-
ಇದ್ದಕ್ಕಿದ್ದಂತೆ, ಬಾಲ್ಡಿಯಾ ರೋಮ್ ಬಿಟ್ಟು ತನ್ನ ಹುಟ್ಟೂರಿಗೆ ಹೊರಟುಹೋದ. ಆತ ಹೀಗೆ ಹಠಾತ್ತನೆ ಕಾಣೆಯಾದ ಕುರಿತು ಟೊಲೋಸಾನಿ ಕುಟುಂಬದಲ್ಲಿ ಮಾತುಗಳು ಸರಾಗ ಹರಿದವು. ಸುಮಾರು ಒಂದು ತಿಂಗಳ ನಂತರ ಆತ ಮರಳಿದ.

ಆಮೇಲೊಮ್ಮೆ ಆಕಸ್ಮಿಕವಾಗಿ ಸಿಕ್ಕ ಡೌಲಾ, ವ್ಯಸ್ತನಾಗಿದ್ದ ಬಾಲ್ಡಿಯಾನಿಗೆ, “ಏನು ಮಾರಾಯಾ? ಏನಾಗ್ತಾ ಇದೆ?” ಎಂಬ ಪ್ರಶ್ನೆಗೆ, “ಏನಿಲ್ಲಪ್ಪ…. ನಿನ್ನ ಮಾತಿನಂತೆಯೇ ನಡೆದೆ. ನಾನೀಗ ಮದುವೆಯಾಗುತ್ತಿದ್ದೇನೆ” ಎಂದ.

“ಸೀರಿಯಸ್ಸಾಗಿ ಹೇಳ್ತಾ ಇದೀಯ? ಯಾರು ಪಿಯಾ ಟೊಲೋಸಾನಿನಾ?”

“ಹೌದು…. ಪಿಯಾ ಟೊಲೋಸಾನಿಯೇ…. ನನ್ನ ಹುಟ್ಟೂರಿನವಳು…. ಆಚೆ ಕಡೆಯ ಹೆಂಗಸು.”

“ಬಡ್ಡೀಮಗನೆ! ಅಂದರೆ ಮೊದಲೇ ಅವಳು ನಿನ್ನ ಮನಸ್ಸಲ್ಲಿದ್ದಳೇ?”

“ಇಲ್ಲ….. ಇಲ್ಲ….. ವಿಷಯ ತುಂಬಾ ಸರಳವಾದ್ದು. ಹೋಗಿದ್ದಾಗ ನನ್ನ ತಂದೆ ಕೇಳಿದರು: ‘ನಿನ್ನ ಹೃದಯದಲ್ಲಿ ಜಾಗವಿದೆಯೇ?’ ಅಂತ. ನಾನು ‘ಹೌದಪ್ಪಾ…. ಅದೀಗ ಖಾಲಿಯಾಗಿಯೇ ಇದೆ ಅಂತಂದೆ. ಹೆಚ್ಚೂಕಮ್ಮಿ ಅದು ಖಾಲಿಯಾಗಿಯೇ ಇತ್ತಲ್ಲ…. ನಾನು ಸಮ್ಮತಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ…. ಮೊದಲು ಹುಡುಗಿಯನ್ನು ನೋಡುತ್ತೇನೆ. ಎಲ್ಲದಕ್ಕೂ ಮುಂಚೆ ಅವಳಲ್ಲಿ ಯಾವುದೂ ಒಪ್ಪಿಗೆಯಾಗದೆ ಇರುವ ವಿಚಾರಗಳು ಮಾತ್ರ ಇರಲೇಬಾರದು. ಒಳ್ಳೆಯ ಹುಡುಗಿ…. ಒಳ್ಳೇ ವರದಕ್ಷಿಣೆ… ತಕ್ಷಣ ಒಪ್ಪಿದೆ. ಅಯ್ಯೋ ಈವತ್ತು ಗುರುವಾರ ಬೇರೆ. ಆ ಟೊಲೋಸಾನಿ ಕುಟುಂಬಕ್ಕೆ ಭೆಟ್ಟಿ ಕೊಡಬೇಕಾ ಹೇಗೆ?” ಎಂದು ನಕ್ಕು ಕೇಳಿದ.

“ಖಂಡಿತವಾಗಿ…. ಔಚಿತ್ಯಕ್ಕಾದರೂ ನೀನೊಮ್ಮೆ ಹೋಗಿ ವಿಷಯ ತಿಳಿಸಿಬಿಡಬೇಕು” ಎಂದ ಡೌಲಾ.

“ಹೌದೌದು…. ಆದರೆ ಏನು ಮಾಡಬೇಕೋ ಗೊತ್ತಾಗುತ್ತಿಲ್ಲ. ಸಿಗ್ನೋರಿನಾ ಪಿಯಾ ಮತ್ತು ನನ್ನ ನಡುವೆ ಅಂಥದ್ದೇನೂ ಆಗಿಲ್ಲ, ನಿನಗರ್ಥವಾಯಿತಲ್ಲ….”

“ಒಮ್ಮೆಯಂತೂ ಹೋಗಲೇಬೇಕು! ಹೋಗದೆ ಇದ್ದರೆ ತೊಂದರೆಯೇ…”

“ನನ್ನನ್ನವರು ಕ್ಷಮಿಸಬಹುದು; ಇಷ್ಟಕ್ಕೂ ನಾನೊಂದು ಮನೆ ಕಟ್ಟುತ್ತಿದ್ದೇನಲ್ಲ…. ಎಷ್ಟೊಂದು ಕೆಲಸ ಬಿದ್ದುಕೊಂಡಿದೆ ಇಲ್ಲಿ!”

“ನೀನು ಬೇಗನೆ ಮದುವೆಯಾಗುತ್ತಿದ್ದೀಯಲ್ಲ ಮಾರಾಯಾ?”

“ಹೌದು…. ಇಂಥದ್ದನ್ನೆಲ್ಲ ಜಾಸ್ತಿದಿವಸ ಎಳೆಯಬಾರದು. ಬೇಗನೆ ಮೂರು ತಿಂಗಳ ಒಳಗಡೆಯೇ ಮುಗಿಸಿಬಿಡಬೇಕು. ವೆಂಟಿ ಸೆಟ್ಟಂಬರ್‍ನಲ್ಲಿ ಈಗಾಗಲೇ ನನಗೊಂದು ಮನೆಯಿದೆ…. ಅಯ್ಯೋ ನನ್ನ ತಲೆ ಸಿಡಿದು ಹೋಳಾಗುತ್ತಿದೆ…. ಒಮ್ಮೆ ಯೋಚಿಸು ನೋಡೋಣ! ಅದೇ ಥರದ ಮನೆ ಕಟ್ಟುವುದೆಂದರೆ….”

“ನೀನು ಸಂಜೆ ಬರ್ತಾ ಇದ್ದೇಯಾ?”

“ಖಂಡಿತ ಬರುತ್ತೇನೆ…. ಗಾಬರಿಬೇಡ.”

ಆ ಸಂಜೆ ಅವನು ಟೊಲೋಸಾನಿ ಮನೆಗೆ ಹೋದ.

ಡ್ರಾಯಿಂಗ್ರೂಂ ಆ ದಿನ ಎಂದಿಗಿಂತ ಹೆಚ್ಚೆ ಕಿಕ್ಕಿರಿದಿತ್ತು. ಅವರೆಲ್ಲರೂ ತನ್ನನ್ನು ಮತ್ತಷ್ಟು ಪೇಚಿಗೆ ಸಿಕ್ಕಿಸುವ ಉದ್ದೇಶವಿಟ್ಟುಕೊಂಡೇ ಬಂದಿದ್ದಾರೆ ಎಂದನಿಸಿತು ಬಾಲ್ಡಿಯಾಗೆ. “ಯಾರಾದರೂ ಮದುವೆ ಬಗ್ಗೆ ಡಂಗುರ ಬಾರಿಸುತ್ತ ಹೋಗ್ತಾರೇನು?” ಎಂದು ತನ್ನನ್ನೇ ಕೇಳಿಕೊಂಡ. ತನ್ನ ಹುಟ್ಟೂರಿನ ಪ್ರಯಾಣ ಮತ್ತು ತನ್ನ ಅನುಪಸ್ಥಿತಿಯ ಕುರಿತು ಆತ ಆಗಲೇ ಅವರ ಪ್ರಶ್ನೆಗಳಿಗೆ ಎರಡೆರಡು ಸಲ ಉತ್ತರಿಸಬಹುದಿತ್ತು. ಬದಲಿಗೆ, ಏನೇನೋ ಅಸ್ಪಷ್ಟವಾಗಿ ಹೇಳಲು ಹೋಗಿ ಅವನ ಮುಖ ಕೆಂಪೇರಿತು. ಮಾತಾಡುತ್ತ ಮಾತಾಡುತ್ತ ತಡವಾಗಿಬಿಟ್ಟಿತು. ಆಗ ಯಾರೋ ಅಲ್ಲಿದ್ದವರು, “ಹಾಗಾದರೆ ಮಾಡಲಿಕ್ಕೆ ಬಹಳ ಕೆಲಸವಿದೆಯಲ್ಲ” ಎಂದದ್ದೇ ಸಿಕ್ಕ ಅವಕಾಶವನ್ನು ಬಳಸಿಕೊಂಡ ಬಾಲ್ಡಿಯಾ, ‘ಹೌದು ಗೆಳೆಯಾ; ನಿಜಕ್ಕೂ ಮಾಡಲಿಕ್ಕೆ ಬಹಳಷ್ಟು ಕೆಲಸವಿದೆ ನನಗೆ’ ಎಂದುಬಿಟ್ಟ.

“ನಿನಗೆ ಕೆಲಸವಿದೆಯಾ? ಆದರೆ ನೀನು ಏನೂ ಮಾಡುತ್ತ ಇಲ್ಲವಲ್ಲ” ಎಂದಳು ಸಿಗ್ನೋರ ವೆನ್ಜಿ ಮುಗುಳ್ನಗುತ್ತ.

“ಏನೂ ಮಾಡುವುದಿಲ್ಲ ಅಂದರೇನರ್ಥ? ನಾನು ಮನೆ ಕಟ್ತಾ ಇದ್ದೇನೆ.”

“ಅಂದರೆ ಮದುವೆಯಾಗುತ್ತಿದ್ದೀಯಾ?”

“ಹೌದು…. ಹೆಂಡತಿಯೊಬ್ಬಳನ್ನು ಪಡೆಯುತ್ತಿದ್ದೇನೆ…. ದುರಾದೃಷ್ಟವಶಾತ್!”

ಒಮ್ಮೆ ಸುತ್ತಲೆಲ್ಲ ಆಶ್ಚರ್ಯದ ಅಲೆ ಎಬ್ಬಿತು. ಬಾಲ್ಡಿಯಾ ಮೇಲೆ ಪ್ರಶ್ನೆಗಳ ಸುರಿಮಳೆಯೇ ಆರಂಭವಾಗಿ, ಅವುಗಳನ್ನೆಲ್ಲ ಉತ್ತರಿಸಲು ಜಾರ್ಜಿಯಾ ಡೌಲಾ ಸಹಾಯ ಮಾಡಬೇಕಾಯಿತು.”

ನಡುವೊಮ್ಮೆ ಸಿಗ್ನೋರಿನಾ ಪಿಯಾ, “ನೀನವಳನ್ನು ನಮಗೆಲ್ಲ ಪರಿಚಯಿಸುತ್ತೀ ತಾನೆ?” ಎಂದು ಕೇಳಿದಳು.

“ಖಂಡಿತ…. ನನ್ನ ಸೌಭಾಗ್ಯ ಅದು!” ಎಂದ ಪಾವ್ಲೋ ತಡವರಿಸುತ್ತ.

“ಸುಂದರವಾಗಿದ್ದಾಳೆಯೇ?”

“ಕಪ್ಪಗಿದ್ದಾಳೆ.”

“ಅವಳ ಭಾವಚಿತ್ರ ಏನಾದರೂ ಇದೆಯೇ?”

“ಸದ್ಯಕ್ಕಿನ್ನೂ ಇಲ್ಲ…. ಸಿಗ್ನೋರಿನಾ, ಕ್ಷಮಿಸು.”

ನಂತರ, ಬಹಳ ಹೊತ್ತು ಅವರೆಲ್ಲ ಅವನು ಕಟ್ಟಲು ಹೊರಟ ಮನೆಯ ಕುರಿತು ಮಾತಾಡಿದರು. ಇದುವರೆಗೆ ಅವನು ಮಾಡಿದ, ಮಾಡಲಿರುವ ಖರೀದಿಯ ಕುರಿತು ಮಾತಾಡಿದರು. ಬಾಲ್ಡಿಯಾ ಸಂಕೋಚದಿಂದಲೇ ಇಷ್ಟೊಂದು ಅಲ್ಪಾವಧಿಯಲ್ಲಿ ಮನೆಯನ್ನು ಕಟ್ಟುವಾಗ ಎದುರಾಗುವ ಸಂಕಷ್ಟಗಳ ಕುರಿತು ತಾನೆಷ್ಟು ಎದೆಗುಂದಿದ್ದೇನೆಂದೂ ವಿವರಿಸಿದ; ನಂತರ, ಸಿಗ್ನೋರಿನಾ ಪಿಯಾ ಯಾರ ಉತ್ತೇಜನವಿಲ್ಲದೆ ಅವಳಾಗಿಯೇ ಬೇಕಾದರೆ ತಾಯಿಯ ಜತೆ ಸಹಾಯಕ್ಕೆ ಬರಲು ಸಿದ್ಧಳಿದ್ದೇನೆಂದೂ – ಅದರಲ್ಲೂ ಪೀಠೋಪಕರಣಗಳ ಆಯ್ಕೆಯಲ್ಲಿ ಸಹಕರಿಸುವೆನೆಂದೂ ತಿಳಿಸಿದಳು.

“ಅದೆಲ್ಲ ನಿನ್ನೊಬ್ಬನಿಂದ ಆಗುವಂಥದ್ದಲ್ಲ. ಎಲ್ಲ ಜತೆಯಾಗಿಯೇ ಮಾಡೋಣ.”

ಆತ ತುಂಬು ಕೃತಜ್ಞತೆಯಿಂದಲೇ, ಅವಳ ಸಹಾಯವನ್ನು ಸ್ವೀಕರಿಸಿದ.

ಮನೆಯಿಂದ ಹೊರಬಿದ್ದದ್ದೇ, ಡೌಲಾ ಹೇಳಿದ: “ಮಾರಾಯಾ, ನಿನಗೀಗ ಸರಿಯಾದ ಸಹಾಯಹಸ್ತವೇ ದೊರಕಿದೆ. ಇನ್ನು ನಿನ್ನ ಸಮಸ್ಯೆಗಳೆಲ್ಲ ಪರಿಹಾರವಾದಂತೆ ಬಿಡು. ಸಿಗ್ನೋರಿನಾ ಪಿಯಾ ಏನು ಖರೀದಿಸಿದರೂ ಎಲ್ಲವೂ ಒಳ್ಳೆಯದೇ ಆಗಿರುತ್ತದೆ! ಫಿಲಿಪ್ಪೊ ವೆನ್ಜಿಗೂ ಅವಳು ಹೀಗೇ ಸಹಾಯ ಮಾಡಿದ್ದಳು. ಅವನಿನ್ನೂ ಅವಳ ಗುಣಗಾನ ಮಾಡುತ್ತಲೇ ಇದ್ದಾನೆ. ಅವಳಿಗೆ ಖರೀದಿಗೆ ಅತ್ಯಗತ್ಯವಿರುವ ಜಾಣ್ಮೆ ಅನುಭವ, ಅಭಿರುಚಿ ಎಲ್ಲವೂ ಇದೆ. ಇದೀಗ ಅವಳು ಬೇರೆಯವರಿಗೆ ಸಹಾಯ ಮಾಡುತ್ತಿರುವುದು ಮೂರನೇ ಸಲ…. ಎಲ್ಲರ ಕುರಿತೂ ಅವಳು ಯೋಚಿಸುತ್ತಲೇ ಇರುತ್ತಾಳೆ…. ಪಾಪ, ಅವಳ ಕುರಿತು ಯಾರೂ ಚಿಂತೆ ಮಾಡುತ್ತಿಲ್ಲ! ಅವಳು ಎಷ್ಟೊಂದು ಸುಂದರ ಮನೆ ಕಟ್ಟಬಲ್ಲ ಹುಡುಗಿ ಗೊತ್ತಾ! ಈ ಗಂಡಸರೆಲ್ಲ ಪಕ್ಷಪಾತಿಗಳು ಗೆಳೆಯಾ! ನಾನೇನಾದರೂ ಮದುವೆಯಾಗುವ ಸ್ಥಿತಿಯಲ್ಲಿದ್ದಿದ್ದರೆ, ಖಂಡಿತವಾಗಿಯೂ ಬಹಳ ದೂರ ಹೋಗಬೇಕಾಗಿರಲಿಲ್ಲ….”

ಬಾಲ್ಡಿಯಾ ಇದಕ್ಕೆ ಉತ್ತರಿಸುವ ಗೋಜಿಗೇ ಹೋಗಲಿಲ್ಲ. ಡೌಲಾನನ್ನು ಮನೆತನಕ ಬಿಟ್ಟು ರೋಮ್‍ನ ಹಾಳುಸುರಿಯುವ ಬೀದಿಗಳಲ್ಲಿ ಬಹಳ ಹೊತ್ತಿನವರೆಗೂ ಅಡ್ಡಾಡುತ್ತ ತನ್ನ ಕಲ್ಪನಾಸಾಮ್ರಾಜ್ಯದಲ್ಲೆ ಕಳೆದುಹೋಗಿಬಿಟ್ಟ.

ಬೇರೊಬ್ಬ ಹೆಂಗಸಿಗಾಗಿ ಅವಳು ಮನೆಯನ್ನು ಕಟ್ಟುವಲ್ಲಿ ಸಹಾಯ ಮಾಡುತ್ತಾಳೆಂದರೆ! ಎಷ್ಟೊಂದು ಸರಳವಾಗಿ ಹೇಳಿಬಿಟ್ಟಳಲ್ಲ…. ಅಂದರೆ, ಅವಳಿಗೆ ಇದ್ಯಾವುದೂ ಮಹತ್ವದ್ದೇ ಅಲ್ಲವೆ! ಇಷ್ಟೊಂದು ಕೆಂಪೇರಿದವನು ಅವಳ ಮೇಲೆ ನಂಬಿಕೆಯಿಟ್ಲಿಲ್ಲವೆ!

-೩-
“ಅಮ್ಮಾ…. ಹೊರಡು ಬೇಗ ಬೇಗ! ಆಗಲೇ ಗಂಟೆ ಹತ್ತಾಯಿತು” ಎಂದು ಪಿಯಾ ಕೊನೇಬಾರಿ ತಲೆ ಬಾಚಿಕೊಳ್ಳುತ್ತ ಕನ್ನಡಿಯಲ್ಲಿ ನೋಡಿಕೊಳ್ಳುತ್ತ ಹೇಳಿದಳು.

“ನಿಧಾನ… ನಿಧಾನ…. ಅಂಗಡಿಗಳೆಲ್ಲ ಏನೂ ಮಾಯವಾಗಿಬಿಡುವುದಿಲ್ಲ! ಬಾಲ್ಡಿಯಾ ಕರೆದೊಯ್ಯಲು ಯಾವಾಗ ಬರುತ್ತಿದ್ದಾನೆ?” ಸಿಗ್ನೋರಾ ಜೀಯೋವಾನ್ನಾ ಶಾಂತಳಾಗಿ ಹೇಳಿದಳು.

“ಕೂಡಲೇ ಬರಬಹುದು…. ಹತ್ತು ಗಂಟೆಗೆ ಅಂತ ಹೇಳಿದ್ದ. ಅಂದರೆ ನಾನವನಿಗೆ ಹೇಳಿದ್ದು ಅದೇ ಟೈಮಿಗೆ ಬಾ ಅಂತ.”

“ಆದರೆ ನಿನಗೆ ಆರಾಮಿಲ್ಲ ಎಂದಾದರೆ.”

“ಇಲ್ಲ…. ಇಲ್ಲ…. ಅದೆಲ್ಲ ಈಗ ಸರಿಹೋಯ್ತು…. ನೋಡಿಲ್ಲಿ ನನ್ನ ಕಣ್ಣುಗಳು ಕೆಂಪಾಗಿವೆಯೇ?”

“ಅವು ಕೆಂಪಗಾಗಿವೆ ಮಾತ್ರವಲ್ಲ, ಬೀಗಿಕೊಂಡಿವೆ ಕೂಡ.”

“ಈ ತಲೆನೋವು ಪ್ರತಿಸಲವೂ ಹೀಗೇ ಶುರುವಾಗುವುದು! ನೋಡಲ್ಲಿ ಬೆಲ್ಲಾಯಿತು. ಅವನೇ ಇರಬೇಕು.”

ಅವನ ಬದಲಿಗೆ, ಬಾಗಿಲಲ್ಲಿ ಸಿಗ್ನೋರಾ ಅನ್ನಾವೆನ್ಜಿ ತನ್ನೆರಡು ಪುಟ್ಟಮಕ್ಕಳು ಮತ್ತು ಕೆಲಸದಾಕೆಯ ಜತೆ ನಿಂತಿದ್ದಳು. ಈ ಪುಂಡು ಪೋಕರಿಗಳಿಬ್ಬರೂ ಪಿಯಾಳಿಗೆ ದೊಡ್ಡ ತಲೆ ನೋವೇ ಸರಿ. ಮಕ್ಕಳನ್ನು ನಗಿನಗಿಸುತ್ತ ತಯಾರಾಗಿಸುವುದು ಹೇಗೆಂದು ಅವರಿಬ್ಬರ ತಾಯಿಗೆ ಹೇಳಿಹೇಳಿ ಪಿಯಾ ಸುಸ್ತಾಗಿದ್ದಳು. ಆ ಉದ್ದ ಪಾಯಿಜಾಮ, ಆ ನಣುಪಾದ ನೇರ ಕೂದಲು, ಗಿಡ್ಡ ಕಾಲುಗಳಿಗೆ ತುಂಬ ಬಿಗಿಯಾಗಿ ತೊಡಿಸಿರುವ ಕಾಲ್ಚೀಲ ಎಲ್ಲ ನೋಡಿದರೆ ಸಾಕು, ನರಳುವಂತಾಗುತ್ತಿತ್ತು ಅವಳಿಗೆ. ಯಾವತ್ತೂ ಪಿಯಾಳ ಸಲಹೆಯನ್ನು ಅನ್ನಾ ಕಣ್ಮುಚ್ಚಿ ಅನುಸರಿಸುತ್ತಿದ್ದಳಾದರೂ ತಾಯಿಯಾಗಿ ಮಾತ್ರ, ಅತ್ಯಂತ ಒರಟು ಸ್ವಭಾವದವಳೂ, ಹಠಮಾರಿಯೂ ಆಗಿದ್ದಳು. ಅವಳಿಗೆ ಹೇಳಿ ಹೇಳಿ ಸುಸ್ತಾಗಿ ಗಂಡ ಫಿಲಿಪ್ಪೋಗೆ ನೇರ ತಿಳಿಸಿದಳು: ಆತ ಒಂದೋ ಸುಮ್ಮನೆ ಕಣ್ಣು ಮುಟ್ಚಿಕೊಂಡುಬಿಡುತ್ತಿದ್ದ ಅಥವಾ ವಿಷಾದದಿಂದ ಭುಜಹಾರಿಸುತ್ತ: “ಹೌದು, ಸಿಗ್ನೋರಿನಾ ನನಗೆ ಎಲ್ಲವೂ ಕಾಣುತ್ತ ಇದೆ. ಆದರೆ ಅವಳ ತಾಯಿ ಎಲ್ಲಿ…. ಬಿಡು ನನಗೀಗ ಬೇರೆ ಕೆಲಸ ಇದೆ” ಎಂದು ಹೇಳುತ್ತಿದ್ದ.

ಅನ್ನಾ ಈಗ ಬಂದಾಗಿತ್ತು. ಬಾಲ್ಡಿಯಾನಿಗಾಗಿ ಶಾಪ್ಪಿಂಗ್ ಮಾಡುವಾಗ ಅವಳಿಗೂ ಅವರೊಂದಿಗೆ ಹೋಗಬೇಕೆಂದೆನಿಸಿತು. ಅಸೂಯೆಯಿಂದಲ್ಲ, ತನ್ನಲ್ಲೇ ಹುಟ್ಟಿದ ಕುತೂಹಲದಿಂದಾಗಿ. ಪಿಯಾ ತನ್ನ ಭಾವೀ ಪತಿಯೊಂದಿಗೆ ಎಲ್ಲಗಿಂತಲೂ ಹೆಚ್ಚು ಹತ್ತಿರದವಳಾದರೆ ಎಂಬ ಸಣ್ಣ ಶಂಕೆ ಆನ್ನಾಳಿಗಿದ್ದಿರಬೇಕು. ಪ್ರಾಯಶಃ ಇದೇ ಕಾರಣಕ್ಕೆ ಅವಳಲ್ಲಿ ಕುತೂಹಲ, ಅಸೂಯೆಯ ಜತೆಗೆ ಅಸ್ಪಷ್ಟವಾಗಿ ಸ್ವಲ್ಪ ಹೊಟ್ಟೆಕಿಚ್ಚೂ ಸೇರಿಕೊಂಡಿತ್ತು.

ಬಹಳ ವರುಷಗಳಿಂದ, ರೋಮ್ನಲ್ಲಿದ್ದರೂ ಕೂಡ, ಈ ಟೊಲೋಸಾನಿ ಕುಟುಂಬ ಬಿಟ್ಟರೆ ಅವಳಿಗೆ ಬೇರ್‍ಯಾರ ಜತೆಗೂ ಸ್ನೇಹವಿರಲಿಲ್ಲ. ಅದೂ, ಅವಳು ಊರಿಗೆ ಬಂದು ಕೆಲವೇ ದಿನಗಳ ನಂತರ, ತನ್ನ ಗಂಡ ಪರಿಚಯಿಸಿದ ನಂತರವೇ ಸ್ನೆಹವಾಗಿದ್ದು. ಆಗ ಆನ್ನಾ ಜೀವನಾನುಭವವಿಲ್ಲದ ಪೆದ್ದಿಯಾಗಿದ್ದಳು. ಎಲ್ಲಿ, ಹೇಗೆ ವರ್ತಿಸಬೇಕೆಂಬ ಶಿಷ್ಟಚಾರವಿರಲಿಲ್ಲ. ರೋಮ್ನಲ್ಲಿ ಪ್ರಮುಖ ಬ್ಯಾರಿಸ್ಟರ್‍ಅನಾಗಿರುವ ಫಿಲಿಪ್ಪೋವೆನ್ಜಿಯಂಥ ಸುಸಂಸ್ಕೃತ ಮತ್ತು ಬುದ್ಧಿವಂತ ಯುವಕ ಇವಳನ್ನು ಹೆಂಡತಿಯಾಗಿ ಆಯ್ಕೆ ಮಾಡಿಕೊಂಡ ಎಂಬುದೇ ತಿಳಿಯದು. ಮೇಲಾಗಿ ಅವಳು ಸುಂದರಿಯೂ ಆಗಿರಲಿಲ್ಲ! ಅವನ ಗೆಳೆಯರೆಲ್ಲ ಗೌಪ್ಯವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರೂ, ಅವಳ ಕುರಿತು ಪಿಯಾಟೊಲೋಸಾನಿಗೆ ಏನನ್ನಿಸಿರಬಹುದು ಎಂದು ಫಿಲಿಪ್ಪೋ ಸರಿಯಾಗೇ ಊಹಿಸಿದ್ದ. ಪಿಯಾ ಮಾತ್ರ ಆನ್ನಾಳನ್ನು ತುಂಬು ಹೃದಯದಿಂದ ಸ್ವಾಗತಿಸಿದ್ದಲ್ಲದೆ ಅವರ ದಾಂಪತ್ಯದಲ್ಲಿ ಅವಳ ರಕ್ಷಕಳಾಗಿದ್ದಳು ಕೂಡ…. ಈ ಮಧ್ಯೆ, ಮದುವೆಯಾದ ಕೆಲಸಮಯದಲ್ಲೇ ವೆನ್ಜಿ ಆಳವಾದ ಖಿನ್ನತೆಯಲ್ಲಿ ಮುಳುಗಿಬಿಟ್ಟ. ಅವನ ಗೆಳೆಯರಿಗೂ ಕೂಡಾ ಯಾವುದೇ ಕಾರಣವಿಲ್ಲದೆ ಹೀಗಾಗಲು ಅಸಾಧ್ಯ ಎನಿಸಿತ್ತು. ಪಿಯಾ ಟೊಲೋಸಾನಿ, ಈಗ ಆನ್ನಾಳ ಸಲಹೆಗಾರಳಾಗಿರಲು ಪ್ರಾರಂಭಿಸಿದಳು. ಕೊನೆ ಕೊನೆಗೆ ಅವಳ ಸಹವಾಸ-ಸಾಂಗತ್ಯ ಇಲ್ಲದೇ ಬದುಕುವುದೇ ಅಸಾಧ್ಯ ಎನಿಸಿಬಿಟ್ಟಿತು. ಯಾವ ಬಟ್ಟೆ ಖರೀದಿಸಬಹುದು ಎಂಬುದರಿಂದ ಹಿಡಿದು ಸರಿಯಾದ ದರ್ಜಿಯ ತನಕ ತಾನೇ ಮುಂದೆ ನಿಂತು ಅಯ್ಕೆ ಮಾಡಿದಳು. ಕೂದಲನ್ನು ಆಭಾಸವಾಗದ ಹಾಗೆ ಬಾಚುವುದನ್ನು ಕಲಿಸಿದಳು, ಮನೆಯನ್ನು ಓರಣವಾಗಿಡುವುದನ್ನು ಕಲಿಸಿದಳು. ಇಂಥ ವಿಷಯಗಳಲ್ಲಿ ಅತ್ಯಂತ ಜಾಗರೂಕಳಾದಳಷ್ಟೇ ಅಲ್ಲ ಮತ್ತೂ ಒಂದು ಹೆಜ್ಜೆ ಮುಂದೆಯೂ ಹೋಗಿಬಿಟ್ಟಳು.

ಆನ್ನಾ ಮಾತ್ರ ಮೂರ್ಖಳೆ! ಯಾಕೆಂದರೆ ತನ್ನ ಮತ್ತು ಗಂಡನ ನಡುವಿನ ಚಿಕ್ಕಪುಟ್ಟ ಮನಸ್ತಾಪಗಳನ್ನು, ವೈಮನಸ್ಯಗಳನ್ನು ಕಾಲಕಾಲಕ್ಕೆ ಎಲ್ಲವನ್ನೂ ಇವಳಲ್ಲಿ ಹೇಳತೊಡಗಿದಳು. ಶುರುವಾತಿಗೆ ಈ ಕಚ್ಚಾಟಗಳನ್ನು, ಬಲು ಜಾಣ್ಮೆಯಿಂದ ಇಬ್ಬರ ಸಿಟ್ಟನ್ನು ಬೇರೆಬೇರೆಯಾಗಿ ಪರೀಕ್ಷಿಸುತ್ತ ನಡುವೆ ಒಮ್ಮೆಯೂ ತಾನು ಸ್ವತಃ ಬಾರದೆ ಆನ್ನಾಳಿಗೆ ಬುದ್ಧಿವಂತ ಸಲಹೆಗಳನ್ನು, ತಾಳ್ಮೆ ವಿವೇಕದ ಎಚ್ಚರಿಕೆ ಕೊಡತೊಡಗಿದಳು….

“ಗಂಡನನ್ನು ಅವನು ಇರುವ ಹಾಗೇ ಸ್ವೀಕರಿಸುವುದು ಹೇಗೆಂದು ನಿನಗ್ಗೊತ್ತಿಲ್ಲ. ಯಾವುದು ಮಾಡಬೇಕು, ಯಾವುದನ್ನು ಮಾಡಬಾರದು ಎಂಬುದು ನಿನಗೆ ತಿಳಿದಿರಬೇಕು…. ಅವನ ಬಗ್ಗೆ ನಿನಗಿನ್ನೂ ಸರಿಯಾಗಿ ಗೊತ್ತಿಲ್ಲ…. ನನ್ನ ಪ್ರಕಾರ ಅವನಿಗೆ ಅದು, ಇದು ಎಲ್ಲ ಬೇಕು….” ಎಂದೆಲ್ಲ ಅವನ ಬೇಕುಬೇಡಗಳನ್ನು ಹೇಳತೊಡಗಿದಳು.

ಅತ್ತ, ಅವನ ಬಳಿ ತಮಾಷೆ ಮಾಡುತ್ತ ಜೋರುದನಿಯಲ್ಲಿ ಆತ ದೂರದಂತೆ, ಬದಲಿಗೆ ತನಗೆ ತಾನೇ ಕ್ಷಮಿಸುವಂತೆ ಮಾಡುತ್ತಿದ್ದಳು.

“ಸ್ವಲ್ಪ ಸುಮ್ಮನಿರು ವೆನ್ಜಿ…. ನಿನ್ನದೇ ತಪ್ಪು. ತಪ್ಪು ಮಾಡಿದ್ದೀಯೆಂದು ಒಪ್ಪಿಕೊಂಡು ಬಿಡು. ಅಷ್ಟೇ! ಪಾಪ ಆನ್ನಾ ಎಷ್ಟು ಒಳ್ಳೇ ಹುಡುಗಿ…. ನಿನಗೇ ಚೆನ್ನಾಗಿ ಗೊತ್ತು; ಅವಳಿಗೆ ಅನುಭವವಿಲ್ಲ ಅಂತ…. ಅದರ ಪ್ರಯೋಜನ ಪಡೆಯಬೇಕಪ್ತ…. ನೀವು ಗಂಡಸರೆಲ್ಲ ಒಂದೇ ಥರ!”

ರೋಮ್ನಲ್ಲಿ ಶಿಕ್ಷಣ, ವಾಸ್ತವ್ಯ ಎಂದು ಎಷ್ಟೊಂದು ವರ್ಷಕಾಲವಿದ್ದೂ ಆನ್ನಾ ಈಗ – ಅವಳ ಗೆಳೆಯರೇ ಒಪ್ಪುವಂತೆ – ಬಹಳಷ್ಟು ಸುಧಾರಿಸಿದ್ದಂತೂ ನಿಜ!

ಆನ್ನಾ, “ಇನ್ನೂ ಬಟ್ಟೆ ಧರಿಸಿ ತಯಾರಾಗಿಲ್ಲವೆ?” ಎಂದು ಒಳಬರುತ್ತಿದ್ದಂತೆ ಜಿಯಾಗೆ ಕೇಳಿದಳು.

“ಓಹ್…. ನೀನಾ…. ಬಾಬಾ… ಕೂತುಕೋ….. ಮಕ್ಕಳನ್ನು ಜತೆಯಲ್ಲಿ ಕರಕೊಂಡು ಬಂದಿದೀಯಾ? ಅಯ್ಯೋ ದೇವರೇ! ನಾನು ಅವರನ್ನೆಲ್ಲ ಕರಕೊಂಡು ಹೋಗುವುದಾದರೂ ಹೇಗೆ?”

“ಇಲ್ಲ. ಅವರು ಇಲ್ಲೇ ಉಳಿಯುತ್ತಾರೆ…. ಟಿಟ್ಟಿ ತುಂಬಾ ಅಳುತ್ತಿದ್ದಳು; ಹಾಗಾಗಿ ಕರಕೊಂಡೇ ಬರಬೇಕಾಯಿತು. ನೀನಿನ್ನೂ ಬಟ್ಟೆ ಹಾಕಿಕೊಂಡಿಲ್ಲವೆ?”

“ಅಮ್ಮ ಈವತ್ತು ಮುಲುಕುತ್ತಿದ್ದಾಳೆ ಪಾಪ…. ಇನ್ನೂ ಕೂಡ ಹೋಗುವ ಮನಸ್ಸು ಮಾಡಿಲ್ಲ…. ನಿನಗೆ ಕಾಣುವುದಿಲ್ಲವೆ! ಅಲ್ಲದೆ, ನನ್ನ ತಲೆ ಸಿಡಿಯುತ್ತಿದೆ….”

“ಹಾಗಾದರೆ, ನಾಳೆಗೆ ಮುಂದೂಡೋಣ….” ಎಂದಳು ಸಿಗ್ನೋರಾ ಜಿಯೋವಾನ್ನಾ.

ವಿಷಯ ಬದಲಾಯಿಸಲೆಂದು ಜಿಯಾ ಇದ್ದಕ್ಕಿದ್ದಂತೆ, “ಅಯ್ಯೋ ಮಾರಾಯ್ತಿ…. ಆ ಕೂದಲನ್ನು “ಸ್ವಲ್ಪ ಮೇಲಕ್ಕೆತ್ತಿ ಬಾಚಿಕೋ!…. ಇನ್ನೂ ಮೇಲೆ ಮೇಲೆ…. ಹೇಗೆ ಬಾಚಿ ಕೊಂಡಿದ್ದೀ ಛೆ!”

“ಟಿಟ್ಟಿ ಅಳುತ್ತಿದ್ದಳು…. ಈಗ ನೀನೇ ಸರಿಯಾಗಿ ಕಟ್ಟಿಬಿಡು ಪ್ಲೀಸ್… ಟಿಟ್ಟಿ ಹಾಗೆಲ್ಲ ಮಾಡಿದಾಗ ನನಗೆ ಸಹಿಸಲಿಕ್ಕೇ ಆಗುವುದಿಲ್ಲ.

ಸಿಗ್ನೋರಾ ಜಿಯೋವಾನ್ನಾ ಕೋಣೆಯಿಂದ ಆಚೆ ಹೋಗಿದ್ದೇ ಪಿಯಾ ಮತ್ತು ಆನ್ನಾ ಪರಸ್ಪರ ಮಾತಾಡಲೆಂದು ಅಲ್ಲೇ ಉಳಿದರು.

ಹೊರಡಲು ತಯಾರಾಗುತ್ತಿದ್ದ ಪಿಯಾಳನ್ನು ನೋಡಿದ ಆನ್ನಾ, “ಹೀಗೆ…. ಇದ್ದಕ್ಕಿದ್ದಂತೆ ಈಗ ಬಾಲ್ಡಿಯಾ ಮದುವೆಯಾಗ್ತಾ ಇದ್ದಾನೆ.” ಎಂದಳು.

“ಹೌದು…. ವಿಚಿತ್ರವಾಗಿದೆ ಇದೆಲ್ಲ! ಆಗಾಗ ಯಾರಾದರೊಬ್ಬರು ಕಾಣೆಯಾಗಿ ಬಿಡುತ್ತಾರೆ; ಮತ್ತು ಹೆಂಡತಿಯೊಂದಿಗೆ ವಾಪಾಸಾಗುತ್ತಾರೆ.”

“ಹೇಳಬೇಕೋ, ಬೇಡವೋ ನನಗ್ಗೊತ್ತಿಲ್ಲ….. ಆದರೆ ಬಾಲ್ಡಿಯಾ ಬಹುಶಃ ನಿನ್ನ ಬಗ್ಗೆಯೇ ಯೋಚಿಸುತ್ತಿದ್ದಾನೇನೊ…. ಅಥವಾ ಹಾಗಂತ ನನಗನಿಸಿದೆ.

ಜಿಯಾಗೆ ಈಗ ಉರಿದುಹೋಯಿತು. “ಸಾಧ್ಯವೇ ಇಲ್ಲ” ಅಂದಳು.

“ನಿನ್ನ ಮೇಲಾಣೆ…. ನನಗೆ ಅನಿಸಿದ್ದನ್ನು ಹೇಳಿದೆ ಅಷ್ಟೆ…. ಆತ ಯಾವಾಗ ನಿರ್ಧರಿಸಬಹುದು ಎಂದು ಯೋಚಿಸುತ್ತಿದ್ದೆ….. ನನಗ್ಗೊತ್ತಿದೆ…. ಇದರಿಂದ ನಿನಗೇನೂ ಫರಕು ಬೀಳುವುದಿಲ್ಲ ಅಂತ…. ಆದರೆ ನಾನು….”

ಈಗ ಕೆಲಸದವಳು ಬಂದು, “ಸಿಗ್ನೋರ್ ಬಾಲ್ಡಿಯಾ, ಡ್ರಾಯಿಂಗ್‍ರೂಮ್ನಲ್ಲಿ ಕಾಯುತ್ತಿದ್ದಾನೆ” ಎಂದು ಹೇಳಿಹೋದಳು.

“ನೀನಿನ್ನು ಹೋಗು” ಎಂದು ಜಿಯಾಗೆ ಹೇಳಿದ ಅನ್ನಾ, “ನಾವೀಗ ರೆಡಿಯಾಗಿದ್ದೇವೆ” ಅಂದಳು.

-೪-
ಪಾವ್ಲೋ ಬಾಲ್ಡಿಯಾ ಶತಪಥ ಹಾಕುತ್ತ ಡ್ರಾಯಿಂಗ್‍ರೂಮ್ನಲ್ಲಿ ಜಿಯಾಳಿಗಾಗಿ ಆತಂಕದಿಂದ ಕಾಯುತ್ತಿದ್ದ. ತುಂಬಾ ಬೇಗನೆ ಬಂದುಬಿಟ್ಟೆ ಎಂದನಿಸಿದ್ದರಿಂದಲೋ ಏನೋ, ತನ್ನ ಮೇಲೆಯೇ ಸಿಟ್ಟುಗೊಂಡಿದ್ದ. ಅವಳ ಮಾತು, ಅವಳ ವರ್ತನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತ ಹಿಂದಿನ ಸಂಜೆ ಆಕೆ ಪ್ರದರ್ಶಿಸಿದ್ದು ಚಾತುರ್ಯವೋ ಅಥವಾ ಉಪೇಕ್ಷೆಯೋ ಹುಡುಕಿ ತೆಗೆಯಬೇಕು ಎಂದು ವಿರ್ಧರಿಸಿಕೊಂಡೇ ಬಂದಿದ್ದ. ಆದರೆ, ಅವನಿಗೆ ತಾನೊಮ್ಮೆ ಜಿಯಾಳನ್ನು ನೋಡಿದ್ದೇ ಈ ತನಿಖೆಗೆ ಅಗತ್ಯವಾದ ಮಾನಸಿಕ ಸ್ತಿಮಿತತೆಯನ್ನು ಕಳಕೊಳ್ಳುತ್ತೇನೆ ಎಂಬುದರ ಅರಿವೂ ಇತ್ತು.

ಕೆಲಕಾಲದ ಹಿಂದಷ್ಟೇ ಇವೇ ನಾಲ್ಕು ಗೋಡೆಗಳ ಮಧ್ಯೆ ಆತ ಪ್ರೇಮಪಾಶದಲ್ಲಿ ಬೀಳುವ ಕನಸು ಕಂಡಿದ್ದ; ಅಸ್ಪಷ್ಟವಾಗಿ ಮುನ್ಸೂಚನೆ ಕೊಡುವಂಥ ಕೆಲಪದಗಳನ್ನು ತೇಲಿಸಿಬಿಟ್ವಿದ್ದ; ಅಥವಾ ಅರ್ಥಗರ್ಭಿತ ದೃಷ್ಟಿಹರಿಸಿಬಿಟ್ಟಿದ್ದ. ಹಾಗಾಗಿ ಈವತ್ತು ಚಡಪಡಿಸುತ್ತಿದ್ದ. ನಡುವೊಮ್ಮೆ ಗೋಡೆಯ ಮೇಲೆ ಕಲಾತ್ಮಕವಾಗಿ ತೂಗುಹಾಕಿದ್ದ ವಸ್ತುಗಳನ್ನೇ ನೋಡುತ್ತ ನಿಂತ. ಜಿಯಾಳಿಗಿಂತ ಸಂಪೂರ್ಣ ಭಿನ್ನವಾಗಿದ್ದ ಅವನ ನವವಧುವಿನ ಬಿಂಬ ಆ ಕ್ಷಣದಲ್ಲಿ ಮಾತ್ರ ಮನಸ್ಸಿಂದ ಎಷ್ಟೋ ದೂರವೇ ಇತ್ತು. ಅದೇನಿದ್ದರೂ, ತಾನವಳನ್ನು ಮನಃಪೂರ್ವಕ ಪ್ರೀತಿಸಬೇಕು; ಸಾಧ್ಯವಾದಷ್ಟೂ ಕರುಣೆ-ಸಹೃದಯತೆಯಿಂದ ಅವಳ ಆರೈಕೆ ಮಾಡಬೇಕು; ಏಕಕಾಲಕ್ಕೆ ತಾನು ಪತಿ ಮತ್ತು ಗುರು ಎರಡೂ ಆಗಿರಬೇಕು; ಸಂಕ್ಷಿಪ್ತವಾಗಿ ಹೇಳುವುದಾದರೆ ತಾನಿದುವರೆಗೂ ಅನುಭವಿಸುತ್ತಿದ್ದ ಶೂನ್ಯಭಾವವನ್ನು ಅವಳು ತುಂಬಿ ಕೊಡುತ್ತ, ಬದುಕಿನ ಏಕಮಾತ್ರ ಗುರಿ ಅವಳೇ ಆಗಿರಬೇಕು ಎಂದೆಲ್ಲ ಆಂದುಕೊಂಡಿದ್ದ. ಆದರೆ, ಸದ್ಯಕ್ಕಂತೂ ಅವಳು, ದೂರವೇ ಇದ್ದಳು.

ಆನ್ನಾ ವೆನ್ಜಿಯ ಪ್ರವೇಶವಾಗಿದ್ದೇ, ಆತ ಪುನಃ ವಾಸ್ತವಕ್ಕೆ ಬಂದ.

“ಬಾಲ್ಡಿಯಾ, ನಾನೂ ಬರುತ್ತಿದ್ದೇನೆ! ನಿನಗೇನಾದರೂ ಸಹಾಯ ಮಾಡಬೇಕಂತ ನನಗೂ ಇದೆ. ಆದರೆ, ನೀನಿನ್ನೂ ನಮಗೆ ಅವಳ ಹೆಸರನ್ನ ಹೇಳಿಲ್ಲ….”

“ಎಲೀನಾ ಅಂತ ಅವಳ ಹೆಸರು….”

“ಅವಳು ಒಳ್ಳೆಯವಳಿರಲೇಬೇಕು…. ನನಗಂತೂ ಖಾತರಿಯಿದೆ.”

“ಹೌದು….” ಎಂದ ಬಾಲ್ಡಿಯಾ ಭುಜ ಹಾರಿಸುತ್ತ.

“ನನಗೂ ಪರಿಚಯಿಸುತ್ತೀ ಅಲ್ಲವೆ?”

“ಖಂಡಿತ ಸಿಗ್ನೋರಾ…. ಸಂತೋಷದಿಂದ.

ಕೊನೆಗೂ, ಜಿಯಾ ಎಂದಿಗಿಂತ ತುಸು ಹೆಚ್ಚೇ ಜಾಗರೂಕಳಾಗಿ ಉಡುಪು ಧರಿಸಿ ಕೊಂಡು (ಪಾವ್ಲೋಗೆ ಹಾಗನಿಸಿತ್ತು) ಬಂದಳು.

“ಕ್ಷಮಿಸು, ಬಾಲ್ಡಿಯಾ! ನಾವು ನಿಮ್ಮನ್ನು ಸ್ವಲ್ಪ ಕಾಯುವಂತೆ ಮಾಡಿಬಿಟ್ಟೆವು…. ಸರಿ ಹೊರಡೋಣವೇ…. ಅಮ್ಮನೂ ಬರ್ತಿದ್ದಾಳೆ…. ತಡಿ…. ನಿನ್ನ ಹತ್ತಿರ ಲಿಸ್ಟ್ ಇದೆಯಾ?”

“ಇಲ್ಲಿದೆ ಸಿಗ್ನೋರಿನಾ.”

“ಒಳ್ಳೆಯದು…. ನಾವೀಗ… ಹೋಗುವಾ…. ಇದುವರೆಗೂ ನೀನೇನೂ ಖರೀದಿಸಿಲ್ಲ ಅಲ್ಲವೇ?”

“ಇಲ್ಲ…. ಏನೇನೂ ಇಲ್ಲ”

“ಹಾಗಿದ್ದರೆ, ಎಲ್ಲವನ್ನೂ ಒಂದೇ ದಿವಸದಲ್ಲಿ ಖರೀದಿಸುವುದು ಸಾಧ್ಯವಿಲ್ಲ…. ಆದರೂ ನೋಡೋಣ…. ನೀನೇನೂ ಗಡಿಬಿಡಿ ಮಾಡಬೇಡ…. ಎಲ್ಲಾ ನಮಗೇ ಬಿಟ್ಟುಬಿಡು.”

ದಾರಿಯಲ್ಲಿ, ಮದುವೆಯಾಗಲಿರುವ ಹುಡುಗಿಯ ಕುರಿತು ವಿಚಾರಣೆ ಶುರುವಾಯಿತು. ಪಾವೊಲೋ ಪೋಸ್ ಕೊಡಲೆಂದು ಮದುವೆ ಬಗ್ಗೆ ಉಪೇಕ್ಷೆ ಪ್ರದರ್ಶಿಸುತ್ತ ಮೇಲುಮೇಲಿನ ಉತ್ತರವನ್ನೇ ಕೊಟ್ಟ.

ಒಂದು ಹಂತದಲ್ಲಿ, ಜಿಯಾಗೆ ಸಿಟ್ಟೇ ಬಂದು, ‘ನೀನೊಬ್ಬ ವಿಚಿತ್ರ ಮನುಷ್ಯ. ಗೊತ್ತಾ ನಿಂಗೆ?’ ಎಂದಳು.

“ಯಾಕೆ ಸಿಗ್ನೋರಿನಾ? ನಿಜಕ್ಕೂ ನನಗಿನ್ನೂ ಅವಳ ಬಗ್ಗೆ ಗೊತ್ತಿಲ್ಲ…. ತುಂಬ ಸರಳ ಸಂಗತಿ ಇದು. ನೀನು ನಗ್ತಾ ಇದೀಯಾ? ಊರಿನಲ್ಲಿ ಎಲ್ಲೋ ಅವಳನ್ನು ಅಲ್ಲಿ ಇಲ್ಲಿ ನೋಡಿರಬೇಕು ಅಷ್ಟೆ. ಪರಸ್ಪರ ಅರಿಯಲು ಇನ್ನೂ ಸಮಯ ಇದೆಯಲ್ಲ…. ಅವಳೊಬ್ಬ ಒಳ್ಳೆ ಹುಡುಗಿ ಅಂತ ನನಗೆ ಗೊತ್ತಿದೆ…. ಸದ್ಯಕ್ಕೆ ನನಗಷ್ಟು ಸಾಕು…. ಅವಳ ಆಸಕ್ತಿಗಳೇನು ಎಂದು ನಿನಗೆ ಬೇಕಾದರೆ ನಿಜ ಹೇಳಬೇಕೆಂದರೆ ನನಗದೆಲ್ಲ ಗೊತ್ತೇ ಇಲ್ಲ….”

“ಪಕ್ಕನೆ ಅವಳಿಗೆ ನಿಮ್ಮಿಂದ ಸಂತೋಷ ದಕ್ಕದಿದ್ದರೆ?”

“ಅನುಮಾನವೇ ಬೇಡ…. ನೀನೇನು ಬೇಕೋ ಅದನ್ನು ಮಾಡು…. ಅವಳಿಗೆ ಸಂತೋಷವೆ!”

ಆನ್ನಾಳತ್ತ ತಿರುಗಿದ ಜಿಯಾ, “ನಿಜ ಹೇಳು…. ನೀನು ಸಂತೋಷವಾಗಿದ್ದೀಯಾ?”

“ಹೌದು…. ಅದು ನಿನಗೆ ಗೊತ್ತೇ ಇದೆಯಲ್ಲ …. ನಾನು ಸಂತೋಷವಾಗೇ ಇದ್ದೇನೆ ಅಂ೦ತ” ಎಂದಳು ಆನ್ನಾ.

“ಆದರೆ…. ನಿನ್ನ ಗಂಡ ಕನಿಷ್ಠಪಕ್ಷ ಬಾಲ್ಡಿಯಾನಷ್ಟು ನಿರಾಸಕ್ತನಾಗಿರಲಿಲ್ಲ. ಹೀಗೆ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ. ಅವಳನ್ನು ಉಪೇಕ್ಷೆ ಮಾಡುತ್ತಿದ್ದಿ ಎಂದರೇನರ್ಥ? ನಾಚಿಕೆ ಯಾಗಬೇಕು ನಿನಗೆ! ಸದ್ಯದಲ್ಲೇ ನೀನು ಮದುವೆಯಾಗುತ್ತಿದ್ದಿಯೆಂದು ನಿನಗೂಗಿತ್ತಿದೆಯಾ?”

ಪಾವ್ಲೋ ಜೋಕ್ ಮಾಡುವವನಂತೆ, “ಇಷ್ಟು ದುಃಖತಪ್ತನಾಗಿದ್ದು ಸಾಲದೆ?” ಎಂದು ಕೇಳಿದ.

“ನಿನ್ನ ಸ್ಥಾನದಲ್ಲಿ ವೆನ್ಜಿ ಇದ್ದಾಗ ನೀನವನನ್ನು ನೋಡಬೇಕಿತ್ತು! ಅನುಕಂಪ ಉಕ್ಕುತ್ತಿತ್ತು ಅವನಲ್ಲಿ. ಪಾಪ! ಪ್ರತಿಬಾರಿ ಏನೋ ಮರೆತವನಂತೆ ಯೋಚನಾಮಗ್ನನಾಗಿರುತ್ತಿದ್ದ…. ನಂತರ ಆಚೆ ಈಚೆ ಎಲ್ಲ ಓಡಾಡುತ್ತಿದ್ದ…. ನಾನೂ ಅಮ್ಮ ಅವನ ಹಿಂದೆ…. ಹಿಂದೆ…. ಆ ಅಂಗಡಿಗೆ ಈ ಮನೆಗೆ ಎಂದೆಲ್ಲ ಓಡಾಡುತ್ತಿದ್ದೆವು. ಅಷ್ಟೊಂದು ಸಹಾಯ ಯಾರೂ ಮಾಡಲಿಕ್ಕಿಲ್ಲ…. ಆದರೆ ನಾವು ನಗುನಗುತ್ತ ಕೆಲಸ ಮಾಡುತ್ತಿದ್ದೆವು.”

ಅವರೆಲ್ಲ ಕೋರ್ಸೊ ವಿಟ್ಟೋರಿಯೋ ಈಮ್ಯಾನುಯಲ್ನಲ್ಲಿರುವ ದೊಡ್ಡ ಪೀಠೋಪಕರಣಗಳ ಅಂಗಡಿಯನ್ನು ಹೊಕ್ಕರು. ತಕ್ಷಣ ಸಹಾಯಕರಿಬ್ಬರು ಬಂದು ವಿವನಯದಿಂದಲೇ ಇವರನ್ನು ವಿಚಾರಿಸತೊಡಗಿದರು. ಆನ್ನಾ ವೆನ್ಜಿ ಮಂಕುಬಡಿದವಳಂತೆ ನಿರಾಸಕ್ತಿಯಿಂದಲೇ ಗ್ಯಾಲರಿಯ ಕಟಾಂಜನಕ್ಕೆ ತೂಗುಬಿದ್ದ ಪ್ರಾಚೇನ ವಸ್ತುಗಳನ್ನು ನೋಡ ತೊಡಗಿದಳು. ಸಿಗ್ನೋರಾ ಜಿಯೋವಾನ್ನಾ ಅಚ್ಚುಕಟ್ಟಾಗಿ ಪ್ರದರ್ಶನಕ್ಕಿದ್ದ ವಸ್ತುಗಳನ್ನು ಮುಟ್ಟಿ ಮುಟ್ಟಿ ಪರೀಕ್ಷಿಸತೊಡಗಿದಳು. ಅವಳಿಗೆ ಬಾಲ್ಡಿಯಂನ ಖರೀದಿಯಲ್ಲಿ ಒಳಗೊಳ್ಳುವ ಇರಾದೆ ಇರಲಿಲ್ಲ.

ಪಿಯಾ, “ಯಾವ ಗುಣಮಟ್ಪದ ವಸ್ತುಗಳನ್ನು ಖರೀದಿಸುವುದು ಅಂತ ನೀನು ನನಗೀಗ ಹೇಳಬೇಕು” ಎಂದಳು ಪಾವ್ಲೋಗೆ.

“ಆದರೆ, ನನಗೇನೂ ಗೊತ್ತಿಲ್ಲ. ನನಗೆ ಹೇಗೆ ಗೊತ್ತಾಗಬೇಕು?” ಪಾವ್ಲೋ ಭುಜ ಹಾರಿಸುತ್ತ ಹೇಳಿದ.

“ಎಷ್ಟು ಹಣ ಖರ್ಚು ಮಾಡಬೇಕು ಅಂತ ಇದೀಯಾ? ಕನಿಷ್ಠ ಅದಾದರೂ ಹೇಳು….”

“ನಿನಗೆಷ್ಟು ಖರ್ಚು ಮಾಡಬೇಕೆಂದಿದೆಯೋ ಅಷ್ಟು…. ನನ್ನನ್ನು ಸಂಪೂರ್ಣ ನಿನಗೇ ಒಪ್ಪಿಸಿದ್ದೇನೆ….” ಎಂದು ಹೇಳುತ್ತ ಅಲ್ಲಿಯೇ ನಿಲ್ಲಿಸಿಬಿಟ್ಜ. “ಎಲ್ಲ ನಿನಗೇ ಅಂತ ತಿಳಿದುಕೋ ಬೇಕಾದರೆ” ಎಂದು ಸೇರಿಸುವವನಿದ್ದ.

ಜಿಯಾ, “ಅಮ್ಮಾ ಆನ್ನಾ!” ಎಂದು ಕರೆದಳು – ಆತ ನಿಲ್ಲಿಸಿದ್ದು ಯಾಕೆಂದು ತನಗೆ ಅರ್ಥವಾಗಿದೆ ಎಂಬ ಸತ್ಯಸಂಗತಿ ಮರೆಮಾಚಲು.

“ಈ ಬಾಲ್ಡಿಯಾನ ಜತೆ ಮಾತಾಡಿ ಏನೂ ಉಪಯೋಗವಿಲ್ಲ…. ಬೆಡ್ರೂಮ್ಗೆ ಒಂದು ಬೈಜಾಂಟೀನ್ ಬಟ್ಟೆ ತೋರಿಸಿ… ಅಗಲವಾಗಿರುವಂಥದ್ದು…. ಸರಿಯಾ? ಒಳ್ಳೆ ದರ್ಜೆಯ ಬಟ್ಜೆ…. ಸ್ವಲ್ಪ ಜಾಸ್ತಿ ಬೆಲೆಯದ್ದೇ ಇರಲಿ…. ಆಯಿತಾ?”

“ಬೆಲೆಯ ಬಗ್ಗೆ ಚಿಂತೆ ಬೇಡ!….” ಎಂದ ಬಾಲ್ಡಿಯಾ.

ಈ ಬೈಜಾಂಟೀನ್ ಬಟ್ಟೆ ಅಗಲವಾಗಿದೆ…. ಹಾಗಾಗಿ ನಿನಗಿಲ್ಲಿ ಗಾತ್ರದಲ್ಲಿ ಉಳಿತಾಯವಾಗುತ್ತೆ.”

ವ್ಯವಹಾರ ಬಹಳ ಹೊತ್ತಿನವರೆಗೂ ಸಾಗಿತು. ಅವರೆಲ್ಲ ಬಣ್ಣದ ಬಗ್ಗೆ ಚರ್ಚಿಸಿದರು. ಆನ್ನಾ ವೆನ್ಜಿ, “ನನಗಂತೂ ಹಳದಿ ಎಂದರೆ ಪಂಚಪ್ರಾಣ” ಎಂದಳು. ಗುಣಮಟ್ಟದ ಬಗ್ಗೆ, ಗಾತ್ರದ ಬಗ್ಗೆ ಬೆಲೆಯ ಬಗ್ಗೆ; ಇವರನ್ನು ವಿಚಾರಿಸುತ್ತಿದ್ದ ಯುವಕ ಆಗಲೇ ಬುದ್ದಿವಂತಿಕೆ ಯಿಂದಲೇ ಎಲ್ಲವನ್ನೂ ಗ್ರಹಿಸತೊಡಗಿದ್ದ ಅವನೀಗ ಜಿಯಾ ಒಬ್ಬಳನ್ನೇ ಮಾತಾಡಿಸತೊಡಗಿದ್ದ.

“ಇಲ್ಲ ಸಿಗ್ನೋರಿನಾ – ಅವನೊಮ್ಮೆ ನೋಡಲಿ.”

ಸುಮಾರು ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಪುಸ್ತಕಗಳಿಂದ ದೂರವೇ ಉಳಿದಿದ್ದ ಪಾವ್ಲೋ ಈಗ ತನಗಿಷ್ಟವಿಲ್ಲದ ಆದರೆ ಮಹತ್ವದ್ದು ಎಂದು ಕರೆಯಲಾಗುವ ವಸ್ತುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಈಗಾಗಲೇ ದಣಿದಿದ್ದು ಏನೋ ಯೋಚಿಸುತ್ತ ರಸ್ತೆಯನ್ನೇ ದಿಟ್ಟಿಸುತ್ತಿದ್ದ. ಒಂದು ಹಂತದಲ್ಲಿ ವಿಚಾರಿಸುತ್ತಿದ್ದ ಯುವಕ ಆಚೆ ಹೋಗಿದ್ದೇ ಅವನ ಬೆನ್ನ ಹಿಂದೆ ಈ ಮೂರೂ ಮಂದಿ ಹೆಂಗಸರು ಗುಟ್ಟಿನಲ್ಲಿ ನಗುತ್ತಿರುವುದನ್ನು ಗಮನಿಸಿದ.

ಆನ್ನಾಳಂತೂ ಉಕ್ಕುಕ್ಕಿ ಬರುತ್ತಿದ್ದ ನಗುವನ್ನು ಕರವಸ್ತ್ರದಿಂದಲೇ ತಡೆಹಿಡಿದಳು. ಪಾವ್ಲೋ ಈ ಮೂವರನ್ನೂ ಸೇರಿಕೊಂಡಾಗ ಆನ್ನಾ ನಗುವಿಗೆ ಕಾರಣವೇನೆಂದು ಹೇಳುವವಳಿದ್ದಳು. ಅಷ್ಟರಲ್ಲಿ ಜಿಯಾ ಅವಳ ತೋಳು ಹಿಡಿದು ತಡೆಯುತ್ತ:

“ಬೇಡ ಆನ್ನಾ… ನನ್ನಾಣೆ ಹೇಳಬೇಡ!”

“ಆದರೆ ಹೇಳಿದರೆ ನಷ್ಪವೇನಿದೆ ಅದರಲ್ಲಿ….” ಎಂದಳು ಆನ್ನಾ.

“ಇಲ್ಲ…. ನಷ್ಟವೇನೂ ಇಲ್ಲ….” ಎಂದು ಹೇಳುತ್ತ ಜಿಯಾ ಈಗ ಪಾವ್ಲೋನತ್ತ ತಿರುಗಿದ್ದೇ, “ನಿಂಗೂ ನಗಬೇಕೆಂದಿದೆಯಾ? ಸರಿ ಹಾಗಾದರೆ ಕೇಳು: ಆ ಮೂರ್ಖ ನನ್ನನ್ನೇ ಮದುಮಗಳು ಅಂತ ತಿಳಕೊಂಡು ಬಿಟ್ಟಿದ್ದಾನೆ….” ಎಂದಳು.

-೫-

ತನ್ನ ಹೊಸಮನೆಯ ಅಭ್ಯಾಸಕೊಠಡಿಯಲ್ಲಿ ಪಾವ್ಲೋ ಬಾಲ್ಡಿಯಾ ಆರಾಮಕುರ್ಚೆಯಲ್ಲಿ ಮೈಚಾಚಿಕೊಂಡಿದ್ದ. ತನ್ನ ಭವಿಷ್ಯದ ಹೊಚ್ಚಹೊಸಬದುಕನ್ನು, ಪುಸ್ತಕಗಳ ಓದನ್ನು ಮತ್ತೆ ಎಂದು ತನಗೇ ತಾನೇ ವಾಗ್ದಾನ ಮಾಡಿಕೊಳ್ಳುತ್ತಿದ್ದ. ಅವನೀಗ ಮನೆಯನ್ನು ವೀಕ್ಷಿಸಲು ಆಗಮಿಸಲಿದ್ದ ಟೊಲೋಸಾನಿ ಕುಟುಂಬ, ಫಿಲಿಪ್ಪೋವೆನ್ಜಿ ಮತ್ತವನ ಹೆಂಡತಿಯನ್ನು ನಿರೀಕ್ಟಿಸುತ್ತಿದ್ದ, ಇದ್ದಕ್ಕಿದ್ದಂತೆ, ಅವನಿಗೆ ಆಗಮಿಸಲಿರುವ ಅತಿಥಿಗಳ ಮೇಲೆ ತನ್ನ ಮನೆಯ ಕೋಣೆಗಳು ಹೇಗೆ ಪರಿಣಾಮಬೀರಬಲ್ಲವು ಎಂದು ತಿಳಿಯಬೇಕೆಂದೆನಿಸಿತು. ತಕ್ಷಣ ಒಂದರ ನಂತರ ಒಂದು ಕೋಣೆಯನ್ನೆಲ್ಲ ಸರಿಯಾಗಿ ಪರೀಕ್ಷಿಸಬೇಕೆಂದೆನಿಸಿತು. ಜತೆಗೆ, ಇನ್ನೊಂದು ಎಂದು, ಹತ್ತುದಿನಗಳಲ್ಲಿ ಈ ಗೂಡು ಅವನನ್ನು ಮದುಮಗಳನ್ನು ಸ್ವೀಕರಿಸಲು ಸಿದ್ಧವಾಗಿರುತ್ತದಲ್ಲ ಎಂದೂ ಅನಿಸಿತು.

ಮನೆಯ ಪರದೆಗಳನ್ನು, ಜಮಖಾನೆ-ಪೀಠೋಪಕರಣಗಳನ್ನು ನೋಡುತ್ತ ಹೋದ ಹಾಗೆ, ಅವನಿಗೆ ಒಂದು ರೀತಿಯ ಒಡೆತನದ, ಸುರಕ್ಷತೆಯ ಭಾವ ಆವರಿಸಿಕೊಂಡು ಒಳಗೊಳಗೇ ಖುಷಿಯಾಯಿತು. ಇಷ್ಟಾಗಿಯೂ, ಮನೆಯನ್ನು ಗಮನಿಸಿದಾಗೆಲ್ಲ ಆತ ಮದುವೆಯಾಗಲಿರುವ ಹುಡುಗಿಯ ಮುಖದ ಬದಲಿಗೆ ಬೇರೆಯೇ ಒಂದು ಮುಖ ಗೋಚರಿಸುತ್ತಿತು. ಅದು ಪಿಯಾ ಟೊಲೋಸಾನಿಯದು. ಬಹುಮಟ್ಟಿಗೆ, ಎಲ್ಲ ವಿಷಯಗಳಲ್ಲೂ ಅವಳ ಸಲಹೆ, ಅವಳ ಅಭಿರುಚಿ, ಅವಳ ದೂರದರ್ಶಿತ್ವವನ್ನ ಅಪೇಕ್ಷಿಸಿದ. ಡ್ರಾಯಿಂಗ್ರೂಮ್ನ ಪೀಠೋಪಕರಣದ ವಿನ್ಯಾಸವನ್ನು ಅವಳೇ ಸೂಚಿಸಿದ್ದಳು. ಉಪಯೋಗಕ್ಕೆ ಬೀಳುವ ಎಲ್ಲ ಮಹತ್ವದ ವಸ್ತುಗಳ ಖರೀದಿಗೂ ಅವಳೇ ಸಲಹೆ ಕೊಟ್ಟಿದ್ದಳು. ಬಹುದೂರದಲ್ಲಿರುವ ಮದುಮಗಳ ಜಾಗದಲ್ಲಿ ತನ್ನನ್ನೇ ಕಲ್ಪಿಸಿಕೊಂಡಿದ್ದಳು ಮಾತ್ರವಲ್ಲ ಎಂಥ ಕಡುಮೋಹಿಯೂ ಊಹಿಸಲೂ ಸಾಧ್ಯವಿಲ್ಲದಂಥ ಸುಖ ಸೌಕರ್ಯಗಳ ಹಕ್ಕನ್ನು ಮದುಮಗಳ ಪರವಾಗಿ ತೆಗೆದುಕೊಂಡಿದ್ದಳು. ಪಾವ್ಲೋ, “ನನ್ನ ಪಾಲಿಗೆ ನೀನಿಲ್ಲದೇ ಹೋಗಿದ್ದರೆ….” ಎಂದು ತನ್ನೊಳಗೇ ಹೇಳಿಕೊಂಡ. ಸ್ವತಃ ಅವನೇ ಮದುಮಗಳನ್ನು ಕೇಳದೇ ಪಿಯಾಳ ಅನುಮೋದನೆ ಸಿಗಲೆಂದು ಕೆಲವಸ್ತುಗಳನ್ನು ಖರೀದಿಸಿ ತಂದಿದ್ದ. ಖರೀದಿಸಿದ್ದ ಈ ವಸ್ತುಗಳು ಸರಳಜೀವನಕ್ಕೆ ಒಗ್ಗಿ ಹೋಗಿರುವ ಎಲೀನಾಗೆ ಅರ್ಥವಾಗದಂಥವುಗಳು; ಪ್ರಾಯಶಃ ಅವಳು ಇದುವರೆಗೂ ಉಪಯೋಗಿಸದೆ ಇರುವಂಥವುಗಳು ಎಂದು ಪಾವ್ಲೋಗೆ ಮೊದಲೇ ಗೊತ್ತಿತ್ತು. ಆದರೆ ಆತ ಇದನ್ನೆಲ್ಲ ಪಿಯಾಳಿಗಾಗಿ ಖರೀದಿಸಿದ್ದ – ಮನೆಯನ್ನು ಕೂಡಾ ಅವಳಿಗಾಗಿಯೇ ಕಟ್ಟಿದ್ದನೋ ಎಂಬಂತೆ….

ಕೊನೆಗೂ ಅತಿಥಿಗಳು ಆಗಮಿಸಿದರು. ಫಿಲಿಪ್ಪೋ ವೆನ್ಜಿ ಮನೆಯನ್ನಾಗಲೀ ಖರೀದಿಸಿದ ವಸ್ತುಗಳನ್ನಾಗಲೀ ನೋಡಿಯೇ ಇರಲಿಲ್ಲ. ಅದನ್ನೆಲ್ಲ ತಕ್ಷಣ ಸಮರ್ಪಕ ವಿವರಣೆಗಳೊಂದಿಗೆ ತಿಳಿಸುವ ಜವಾಬ್ದಾರಿಯನ್ನು ಪಿಯಾ ಮತ್ತು ವೆನ್ಜಿಯ ಹೆಂಡತಿ ವಹಿಸಿಕೊಂಡರು. ದಣಿದು ಸುಸ್ತಾಗಿದ್ದ ಸಿಗ್ನೋರಾ ಜಿಯೊವಾನ್ನಾಳನ್ನು ಪಾವ್ಲೋ ವಿಶ್ರಮಿಸಲೆಂದು ಡ್ರಾಯಿಂಗ್ರೂಮ್ಗೆ ಕರಕೊಂಡು ಹೋದ. ವಿಶಾಲ ಬಾಲ್ಕನಿಯ ಕಿಟಕಿಗಳನ್ನು ತೆರೆದರೆ ಅಲ್ಲಿಂದ ಹೊರಗಡೆ ವೆಂಟೆ ಸೆಟ್ಟಂಬ್ರೆ ಊರು ಕಾಣಿಸುತ್ತಿತ್ತು.

“ಓಹ್! ಎಷ್ಟು ಸುಂದರವಾಗಿದೆ! ನೀನು ಹೋಗು ಬಾಲ್ಡಿಯಾ…. ನಾನು ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ಆಮೇಲೆ ನನ್ನ ಟೈಮ್ ನೋಡಿಕೊಂಡು ಸುತ್ತಾಡುವೆ” ಎಂದು ಉದ್ಗರಿಸಿದಳು ಸಿಗ್ನೋರಾ ಜೊಯೋವಾನ್ನಾ.

“ಅದ್ಭುತ ಬೆಳವಣಿಗೆ…. ಬಹುಮಟ್ಟಿಗೆ ಎಲ್ಲವೂ ರೆಡಿಯಾಗಿದೆ! ನೋಡು ವೆನ್ಜಿ ನೋಡಲ್ಲಿ ಆ ಎರಡು ಕನ್ನಡಿಗಳು…. ಎಷ್ಟು ಚೆಂದ ಇವೆ! ಅಲ್ಲೀಗ ಬಾಗಿರುವ ಎರಡು ಹೂದಾನಿಗಳ ಅಗತ್ಯವಿದೆ! ನಿನ್ನ ಮದುವೆಯಾಗುವವಳಿಗೆ ಹೂಗಳಂದರೆ ಇಷ್ಣವೆ ಬಾಲ್ಡಿಯಾ?” ಎಂದು ಕೇಳಿದಳು ಪಿಯಾ.

“ಹೌದೆಂದು ತೋರುತ್ತದೆ.”

“ಸರಿ; ಹಾಗಾದರೆ ಎರಡು ಹೂದಾನಿಗಳನ್ನು ತಂದರಾಯಿತು. ಹೆದರಬೇಡ ನಾನೇ ಖರೀದಿಸುವೆ. ಅಂದ ಹಾಗೆ ವೆನ್ಜಿ…. ಮನೆ ಹೇಗನಿಸಿತು ನಿನಗೆ?”

“ನನಗೆ ತುಂಬಾ ಅಂದರೆ ತುಂಬಾ ಇಷ್ಟವಾಯಿತು” ಪುನರುಚ್ಚರಿಸಿದ ವೆನ್ಜಿ.

ಆನ್ನಾ ಮೊದಲು ಗಂಡನತ್ತ ನೋಡಿ, ನಂತರ ಬಾಲ್ಡಿಯಾನತ್ತ ತಿರುಗಿ, ಅದೇ ಮಾತನ್ನು ಪುನರುಚ್ಚರಿಸಬೇಕೆಂದಿದ್ದಳು, ತಡೆದುಕೊಂಡಳು.

ಈಗ, ಅವರೆಲ್ಲ ಡೈನಿಂಗ್‍ರೂಮ್ನಿಂದ ಬೆಡ್ರೂಮ್ಮನ್ನು ಹೊಕ್ಕರು.

“ನಾಮ ಹೇಳಬೇಕೆಂದುಕೊಂಡಿದ್ದೆ! ನಾವು ಅದನ್ನು ಮರೆತೇಬಿಟ್ಟಿದ್ದೇವೆ ನೋಡು!! ಪವಿತ್ರ ತೀರ್ಥದ ಬಟ್ಟಲು ಎಲ್ಲಿದೆ?”

“ಪವಿತ್ರ ತೀರ್ಥದ ಬಟ್ಟಲು ಕೂಡಾ ಬೇಕೇನು?” ಪಾವ್ಲೋ ಮುಗುಳ್ನಕ್ಕ.

“ಖಂಡಿತ ಬೇಕು! ಬಾಲ್ಡಿಯಾನ ಹೆಂಡತಿ ಬಹಳ ದೈವಭಕ್ತೆ. ಅಲ್ಲವೆ ಬಾಲ್ಡಿಯಾ? ಎಲ್ಲರೂ ನಿನ್ನ ಹಾಗೆ ನಾಸ್ತಿಕರು ಅಂತ ನೀನು ತಿಳಿದುಕೊಂಡಿದ್ದೆಯಾ?”

ವೆನ್ಜಿ, ತಮಾಷೆಗಾಗಿ, “ನೀನು ನಿತ್ಯ ಸಂಜೆ ಮಲಗುವ ಮುನ್ನ ಪ್ರಾರ್ಥಿಸುತ್ತೀಯೇನು?”

“ಹೌದು…. ಪವಿತ್ರತೀರ್ಥದ ಬಟ್ಟಲು ಇದ್ದಿದ್ದರೆ ನಾನೂ ಪ್ರಾರ್ಥಿಸುತ್ತಿದ್ದೆ” ಎಂದಳು.

ಈಗ ಪಾವ್ಲೋ ಮತ್ತು ವೆನ್ಜಿ ನಗತೊಡಗಿದರು. ಪಿಯಾ ಟೊಲೋಸಾನಿ ಇಷ್ಟೊಂದು ಸೊಗಸಾಗಿ, ವಯ್ಯಾರದಿಂದ ಮಾತಾಡಿದ್ದನ್ನೂ ಪಾವ್ಲೋ ನೋಡಿದ್ದೇ ಇಲ್ಲ. ಈ ರೀತಿ ಮಾತಾಡುವುದರಿಂದ ತಾನು ಪ್ರೇಮದಲ್ಲಿ ಮೆಲ್ಲನೆ ಸಿಲುಕಬಹುದೆಂಬ ಅರಿವು ಅವಳಲ್ಲಿ ಸ್ವಲ್ಪವೂ ಇರಲಿಲ್ಲ, ಅಥವಾ ಬಾಲ್ಡಿಯ ಪ್ರೇಮಗೀಮದ ಯೋಚನೆಯನ್ನೇ ಸಂಪೂರ್ಣ ತಿರಸ್ಕರಿಸಿದ್ದಾನೆ ಎಂಬ ಸಂಗತಿಯಿಂದ ಅವಳಲ್ಲಿ ಯಾವ ಫರಕೂ ಬೀಳಲಿಲ್ಲ. ಈ ಎರಡೂ ವಿಚಾರಗಳು ಅವಳಲ್ಲಿ ಹರ್ಷೋಲ್ಲಾಸ ಉಕ್ಕಿಸಿ ಅವನಲ್ಲಿ ಸಿಟ್ಟು ಬರಿಸಿದರೂ ಅವನನ್ನು ಬಹುಮಟ್ಟಿಗೆ ಆಕರ್ಷಿಸಿದವು ಕೂಡ. ಈ ನಡುವೆ ಪಿಯಾಳ ಉಪಸ್ಥಿತಿಯಲ್ಲಿ ಅವನಿಗೆ ಮದುಮಗಳ ನೆನಪು ಸಂಪೂರ್ಣ ಮಾಸಿಹೋಗಿತ್ತಾದರೂ ಅತ್ತ ಜಿಯಾ ಮಾತ್ರ ಯಾವಾಗಲೂ ಬರೇ ಮದುಮಗಳ ಕುರಿತೇ ಮಾತಾಡುತ್ತ, ಚಿಂತಿಸುತ್ತ, ಅವಳು ಸ್ಮೃತಿಪಟಲದಿಂದ ಮರವೆಯಾಗದಂತೆ ಎಚ್ಚರವಹಿಸುತ್ತಿದ್ದಳು. ತನ್ನ ಭಾವನೆಗಳ, ಯೋಚನೆಗಳ ನಾಜೂಕುತನಕ್ಕೆ ಮದುಮಗಳು ದೂರವಿದ್ದುದೇ ಕಾರಣ ಎಂದೂ ಹೇಳುತ್ತಿದ್ದಳು. ಹೀಗೆಲ್ಲ ಹೇಳುವುದರ ಮೂಲಕ ‘ಆ ಹುಡುಗಿಗೆ ಹೋಲಿಸಿದರೆ ತಾನೇ ಮೇಲುಮಟ್ಟದವಳು’ ಎಂದು ಪಾವ್ಲೋಗೆ ನಿರಂತರ ನೆನಪಿಸುವಂತಿರುತ್ತಿದ್ದವು.

ಜಿಯಾಳ ವೈಯಾರಕ್ಕೆ ಪೂರ್ತಿ ತದ್ವಿರುದ್ಧವಾಗಿ ಫಿಲಿಪ್ಪೋ ಸ್ವಭಾವತಃ ಸಿಡುಕಿನ ಮನುಷ್ಯನಾಗಿದ್ದ. ಜಿಯಾ ಮಾತ್ರ ನಿರಂತರ ಹಾಸ್ಕಚಟಾಕಿಗಳನ್ನು ಅವನತ್ತ ಎಸೆಯುತ್ತಲೇ ಇದ್ದಳು. ಅವಳ ಸಣ್ಣ ಸ್ವರವೂ ಸೂಜಿ ಚುಚ್ಚಿದ ಹಾಗೆ ವ್ಯಂಗ್ಯವಾಗಿ ಕಟುಕುತ್ತಿತ್ತು. ವೆನ್ಜಿ ಕೂಡ ಮುಗುಳ್ನಗುತ್ತ ಇರಿಯುವಂಥ ಮಾತುಗಳಿಂದ ಪ್ರತಿಕ್ರಿಯಿಸುತ್ತಿದ್ದ.

ನಡುವೆ, ಸ್ವಲ್ಪ ಕಾಲ ಫಿಲಿಪ್ಪೊನನ್ನು ಕಾಣದ ಪಾವ್ಲೋಗೆ ಅದೇ ರೂಢಿಯಾಗಿಬಿಟ್ಟಿತ್ತು. ಹಿಂದಿನಂತೆ ಆತ ಜೀವದ ಗಳೆಯನಾಗಿಯೇನೂ ಉಳಿದಿರಲಿಲ್ಲ. ಈಗಂತೂ ಈ ಹೊಸಮನೆಯಲ್ಲಿ ತನ್ನ ಗೆಳೆಯನ ಖಿನ್ನ ಮನಸ್ಥಿತಿ ಅವನಿಗೆ ಮತ್ತೂ ಭಾರವೆನಿಸತೊಡಗಿತು.

“ಏನಾಯಿತು?” ಕೇಳಿದ.

“ಏನಿಲ್ಲ, ಮಾರಾಯಾ….. ಹೀಗೆ!” ಎಂದಿನಂತೆ ಪ್ರತಿಕ್ರಿಯಿಸಿದ ಫಿಲಿಪ್ಪೋ.

“ವೆನ್ಜಿಗೆ ಈ ಜಗತ್ತನ್ನೆ ಬದಲಾಯಿಸಬೇಕಂತ ಇದೆ.” ಚುಡಾಯಿಸುತ್ತ ಜಿಯಾ ಅಂದಳು.

“ಹೌದು…. ಜಗತ್ತಿನಲ್ಲಿ ಹೆಂಗಸರೇ ಇಲ್ಲದಂತೆ ಬದಲಾಯಿಸಬೇಕೆಂದಿದೆ.”

“ಅದು ಸಾಧ್ಯವಿಲ್ಲ! ಆನ್ನಾ, ಹೇಳು ಮಾರಾಯ್ತಿ ಅವನಿಗೆ! ನಾವು ಹೆಂಗಸರಿಲ್ಲದೆ ಗಂಡಸರಾದ ನೀವು ಏನು ಮಾಡುತ್ತೀರಿ? ಬಾಲ್ಡಿಯಾ…. ಸ್ವಲ್ಪ ಹೇಳು ಅವನಿಗೆ!”

“ಏನೂ ಇಲ್ಲ! ನನ್ನ ಪ್ರಕಾರ ಅದು ನಿಜವೆ! ಈ ಮನೆಯೇ ಅದಕ್ಕೆ ಸಾಕ್ಷಿ.”

ತಲೆಯಾಡಿಸಿದ ಫಿಲಿಪ್ಪೋ ಮನೆಯನ್ನೊಮ್ಮೆ ತಾನೇ ಸ್ವತಃ ನೋಡಿಬರುತ್ತೇನೆಂದು ಹೊರಟುಹೋದ. ವರ್ಷಗಳ ಹಿಂದೆ ಜಿಯಾ ಟೊಲೋಸಾನಿ, ತನ್ನ ಮನೆಯನ್ನು ಸಜ್ಜುಗೊಳಿಸುವಾಗ ತಾನೂ ಬಾಲ್ಡಿಯಾನಂತೆ ಬೇಕಾಬಿಟ್ಟಿ ಹಣ ಖರ್ಚುಮಾಡಿದ್ದಲ್ಲಿ ಅವಳಿಗೆ ತನ್ನ ಅಭಿರುಚಿಯನ್ನು ಪ್ರದರ್ಶಿಸಲು, ತನ್ನ ನಿರ್ಧಾರದಂತೆಯೇ ನಡೆದುಕೊಳ್ಳಲು ಎಷ್ಟೊಂದು ಸಂತೋಷವಾಗುತ್ತಿತ್ತಲ್ಲ ಎಂದನಿಸಿತು.

ಡೈನಿಂಗ್‍ರೂಮ್ನಲ್ಲಿ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಸಿಗ್ನೋರಾ ಜಿಯೋವಾನ್ನಾ ಅವನಿಗೆ ಸಿಕ್ಕಳು.

“ಎಲ್ಲವೂ ಅಚ್ಚುಕಟ್ಟಾಗಿದೆ…. ಅತ್ಯಂತ ಸಮರ್ಪಕವಾಗಿ ಇಡಲಾಗಿದೆ…. ಎಂದಿಷ್ಟೇ ಹೇಳಬಹುದು!” ಎಂದಳು. ನಂತರ ತನ್ನ ಮಗಳ ಕುರಿತು ತನ್ನಲ್ಲೇ “ಎಷ್ಟೊಂದು ಸಮರ್ಥಳು ಅವಳು!” ಎಂದುಕೊಂಡಳು.

ಮನೆಯಲ್ಲಿದ್ದ ಸಿಗ್ನೋರಾ ಜಿಯೋವಾನ್ನಾ, ವೆನ್ಜಿ, ಬಾಲ್ಡಿಯಾರ ಮಧ್ಯೆ ಆನ್ನಾ ಒಂದು ಆಧಾರಪೀಠದಂತೆ ಕಂಡುಬಂದು, ಅದನ್ನು ಪಿಯಾಟೊಲೋಸಾನಿ ಏರಿನಿಂತವಳಂತೆ ಕಂಡಳು.

“ಇಲ್ಲೀಗ ಮದುಮಗಳನ್ನು ಬಿಟ್ಟರೆ ಇನ್ಕಾವ ಕೊರತೆಯೂ ಇಲ್ಲ.” ಎಂದ ಜಿಯಾ, “ಕೂತುಕೊಳ್ಳಿ ಪಿಯಾನೋ ನುಡಿಸುವಾ” ಎಂದಳು.

ನಂತರ, ಅತ್ಯಂತ ಭಾವುಕತೆಯಿಂದ ಗ್ರೇಗನ ರಚನೆಯೊಂದನ್ನು ನುಡಿಸಿದಳು.

-೬-

ಮದುವೆಯಾದ ಸುಮಾರು ಮೂರುತಿಂಗಳ ನಂತರ ಪಾವ್ಲೋ ಬಾಲ್ಡಿಯಾ ಸುದೀರ್ಘ ಪ್ರವಾಸ ಮುಗಿಸಿ ಹೆಂಡತಿಯೊಂದಿಗೆ ರೋಮ್ಗೆ ವಾಪಾಸಾದ. ಪ್ರಯಾಣದ ವೇಳೆ ಎಲೀನಾ ಅಸ್ವಸ್ಥಳಾಗಿದ್ದಳು. ರೋಮ್ ತಲುಪಿದ್ದೇ ಬಹಳ ದಿನಗಳ ತನಕ ಹಾಸಿಗೆಯಲ್ಲೇ ಮಲಗಬೇಕಾಗಿ ಬಂತು.

ಪಿಯಾಟೋಲಾಸಾನಿ ಅವಳ ಭೇಟಿಗೆ ತುಂಬ ಕಾತರಳಾಗಿದ್ದಳು. ಅತ್ತ ಆನ್ನಾ ವೆನ್ಜಿ ಕೂಡ ನಗರದ ರೀತಿ ನೀತಿಗಳನ್ನು (ಇದನ್ನು ಅವಳು ಪಿಯಾಳಿಂದ ಕಲಿತಿದ್ದಳು) ಪ್ರದರ್ಶಿಸಲು ಬಹಳ ಉತ್ಸುಕಳಾಗಿದ್ದಳು. ಫಿಲಿಪ್ಪೋ ವೆನ್ಜಿ ಮಾತ್ರ ಬಾಲ್ಡಿಯಾ ಜತೆಗಿದ್ದ ಅವಳನ್ನು ಕ್ಷಿಪ್ರವಾಗಿ ಭೇಟಿ ನೀಡಿದ್ದನಾದರೂ ಉಳಿದ ಗೆಳೆಯರ್‍ಯಾರೂ ಎಲೀನಾಳನ್ನು ಕಂಡೇ ಇರಲಿಲ್ಲ.

“ಓಹ್! ನೀನವಳನ್ನೂ ನೋಡಿದೆಯಾ? ಸರಿ ಹಾಗಾದರೆ ಹೇಳು ನೋಡೋಣ” ಪಿಯಾ ತನ್ನ ಆತಂಕ ನಿಗ್ರಹಿಸುತ್ತ ಕೇಳಿದಳು.

ಪ್ರತಿಕ್ರಿಯಿಸುವ ಗೋಜಿಗೇ ಹೋಗದ ವೆನ್ಜಿ ಬಹಳ ಹೊತ್ತಿನ ತನಕ ಅವಳನ್ನೇ ದುರುಗುಟ್ಟುತ್ತ ನಿಂತ. ಆಮೇಲೆ ತನ್ನ ಅಭಿಪ್ರಾಯ ತಿಳಿಸಿದ:

“ಹ್ಞೂಂ…. ಅಷ್ಟೊಂದು ಕುತೂಹಲ ಒಳ್ಳೆಯದಲ್ಲ….”

“ಓಹ್ ಸಾಕಪ್ಪ ಸಾಕು” ಎಂದುದ್ಗರಿಸಿದ ಪಿಯಾ ಮುಖ ತಿರುಗಿಸಿದಳು.

“ನಾನು ಹೇಳುತ್ತಿದ್ದೆನಲ್ಲ…. ನಾನವಳನ್ನು ಕಂಡಿದ್ದೇನೆ…. ಅವಳು ಆರಾಮವಾಗಿದ್ದಾಳೆ ಸಿಗ್ನೋರಿನಾ ಪಿಯಾ…. ತುಂಬಾನೇ ಆರಾಮಾಗಿದ್ದಾಳೆ” ಎಂದು ವೆನ್ಜಿ ಹೇಳುತ್ತ ಹೋದ.

“ಸಂತೋಷ” ಪಿಯಾ ತುಸು ಸಿಟ್ಟಿನಿಂದಲೇ ಹೇಳಿದಳು.

“ನಿಜದಲ್ಲಿ, ಅವಳು ಮಂಕಾಗಿದ್ದಳು.”

“ಪಾಪ, ಅಂದ ಹಾಗೆ ವೆನ್ಜಿ, ಅವನ ಹೆಂಡತಿ ಈಗಲೂ ಹಾಸಿಗೆಯಲ್ಲೇ ಇದ್ದಾಳೆಯೇ?” ಎಂದು ಪಿಯಾ ಡೌಲಾನತ್ತ ತಿರುಗಿ ಕೇಳಿದಳು.

“ಇಲ್ಲ…. ಇಲ್ಲ.”

“ಆಹ್…. ಹಾಗಾದರೆ ಬೇಗನೆ ನಾವು ಅವಳನ್ನು ಕಾಣಬೇಕು!”

ಆದರೂ, ಅವರೆಲ್ಲ ಬಹಳ ಕಾಲ ಕಾಯಬೇಕಾಯಿತು. ಬಾಲ್ಡಿಯಾನಿಗೂ ಗೆಳೆಯರ, ಅದರಲ್ಲೂ – ವಿಶೇಷವಾಗಿ ಪಿಯಾ ಟೊಲೋಸಾನಿಯಾ – ಕುತೂಹಲ ತಣಿಸಲು ತನ್ನ ಹೆಂಡತಿಯನ್ನೊಮ್ಮೆ ತನ್ನ ಗಂಡನ ಅಪೇಕ್ಷೆಯಂತೆ ಅವನ ಗೆಳೆಯರನ್ನು ಭೆಟ್ಟಿಯಾಗಲು ಒಪ್ಪಲಿಲ್ಲ. ಅಷ್ಟೇ ಅಲ್ಲ, ತೀರಾ ವಿನಯಪೂರ್ವಕವಾಗಿ, ಅತ್ಯಂತ ಜಾಣ್ಮೆಯಿಂದ ಆತ ತನ್ನ ಇಚ್ಛೆಯನ್ನು ವ್ಯಕ್ತಪಡಿಸಿದರೂ ಅವಳು ಒಪ್ಪಲು ತಯಾರಿರಲಿಲ್ಲ. ತನಗಿಷ್ಟವಾದ ಉಡುಪು ಧರಿಸುವಂತೆ ಅವಳನ್ನು ಒಲಿಸಲೂ ಅವನಿಂದ ಸಾಧ್ಯವಾಗಲಿಲ್ಲ. ಅವನ ಪ್ರಕಾರ ಅವಳ ಕುತ್ತಿಗೆಗೆ ಒಪ್ಪದ ಒಂದು ಬಗೆಯ ರಿಬ್ಬನ್‍ನ್ನು ಕೂಡಾ ತೆಗೆಯಿಸಲು ಅವನಿಂದಾಗಲಿಲ್ಲ.

“ಹೀಗೆಲ್ಲ ಹೇಳಿದರೆ ನಾನು ಹೋಗುವುದೇ ಇಲ್ಲ” ಎಂದು ಎಲೀನಾ ಮಾತುಕತೆಯನ್ನು ಮೊಟಕುಗೊಳಿಸಿಬಿಟ್ಟಳು.

ಪಾವ್ಲೋ ಅಸಮಾಧಾನದಿಂದ ಕಣ್ಣುಗಳನ್ನು ಮುಚ್ಚಿ ಕೊಳ್ಳುತ್ತ, “ತಾಳ್ಮೆಯಿಂದಿರು” ಎಂದು ತನಗೆ ತಾನೇ ಹೇಳಿಕೊಂಡ. ದುರದೃಷ್ಟವಶಾತ್, ಆತ ಒಂದು ಜಟಿಲವಾದ ಪಾತ್ರವನ್ನು ಎದುರುಹಾಕಿಕೊಂಡಿದ್ದ. ಅವಳನ್ನು ಬಲುಜಾಣೆಯಿಂದ ಹೇಗಿದ್ದಾಳೋ ಹಾಗೇ ಸ್ವೀಕರಿಸಬೇಕಾದ ಅನಿವಾರ್ಯತೆಯಿತ್ತು. ಇಲ್ಲವಾದಲ್ಲಿ ಜಗಳ ಗ್ಯಾರಂಟಿ! ಪಾವ್ಲೋಗೆ ಯಾಕೋ ತಾನಿದನ್ನು ನಿಭಾಯಿಸಬಲ್ಲೆ ಎಂದನಿಸಿತು. ನೂತನ ವಧು ಇಷ್ಟೊಂದು ಕೆಲಸ ಕೊಡ್ತಾ ಇದ್ದಾಳೆ ಎಂದರೆ ಒಂದು ಒಳ್ಳೆ ನೌಕರಿ ಸಿಕ್ಕಂತೆ ಆಯಿತಲ್ಲ ! ಅವಳನ್ನು ತನಗೆ ಬೇಕಾದ ಆಕಾರಕ್ಕೆ ಮೆಲ್ಲನೆ ತರಬಲ್ಲೆ ಎಂಬುದರಲ್ಲಿ ಅವನಿಗೆ ಈಗ ಯಾವ ಸಂಶಯವೂ ಉಳಿಯಲಿಲ್ಲ. ಇದಕ್ಕೆ ತಾಳ್ಮೆಯೂ ಬೇಕಿತ್ತು!

ಹೀಗೆ ಧರ್‍ಯ ಮಾಡಿಕೊಂಡು ಮೊದಲು ಆತ ತನಗೆ ಬುದ್ಧಿವಂತ ಸಲಹೆಗಳನ್ನು ಕೊಟ್ಟು ಬಲುಜಾಣ್ಮೆಯಿಂದ ಸಹಕರಿಸುವ ಪಿಯಾಟೊಲೋಸಾನಿಯನ್ನು ಎಲೀನಾಗೆ ಪರಿಚಯಿಸಿದ. ಪರಿಚಯಿಸುವಾಗ, ನಗುತ್ತ ಜೋಕ್ ಮಾಡುತ್ತ, ಹೆಂಡತಿಯ ದೌರ್‍ಬಲ್ಯಗಳು ಗೊತ್ತಾಗದ ಹಾಗೆ ಎಚ್ಚರವಹಿಸಿದ.

ಎಲೀನಾಳನ್ನು ನೋಡಿದ್ದೇ, ಪಿಯಾಗೆ ಅವಳೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಗೊತ್ತಾಗಿಬಿಟ್ಟಿತು. ಅವಳ ವೇಷಭೂಷಣ ಇವಳಿಗಿಷ್ಟವಾಗಲಿಲ್ಲ. ಆದರೆ ಎಲೀನಾಳ ಮೊಂಡು ಸ್ವಭಾವ, ಮೌನವಾಗಿದ್ದ ರೀತಿ, ಯಾವುದೋ ವೈರುಧ್ಯವನ್ನು ವ್ಯಕ್ತಪಡಿಸುವಾಗ ಅವಳ ಮುಖ ಬೆಳಗಿದ್ದು, ಗಂಡನ ಮಾತಿಗೆ ಅಸಮ್ಮತಿಸಿದ್ದು, ಅವನು ಭಯಭೀತನಾಗಿ ನೋಡುತ್ತಿದ್ದುದು – ಇವೆಲ್ಲವೂ ಜಿಯಾಗೆ ಬೇರೆಯೇ ಏನನ್ನೋ ಸೂಚಿಸಿದವು.

“ಇಲ್ಲಪ್ಪ ಇಲ್ಲ. ಸಾಧ್ಯವೇ ಇಲ್ಲ…. ಅವನಿಷ್ಟದಂತೆ ಏನು ಬೇಕಾದರೂ ಮಾಡಲಿ. ಎಲೀನಾಳ ಗಂಡ ತಾನೇ ಅವನು” ಎಂದುಕೊಂಡಳು.

ಬಾಲ್ಡಿಯಾನತ್ತ ನೋಡಿದ ಪಿಯಾ, ಪ್ರೀತಿಯಿಂದ ನಕ್ಕಳು. ಪಾವ್ಲೋ ತನ್ನ ಹೆಂಡತಿಯನ್ನು ನೋಡಿ ಕಸಿವಿಸಿಗೊಂಡವನ ಹಾಗೆ ಮುಗುಳ್ನಕ್ಕ.

“ವಿಚಿತ್ರ ಹೆಂಗಸು! ನನಗಿಷ್ಟವಾದಳು…. ನನಗಿಷ್ಟವಾಗಿಬಿಟ್ಟಳು” ಎಂದು ಪಿಯಾಟೊಲೋಸಾನಿ ಗುರುವಾರ ಸಂಜೆ, ತನ್ನ ಗೆಳತಿಯರಿಗೆ ಸಾರಿ ಹೇಳಿದಳು.

ಕಣ್ಣಾಡಿಸುತ್ತ ಪಿಯಾಳನ್ನು ನೋಡಿದ ಕೂತ ಕುರ್ಚಿಯಲ್ಲೇ ಚಡಪಡಿಸುವಂತಾಯಿತು.

“ಕೊನೆಗೂ ಅವಳು ಬಂದೇಬಿಟ್ಟಳು…. ಸರಿ ಅವಳು ಹೇಗೆ ಕಾಣಿಸುತ್ತಾಳೆ! ನಿನಗಿಷ್ಟವಾದಳು ಅಂತೀಯಲ್ಲ ? ನಿಜವಾಗಿಯೂ ನಿನಗಿಷ್ಟವಾದಳೇ ?”

ಅವಳ ಹೊರರೂಪದ ಮಟ್ಟಿಗೆ ಹೇಳುವುದಾದರೆ, ಇಲ್ಲ ತನಗಿಷ್ಟವಾಗಿಲ್ಲ ಎಂದು ಪಿಯಾ ದೃಢವಾಗಿ ಆನ್ನಾಗೆ ಹೇಳಿದಳು.

“ಅವಳ ಉಡುಪುಗಳಂತೂ ಭಯಹುಟ್ಟಿಸುವಂತಿದ್ದವು…. ಕೂದಲು ಬಾಚಿಕೊಳ್ಳುವುದು ಹೇಗಂತ ಅವಳಿಗೆ ಗೊತ್ತೇ ಇಲ್ಲ…. ನಡವಳಿಕೆಯೂ ಕೆಟ್ಟದಾಗಿದೆ! ವಿಶೇಷವಾಗಿ ತನ್ನ ಗಂಡನ ಜತೆ ಆದರೆ ನನಗ್ಯಾಕೋ ಅವಳು ಅದೇ ರೀತಿ ಇಷ್ಟವಾಗಿಬಿಟ್ಟಳು! ಹಾಗೆ ನೋಡಿದರೆ ಬಾಲ್ಡಿಯಾನೇ ಅಹಂಕಾರಿ ಅಂತ ನಿನಗೆ ಅನಿಸುವುದಿಲ್ಲವೆ ?”

“ಅಹಂಕಾರಿ…. ಹೌದೌದು…. ನಾನು ಯಾವಾಗಲೂ ಹೇಳುವುದಿಲ್ವೇ!” ಎಂದಳು ಆನ್ನಾ. ಈ ಭೇಟಿಯಲ್ಲಿ ಫಿಲಿಪ್ಪೊವೆನ್ಜಿ ಎಂದಿಗಿಂತ ತುಸುಜಾಸ್ತಿಯೇ ಮಂಕಾಗಿದ್ದ.

-೭-

ಪಿಯಾ ಟೋಲೋಸಾನಿಗೆ, ಎಲೀನಾ ಬಾಲ್ಡಿಯಾ ಇಷ್ಟವಾದಷ್ಟೂ, ಇತ್ತ ಆನ್ನಾವೆನ್ಜಿಯ ಕ್ಷೋಭೆ, ನರಳಾಟ ಹೆಚ್ಚುತ್ತಹೋಯಿತು. ಅತ್ತ, ಪಿಯಾಗೆ ಜಾಸ್ತಿಗಮನಕೊಡದ ಎಲೀನಾ ತನ್ನ ಪಾಡಿಗೆ ತಾನು ಮೌನವಾಗಿದ್ದಳು. ಅವಳ ಕೆಲವು ಸಲಹೆಗಳನ್ನಷ್ಟೇ ಸ್ವೀಕರಿಸಿದಳು. ಕಾಲಕಾಲಕ್ಕೆ ತನ್ನ ಮೊಂಡುಸ್ವಭಾವ ಅಲ್ಪಸ್ವಲ್ಪ ತಾಳೆಯಾಗದಿದ್ದಾಗ ಮಾತ್ರ. ಆತ ಅಗತ್ಯಕ್ಕಿಂತ ಹೆಚ್ಚೇ ತೃಪ್ತನಾಗಿಬಿಟ್ಟರೆ, ಅವಳು ತಕ್ಷಣ ಮೌನವಾಗುತ್ತಿದ್ದಳು. ಇದು ಪಿಯಾಗೆ ಸುತರಾಂ ಇಷ್ಟವಿರಲಿಲ್ಲ.

“ನೋಡು…. ಅವಳೆಲ್ಲ ಕೆಡಿಸುತ್ತಿದ್ದಾಳೆ” ಎಂದಳು ಬಾಲ್ಡಿಯಾಗೆ.

“ತಾಳ್ಮೆಯಿಂದಿರು!” ಎಂದು ಪಾವ್ಲೋ ಕಣ್ಮುಚ್ಚಿ ಅಸಮಾಧಾನದಿಂದಲೇ ಉದ್ಗರಿಸಿದ. ಮತ್ತೆಲ್ಲಿ ತನ್ನ ತಾಳ್ಮೆಕೆಡುವುದೋ ಎಂಬ ಭಯದಿಂದ ಮನೆಯಿಂದ ಹೊರಗೆ ಹೋಗಿಬಿಡುತ್ತಿದ್ದ. ಈ ನಡುವೆ, ಅವನಿಗೆ ಪಿಯಾಟೊಲೋಸಾನಿ ಎಷ್ಟೊಂದು ದಯಾಮಯಿ ಎಂದನಿಸುತ್ತಿತ್ತು. ಎಲೀನಾ ಅವಳೊಂದಿಗೆ ಗೆಳೆತನ ಬೆಳಸಿದ್ದರೆ ಎಷ್ಟು ಚೆನ್ನಾಗಿತ್ತು! ಹೃದಯ-ಮನಸ್ಸುಗಳೆರಡನ್ನೂ ತೆರೆಯಿಸಿಬಿಡುತ್ತಿದ್ದಳಲ್ಲ ಅನಿಸುತ್ತಿತ್ತು. ಹೆಂಗಸರಿಬ್ಬರೂ ಪರಸ್ಪರ ಚೆನ್ನಾಗಿಯೇ ಅರ್ಥೈಸಿ ಕೊಳ್ಳುತ್ತಿದ್ದರಲ್ಲ ಎಂದನಿಸುತ್ತಿತ್ತು. ಸಿಗ್ನೋರಿನಾ ಪಿಯಾ ಎಷ್ಟೊಂದು ವಿವೇಚನೆಯುಳ್ಳವಳು; ಒಳ್ಳೆಯ ನಡೆಯವಳು! “ಯಾರಿಗ್ಗೊತ್ತು…. ಸ್ವಲ್ಪ ಸ್ವಲ್ಪ ಬದಲಾಯಿಸುತ್ತಿದ್ದಳೇನೋ” ಎಂದುಕೊಂಡ ಪಾವ್ಲೋ.

ಹೊತ್ತಲ್ಲದ ಹೊತ್ತಿನಲ್ಲಿ ಮನೆಬಿಟ್ಟು ರೂಢಿಯಿಲ್ಲದ ಪಾವ್ಲೋ ಈಗ ರೋಮ್ನ ಬೀದಿಗಳಲ್ಲಿ ಕಂಗೆಟ್ಟ. ಅತ್ತಿತ್ತ ಆದಷ್ಟು ಹೊತ್ತು ಗೊತ್ತುಗುರಿಯಿಲ್ಲದೆ ಅಲೆದಾಡಿ ಬೇಸರ ಕಳಯಲೆಂದು ನೇರ ಫಿಲಿಪ್ಪೋ ವೆನ್ಜಿ ಯ ಮನೆಗೆ ಹೋದ. ಫಿಲಿಪ್ಪೋ ಕೆಲಸ ಮಾಡುತ್ತಿರುವಾಗ ತಾನು ಏನಿಲ್ಲದಿದ್ದರೂ ಸ್ವಲ್ಪ ಓದಬಹುದಲ್ಲ ಎಂದುಕೊಂಡ.

“ಓಹ್…. ನೀನಾ! ಬಾ…. ಬಾ…. ಒಳ್ಳೆಯದು. ಯಾವುದಾದರೂ ಪುಸ್ತಕ ತಗೋ…. ನಾನು ಕೆಲಸ ಮಾಡುತ್ತಿರುತ್ತೇನೆ” ಎಂದ ಫಿಲಿಪ್ಪೋ.

ಪಾವ್ಲೋ ಸಮ್ಮತಿಸಿದ. ಆಗಾಗ ಪುಸ್ತಕದಿಂದ ಕಣ್ಣೆತ್ತಿ ಗೆಳೆಯನತ್ತ ನೋಡಿದರೆ ಆತ ಹೆಣೆದ ಹುಬ್ಬು, ಬಾಗಿದ ತಲೆಯಲ್ಲಿ ಏನೋ ಬರೆಯುವುದರಲ್ಲೇ ಮುಳುಗಿದ್ದ. ಎಷ್ಟೊಂದು ಸ್ವಲ್ಪ ಸಮಯದಲ್ಲೇ ಅವನ ತಲೆಗೂದಲು ತೆಳ್ಳಗಾಗಿ ನೆರೆತುಬಿಟ್ಟವಲ್ಲ ಎನಿಸಿತು. ಆ ವಿಶಾಲ ಮುಖದಲ್ಲಿ ಕಪ್ಪುವೃತ್ತಗಳು ಮೂಡಿರುವ ಕಣ್ಣುಗಳಲ್ಲಿ ಅದೆಂಥ ದಣಿವು! ತಲೆಯನ್ನು ತನ್ನ ಬಲಿಷ್ಠ ಭುಜಗಳ ಎರಡೂ ಬದಿಗೆ ವಾಲಿಸುತ್ತ ಫಿಲಿಪ್ಪೋ ಬರೆಯುತ್ತಿದ್ದ. “ಗುರುತೇ ಸಿಗುವುದಿಲ್ಲ!” ಪಾವ್ಲೋ ತನ್ನಲ್ಲೇ ಹೇಳಿಕೊಂಡ. ಅಲ್ಲದೆ, ಈಚೆ ವೆನ್ಜಿ ತುಂಬ ಕಟುವಾಗಿದ್ದ, ಜಗಳಗಂಟ ಕೂಡ. ಅವನ ವ್ಯಂಗ್ಯ ಮಾತಿನ ಹಿಂದೆ ವಿವರಿಸಲಾಗದಂಥ ಕಹಿಯಿರುತ್ತಿತ್ತು ; ಮುಂಗೋಪವೆಂದೇ ಹೇಳಬಹುದು. ಅಸಭ್ಯವಾಗಿ ವರ್ತಿಸುವ ಅವನ ದಡ್ಡ ಹೆಂಡತಿಯಿಂದ ನಿರುತ್ಸಾಹಿಯಾಗಿ ಆತ ಈ ಸ್ಥಿತಿಗೆ ಬಂದಿರಬಹುದೆ? ಎನಿಸಿತು. ಇಲ್ಲ ಇಲ್ಲ. ಬೇರೇನೋ ಕಾರಣವಿರಬೇಕು ಎನಿಸಿತು. ಏನಿರಬಹುದು? ಕೆಲಸಲ ಫಿಲಿಪ್ಪೋ ತನ್ನ ಜತೆಗೊ ವಿರುದ್ಧವಾಗಿದ್ದಾನೆ ಎನಿಸುತ್ತಿತ್ತು. ಪಾವ್ಲೋಗೆ, ನನ್ನ ಜತೆ ಯಾಕೆ ಹಾಗೆ? ನಾನೇನು ಮಾಡಿದ್ದೇನೆ ಅವನಿಗೆ ?

ಒಂದು ದಿನ, ವೆನ್ಜಿ, ಟೊಲೋಸಾನಿ ಕುಟುಂಬದ ಬಗ್ಗೆ, ಅಪ್ಪ -ಅಮ್ಮ ನ ಬಗ್ಗೆ, ಅದರಲ್ಲೂ ಪಿಯಾಳ ಬಗ್ಗೆ ಮಾತೆತ್ತಿದ. ಸೂಕ್ಷ್ಮ ವ್ಯಂಗ್ಯದೊಂದಿಗೆ ಶುರುವಾದ ಮಾತು ನಂತರ ಮುಕ್ತವಾಗಿ ಅವರನ್ನು ಗೇಲಿ ಮಾಡುತ್ತ ಸಾಗಿದ್ದೇ ಪಾವ್ಲೋ ಮಂಕಾಗಿಬಿಟ್ಟ. ಆ ಕುಟುಂಬದ ಅತ್ಯಂತ ಆಪ್ತ ಗೆಳೆಯ ಅವರ ಕುರಿತು ಹೀಗೆ ಮಾತಾಡಬಹುದೇ ಎನಿಸಿತು. ಪಾವ್ಲೋಗೆ ಈಗ ಪ್ರತಿಕ್ರಿಯಿಸಲೇಬೇಕಾಯಿತು. ಗೇಲಿಯ ಮಾತು ಅವನೊಳಗೆ ಹೇಸಿಗೆ ಹುಟ್ಟಿಸಿತು. ಅಂಥ ಆತ್ಮೀಯ ಕುಟುಂಬವನ್ನು ಸಮರ್ಥಿಸುತ್ತ ಪಿಯಾಳನ್ನು ಹೊಗಳಿದ.

ಖಿನ್ನನಾಗಿದ್ದರೂ ನಗು ಮುಂದುವರೆಸುತ್ತ, “ಹೌದು, ಹೌದು. ತಡಿ ಗೆಳೆಯಾ! ಸ್ವಲ್ಪ ತಡಿ! ನಿನಗೇ ಗೊತ್ತಾಗುತ್ತದೆ!” ಎಂದ ಫಿಲಿಪ್ಪೋ.

ಪಾವ್ಲೋನ ಮನಸ್ಲಲ್ಲೊಂದು ಸಂಶಯ ಧುತ್ತನೆ ಹೊತ್ತಿಕೊಂಡಿತು. ಆದರೆ, ಅದನ್ನು ಬದಿಗೆ ತಳ್ಳಿ ತುಸು ಹೆಚ್ಚೇ ಸೂಕ್ಷ್ಮಗ್ರಾಹಿಯಾಗಿದ್ದಕ್ಕೆ ತನ್ನನ್ನೇ ಬಯ್ದುಕೊಂಡ. ಇತ್ತೀಚಿನ ದಿನಗಳಲ್ಲಿ ಫಿಲಿಪ್ಪೋನ ಒಳಗಾಗುತ್ತಿರುವ ಬದಲಾವಣೆಯ ಕುರಿತು ಈ ಸಂಶಯ ಹೆಚ್ಚಿನ ಬೆಳಕು ಬೀರಬಲ್ಲದು ಎನಿಸಿತು. ಕ್ರಮೇಣ, ತನ್ನ ಸಂಶಯ ಬೆಳೆಯುತ್ತ ಭೂತಾಕಾರ ತಾಳುವುದನ್ನು ಮನಗಂಡ. ದಿನದಿಂದ ದಿನಕ್ಕೆ ಫಿಲಿಪ್ಪೋ ಸ್ವತಃ ಈ ಕುರಿತು ನಿರಾಕರಿಸಲಾಗದಂಥ ಸುಳಿವುಗಳನ್ನು ಕೊಡುತ್ತ ಹೋದ. ಕೊನೇ ಸುಳಿವು ಮಾತ್ರ ಪಾವ್ಲೋಗೆ ಅತಿಯಾದ ನೋವುಂಟುಮಾಡಿತು. ಈಗ ವೆನ್ಜಿ ಅವನಿಂದ ದೂರವೇ ಉಳಿಯತೊಡಗಿದ. ಇದು ಯಾವ ಮಟ್ಟ ಮುಟ್ಟಿತೆಂದರೆ ಪಾವ್ಲೋ ನನ್ನ ನಮಸ್ಕರಿಸುವ ಅಗತ್ಯವೇ ಬೀಳದ ಹಾಗೆ ಅವನ ಉಪಸ್ಥಿತಿಯ ಅರಿವೇ ಇಲ್ಲದವನ ಹಾಗೆ ವರ್ತಿಸತೊಡಗಿದ. ಒಂದು ಮಧ್ಯಾಹ್ನ ಮನೆಗೆ ಹೋಗುವಾಗ ಗಡಿಬಿಡಿಯಲ್ಲಿ ವೆಂಟಿಸೆಟ್ಟೆಂಬ್ರೆ ಮೂಲಕ ಹೋಗುವುದನ್ನು ನೋಡಿದ. ದೃಢಸಂಕಲ್ಪಮಾಡಿ ನೇರ ಅವನ ಬಳಿ ಹೋಗಿ ಅವನ ತೋಳನ್ನು ಅಲುಗಾಡಿಸುತ್ತ, “ನನಗೆ ಯಾಕೆ ವಿರುದ್ಧವಾಗಿದ್ದೀಯಾ? ನಿನಗೆ ನಾನೇನು ಮಾಡಿದ್ದೇನೆ ಎಂದು ಕೇಳಿಯೇಬಿಟ್ಟ.

ತುಸು ಮಂಕಾದ ಫಿಲಿಪ್ಪೋ, “ನಿನಗೆ ನಿಜವಾಗಿಯೂ ತಿಳಿಯಬೇಕೆಂದಿದೆಯೇ?” ಎಂದ.

“ಹೌದಪ್ಪ…. ನನಗೆ ನಿಜವಾಗಿ ತಿಳಿಯಬೇಕೆಂದಿದೆ…. ನಿನ್ನ ಈ ವರ್ತನೆಗೆ ಕಾರಣವೇನೆಂದು ತಿಳಿಯಬೇಕಿದೆ. ನಮ್ಮ ಗೆಳೆತನ ತುಂಬಾ ಹಳೆಯದು. ಈ ಕಾರಣಕ್ಕಾದರೂ ಹೇಳಬೇಕು!”

“ಎಂಥ ಒಳ್ಳೆಯ ಮಾತು! ಹಾಗಾದರೆ ನಿನಗೆ ಗೊತ್ತೇ ಇಲ್ಲವೆ? ಅಂದರೆ ಹಾವು ಪೂರ್ತಿಯಾಗಿನ್ನೂ ನಿನ್ನೊಳಗಡೆ ಇಳಿದಿಲ್ಲ ಅಂತಾಯ್ತು…”

“ಯಾವ ಹಾವು ಅಂತೀಯಾ?”

“ರೈತ ತಾನು ಸಾಕಿದ್ದ ಹಾವು ಕೊನೆಗೊಂದು ದಿನ…. ಅಂತೇನೋ ಒಂದು ನೀತಿಕತೆ ಇದೆ ಗೊತ್ತಲ್ಲ.”

ಫಿಲಿಪ್ಪೋನನ್ನು ಒತ್ತಾಯದಿಂದ ಮನೆಯೊಳಗೆ ಎಳೆದುತಂದ ಪಾವ್ಲೋ ಅಭ್ಯಾಸ ಕೊಠಡಿಯ ಕತ್ತಲಲ್ಲಿ ಕೂಡಿಹಾಕಿ ಪಾಪನಿವೇದನೆ ಮಾಡು ಎಂದು ಸೂಚಿಸಿದ. ಮೊದಲಿಗೆ ವೆನ್ಜಿ ನಿರಾಕರಿಸಿದ; ಎಂದಿನ ತನ್ನ ರಕ್ಷಣಾತ್ಮಕ ಕವಚದಲ್ಲೇ ಉಳಿದುಕೊಂಡ.

ಕೊನೆಯಲ್ಲಿ ಸ್ಫೋಟಿಸಿದ: “ನಿನ್ನ ನೋಡಿದರೆ ನನಗೆ ಹೊಟ್ಟೆಕಿಚ್ಚು ಗೊತ್ತಾಯ್ತಾ?” ಎಂದ.

“ನನ್ನ ಮೇಲೆಯೇ?”

“ಹೌದು…. ಹೌದು…. ನೀನಿನ್ನೂ ಪ್ರೇಮಿಸಿಲ್ಲವೆ?”

“ಯಾರನ್ನು ? ನಿನಗೆ ತಲೆಕೆಟ್ಟಿದೆಯೆ?”

“ಪಿಯಾ ಟೊಲೋಸಾನಿ ಜತೆ!”

“ನಿನಗೇಮ ಹುಚ್ಚು ಹಿಡಿದಿದೆಯಾ?” ಎಂದ ಪಾವ್ಲೋ ಆಶ್ಚರ್ಯಚಕಿತನಾಗಿ.

ಹುಚ್ಚು…. ಹೌದು ಹುಚ್ಚು ಹಿಡಿದಿದೆ…. ನನ್ನ ಅರ್ಥ ಮಾಡಿಕೋ… ನನ್ನ ಬಗ್ಗೆ ಸ್ವಲ್ಪವಾದರೂ ಕರುಣೆ ಇರಲಿ ಪಾವ್ಲೋ!” ಎಂದು ಹೇಳಿದ ಫಿಲಿಪ್ಪೋ ಈಗ ಬೇರೊಂದು ದನಿಯಲ್ಲಿ ಅಳುತ್ತಲೇ ಮಾತನ್ನು ಮುಂದುವರೆಸಿದ. ನಂತರ ಪಿಯಾ ಟೊಲೋಸಾನಿ ಜತೆಗಿನ ತನ್ನ ಮೊದಲ ಪ್ರೇಮದ ಬಗ್ಗೆ ಮಾತಾಡಿದ; ಇದುವರೆಗೂ ಗುಪ್ತವಾಗಿಯೇ ಉಳಿದಿದ್ದ ಈ ವಿಷಯ; ನಂತರ ನಡೆದ ತನ್ನ ಮದುವೆ, ಕ್ರಮೇಣ ಆಶಾಭಂಗವಾಗಿದ್ದು, ತನ್ನೊಳಗೇ ಹುಟ್ಟಿಕೊಂಡ ಖಾಲಿತನ; ಭಯಂಕರ ಜಿಗುಪ್ಸೆ ಹುಟ್ಟಿಸುತ್ತಿರುವ ಬದುಕು ಈಗ ಇವೆಲ್ಲ ಒಂದಕ್ಕೊಂದು ಸೇರಿ ಮತ್ತೆ ಪುನಃ ಪಿಯಾಟೊಲೋಸಾನಿಯೆಡೆಗೆ ಹತಾಶೆಭರಿತ ಹೊಚ್ಚ ಹೊಸ ಪ್ರೇಮವಾಗಿ ಮಾರ್ಪಟ್ಟ ಕುರಿತು ವಿವರಿಸುತ್ತ ಹೋದ.

“ದಿನಕಳದಂತೆ ನನ್ನ ಹಂಡತಿ ನನ್ನ ದೃಷ್ಟಿಯಲ್ಲಿ ಕೆಳಗೆ ಹೋಗುತ್ತಿದ್ದಾಳೆ…. ನನ್ನ ನಿರೀಕ್ಷೆಗಿಂತಲೂ ಕಳಗಡೆ…. ಆದರೆ ಇದಕ್ಕೆ ವಿರುದ್ಧವಾಗಿ ಪಿಯಾಟೊಲೋಸಾನಿ ಎತ್ತರಕ್ಕೇರುತ್ತಿದ್ದಾಳೆ. ಕಳಂಕರಹಿತಳಾಗಿ, ಅಸ್ಪುರ್‍ಶ್ಯಳಾಗಿ! ನಮ್ಮಿಬ್ಬರ ದೃಷ್ಟಿಯಲ್ಲಿ – ಅವಳೊಬ್ಬ ಆದರ್ಶಪ್ರಾಯಳು! ನಾನೂ, ನೀನೂ ಎಲ್ಲ ಸೇರಿ ಮೂರ್ಖರಂತೆ ಅವಳು ನಮ್ಮ ಕೈಯಿಂದ ತಪ್ಪಿಸಿಕೊಳ್ಳುವ ಹಾಗೆ ಮಾಡಿಬಿಟ್ವಿದ್ದೇವೆ. ನಮ್ಮ ನಮ್ಮ ಹೆಂಡತಿಯರನ್ನು ಭಾರೀ ಆರೈಕೆ ಮಾಡುವವಳಂತೆ ಬರೇ ಪ್ರದರ್ಶಿಸುತ್ತಾಳೆ. ಅವಳಿಗೂ ಕೂಡ ಇದೇ ಬೇಕಾಗಿರುವುದು! ಇದೇ ಅವಳ ಸೇಡು ಕೂಡ! ನನ್ನ ಮಾತು ಕೇಳು. ಅವಳನ್ನು ಬಿಟ್ಟು ಹೊರಬಾ…. ಹೊರ ಬಂದು ಬಿಡು ಅಷ್ಟೇ…. ಇಲ್ಲವಾದರೆ ವರ್ಷದ ನಂತರ ನೀನೂ ತಪ್ಪದೆ ಅವಳ ಜತೆ ಪ್ರೇಮದಲ್ಲಿ ಬೀಳುತ್ತೀಯಾ…. ನನಗಂತೂ ಅದು ಈಗಲೇ ಕಾಣುತ್ತಾ ಇದೆ ಕೂಡ…. ನನ್ನ ಹಾಗೇ ಆಗುತ್ತದೆ ನೋಡು ಮತ್ತೆ….!”

ತೀರಾ ಆಳದಲ್ಲಿ ತನ್ನ ಗೆಳೆಯನ ಮೇಲೆ, ಪಾವ್ಲೊಗೀಗ ಅನುಕಂಪ ಉಕ್ಕಿತು. ಆದರೆ ಹೇಳಲು ಒಂದು ಪದವೂ ಹೊಳೆಯಲಿಲ್ಲ. ಇದೇ ಹೊತ್ತಿಗೆ, ವಾಕಿಂಗ್ ಮುಗಿಸಿ ವಾಪಾಸಾಗುತ್ತಿದ್ದ ಪಿಯಾ ಟೊಲೋಸಾನಿ ಮತ್ತು ಎಲೀನಾರ ಮಾತುಗಳು ಮೊಗಸಾಲೆಯಿಂದ ಅವರಿಬ್ಬರಿಗೂ ಕೇಳಿಸಿತು.

ಫಿಲಿಪ್ಪೋ ತುದಿಗಾಲಲ್ಲಿ ಎಗರಿನಿಂತ.

“ನನ್ನ ಬಿಟ್ಟುಬಿಡು…. ನನಗವಳನ್ನು ನೋಡುವ ಇಚ್ಛೆ ಇಲ್ಲ….”

ಪಾವ್ಲೋ…. ಅವನ ಜತೆ ಬಾಗಿಲತನಕ ಹೋದ. ಮನಸ್ಸು ಕ್ಷೋಭೆಗೊಂಡಿತ್ತು. ಪುನಃ ತನ್ನ ಅಭ್ಯಾಸಕೊಠಡಿಯಲ್ಲಿ ಬಾಗಿಲು ಹಾಕಿಕೊಂಡುಬಿಟ್ಟ. ಆಗ ಪಕ್ಕದ ಕೋಣೆಯಲ್ಲಿ ಪಿಯಾ ತನ್ನ ಹೆಂಡತಿಗೆ ಏನನ್ನೋ ಹೇಳುತ್ತಿರುವುದು ಗೋಡೆಯ ಮೂಲಕ ಅವನಿಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು:

“ಇಲ್ಲ ಮಾರಾಯ್ತಿ…. ನೀನು ಯಾವಾಗಲೂ ತಪ್ಪಾಗಿ ಯೋಚಿಸುತ್ತೀ…. ಈ ಒಂದು ವಿಷಯದ ಮಟ್ಟಿಗೆ ನೀನು ಒಪ್ಪಲೇಬೇಕು…. ನೀನು ಅವನನ್ನು ತುಸು ಜಾಸ್ತಿಯೇ ಟೀಕಿಸುತ್ತಿದ್ದೀ!…. ನೀನು ಹಾಗೆಲ್ಲ ಮಾಡಬಾರದು…. ”
*****
ಇಟಾಲಿಯನ್ ಮೂಲ: ಲುಯಿಗಿ ಪಿರಾಂಡೆಲ್ಲೋ

A friend to wives