ಬಾಯಿ ಕಟ್ಟಿದ ನನ್ನ ವಾಣಿ ನಯವಿನಯದಲಿ
ಕೇಳುವಳು ನಿನ್ನ ಶ್ರೀಮಂತ ಪ್ರಶಂಸೆಯನು ;
ಹೊನ್ನಿನಕ್ಷರಗಳ ಅಮೂಲ್ಯ ಪದ ಪಂಕ್ತಿಯಲಿ
ಸಿಂಗರಿಸಿ ಎಲ್ಲ ಪ್ರತಿಭೆಗಳು ರಚಿಸಿದುದನ್ನು.
ಒಳ್ಳೆನುಡಿ ಅವರು ಬರೆಯಲು, ನಾನು ಮನದೊಳಗೆ
ಒಳ್ಳೆಯದ ಚಿಂತಿಸುವೆ. ಸತ್ವಶೀಲರ ಶಕ್ತ
ಲೇಖನಿಯ ಸಂಪನ್ನ ಸ್ತೋತ್ರ ಬೀಳಲು ಕಿವಿಗೆ,
ಹಳ್ಳಿ ಪಾದ್ರಿಯ ಹಾಗೆ ಅಸ್ತು ಎನ್ನುವೆ. ಸುತ್ತ
ನಿನ್ನ ಹೊಗಳಿಕೆ ಕೇಳಿ ‘ಹೌದು, ನಿಜ, ಹಾಗೆಯೇ’
ಎಂದರೂ ಹೆಚ್ಚಿನದು ನನ್ನೆದೇನನೊ ಅಲ್ಲಿ
ಸೇರಿಸುವೆ, ಆದರದು ನನ್ನ ಮನದೊಳಗೆಯೇ;
ಮಾತು ಹಿಂದುಳಿದರೂ ಮುಂದಿರುವೆ ಪ್ರೀತಿಯಲಿ.
ಉಳಿದವರ ಮನ್ನಿಸು ಮಾತನುಸಿರಿದ್ದಕ್ಕೆ
ನನ್ನನ್ನೊ ಮೂಕ ಪ್ರಾಮಾಣಿಕ ವಿಚಾರಕ್ಕೆ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 85
My tongue-tied Muse in manners holds her still