ರಂಗಣ್ಣನ ಕನಸಿನ ದಿನಗಳು – ೨೧

ರಂಗಣ್ಣನ ಕನಸಿನ ದಿನಗಳು – ೨೧

ರಂಗನಾಥಪುರದಲ್ಲಿ ಸಭೆ

ಮಾರನೆಯ ದಿನ ಬೆಳಗ್ಗೆ ಸಾಹೇಬರು ಒಂಬತ್ತು ಗಂಟೆಗೆ ಬಸ್ಸಿನಲ್ಲಿ ಬಂದಿಳಿದರು. ಅವರಿಗೆ ಗಂಗೇಗೌಡರ ನಾಯಕತ್ವದಲ್ಲಿ ಸಂಭ್ರಮದ ಸ್ವಾಗತ ದೊರೆಯಿತು. ಹೂವಿನ ಹಾರಗಳು, ತಟ್ಟೆಗಳಲ್ಲಿ ಹಣ್ಣು ಹಂಪಲು, ಕೈಗೆ ಕೊಡುವ ನಿಂಬೆಯಹಣ್ಣುಗಳು, ಪಂಚಾಯತಿ ಮೆಂಬರುಗಳ ಪರಿಚಯ, ಗುಂಪು ಸೇರಿದ್ದ ಉಪಾಧ್ಯಾಯರ ವಂದನಾರ್ಪಣೆ ಮತ್ತು ಹಳ್ಳಿಯವರ ಜಯಕಾರಗಳೊಡನೆ ಸ್ವಾಗತ ಸಮಾರಂಭ ಕೋಲಾಹಲಕರವಾಗಿತ್ತು. ಸಾಹೇಬರು ಮುಸಾಫರಖಾನೆಗೆ ದಯಮಾಡಿಸಿ ಕೊಟಡಿಯಲ್ಲಿ ಕುರ್ಚಿಯಮೇಲೆ ಕುಳಿತುಕೊಂಡರು. ತಿಮ್ಮಣ್ಣ ಭಟ್ಟನ ಓಡಾಟ ಕಾಫಿ ತಿಂಡಿಗಳ ಭರಾಟೆ ಚೆನ್ನಾಗಿ ಸಾಗಿದುವು. ಆ ದಿನ ಗಂಗೇಗೌಡರು ಊಟದ ವ್ಯವಸ್ಥೆಯನ್ನು ಚೆನ್ನಾಗಿ ಮಾಡಿದ್ದರು, ಒಕ್ಕಲಿಗ ಮೇಷ್ಟ್ರುಗಳಿಗೂ ಇತರರಿಗೂ ತಮ್ಮ ಮನೆಯಲ್ಲೇ ಏರ್‍ಪಾಟುಮಾಡಿದ್ದರು. ಲಿಂಗಾಯತರು ಮೊದಲಾದವರಿಗೆಲ್ಲ ಆಯಾಯಾ ಜಾತಿಯವರ ಮನೆಗಳಲ್ಲಿ ಆಹ್ವಾನಗಳಿದ್ದುವು. ಉಳಿದ ಬ್ರಾಹ್ಮಣಾದಿಗಳಿಗೆ ಮುಸಾಫರಖಾನೆಯಲ್ಲೇ ಆಡಿಗೆಯಾಗಿತ್ತು. ಹನ್ನೊಂದು ಗಂಟೆಗೆ ಸರಿಯಾಗಿ ಮುಸಾಫರಖಾನೆಯಲ್ಲಿ ಎಲೆಗಳನ್ನು ಹಾಕಿ ಬಡಿಸತೊಡಗಿದರು. ಸಾಹೇಬರು ಬಂದಿದ್ದ ಕಾರಣದಿಂದ ಜಿಲೇಬಿ ಹೆಚ್ಚು ಕಟ್ಟಳೆಯ ಭಕ್ಷ್ಯವಾಗಿತ್ತು. ಆ ದಿನದ ಏರ್ಪಾಟುಗಳನ್ನೆಲ್ಲ ನೋಡಿ ಉಂಡು, ಸಂತೋಷ ಪಟ್ಟ ಸಾಹೇಬರು ಬಹಳ ಪ್ರಸನ್ನರಾಗಿದ್ದರು! ಬೇಕಾದ ವರವನ್ನು ಕೊಡವವರಾಗಿದ್ದರು!

ಪಾಠ ಶಾಲೆಯಲ್ಲಿ ಹನ್ನೆರಡು ಗಂಟೆಗೆ ಸರಿಯಾಗಿ ಸಂಘದ ಸಭೆ ಸೇರಿತು. ವೇದಿಕೆಯ ಮೇಲೆ ರಂಗಣ್ಣನೊಂದು ಪಕ್ಕದಲ್ಲಿ ಗಂಗೇಗೌಡರೊಂದು ಪಕ್ಕದಲ್ಲಿ, ಸಾಹೇಬರು ಮಧ್ಯದಲ್ಲಿ ಕುರ್ಚಿಗಳಲ್ಲಿ ಕುಳಿತಿದ್ದರು. ರಂಗಣ್ಣನು ಎದ್ದು ನಿಂತುಕೊಂಡು, ‘ಈ ದಿನ ಸಾಹೇಬರು ಇಲ್ಲಿಗೆ ದಯಮಾಡಿಸಿರುವುದು ನಮ್ಮ ಭಾಗ್ಯ, ಅವರು ಬಹಳ ದಕ್ಷರೂ ಆನುಭವಿಗಳೂ ಆದ ಅಧಿಕಾರಿಗಳು, ವಿದ್ಯಾಭಿವೃದ್ಧಿಯ ವಿಚಾರದಲ್ಲಿ ಬಹಳ ಆಸಕ್ತರಾದವರು. ಉಪಾಧ್ಯಾಯರ ವಿಚಾರದಲ್ಲಿ ಬಹಳ ಕರುಣಾಪೂರ್‍ಣರು. ಅವರ ಅಮೋಘವಾದ ಸಲಹೆಗಳನ್ನು ನಾವುಗಳೆಲ್ಲ ನಿರೀಕ್ಷಿಸುತ್ತಿರುವುದು ಸಹಜವೇ ಆಗಿದೆ. ಈ ದಿನ ಸಾಹೇಬರು ಅಧ್ಯಕ್ಷಪೀಠವನ್ನಲಂಕರಿಸಿ ಕಾರ್‍ಯ ಕ್ರಮಗಳನ್ನೆಲ್ಲ ನೆರವೇರಿಸಿಕೊಡಬೇಕೆಂದೂ ಗ್ರಾಮಸ್ಥರ ಕೋರಿಕೆಗಳನ್ನು ಈಡೇರಿಸಿಕೊಡಬೇಕೆಂದೂ ಪ್ರಾರ್ಥಿಸುತ್ತೇನೆ’ ಎಂದು ಹೇಳಿದನು. ಪದ್ದತಿಯಂತೆ ದೇವತಾ ಪ್ರಾರ್ಥನೆಯಾಯಿತು; ಹುಡುಗಿಯರಿಂದ ಸ್ವಾಗತ ಗೀತೆಗಳ ಹಾಡುಗಾರಿಕೆಯೂ ಆಯಿತು. ಅನಂತರ ಸಾಹೇಬರು ಎದ್ದು ನಿಂತುಕೊಂಡು, ತಾವು ರಂಗನಾಥಪುರಕ್ಕೆ ಭೇಟಿ ಕೊಡುವ ಅವಕಾಶವನ್ನು ಗ್ರಾಮಸ್ಥರು ಕಲ್ಪಿಸಿಕೊಟ್ಟುದಕ್ಕಾಗಿ ಅವರಿಗೆ ಕೃತಜ್ಞರಾಗಿರುವುದಾಗಿಯೂ, ಅಲ್ಲಿಯ ಏರ್ಪಾಟುಗಳನ್ನು ನೋಡಿ ಸಂತೋಷವಾಯಿತೆಂದೂ, ತಮ್ಮ ಸಲಹೆಗಳನ್ನು ಸಭೆಯ ಮುಕ್ತಾಯದಲ್ಲಿ ತಿಳಿಸುವುದಾಗಿಯೂ ಹೇಳಿ ಕಾರ್ಯಕ್ರ್‍ಅಮದ ಪಟ್ಟಿಯನ್ನು ಕೈಗೆ ತೆಗೆದು ಕೊಂಡರು. ಅದರಲ್ಲಿದ್ದಂತೆ ವ್ಯಾಕರಣಪಾಠ. ಗದ್ಯ ವಾರ, ಭೂಗೋಳ ಮತ್ತು ಗಣಿತ ಪಾಠಗಳ ಬೋಧನಕ್ರಮಗಳನ್ನು ಆಯಾ ಉಪಾಧ್ಯಾಯರು ವಿವರಿಸಿದರು; ಒಂದೆರಡು ಭಾಷಣಗಳಾದುವು. ಕಡೆಯಲ್ಲಿ ಬೋಧನೆ ಯಲ್ಲಿ ಬರುವ ತೊಡಕುಗಳ ಚರ್ಚೆ ನಡೆಯಿತು. ಸಾಹೇಬರು ಅದನ್ನು ಬಹಳ ಕುತೂಹಲದಿಂದ ಗಮನಿಸುತ್ತಿದ್ದರು. ಆ ತೊಡಕುಗಳಿಗೆಲ್ಲ ಪರಿಹಾರವನ್ನು ರಂಗಣ್ಣನೇ ಹೇಳುತ್ತಿದ್ದನು. ಸಮಯಾನುಸಾರ ಕಪ್ಪು ಹಲಗೆಯ ಹತ್ತಿರ ಹೋಗಿ, ಅದರ ಮೇಲೆ ಬರೆದು ವಿವರಿಸುತ್ತಲೂ ಇದ್ದನು. ಸಾಹೇಬರು ಹಿಂದೆ ಹಲವು ಕಡೆಗಳಲ್ಲಿ ಉಪಾಧ್ಯಾಯರ ಸಭೆ ಗಳನ್ನು ನೋಡಿದವರು. ಒಂದು ಮಾದರಿಪಾಠ, ಒಂದು ಭಾಷಣ ಮತ್ತು ಸಂಗೀತದಲ್ಲಿ ಅವು ಮುಕ್ತಾಯವಾಗುತ್ತಿದ್ದುವು; ಇನ್ಸ್‌ಪೆಕ್ಟರವರು ಅಲಂಕಾರಕ್ಕಾಗಿ ಕುಳಿತುಕೊಂಡಿದ್ದು ಅಲಂಕಾರ ಭಾಷಣ ಮಾಡುವವರಾಗಿರುತ್ತಿದ್ದರು. ಆದರೆ ಇಲ್ಲಿಯ ಸಭೆಯಲ್ಲಿ ಚರ್ಚೆಗಳು ಸಲಿಗೆಯಿಂದ ನಡೆಯುತ್ತ, ಇನ್ಸ್‌ಪೆಕ್ಟರವರ ಪಾಂಡಿತ್ಯದ ಮತ್ತು ಅನುಭವಗಳ ಪರೀಕ್ಷೆ ಮೇಷ್ಟ್ರುಗಳಿಂದ ನಡೆಯುತ್ತಿತ್ತು!

ಒಬ್ಬ ಉಪಾಧ್ಯಾಯನು, ಸ್ವಾಮಿ! ರೀಡರುಗಳಲ್ಲಿ ಮಧ್ಯೆ ಮಧ್ಯೆ ಚಿತ್ರಗಳನ್ನು ಮುದ್ರಿಸಿದ್ದಾರೆ. ಅವುಗಳಿಂದ ಪಾಠಗಳಿಗೆ ತೊಂದರೆಯೇ ವಿನಾ ಸಹಾಯವಿಲ್ಲ. ಪಾಠಮಾಡುವ ಕಾಲದಲ್ಲಿ ಮಕ್ಕಳ ಗಮನವೆಲ್ಲ ಚಿತ್ರದ ಕಡೆಗೇ ಇರುತ್ತದೆ; ವಾಕ್ಯಗಳ ಮೇಲೆ ಇರುವುದಿಲ್ಲ. ಚಿತ್ರಗಳನ್ನು ಮುದ್ರಿಸದಿದ್ದರೆ ಒಳ್ಳೆಯದಲ್ಲವೇ?” ಎಂದು ಕೇಳಿದನು.

‘ಮೇಷ್ಟೆ! ನೀವು ಬಹಳ ಶ್ರದ್ದೆಯಿಂದ ಪಾಠಗಳನ್ನು ಮಾಡುತ್ತಿದ್ದೀರಿ ಎನ್ನುವುದು ಸ್ಪಷ್ಟಪಟ್ಟಿತು. ನನಗೆ ಆ ವಿಚಾರದಲ್ಲಿ ಬಹಳ ಸಂತೋಷ. ಎಲ್ಲ ಉಪಾಧ್ಯಾಯರೂ ನಿಮ್ಮಂತೆಯೇ ಶ್ರದ್ಧೆ ವಹಿಸಿದರೆ ವಿದ್ಯಾಭಿವೃದ್ಧಿ ಚೆನ್ನಾಗಿ ಆಗುತ್ತದೆ. ಆದರೆ, ನೀವು ಕೇಳಿರುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿದೆ. ನೋಡಿ ಮೇಷ್ಟ್ರೆ! ಮೂಗಿದೆ, ಸಿಂಬಳ ಸುರಿಯುತ್ತದೆ; ಆದ್ದರಿಂದ ಮೂಗನ್ನು ಕೊಯ್ದು ಹಾಕಿಬಿಡೋಣ! ಎನ್ನುವುದಕ್ಕಾಗುತ್ತದೆಯೇ? ಮೂಗಿದ್ದರೆ ಮುಖಕ್ಕೆ ಶೃಂಗಾರ! ಚಿತ್ರ ವಿದ್ದರೆ ಪಾಠಕ್ಕೆ ಅಲಂಕಾರ!” ಎಂದು ರಂಗಣ್ಣನು ಹೇಳಿದನು. ಸಾಹಬರಿಗೆ ಪರಮಾನಂದವಾಗಿ ಅವರು ಚಪ್ಪಾಳೆ ತಟ್ಟಿದರು. ಸಭೆಯಲ್ಲೆಲ್ಲ ಕರತಾಡನಗಳೂ ನಗುವಿನ ಹೊನಲುಗಳೂ ತುಂಬಿ ಹೋದುವು.

‘ಮೇಷ್ಟ್ರೇ! ಇತರ ಕಡೆಗಳಿಗೆ ಮಕ್ಕಳ ಗಮನ ಹರಿಯದೆ ಪುಸ್ತಕ ದಲ್ಲಿರುವ ಚಿತ್ರದ ಕಡೆಗೆ ಹರಿಯುವುದು ಒಂದು ವಿಚಾರಕ್ಕೆ ಒಳ್ಳೆಯದಲ್ಲವೇ?’

‘ಹೌದು ಸ್ವಾಮಿ!’

‘ಮಕ್ಕಳಿಗೆ ಚಿತ್ರದಲ್ಲಿ ಆಸಕ್ತಿಯಿರುವುದರಿಂದ ಉಪಾಧ್ಯಾಯರು ಅದನ್ನು ಉಪಯೋಗಿಸಿಕೊಂಡು, ಆ ಚಿತ್ರವನ್ನ ಪಾಠಕ್ಕೆ ಪೀಠಿಕೆಯಾಗಿ ಮಾಡಿಕೊಳ್ಳಬೇಕು. ಮೊದ ಮೊದಲಿನಲ್ಲಿ ಮಕ್ಕಳಿಗೆ ಹಾಗೆ ಚಿತ್ರದಲ್ಲಿ ತೀವ್ರವಾದ ಆಸಕ್ತಿ ಇರುತ್ತದೆ. ಆದರೆ ಅದು ಬಹುಕಾಲ ಇರುವುದಿಲ್ಲ. ಸ್ವಲ್ಪ ಕಾಲದಮೇಲೆ ಆ ಚಿತ್ರವನ್ನು ವಿರೂಪ ಮಾಡಿ ಬಿಡುತ್ತಾರೆ; ಕಡೆಗೆ ಅದನ್ನು ಹರಿದು ಹಾಕುವುದೂ ಉಂಟು. ಹಾಗೆ ಮಾಡುವುದನ್ನು ನೀವು ನೋಡಿದ್ದೀರಾ ಮೇಷ್ಟ್ರೇ!’

‘ನೋಡಿದ್ದೇನೆ ಸ್ವಾಮಿ!’

‘ಒಳ್ಳೆಯದು ಮೇಷ್ಟ್ರೆ! ಚಿತ್ರದಲ್ಲಿ ನೆಟ್ಟಿರುವ ಗಮನವನ್ನು ಕ್ರಮವಾಗಿ ಪಾಠಕ್ಕೆ ತಿರುಗಿಸಿಕೊಳ್ಳಬೇಕು. ಮೊದಲಿನಲ್ಲೇ ಚಿತ್ರದ ವಿಷಯವನ್ನು ಪ್ರಸ್ತಾಪಮಾಡಿ, ಕೆಲವು ಪ್ರಶ್ನೆಗಳನ್ನು ಕೇಳಬೇಕು. ಮಕ್ಕಳು ಚಿತ್ರವನ್ನು ಚೆನ್ನಾಗಿ ನೋಡಿಯೇ ಉತ್ತರ ಕೊಡಲಿ. ಅಲ್ಲಿಗೆ ಅವರ ಆಸಕ್ತಿ ಕೇವಲ ಚಿತ್ರದಲ್ಲಿ ಕಡಮೆಯಾಗುತ್ತದೆ. ಆಮೇಲೆ ಚಿತ್ರದ ವಿಚಾರವನ್ನು ಹೆಚ್ಚಾಗಿ ಪಾಠದಲ್ಲಿ ಹೇಳಿದೆ. ಓದಿ ತಿಳಿದು ಕೊಳ್ಳೋಣ ಎಂದು ಉಪಾಯದಿಂದ ಓದುವುದರ ಕಡೆಗೆ ಮಕ್ಕಳ ಆಸಕ್ತಿಯನ್ನು ತಿರುಗಿಸಬೇಕು. ಚಿತ್ರವಿದ್ದರೆ ಉಪಾಧ್ಯಾಯರಿಗೆ ಶ್ರಮ ಅರ್ಧ ಕಡಮೆಯಾಗುತ್ತದೆ; ವಿಷಯಗಳನ್ನು ತಿಳಿಸುವುದು ಸುಲಭವಾಗುತ್ತದೆ; ಮಕ್ಕಳ ಕಲ್ಪನಾಶಕ್ತಿ ವಿಕಾಸವಾಗುತ್ತದೆ. ಕಿವಿಯಲ್ಲಿ ಎಷ್ಟು ಕೇಳಿದರೇನು? ಕಣ್ಣಿಂದ ನೋಡಿದ್ದು ಸ್ಪಷ್ಟವಾಗಿ ಮನಸ್ಸಿನಲ್ಲಿ ನಿಲ್ಲುತ್ತದೆಯಲ್ಲವೆ? ಉಪಾಧ್ಯಾಯರು ಕಪ್ಪು ಹಲಗೆಯ ಮೇಲೆ ದೊಡ್ಡದಾಗಿ ಆ ಚಿತ್ರವನ್ನು ಬರೆದು ವಿವರಿಸಿದರೆ ಪಾಠಕ್ಕೆ ಕಳೆ ಕಟ್ಟುತ್ತದೆ. ಈಗ ಹೇಳಿ ಮೇಷ್ಟ್ರೇ! ರೀಡರುಗಳಲ್ಲಿ ಚಿತ್ರಗಳಿರಬೇಕೇ ಬೇಡವೇ?’

‘ಇರಬೇಕು ಸ್ವಾಮಿ!’

‘ಮಧ್ಯೆ ಮಧ್ಯೆ ಮಕ್ಕಳ ಗಮನ ವಾಕ್ಯಗಳ ಮೇಲೆ ಇಲ್ಲದಿದ್ದರೆ ಉಪಾಧ್ಯಾಯರು ಅಂಥ ಹುಡುಗರನ್ನು ಗಮನಿಸುತ್ತ, ಥಟ್ಟನೆ ಮುಂದಕ್ಕೆ ನೀನು ಓದು- ಎಂದು ಆ ಹುಡುಗರನ್ನು ಎಚ್ಚರಿಸಿ ಓದಿಸಬೇಕು.’

‘ತಿಳಿಯಿತು ಸ್ವಾಮಿ!’ -ಎಂದು ಹೇಳುತ್ತ ಆ ಮೇಷ್ಟ್ರು ಕುಳಿತು ಕೊಂಡನು.

ಮತ್ತೊಬ್ಬ ಉಪಾಧ್ಯಾಯನೆದ್ದು, ‘ಸ್ವಾಮಿ! ನಾವು ನರಿಯ ಚಿತ್ರವನ್ನು ಬರೆಯಹೋದರೆ ಅದು ನಾಯಿಯ ಚಿತ್ರವೇ ಆಗಿಹೋಗುತ್ತದೆಯಲ್ಲ! ಅದಕ್ಕೇನು ಮಾಡಬೇಕು ಸ್ವಾಮಿ? ಈ ನರಿ ನಾಯಿಗಳಿಗೆ ಭೇದ ತೋರಿಸುವುದು ಹೇಗೆ?’ ಎಂದು ಕೇಳಿದನು. ರಂಗಣ್ಣನು, ‘ಮೇಷ್ಟ್ರೆ! ನರಿಯ ಮೂತಿ ಯಾವಾಗಲೂ ಸ್ವಲ್ಪ ಚೂಪಾಗಿರುತ್ತದೆ; ನಾಯಿಯದು ಅಷ್ಟು ಚೂಪಾಗಿರುವುದಿಲ್ಲ. ಎರಡನೆಯದಾಗಿ, ನಾಯಿಯ ಬಾಲ ಡೊಂಕು, ಸಾಮಾನ್ಯವಾಗಿ ತೆಳುವು; ನರಿಯ ಬಾಲ ಪೊದರು, ಪೊರಕೆ ಇದ್ದ ಹಾಗೆ; ಮತ್ತು ಯಾವಾಗಲೂ ಕೆಳಮುಖವಾಗಿಯೇ ಇರುತ್ತದೆ. ವ್ಯತ್ಯಾಸವನ್ನು ನೋಡಿ’ ಎಂದು ಹೇಳಿ ಕಪ್ಪು ಹಲಗೆಯಮೇಲೆ ಬರೆದು ತೋರಿಸಿದನು. ಆಮೇಲೆ ‘ಕುರಿಯ ಬಾಲ ಹೇಗಿರುತ್ತದೆ? ಮೇಕೆಯ ಬಾಲ ಹೇಗಿರುತ್ತದೆ? ಹೇಳಿ ಮೇಷ್ಟ್ರೇ ನೋಡೋಣ’ ಎಂದು ಕೇಳಿದನು.

‘ನಾನು ಗಮನಿಸಿ ನೋಡಿಲ್ಲ ಸ್ವಾಮಿ!’ ಎಂದು ಉಪಾಧ್ಯಾಯನು ಹೇಳಿದನು.

ಸಾಹೇಬರು ಮುಗುಳುನಗೆ ನಗುತ್ತ, ‘ಏನು ವ್ಯತ್ಯಾಸವಿದೆ ರಂಗಣ್ಣನವರೇ?’ ಎಂದು ಕೇಳಿದರು.

‘ವ್ಯತ್ಯಾಸವಿದೆ ಸಾರ್! ಅವುಗಳನ್ನೆಲ್ಲ ನಾವು ಗಮನಿಸಬೇಕು? ಎಂದು ರಂಗಣ್ಣ ಹೇಳಿ, ಕಪ್ಪು ಹಲಗೆಯ ಮೇಲೆ ಆ ಬಾಲಗಳ ಚಿತ್ರಗಳನ್ನು ಬರೆದು, ‘ಎರಡರ ಬಾಲಗಳೂ ಮೊಟಕು; ಆದರೆ ಕುರಿಯದು ಕೆಳಕ್ಕೆ ಬಗ್ಗಿರುತ್ತದೆ, ಮೇಕೆಯದು ಮೇಲಕ್ಕೆ ಬಗ್ಗಿರುತ್ತದೆ! ಎಂದು ವಿವರಿಸಿದನು.

ಹೀಗೆ ಚರ್ಚೆಗಳಲ್ಲಿ ವಿನೋದವೂ ಶಿಕ್ಷಣವೂ ಬೆರೆತುಕೊಂಡು ಸಭೆಯ ವಾತಾವರಣ ಬಹಳ ಮನೋರಂಜಕವಾಗಿತ್ತು. ಹಲವು ವಿಷಯಗಳನ್ನು ಪ್ರಸ್ತಾಪಮಾಡಿದ ಮೇಲೆ ಮಧ್ಯಾಹ್ನ ಮೂರು ಗಂಟೆಯಾ ಯಿತೆಂದೂ, ಮುಂದೆ ಅರ್ಧ ಗಂಟೆ ವಿರಾಮವಿರುವುದೆಂದೂ, ಆ ವಿರಾಮ ಕಾಲದಲ್ಲಿ ಉಪಾಧ್ಯಾಯರು ಪ್ರದರ್ಶನವನ್ನು ನೋಡಿಕೊಂಡು ಉಪಾಹಾರ ಸ್ವೀಕಾರಕ್ಕೆ ಸಿದ್ದರಾಗಬೇಕೆಂದೂ, ಅನಂತರ ನಾಲ್ಕು ಗಂಟೆಗೆ ಮತ್ತೆ ಸಭೆ ಸೇರುವುದೆಂದೂ ರಂಗಣ್ಣನು ಹೇಳಿದನು. ಅದರಂತೆ ಆಗ ಸಭೆ ಮುಗಿಯಿತು.

ಪಾಠಶಾಲೆಯ ಕೊಠಡಿಯೊಂದರಲ್ಲಿ ವಿದ್ಯಾಭ್ಯಾಸಕ್ಕೆ ಸಂಬಂಧ ಪಟ್ಟ ಪ್ರದರ್ಶನವೊಂದು ಏರ್ಪಾಟಾಗಿತ್ತು. ರಂಗಣ್ಣನು ಸಾಹೇಬರನ್ನು ಅಲ್ಲಿಗೆ ಕರೆದುಕೊಂಡು ಹೋದನು. ರಂಗನಾಥಪುರದ ಪ್ರೈಮರಿ ಸ್ಕೂಲಿನ ಉಪಾಧ್ಯಾಯರು ಶ್ರೀರಂಗಪಟ್ಟಣದ ಕೋಟೆ, ನಾಲ್ಕನೆಯ ಮೈಸೂರು ಯುದ್ಧ, ಟೀಪುವಿನ ಮರಣ ಮೊದಲಾದುವನ್ನು ತೋರಿಸುವ ರಟ್ಟಿನ ಮಾದರಿಯೊಂದನ್ನು ತಯಾರು ಮಾಡಿ ಇಟ್ಟಿದ್ದರು. ಅದು ಬಹಳ ಚೆನ್ನಾಗಿತ್ತು. ಬೆಂಡಿನಲ್ಲಿ ಸಿಪಾಯಿಗಳನ್ನೂ ಫಿರಂಗಿಗಳನ್ನೂ ರಚಿಸಿದ್ದರು. ಕಾವೇರಿ ನದಿಯನ್ನೂ ಅದನ್ನು ದಾಟುತ್ತಿದ್ದ ಸೈನ್ಯವನ್ನೂ ತೋರಿಸಿದ್ದರು. ಸಾಹೇಬರು ಅದನ್ನು ನೋಡಿ ಬಹಳ ಮೆಚ್ಚಿದರು. ಹಲವು ಪಾಠಗಳಿಗೆ ಬಣ್ಣದ ಚಿತ್ರಗಳನ್ನು ಉಪಾಧ್ಯಾಯರು ಬರೆದು ಪ್ರದರ್ಶನದಲ್ಲಿಟ್ಟಿದ್ದರು; ಪ್ರಕೃತಿ ಸಾರಕ್ಕೆ ಸಂಬಂಧ ಪಟ್ಟ ಚಿತ್ರಗಳೂ ಇದ್ದುವು. ತಂತಮ್ಮ ಪ್ರಾಂತಗಳಲ್ಲಿ ದೊರೆಯುವ ಶಿಲೆಗಳನ್ನೂ, ಕಾಗೆ ಬಂಗಾರ ಮೊದಲಾದುವನ್ನೂ ಉಪಾಧ್ಯಾಯರು ಅಲ್ಲಿ ಇಟ್ಟಿದ್ದರು ಕೆಲವು ಹಳೆಯ ನಾಣ್ಯಗಳು, ಕೈ ಕೆಲಸದ ಮಾದರಿಗಳು, ಪಾಠಗಳ ಟಿಪ್ಪಣಿಗಳು ಸಹ ಅಲ್ಲಿದ್ದುವು. ಅವುಗಳನ್ನೆಲ್ಲ ಸಾಹೇಬರು ನೋಡಿ, ‘ರಂಗಣ್ಣನವರೇ ! ನಿಮ್ಮ ಉಪಾಧ್ಯಾಯರ ಸಂಘದ ಸಭೆ ಸಂಸ್ಥಾನಕ್ಕೆಲ್ಲ ಮಾದರಿಯಾಗಿದೆ. ನನ್ನ ಸರ್ವಿಸ್ಸಿನಲ್ಲಿ ಇಂತಹ ಸಭೆಯನ್ನು ನಾನು ನೋಡಿಯೇ ಇಲ್ಲ’ – ಎಂದು ಪ್ರಶಂಸೆಮಾಡಿದರು. ಅದಕ್ಕೆ ರಂಗಣ್ಣ, ‘ಸಾರ್! ಇದರ ಕೀರ್ತಿಯೆಲ್ಲ ಉಪಾಧ್ಯಾಯರದು, ನನ್ನದೇನಿದೆ? ನಾನೇ ಉಪಾಧ್ಯಾಯರಿಂದ ಹಲವು ವಿಷಯಗಳನ್ನು ಗ್ರಹಿಸಿದ್ದೇನೆ. ಉತ್ಸಾಹದಿಂದ ಅವರು ಕೆಲಸ ಮಾಡಿ ಕೊಂಡು ಹೋಗುತ್ತಿದಾರೆ. ಇವುಗಳೆಲ್ಲ ಅವರ ಶ್ರಮದ ಫಲ! ಇಲಾಖೆ ಯವರು ದಯಾಕಟಾಕ್ಷದಿಂದ ನೋಡಿ ಉಪಾಧ್ಯಾಯರ ಸ್ಥಿತಿಗತಿಗಳನ್ನು ಉತ್ತಮಪಡಿಸಬೇಕು’ ಎಂದು ಹೇಳಿದನು. ಬಳಿಕ ತನ್ನ ಗಡಿಯಾರವನ್ನು ನೋಡಿಕೊಂಡನು. ಗಂಟೆ ಮೂರೂವರೆ ಆಗುತ್ತ ಬಂದಿದ್ದರೂ ಉಪಾಹಾರದ ಸುಳಿವು ಕಾಣಿಸಲಿಲ್ಲ. ಏರ್ಪಾಟು ಏನು ನಡೆದಿದೆಯೋ ನೋಡೋಣ ಎಂದು ತಿಮ್ಮಣ್ಣ ಭಟ್ಟನನ್ನು ಕರೆದು, ಸಾಹೇಬರಿಗೆ ಪ್ರದರ್ಶನದ ವಿಷಯಗಳನ್ನೆಲ್ಲ ವಿವರಿಸುವಂತೆ ಹೇಳಿ ತಾನು ಮುಸಾಫರ ಖಾನೆಯ ಕಡೆಗೆ ಹೊರಟನು.

ಮುಸಾಫರಖಾನೆಯ ಅಡಿಗೆಯ ಮನೆಯಲ್ಲಿಯೂ, ಪಕ್ಕದ ಊಟದ ಕೋಣೆಯಲ್ಲಿಯೂ ಉಪಾಧ್ಯಾಯರು ತುಂಬಿ ಹೋಗಿದ್ದರು. ಹೊಗೆ ಬಾಗಿಲುಗಳಲ್ಲಿಯೂ ಕಿಟಕಿಗಳಲ್ಲಿಯೂ ತೂರಿಬರುತ್ತಿತ್ತು. ರಂಗಣ್ಣ ಒಳಗೆ ಕಾಲಿಡುತ್ತಲೂ ಉಪಾಧ್ಯಾಯರುಗಳು ಗಲಾಟೆ ನಿಲ್ಲಿಸಿ, ದಾರಿಬಿಟ್ಟು ಕೊಟ್ಟರು. ಅಡಿಗೆಯ ಮನೆಯಲ್ಲಿ ನಾಲ್ಕಾರು ಮೇಷ್ಟ್ರುಗಳು ಸೇರಿಬಿಟ್ಟದ್ದಾರೆ! ತಂತಮ್ಮ ಷರ್ಟುಗಳನ್ನೆಲ್ಲ ಬಿಚ್ಚಿ ಬಿಟ್ಟು, ಪಂಚೆಗಳನ್ನು ಮೊಣ ಕಾಲ ಮೇಲಕ್ಕೆ ಸೆಳೆದು ಬಿಗಿಯಾಗಿ ಕಟ್ಟಿಕೊಂಡಿದ್ದಾರೆ! ಕೂದಲ ಗಂಟುಗಳು ಬಿಚ್ಚಿ ಹೋಗಿವೆ! ಒಲೆಯಲ್ಲಿ ಕಟ್ಟಿಗೆಗಳನ್ನು ಹೇರಿ ಧಗಧಗ ಎಂದು ಉರಿಯುವಂತೆ ಮಾಡಿದ್ದಾರೆ. ಉರಿ ರಭಸವಾಗಿ ಎರಡಡಿ ಮೇಲಕ್ಕೆ ಹಾರುತ್ತಿದೆ! ಹತ್ತಿರ ನಿಲ್ಲಲಾಗದು. ಒಲೆಯ ಮೇಲೆ ದೊಡ್ಡ ದೊಂದು ಕೊಳಗದಪ್ಪಲೆ! ಇಬ್ಬರು ಮೇಷ್ಟ್ರುಗಳು ಗೋಣಿ ಚೀಲಗಳನ್ನು ಒದ್ದೆ ಮಾಡಿಕೊಂಡು ಕೊಳಗ ಪಾತ್ರೆಯನ್ನು ಅದುಮಿ ಹಿಡಿದುಕೊಂಡಿದ್ದಾರೆ! ಇನ್ನಿಬ್ಬರು ಮೇಷ್ಟ್ರುಗಳು ಉದ್ದನಾದ ಸರ್ವೆ ಕಟ್ಟಿಗೆಗಳಿಂದ ಪಾತ್ರೆ ಯೊಳಗಿರುವ ಪದಾರ್ಥವನ್ನು ಕಲಸಲು ಪ್ರಯತ್ನಿಸುತ್ತಿದ್ದಾರೆ! ಆ ಮೇಷ್ಟ್ರುಗಳ ಮೈ ಯಿಂದ ಬೆವರು ಸುರಿದು ಹೋಗುತ್ತಿದೆ! ಇನ್ನಿಬ್ಬರು ಮೇಷ್ಟ್ರುಗಳು ಬೀಸಣಿಗೆಗಳಿಂದ ಅವರಿಗೆಲ್ಲ ಗಾಳಿ ಬೀಸುತ್ತಿದಾರೆ! ಹೊರಗಿದ್ದ ಉಪಾಧ್ಯಾಯರು, ‘ಹೊತ್ತಾಗಿ ಹೋಯಿತು! ಮೂರುವರೆ ಗಂಟೆ! ಇನ್ಸ್‌ಪೆಕ್ಟರು ಬಂದರು!’ ಎಂದು ಕೂಗಿ ಹೇಳುತ್ತಿದಾರೆ. ಒಳಗಿಂದ, ‘ಆಯಿತು ತಾಳಿರಯ್ಯ! ಇನ್ನೇನು ಹದಕ್ಕೆ ಬರುತ್ತಿದೆ! ತೆಂಗಿನಕಾಯಿ ತುರಿ ತನ್ನಿ! ಯಾರಾದರೂ ಆ ಗೋಣಿತಟ್ಟು ಹಿಡಿದು ಕಾಫಿ ಶೋಧಿಸಿ!’ ಎಂದು ಉತ್ತರ ಕೊಡುತ್ತಿದಾರೆ. ರಂಗಣ್ಣ ಎಲ್ಲವನ್ನೂ ನೋಡಿ, ಇದೇನು ದೊಡ್ಡ ಅವಾಂತರ! ಒಂದು ಉಪ್ಪಿಟ್ಟು ಮಾಡುವುದಕ್ಕೆ ಇಷ್ಟು ಜನವೇ? ಸರ್ವೆ ಕಟ್ಟಿಗೆಯಿಂದ ತಿರುವೋದು ಏತಕ್ಕೆ? ಅಷ್ಟೊಂದು ಉರಿ ಏತಕ್ಕೆ? ಚೆನ್ನಾಯಿತು! ತೆಗೆಯಿರಿ ಉರಿ ಯನ್ನೆಲ್ಲ! ಎಲ್ಲವೂ ಸೀದಿ ಇದ್ದಲಾಯಿತೋ ಏನೋ! ಎಂದು ಛೀಮಾರಿ ಮಾಡುತ್ತ ಒಳ ಹೊಕ್ಕು ನೋಡಿದನು. ಉಪ್ಪಿಟ್ಟಿಲ್ಲ ಒಂದು ದೊಡ್ಡ ಅಂಟು ಮುದ್ದೆಯಾಗಿ ಕುಳಿತುಬಿಟ್ಟಿದೆ! ಬಂಕಬಂಕೆಯಾಗಿ ಕಟ್ಟಿಗೆಗಳಿಗೂ ಬದಿಗಳಿಗೂ ಮೆತ್ತಿಕೊಂಡಿದೆ! ರಂಗಣ್ಣನಿಗೆ ನಗು ಒಂದು ಕಡೆ ; ಹೀಗೆ ಏರ್ಪಾಡೆಲ್ಲ ಭಂಗವಾಯಿತಲ್ಲ ಎಂದು ವ್ಯಸನವೊಂದು ಕಡೆ. ‘ಗೋಪಾಲ ! ಏನು ಮುಟ್ಟಾಳ ಕೆಲಸ ಇದು? ನಿನಗೆ ಉಪ್ಪಿಟ್ಟು, ಮಾಡುವುದು ಗೊತ್ತಿಲ್ಲವೆ? ಎಷ್ಟು ಸಲ ನೀನು ಮಾಡಿಲ್ಲ? ಸಾಹೇಬರು ಬಂದ ಹೊತ್ತಿನಲ್ಲಿ ಹೀಗೆ ಆಭಾಸ ಮಾಡಬಹುದೇ?’ ಎಂದು ಗದರಿಸಿದನು.

‘ನನ್ನದು ತಪ್ಪಿಲ್ಲ ಸ್ವಾಮಿ! ನಾನು ಹೇಳಿದರೆ ಮೇಷ್ಟ್ರುಗಳು ಕೇಳಲಿಲ್ಲ. ನೀನೆಲ್ಲೋ ಒಂದು ಪಾವು ರವೆ ಹಾಕಿ ಇನ್ಸ್‌ಪೆಕ್ಟರಿಗೆ ಉಪ್ಪಿಟ್ಟು ಮಾಡೋವನು! ಹತ್ತು ಹನ್ನೆರಡು ಸೇರು ರವೆ ಹಾಕಿ ಮಾಡೋದು ನಿನಗೇನು ಗೊತ್ತು? ಎಂದು ನನ್ನನ್ನು ದಬಾಯಿಸಿ ಬಿಟ್ಟು ಅವರವರೇ ಪಾರುಪತ್ಯ ವಹಿಸಿಕೊಂಡರು. ರವೆಯನ್ನು ಹುರಿದಿಟ್ಟು ಕೊಳ್ಳಿ ; ನೀರು ಚೆನ್ನಾಗಿ ಮರಳಲಿ ಎಂದು ನಾನು ಹೇಳಿದರೆ ಕೇಳಲಿಲ್ಲ.’

‘ಮೇಷ್ಟೆ! ಇದೇನು, ಎಲ್ಲವನ್ನೂ ಹಾಳುಮಾಡಿದಿರಲ್ಲ? ಏನನ್ನು ಮಾಡಿಟ್ಟಿರಿ?’ ಎಂದು ರಂಗಣ್ಣ ಉಪ್ಪಿಟ್ಟು ಮಾಡುತ್ತಿದ್ದವರನ್ನು ಕೇಳಿದನು. ಅವರು, ‘ಸಾರ್! ಕೊಳಗದಪ್ಪಲೆಯಲ್ಲಿ ಒಗ್ಗರಣೆ ಹಾಕಿದೆವು. ಅದು ಚಟಪಟಗುಟ್ಟಿ ಘಮ ಘಮಾಯಿಸುತ್ತಿರುವಾಗ ರವೆಯನ್ನು ಸುರಿದೆವು. ಸೌಟಿನಿಂದ ಎರಡು ಬಾರಿ ತಿರುವಿ ಎರಡು ಕೊಡ ನೀರನ್ನು ಹೋಯ್ದು, ಕೆಳಗೆ ಉರಿ ಏರಿಸಿದೆವು! ರವೆಯೇಕೋ ನೀರನ್ನು ಹೀರಿಕೊಂಡು ಅಂಟುಮುದ್ದೆಯಾಗಿ ಹೋಯಿತು! ಈಗೆಲ್ಲ ಸರಿ ಮಾಡುತ್ತಿದ್ದೇವೆ. ಇನ್ನೆಲ್ಲ ಐದು ನಿಮಿಷ! ಐದೇ ನಿಮಿಷ ಸಾರ್!’ ಅಂಟುಮುದ್ದೆ ಯಾದರೂ ರುಚಿಯಾಗಿದೆ ನೋಡಿ ಸಾರ್!’ ಎಂದು ಹೇಳುತ್ತ ಸರ್ವೆ ಕಟ್ಟಿಗೆಗೆ ಮೆತ್ತಿಕೊಂಡಿದ್ದ ಬಂಕೆಯನ್ನು ನಿಂಬೇಹಣ್ಣು ಗಾತ್ರ ಉಂಡೆ ಮಾಡಿ ಕೈಗೆ ಹಾಕಿದರು. ಅದು ಉಪ್ಪು ಏಗಿ ಕಾರಕಾರವಾಗಿ, ಒಂದು ಕಡೆ ಬೆಂದು, ಇನ್ನೊಂದು ಕಡೆ ಬೇಯದೆ ಕೆಟ್ಟು ಹೋಗಿತ್ತು; ಜತೆಗೆ ಸೀಕಲು ವಾಸನೆ ಇತ್ತು. ರಂಗಣ್ಣನು, ‘ಸರಿ ಮೇಷ್ಟ್ರೆ! ಮೊದಲು ತಪ್ಪಲೆ ಕೆಳಗಿಳಿಸಿ! ಎಲ್ಲ ಬಹಳ ರುಚಿಯಾಗಿದೆ! ಸಾಹೇಬರಿಗೆ ಈ ತರತೀಪು ಬೇಡ! ನೀವುಗಳೆಲ್ಲ ಇದನ್ನು ಧ್ವಂಸಮಾಡಿ!’ ಎಂದು ಹೇಳಿದನು. ಬಳಿಕ ಕಾಫಿ ಕಷಾಯವನ್ನು ಒಂದು ಲೋಟದಷ್ಟು ಬಗ್ಗಿಸಿಕೊಂಡು, ಹಾಲನ್ನು ಸೇರಿಸಿ, ಸಕ್ಕರೆ ಹಾಕಿ ಕಾಫಿ ಮಾಡಿದನು. ಅಷ್ಟು ಹೊತ್ತಿಗೆ ತಿಮ್ಮಣ್ಣ ಭಟ್ಟನು ಸಾಹೇಬರನ್ನು ಕರೆದುಕೊಂಡು ಮುಸಾಫರಖಾನೆಯ ಬಳಿಗೆ ಬಂದನು. ಗಂಗೇಗೌಡರ ಮನೆಯಿಂದ ಬೆಳ್ಳಿಯ ತಟ್ಟೆಗಳನ್ನೂ ಲೋಟಗಳನ್ನೂ ರಂಗಣ್ಣ ತರಿಸಿದನು. ತನ್ನ ತಿಂಡಿಯ ಕೈ ಪೆಟ್ಟಿಗೆಯಿಂದ ಮೈಸೂರ ಪಾಕನ್ನೂ ಓಮ ಪುಡಿಯನ್ನೂ ಕೋಡ ಬಳೆಗಳನ್ನೂ ತೆಗೆದು ತಟ್ಟೆಗಳಲ್ಲಿಟ್ಟು, ಬೆಳ್ಳಿಯ ಲೋಟಗಳಲ್ಲಿ ಕಾಫಿಯನ್ನು ಸುರಿದು, ತಿಮ್ಮಣ್ಣ ಭಟ್ಟರ ಕೈಯಲ್ಲಿಯೂ ಗೋಪಾಲನ ಕೈ ಯಲ್ಲಿಯೂ ತೆಗೆಯಿಸಿಕೊಂಡು ಸಾಹೇಬರ ಕೋಣೆಗೆ ಹೋದನು. ಈ ತಿಂಡಿಗಳ ಜೊತೆಗೆ ಬಾಳೆಯಹಣ್ಣು, ಎಳನೀರು ಸಿದ್ದವಾಗಿದ್ದುವು.

ಇನ್ಸ್‌ಪೆಕ್ಟರ ಮತ್ತು ಸಾಹೇಬರ ಉಪಾಹಾರ ಮುಗಿಯಿತು. ಅತ್ತ ಮೇಷ್ಟ್ರುಗಳ ಉಪಾಹಾರವೂ ಮುಗಿದು, ಖಾಲಿಯಾಗಿದ್ದ ಕೊಳಗ ದಪ್ಪಲೆ ಹೊರಕ್ಕೆ ಬಂದು ಬಿದ್ದಿತ್ತು. ಎಲೆಯಡಕೆಗಳನ್ನು ಹಾಕಿಕೊಂಡು ಎಲ್ಲರೂ ಪಾಠಶಾಲೆಯ ಕಡೆಗೆ ಹೊರಟರು. ಮೇಷ್ಟರೊಬ್ಬನು ರಂಗಣ್ಣನ ಸಮೀಪಕ್ಕೆ ಬಂದು, ‘ಸಾರ್!’ ಎಂದನು. ರಂಗಣ್ಣನು ಸ್ವಲ್ಪ ಹಿಂದೆ ಸರಿದು, ‘ಏನು ಸಮಾಚಾರ?’ ಎಂದು ಕೇಳಿದನು. ‘ಕಷ್ಟ ಪಟ್ಟು ಉಪ್ಪಿಟ್ಟು ಮಾಡಿದ್ದೆವು ಸಾರ್! ಕೊನೆ ಕೊನೆಯಲ್ಲಿ ಚೆನ್ನಾಗಿಯೇ ಆಯಿತು! ಬಹಳ ರುಚಿಯಾಗಿತ್ತು! ತಾವು ತಿನ್ನಲಿಲ್ಲವಲ್ಲ ಎಂದು ನಮ್ಮಗೆಲ್ಲ ಬಹಳ ವ್ಯಥೆ! ನಮ್ಮ ಸಂತೋಷದಲ್ಲಿ ಅದೊಂದು ಕೊರತೆಯಾಯಿತು, ಸಣ್ಣ ಪಾತ್ರೆಯೊಂದರಲ್ಲಿ ಸ್ವಲ್ಪ ತೆಗೆದಿಟ್ಟು ಗೋಪಾಲನ ಕೈಯಲ್ಲಿ ಕೊಟ್ಟಿದ್ದೇವೆ. ತಾವು ಖಂಡಿತ ರುಚಿ ನೋಡಿ ಸಾರ್! ಚೆನ್ನಾಗಿದೆ! ನೀವೇ ಮೆಚ್ಚಿ ಕೋತೀರಿ’ ಎಂದು ಹೇಳಿದನು. ರಂಗಣ್ಣನು ನಗುತ್ತ ‘ಆಗಲಿ ಮೇಷ್ಟ್ರ್‍ಏ! ಸಭೆಯೆಲ್ಲ ಮುಗಿದು ಸಾಹೇಬರು ಹೊರಟು ಹೋದ ಮೇಲೆ ರುಚಿ ನೋಡುತ್ತೇನೆ’ ಎಂದು ಭರವಸೆ ಹೇಳಿದನು.

ಪುನಃ ಪಾಠ ಶಾಲೆಯಲ್ಲಿ ಸಂಘದ ಸಭೆ ನಾಲ್ಕು ಗಂಟೆಗೆ ಸೇರಿತು! ಇಪ್ಪತ್ತು ನಿಮಿಷಗಳವರೆಗೆ ಭಾರತ ವಾಚನವಾಯಿತು. ಅನಂತರ ಒಬ್ಬ ಮೇಷ್ಟ್ರು ಬುಡಬುಡಿಕೆಯವನ ವೇಷ ಹಾಕಿಕೊಂಡು ಬಂದು ಕಣಿ ಹೇಳಿದನು. ತರುವಾಯ ರಂಗಣ್ಣನ ಭಾಷಣ ವಾಯಿತು. ರಂಗಣ್ಣನು ಸಂಘಗಳ ಉದ್ದೇಶವನ್ನು ವಿವರಿಸುತ್ತಾ ಹೀಗೆ ಹೇಳಿದನು : ‘ವಿದ್ಯಾ ಪ್ರಚಾರದಲ್ಲಿ ನಾವುಗಳು ಮೇಲಿನ ಅಧಿಕಾರಿಗಳೊಡನೆಯೂ, ಕೈ ಕೆಳಗಿನ ಉಪಾಧ್ಯಾಯರೊಡನೆಯೂ, ಸುತ್ತಲ ಗ್ರಾಮಸ್ಥರೊಡನೆಯೂ ಏಗುತ್ತ, ಪರಸ್ಪರ ಸಾಮರಸ್ಯವನ್ನು ತರಬೇಕಾಗಿದೆ. ಈ ಮೂವರೊಡನೆ ವ್ಯವಹರಿಸುವುದು ಸುಲಭವಾದ ಕಾರ್ಯವಲ್ಲ. ಸಾಹೇಬರೇ ಈ ದಿನ ಅಧ್ಯಕ್ಷರಾಗಿರುವುದರಿಂದ ಅಧಿಕಾರಿಗಳ ವಿಚಾರವನ್ನು ನಾನು ಹೆಚ್ಚಾಗಿ ಹೇಳುವುದಿಲ್ಲ. ಅವರಿಂದ ನಮಗೆ ಪ್ರೋತ್ಸಾಹವೂ ಸಹಾಯವೂ ದೊರೆಯುತ್ತಿದ್ದರೆ ನಮ್ಮ ಕೆಲಸ ಚೆನ್ನಾಗಿ ನಡೆಯುತ್ತದೆ; ಅಡಿಗಡಿಗೆ ನಮ್ಮ ಮುಖಭಂಗವಾಗುತಿದ್ದರೆ ನಮಗೆ ಉತ್ಸಾಹಭಂಗವಾಗುತ್ತದೆ. ಇಷ್ಟನ್ನು ಮಾತ್ರ ಹೇಳಿ ಉಪಾಧ್ಯಾಯರ ಮತ್ತು ಗ್ರಾಮಸ್ಥರ ವಿಷಯವನ್ನು ಪ್ರಸ್ತಾಪಮಾಡುತ್ತೇನೆ. ಈ ಇಬ್ಬರನ್ನು ತಿದ್ದುವುದು ಮಹಾ ಪ್ರಯಾಸದ ಕೆಲಸ. ಹರಿ ಹರರಿಗೂ ಅಸಾಧ್ಯವೆಂದು ಹೇಳಿದಮೇಲೆ ಮನುಷ್ಯ ಮಾತ್ರದವನು ಏನನ್ನು ತಾನೆ ಮಾಡಬಹುದು! ನಿಮಗೆ ಒಂದು ಪುರಾಣದ ಕಥೆ ಹೇಳುತ್ತೇನೆ, ಕೇಳಿ : ದೇವಲೋಕದಲ್ಲಿ ಒಂದು ದಿನ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರಿಗೆ ನಾನು ಲೋಕನಾಯಕ ತಾನು ಲೋಕನಾಯಕ ಎಂದು ದೊಡ್ಡ ಜಗಳ ಹತ್ತಿತಂತೆ! ಆ ತ್ರಿಮೂರ್ತಿಗಳ ಜಗಳದಿಂದ ಪ್ರಳಯ ವಾತಾವರಣ ಉಂಟಾಯಿತು. ಆಗ ದೇವತೆಗಳೆಲ್ಲ ಬಹಳ ವ್ಯಥೆಪಟ್ಟರು. ಆ ಸಮಯಕ್ಕೆ ಸರಿಯಾಗಿ ನಾರದ ಮಹರ್ಷಿಗಳು ಆ ಸಭೆಗೆ ಬಂದರು. ತ್ರಿಮೂರ್ತಿಗಳ ವೀರಾವತಾರಗಳನ್ನು ನೋಡಿ ವೀಣಾವಾದನ ಮಾಡುತ್ತ
ನಿಮ್ಮ ನಿಮ್ಮಲ್ಲಿ ಕಲಹವೇಕೆ? ಲೋಕ ವ್ಯಾಪಾರವನ್ನು ನಡೆಸುವ ತ್ರಿಮೂರ್ತಿಗಳೇ ಜಗಳ ವಾಡಿದರೆ ಜನ ಬದುಕುವುದು ಹೇಗೆ ? ನಿಮ್ಮ ಜಗಳಕ್ಕೆ ಕಾರಣವೇನು ? ಎಂದು ವಿಚಾರಿಸಿದರು. ಆಗ ಅವರು, ನಾನು ಲೋಕನಾಯಕ, ತಾನು ಲೋಕನಾಯಕ, ಉಳಿದವರು ನನ್ನ ಭೃತ್ಯರು ಎಂದು ಹೇಳತೊಡಗಿದರು. ನಾರದರು ನಗುತ್ತಾ, ಒಂದು ಕೆಲಸ ಮಾಡಿ ; ನಿಮ್ಮ ಆಯುಧಗಳನ್ನು ಕೆಳಗಿಡಿ ; ನಾನು ನಿಮ್ಮ ಶಕ್ತಿಯನ್ನು ಪರೀಕ್ಷೆ ಮಾಡುತ್ತೇನೆ ; ತೇರ್ಗಡೆಯಾದವರನ್ನು ಈ ದೇವಸಭೆ ಲೋಕನಾಯಕನೆಂದು ಒಪ್ಪುತ್ತದೆ-ಎಂದು ಹೇಳಿದರು. ಅದರಂತೆ ಅವರೆಲ್ಲ ಆಯುಧಗಳನ್ನು ಕೆಳಗಿಟ್ಟರು. ನಾರದರು, – ನೋಡಿ! ನಾಯಿಯ ಬಾಲದ ಡೊಂಕನ್ನು ಸರಿಪಡಿಸಬೇಕು! ಇಲ್ಲವಾದರೆ, ಮೇಷ್ಟ್ರ ಬುದ್ದಿಯ ಡೊಂಕನ್ನು ಸರಿಪಡಿಸಬೇಕು! ಇಲ್ಲವಾದರೆ, ಹಳ್ಳಿಯವರ ಹಟದ ಡೊಂಕನ್ನು ಸರಿಪಡಿಸಬೇಕು! ಇವುಗಳಲ್ಲಿ ಯಾವುದೊಂದನ್ನು ಮಾಡಿದರೂ ಸರಿಯೆ, ಅವನನ್ನು ನಾವು ದೇವತಾ ಸಾರ್ವಭೌಮನೆಂದು ಒಪ್ಪಿ ಕೊಳ್ಳುತ್ತೇವೆ ಎಂದರು. ಆಗ ಬ್ರಹ್ಮನು ನಾಯಿಯ ಬಾಲದ ಡೊಂಕನ್ನು ಸರಿಪಡಿಸಲು ಹೊರಟನು ; ವಿಷ್ಣುವು ಮೇಷ್ಟರ ಡೊಂಕನ್ನು ಸರಿಪಡಿಸುತ್ತೇನೆಂದು ಹೊರಟನು ; ಮಹೇಶ್ವರನು ಹಳ್ಳಿಯವರ ಡೊಂಕನ್ನು ತಿದ್ದುತ್ತೇನೆಂದು ಹೊರಟನು. ಬ್ರಹ್ಮನು ದಾರಿಯಲ್ಲಿ ಸಿಕ್ಕ ನಾಯಿಗಳನ್ನೆಲ್ಲ ಹಿಡಿದು, ಅವುಗಳ ಬಾಲವನ್ನು ನೇವರಿಸಿ, ಬಗ್ಗಿಸಿ, ಡೊಂಕನ್ನು ಸರಿಪಡಿಸಲು ಬಹಳವಾಗಿ ಪ್ರಯತ್ನ ಪಟ್ಟನು. ಅದು ಆಗಲಿಲ್ಲ. ಆಗ ಅವನು ಒಂದು ಕುಯುಕ್ತಿಯನ್ನು ಮಾಡಿದನು. ಒಂದು ನಾಯಿಮರಿಯ ಬಾಲಕ್ಕೆ ಕೆಳಗಡೆ ಒಂದು ಕಂಬಿಯನ್ನು ಕಣ್ಣಿಗೆ ಕಾಣದಂತೆ ಸೇರಿಸಿ ಕಟ್ಟಿದನು. ಆಗ ಬಾಲ ನೆಟ್ಟಗಾಯಿತು! ತನ್ನಲ್ಲೇ ಸಂತೋಷಪಡುತ್ತ, ನೋವಿನಿಂದ ಕುಂಯ್ಗುಟ್ಟುತ್ತಿದ್ದ ನಾಯಿಯನ್ನು ಕಂಕುಳಲ್ಲಿ ಇರುಕಿ ಕೊಂಡು ಬ್ರಹ್ಮನು ದೇವಸಭೆಗೆ ಬಂದನು.’

‘ಅತ್ತ ವಿಷ್ಣುವು ಮೇಷ್ಟರ ಸಹವಾಸಮಾಡಿ ಡೊಂಕನ್ನು ತಿದ್ದಲು ಪ್ರಯತ್ನ ಪಟ್ಟನು. ತಾನು ಎದುರಿಗೆ ಕುಳಿತಿದ್ದು ಒತ್ತಿ ಹಿಡಿದಿರುವ ಪರ್ಯಂತರವೂ ಡೊಂಕು ಕಾಣುತ್ತಿರಲಿಲ್ಲ. ಮೇಷ್ಟ್ರು ಸರಿಯಾಗಿಯೇ ಇರುತ್ತಿದ್ದನು. ತಾನು ಹಿಡಿತ ಬಿಟ್ಟು ಸ್ವಲ್ಪ ಮರೆಯಾಗುತ್ತಲೂ ಆ ಡೊಂಕು ಪುನಃ ಕಾಣಿಸಿಕೊಳ್ಳುತ್ತಲೇ ಇತ್ತು! ವಿಷ್ಣುವು ಹತಾಶನಾಗಿ ಆ ಕಾರ್ಯ ತನ್ನಿಂದ ಸಾಧ್ಯವಿಲ್ಲವೆಂದು ಖಿನ್ನತೆಯಿಂದ ದೇವಲೋಕಕ್ಕೆ ಹಿಂದಿರುಗಿದನು. ಮಗುದೊಂದು ಕಡೆ ಮಹೇಶ್ವರನು ಹಳ್ಳಿ ಯವರಲ್ಲಿ ನೆಲಸಿ ಅವರ ಡೊಂಕನ್ನು ಸರಿಪಡಿಸಲು ವಿಶ್ವ ಪ್ರಯತ್ನ ಪಟ್ಟನು. ಏನು ಪ್ರಯತ್ನ ಪಟ್ಟರೂ ಸಾರ್ಥಕವಾಗಲಿಲ್ಲ! ಅವನೂ ನಿರಾಶನಾಗಿ ದೇವ ಲೋಕಕ್ಕೆ ಹಿಂದಿರುಗಿದನು.’

‘ದೇವತೆಗಳೆಲ್ಲ ಕುತೂಹಲದಿಂದ ನಿರೀಕ್ಷಿಸುತ್ತಿದ್ದರು. ಬ್ರಹ್ಮಾವಿಷ್ಣು ಮಹೇಶ್ವರರು ಸಭೆಗೆ ಬಂದರು. ನಾರದರು ಅವರ ಮುಖಭಾವಗಳನ್ನು ನೋಡಿದರು. ಬ್ರಹ್ಮನ ಮುಖ ಮಾತ್ರ ಗೆಲುವಾಗಿತ್ತು; ಸ್ವಲ್ಪ ಜಂಬದಿಂದಲೂ ಕೂಡಿತ್ತು. ಉಳಿದಿಬ್ಬರು ಖಿನ್ನರಾಗಿದ್ದರು. ವಿಷ್ಣುವು-ಮೇಷ್ಟರ ಡೊಂಕನ್ನು ಎದುರಿಗಿದ್ದಷ್ಟು ಕಾಲ ತಿದ್ದಬಹುದು ; ಆಮೇಲೆ ಎಂದಿನಂತೆಯೆ ಡೊಂಕು ತಲೆಯೆತ್ತುತ್ತದೆ! ಏನು ಮಾಡಲಿ? ತಿದ್ದಲು ನನ್ನಿಂದ ಸಾಧ್ಯವಾಗಲಿಲ್ಲ! ಎಂದು ನಿಜವನ್ನು ಹೇಳಿಬಿಟ್ಟನು, ಮಹೇಶ್ವರನು, ಹಳ್ಳಿ ಯವರದು ಹಲವಾರು ಡೊಂಕುಗಳು! ಒಂದು ಕಡೆ ಒಂದನ್ನು ಸರಿ ಮಾಡಿದರೆ ಮತ್ತೊಂದು ಕಡೆ ಬೇರೊಂದು ಎದ್ದು ಕೊಳ್ಳುತ್ತದೆ! ನನ್ನ ಕೈಯಲ್ಲಿ ಸರಿಪಡಿಸುವುದಕ್ಕೆ ಆಗಲಿಲ್ಲ!- ಎಂದು ನಿಜಾಂಶವನ್ನು ತಿಳಿಸಿದನು. ದೇವತೆಗಳು ಬ್ರಹ್ಮನ ಮುಖವನ್ನು ನೋಡಿದರು. ಅವನು ಜಂಬದಿಂದ ತನ್ನ ಕಂಕುಳಲ್ಲಿದ್ದ ನಾಯಿಯ ಮರಿಯನ್ನು ಅವರ ಮುಂದಿಟ್ಟನು ! ಎಲ್ಲರೂ ನೋಡುತ್ತಾರೆ ! ನಾಯಿಯ ಬಾಲ ನೆಟ್ಟಗಿದೆ! ಪರಮಾಶ್ಚರ್ಯವಾಯಿತು ! ಆಗ ನಾರದರು, ವೀಣೆಯ ಅಪಸ್ವರದಂತೆ ಕುಂಯಮ್ ಗುಟ್ಟುತ್ತಿದ್ದ ನಾಯಿಯನ್ನು ನೋಡಿ, ಇದೇಕೆ ಕುಂಯ್ಗುಟ್ಟುತ್ತಿದೆ ? ನೋಡೋಣ ಎಂದು ನಾಯಿಯ ಬಾಲವನ್ನು ಮುಟ್ಟಿ ಸವರಲು ಕೆಳಗಡೆ ಇದ್ದ ಕಂಬಿ ಕೈಗೆ ಸಿಕ್ಕಿತು ! ಕಟ್ಟಿದ್ದ ಕಂಬಿಯನ್ನು ನಾರದರು ಮೆಲ್ಲಗೆ ತೆಗೆದುಬಿಟ್ಟರು ನಾಯಿ ಕುಂಯ್ಗುಟ್ಟುವುದು ನಿಂತು ಹೋಯಿತು ! ಯಥಾ ಪ್ರಕಾರ ನಾಯಿಯ ಬಾಲ ಡೊಂಕಾಗಿ ನಿಂತಿತು ! ದೇವತೆಗಳೆಲ್ಲ ಬ್ರಹ್ಮನನ್ನು ನೋಡಿ ಛೀಮಾರಿ ಮಾಡಿದರು : ನೀನು ಮೋಸಗಾರ ! ಸುಳ್ಳುಗಾರ ! ನಿನಗೆ ಲೋಕದಲ್ಲಿ ಪೂಜೆಯಿಲ್ಲದೆ ಹೋಗಲಿ!’ ಎಂದು ಶಪಿಸಿಬಿಟ್ಟರು. ವಿಷ್ಣುವನ್ನೂ ಮಹೇಶ್ವರನನ್ನೂ ನೋಡಿ, ‘ನೀವು ನಿಜ ಹೇಳಿದವರು ! ಲೋಕದಲ್ಲಿ ನಿಮಗೆ ಪೂಜೆ ಸಲ್ಲಲಿ ! ಆಯಾ ಭಕ್ತರ ಭಾವದಂತೆ ಅವರವರಿಗೆ ನೀವು ಲೋಕನಾಯಕರಾಗಿ, ದೇವತಾಸಾರ್ವಭೌಮರಾಗಿ ಕಾಣಿಸಿಕೊಳ್ಳಿರಿ! ಎಂದು ಹೇಳಿದರು. ಹೀಗೆ ಪುರಾಣದ ಕಥೆ.’

ಸಭೆ ನಗುವಿನಲ್ಲಿ ಮುಳುಗಿ ಹೋಯಿತು ಸಾಹೇಬರೂ ನಗುತ್ತಾ, ‘ರಂಗಣ್ಣನವರೇ ! ಇದು ಯಾವ ಪುರಾಣದಲ್ಲಿದೆ? ಕಥೆ ಚೆನ್ನಾಗಿದೆಯಲ್ಲ!’ ಎಂದು ಕೇಳಿದರು. ರಂಗಣ್ಣ, ‘ಇಂಥವೆಲ್ಲ ನಮ್ಮ ಬ್ರಹ್ಮಾಂಡ ಪುರಾಣದಲ್ಲಿ ಬಹಳ ಇವೆ ಸಾರ್!’ ಎಂದು ನಗುತ್ತಾ ಉತ್ತರ ಕೊಟ್ಟನು. ಬಳಿಕ ಭಾಷಣವನ್ನು ಮುಂದುವರಿಸಿ’ ಆದ್ದರಿಂದ ನಮ್ಮದು ಎಷ್ಟು ಪ್ರಯಾಸದ ಕೆಲಸ ನೋಡಿ! ಒಂದು ಕಡೆ ಮೇಷ್ಟರುಗಳನ್ನು ತಿದ್ದಿಕೊಳ್ಳು ವುದಕ್ಕಾಗಿಯೂ ಇನ್ನೊಂದು ಕಡೆ ಹಳ್ಳಿಯವರಿಗೆ ತಿಳಿವಳಿಕೆ ಕೊಟ್ಟು ಅವರನ್ನು ತಿದ್ದಿ ಕೊಳ್ಳುವುದಕ್ಕಾಗಿಯೂ, ಎಲ್ಲರಲ್ಲಿಯೂ ಪರಸ್ಪರ ಸೌಹಾರ್ದ ಮತ್ತು ಸಾಮರಸ್ಯಗಳನ್ನುಂಟು ಮಾಡುವುದಕ್ಕಾಗಿಯೂ, ಈ ಉಪಾಧ್ಯಾಯರ ಸಂಘಗಳ ಸಭೆಗಳನ್ನು ಗ್ರಾಮಾಂತರಗಳಲ್ಲಿ ಏರ್ಪಾಡು ಮಾಡುತ್ತಿದೇವೆ’- ಎಂದು ರಂಗಣ್ಣ ಹೇಳಿ ಗಂಗೇಗೌಡರ ಔದಾರವನ್ನು ಪ್ರಶಂಸೆಮಾಡಿ ತನ್ನ ಭಾಷಣವನ್ನು ಮುಕ್ತಾಯ ಮಾಡಿದನು.

ತರುವಾಯ ಗಂಗೇಗೌಡರು ಗ್ರಾಮಸ್ಥರ ಅಹವಾಲನ್ನು ಹೇಳಿ ಕೊಳ್ಳುವುದಕ್ಕಾಗಿ ಎದ್ದು ನಿಂತರು. ‘ಸ್ವಾಮಿ! ನನಗೆ ಈ ಸಭೆಯಲ್ಲಿ ಎದ್ದು ಮಾತನಾಡುವುದಕ್ಕೆ ಹೆದರಿಕೆಯಾಗುತ್ತದೆ. ನಮ್ಮ ಇನ್ಸ್‌ಪೆಕ್ಟರ್ ಸಾಹೇಬರು ದೊಡ್ಡ ವಿದ್ವಾಂಸರು! ಈಗ ತಾನೆ ಪುರಾಣದ ಕಥೆ ಹೇಳಿ ಹಳ್ಳಿಯವರಲ್ಲಿ ಹಲವು ಡೊಂಕುಗಳಿವೆ! ಒಂದನ್ನು ಒಂದು ಕಡೆ ಸರಿಪಡಿಸಿದರೆ ಮತ್ತೊಂದು ಬೇರೊಂದು ಕಡೆ ಎದ್ದು ಕೊಳ್ಳುತ್ತದೆ! ಎಂದು ತಿಳಿಸಿದ್ದಾರೆ’ ಎಂದು ನಗುತ್ತ ಹೇಳಿದರು. ಸಭೆಯಲ್ಲಿ ಚಪ್ಪಾಳೆ ಧ್ವನಿ ತುಂಬಿ ಹೋಯಿತು. ‘ನಾನೊಬ್ಬ ಹಳ್ಳಿಗ! ನಮ್ಮ ಡೊಂಕುಗಳಿಗೆಲ್ಲ ಮದ್ದು ವಿದ್ಯೆ! ವಿದ್ಯೆ ನಮ್ಮಲ್ಲಿ ಚೆನ್ನಾಗಿ ಹರಡುತ್ತ ಬಂದು, ಜನರಲ್ಲಿ ಉತ್ಪಾದನ ಶಕ್ತಿ ಬೆಳೆದು, ಹೊಟ್ಟೆ ತುಂಬ ಹಿಟ್ಟು ದೊರೆತರೆ ಡೊಂಕುಗಳು ಮಾಯ ವಾಗುತ್ತವೆ ಸ್ವಾಮಿ! ಒಳ್ಳೆಯ ವಿದ್ಯ, ಒಳ್ಳೆಯ ಊಟ, ಒಳ್ಳೆಯ ನಡತೆ – ಇವುಗಳಿಂದ ನಾವು ಮಾದರಿ ಪ್ರಜೆಗಳಾಗಬಹುದು; ನಮ್ಮ ದೇಶ ಮಾದರಿ ದೇಶವಾಗಬಹುದು. ಈ ಗ್ರಾಮ ಬಹಳ ದೊಡ್ಡದು. ಪ್ರೈಮರಿ ಪಾಠ ಶಾಲೆಯಲ್ಲಿ ನೂರೈವತ್ತು ಮಂದಿ ಮಕ್ಕಳಿದ್ದಾರೆ. ಸುತ್ತಲೂ ಹತ್ತಾರು ಪಾಠ ಶಾಲೆಗಳಿವೆ. ಈ ಊರಿಗೊಂದು ಮಿಡಲ್ ಸ್ಕೂಲನ್ನು ಕೊಟ್ಟರೆ ಬಹಳ ಚೆನ್ನಾಗಿರುತ್ತದೆ. ಗ್ರಾಮಸ್ಥರು ಉದಾರವಾಗಿ ಸಹಾಯ ಮಾಡಲು ಸಿದ್ದವಾಗಿದ್ದಾರೆ. ಮಿಡಲ್ ಸ್ಕೂಲಿಗೆ ಕಟ್ಟಡವನ್ನು ಮುಫತ್ತಾಗಿ ಕಟ್ಟಿ ಕೊಡುತ್ತಾರೆ! ಆದ್ದರಿಂದ ದಯವಿಟ್ಟು ಒಂದು ಮಿಡಲ್ ಸ್ಕೂಲ್ ಅಪ್ಪಣೆಯಾಗಬೇಕು!’ ಎಂದು ಬೇಡಿಕೆಯನ್ನು ಸಲ್ಲಿಸಿದರು. ಬಳಿಕ ಇನ್ಸ್‌ಪೆಕ್ಟರು ಮಾಡುತ್ತಿರುವ ಕೆಲಸವನ್ನು ಪ್ರಶಂಸೆಮಾಡಿ, ಡಿ.ಇ.ಓ. ಸಾಹೇಬರಿಗೆ ವಂದನೆಗಳನ್ನು ಅರ್‍ಪಿಸಿದರು.

ಸಾಹೇಬರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಉಪಾಧ್ಯಾಯರ ಸಂಘಗಳ ಪ್ರಯೋಜನವನ್ನು ತಿಳಿಸಿ, ರಂಗಣ್ಣನ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಗಳು ಬಹಳ ಉಪಕಾರಕವಾಗಿರುವುವೆಂದೂ, ಸಂಸ್ಥಾನಕ್ಕೆ ಮಾದರಿಯಾಗಿವೆಯೆಂದೂ ಹೇಳಿದರು. ಗಂಗೇಗೌಡರಂಥ ಮುಂದಾಳುಗಳು ದೇಶದಲ್ಲಿರುವುದು ದೇಶದ ಸೌಭಾಗ್ಯವೆಂದು ಹೋಗಳಿದರು. ಬಳಿಕ ಮಿಡಲ್ ಸ್ಕೂಲಿನ ವಿಚಾರ ಎತ್ತಿ, ಈ ಊರು ಬಹಳ ಮುಂದು ವರಿದಿದೆ ಎನ್ನುವುದು ನನಗೆ ಈ ಸಾಯಂಕಾಲ ಮನದಟ್ಟಾಯಿತು. ಊರು ನಿಜವಾಗಿಯೂ ಮಿಡಲ್ ಸ್ಕೂಲನ್ನು ಪಡೆಯಲು ಅರ್ಹವಾಗಿದೆ! ಆದಷ್ಟು ಬೇಗ ಕೊಡಲು ತೀರ್ಮಾನಿಸಿದ್ದೇನೆ ಎಂದು ಹೇಳಿದರು. ಎಲ್ಲರೂ ಚಪ್ಪಾಳೆ ತಟ್ಟಿದರು. ‘ಕಾಯೌ ಶ್ರೀಗೌರಿ’ ಯನ್ನು ಹಾಡಿದ ನಂತರ ಸಭೆ ಮುಕ್ತಾಯವಾಯಿತು.

ಸಾಯಂಕಾಲ ಐದೂವರೆ ಗಂಟೆಯಾಯಿತು. ಬಸ್ಸು ಸ್ಕೂಲ ಬಳಿಗೆ ಬಂತು. ಸಾಹೇಬರನ್ನು ಬಹಳ ವೈಭವದಿಂದ ಬಸ್ಸಿನ ಬಳಿಗೆ ಊರಿನ ಜನ ಕರೆದು ಕೊಂಡು ಹೋದರು. ಸಾಹೇಬರು, ರಂಗಣ್ಣನ ಕೈ ಕುಲುಕಿ, ‘ರಂಗಣ್ಣನವರೇ! ನನಗೆ ಬಹಳ ಸಂತೋಷವಾಗಿದೆ. ನೀವು ಮಾಡುತ್ತಿರುವ ಕೆಲಸವನ್ನು ದೊಡ್ಡ ಸಾಹೇಬರುಗಳಿಗೆ ತಿಳಿಸುತ್ತೇನೆ. ಈಗ ನಿಮ್ಮಿಂದ ಎರಡು ಕಾರ್ಯಗಳು ನಡೆಯಬೇಕು. ಮೊದಲನೆಯದು, ಗರುಡನಹಳ್ಳಿ ಹನುಮನಹಳ್ಳಿ ವ್ಯಾಜ್ಯವನ್ನು ಪಂಚಾಯತಿ ಮಾಡಿ ನೀವು ಪರಿಹರಿಸಬೇಕು. ಎರಡನೆಯದು, ಈಚೆಗೆ ಮುಂಜೂರಾಗಿರುವ ಕೆಲವು ಸರಕಾರಿ ಪ್ರೈಮರಿ ಪಾಠಶಾಲೆಗಳನ್ನು ‘ಬೇಗ ಸರಿಯಾದ ಕಡೆಗಳಿಗೆ ಹಂಚಿ, ವರದಿಯನ್ನು ಕಳಿಸಿಕೊಡ ಬೇಕು’ ಎಂದು ಹೇಳಿದರು. ರಂಗಣ್ಣನು, ‘ಆಗಲಿ ಸಾರ್!’ ಎಂದು ಹೇಳಿದನು. ಸಾಹೇಬರು ಗಂಗೇಗೌಡರ ಕೈ ಕುಲುಕಿ, ಎಲ್ಲರಿಗೂ ವಂದನೆಮಾಡಿ ಬಸ್ ಹತ್ತಿದರು. ಬಸ್ ಹೊರಟಿತು. ಜಯಕಾರಗಳು ನಭೋಮಂಡಲವನ್ನು ಭೇದಿಸಿದುವು!
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೆದಾರ ಮರಣಮೃದಂಗ
Next post ಕೆಡದೆಯೇ ಕೆಟ್ಟವನು ಎನ್ನಿಸುವುದಕ್ಕಿಂತ

ಸಣ್ಣ ಕತೆ

 • ಅಪರೂಪದ ಬಾಂಧವ್ಯ

  ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಎರಡು ಮದುವೆಗಳು

  ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

 • ತ್ರಿಪಾದ

  ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

cheap jordans|wholesale air max|wholesale jordans|wholesale jewelry|wholesale jerseys