ಮದ್ವಯಾಯಿತೆಂದು ಅವ್ವನಿಗೆ ಹೇಳಲು ಹೋಗಿದ್ದೆ. ಅವ್ವನ ಕೋಪ ಸ್ವಲ್ಪ ಸ್ವಲ್ಪವೇ ಕಡಿಮೆಯಾಗಿತ್ತು. ಆ ಧೈರ್ಯದಿಂದ ಹೋಗಿದ್ದೆ. ಆದರೆ ಅವ್ವ ಕೆಂಡಾಮಂಡಲವಾದಳು.
“ಗಂಡಿಲ್ಲದೆ ನಿನಗೆ ಬದುಕೋಕೆ ಆಗೋದಿಲ್ವಾ?” ಕೆರಳಿದಳು. “ಆದರೆ ಒಬ್ಬಳೇ ಇರಬೇಕಲ್ಲವ್ವಾ…”
“…..”
“ನಿನಗೆ ತುಂಬಾ ನೋವು ಕೊಟ್ಟೆ ದುಃಖ ಅವಮಾನದಿಂದ ಅಳುವಂತೆ ಮಾಡಿಬಿಟ್ಟೆ, ಸಾಧಿಸಿ ತೋರಬೇಕು ತಾನೆ? ಹಾಗೆ ಆದ ಮೇಲೇನೆ ನಾನು ನಿನ್ನ ಮುಖ ನೋಡೋದು. ನನ್ನನ್ನು ದಯವಿಟ್ಟು ಕ್ಷಮಿಸಿಬಿಡು…” ಮುಂದೆ ಏನು ಹೇಳಲಾರದೆ ಹೊರಟು ಬಂದು ಬಿಟ್ಟಿದ್ದೆ.
“ನಾನು ನಿಮ್ಮನ್ನು ಕಟ್ಟಿಕೊಂಡು ಗಂಡಿನ ಸಹಾಯವಿಲ್ಲದೆ ಬದುಕಿರಲಿಲ್ಲವಾ?”
“ನಿನ್ನ ಬಳಿ ಮನೆಯ ತುಂಬಾ ಜನರಿದ್ದರು. ಅದು ಬೆಂಗಳೂರು…”
“ಊರೂ ಏನು ಮಾಡುತ್ತೆ ನೀನು ಸರಿಯಾಗಿದ್ದರೆ… ಹೋಗಿ ಹೋಗಿ ನಿನ್ನ ಹತ್ತಿರ ಕೆಲಸ ಮಾಡುತ್ತಿದ್ದ ನಿನಗಿಂತ ಚಿಕ್ಕವನಾಗಿರೋನು ನಿನಗೆ ಮನಸ್ಸು ಹೇಗೆ ಬಂತು…?”
“ನನಗೆ ಮನಸ್ಸೇ ಇಲ್ಲ ಅವ್ವಾ.. ಸತ್ತು ಹೋಗಿಬಿಟ್ಟಿದೆ.”
“ಬದುಕು… ನೀನು ಬರೆಯೋ ಕತೆ ಕಾದಂಬರಿಗಳಲ್ಲ. ಅದರ ಬದಲು ಭಿಕ್ಷೆ ಬೇಡಬಹುದಿತ್ತು…”
“ಅದೂ ನನ್ನ ಕೈಲಿ ಆಗೋಲ್ಲವಲ್ಲ…”
“ನನ್ನ ಮಗಳು ನನಗೆ ಗಂಡು ಮಗ ಇದ್ದ ಹಾಗೆ ಎಂದುಕೊಂಡು ಎಲ್ಲಾ ಕನಸುಗಳನ್ನು ಕಟ್ಟಿ ಬೆಳೆಸಿದ್ದೆ. ಆದರೆ ನೀನು? ಥೂ..!”
“…..”
“ನನ್ನ ಮರ್ಯಾದೆ, ನನ್ನ ಕನಸುಗಳನ್ನೆಲ್ಲಾ ಸುಟ್ಟುಬಿಟ್ಟೆ… ನೀನಿದ್ದರೆಷ್ಟು ಬಿಟ್ಟರೆಷ್ಟು.. ನೀನು ಹಾಳಾಗಿ ಹೋಗಿಬಿಟ್ಟೆ…”
“ನೀನು ಜೊತೆಗೆ ಇದ್ದರೆ ದೊಡ್ಡ ಕೋಟೆ ಹಾಗಿರುತ್ತಿತ್ತು. ನಾನು ಹಾಯಾಗಿ ಬದುಕುತ್ತಿದ್ಎದ…”
“ಅದೊಂದು ಬೇರೆ ಕೇಡು, ಕುಣಿಯಲಾರದವಳು ಏನೋ ಅಂದಳಂತೆ… ನೀನೂ ಹಾಳಾದೆ. ನನಗೂ ನೋವು ಕೊಟ್ಟುಬಿಟ್ಟೆ… ನನ್ನ ಮಗಳು ಧೈರ್ಯವಂತೆ. ಏನನ್ನಾದರೂ ಸಾಧಿಸುತ್ತಾಳೆಂದುಕೊಂಡಿದ್ದ. ಆದರೆ ಎಲ್ಲವೂ ಬೂದಿಯಾಗಿ ಬಿಟ್ಟಿತ್ತು…” ಅವ್ವನ ಸಿಟ್ಟು ಕಡಿಮೆಯಾಗಿ ಅಲ್ಲಿ ದುಃಖ ಆವರಿಸಿತ್ತು. ಅವಳ ಕಂಠ ಗದ್ಗದವಾಯಿತು.
ನಾನು ಏನನ್ನಾದರೂ ಸಹಿಸುತ್ತಿದ್ದೆ. ಆದರೆ ಅವ್ವ ಆಳುವುದನ್ನು ಮಾತ್ರ ಸಹಿಸಲಾಗುತ್ತಿರಲಿಲ್ಲ.
“ನನ್ನ ಹಣೆಬರಹವನ್ನು ನಾನೇ ಬರೆದುಕೊಳ್ಳುವ ಹಾಗಿದ್ದರೆ ಚೆನ್ನಾಗಿಯೇ ಬರೆದುಕೊಳ್ಳುತ್ತಿದ್ದೆ… ಮೆಡಿಕಲ್ ಓದಿದ್ದ ನನಗೆ ಬರೆಯುವುದು ಕಷ್ಟವಾಗಿರಲಿಲ್ಲ. ಆದರೆ ಹಾಗಾಗಿರಲಿಲ್ಲ. ಅವ್ವ..”
“…..”
“ನಿನಗೆ ತುಂಬಾ ನೋವು ಕೊಟ್ಟೆ ದುಃಖ ಅವಮಾನದಿಂದ ಅಳುವಂತೆ ಮಾಡಿಬಿಟ್ಟೆ. ಸಾಧಿಸಿ ತೋರಬೇಕು ತಾನೆ? ಹಾಗೆ ಆದ ಮೇಲೇನೆ ನಾನು ನಿನ್ನ ಮುಖ ನೋಡೋದು. ನನ್ನನ್ನು ದಯವಿಟ್ಟು ಕ್ಷಮಿಸಿಬಿಡು…” ಮುಂದೆ ಏನು ಹೇಳಲಾರದೆ ಹೊರಟು ಬಂದು ಬಿಟ್ಟಿದ್ದೆ.
ಚಿನ್ನೂ,
ಈಗ ಅನ್ನಿಸ್ತಾಯಿದೆ ಅವ್ವ ಹೇಳಿದ್ದೆಲ್ಲಾ ಸರಿಯಾಗಿಯೇ ಇತ್ತು. ಆದರೆ ನಾನಾಗಲೇ ಕೆಸರಿನ ಗುಂಡಿಯಲ್ಲಿ ಬಿದ್ದಾಗಿತ್ತು. ನಿಧಾನವಾಗಿ ಇಷ್ಟಿಷ್ಟೇ ಕುಸಿದುಹೋಗತೊಡಗಿದ್ದೆ. ಆದರೂ ಮೇಲೆ ಬರಬೇಕು, ಉಸಿರು ಕಟ್ಟಿ ಅಲ್ಲಿಯೇ, ಅದರೊಳಗಡೆಯೇ ಮುಳುಗಿ ಹೋಗಬಾರದೆಂಬ ಹಠ, ಪ್ರಾಣ ಭಯ ಎಲ್ಲವೂ ಇತ್ತು. ಆಸರೆಗೆ ಒಂದು ಬಳ್ಳಿ ಸಿಕ್ಕಿದ್ದರೂ ಸಾಕು ಹಿಡಿದು, ಮೇಲೆ ಬಂದು ಬದುಕಿದೆನೆಂಬ ಪ್ರಯತ್ನ ನನ್ನದಾಗಿತ್ತು. ಹಂತ ಹಂತದಲ್ಲೂ ಸೋಲು, ಅವಮಾನ, ಅಪನಂಬಿಕೆಯ ಉಸುಕಿನೊಳಗೆ ಹುದುಗಿ ಹೋಗುವಂತಾದ ನನ್ನಲ್ಲಿ ನಿಧಾನವಾಗಿ ಖಿನ್ನತೆ ಆವರಿಸತೊಡಗಿತ್ತು. ನಾನಂದುಕೊಂಡ ಹಾಗೆ, ಆಸೆ ಪಟ್ಟಹಾಗೆ, ಕನಸು ಕಂಡ ಹಾಗೆ ನನಗೆ ಬದುಕಲು ಆಗಲೇ ಇಲ್ಲ. ಬ್ರೇಕ್ ತಪ್ಪಿದ ವಾಹನದಂತೆ ನನ್ನ ಬದುಕು ಎತ್ತೆಂದರತ್ತ ಹೋಗತೊಡಗಿತ್ತು. ತಿಳಿಸಿ ಹೇಳಿ ಮಾರ್ಗ ತೋರುವವರು ನನ್ನ ಹತ್ತಿರವಿರಲಿಲ್ಲ.
ನನಗೆ ಸ್ನೇಹ, ಪ್ರೀತಿ ಅಂತ ಹೇಳಿಕೊಳ್ಳಲು ಯಾರ ಮೇಲೂ ಪ್ರೀತಿ ಹುಟ್ಟಲೇ ಇಲ್ಲ. ಮಧುರ ಭಾವನೆಗಳು ಬರಲೇ ಇಲ್ಲ ಕಣೆ. ಸಮಾಜಕ್ಕೆ ಹೆದರಿ ಮದುವೆಯಾಗಿದ್ದೆನಾ? ಸೇಡು ತೀರಿಸಿಕೊಳ್ಳಲು ಮದುವೆಯಾಗಿದ್ದೆನಾ? ನನಗೆ ಸಾಮಾಜಿಕ ಭದ್ರತೆಗಾಗಿ ಮದುವೆಯಾಗಿದ್ದೇನಾ? ಎಂದು ನನಗೆ ನಾನೇ ಪ್ರಶ್ನೆ ಕೇಳಿಕೊಂಡರೆ ಮೂರು ಪ್ರಶ್ನೆಗಳಿಗೂ ಉತ್ತರ “ಹೌದು…” ಆಗಿತ್ತು!
ಎಂಥಾ ನೀಚಬುದ್ಧಿ ಬಂದಿತ್ತು. ನನಗೇಂತ ಅಂದುಕೊಂಡರೂ, ಅಂದು, ಆ ದಿನಗಳಲ್ಲಿ ನನಗೆ ಬಂದೊದಗಿದ್ದ ಮನಃಸ್ಥಿತಿ, ಸಂದರ್ಭ ಹಾಗಿತ್ತು.
ನಾನು ಒಳ್ಳೆಯ ಭಾವನೆಯಿಂದ ಮದುವೆಯಾಗಿದ್ದರೆ ನನಗೆ ಒಳ್ಳೆಯದೇ ಆಗುತ್ತಿತ್ತೋ ಏನೋ? ಆದರೆ ನನ್ನ ಬದುಕು ಹಸನಾಗಿರಲಿಲ್ಲ. ನನಗದೂ ಬೇಕಾಗಿಯೂ ಇರಲಿಲ್ಲ. ಆ ನಿರೀಕ್ಷೆಯೂ ಇರಲಿಲ್ಲ. ನಾಲ್ಕಾರು ಉನ್ನತ ಪದವಿಗಳನ್ನು ಪಡೆದು ಒಳ್ಳೆಯ ವೈದ್ಯ ವೃತ್ತಿಯಲ್ಲಿದ್ದವಳೂ ಆಗಿದ್ದ ನಾನು ಅನಕ್ಷರಸ್ತ ಹೆಣ್ಣಿಗಿಂತ, ಅನಾಗರೀಕ ಹೆಣ್ಣಿನ ಬದುಕನ್ನು ಆಯ್ಕೆ ಮಾಡಿಕೊಂಡಿದ್ದೆ. ಹಣೆಬರಹಾಂತ ಹೇಳಲಾರೆ ಮೂರ್ಖತನವೆಂದೇ ಹೇಳುತ್ತೇನೆ. ಬೇರೆ ಮಾರ್ಗಳಿದ್ದವಾ ಹಾಗಾದರೆ? ಆ ಅನ್ಯ ಮಾರ್ಗಗಳು ಅಂದು ನನಗೇಕೆ ಗೋಚರಿಸಲಿಲ್ಲ? ಜಾಣತನವೆಂದೇ ಹೇಳುವ ಆಷಾಡಭೂತಿತನ ನನಗೆ ತಿಳಿದಿರಲಿಲ್ಲ. ಸಂಸ್ಕಾರವಿರಲಿಲ್ಲ. ಯೋಚಿಸುವ ಶಕ್ತಿಯೂ ಇರಲಿಲ್ಲ. ನಾನು ಬೆಳೆದು ಬಂದಿದ್ದ ವಾತಾವರಣ ಹಾಗಿತ್ತು. ಅಲ್ಪತೃಪ್ತಿಯ ಭಾವನೆ!
ಮದುವೆಯ ನಂತರ ಒಂದೆರಡು ವರ್ಷಗಳು ತುಂಬಾ ಸಭ್ಯನಂತಿದ್ದ ನನ್ನ ‘ಗಂಡ’ ನಂತರ ಬದಲಾಗತೊಡಗಿದ್ದನೋ ಅಥವಾ ಅವನಿದ್ದಿದ್ದು ಹಾಗೇನೋ ಗೊತ್ತಿಲ್ಲ. ಹಗಲಿಡಿ ಮನೆಯಲ್ಲಿ ಟಿವಿಯನ್ನು ನೋಡಿಕೊಂಡೋ, ನಿದ್ದೆ ಮಾಡಿಕೊಂಡೋ ಕಾಲ ಕಳೆಯುತ್ತಿದ್ದ. ಬೆಳಿಗ್ಗೆ ಕಾರಿನಲ್ಲಿ ನನ್ನನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ಬಿಟ್ಟು ಬಂದರೆ ಸಂಜೆ ವೇಳೆಗೆ ಕರೆದುಕೊಂಡು ಹೋಗಲು ಬರುತ್ತಿದ್ದ. ಈ ಮಧ್ಯದಲ್ಲಿ ಏನು ಮಾಡುತ್ತಿದ್ದನೋ ಏನೋ? ನನಗದರ ಯೋಚನೆಯೇ ಇರಲಿಲ್ಲ. ಆಸ್ಪತ್ರೆಗೆ ಬಂದ ನಂತರ ನನ್ನ ಪ್ರಪಂಚವೇ ಅದಾಗಿರುತ್ತಿತ್ತು. ಸಂಜೆ ಬೇಸರವೆಂದು ಹೊರಗಡೆ ಹೋಗುತ್ತಿದ್ದವನು ಬರುವಷ್ಟರಲ್ಲಿ ರಾತ್ರಿ ಹತ್ತು ಗಂಟೆಯಾಗಿರುತ್ತಿತ್ತು. ಕುಡಿಯುವುದನ್ನು ಕಲಿತಿದ್ದ, ತೂರಾಡಿಕೊಂಡೇ ಬರುತ್ತಿದ್ದ. ಒಳ್ಳೆಯ ಜೂಜುಕೋರನಾಗಿದ್ದ. ಇಸ್ಪೀಟ್ ಕ್ಲಬ್ ಮೆಂಬರ್ ಆಗಿದ್ದ! ಮೊದಲು ಆಶ್ಚರ್ಯ ಗಾಬರಿ ಎಲ್ಲರಿಗೂ ಆದಂತೆ ನನಗೂ ಆಗಿತ್ತು. ಹಲವು ಬಾರಿ ಹೇಳಿ ನೋಡಿದ್ದೆ. ಬದಲಾಗದಷ್ಟು ದೂರ ಹೋಗಿದ್ದ. ಜವಾಬ್ದಾರಿಯಿರಲಿಲ್ಲ… ಕೆಲಸವಂತೂ ಮೊದಲೇ ಇರಲಿಲ್ಲ. ಇದೇ ಅವನ ದೈನಂದಿನ ಕೆಲಸಗಳಾಗಿದ್ದವು. ಜೋರಾಗಿ ಜಗಳವಾಡುವ ಹಾಗಿಲ್ಲ. ಹೊಡೆದಾಡುವುದಂತೂ ಸಾಧ್ಯವಿರಲಿಲ್ಲ! ಅಕ್ಕಪಕ್ಕದವರ ಭಯ ಊಹೂಂ… ಮಾನಭಯ… ಸಹಿಸಿಕೊಳ್ಳಲೇಬೇಕಾಗಿತ್ತು. ಸಹಿಸಿಕೊಳ್ಳತೊಡಗಿದ್ದೆ.
ಆದರೆ ದಿನೇ ದಿನೇ ಅವನು ಹೆಚ್ಚಾಗಿ ಆಡತೊಡಗಿದ್ದ. ಹಗಲಿಡೀ ತುಂಬಾ ಮೌನ… ಮಾತಿಲ್ಲ ಕತೆಯಿಲ್ಲ. ತೀರಾ ಸಭ್ಯ ರಾತ್ರಿಯಾಯಿತೆಂದರೆ, ಕುಡಿದು ಬಂದರೆ ಯಕ್ಷಗಾನ, ಬಯಲಾಟ ಮಧ್ಯರಾತ್ರಿಯವರೆಗೂ ನಡೆಯುತ್ತಿತ್ತು. ಅಸಂಬಂಧ, ಅಸಹ್ಯ ತರಿಸುವ ಮಾತುಗಳು, ವರ್ತನೆಗಳು… ಆಸ್ಪತ್ರೆಯಿಂದ ಹಿಡಿದು ನಾನು ಹೋಗುತ್ತಿದ್ದ, ಖಾಸಗಿ ನರ್ಸಿಂಗ್ ಹೋಂಗಳವರೆಗೂ ಅವನ ಈ “ಖ್ಯಾತಿ” ಹಬ್ಬಿತ್ತು.
“ಮೇಡಂ… ನಿನ್ನೆ ಸಂಜೆ ನಿಮ್ಮ ಮನೆಯವರು ತುಂಬಾ ಕುಡಿದು ಬಂದಿದ್ದರು. ನೀವು ಒಳಗಡೆಯಿದ್ದಿರಿ…” ನರ್ಸ್ ಒಬ್ಬರ ದೂರು.
“ಹೌದಾ…?”
“ಹೂಂ…!”
“ಕುಡಿದು ಬಂದಿದ್ದು ಯಾರು?”
“ನಿಮ್ಮ ಮನೆಯವರು ಮೇಡಂ…”
“ಹಾಗಾದ್ರೆ… ನಾನು ಕುಡಿದು ಬಂದಿರಲಿಲ್ಲಾ ಅಲ್ವಾ?”
“…..”
“ಔಟ್ ಪೋಸ್ಟ್ ಪೊಲೀಸ್ ಸ್ಟೇಷನ್ ಇದೆಯಲ್ವಾ?”
“ಹೂಂ…”
“ಅಲ್ಲಿಗೆ ಕಂಪ್ಲೇಂಟ್ ಕೊಡಿ…”
“ಮೇಡಂ…”
“ಬೇರೆಯವರಾಗಿದ್ದರೆ ಕೊಡುತ್ತಿದ್ದೀರಿ ತಾನೆ?”
“ಹೂಂ…”
“ಅವರೇನು ಈ ಆಸ್ಪತ್ರೆಗೆ ಸಂಬಂಧಪಟ್ಟವರಲ್ಲ ಅಲ್ವಾ? ಹೋಗಿ ಕಂಪ್ಲೇಂಟ್ ಕೊಡಿ…”
ನನ್ನ ಮನಸ್ಸು ಅಷ್ಟು ರೋಸಿ ಹೋಗಿತ್ತು. ಅವನು ಸಂಜೆಯಿಂದಲೇ ಕುಡಿಯಲು ಆರಂಭಿಸಿದ್ದ.
ಬೆಳಿಗ್ಗೆ ಹೊತ್ತು ಸರಿಯಾಗಿದ್ದ ವೇಳೆಯಲ್ಲಿ ನಾನು ಅವನ ಮುಂದೆ ಕುಳಿತು ಕೇಳಿದ್ದೆ.
“ಯಾಕೆ ಕುಡಿಯಲು ಶುರು ಮಾಡಿದೆ?”
“……”
“ನಿನ್ನ ಹೆಂಡತಿ ನಿನಗಿಂತ ದೊಡ್ಡವಳು, ದೊಡ್ಡ ಹುದ್ದೆಯಲ್ಲಿ ಇರುವವಳು ಅಂತ ಕೀಳರಿಮೆ ಆಗ್ತಾಯಿದೆಯಾ?”
“……”
“ಯಾವುದೂ ಕೆಲಸವಿಲ್ಲ ಮಾಡಲೂಂತ ಬೇಸರದಿಂದಾನಾ? ಯಾವ ಜವಾಬ್ದಾರಿಯೂ ನಿನಗಿಲ್ಲಾಂತಾನಾ? ಯಾಕೆ?”
“…..”
“ಬೇಕಾದ್ರೆ ನೀನು ಬೇರೆ ಮದ್ವೆಯಾಗಿಬಿಡು. ನಾನು ಬೇಸರವಾಗಿದ್ದರೆ ಊರಿಗೆ ಹೋಗಿ ಹೇಳಿ ಒಂದು ಚಿಕ್ಕ ವಯಸ್ಸಿನ ಹುಡುಗಿಯನ್ನು ಮದ್ದೆಯಾಗಿಬಿಡು. ನನ್ನ ಎಲ್ಲಾ ಕೆಲಸ ಬಿಟ್ಟು ನಿನ್ನನ್ನು ಕಾಯುತ್ತಾ ಕುಳಿತುಕೊಳ್ಳಲು ನನಗಾಗುವುದಿಲ್ಲ. ನಿನ್ನ ಖರ್ಚೆ ಅಧಿಕವಾಗುತ್ತಿದೆ. ಅದಕ್ಕಾದರೂ ನಾನು ದುಡಿಯಲೇಬೇಕು…”
ಯಾವುದಕ್ಕೂ ಅವನು ಉತ್ತರ ಕೊಟ್ಟಿರಲಿಲ್ಲ. ಅವನಿಗೆ ಮೈಮುರಿದು ದುಡಿಯುವುದು ಬೇಕಿರಲಿಲ್ಲ. ಎಲ್ಲವೂ ಕುಳಿತಲ್ಲೇ ಸಿಗುತ್ತಿತ್ತು. ತಿರುಗಾಡಲು, ಶೋಕಿ ಮಾಡಲು ಕಾರು, ಖರ್ಚು ಮಾಡಲು ಹಣ, ಎಲ್ಲವೂ ನಿರಾಯಾಸವಾಗಿ ಸಿಗುತ್ತಿತ್ತು. ನನಗೆ ಅವಮಾನ ಮಾಡುವುದೇ ಅವನ ಗುರಿಯಾಗಿತ್ತಾ? ಯಾಕೆ? ಅಂತರಾಳವು ನನಗೆ ಅರ್ಥವಾಗತೊಡಗಿತ್ತು.
ಅವನ ಮನೆಯವರೂ ಆಗಾಗ್ಗೆ ಬಂದು ಇದ್ದು ಹೋಗುತ್ತಿದ್ದರು… ನನ್ನ ಮನೆಯವರೂ ಬಂದು ಹೋಗುತ್ತಿದ್ದರು. ಆಗೆಲ್ಲಾ ಅವನು ಒಳ್ಳೆಯವನಂತಿರುತ್ತಿದ್ದ. ನಿರ್ಲಕ್ಷ್ಯವೇ ಮದ್ದು ಎಂಬಂತೆ ಅವನನ್ನು ನಿರ್ಲಕ್ಷಿಸತೊಡಗಿದ್ದೆ. ನನ್ನನ್ನು ಈ ಮನೆ, ಈ ಸಂಸಾರದಿಂದ, ನೋವುಗಳಿಂದ ತಪ್ಪಿಸಿಕೊಳ್ಳಲು ನಾನು ಬೇರೆ ದಾರಿ ಹುಡುಕಬೇಕಿತ್ತು. ಸಾಹಿತ್ಯ ಸಮಾರಂಭಗಳಿಗೆ ಹೆಚ್ಚಾಗಿ ಹೋಗತೊಡಗಿದ್ದೆ. ಅವನ ಬಯಲಾಟಗಳು ಮುಗಿದು ಎಚ್ಚರದಪ್ಪಿ ಮಲಗುವವರೆಗೂ ಕಾದಿದ್ದು, ಹೆಚ್ಚು ಹೆಚ್ಚು ಓದತೊಡಗಿದ್ದೆ, ಬರೆಯತೊಡಗಿದ್ದೆ. ಹಲವಾರು ಖ್ಯಾತ ಸಾಹಿತಿಗಳ ಒಡನಾಟ, ಸ್ನೇಹದಿಂದ ಮನೆಯನ್ನು ಮರೆಯಲು ಪ್ರಯತ್ನಿಸಿದ್ದೆ. ಆಗ ನನ್ನ ಸಹಾಯಕ್ಕೆ ಬಂದಿದ್ದು ಸಮೂಹ ಮಾಧ್ಯಮಗಳು ಮತ್ತು ಮಾಧ್ಯಮದ ಸ್ನೇಹಿತರು. ಆಕಾಶವಾಣಿಗೆ ಅನೇಕ ಕಾರ್ಯಕ್ರಮಗಳನ್ನು ಕೊಟ್ಟು ಸಹಕರಿಸಿದವರು ಸ್ನೇಹಿತೆಯಾಗಿದ್ದ, ಆಕಾಶವಾಣಿಯಲ್ಲಿದ್ದ ಶ್ರೀಮತಿ ನಾಗಮಣಿ ಎಸ್. ರಾವ್ ಅವರು. ಅವರ ಸ್ನೇಹವನ್ನೆಂದಿಗೂ ನಾನು ಮರೆಯಲಾರೆ. ಹಾಗೆಯೇ ಪತ್ರಿಕಾ ಮಾಧ್ಯಮ, ಆ ಮಾಧ್ಯಮದ ಗೆಳೆಯರು, ಗೆಳತಿಯರು ಬರೆಯುವಂತೆ ಪ್ರೋತ್ಸಾಹಿಸುತ್ತಿದ್ದರು. ಹೀಗಾಗಿ ಸಣ್ಣಕತೆಗಳು, ನೀಳ್ಗತೆಗಳು, ಕಾದಂಬರಿಗಳು, ಅಂಕಣಗಳು, ವೈದ್ಯಕೀಯ ಲೇಖನಗಳು ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದವು. ಇದಕ್ಕಿಂತ ಹೆಚ್ಚು ಇನ್ನೇನು ಬೇಕಿತ್ತು ನನಗೆ? ಷಡ್ಯಂತ್ರ ರೂಪಿಸಿ ಕಾಡುವವರಲ್ಲಿ, ತುಳಿಯುವವರು ಇರಲಿಲ್ಲ… ನಾನು ಊಹಿಸದ ರೀತಿಯಲ್ಲಿ ಸಮಾಧಾನ ಪಡೆಯುತ್ತಿದ್ದೆ. ನನ್ನ ಸೋಲಿನ ಮೆಟ್ಟಿಲುಗಳನ್ನೇ, ಒಂದೊಂದಾಗಿ ನಿಧಾನವಾಗಿ ಹತ್ತತೊಡಗಿದ್ದೆ. ಅವಮಾನ, ಅಪಪ್ರಚಾರ, ಅಪನಿಂದನೆಗಳನ್ನು ಮಾಡುವವರನ್ನು ಮೆಟ್ಟಿ ನಿಂತು ಬೆಳೆಯುವಷ್ಟು ಸಾಮರ್ಥ್ಯ ನನ್ನದಾಗತೊಡಗಿತ್ತೆಂದುಕೊಂಡಿದ್ದೆ. ನಾನು ನನ್ನದೇ ಆದ ರೀತಿಯಲ್ಲಿ ಗುರುತಿಸಿಕೊಳ್ಳತೊಡಗಿದ್ದೆ. ನನಗೇ ನಾನೇ ಇತಿ-ಮಿತಿಗಳ ಬೇಲಿಯನ್ನು ಹಾಕಿಕೊಂಡು ಅತ್ಯಂತ ಎಚ್ಚರದಿಂದ ಭದ್ರತೆಯ ಬೇಲಿಯನ್ನು ಹಾಕಿಕೊಳ್ಳತೊಡಗಿದ್ದೆ. ಯಾರ ಹಂಗೂ ಇಲ್ಲದೆ ಬೆಳೆಯುವ ಆಲೋಚನೆ ಗುರಿ ನನ್ನದಾಗಿತ್ತು. ಒಳ್ಳೆಯ ರೀತಿಯಲ್ಲಿ ಬೆಳೆಯುವುದೂ ‘ಬದುಕಿನಲ್ಲಿ’ ಅಷ್ಟು ಸುಲಭವಾಗಿರಲಿಲ್ಲವೆಂಬುದು ನನಗೆ ಗೊತ್ತಾಗತೊಡಗಿತ್ತು. ಪಾರದರ್ಶಕ ರೀತಿಯಲ್ಲಿ ನನ್ನ ‘ಬದುಕು’ ಇರಬೇಕು ಎಂದುಕೊಂಡು ಬದುಕುವುದನ್ನು ಕಲಿಯತೊಡಗಿದ್ದೆ. ಎಲ್ಲವೂ ನಾನಂದುಕೊಂಡಹಾಗೆ ಆಗದಿದ್ದರೂ ಸಮಾಧಾನ ತರುವಂತಿರುತ್ತಿದ್ದುದು ನನ್ನ ಮಾಧ್ಯಮದ ಪ್ರೀತಿ ಹಾಗೂ ಹವ್ಯಾಸ ಎಂದರೆ ತಪ್ಪಾಗಲಾರದು ಚಿನ್ನು.
*****
ಮುಂದುವರೆಯುವುದು