ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು

ಹಣದ ವ್ಯಾಖ್ಯೆಗಳು ಮತ್ತು ಕಾರ್ಯಗಳು

ಹಣ ಇಲ್ಲದಿದ್ದರೆ ಇಂದು ಯಾವುದೇ ವ್ಯವಹಾರ ನಡೆಯಲಾರದು. ಸರ್ವೇಗುಣಾಃ ಕಾಂಚನಮಾಶ್ರಯಂತಿ ಎಂಬ ಹೇಳಿಕೆ ಹಣಕ್ಕೆ ಆಧುನಿಕ ಪ್ರಪಂಚದಲ್ಲಿ ಎಷ್ಟು ಮಹತ್ವವಿದೆ ಎನ್ನುವುದನ್ನು ತಿಳಿಸುತ್ತದೆ. ನಾವೆಲ್ಲರೂ ಹಣವನ್ನು ಬಳಸುತ್ತೇವೆ. ಹಣ ಮನುಷ್ಯನ ಮೂಲಭೂತ ಸಂಶೋಧನೆಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. ಹಣದ ಸಂಶೋಧನೆಗೆ ಮೂಲಕಾರಣ ವಸ್ತು ವಿನಿಮಯ ವ್ಯವಸ್ಥೆಯ ತೊಂದರೆಗಳು, ಸರ್ವಮಾನ್ಯವಾದ ಮೌಲ್ಯಮಾಪನ ಮತ್ತು ವಿನಿಮಯ ಮಾಧ್ಯಮವೊಂದರ ಅನಿವಾರ್ಯತೆಯು ಹಣದ ಹುಟ್ಟಿಗೆ ಕಾರಣವಾಯಿತು.

ಹಣ ಎಂದರೇನು?
ಹಣವನ್ನು ಆಂಗ್ಲಭಾಷೆಯಲ್ಲಿ ‘ಮನಿ’ ಎನ್ನಲಾಗುತ್ತದೆ. ‘ಮನಿ’ಯು ಲ್ಯಾಟಿನ್ ಶಬ್ದವಾದ ‘ಮೊನಿಟಾ’ದಿಂದ ಹುಟ್ಟಿಕೊಂಡಿದೆ. ಮೊನಿಟಾ ಎಂದರೆ ಜುನೋ ಎಂಬ ರೋಮನ್ ದೇವತೆ ಮೊತ್ತ ಮೊದಲ ಬಾರಿಗೆ ಹಣವು ಜುನೋ ದೇವತೆಯ ದೇವಾಲಯದಲ್ಲಿ ಟಂಕಿಸಲ್ಪಟ್ಟುದರಿಂದ ಹಣಕ್ಕೆ ಮೊದಲು ಮೊನಿಟಾ ಎಂದೇ ಹೆಸರಿತ್ತು. ಅದು ಕೊನೆಗೆ ಮನಿ ಎಂದಾಯಿತು. ಹಾಗೆಯೇ ಹಣಕ್ಕೆ ಆಂಗ್ಲ ಭಾಷೆಯಲ್ಲಿ ’ಪಿಕ್ಯೂನಿಯಾ’ ಎಂಬ ಪದಪ್ರಯೋಗವೂ ಇದೆ. ಪಿಕ್ಯೂನಿಯಾ ಎಂಬ ಪದ ಪೀಕಸ್ ಎಂಬ ಪದವು ಮೂಲವಾಗಿದೆ. ಪೀಕಸ್ ಅಂದರೆ ಜಾನುವಾರುಗಳು. ಹಿಂದೆ ಹಸು, ಎತ್ತು, ಕರು ಮುಂತಾದವುಗಳನ್ನು ಹಣದ ರೂಪದಲ್ಲಿ ಬಳಸುತ್ತಿದ್ದುದರ ಪರಿಣಾಮವಾಗಿ ಪಿಕ್ಯೂನಿಯಾ ಎಂಬ ಪದವು ಉಳಿದುಕೊಂಡಿದೆ.

ಹಣವನ್ನು ನಾವು ದಿನಾ ನೋಡುತ್ತೇವೆ. ಹಣವನ್ನು ಕೊಟ್ಟು ಸರಕು-ಸೇವೆಗಳನ್ನು ಪಡೆದು ನಮ್ಮ ಆಸೆಗಳನ್ನು ತೃಪ್ತಿಪಡಿಸಿಕೊಳ್ಳುತ್ತೇವೆ. ನಮ್ಮಲ್ಲಿರುವ ಸರಕು ಸೇವೆಗಳನ್ನು ಬೇರೆಯವರಿಗೆ ನೀಡಿ ಪ್ರತಿಫಲವಾಗಿ ಹಣವನ್ನು ಪಡೆಯುತ್ತೇವೆ. ಹಣವೆಂದರೆ ನಾವೆಲ್ಲಾ ನೋಡುವ, ಬಳಸುವ ನಮಗೆ ಚಿರಪರಿಚಿತವಾದ ಒಂದು ಸಾಧನ. ಆದರೆ ಹಣವೆಂದರೇನೆಂದು ಯಾರಾದರೂ ಕೇಳಿದಾಗ ನಮಗೆ ಸುಲಭವಾಗಿ ಉತ್ತರಿಸಲು ಸಾಧ್ಯವಾಗದಿರುವುದು ಕೂಡಾ ನಿಜವೇ.

ಹಣದ ವ್ಯಾಖ್ಯೆಗಳು
ಹಣವೆಂದರೇನೆಂದು ಸರಿಯಾಗಿ ತಿಳಿದುಕೊಳ್ಳಬೇಕಾದರೆ ನಾವು ಹಣದ ಬಗ್ಗೆ ಬೇರೆ ಬೇರೆ ಅರ್ಥಶಾಸ್ತ್ರಜ್ಞರು ನೀಡಿದ ವ್ಯಾಖ್ಯೆಗಳನ್ನು ಅಧ್ಯಯನ ಮಾಡಬೇಕು. ಹಣ ಎಂದರೇನೆಂದು ಬಹುತೇಕವಾಗಿ ಎಲ್ಲಾ ಅರ್ಥಶಾಸ್ತ್ರಜ್ಞರು ವಿವರಿಸಲು ಯತ್ನಿಸಿದ್ದಾರೆ. ಆದುದರಿಂದ ಹಣದ ಬಗ್ಗೆ ಅಸಂಖ್ಯಾತ ವ್ಯಾಖ್ಯೆಗಳಿವೆ. ಇವನ್ನು (೧) ಲಕ್ಷಣಗಳಿಗೆ ಅನುಗುಣವಾದ ವ್ಯಾಖ್ಯೆ ಮತ್ತು (೨) ವ್ಯಾಪ್ತಿಗೆ ಅನುಗುಣವಾದ ವ್ಯಾಖ್ಯೆ ಎಂದು ವಿಭಜಿಸಬಹುದು.

ಲಕ್ಷಣಗಳಿಗನುಗುಣವಾದ ವ್ಯಾಖ್ಯೆಗಳು : ಹಣವನ್ನು ಸರ್ವಮಾನ್ಯವಾದ ವಿನಿಮಯ ಸಾಧನವೆಂದು ವ್ಯಾಖ್ಯಾನಿಸಿದ ಅರ್ಥಶಾಸ್ತ್ರಜ್ಞರ ವಿವರಣೆಗಳಿವು:

ಡಾ. ಆಲ್‌ಫ್ರೆಡ್ ಮಾರ್ಷಲನು ತನ್ನ ಮನಿ ಕ್ರೆಡಿಟ್ ಎಂಡ್ ಕಾಮರ್ಸ್ ಎಂಬ ಕೃತಿ ಯಲ್ಲಿ ಹಣವೆಂದರೆ ಯಾವುದೇ ಸಮಯದಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ಸಂದೇಹ ವಿಲ್ಲದೆ ಸರಕುಗಳನ್ನು ಮತ್ತು ಸೇವೆಗಳನ್ನು ಕೊಳ್ಳುವ ಮತ್ತು ವೆಚ್ಚವನ್ನು ಮುಂದೂಡುವ (ಸಾಲದ ವ್ಯವಹಾರಕ್ಕೆ ಸಹಾಯ ಮಾಡುವ) ಎಲ್ಲಾ ವಸ್ತುಗಳು’ ಎಂದು ಹೇಳಿದ್ದಾನೆ.

ಜೆ. ಎಂ. ಕೇನ್ಸನು ತನ್ನ ಟ್ರೀಟಾಯಸ್ ಓನ್ ಮನಿ ಎಂಬ ಕೃತಿಯಲ್ಲಿ ಹಣವನ್ನು ಹೀಗೆ ವ್ಯಾಖ್ಯಾನಿಸಿದ್ದಾನೆ: “ಯಾವುದರ ಮೂಲಕ ಸಾಲದ ಮತ್ತು ಬೆಲೆಯ ಒಪ್ಪಂದಗಳನ್ನು ಮಾಡಲಾಗುತ್ತದೆಯೋ ಮತ್ತು ಯಾವುದರ ರೂಪದಲ್ಲಿ ಸಾರ್ವತ್ರಿಕ ಕೊಳ್ಳುವ ಶಕ್ತಿಯನ್ನು ಹಿಡಿದಿಡಲಾಗುತ್ತದೆಯೋ ಅದುವೇ ಹಣ”.

ಸೆಲಿಗ್‍ಮನ್‌ನ ಪ್ರಕಾರ “ಸಾರ್ವತ್ರಿಕ ಮಾನ್ಯತೆ ಇರುವ ಸಾಧನವೇ ಹಣ”. ಈಲಿಯು “ಸಮಾಜದಲ್ಲಿ ಸರ್ವಮಾನ್ಯತೆಯನ್ನು ಹೊಂದಿರುವ ಸಾಧನವೇ ಹಣ” ಎಂದಿದ್ದಾನೆ. ಆರ್‌.ಪಿ. ಕೆಂಟ್ ತನ್ನ ಮನಿ ಎಂಬ ಕೃತಿಯಲ್ಲಿ “ಹಣವು ವಿನಿಮಯ ಸಾಧನವಾಗಿ ಅಥವಾ ಸಾಲ ತೀರ್ಮಾನ ಸಾಧನವಾಗಿ ಬಳಸಲ್ಪಡುವ ಯಾವುದೇ ವಸ್ತು” ಎಂದಿದ್ದಾನೆ.

ಕ್ರೌಥರನು ತನ್ನ ಏನ್ ಔಟ್ ಲೈನ್ ಓಫ್ ಮನಿ ಕೃತಿಯಲ್ಲಿ “ಹಣವನ್ನು ವಿನಿಮಯ ಸಾಧನವಾಗಿ ಅಥವಾ ಸಾಲ ತೀರ್ಮಾನ ಸಾಧನವಾಗಿ ಸಾರ್ವತ್ರಿಕ ಒಪ್ಪಿಗೆ ಪಡೆದಿರುವ ಯಾವುದೇ ವಸ್ತುವೆಂದು ವ್ಯಾಖ್ಯಾನಿಸಬಹುದು ಮತ್ತು ಅದೇ ಕಾಲಕ್ಕೆ ಹಣವು ಮೌಲ್ಯದ ಮಾಪಕ ಮತ್ತು ಮೌಲ್ಯದ ಸಂಚಯ ಸಾಧನವಾಗಿಯೂ ಕೆಲಸ ಮಾಡುತ್ತದೆ” ಎಂದು ವ್ಯಾಖ್ಯಾನಿಸಿದ್ದಾನೆ.

ಕಲ್‍ಬಾರ್ನನು ಹೇಳುವಂತೆ “ಹಣವನ್ನು ಮೌಲ್ಯ ನಿರ್ಣಯದ ಮತ್ತು ಪಾವತಿಯ ಒಂದು ಸಾಧನ”ವೆಂದು ವ್ಯಾಖ್ಯಾನಿಸಬಹುದು.

ವಿತ್ತ ತಜ್ಞ ಜಿ.ಡಿ.ಹೆಚ್. ಕೋಲ್‌ನು ತನ್ನ ಮನಿ, ಇಟ್ಸ್ ಪ್ರೆಸೆಂಟ್‌ ಏಂಡ್ ಪ್ಯೂಚರ್ ಎಂಬ ಕೃತಿಯಲ್ಲಿ “ಪಾವತಿ ಸಾಧನವಾಗಿ ಅಭ್ಯಾಸ ಬಲದಿಂದ ಮತ್ತು ಸಾರ್ವತ್ರಿಕವಾಗಿ ಬಳಸಲ್ಪಡುವ ಮತ್ತು ಸಾಲಗಳ ಇತ್ಯರ್ಥದಲ್ಲಿ ಸಾರ್ವತ್ರಿಕವಾಗಿ ಒಪ್ಪಿಗೆ ಪಡೆದ ಯಾವುದೇ ವಸ್ತುವೂ ಹಣವೆನಿಸುತ್ತದೆ” ಎಂದಿದ್ದಾನೆ.

ಜಿ.ಎನ್. ಹ್ಯಾಮನು ಮಾನಿಟರಿ ಥಿಯರಿ ಎಂಬ ತನ್ನ ಕೃತಿಯಲ್ಲಿ “ಹಣ ಎಂಬ ಪದವು ವಿನಿಮಯ ಮಾಧ್ಯಮವನ್ನು ಮತ್ತು ಮೌಲ್ಯ ಪ್ರಮಾಣಕವನ್ನು ಸಂಕೇತಿಸಲು ಬಳಕೆಯಾಗುತ್ತದೆ” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾನೆ.

ಪ್ರೊ. ನ್ಯಾಪನು “ಯಾವುದನ್ನು ಸರಕಾರ ಹಣವೆಂದು ಘೋಷಿಸುತ್ತದೆಯೋ ಅದು ಹಣವಾಗುತ್ತದೆ” ಎಂದಿರುವುದು ಗಮನೀಯವಾದುದು. ಈ ಅಭಿಪ್ರಾಯವನ್ನು ಪ್ರೊ. ಹಾರ್ಟಿ ಕೂಡಾ ಸಮರ್ಥಿಸಿದ್ದಾನೆ.

ವ್ಯಾಪ್ತಿಗೆ ಅನುಗುಣವಾದ ವ್ಯಾಖ್ಯೆಗಳು: ಹಣದ ಕಾರ್ಯಗಳನ್ನು ಮಾಡುವ ಯಾವುದೇ ವಸ್ತುವನ್ನು ಹಣವೆಂದು ಕರೆಯಬಹುದು ಎನ್ನುವುದು ಈ ವ್ಯಾಖ್ಯೆಗಳ ಒಟ್ಟಾಭಿಪ್ರಾಯ. ಈ ವರ್ಗೀಕರಣಕ್ಕೆ ಸೇರ್ಪಡೆಗೊಳ್ಳುವ ಪ್ರಮುಖ ವ್ಯಾಖ್ಯೆಗಳು ಈ ಕೆಳಗಿನವುಗಳು :

ಪ್ರೊ. ಡಿ.ಹೆಚ್. ರಾಬರ್ಟ್‌ಸನ್ ತನ್ನ ಮನಿ ಎಂಬ ಕೃತಿಯಲ್ಲಿ ಹಣವು ಸರಕುಗಳ ಬೆಲೆ ಪಾವತಿಯಲ್ಲಿ ಅಥವಾ ಇತರ ವ್ಯಾಪಾರದ ಸಂದರ್ಭಗಳಲ್ಲಿ ಸಾರ್ವತ್ರಿಕವಾಗಿ ಬಳಕೆ ಯಾಗುವ ಯಾವುದೇ ವಸ್ತು” ಎಂದಿದ್ದಾನೆ.

ಫ್ರಾನ್ಸಿಸ್ ಎ. ವಾಕರ್ ತನ್ನ ಮನಿ ಇನ್ ಇಟ್ಸ್ ರಿಲೇಶನ್ ಟು ಟ್ರೇಡ್ ಎಂಡ್ ಇಂಡಸ್ಟ್ರಿಯಲ್ಲಿ “ಹಣವು ಮಾಡುವುದೇನೋ ಅದುವೇ ಹಣ” ಎಂದಿದ್ದಾನೆ.

ಹಣದ ಬಗ್ಗೆ ಪ್ರಖ್ಯಾತವಾದ ವ್ಯಾಖ್ಯೆಯೊಂದನ್ನು ನೀಡಿದ ಕೀರ್ತಿ ಹಾರ್ಟ್ಲಿ ವಿಥರ್ಸ್‌ಗೆ ಸಲ್ಲುತ್ತದೆ. ದ ಮೀನಿಂಗ್ ಓಫ್ ಮನಿ ಎಂಬ ಕೃತಿಯಲ್ಲಿ ಆತ “ಹಣವು ಏನನ್ನು ಮಾಡುತ್ತದೆಯೋ ಅದುವೇ ಹಣ” ಎಂದಿದ್ದಾನೆ. ಆದುದರಿಂದ ಹಣ ಎಂದರೇನೆಂದು ತಿಳಿದುಕೊಳ್ಳಬೇಕಾದರೆ ಹಣ ಏನನ್ನು ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕಾಗುತ್ತದೆ. ಇದು ಹಣದ ಕಾರ್ಯಗಳ ವಿಶ್ಲೇಷಣೆಯಾಗುತ್ತದೆ.

ಹಣದ ಕಾರ್ಯಗಳು (Functions of Money)
ಹಣವೆಂದರೆ ಎಲ್ಲರಿಂದಲೂ ಒಪ್ಪಿಗೆ ಪಡೆದ ವಿನಿಮಯ ಸಾಧನ. ಇದು ಹಣದ ಯುಗ. “ಕಾಂಚಾಣಂ ಕಾರ್ಯಸಿದ್ಧಿಃ” ಎಂಬ ಲೋಕೋಕ್ತಿಯಂತೆ ಇಂದು ನಮ್ಮ ಯಾವುದೇ ಕಾರ್ಯ ಸಿದ್ಧಿಸಬೇಕಾದರೆ ಹಣ ಬೇಕೇ ಬೇಕು. ಹಣ ಇಲ್ಲದೆ ಯಾವ ಗುಣಕ್ಕೂ ಬೆಲೆ ಬರುವುದಿಲ್ಲ ಎನ್ನುವುದನ್ನು ‘ಸರ್ವೇ ಗುಣಾಃ ಕಾಂಚನಮಾಶ್ರಯಂತಿ’ ಎಂಬ ಅರ್ಯೋಕ್ತಿಯಲ್ಲಿ ಹೇಳಲಾಗಿದೆ.

ಹಣದ ಪ್ರಾಧಾನ್ಯವನ್ನು ವರಕವಿ ಬೇಂದ್ರೆಯವರು ‘ಕುರುಡು ಕಾಂಚಾಣ ಕುಣಿಯುತ್ತಲಿತ್ತ; ಕಾಲಿಗೆ ಬಿದ್ದೋರ ತುಳಿಯುತ್ತಲಿತ್ತ’ ಎಂದು ವರ್ಣಿಸಿದ್ದಾರೆ. “ಹಣ ಕಂಡರೆ ಹೆಣ ಬಾಯಿ ಬಿಡುತ್ತದೆ”, “ಹಣ ಇಲ್ಲದವ ಹೆಣಕ್ಕೆ ಸಮಾನನು”, “ದುಡ್ಡೇ ದೊಡ್ಡಪ್ಪ”, “ಕಾಸಿದ್ರೆ ಕೈಲಾಸ” ಎಂಬಿತ್ಯಾದಿ ಕನ್ನಡದ ಗಾದೆಗಳು ನಮ್ಮ ಸಮಾಜದಲ್ಲಿ ಹಣಕ್ಕಿರುವ ಪ್ರಾಧಾನ್ಯವನ್ನು ಸೂಚಿಸುತ್ತವೆ. ಹಣದ ಮಹತ್ವವನ್ನು ಅದು ಎಸಗುವ ಕಾರ್ಯಗಳಿಂದ ತಿಳಿದುಕೊಳ್ಳಬಹುದು.

ಹಣದ ಕಾರ್ಯಗಳನ್ನು ಎರಡು ರೀತಿಗಳಲ್ಲಿ ವರ್ಗೀಕರಿಸಲಾಗುತ್ತದೆ :
೧ ಪೌಲ್ ಐನ್‌ಜಿಗ್ನ ವರ್ಗೀಕರಣ
೨ ಸಾರ್ವತ್ರಿಕ ವರ್ಗೀಕರಣ

 

೧ ಹಣದ ಸ್ಥಿರ ಮತ್ತು ಚಲನಾತ್ಮಕ ಕಾರ್ಯಗಳು

ಪೌಲ್ ಐನ್‌ಜಿಗ್ ಎಂಬ ಅರ್ಥಶಾಸ್ತ್ರಜ್ಞನು ಹಣದ ಕಾರ್ಯಗಳನ್ನು (೧) ಸ್ಥಿರ ಕಾರ್ಯಗಳು ಮತ್ತು (೨) ಚಲನಾತ್ಮಕ ಕಾರ್ಯಗಳು ಎಂದು ವರ್ಗೀಕರಿಸಿದ್ದಾನೆ.

ಹಣದ ಸ್ಥಿರ ಕಾರ್ಯಗಳು

ಹಣದ ಸ್ಥಿರ ಕಾರ್ಯಗಳೆಂದರೆ (Static functions) ಅದರ ಸಾಂಪ್ರದಾಯಿಕ ಕಾರ್ಯಗಳು, ಹಣದ ಸ್ಥಿರ ಕಾರ್ಯಗಳು ಐದು :
೧) ವಿನಿಮಯ ಮಾಧ್ಯಮ ಕಾರ್ಯ
೨) ಮೌಲ್ಯ ಮಾಪನ ಕಾರ್ಯ
೩) ವಿಳಂಬಿತ ಪ್ರಮಾಣವಾಗಿ ಕಾರ್ಯ ನಿರ್ವಹಣೆ
೪) ಮೌಲ್ಯ ಸಂಚಯನ
೫) ಮೌಲ್ಯದ ವರ್ಗಾವಣೆ

ಹಣದ ಸ್ಥಿರ ಅಥವಾ ಸಾಂಪ್ರದಾಯಿಕ ಕಾರ್ಯಗಳನ್ನು (Traditional Functions) ಸುಂದರವಾದ ಚೌಪದಿಯೊಂದರಲ್ಲಿ ಹೀಗೆ ಹಿಡಿದಿಡಲಾಗಿದೆ :
Money is a matter of functions four A medium, a measure, a standard, a store But this does not complete the functions Unless we add transferability more.

ಹಣವು ನಾಲ್ಕು ಕಾರ್ಯಗಳನ್ನು ಮಾಡುತ್ತಿರುವ ಸಾಧನ. ಮಾಧ್ಯಮ, ಸಂಚಯನ, ಪ್ರಮಾಣ, ಮೌಲ್ಯಮಾಪನ. ಇಷ್ಟರಿಂದ ಹಣದ ಕಾರ್ಯವಾಗದು ಸಂಪೂರ್ಣ ಮತ್ತೆ ಅದಕ್ಕೆ ಸೇರಬೇಕು ವರ್ಗಾವಣೆಯ ಗುಣ (ಡಾ| ಶಿಶಿಲ)

ಹಣದ ಸ್ಥಿರ ಅಥವಾ ಸಾಂಪ್ರದಾಯಿಕ ಕಾರ್ಯಗಳಿವು :
೧) ವಿನಿಮಯ ಮಾಧ್ಯಮ(Medium of Exchange) : ಹಿಂದೆ ಇದ್ದ ವಸ್ತು ವಿನಿಮಯ ವ್ಯವಸ್ಥೆಯ ಬಹುಮುಖ್ಯ ದೋಷವಾದ ವಿನಿಮಯ ಮಾಧ್ಯಮವೊಂದರ ಕೊರತೆಯನ್ನು ಹಣವು ಹೋಗಲಾಡಿಸುತ್ತದೆ. ಹಣವು ಒಂದು ಸಾರ್ವತ್ರಿಕ ವಿನಿಮಯ ಮಾಧ್ಯಮವಾಗಿದೆ. ಇಂದು ನಾವು ಏನನ್ನಾದರೂ ಕೊಂಡುಕೊಳ್ಳಬೇಕಾದರೆ ಏನನ್ನಾದರೂ ಉತ್ಪಾದಿಸಬೇಕಾಗಿಲ್ಲ. ಹಣವಿದ್ದರಾಯಿತು. ಹಣವನ್ನು ವಿನಿಮಯ ಮಾಧ್ಯಮವನ್ನಾಗಿ ಬಳಸಿ ನಾವು ಏನನ್ನು ಬೇಕಾದರೆ ಕೊಂಡುಕೊಳ್ಳಬಹುದು. ವಿಚಿತ್ರವೆಂದರೆ ಹಣಕ್ಕೆ ಅದರದೇ ಆದ ಸ್ವಂತ ತುಷ್ಟಿಗುಣವೇನೂ ಇಲ್ಲ. ಅಂದರೆ ಹಣವನ್ನೇ ಅನುಭೋಗಿಸಲು ಸಾಧ್ಯವಿಲ್ಲ. ಆದರೆ ಹಣವನ್ನು ಬಳಸಿ ಯಾವುದೇ ಸರಕನ್ನು ಅನುಭೋಗಿಸಬಹುದು.

೨) ಮೌಲ್ಯದ ಮಾಪನ (Measure of Value) : ಯಾವುದೇ ಸರಕು ಅಥವಾ ಸೇವೆಗಳನ್ನು ಅನುಭೋಗಿಸಬೇಕಾದರೆ ಅವುಗಳ ಮೌಲ್ಯವನ್ನು ಎಲ್ಲರೂ ಒಪ್ಪುವ ಒಂದು ಸಾಧನದ ಮೂಲಕ ಅಳೆಯಲು ಸಾಧ್ಯವಾಗಬೇಕು. ಹಣದ ಮೂಲಕ ಮೌಲ್ಯವನ್ನು ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಹಣವು ಮೌಲ್ಯವನ್ನು ಅಳೆಯುವ ಅಳತೆಗೋಲು, ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಮೌಲ್ಯವನ್ನು ಮಾಪನ ಮಾಡುವ ಸಾರ್ವತ್ರಿಕ ಒಪ್ಪಿಗೆ ಪಡೆದ ಸಾಧನವೊಂದರ ಕೊರತೆ ಇತ್ತು. ಈ ಕೊರತೆಯನ್ನು ಹಣವು ಹೋಗಲಾಡಿಸಿದೆ. ದೂರವನ್ನು ಕಿಲೋಮೀಟರ್‌ ಮೂಲಕ, ಹಾಲು, ಎಣ್ಣೆ, ಇತ್ಯಾದಿಗಳನ್ನು ಲೀಟರ್‌ ಮೂಲಕ, ಬಟ್ಟೆಯನ್ನು ಮೀಟರ್‌ ಮೂಲಕ, ತೂಕವನ್ನು ಕಿಲೋಗ್ರಾಂ ಮೂಲಕ ಅಳೆಯುವ ಹಾಗೆ ಸರಕು ಮತ್ತು ಸೇವೆಗಳ ಮೌಲ್ಯವನ್ನು ಹಣದ ಮೂಲಕ ಅಳೆಯಲಾಗುತ್ತದೆ. ಹಣದಿಂದ ಮಾಪನ ಮಾಡುವ ಮೌಲ್ಯವನ್ನು ‘ಬೆಲೆ’ ಎನ್ನಲಾಗುತ್ತದೆ. ಹೀಗೆ ಹಣವು ಮೌಲ್ಯದ ಮಾಪಕ ಮತ್ತು ಸಾಮಾನ್ಯ ಸೂಚಕವಾಗಿ ಕಾರ್ಯವೆಸಗುತ್ತದೆ.

ಹಣದ ಇವೆರಡು ಪ್ರಧಾನ ಕಾರ್ಯಗಳು ಪರಸ್ಪರ ತೀರಾ ನಿಕಟವಾದ ಸಂಬಂಧವನ್ನು ಹೊಂದಿವೆ. ಯಾವುದೇ ಸರಕು ಅಥವಾ ಸೇವೆ ವಿನಿಮಯವಾಗಬೇಕಾದರೆ ಅದಕ್ಕೊಂದು ಮೌಲ್ಯ ಇರಲೇಬೇಕು. ಮೌಲ್ಯ ಎಂದು ವಿನಿಮಯ ಅನುಪಾತ (exchangeable ratio), ಈ ಅನುಪಾತವು ಹಣದ ಮೂಲಕ ನಿರ್ಧಾರವಾಗುತ್ತದೆ. ಯಾವುದು ವಿನಿಮಯ ಮಾಧ್ಯಮವಾಗಿ ಕಾರ್ಯವೆಸಗುತ್ತದೆಯೋ ಅದರ ಮೂಲಕ ಸರಕು-ಸೇವೆಗಳ ಮೌಲ್ಯವನ್ನು ಪ್ರಕಟಿಸಲಾಗುತ್ತದೆ. ಆದುದರಿಂದ ಇವೆರಡು ಕಾರ್ಯಗಳನ್ನು ಪೂರ್ಣವಾಗಿ ಪ್ರತ್ಯೇಕಿಸುವುದು ಅಪ್ರಾಯೋಗಿಕವೆನಿಸುತ್ತದೆ. ಇವೆರಡೂ ಕಾರ್ಯಗಳು ಏಕಕಾಲದಲ್ಲಿ ನಿರ್ವಹಿಸಲ್ಪಡುತ್ತವೆ ಕೂಡಾ.

೩) ವಿಳಂಬಿತಪಾವತಿಯ ಪ್ರಮಾಣ: ಹಣವು ಒಂದು ವಿಳಂಬಿತ ಪಾವತಿಯ ಪ್ರಮಾಣವಾಗಿದೆ (Standard of deferred payments) ಭವಿಷ್ಯದ ವ್ಯವಹಾರಗಳನ್ನು ಹಣದ ಮೂಲಕ ಮಾಡಬಹುದಾಗಿದೆ. ಸಾಲವನ್ನು ಹಣದ ಮೂಲಕ ವ್ಯಕ್ತಪಡಿಸಲಾಗುತ್ತದೆ. ಈಗ ತೆಗೆದುಕೊಂಡ ಸಾಲವನ್ನು ಭವಿಷ್ಯತ್ತಿನಲ್ಲಿ ಪಾವತಿ ಮಾಡಲು ಹಣದಿಂದಾಗಿ ಸಾಧ್ಯವಾಗಿದೆ. ಭವಿಷ್ಯತ್ತಿನ ಪಾವತಿಗಳ ಮೌಲ್ಯವು ಹಣದಿಂದ ನಿಯಂತ್ರಿಸಲ್ಪಡುತ್ತದೆ. ಹೀಗೆ ಹಲವು ಸಾಲದ ವ್ಯವಹಾರಗಳನ್ನು ಸುಲಭಸಾಧ್ಯವನ್ನಾಗಿಸಿದೆ. ಆದುದರಿಂದ ಆಧುನಿಕ ಅರ್ಥವ್ಯವಸ್ಥೆಯ ಜೀವರಕ್ತವಾಗಿರುವ ಸಾಲ ವ್ಯವಹಾರದಲ್ಲಿ ಹಣವು ಕೆಂಪು ರಕ್ತ ಕಣಗಳ ಕಾರ್ಯ ನಿರ್ವಹಿಸುತ್ತದೆ.

೪) ಮೌಲ್ಯ ಸಂಚಯ: ಹಣವು ಮೌಲ್ಯ ಸಂಚಯ ಸಾಧನವಾಗಿದೆ (Store of value) ಮೌಲ್ಯವನ್ನು ಹಣದ ರೂಪದಲ್ಲಿ ಸಂಗ್ರಹಿಸಿಡಲು ಸಾಧ್ಯವಾಗುತ್ತದೆ. ಹಿಂದೆ ವಸ್ತು ವಿನಿಮಯ ವ್ಯವಸ್ಥೆಯ ಕಾಲದಲ್ಲಿ ಮೌಲ್ಯವನ್ನು ಯಾವ ರೂಪದಲ್ಲಿ ಸಂಗ್ರಹಿಸಿಡಬೇಕು ಎನ್ನುವುದು ದೊಡ್ಡ ಸಮಸ್ಯೆಯಾಗಿತ್ತು. ಹಣಕ್ಕ ಸರ್ವಮಾನ್ಯತೆ ಇರುವುದರಿಂದ ಮೌಲ್ಯ ಸಂಚಯನಕ್ಕೆ ಅದು ಅತ್ಯುತ್ತಮ ಸಾಧನವಾಗಿದೆ. ಸರಕುಗಳ ಮೌಲ್ಯ ಆಗಾಗ ಬದಲಾದರೂ, ಹಣದ ಮೌಲ್ಯ ಸಾಧಾರಣವಾಗಿ ಸ್ಥಿರವಾಗಿರುತ್ತದೆ. ಸರಕುಗಳು ಬಹುಬೇಗ ನಾಶಗೊಳ್ಳುತ್ತವೆ. ಹಣ ಹಾಗೆ ನಾಶವಾಗುವುದಿಲ್ಲ. – ಆದುದರಿಂದ ಹಣವು ಮೌಲ್ಯವನ್ನು ಭವಿಷ್ಯತ್ತಿಗಾಗಿ ಸಂಗ್ರಹಿಸಿಡುವ ಅತ್ಯುತ್ತಮ ಸಾಧನವಾಗಿದೆ.

೫) ಮೌಲ್ಯದ ವರ್ಗಾವಣೆ : ಹಣವನ್ನು ಒಬ್ಬನಿಂದ ಇನ್ನೊಬ್ಬನಿಗೆ ವರ್ಗಾಯಿಸುವ ಮೂಲಕ ಮೌಲ್ಯದ ವರ್ಗಾವಣೆ ಮಾಡಲಾಗುತ್ತದೆ. ಹಣವನ್ನು ಯಾವುದೇ ವ್ಯಕ್ತಿಗೆ, ಸಂಸ್ಥೆಗೆ ಅಥವಾ ಸ್ಥಳಕ್ಕೆ ಯಾವಾಗ ಬೇಕಾದರೂ ವರ್ಗಾಯಿಸಬಹುದು. ಕೊಳ್ಳುವ ಶಕ್ತಿಯ ವರ್ಗಾವಣೆ ಕೂಡಾ ಹಣದಿಂದಾಗಿ ಸಾಧ್ಯವಾಗಿದೆ. ಓರ್ವ ವ್ಯಕ್ತಿ ತನ್ನ ಆಸ್ತಿಯನ್ನು ಮಾರಾಟ ಮಾಡಿ ಬೇರೊಂದು ಊರಲ್ಲಿ ಆಸ್ತಿ ಕೊಳ್ಳಬಹುದು. ಹಣಕ್ಕೆ ಸರ್ವಮಾನ್ಯತೆ ಇರುವುದರಿಂದ ಮೌಲ್ಯದವರ್ಗಾವಣೆ ಸಾಧ್ಯವಾಗಿದೆ.

ಇವುಗಳಲ್ಲಿ ಮೊದಲಿನೆರಡು ಕರ್ಯಗಳನ್ನು ಪ್ರಧಾನ ಕಾರ್ಯಗಳೆಂದೂ, ಕೊನೆಯ ಮೂರು ಕಾರ್ಯಗಳನ್ನು ಆನುಷಂಗಿಕ ಕಾರ್ಯಗಳೆಂದೂ ಗುರುತಿಸಲಾಗುತ್ತದೆ.

ಹಣದ ಚಲನಾತ್ಮಕ ಕಾರ್ಯಗಳು

ಆರ್ಥಿಕತೆಯ ಮೇಲೆ ವಿವಿಧ ರೂಪಗಳಲ್ಲಿ ಪ್ರಭಾವಿಸುವ ಕಾರ್ಯಗಳನ್ನು ಹಣದ ಚಲನಾತ್ಮಕ ಕಾರ್ಯಗಳೆಂದು ಕರೆಯಲಾಗುತ್ತದೆ. ಹಣದ ಪ್ರಮುಖ ಚಲನಾತ್ಮಕ ಕಾರ್ಯಗಳಿವು

೧) ರಾಷ್ಟ್ರೀಯ ಆದಾಯ ವಿತರಣೆಯ ಮಾಪನ : ಹಣದ ಸಹಾಯದಿಂದ ರಾಷ್ಟ್ರೀಯ ಆದಾಯವನ್ನು ಹಣದ ರೂಪದಲ್ಲಿ ಮಾಪನ ಮಾಡಲು ಸಾಧ್ಯವಾಗಿದೆ. ವಸ್ತು ವಿನಿಮಯ ವ್ಯವಸ್ಥೆಯಲ್ಲಿ ಇದು ಸಾಧ್ಯವಿರಲಿಲ್ಲ. ರಾಷ್ಟ್ರೀಯ ಆದಾಯವು ಉತ್ಪಾದನಾಂಗಗಳಿಗೆ ಪ್ರತಿಫಲ ರೂಪದಲ್ಲಿ ವಿತರಣೆಯಾಗುತ್ತದೆ. ಹಣದ ರೂಪದಲ್ಲಿ ಈ ವಿತರಣೆ ಸುಲಭವಾಗುತ್ತದೆ. ಭೂಮಿಗೆ ಗೇಣಿ, ಶ್ರಮಕ್ಕೆ, ಕೂಲಿ, ಬಂಡವಾಳಕ್ಕೆ ಬಡ್ಡಿ ಮತ್ತು ಸಂಘಟನೆಗೆ ಲಾಭ ಪ್ರತಿಫಲವಾಗಿರುತ್ತದೆ. ಇವೆಲ್ಲವನ್ನೂ ಹಣದ ಮೂಲಕವೇ ಲೆಕ್ಕ ಹಾಕಲಾಗುತ್ತದೆ.

೨) ಸಾಲ ವ್ಯವಹಾರಕ್ಕೆ ಆಧಾರ : ಹಣ ಎಂಬ ಸಾರ್ವತ್ರಿಕ ಒಪ್ಪಿಗೆಯ ಸಾಧನವೊಂದು ಇರುವುದರಿಂದಲೇ ಸಾಲ ಕೊಡುವ ಅಥವಾ ಸಾಲ ಪಡೆಯುವ ವ್ಯವಹಾರ ಸಾಧ್ಯವಾಗಿದೆ. ಸಾಲ ಇಲ್ಲದೆ ಆಧುನಿಕ ಜಗತ್ತಿನ ವ್ಯವಹಾರಗಳು ನಡೆಯುವುದು ದುಸ್ತರ. ಹಣ ಇಲ್ಲದಿದ್ದರೆ ಸಾಲ ವ್ಯವಹಾರವೂ ಇರುವುದಿಲ್ಲ. ಬ್ಯಾಂಕುಗಳು ಕೂಡಾ ಉದರಿ ನಿರ್ಮಾಣ ಮಾಡುವುದು ಸಾಲದ ಆಧಾರದಿಂದ. ಸಾಲ ವ್ಯವಹಾರಗಳು ಬ್ಯಾಂಕಿನ ಉಗಮಕ್ಕೆ ಕಾರಣವಾಗಿವೆ. ಆಧುನಿಕ ಬ್ಯಾಂಕಿಂಗ್ ವ್ಯವಸ್ಥೆ ಹಣವನ್ನೇ ಆಧರಿಸಿದೆ.

೩) ತುಷ್ಟಿಗುಣ ಸಮಾನತೆ: ಅನುಭೋಗದ ಉದ್ದೇಶ ತುಷ್ಟಿಗುಣ ಗರಿಷ್ಠತೆಯಾಗಿದೆ. ಸರಕು ಮತ್ತು ಸೇವೆಗಳು ತುಷ್ಟಿಗುಣವನ್ನು ಹೊಂದಿರುತ್ತವೆ. ಸರಕು ಮತ್ತು ಸೇವೆಗಳನ್ನು ಅನುಭೋಗಿಸಿ ತುಷ್ಟಿಗುಣ ಸಮಾನತೆ ಸಾಧಿಸಲು ಸಾಧ್ಯ. ಹಣವು ತುಷ್ಟಿಗುಣ ಸಮಾನತೆ ಸಾಧನೆಗೆ ಕಾರಣವಾಗುತ್ತದೆ. ತುಷ್ಟಿಗುಣ ಸಮಾನತೆಯಿಂದ ಗರಿಷ್ಠ ತೃಪ್ತಿ ಸಾಧಿಸಲು ಸಾಧ್ಯವೆಂದು ಸಮ-ಸೀಮಾಂತ ತುಷ್ಟಿಗುಣ ನಿಯಮವು ತಿಳಿಸುತ್ತದೆ ಹಣವು ತುಷ್ಟಿಗುಣ ಸಮಾನತೆಗೆ ನೆರವಾಗುತ್ತದೆ.

೪) ಗರಿಷ್ಠ ದಕ್ಷತೆ: ಓರ್ವ ಉತ್ಪಾದಕನು ಕೂಡಾ ತನ್ನ ಲಾಭವನ್ನು ಗರಿಷ್ಠಗೊಳಿಸಲು ಯತ್ನಿಸುತ್ತಾನೆ. ಅದಕ್ಕಾಗಿ ಆತ ವಿವಿಧ ಉತ್ಪಾದನಾಂಗಗಳ ಸೀಮಾಂತ ಉತ್ಪಾದಕತೆಯನ್ನು (marginal productivity) ಸಮಾನಗೊಳಿಸುತ್ತಾನೆ. ಹೀಗೆ ಮಾಡಬೇಕಾದರೆ ಆತ ಹಣದ ಮೊರೆ ಹೋಗಬೇಕಾಗುತ್ತದೆ. ಹೀಗೆ ಹಣವು ಉತ್ಪಾದಕರ ಮತ್ತು ಅನುಭೋಗಗಳ ಗರಿಷ್ಠ ಸಂತೋಷಕ್ಕೆ ಕಾರಣವಾಗುತ್ತದೆ. ಉತ್ಪಾದನಾಂಗಗಳ ಗರಿಷ್ಠ ದಕ್ಷತೆ ಮತ್ತು ಸರಕು ಸೇವೆಗಳ ದಕ್ಷ ಉಪಯೋಗಕ್ಕೆ ಹಣ ಸಹಾಯ ಮಾಡುತ್ತದೆ.

೫) ದ್ರವ್ಯತೆ: ಹಣವು ಬಹಳ ಪ್ರಾಮುಖ್ಯವಾದ ದ್ರವ್ಯರೂಪೀ ಆಸ್ತಿಯಾಗಿದೆ. ಅದನ್ನು ದ್ರವ್ಯತೆಯ ಗುಣದಲ್ಲಿ ಇನ್ನು ಯಾವುದರಿಂದಲೂ ಸರಿಗಟ್ಟಲು ಸಾಧ್ಯವಿಲ್ಲ. ಹಣದ ದ್ರವ್ಯತೆಯ ಗುಣದಿಂದಾಗಿ ಸಂಪತ್ತನ್ನು ಯಾವುದೇ ರೂಪದಲ್ಲಿ ಇರಿಸಿಕೊಳ್ಳಲು ಸಾಧ್ಯವಾಗಿದೆ. ದ್ರವ್ಯತೆಯಿಂದಾಗಿ ಓರ್ವ ಉತ್ಪಾದಕ ಸಂಪತ್ತನ್ನು ತನಗೆ ಬೇಕಾದ ರೀತಿಯಲ್ಲಿ ಬೇಕೆಂದಾಗ ಬಳಸಿಕೊಳ್ಳಬಹುದು. ಹಣವು ಜನರ ದ್ರವ್ಯದೊಲವನ್ನು ಈಡೇರಿಸುತ್ತದೆ.

೬) ಉತ್ಪಾದನೆಯ ಮೇಲೆ ಪ್ರಭಾವ : ಇಂದಿನದು ಮಾರುಕಟ್ಟೆ ಆರ್ಥಿಕತೆಯಾಗಿದೆ. ಸರಕು ಮತ್ತು ಸೇವೆಗಳನ್ನು ವಿನಿಮಯಕ್ಕಾಗಿ ಉತ್ಪಾದಿಸಲಾಗುತ್ತದೆ. ವಿನಿಮಯ ಮಾಧ್ಯಮವಾಗಿ ಹಣವು ಉತ್ಪಾದನೆಯನ್ನು ಪ್ರಭಾವಿಸುತ್ತದೆ.

೭) ಆದಾಯದ ಮೇಲೆ ಪ್ರಭಾವ : ಹಣವು ರಾಷ್ಟ್ರೀಯ ಆದಾಯದ ಮೇಲೆ ಪ್ರಭಾವ ಬೀರುತ್ತದೆ. ರಾಷ್ಟ್ರೀಯ ಆದಾಯ ಮತ್ತು ತಲಾದಾಯಗಳನ್ನು ಹಣದ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ಹಣದ ಕೊಳ್ಳುವ ಶಕ್ತಿಯು ಆರ್ಥಿಕತೆಯ ಆಂತರಿಕ ಶಕ್ತಿಯನ್ನು ಪ್ರತಿನಿಧಿಸುತ್ತದೆ.

೮) ಬೆಲೆಯ ಮಟ್ಟದ ಮೇಲೆ ಪ್ರಭಾವ : ಹಣ ಚಲಾವಣೆ ಅಧಿಕವಾದರೆ ಬೆಲೆಗಳು ಏರುತ್ತವೆ. ಇದನ್ನು ಹಣದುಬ್ಬರವೆನ್ನಲಾಗುತ್ತದೆ. ಹಣ ಚಲಾವಣೆ ಕಡಿಮೆಯಾದಾಗ ಬೆಲೆಗಳು ಇಳಿಯುತ್ತವೆ. ಇದು ಹಣದುಬ್ಬರವೆಂದು ಕರೆಯಲ್ಪಡುತ್ತದೆ.

೯) ಸಂಪನ್ಮೂಲಗಳ ಬಳಕೆಗೆ ಕಾರಣ: ಹಣವು ಸಂಪನ್ಮೂಲಗಳ ಸದ್ಬಳಕೆಗೆ ಕಾರಣವಾಗುತ್ತದೆ. ಸಂಪನ್ಮೂಲಗಳು ಸಾಕಷ್ಟಿದ್ದರೂ ಅವುಗಳ ಬಳಕೆಗೆ ಹಣವಿಲ್ಲದಿದ್ದರೆ ದೇಶವು ಪ್ರಗತಿ ಹೊಂದಲಾರದು.

೧೦) ಆರ್ಥಿಕ ಪ್ರಗತಿಯ ಮೇಲೆ ಪ್ರಭಾವ: ಹಣವು ಆರ್ಥಿಕ ಪ್ರಗತಿಯ ಮೇಲೆ ಪ್ರಭಾವ ಬೀರುತ್ತದೆ. ಆರ್ಥಿಕ ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಕಾರ್ಯಕ್ರಮಗಳ ಸಂಯೋಜನೆ, ಅನುಷ್ಠಾನ ಮತ್ತು ಅನುರಕ್ಷಣೆಗಳ ಮೂಲಕ ಹಣವು ಆರ್ಥಿಕ ಪ್ರಗತಿಗೆ ಕಾರಣವಾಗುತ್ತದೆ.

ಹಣದ ಇತರ ಕಾರ್ಯಗಳು

ಈವರೆಗೆ ವಿವರಿಸಿದ ಕಾರ್ಯಗಳಲ್ಲದೆ ಹಣ ಇತರ ಕಾರ್ಯಗಳನ್ನು ಕೂಡಾ ಮಾಡುತ್ತದೆ. ಹಣದ ಇತರ ಕಾರ್ಯಗಳ ಬಗ್ಗೆ ಈಗ ತಿಳಿದುಕೊಳ್ಳೋಣ.

೧) ಇಚ್ಛಾನುವರ್ತಿ ಬಳಕೆ: ಹಣ ಹೊಂದಿರುವಾತ ಅದನ್ನು ತನ್ನ ಇಚ್ಛಾನುವರ್ತಿಯಾಗಿ ಬಳಸಬಹುದು. ಆತ ಹಣವನ್ನು ಅನುಭೋಗೀ ಸರಕುಗಳನ್ನು ಕೊಳ್ಳಲು ಉಪಯೋಗಿಸಬಹುದು. ಅಥವಾ ಉತ್ಪಾದಕ ಸರಕುಗಳನ್ನು ಕೊಳ್ಳಲು ಬಳಸಬಹುದು. ಇಲ್ಲವೇ ಬ್ಯಾಂಕಿನಲ್ಲಿರಿಸಬಹುದು. ಅದರ ಬಳಕೆಗೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಹಣವುಳ್ಳ ವ್ಯಕ್ತಿ ಅದನ್ನು ತನಗಿಷ್ಟ ಬಂದಂತೆ ಬಳಸಬಹುದು. ಹಣವು ವಿನಿಮಯ ಮಾಧ್ಯಮವಾಗಿರುವುದರಿಂದ ಅದರ ಮೂಲಕ ಏನನ್ನು ಬೇಕಾದರೂ ಕೊಳ್ಳಬಹುದು.

೨) ಮರುಪಾವತಿ ಸಾಮರ್ಥ್ಯ ಸೂಚಕ : ಹಣದ ಮೂಲಕ ಯಾವನೇ ವ್ಯಕ್ತಿಯ ಮರು ಪಾವತಿ ಸಾಮರ್ಥ್ಯವನ್ನು ಬಹಳ ಸುಲಭವಾಗಿ ಮಾಪನ ಮಾಡಬಹುದು. ವ್ಯಕ್ತಿ ಹೊಂದಿರುವ ಆಸ್ತಿ, ಪಾಸ್ತಿ ಮತ್ತು ಸಂಪತ್ತಿಗೆ ಹಣದ ಮೂಲಕ ಬೆಲೆ ಕಟ್ಟಿ ಆತನ ಮರುಪಾವತಿ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಮರುಪಾವತಿ ಸಾಮರ್ಥ್ಯವು ಉದರಿ ವ್ಯವಹಾರದಲ್ಲಿ ಬಹಳ ಮುಖ್ಯವಾದುದು. ಬ್ಯಾಂಕು ಸಾಲ ನೀಡುವಾಗ ಮರುಪಾವತಿ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹಾಗೆಯೇ ದೇಶವೊಂದು ವಿದೇಶೀ ಸಾಲ ಪಡೆಯುವಾಗ ಮರುಪಾವತಿ ಸಾಮರ್ಥ್ಯ ಪರಿಗಣನೆಗೆ ಒಳಗಾಗುತ್ತದೆ. ಹಣದ ಮೂಲಕ ಮರುಪಾವತಿ ಸಾಮರ್ಥ್ಯವನ್ನು ನಿರ್ಧರಿಸಲಾಗುತ್ತದೆ.

೩) ಸಾಲ ತೀರಿಕೆಯ ನಿರ್ಧಾರ: ಓರ್ವ ವ್ಯಕ್ತಿಯ ಸಾಲ ತೀರಿಕೆಯನ್ನು ಹಣದ ಸಹಾಯದಿಂದ ನಿರ್ಧರಿಸಲಾಗುತ್ತದೆ. ಓರ್ವ ವ್ಯಕ್ತಿ ತನ್ನ ಪ್ರಸಕ್ತ ಸಾಲವನ್ನು ತೀರಿಸುವ ಶಕ್ತಿ ಹೊಂದಿದ್ದಾನೆಯೇ ಇಲ್ಲವೇ ಎನ್ನುವುದನ್ನು ಆತನ ವರ್ತಮಾನದ ಸಂಪತ್ತಿನ ಮೌಲ್ಯವನ್ನು ನಿರ್ಧರಿಸುವ ಮೂಲಕ ತಿಳಿದುಕೊಳ್ಳಬಹುದು. ಋಣದ ಮೊತ್ತ ಮತ್ತು ಸಂಪತ್ತಿನ ಮೌಲ್ಯವನ್ನು ತುಲನೆ ಮಾಡುವ ಮೂಲಕ ವ್ಯಕ್ತಿಯ ಸಾಲ ತೀರಿಕೆಯ ಸ್ಥಿತಿಯನ್ನು ಕಂಡುಹಿಡಿಯಬಹುದು.

೪) ಬಂಡವಾಳ ಮತ್ತು ಸಂಪತ್ತಿನ ಸಾಮಾನ್ಯ ಮೌಲ್ಯ : ಹಣದ ಸಹಾಯದಿಂದ ಬಂಡವಾಳ ಮತ್ತು ಸಂಪತ್ತು ದ್ರವ್ಯವಾಗಿ ರೂಪಾಂತರ ಹೊಂದುತ್ತದೆ. ಅಂದರೆ ಬಂಡವಾಳ ಮತ್ತು ಸಂಪತ್ತನ್ನು ದ್ರವ್ಯಕ್ಕೆ ರೂಪಾಂತರಿಸಿ ಯಾವುದೇ ಉದ್ದೇಶಕ್ಕೆ ಬಳಸಬಹುದು ಎಂದರ್ಥ. ಎಲ್ಲಿ ಬಂಡವಾಳದ ಹೂಡಿಕೆಯು ಕಡಿಮೆ ಲಾಭದಾಯಕವೋ ಅಲ್ಲಿಂದ ಬಂಡವಾಳವನ್ನು ಹಿಂದಕ್ಕೆ ಪಡೆದು ಅಧಿಕ ಲಾಭದಾಯಕವಾಗಿರುವಲ್ಲಿ ಹೂಡಿಕೆ ಮಾಡಬಹುದು. ಹೀಗೆ ಹಣವು ಬಂಡವಾಳ ಮತ್ತು ಸಂಪತ್ತಿನ ಸಾಮಾನ್ಯ ಮೌಲ್ಯವಾಗಿ ಕಾರ್ಯವೆಸಗುತ್ತದೆ.

ಹಣದ ಕಾರ್ಯಗಳ ಸಾರ್ವತ್ರಿಕ ವರ್ಗೀಕರಣ

ಸಾರ್ವತ್ರಿಕವಾಗಿ ಹಣದ ಕಾರ್ಯಗಳನ್ನು ಈ ಕೆಳಗಿನಂತೆ ವರ್ಗೀಕರಿಸಲಾಗುತ್ತದೆ.

೧) ಹಣದ ಪ್ರಧಾನ ಕಾರ್ಯಗಳು
೨) ಹಣದ ಆನುಷಂಗಿಕ ಕಾರ್ಯಗಳು
೩) ಹಣದ ಅವಲಂಬಿಕ ಕಾರ್ಯಗಳು
೪) ಹಣದ ಇತರ ಕಾರ್ಯಗಳು

ಇವುಗಳನ್ನು ಕೋಷ್ಟಕ ಒಂದರಲ್ಲಿ ತೋರಿಸಬಹುದು.

ಕೋಷ್ಟಕ ೧.೧: ಹಣದ ಕಾರ್ಯಗಳ ಸಾರ್ವತ್ರಿಕ ವರ್ಗೀಕರಣ

ವರ್ಗೀಕರಣ ಕಾರ್ಯಗಳು
೧ ಪ್ರಧಾನ ಕಾರ್ಯಗಳು – ವಿನಿಮಯ ಮಾಧ್ಯಮ, ಮೌಲ್ಯಮಾಪನ

೨ ಆನುಷಂಗಿಕ ಕಾರ್ಯಗಳು – ಮೌಲ್ಯ ಸಂಚಯ, ಮೌಲ್ಯ ವರ್ಗಾವಣೆ ವಿಳಂಬಿತ ಸಂದಾಯ ಪ್ರಮಾಣ

೩ ಅವಲಂಬಿಕ ಕಾರ್ಯಗಳು – ರಾಷ್ಟ್ರೀಯ ಆದಾಯ ಮಾಪನ ಸಾಲವ್ಯವಹಾರ, ತುಷ್ಟಿಗುಣ ಸಮಾನತೆ, ಗರಿಷ್ಠ ದಕ್ಷತೆ ದ್ರವ್ಯದೊಲವು, ಉತ್ಪಾದನೆ-ಬೆಲೆಗಳ ಮೇಲೆ ಪ್ರಭಾವ, ಸಂಪನ್ಮೂಲಗಳ ಬಳಕೆಗೆ ಕಾರಣ, ಆರ್ಥಿಕ ಪ್ರಗತಿಯ ಮೇಲೆ ಪ್ರಭಾವ

೪ ಇತರ ಕಾರ್ಯಗಳು – ಇಚ್ಛಾನುವರ್ತಿ ಬಳಕೆ, ಮರುಪಾವತಿ ಸಾಮರ್ಥ್ಯ ಸೂಚಕ, ಸಾಲ ತೀರಿಕೆಯ ನಿರ್ಧಾರ, ಬಂಡವಾಳ ಮತ್ತು ಸಂಪತ್ತಿನ ಮೌಲ್ಯಮಾಪನ

ಇವುಗಳಲ್ಲಿ ಪ್ರಧಾನ ಮತ್ತು ಆನುಷಂಗಿಕ ಕಾರ್ಯಗಳು ಹಣದ ಸ್ಥಿರ ಅಥವಾ ಸಾಂಪ್ರದಾಯಿಕ ಕಾರ್ಯಗಳಾಗಿವೆ. ಆವಲಂಬಿಕ ಮತ್ತು ಇತರ ಕಾರ್ಯಗಳು ಜೀವಾತ್ಮಕ ಕಾರ್ಯಗಳಾಗಿವೆ.
*****

One thought on “0

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎರಡು ದೃಶ್ಯಗಳು
Next post ಕನ್ನಡ

ಸಣ್ಣ ಕತೆ

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

cheap jordans|wholesale air max|wholesale jordans|wholesale jewelry|wholesale jerseys