೨.೩ ಕಾಗದದ ಪ್ರಮಿತಿ

೨.೩ ಕಾಗದದ ಪ್ರಮಿತಿ

ಕಾಗದದಿಂದ ತಯಾರಿಸಿದ ಅಮಿತ ಶಾಸನ ಬದ್ಧತೆಯ ಕರೆನ್ಸಿ ಹಣಕ್ಕೆ ಕಾಗದದ ಪ್ರಮಿತಿ ಎಂದು ಹೆಸರು. ಕಾಗದದ ಹಣವು ಸಾಂಕೇತಿಕ ಹಣವಾಗಿದ್ದು ಅದರ ಬಾಹ್ಯ ಮೌಲ್ಯವು ಅಂತರಿಕ ಮೌಲ್ಯಕ್ಕಿಂತ ಅಧಿಕವಾಗಿರುತ್ತದೆ. ಚಿನ್ನ, ಬೆಳ್ಳಿ ಅಥವಾ ಲೋಹದ ಗಟ್ಟಿಗಳಿಗೆ ಪರಿವರ್ತಿಸಲು ಸಾಧ್ಯವಿರುವ ಕಾಗದದ ಹಣವು ಪರಿವರ್ತನೀಯ ಕಾಗದದ ಪ್ರಮಿತಿ ಎಂದು ಕರೆಯಲ್ಪಡುತ್ತದೆ. ಹಾಗೆ ಪರಿವರ್ತಿಸಲು ಸಾಧ್ಯವಿಲ್ಲದ ಕಾಗದದ ಹಣವು ಅಪರಿವರ್‍ತನೀಯ ಹಣ ಎಂದು ಕರೆಯಲ್ಪಡುತ್ತದೆ. ಕಾಗದದ ಹಣವು ಸರಕಾರದ ಆದೇಶಕ್ಕನುಗುಣವಾಗಿ ಮುದ್ರಣಗೊಳ್ಳುವುದರಿಂದ ಅದಕ್ಕೆ ಶಾಸನಾತ್ಮಕ ಹಣ ಅಥವಾ ಪ್ರಮಿತಿ (fiat standard) ಎಂಬ ಹೆಸರಿದೆ. ಶಾಸನ ಬದ್ಧತೆಯಿಂದಾಗಿ ಕಾಗದದ ಪ್ರಮಿತಿಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾಗುತ್ತದೆ. ಕೇಂದ್ರ ಬ್ಯಾಂಕಿನ ನಿರ್ದೇಶನಕ್ಕನುಗುಣವಾಗಿ ಕಾಗದದ ಹಣವು ಬಿಡುಗಡೆಗೊಳ್ಳುವುದರಿಂದ ಅದು ನಿರ್ವಹಿತ ಪ್ರಮಿತಿ (managed standard) ಎಂದೂ ಕರೆಯಲ್ಪಡುತ್ತದೆ.

ಕಾಗದದ ಪ್ರಮಿತಿಯ ಒಳಿತುಗಳು

ಕಾಗದದ ಪ್ರಮಿತಿಯು ಹಲವಾರು ಒಳಿತುಗಳಿಂದಾಗಿ ಜನಪ್ರಿಯತೆ ಗಳಿಸಿದೆ. ಕಾಗದದ ಪ್ರಮಿತಿಯ ಒಳಿತುಗಳು ಇವು :

೧. ಮಿತವ್ಯಯಕಾರಿ : ಕಾಗದದ ಹಣವು ಲೋಹದ ಹಣಕ್ಕಿಂತ ಮಿತವ್ಯಯಕಾರಿಯಾದುದು. ಕಾಗದದ ಹಣದ ಮುದ್ರಣಕ್ಕೆ ಲೋಹದ ಹಣದ ಟಂಕಣೆಗಿಂತ ಕಡಿಮೆ ವೆಚ್ಚ ತಗಲುತ್ತದೆ. ಕಾಗದದ ಹಣವನ್ನು ಚಲಾವಣೆಗೆ ತರುವುದರಿಂದ ಚಿನ್ನ ಮತ್ತು ಬೆಳ್ಳಿಯನ್ನು ಉತ್ಪಾದಕ ಉದ್ದೇಶಗಳಿಗೆ ಅಥವಾ ಭದ್ರತೆಗೆ ಬಳಸಬಹುದು. ಬಡರಾಷ್ಟ್ರಗಳು ಸುವರ್ಣ ಪ್ರಮಿತಿಯ ಕಾಲದಲ್ಲಿ ಚಿನ್ನದ ಸಂಗ್ರಹವಿಲ್ಲದೆ ಸಂಕಷ್ಟಕ್ಕೀಡಾಗಿದ್ದವು. ಕಾಗದದ ಪ್ರಮಿತಿಯ ವ್ಯವಸ್ಥೆಯಲ್ಲಿ ಸ್ವಲ್ಪ ಚಿನ್ನವನ್ನು ಮೀಸಲಿರಿಸಿ ನೋಟುಗಳನ್ನು ಮುದ್ರಿಸಬಹುದು. ಆದುದರಿಂದ ಕಾಗದದ ಹಣವು ಬಡರಾಷ್ಟ್ರಗಳಿಗೂ ಪ್ರಯೋಜನಕಾರಿಯಾದುದಾಗಿದೆ.

೨. ಸ್ಥಿತಿಸ್ಥಾಪಕತೆ : ಕಾಗದದ ಪ್ರಮಿತಿಗೆ ಅತ್ಯಧಿಕ ಸ್ಥಿತಿಸ್ಥಾಪಕತೆಯಿದೆ. ಅಗತ್ಯಗಳಿಗೆ ತಕ್ಕಂತೆ ಸರಕಾರವು ಕಾಗದದ ಹಣದ ಪೂರೈಕೆಯನ್ನು ನಿಯಂತ್ರಿಸಬಹುದು. ಹಣಕಾಸಿನ ಮುಗ್ಗಟ್ಟಿನ ಸಮಯದಲ್ಲಿ ಅಧಿಕ ನೋಟುಗಳನ್ನು ಮುದ್ರಿಸಲು ಮತ್ತು ಹಣದುಬ್ಬರದ ಕಾಲದಲ್ಲಿ ನೋಟು ಬಿಡುಗಡೆಯನ್ನು ನಿಯಂತ್ರಿಸಲು ಸಾಧ್ಯವಿದೆ.

೩. ತುರ್ತುಪರಿಸ್ಥಿತಿಗಳಲ್ಲಿ ಪ್ರಯೋಜನಕಾರಿ: ದೇಶವೊಂದು ಯುದ್ಧ ಅಥವಾ ನೈಸರ್ಗಿಕ ಪ್ರಕೋಪಗಳಿಗೆ ಈಡಾಗಿ ಸಂಕಟ ಅನುಭವಿಸುವಾಗ ಕಾಗದದ ಪ್ರಮಿತಿಯು ನೆರವಿಗೆ ಬರುತ್ತದೆ. ಮಹಾ ಆರ್ಥಿಕ ಮುಗ್ಗಟ್ಟನ್ನು ಎದುರಿಸಲು ಮತ್ತು ದ್ವಿತೀಯ ವಿಶ್ವ ಸಮರ (೧೯೩೯-೪೫) ಒಡ್ಡಿದ ಆರ್ಥಿಕ ಸವಾಲುಗಳನ್ನು ಉತ್ತರಿಸಲು ಹೆಚ್ಚಿನ ದೇಶಗಳು ಅಧಿಕ ನೋಟು ಮುದ್ರಣ ಮಾಡಿದವು. ತುರ್ತು ಪರಿಸ್ಥಿತಿಗಳಲ್ಲಿ ಕಾಗದದ ಪ್ರಮಿತಿಯು ಸುವರ್‍ಣ ಪ್ರಮಿತಿಗಿಂತ ಉತ್ತಮವಾದುದನ್ನುವುದು ರುಜುವಾತಾಗಿದೆ.

೪. ಆರ್‍ಥಿಕಾಭಿವೃದ್ಧಿಗೆ ಪೂರಕ : ಆರ್‍ಥಿಕಾಭಿವೃದ್ಧಿಗೆ ಬೃಹತ್ ಮೊತ್ತದ ಬಂಡವಾಳ ಕ್ರೋಢೀಕರಣಗೊಳ್ಳಬೇಕು. ಹಿಂದುಳಿದ ರಾಷ್ಟ್ರಗಳಲ್ಲಿ ಬಂಡವಾಳದ ಕ್ರೋಢೀಕರಣ ತುಂಬಾ ಕಷ್ಟದ ಪ್ರಕ್ರಿಯೆಯಾಗಿದೆ. ತೆರಿಗೆ ಹೆಚ್ಚಳ ಅಥವಾ ಸಾರ್‍ವಜನಿಕ ಸಾಲದ ಮೂಲಕ ಬಂಡವಾಳ ಸಂಚಯಿಸುವುದು ಸುಲಭದ ಮಾತಲ್ಲ. ಹಾಗಾಗಿ ಹೆಚ್ಚಿನ ದೇಶಗಳು ಕೊರತೆ ಧನವಿನಿಯೋಗ (deficit financing) ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳುತ್ತವೆ. ಕೊರತೆ ಧನವಿನಿಯೋಗವು ಅಂತಿಮವಾಗಿ ಹೊಸ ನೋಟುಗಳ ಮುದ್ರಣವನ್ನು ಸೂಚಿಸುತ್ತದೆ. ಹೀಗೆ ಕಾಗದದ ಪ್ರಮಿತಿಯು ಆರ್ಥಿಕಾಭಿವೃದ್ಧಿಗೆ ಸಾಕಷ್ಟು ಹಣ ಒದಗಿಸುತ್ತದೆ.

೫. ಪೂರ್‍ಣೋದ್ಯೋಗ ಸಾಧನೆಗೆ ಸಹಕಾರಿ: ಸಂಪನ್ಮೂಲಗಳ ಪೂರ್ಣ ಬಳಕೆಗೆ ಮತ್ತು ನಿರುದ್ಯೋಗ ನಿವಾರಣೆಗೆ ತುಂಬಾ ಬಂಡವಾಳ ಬೇಕಾಗುತ್ತದೆ. ಕಾಗದದ ಪ್ರಮಿತಿಯು ಬಂಡವಾಳ ಕೊರತೆಯ ಸಮಸ್ಯೆಯನ್ನು ನಿವಾರಿಸುತ್ತದೆ. ಕಾಗದದ ಪ್ರಮಿತಿಯಲ್ಲಿ ಸರಕಾರಕ್ಕೆ ಹಣವನ್ನು ತನ್ನ ಇಚ್ಚೆಗೆ ಅನುಗುಣವಾಗಿ ಬಳಸುವ ಸ್ವಾತಂತ್ರ್ಯವಿರುವುದರಿಂದ ಕಾಗದದ ಪ್ರಮಿತಿಯನ್ನು ಪೂರ್‍ಣೋದ್ಯೋಗ ಸಾಧನೆಗೆ ಬಳಸಲು ಸಾಧ್ಯವಾಗುತ್ತದೆ.

೬. ಆರ್ಥಿಕ ಅನಾಹುತಗಳ ಪ್ರಸರಣವಿಲ್ಲ : ಸುವರ್ಣ ಪ್ರಮಿತಿ ವ್ಯವಸ್ಥೆಯಲ್ಲಿ ಒಂದು ದೇಶದ ಆರ್‍ಥಿಕ ಅನಾಹುತವು ಇತರ ದೇಶಗಳಿಗೆ ಹಬ್ಬುತ್ತಿತ್ತು. ಕಾಗದದ ಪ್ರಮಿತಿಯಲ್ಲಿ ಅಂಥ ಅಪಾಯಗಳಿಲ್ಲ. ಆದುದರಿಂದ ಕಾಗದದ ಹಣವು ಚಿನ್ನದ ಹಣಕ್ಕಿಂತ ಹೆಚ್ಚು ಸುರಕ್ಷಿತವಾದುದು.

೭. ವ್ಯಾಪಾರಕ್ಕೆ ಪೂರಕ : ಕಾಗದದ ಹಣವು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪೂರಕವಾಗಿದೆ. ಸುವರ್‍ಣ ಪ್ರಮಿತಿಯಲ್ಲಿ ಸುವರ್‍ಣ ಸಂಗ್ರಹವಿಲ್ಲದೆ ದೇಶಗಳು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಅಂತಹ ಯಾವುದೇ ಸಮಸ್ಯೆಗಳು ಕಾಗದದ ಪ್ರಮಿತಿಯಲ್ಲಿಲ್ಲ.

ಕಾಗದದ ಪ್ರಮಿತಿಯ ದೋಷಗಳು

ಕಾಗದದ ಪ್ರಮಿತಿಯು ದೋಷಾತೀತವಾದುದೇನಲ್ಲ. ಅದರ ಮುಖ್ಯ ದೋಷಗಳು ಇವು :

೧. ಬೆಲೆಯ ಅಸ್ಥಿರತೆ : ಕಾಗದದ ಹಣದ ಆಂತರಿಕ ಮೌಲ್ಯವು ಸೊನ್ನೆಯಾಗಿರುವುದರಿಂದ, ಕಾಗದದ ಹಣವನ್ನು ಹೆಚ್ಚು ಹೆಚ್ಚು ಮುದ್ರಿಸಿದಂತೆಲ್ಲಾ ಆಂತರಿಕ ಬೆಲೆಗಳಲ್ಲಿ ಅಧಿಕ ಅಸ್ಥಿರತೆ ಕಾಣಿಸಿಕೊಳ್ಳುತ್ತದೆ. ಲೋಹದ ಪ್ರಮಿತಿಯಲ್ಲಿ ಹಣದ ಆಂತರಿಕ ಮೌಲ್ಯವು ಸೊನ್ನೆಯಲ್ಲದ ಕಾರಣ ಬೆಲೆಗಳು ಸಾಧಾರಣವಾಗಿ ಸ್ಥಿರವಾಗಿದ್ದವು.

೨. ಹಣದುಬ್ಬರಕ್ಕೆ ಕಾರಣ : ಕಾಗದದ ಹಣದ ಮುದ್ರಣ ಹೆಚ್ಚುತ್ತಾ ಹೋದರೆ ಹಣದ ಮೌಲ್ಯ ಕುಸಿದು ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಾಗುತ್ತದೆ. ಕಾಗದದ ಪ್ರಮಿತಿಯು ಹಣ ದುಬ್ಬರಕ್ಕೆ ಕಾರಣವಾಗುತ್ತದೆ.

೩. ವಿನಿಮಯ ದರ ಅಸ್ಥಿರತೆ : ಕಾಗದದ ಹಣವು ವಿನಿಮಯ ದರದ ಅಸ್ಥಿರತೆಗೂ ಕಾರಣವಾಗುತ್ತದೆ. ದೇಶವೊಂದು ಅಧಿಕ ಹಣ ಬಿಡುಗಡೆ ಮಾಡಿದಾಗ ಅದರ ಬಾಹ್ಯ ಮೌಲ್ಯ ಕಸಿದು ವಿನಿಮಯ ದರದಲ್ಲಿ ಅಸ್ಥಿರತೆ ಉಂಟಾಗುತ್ತದೆ.

೪. ಸ್ವಯಂ ನಿರ್ವಹಣೆ ಇಲ್ಲ : ಕಾಗದದ ಪ್ರಮಿತಿಯು ಸ್ವಯಂ ನಿರ್ವಹಿತವಲ್ಲ. ಸರಕಾರದ ತಪ್ಪು ನೀತಿಗಳಿಂದಾಗಿ ಕಾಗದದ ಪ್ರಮಿತಿಯು ದೇಶವೊಂದನ್ನು ಆರ್ಥಿಕ ಅನಾಹುತಕ್ಕೆ ತಳ್ಳುವ ಸಾಧ್ಯತೆಗಳಿವೆ.

೫. ಕಳ್ಳ ನೋಟುಗಳ ಹಾವಳಿ : ಕಾಗದದ ಪ್ರಮಿತಿಯು ಕಳ್ಳ ನೋಟುಗಳ ಹಾವಳಿಗೆ ವಿಪುಲಾವಕಾಶ ಮಾಡಿಕೊಡುತ್ತದೆ. ಸುವರ್ಣ ಪ್ರಮಿತಿಯಲ್ಲಿ ಈ ಭೀತಿಯಿರಲಿಲ್ಲ.

ಕಾಗದದ ಪ್ರಮಿತಿಯ ವಿಧಗಳು

ಕಾಗದದ ಪ್ರಮಿತಿಯಲ್ಲಿ (i) ಸಾರ್‍ವತ್ರಿಕ ಕಾಗದದ ಪ್ರಮಿತಿ (ii) ಸೂಚ್ಯಂಕ ಪ್ರಮಿತಿ ಮತ್ತು (iii) ಶಾಸನಾತ್ಮಕ ಪ್ರಮಿತಿ ಎಂದು ಮೂರು ವಿಧ

೧. ಸಾರ್ವತ್ರಿಕ ಕಾಗದದ ಪ್ರಮಿತಿ: ಚಿನ್ನಕ್ಕೆ ಮತ್ತು ಬೆಳ್ಳಿಗೆ ಪರಿವರ್‍ತಿಸಲಾಗದ, ಆದರೆ ಇತರ ಲೋಹಗಳಿಗೆ ಪರಿವರ್‍ತಿಸಲು ಸಾಧ್ಯವಿರುವ ಕಾಗದದ ಹಣಕ್ಕೆ ಸಾರ್ವತ್ರಿಕ ಕಾಗದದ ಪ್ರಮಿತಿ (general paper standard) ಎಂದು ಹೆಸರು. ಅಂತಹ ಹಣಕ್ಕೆ ಆಧಾರ ರೂಪವಾಗಿ ಯಾವುದೇ ಚಿನ್ನ ಅಥವಾ ಬೆಳ್ಳಿಯ ಮೀಸಲು ಇರುವುದಿಲ್ಲ. ಆದರೆ ಇತರ ಲೋಹಗಳ ಮೀಸಲು ರಕ್ಷೆ ಇರುತ್ತದೆ. ಸಾರ್‍ವತ್ರಿಕ ಕಾಗದದ ಪ್ರಮಿತಿಯು ಕಡಿಮೆ ವೆಚ್ಚದಾಯಕವಾಗಿರುತ್ತದೆ. ಅದು ಆರ್ಥಿಕಾಭಿವೃದ್ಧಿಗೆ, ಪೂರ್‍ಣೋದ್ಯೋಗ ಸಾಧನೆಗೆ ಮತ್ತು ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಪೂರಕವಾಗಿದೆ. ಆದರೆ ಸಾರ್ವತ್ರಿಕ ಕಾಗದದ ಪ್ರಮಿತಿಯು ಬೆಲೆಗಳ ಮತ್ತು ವಿನಿಮಯ ದರದ ಅಸ್ಥಿರತೆಗೆ ಹಾಗೂ ಹಣದುಬ್ಬರಕ್ಕೆ ಕಾರಣವಾಗುತ್ತದೆ.

೨. ಸೂಚ್ಯಂಕ ಪ್ರಮಿತಿ : ಫಿಶರ್ ಸೂಚಿಸಿದ ವಿಧಾನವಿದು. ಸೂಚ್ಯಂಕ ಪ್ರಮಿತಿಯಲ್ಲಿ (index number standard) ಹಣದ ಮೌಲ್ಯವನ್ನು ಸಾರ್‍ವತ್ರಿಕ ಬೆಲೆಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಈ ವ್ಯವಸ್ಥೆಯಲ್ಲಿ ಹಣದ ಅಂತರಿಕ ಮೌಲ್ಯವು ಸೊನ್ನೆಯಾಗಿರುತ್ತದೆ. ಹಣದ ನಿಜವಾದ ಮೌಲ್ಯವು ಸಾರ್‍ವತ್ರಿಕ ಬೆಲೆಗಳ ಹಂತದ (general price level) ಮೂಲಕ ನಿರ್‍ಧಾರವಾಗುತ್ತದೆ. ಉದಾಹರಣೆಗೆ, ಸರಕು ಮತ್ತು ಸೇವೆಗಳ ಬೆಲೆಯಲ್ಲಿ ಶೇ. ೨೫ ರಷ್ಟು ಏರಿಕೆಯಾದರೆ ಹಣದ ಮೌಲ್ಯದಲ್ಲಿ ಅಷ್ಟೇ ಪ್ರಮಾಣದ ಇಳಿಕೆಯಾಗುತ್ತದೆ. ಹಣದ ಮೌಲ್ಯದ ಇಳಿಕೆಯನ್ನು ತಪ್ಪಿಸಬೇಕಾದರೆ, ಹಣದ ಪರಿಮಾಣವನ್ನು ಶೇ. ೨೫ ರಷ್ಟು ಕಡಿಮೆ ಮಾಡಬೇಕಾಗುತ್ತದೆ. ಆಗ ಹಣದ ಮೌಲ್ಯವು ಮೂಲ ಹಂತಕ್ಕೆ ಬಂದು ನಿಲ್ಲುತ್ತದೆ. ಸೈದ್ಧಾಂತಿಕವಾಗಿ ಇದೊಂದು ಸುಲಭದ ವಿಧಾನವಾಗಿದೆ. ಆದರೆ ವಾಸ್ತವವಾಗಿ ಸಾರ್‍ವತ್ರಿಕ ಬೆಲೆಗಳನ್ನು ಸಮರ್‍ಪಕವಾಗಿ ಮಾಪನ ಮಾಡಲು ಮತ್ತು ಹಣದ ಪರಿಮಾಣವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.

೩. ಶಾಸನಾತ್ಮಕ ಪ್ರಮಿತಿ: ಸರಕಾರದ ಆದೇಶಕ್ಕನುಗುಣವಾಗಿ ಕಾರ್‍ಯವೆಸಗುವ ಪ್ರಮಿತಿಗೆ ಶಾಸನಾತ್ಮಕ ಪ್ರಮಿತಿ (fiat money) ಎಂದು ಹೆಸರು. ಅಂತಹ ಹಣದ ಕೊಳ್ಳುವ ಶಕ್ತಿಯನ್ನು (purchasing power) ಸರಕಾರ ನಿರ್‍ಧರಿಸುತ್ತದೆ. ಶಾಸನಾತ್ಮಕ ಹಣದ ಆಂತರಿಕ ಮೌಲ್ಯವು ಬಾಹ್ಯ ಮೌಲ್ಯಕ್ಕಿಂತ ಕಡಿಮೆಯಿರುತ್ತದೆ. ಶಾಸನಾತ್ಮಕ ಹಣವು ವಿನಿಮಯ ಮಾಧ್ಯಮವಾಗಿ ಮತ್ತು ಮೌಲ್ಯ ಸಂಚಯನ ಸಾಧನವಾಗಿ ಕಾರ್ಯ ನಿರ್ವಹಿಸುತ್ತದೆ. ಶಾಸನಾತ್ಮಕ ಹಣವು ಅಮಿತ ಶಾಸನ ಬದ್ಧತೆ ಹೊಂದಿರುವ, ಸರಕಾರದ ನಿರ್ದೇಶನಕ್ಕನುಗುಣವಾಗಿ ಹೊರಬರುವ ಪೂರ್ಣ ಹಣವಾಗಿದೆ. ಅದು ಕಾಗದದ ಪ್ರಮಿತಿಯ ಸಮಸ್ತ ಗುಣದೋಷಗಳನ್ನು ಹೊಂದಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಾಂಧಿ ವೇಷ
Next post ಮನ್ಸರ್ ಮಾತು

ಸಣ್ಣ ಕತೆ

 • ವಲಯ

  ಅವಳ ಕೈ ಬೆರಳುಗಳು ನನ್ನ ಮುಖದ ಮೇಲೆ ಲಯಬದ್ಧವಾಗಿ ಚಲಿಸುತ್ತಿವೆ. ಕಂಗಳ ಮೇಲೆ ಅದೊಂದು ತರಹ ಮಂಪರು ಮೆತ್ತ-ಮೆತ್ತಗೆ ಹಾರಾಡತೊಡಗುತ್ತಿದೆ! ನಾಳೆ ಹೋಗಬೇಕಾದ ‘ಪಾರ್ಟಿ’ ಗೆ ಈಗಾಗಲೇ… Read more…

 • ವಿರೇಚನೆ

  ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಮೋಟರ ಮಹಮ್ಮದ

  ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys