ಇಳಾ – ೮

ಇಳಾ – ೮

ಚಿತ್ರ: ರೂಬೆನ್ ಲಗಾಡಾನ್

ಪತ್ರಿಕೆಯನ್ನು ಓದುತ್ತಿದ್ದ ಇಳಾ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಹಿಂದಿನ ಶೈಕ್ಷಣಿಕ ಅರ್ಹತೆಯಿಲ್ಲದೆ ಪದವಿಯನ್ನು ಓದಬಹುದು. ಮನೆಯಲ್ಲಿಯೇ ಕುಳಿತು ಓದಿ ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿದುಕೊಂಡಳು. ಡಿಗ್ರಿಗೆ ಕಟ್ಟಿಬಿಡೋಣವೆಂದು ಆಲೋಚನೆ ಮಾಡಿದಳು. ಯಾವುದೋ ಒಂದು ಡಿಗ್ರಿ, ಮನೆಯಲ್ಲಿಯೋ, ಕಾಲೇಜಿಗೆ ಹೋಗಿಯೋ ಒಂದು ಡಿಗ್ರಿ ಅಂತ ಆದರೆ ಸಾಕು ಎಂದುಕೊಂಡು ಬಿಕಾಂಗೆ ಸೇರೋಣ ಅಂತ ತೀರ್ಮಾನ ಮಾಡಿದಳು.

ಹಾಗೆ ಮತ್ತೊಂದು ಆಲೋಚನೆ ಹೊಳೆಯಿತು. ಅಮ್ಮನೂ ಯಾಕೆ ನನ್ನ ಜೊತೆ ಪರೀಕ್ಷೆ ತೆಗೆದುಕೊಳ್ಳಬಾರದು. ಹೇಗೂ ಶಾಲೆಯ ಕೆಲಸ ಸಿಕ್ಕಿದೆ, ಶಾಲೆಯ ಮುಖ್ಯಸ್ಥೆ ಎಂದು ಹುದ್ದೆ ನೀಡಿರುವಾಗ ಅದಕ್ಕೆ ತಕ್ಕಂತೆ ಅರ್ಹತೆಯೂ ಇರಬೇಕಲ್ಲವೆ? ಮೂರು ವರ್ಷದಲ್ಲಿ ಡಿಗ್ರಿ ಮಾಡಿಬಿಡಬಹುದು-ಆ ಆಲೋಚನೆ ಬಂದಿದ್ದೆ ತಡ. ಶಾಲೆಯತ್ತ ಬಂದಳು. ಆಫೀಸು ರೂಂನಲ್ಲಿ ಕುಳಿತ ನೀಲಾ ಏನೋ ಬರೆಯುತ್ತ ಕುಳಿತಿದ್ದಳು. ಹಾಗೆ ಕುಳಿತ ತಾಯಿಯನ್ನು ನೋಡಿ ಒಂಥರ ಖುಷಿಯಾಯಿತು. ಮನೆಯೊಳಗೆ ಅಡುಗೆ ಮಾಡಿಕೊಂಡು ಮನೆಯೇ ಸರ್ವಸ್ವ ಎಂದು ಕುಳಿತಿದ್ದ ಅಮ್ಮ ಇಂದು ಒಂದು ಶಾಲೆಯ ಮುಖ್ಯಸ್ಥೆ ಎನಿಸಿಕೊಂಡಿರುವುದು ಹೆಮ್ಮೆಯ ಎನಿಸಿ ಪ್ರೀತಿಯಿಂದ ತಾಯಿಯನ್ನೇ ದಿಟ್ಟಿಸಿದಳು- ಅಪ್ಪ ಸತ್ತ ದಿನಗಳಲ್ಲಿ, ಅಳುತ್ತ ಊಟ-ತಿಂಡಿ ಬಿಟ್ಟು ಸದಾ ಅದೇ ಯೋಚನೆಯಲ್ಲಿ ಮುಳುಗಿ ಬದುಕೇ ಮುಗಿದುಹೋಯಿತೆಂದು ದುಃಖಿಸುತ್ತ ಹಾಸಿಗೆ ಹಿಡಿದಿದ್ದ ಅಮ್ಮನೆಲ್ಲಿ? ಆತ್ಮವಿಶ್ವಾಸದಿಂದ ಬೀಗುತ್ತ ತದೇಕ ಚಿತ್ತದಿಂದ ಫೈಲ್ ಒಳಗೆ ಮುಳುಗಿ ಹೋದ ಈಗಿನ ಅಮ್ಮನೆಲ್ಲಿ?- ನಿಜಕ್ಕೂ ಇಂತಹ ಅವಕಾಶ ಮಾಡಿಕೊಟ್ಟ ವಿಸ್ಮಯಗೆ ನಾವು ಋಣಿಯಾಗಿರಬೇಕು. ಆ ಪುಣ್ಯಾತ್ಮ ಇಂತಹದೊಂದು ಯೋಜನೆ ಕೈಗೊಂಡು ಅಮ್ಮನ ಬದುಕನ್ನು ಹೊಸ ದಿಕ್ಕಿನತ್ತ ಕರೆದೊಯ್ದಿದ್ದಾನೆ, ಅಂಥ ಆಲೋಚನೆ ವಿಸ್ಮಯಗೆ ಕೊಟ್ಟ ದೇವರಿಗೆ ದೊಡ್ಡ ಥ್ಯಾಂಕ್ಸ್. ಏಕೋ ಕತ್ತೆತ್ತಿದ ನೀಲಾ ಮಗಳು ತದೇಕ ಚಿತ್ತದಿಂದ ತನ್ನನ್ನೆ ನೋಡುತ್ತಿರುವುದನ್ನು ಕಂಡು…

‘ಇಳಾ, ಇದೇನು ಸ್ಕೂಲಿನತನಕ ಬಂದುಬಿಟ್ಟದ್ದೀಯಾ? ಬಂದು ಎಷ್ಟು ಹೊತ್ತಾಯಿತು? ಸುಮ್ನೆ ನಿಂತಿದ್ದೀಯಲ್ಲ… ಬಾ ಕೂತ್ಕೋ’ ಎಂದು ಅವಳನ್ನು ಎಚ್ಚರಿಸಿದಳು. ‘ಆಗ್ಲೆ ಬಂದೆ ಅಮ್ಮ, ನೀನು ಏನೋ ಬರೀತಾ ಇದ್ಯಲ್ಲ, ಡಿಸ್ಟರ್ಬ್ ಮಾಡುವುದು ಬೇಡವೆಂದು ಸುಮ್ಮನಿದ್ದೆ. ಕ್ಲಾಸಿಲ್ವಾ ನಿಂಗೆ’ ಎಂದಳು.

‘ಕ್ಲಾಸ್ ಕಡೆ ಗಮನ ಕೊಡೋಕೆ ಆಗ್ತಾ ಇಲ್ಲಾ, ಆಫೀಸ್ ಕೆಲಸನೇ ತುಂಬಾ ಆಗ್ತ ಇದೆ, ಅದಕ್ಕೆ ಒಬ್ಬ ಕ್ಲರ್ಕ್ ಹುದ್ದೆಗೆ, ಒಬ್ರು ನರ್ಸರಿ ನೋಡ್ಕೋಳ್ಳೋಕೆ ಅಂತ ಇಬ್ಬರನ್ನು ಕೆಲಸಕ್ಕೆ ತಗೋಬೇಕಾಗಿದೆ, ಅದಕ್ಕೆ ಅಪ್ಲಿಕೇಶನ್ ಬಂದಿದೆ. ಅದನ್ನ ನೋಡ್ತ ಇದ್ದೆ, ಯಾರನ್ನ ತಗೋಬಹುದು ಅಂತ, ವಿಸ್ಮಯ ನಿಮಗೆ ಯಾರು ಸರಿ ಅನ್ನಿಸುತ್ತಾರೋ ಅವರ್‍ನ ತಗೊಳ್ಳಿ ಅಂದಿದ್ದಾರೆ’ ಎಂದಳು.

‘ಹೌದಾ ಅಮ್ಮ… ಮತ್ತಿಬ್ಬರನ್ನ ತಗೋತಾ ಇದ್ದೀರಾ, ಒಳ್ಳೆಯದಾಯ್ತು ಬಿಡು, ನಿಂಗೂ ಹೊರೆ ಕಡಿಮೆ ಆಗುತ್ತೆ, ನಾನು ಈವಾಗ ಯಾಕೆ ಬಂದೆ ಗೊತ್ತಾ, ಈ ಪೇಪರ್ ಓದು’ ಅಂತ ಪತ್ರಿಕೆಕೊಟ್ಟಳು.

‘ಏನಿದೆ, ಪೇಪರ್ನಲ್ಲಿ?’ ಕುತೂಹಲದಿಂದ ನೋಡಿದಳು. ಅರ್ಥವಾಗದೆ ಏನಿದೆಯೊ ಅಂತ ವಿಶೇಷ ಎಂದು ಮಗಳನ್ನ ನೀಲಾ ಕೇಳಿದಳು.

‘ಓಪನ್ ಯುನಿವರ್ಸಿಟಿಲಿ ಡಿಗ್ರಿ ಮಾಡಬಹುದು ಅಂತ ಬಂದಿದೆ ನೋಡು’ ಎಂದು ತೋರಿಸಿದಳು ಇಳಾ.

ಕೂಡಲೇ ನೀಲಾ ಮ್ಲಾನವದನಳಾದಳು. ಈ ವೇಳೆಗೆ ಮಗಳು ಎಂ.ಬಿ.ಬಿ.ಎಸ್. ಸೇರಬೇಕಿತ್ತು. ಅದೆಷ್ಟು ವರ್ಷಗಳ ಕನಸು, ಮಗಳನ್ನು ಡಾಕ್ಟರನ್ನಾಗಿ ಮಾಡಬೇಕೆಂಬುದು, ಈ ಕನಸು ಹಾಗೆ ಮರುಟಿ ಹೋಯಿತಲ್ಲ. ಪಳ ಪಳನೇ ಕಣ್ಣೀರು ಉದುರಿದವು. ‘ಅಮ್ಮ, ಅಳ್ತಾ ಇದ್ದೀಯಾ, ಈ ರೀತಿ ಅಳುವುದ್ರಿಂದ ಏನಾದರೂ ಪ್ರಯೋಜನ ಇದೆಯಾ? ಬದುಕು ಹೇಗೆ ಬರುತ್ತೋ ಹಾಗೆ ಸ್ವೀಕರಿಸಬೇಕು ಅಲ್ವೆನಮ್ಮ, ನಾವು ಅಂದುಕೊಂಡಿದ್ದೆಲ್ಲ ಆಗಲೇಬೇಕು ಅಂದ್ರೆ ಹೇಗೆ, ಒಂದು ದಾರಿ ಮುಚ್ಚಿಕೊಂಡರೆ, ಇನ್ನೊಂದು ದಾರಿ ಕಂಡೇ ಕಾಣುತ್ತೆ, ಸೂರ್ಯ ಮುಳುಗಿ ಹೋದ ಅಂತ ಚಿಂತಿಸುತ್ತ ಕುಳಿತುಬಿಟ್ಟರೆ, ನಕ್ಷತ್ರಗಳನ್ನೇ ನೋಡೋ ಅವಕಾಶನೂ ತಪ್ಪಿ ಹೋಗುತ್ತೆ. ಎಲ್ರೂ ಡಾಕ್ಟ್ರೇ ಆಗಬೇಕಾ? ವಾಸ್ತವನ್ನ ಅರಗಿಸಿಕೊಳ್ಳೋದು ಕಷ್ಟವಾದ್ರೂ ಅರಗಿಸಿಕೊಳ್ಳಲೇಬೇಕು ಅಲ್ವೇನಮ್ಮ ನೀನು ಮತ್ತೇ ಅದೇ ವಿಚಾರದ ಬಗ್ಗೆ ಯೋಚನೆ ಮಾಡಬೇಡ, ಹೊಸ ಬದುಕು, ಹೊಸ ಕನಸು, ಹೊಸ ವಿಚಾರಗಳಿಂದ ನಾನು ಎಲ್ಲವನ್ನು ಮರೆಯೋ ಪ್ರಯತ್ನ ಮಾಡ್ತ ಇದ್ದೇನೆ, ನಂಗೆ ನೀನು ಹೆಲ್ಪ್ ಮಾಡಬೇಕು ಅಮ್ಮ’ ಗಂಭೀರವಾಗಿ ಹೇಳ್ತಾ ಇದ್ದರೆ ನೀಲಾ ಮಗಳನ್ನು ನೋಡಿಯೇ ನೋಡಿದಳು. ಇವಳು ನನ್ನ ಮಗಳು ಇಳಾನಾ… ಇಷ್ಟೊಂದು ಪ್ರಬುದ್ಧವಾಗಿ ವಿವೇಚನೆ ಮಾಡೋವಷ್ಟು ದೊಡ್ಡವಳಾಗಿಬಿಟ್ಟಿದ್ದಾಳಾ… ಅವಳ ಬದುಕನ್ನು ಅವಳೇ ನಿರ್ಧರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದಾಳಾ- ಮಗಳ ಬಗ್ಗೆ ಹೆಮ್ಮೆ ಎನಿಸಿತು. ತನ್ನ ಮಗಳು ಚೊಕ್ಕ ಚಿನ್ನ ಎನಿಸಿ ಅಭಿಮಾನದಿಂದ ನೋಡಿದಳು. ಆದರೆ ಅವಳು ಖಾಸಗಿಯಾಗಿ ಕುಳಿತು ಮನೆಯಲ್ಲಿಯೇ ಓದಿ ಡಿಗ್ರಿ ಮಾಡುವ ಬಗ್ಗೆ ಮನಸ್ಸು ಒಪ್ಪದಾಯಿತು.

‘ಇಳಾ, ನಿನ್ನ ಬಗ್ಗೆ ನಂಗೆ ಹೆಮ್ಮೆ ಅನ್ನಿಸುತ್ತಾ ಇದೆ. ಆದರೆ ನೀನು ಈಗ ತಗೋತಾ ಇರೋ ನಿರ್ಧಾರ ನಂಗೆ ಒಪ್ಗೆ ಆಗ್ತ ಇಲ್ಲ. ನಿಂಗಿನ್ನೂ ಚಿಕ್ಕ ವಯಸ್ಸು. ಕಾಲೇಜಿನಲ್ಲಿ ಓದೋ ವಯಸ್ಸು. ಮನೆಯಲ್ಲಿ ಕೂತ್ಕೊಂಡು ಓದೋ ಅಂತ ಗತಿ ನಿಂಗೇನು ಬಂದಿಲ್ಲ. ನಾನು ಕೆಲ್ಸ ಮಾಡ್ತ ಇದ್ದೇನೆ, ಸಾಲ ಹೇಗೋ ಒಂದಿಷ್ಟು ತೀರಿದೆ, ತೋಟನಾ ಹೇಗೊ ಮ್ಯಾನೇಜ್ ಮಾಡೋಣ, ನೀನು ಈ ವರ್ಷ ಪಿ.ಯು.ಸಿ. ಪಾಸು ಮಾಡಿ ಬಿ.ಎಸ್ಸಿ.ಗೆ ಸೇರಿಕೊ, ಡಿಗ್ರಿ ಆದ ಮೇಲೆ ಎಂ.ಎಸ್.ಸಿ ಮಾಡು, ನಿನ್ನ ಓದಿಸೋ ಜವಾಬ್ಧಾರಿ ನಂದು. ಈ ಹುಚ್ಚು ಆಲೋಚನೆ ಬಿಟ್ಟು ಪಿ.ಯು.ಸಿ ಪರೀಕ್ಷೆ ಕಟ್ಟು’ ನಿರ್ಧಾರಿತ ದ್ವನಿಯಲ್ಲಿ ಹೇಳಿದಳು. ಅಮ್ಮ ಈ ವಿಚಾರದಲ್ಲಿ ತುಂಬಾ ಕಟುವಾಗಿದ್ದಾಳೆ ಎನಿಸಿ ಮತ್ತೆ ಈಗ ಮಾತು ಮುಂದುವರಿಸುವುದು ಬೇಡ ಎಂದುಕೊಂಡು, ನೀಲಾಳಿಂದ ಪೇಪರ್ ತೆಗೆದುಕೊಂಡು ಒಂದೂ ಮಾತಾಡದೆ ಎದ್ದುಬಂದಳು. ಮಗಳು ಮೌನವಾಗಿ ಎದ್ದು ಹೊರಟದ್ದನ್ನು ಕಂಡು ಮಗಳಿಗೆ ಬೇಸರವಾಗಿದೆ, ಆದ್ರೂ ಪರವಾಗಿಲ್ಲ, ಚಿಕ್ಕ ಹುಡುಗಿ ಅವಳಿಗೇನು ಗೊತ್ತಾಗುತ್ತೆ, ಹಿರಿಯರಾಗಿ ನಾವು ಹೇಳಿದ ಹಾಗೆ ಅವಳು ಕೇಳಬೇಕು, ಅವಳ ಭವಿಷ್ಯ ರೂಪಿಸುವ ಹಕ್ಕು ನನ್ನದು ಎಂದುಕೊಂಡು ತನ್ನ ಕೆಲಸ ಮುಂದುವರಿಸಿದಳು.

ಮನೆಗೆ ಬಂದ ಇಳಾ ತಾನು ಹಾಸನಕ್ಕೆ ಹೋಗಿ ಪ್ರಾಸ್ಪೆಕ್ಟ್ ತಂದುಬಿಡಬೇಕು, ಅಮ್ಮನ ಮಾತು ಕೇಳುತ್ತ ಕೂತರೆ ಕೆಲಸ ಆಗುವುದಿಲ್ಲ. ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪ್ರಾಸ್ಪೆಕ್ಟ್ ಸಿಗುತ್ತದೆ. ಮತ್ತೆ ಹಾಸನಕ್ಕೆ ಹೋಗಬೇಕು. ನಾಳೆ ನಾಡಿದ್ದರಲ್ಲಿ ಬಿಡುವು ಮಾಡಿಕೊಂಡು ಹೋಗಿ ಬರಬೇಕು- ಅಂದುಕೊಂಡು ತೋಟದೊಳಗೆ ನಡೆದಳು. ತೋಟದಲ್ಲಿ ಕೆಲಸ ನಡೆಯುತ್ತಿತ್ತು. ಸುಂದರೇಶ್ ಅಲ್ಲಿ ಆಳುಗಳೊಂದಿಗೆ ಏನೋ ಮಾತಾಡ್ತ ನಿಂತಿದ್ದನ್ನು ನೋಡಿ ‘ಅರೆ ದೊಡ್ಡಪ್ಪ ಯಾವಾಗ ಬಂದ್ರಿ, ನಾನು ಶಾಲೆ ಹತ್ತಿರ ಹೋಗಿದ್ದೆ’ ದೊಡ್ಡಪ್ಪ ಇದ್ದ ಕಡೆ ಬರುತ್ತ ಹೇಳಿದಳು.

‘ನಿನ್ನ ತೋಟದ ಕೆಲಸ ಹೇಗೆ ಸಾಗ್ತ ಇದೆ ನೋಡೋಣ ಅಂತ ಬಂದೆ, ಪರ್ವಾಗಿಲ್ಲ ತೋಟದ ಮಗಳು ಅಂತ ನಿರೂಪಿಸುತ್ತ ಇದ್ದೀಯಾ, ಕೊಟ್ಟಿಗೆನೂ ನೋಡ್ಕೊಂಡು ಬಂದೆ. ಹಸುಗಳು ಚೆನ್ನಾಗಿ ಹಾಲು ಕೊಡ್ತ ಇದ್ದಾವಾ? ಡೈರಿ ವ್ಯಾನ್ ಇಲ್ಲಿಗೆ ಬರುತ್ತಂತೆ, ಒಳ್ಳೆಯದಾಯ್ತು ಬಿಡು, ಸುತ್ತಮುತ್ತ ಜನರಿಗೂ ಅನುಕೂಲವಾಯ್ತು, ಅಂತೂ ಅಪ್ಪನ ಹೆಸರನ್ನು ಉಳಿಸೋಕೆ ಹೊರಡ್ತ ಇದ್ದೀಯಾ’ ಪ್ರೀತಿಯಿಂದ ಇಳಾಳ ತಲೆ ಸವರಿದರು.

ದೊಡ್ಡಪ್ಪನ ಪ್ರೀತಿ ತುಂಬಿದ ಮಾತಿನಿಂದ ಇಳಾ ಉತ್ಸಾಹಿತಳಾದಳು. ‘ದೊಡ್ಡಪ್ಪ, ನಾನೇ ನಿಮ್ಮನ್ನ ಹುಡುಕಿಕೊಂಡು ಬರ್ತಿದ್ದೆ. ನೀವೇ ಬಂದ್ರಿ ಒಳ್ಳೆಯದಾಯ್ತು, ನಾನು ಈ ಕಾಫಿ ಗಿಡಗಳ ಬಗ್ಗೆ ಒಂದಿಷ್ಟು ವಿಚಾರ ತಿಳ್ಕೋಬೇಕಿತ್ತು. ಕಾಫಿ ಗಿಡ ಹೇಗೆ ಬೆಳೆಸಬೇಕು, ಅವಕ್ಕೆ ಕಾಲ ಕಾಲಕ್ಕೆ ಏನೇನು ಕೊಡಬೇಕು ಅಂತ ಹೇಳಿ ದೊಡ್ಡಪ್ಪ.’

‘ಬಾ ಇಲ್ಲೇ ಕುತ್ಕೊಂಡು ಮಾತಾಡೋಣ, ಈ ರೀತಿ ನಿನ್ನ ವಯಸ್ಸಿನ ಮಕ್ಕಳು ಕೇಳೋದೆ ಅಪರೂಪ. ತೋಟದ ಕೆಲ್ಸ’ ಯಾರು ಮಾಡ್ತಾರೆ ಅಂತ ನಿನ್ನಣ್ಣ ಯಶವಂತ ಹೇಳ್ತಾನೆ. ನಾನು ಬೆಂಗಳೂರಿಗೆ ಹೋಗ್ತೀನಿ, ಅಲ್ಲೇ ಯಾವುದಾದರೂ ಕೆಲ್ಸ ಮಾಡ್ತೀನಿ ಅಂತ ಕುಣಿತಾ ಇದ್ದಾನೆ, ಈ ಹಳ್ಳಿ, ಈ ತೋಟ ಎಲ್ಲಾ ಬೋರಂತೆ ಅವನಿಗೆ.’

‘ಒಂದು ನಾಲ್ಕು ವರ್ಷ ಹೋಗಿ ಬರಲಿ ಸುಮ್ನೆ ಇರಿ ದೊಡ್ಡಪ್ಪ, ಆ ಮೇಲೆ ಅವನಿಗೆ ಗೊತ್ತಾಗುತ್ತೆ. ರಾಜನಂತೆ ಇರೋ ಅವಕಾಶ ಇದ್ದರೂ ಆಳಿನಂತೆ ಬದುಕ್ತ ಇದ್ಧಿನಿ ಅಂತ. ಆಗ ಅವನೇ ಇಲ್ಲಿಗೆ ಓಡಿಬರ್ತಾನೆ’ ಸಮಾಧಾನಿಸುವ ಯತ್ನ ಮಾಡಿದಳು.

‘ಇಲ್ಲಾ ಕಣಮ್ಮ, ಹಾಗೆ ಬರೋ ವಿಚಾರವೇ ಅವನಿಗೆ ಇಲ್ಲ. ಈ ತೋಟ, ಆಸ್ತಿ ಪಾಸ್ತಿ ಎಲ್ಲಾ ನನ್ನ ಕಾಲಕ್ಕೆ ಕೊನೆ ಏನೋ ಅಂತ ಅನ್ನಿಸುತ್ತೆ. ಸರಿ, ಆ ವಿಚಾರ ಬಿಡು, ಈಗ ನಿಂಗೆ ಕಾಫಿಗಿಡಗಳ ಬಗ್ಗೆ ಹೇಳ್ತೀನಿ ಕೇಳು. ಕಾಫಿ ಗಿಡಗಳಿಗೆ ಒಳ್ಳೆ ಮಳೆ ಬಂದರೆ ಒಳ್ಳೆ ಫಸಲು ಬರುತ್ತೆ. ಫೆಬ್ರವರಿ-ಮಾರ್ಚಿ ಕೊನೆ ವೇಳೆಗೆ ಒಂದು ಇಂಚಿನಿಂದ ಎರಡು ಇಂಚು ಮಳೆ ಬರಬೇಕು. ಅನಂತರ ಹದಿನೈದರಿಂದ ಇಪ್ಪತ್ತು ದಿನಗಳೊಳಗೆ ಮಳೆ ಬಿದ್ದುಬಿಟ್ಟರೆ ನಮಗೆ ತುಂಬಾ ಅನುಕೂಲವಾಗುತ್ತೆ.’

’ಈ ವರ್ಷ ಮಳೆ ಚೆನ್ನಾಗಿ ಬಂದಿದೆ ಅಲ್ವಾ, ದೊಡ್ಡಪ್ಪ’

‘ಹೌದು ಈ ಬಾರಿ ಒಳ್ಳೆ ಫಸಲು ಬರಬಹುದು ಅಂತ ಅಂದುಕೊಂಡಿದ್ದೇವೆ. ಅಲ್ಲಿ ನೋಡು ಕಾಫಿಗಿಡ ಅಕಡೆ ಮರದಂತೆ ಬೆಳೆದಿದೆ. ಅದನ್ನ ರೊಬಾಸ್ಪ ಅಂತಾರೆ, ಅದೇ ರೀತಿ ಮರ ಕಾಫಿ ಅಂತನೂ ಇದೆ. ಈ ಗಿಡಗಳಿಗೆ ಹೆಚ್ಚು ಖರ್ಚು ಬರುವುದಿಲ್ಲ. ಆದರೆ ಈ ಕಾಫಿಗೆ ಬೆಲೆ ಕಡಿಮೆ. ಗಿಡಗಳು ಮಾತ್ರ ಹೆಚ್ಚು ವರ್ಷ ಬಾಳುತ್ತವೆ. ಆದರೆ ಕಡಿಮೆ ಕೆಲಸ. ಈ ಗಿಡಗಳು ಬೆಳೆದು ಫಸಲು ಬಿಡಲು ಆರರಿಂದ ಎಂಟು ವರ್ಷ ತೆಗೆದುಕೊಳ್ಳುತ್ತವೆ, ಅರೆಬಿಕಾ ಗಿಡಕ್ಕಿಂತ ಎತ್ತರವಾಗಿ ಬೆಳೆಯುತ್ತವೆ.’

‘ಅಪ್ಪ ಸ್ಕೂಲಿಗೆ ಹೋಗೋಕೆ ಹಟ ಮಾಡ್ಕೊಂಡು ರೊಬಾಸ್ಟ ಗಿಡದೊಳಗೆ ಅವಿತು ಕುಳಿತುಕೊಳ್ತ ಇದ್ರಂತೆ, ಅಪ್ಪ ಕಾಫಿಗಿಡದೊಳಗೆ ಅವಿತುಕೊಂಡಿರುತ್ತಾನೆ ಅಂತ ಅಜ್ಜಿಯೇ ಹುಡುಕಿ ಬಲವಂತವಾಗಿ ಶಾಲೆಗೆ ಕಳಿಸ್ತ ಇದ್ರಂತೆ, ಹಾಗಂತ ಅಪ್ಪ ಈ ಗಿಡ ತೋರಿಸ್ತ ಹೇಳ್ತಾ ಇದ್ರು.’

‘ಹೌದು, ಮಹಾತುಂಟ ಅವನು, ಕಾಫಿತೋಟ ಬಿಟ್ಟು ಶಾಲೆಗೆ ಹೋಗೋದು ಅಂದ್ರೆ ಅವನಿಗೆ ಹಿಂಸೆ ಆಗ್ತಾಯಿತ್ತು. ನಮ್ಮೆಲ್ಲರಿಗಿಂತ ಬುದ್ದಿವಂತ, ಓದೋ ಕಡೆ ಗಮನ ಕೊಟ್ಟಿದ್ರೆ ಆಫೀಸರ್ ಆಗಬಹುದಿತ್ತು. ನೀನು ಅವನ ತರವೇ ಬುದ್ಧಿವಂತೆ. ಆದ್ರೆ ಹೀಗಾಗಿಬಿಡ್ತಲ್ಲಾ’ ವ್ಯಥೆ ಒತ್ತಿಕೊಂಡು ಬಂದು ಇಳಾಳ ಕಡೆ ನೋಡಿದರು. ವಿಷಯ ಎಲ್ಲಿದ್ದರೂ ಅಪ್ಪನ ಸಾವಿನ ಹತ್ತಿರಕ್ಕೆ ಬಂದು ನಿಂತು ಅದನ್ನು ನೆನಪಿಸುವ ಸಂದರ್ಭ ತಾನಾಗಿ ಬಂದುಬಿಡುತ್ತಿತ್ತು. ಇದು ವಿಪಾದವೆನಿಸಿದರೂ ಬೇರೆಡೆ ಗಮನ ಹರಿಸುವ ಪ್ರಯತ್ನದಲ್ಲಿ ಇಳಾ.

‘ದೊಡ್ಡಪ್ಪ, ರೊಬಾಸ್ಟದ ಗಿಡಗಳ ಕಾಂಡ ಎಷ್ಟು ದಪ್ಪ ಅಲ್ಲವಾ? ಮರದ ಥರಾ ಬಲವಾಗಿದೆ.’

‘ಹೌದು, ಈ ಗಿಡಗಳಿಗೆ ನೀರಿನ ಆಸರೆ ಇದ್ದುಬಿಟ್ಟರೆ ಹೆಚ್ಚು ಕೆಲಸನೇ ಇರೊಲ್ಲ, ಕಳೇ ಹೆಚ್ಚು ತೆಗೆಯೊ ಹಾಗಿಲ್ಲ. ರಾಸಾಯನಿಕ ಗೊಬ್ಬರ ಬೇಕಿಲ್ಲ, ಕೊಟ್ಟಿಗೆ ಗೊಬ್ಬರ ಕೊಟ್ಟರೆ ಸಾಕು. ಕಸಿ ಮಾಡಿ, ಚಿಗುರು ತೆಗೆದು, ನೀರು ಕೊಟ್ಟರೆ ಸಾಕು ಜಾಸ್ತಿ ಬೆಳೆ ತೆಗೆಯಬಹುದು.’

‘ಚಿಗುರು ಯಾಕೆ ತೆಗಿಬೇಕು ದೊಡ್ಡಪ್ಪ?’

‘ಚಿಗುರು ತೆಗಿಯದಿದ್ದರೆ ಗಿಡ ಹೇಗೆ ಬೇಕೋ ಹಾಗೆ ಬೆಳ್ಕೊಂಡು ಬಿಡುತ್ತದೆ. ಹಾಗೆ ಬೆಳೆದರೆ ಫಸಲು ಕಡಿಮೆ ಆಗುತ್ತೆ. ಅದಕ್ಕೆ ಅನಾವಶ್ಶಕವಾಗಿ ಬೆಳೆಯದಂತೆ ಬಂದ ಚಿಗುರುಗಳನ್ನು ತೆಗೆದುಬಿಡಬೇಕು. ಇದಕ್ಕೆ ಸ್ಪ್ರೇ ಮಾಡುವ ಅವಶ್ಶಕತೆ ಬರುವುದಿಲ್ಲ. ಒಂದು ಸಾರಿ ಈ ಗಿಡ ಬೆಳೆದರೆ ಐವತ್ತರಿಂದ ನೂರು ವರ್ಷದವರೆಗೆ ಬದುಕಿರುತ್ತವೆ. ಒಟ್ಟಿನಲ್ಲಿ ರೊಬಾಸ್ಪ ಕಾಫಿ ಸುಲಭದ ಬೆಳೆ.’

‘ಈ ಗಿಡಗಳೆಲ್ಲ ತಾತಾ ಹಾಕಿದ್ವಲ್ಪ ದೊಡ್ಡಪ್ಪ’

‘ಹೌದು ರೊಬಾಸ್ಟ ಖರ್ಚು ಕಡಿಮೆ ಅಂತ ಅಪ್ಪ ಇದನೆ ಹಾಕಿದ್ದರು. ಆದರೆ ನಾವೆಲ್ಲ ತೋಟ ಹಂಚಿಕೊಂಡ ಮೇಲೆ ಅರೇಬಿಕ್ ತಳಿಗಳನ್ನು ಹಾಕಿದ್ವಿ. ಈ ಅರೇಬಿಕ್ ಸಸಿಗಳಲ್ಲಿ ನಂ. ೯, ನಂ. ೬, ಕಾಟಿಮಾರ, ರೊಹಿರ ಮುಂತಾದ ಹಲವಾರು ತಳಿಗಳಿವೆ. ಇವೆಲ್ಲ ಇತ್ತೀಚಿನ ವೈಜ್ಞಾನಿಕ ಕ್ಷೇತ್ರದಿಂದ ಬಂದಿದ್ದು. ಈ ತರದ ಸಸಿಗಳಿಗೆ ಹೆಚ್ಚಿನ ಖರ್ಚು ಮಾಡಬೇಕು. ಈ ಗಿಡಗಳಿಗೆ ವರ್ಷದಲ್ಲಿ ಎರಡರಿಂದ ಮೂರು ಬಾರಿ ಚಿಗುರು ತೆಗಿಬೇಕು, ಕಸಿ ಮಾಡಬೇಕು, ರಾಸಾಯನಿಕ ಗೊಬ್ಬರ ಎರಡು ಅಥವಾ ಮೂರು ಸಾರಿ ಕೊಡಬೇಕು. ಈ ಕಾಫಿಗೆ ಒಳ್ಳೆ ಬೆಲೆ ಇದೆ ಮಾರುಕಟ್ಟಿಯಲ್ಲಿ’ ಎಂದರು.

‘ದೊಡ್ಡಪ್ಪ ಅರೇಬಿಕ್ ಗಿಡಗಳಿಗೆ ಜಾಸ್ತಿ ರೋಗನೂ ಬರುತ್ತ ಅಂತಾರೆ’ ಕುತೂಹಲದಿಂದ ಕೇಳಿದಳು.

‘ಹೌದು. ಈ ಗಿಡಗಳಿಗೆ ಬೋರರ್ ಎಂಬ ರೋಗ ಬರುತ್ತದೆ. ಈ ರೋಗದಲ್ಲಿ ಹುಳು ಕಾಂಡ ಕೊರೆದು ಗಿಡವನ್ನು ನಾಶ ಮಾಡುತ್ತದೆ. ಅಲ್ಲಿ ಹೊಸ ಗಿಡ ಬೆಳೆಸಬೇಕಾಗುತ್ತದೆ. ಈ ರೋಗ ತಡೆಯಲು ಮುಂಚೆ ಜಮಾಕ್ಸ್‌ವನ್ನು ಕಾಂಡಗಳಿಗೆ ವರ್ಷಕ್ಕೆ ಎರಡು ಬಾರಿ ಲೇಪನ ಮಾಡುತ್ತಿದ್ದರು. ಈಗ ಅದು ಲಿಂಡಸ್ ಎಂಬ ಔಷಧಿಗೆ ಬದಲಾಗಿದೆ’ ಎಂದರು.

‘ಮತ್ತೇನು ರೋಗ ಬರಬಹುದು ದೊಡ್ಡಪ್ಪ’

‘ಈಗ ಅಂದರೆ ಇತ್ತೀಚೆಗೆ ಬೆರ್ರಿ ಬೋರರ್ ಕಾಟ ಜಾಸ್ತಿಯಾಗಿಬಿಟ್ಟಿದೆ. ಇದು ಕಾಫಿ ಬೆಳೆಯನ್ನೇ ತಿಂದು ಹಾಕಿ ಕಾಫಿ ಬೆಳೆಯನ್ನು ಹಾಳು ಮಾಡುತ್ತಿದೆ.’

‘ಈ ಕೀಟ ಹೇಗಿರುತ್ತದೆ.’

‘ಕಾಫಿ ಕಾಯಿಕೊರಕ ತೆಂಗಿನ ಗರಿ ತಿನ್ನುವ ಕೀಟವನ್ನೆ ಹೋಲುತ್ತಾದರೂ, ಸಾಸುವೆಯಷ್ಟು ಚಿಕ್ಕ ಗಾತ್ರದ್ದಾಗಿದೆ. ಕಾಫಿಕಾಯಿ ಎಳೆಯದಾಗಿರುವ ಅಂದರೆ ಸಾಮಾನ್ಯವಾಗಿ ಆಗಸ್ಟ್ ಸೆಪ್ಟಂಬರ್‌ನಲ್ಲಿ ಹೆಣ್ಣು ಕೀಟ ಕಾಯಿಯನ್ನು ಪ್ರವೇಶಿಸಿ, ಅಲ್ಲೇ ಮೊಟ್ಟೆಯಿಟ್ಟು ಮರಿಗಳನ್ನು ಅಭಿವೃದ್ಧಿಪಡಿಸುತ್ತದೆ. ಆ ಮರಿಗಳು ಬೆಳೆದು ಒಂದು ತಿಂಗಳಲ್ಲಿ ಮತ್ತೆ ಮರಿ ಇಡಲು ಪ್ರಾರಂಭಿಸುತ್ತವೆ. ಹೀಗೆ ಒಂದೆರಡು ತಿಂಗಳಲ್ಲೇ ಸಾವಿರಾರು ಪಟ್ಟು ಅಭಿವೃದ್ಧಿ ಹೊಂದಿ ಕಾಫಿ ಕಾಯಿಯಲ್ಲಿಯೇ ಆಶ್ರಯ ಪಡೆದು ಹೆಣ್ಣು ಕೀಟಗಳೆಲ್ಲ ಕಾಫಿಕಾಯಿಯ ಒಂದು ಬೀಜವನ್ನು ಕೊರೆದು ತಿನ್ನತ್ತವೆ.’

‘ಕಾಫಿ ಒಣಗಿಸುವಾಗ ಇವು ಸತ್ತು ಹೋಕ್ತವಾ?’

‘ಅಯ್ಯೋ ಅವೆಲ್ಲಿ ಸಾಯುತ್ತವೆ. ಗಟ್ಟಿಪಿಂಡ ಅವು. ಬೇಸಿಗೆಯಲ್ಲಿ ಬೀಜ ಒಣಗಿದರೂ ಅದರೊಳಗೆ ಭದ್ರವಾಗಿ ಮೂರು ತಿಂಗಳ ಕಾಲ ಬದುಕಿರುತ್ತವೆ. ಅಲ್ಲಿಂದ ಮತ್ತೊಂದು ಪ್ರದೇಶಕ್ಕೂ ವರ್ಗವಾಗಿ ರೋಗ ಹರಡುತ್ತವೆ.’

‘ಮತ್ತೆ ಅವುಗಳನ್ನು ಹೇಗೆ ದೊಡ್ಡಪ್ಪ ಹತೋಟಿ ಮಾಡೋದು’ ಆಗಲೇ ಚಿಂತೆ ಆವರಿಸಿಬಿಟ್ಟಿತು ಇಳಾಗೆ.

‘ಅಯ್ಯೋ ಅದಕ್ಯಾಕೆ ಪುಟ್ಟ ಅಷ್ಟೊಂದು ಚಿಂತೆ, ಸೆಪ್ಪಂಬರ್‌ನಲ್ಲಿಯೇ ಗಿಡಗಳಿಗೆ ಕ್ಲೋರೋಪೆರಿಫಾಸ್ ಔಷಧಿ ಸಿಂಪಡಿಸುವ ಮೂಲಕ ಕಾಯಿಕೊರಕ ಕೀಟಗಳ ಹಾವಳಿ ತಡೆಯಬಹುದು’ ಎಂದಾಗ ಇಳಾಗೆ ಸಮಾಧಾನವೆನಿಸಿತು.

‘ಇವತ್ತಿಗೆ ಇಷ್ಟು ಸಾಕು ಒಂದೇ ದಿನ ಎಲ್ಲವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾ ಸಿಕ್ಕಾಗಲೆಲ್ಲ ನಿಂಗೆ ಬೇಕಾದ ವಿಚಾರ ಹೇಳ್ತಾ ಇರ್ತಿನಿ, ನಾ ಹೊರಡಲ’ ಎಂದರು.

‘ಇರಿ ದೊಡ್ಡಷ್ಟ, ಊಟ ಮಾಡ್ಕೊಂಡು ಹೋಗವಿರಂತೆ, ದೊಡ್ಡಮ್ಮರನ್ನು, ಅಕ್ಕನ್ನು ಕರ್ಕೊಂಡು ಬನ್ನಿ ದೊಡ್ಡಪ್ಪ.’

‘ನೀನು ಬರಲೇ ಇಲ್ಲ ಮನೆಗೆ, ಒಂದು ಸಲನೂ ಈ ಸಲ ಬಂದಿಲ್ಲ. ನಿಮ್ಮ ದೊಡ್ಡಮ್ಮನೂ ಹಾಗೆ ಹೇಳ್ತಾ ಇದ್ದಳು. ನೀನು ನೀಲಾನೂ ನಿಮ್ಮ ಅಜ್ಜಿಯೂ ಒಂದು ಸಲ ಬಂದು ಬಿಡಿ. ಬೆಳಗ್ಗೆ ಬಂದು ಸಂಜೆವರೆಗೂ ಇದ್ದು ಬರುವಿರಂತೆ. ಊಟಕ್ಕೆ ನಿಮ್ಮ ದೊಡ್ಡಮ್ಮ ಕಾಯ್ತ ಇರ್ತಾಳೆ. ಅಲ್ಲಿಗೇ ಹೋಗ್ತೀನಿ ಕಣಮ್ಮ’ ಎಂದು ಹೇಳಿ ಬೈಕ್ ಹತ್ತಿ ಹೊರಟೇಬಿಟ್ಟರು.

ಹೌದು ದೊಡ್ಡಪ್ಪ ಹೇಳಿದ್ದು ನಿಜ. ದೊಡ್ಡಪ್ಪನ ಮನೆಗೆ ಹೋಗಿಯೇ ಇಲ್ಲ. ಹೋದ ವರ್ಷ ರಜೆಯಲ್ಲಿ ಹೋಗಿದ್ದು. ಅವ್ರನ್ನ ಅಪ್ಪ ಸತ್ತಾಗ ತಿಥಿಗೆ ಬಂದಾಗ ನೋಡಿದ್ದು, ಯಾವತ್ತಾದ್ರೂ ಹೋಗಿ ಬರಬೇಕು ಅಂದುಕೊಂಡಳು. ಹಾಸನಕ್ಕೆ ಹೋಗಿ ಪ್ರಾಸ್ಪೆಕ್ಟ್ ತರಬೇಕು, ನಾಳೆನೇ ಹೋಗಿಬರಬೇಕು. ಮೊದಲು ಎರಡು ಪ್ರಾಸ್ಪೆಕ್ಟ್ ತಂದು ಆಮೇಲೆ ಅಮ್ಮನಿಗೆ ಹೇಳಿ ಅಮ್ಮನೂ ಪರೀಕ್ಷೆ ಕಟ್ಟುವಂತೆ ಒಪ್ಪಿಸಬೇಕು. ಹಾಗೆಂದುಕೊಂಡು ಮನೆಗೆ ಬರುವಷ್ಟರಲ್ಲಿ ಶಾಲೆಯ ಬೆಲ್ಲಾಗಿದ್ದು ಕೇಳಿಸಿತು. ಅಮ್ಮ ಊಟಕ್ಕೆ ಬರ್ತ್ತಾಳೆ, ನಾಳೆ ಹಾಸನಕ್ಕೆ ಹೋಗುವ ವಿಚಾರ ತಿಳಿಸಬೇಕು ಎಂದುಕೊಂಡಳು.

ನೀಲಾ ಬರುವಷ್ಟರಲ್ಲಿ ಟೇಬಲ್ ಮೇಲೆ ಅಜ್ಜಿ ಮಾಡಿಟ್ಟಿದ್ದ ಅನ್ನ ಸಾರು ತಂದಿಟ್ಟು ತಟ್ಟೆ ತೊಳೆದು ಇಟ್ಟಳು. ಕೈಕಾಲು ತೊಳೆದು ಒಳಬಂದಳು. ನೀಲಾ, ತಟ್ಟೆಗೆ ಅನ್ನ ಬಡಿಸಿಕೊಂಡು ‘ದೊಡ್ಡಮ್ಮ ನೀನು ಬಂದುಬಿಡು. ಆ ಮೇಲೆ ನೀನೊಬ್ಬಳೆ ಊಟ ಮಾಡಬೇಕಾಗುತ್ತೆ’ ಕೂಗು ಹಾಕಿದಳು.

‘ತಾಳು ಬರ್ತೀನಿ, ಇಳಾಗೆ ಇಷ್ಟ ಅಂತ ಮಜ್ಜಿಗೆ ಮೆಣಸಿನಕಾಯಿ ಕರೀತಿದ್ದೆ’ ಕರೆದ ಮೆಣಸಿನಕಾಯಿ ತರುತ್ತ ಹೇಳಿದರು ಅಂಬುಜಮ್ಮ.

‘ಅಜ್ಜಿ ನಂಗಿಷ್ಟ ಅಂತ ಯಾಕೆ ಹೇಳ್ತಿ ಅದು ನಿಂಗಿಷ್ಟ ಅಂತನೂ ಹೇಳು, ನನ್ನೆಸರು ಹೇಳಿ ತಾನು ತಿನ್ನೋದು…’ ಅಜ್ಜಿಯನ್ನು ರೇಗಿಸಿದಳು.

‘ನೋಡು ನಂಗೇನು ಬೇಕಾಗಿರಲಿಲ್ಲ. ನಿಂಗೆ ಅಂತನೇ ಮಾಡಿದ್ದು. ಇರು ನಾಳೆಯಿಂದ ನೀನು ಏನು ಕೇಳಿದ್ರೂ ಮಾಡಲ್ಲ’ ಇಳಾಳ ಮೇಲೆ ಮುನಿಸಿಕೊಂಡವರಂತೆ ಹೇಳಿದರು.

‘ದೊಡ್ಡಮ್ಮ, ಬಾಯಲ್ಲಿ ನೀನು ಹಾಗಂತೀಯ… ಅದ್ರೆ ಬೆಳಗಾದ ಕೂಡಲೇ, ಇಳಾಗೆ ಅದು ಇಷ್ಟ, ಇಳಾಗೆ ಇದು ಇಷ್ಟ ಅಂತ ಅವಳಿಗಿಷ್ಟವಾದದನ್ನೆ ಮಾಡ್ತೀಯಾ. ಅದೇನು ಅಕ್ಕರೆಯೋ ಅವಳ ಮೇಲೆ, ನಾನಂತು ಅವಳ ಬಗ್ಗೆ ಗಮನಿಸೋಕೆ ಆಗ್ತ ಇಲ್ಲ, ಎಲ್ಲಾ, ಪ್ರೀತಿನೂ ಅವಳಿಗೆ ತುಂಬಿಕೊಡ್ತ ಇದ್ದೀಯಾ ದೊಡ್ಡಮ್ಮ’ ಭಾವುಕಳಾಗಿ ನೀಲಾ ಹೇಳಿದಳು.

‘ನಾನು ತಾನೇ ಯಾರಿಗಾಗಿ ಮಾಡಬೇಕು ನೀಲಾ, ಮನೆಯಲ್ಲಿ ಇರೋದು ಇದೊಂದು ಮಗು, ಅವಳಿಗಾಗಿ ತಾನೇ ನಾವು ಮಾಡಬೇಕಾಗಿರುವುದು, ನಿಂಗಂತು ಏನೂ ಬೇಕಾಗಿಲ್ಲ. ತಿನ್ನೊ ಉಣ್ಣೋ ವಯಸ್ಸು ಅವಳ್ದು. ಅವಳ ಹೆಸರು ಹೇಳಿ ನಾವು ತಿನ್ನೋದು, ಅವಳೊಬ್ಬಳೇ ತಿನ್ನತ್ತಾಳಾ, ಸಂಜೆ ಬರೋ ಅಷ್ಟರಲ್ಲಿ ಪತ್ರೊಡೆ ಮಾಡೋಣ ಅಂತ ಅಕ್ಕಿ ನೆನೆಸಿದ್ದೇನೆ, ಕೆಸುವಿನ ಎಲೆನಾ ಬೆಳಗ್ಗೆನೇ ತೋಟಕ್ಕೆ ಹೋಗಿ ಆಳುಗಳ ಕೈಯಲ್ಲಿ ಕುಯಿಸಿಕೊಂಡು ಬಂದಿದ್ದೇನೆ. ನನಗೆ ತಾನೇ ಹೊತ್ತು ಹೋಗೋದು ಹೇಗೆ? ಅಡುಗೆಮನೆ ಬಿಟ್ರೆ, ತೋಟಕ್ಕೆ ಹೋಗಿ ಸುತ್ತಾಡಿಕೊಂಡು ಬರೋದು… ಅಷ್ಟೆ ನನ್ನ ಪ್ರಪಂಚ, ಇಲ್ಲಾಗಿದ್ದಕ್ಕೆ ಸಂತೋಷವಾಗಿದ್ದೇನೆ. ನಂದೆ ಕೈ, ನಂದೇ ಬಾಯಿ, ಏನು ಮಾಡಿದ್ರು ಕೇಳೋರಿಲ್ಲ, ನಿಮ್ಗೆ ಅಡುಗೆ ಮಾಡಿ ಹಾಕೋದ್ರಲ್ಲಿ ನಂಗೂ ಸುಖ ಅನ್ನಿಸುತ್ತೆ.

ಮಾತಾಡುತ್ತಲೇ ಊಟ ಬಡಿಸಿ ತಾನು ಬಡಿಸಿಕೊಂಡು ಕುಳಿತುಕೊಂಡರು.

‘ಅಮ್ಮ, ನಾಳೆ ನಾನು ಹಾಸನಕ್ಕೆ ಹೋಗಿ ಬರ್ತ್ತಿನಿ, ಪ್ರಾಸ್ಪೆಕ್ಟ್ ತರ್ತ್ತಿನಿ’ ಗಂಭೀರವಾಗಿ ಹೇಳಿದಳು.

‘ನಾನು ಬೇಡಾ ಅಂತ ಬೆಳಗ್ಗೆನೇ ಹೇಳಿದ್ನಲ್ಲ ಇಳಾ. ನಾನು ಹೇಳೋದನ್ನ ಸ್ವಲ್ಪ ಕೇಳು, ವಿದ್ಯೆ ಇವತ್ತು ಎಷ್ಟು ಆಗತ್ಯ ಅಂತ ನಿಂಗೆ ಗೊತ್ತಿಲ್ವಾ.’

‘ಅಮ್ಮ, ನೀನೇನು ಹೇಳಿದ್ರು ಆಷ್ಟೆ, ನಾನು ಮತ್ತೆ ಕಾಲೇಜಿಗೆ ಹೋಗುವುದಿಲ್ಲ, ಮನೆಯಲ್ಲಿಯೇ ಕುತ್ಕೊಂಡು ಓದಿ ಡಿಗ್ರಿ ತಗೋತಿನಿ, ನಾನು ನಡೆವ ಹಾದಿಯ ಬಗ್ಗೆ ನಿರ್ಧಾರ ತಗೊಂಡು ಆಗಿದೆ. ಪದೇ ಪದೇ ಆದೇ ಚರ್ಚೆ ಮಾಡಿ ಬೇಜಾರು ಮಾಡಬೇಡ’ ಎಂದಾಗ.

ಅಂಬುಜಮ್ಮ ಇಳಾಗೆ ಬೇಸರ ಆಗ್ತ ಇದೆ ಅಂತ ಗೊತ್ತಾಗಿ ‘ನೀಲಾ ಆವಳು ಏನು ಬೇಕಾದ್ರು ಮಾಡಿಕೊಳ್ಳಲಿ, ಸುಮ್ಮನಿದ್ದು ಬಿಡು. ಮೊದಲೇ ನೊಂದಿದೆ ಮಗು. ನೀನು ಬೇರೆ ಆದು ಬೇಡ ಇದು ಬೇಡ ಅಂತ ಮಗು ಮನಸ್ಸಿಗೆ ಬೇಸರಪಡಿಸಬೇಡ. ಅವಳು ಎಲ್ಲರ ಹಾಗೆ ಆಲ್ಲ, ಜಾಣೆ. ತೀರ್ಮಾನ ತಗೋಳ್ಳೊ ಶಕ್ತಿ ಅವಳಿಗೆ ಇದೆ, ನೀನು ಅವಳ ಶಕ್ತಿ ಬಗ್ಗೆ ತಿಳ್ಕೊ’ ನೀಲಾಗೆ ಬುದ್ಧಿಹೇಳಿದರು.

ದೊಡ್ಡಮ್ಮ ಹಾಗೆ ಹೇಳಿದ ಮೇಲೆ ಅವರ ಮಾತನ್ನು ಮೀರದಾದಳು. ತನಗೆ ಇಷ್ಟವಿಲ್ಲದಿದ್ದರೂ ಏನಾದ್ರೂ ಮಾಡಿಕೊ ಅಂತ ಹೇಳಿ ಗಂಭೀರವಾಗಿ ಎದ್ದು- ಹೊರಟುಬಿಟ್ಟಳು. ಅಮ್ಮನಿಗೆ ಬೇಸರವಾಗ್ತ ಇದೆ ಅಂತ ಗೊತ್ತಾದ್ರೂ ಪರ್ವಾಗಿಲ್ಲ, ನಾನು ಆಂದುಕೊಂಡ ಹಾಗೆ ನಡ್ಕೊತಿನಿ. ನನಗೂ ಒಳ್ಳೆಯದು ಕೆಟ್ಟದ್ದು ನಿರ್ಧರಿಸೊ ಶಕ್ತಿ ಇದೆ. ಅದನ್ನು ತೋರಿಸಿ ಕೊಡ್ತೀನಿ- ಮನದಲ್ಲಿಯೇ ಇಳಾ ಹೇಳಿಕೊಂಡಳು.

ಅಷ್ಟರಲ್ಲಿ ನಿವಾಸನ ಫೋನ್ ಬಂದಿತು. ‘ಇಳಾ, ನಾನು ನಿವಾಸ್ ಮಾತಾಡ್ತ ಇರೋದು. ನಾಳೆ ಹಾಸನದ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಒಂದು ಮೀಟಿಂಗ್ ಇಟ್ಟುಕೊಂಡಿದ್ದೇವೆ. ಬರೋಕೆ ಆಗುತ್ತಾ’ ಅಂತ ಕೇಳಿದ.

‘ನಾಳೆ ನಾನು ಹಾಸನಕ್ಕೆ ಹೊರಟಿದ್ದೆ ಸಾರ್, ನಾನು ಬರ್ತ್ತಿನಿ ಸಾರ್’ ಖುಷಿಯಿಂದಲೇ ಒಪ್ಪಿದಳು.

‘ಅಜ್ಜಿ, ನಾನು ಬೇಗ ಬೆಳಗ್ಗೆ ಹೊರಡ್ತೀನಿ. ಅಲ್ಲೊಂದು ಪ್ರೋಗ್ರಾಂ ಇದೆ, ಅಮ್ಮಂಗೆ ನೀನು ಹೇಳದೆ ಇದ್ರೆ, ನಾನು ಹಾಸನಕ್ಕೆ ಹೋಗೋಕೆ ಒಪ್ತನೇ ಇರ್ತಿಲ್ಲ. ಕಾಲೇಜಿಗೆ ಹೋಗು ಅಂತಾಳೆ. ನನ್ನ ಫ್ರೆಂಡ್ಸ್ ಎಲ್ಲಾ, ಡಾಕ್ಟರ್ ಇಂಜಿನಿಯರಿಂಗ್ ಓದ್ತಾ ಇರ್ತ್ತಾರೆ, ನಾನು ಒಂದು ವರ್ಷ ಹಿಂದಿನ ತರಗತಿಗೆ ಹೋಗಬೇಕು. ನಾ ಹೇಗೆ ಹೋಗಲಿ? ಅಮ್ಮಂಗೆ ಅರ್ಥನೇ ಆಗಲ್ಲ, ಕಾಲೇಜಿಗೆ ಹೋದ್ರೂ ಡಿಗ್ರಿನೇ ಆಗೋದು, ಮನೆಯಲ್ಲಿಯೇ ಓದಿ ಪರೀಕ್ಷೆ ಬರೆದರೂ ಡಿಗ್ರಿನೇ ಆಗೋದು- ನನ್ನ ಹಣೆಯಲ್ಲಿ ಹೀಗೆ ಬರೆದಿರುವಾಗ ಯಾರು ಅದನ್ನು ತಪ್ಪಿಸಲು ಸಾಧ್ಯ. ಅಜ್ಜಿ ನಾನು ಇಲ್ಲಿಯೇ ಇದ್ದು ಏನಾದ್ರು ಸಾಧಿಸುತ್ತೇನೆ. ನೋಡ್ತ ಇರಜ್ಜಿ’ ಅಜ್ಜಿಯ ಹತ್ತಿರ ತನ್ನ ಮನದಾಳದ ಮಾತುಗಳನ್ನು ಹೇಳಿಕೊಂಡಳು.

‘ಹೋಗ್ಲಿಬಿಡು ಚಿನ್ನು, ಅಮ್ಮಂಗೂ ನಿನ್ನ ಡಾಕ್ಟರ್ ಮಾಡಿಸೋಕೆ ಆಗಲಿಲ್ಲವಲ್ಲ ಅನ್ನೋ ನೋವು. ಓದೋ ವಯಸ್ಸಿನಲ್ಲಿ ನೀನು ತೋಟ, ಮನೆ ಅಂತ ಸುತ್ತಾಡ್ತ ಇದ್ರೆ ಅವಳೆದೆ ಎಷ್ಟು ಉರಿಯಬಹುದು. ಇರೋ ಒಬ್ಬ ಮಗಳ ಭವಿಷ್ಯ ಹೀಗಾಯಿತಲ್ಲ… ಅನ್ನೊ ನೋವು ಅವಳನ್ನ ಕಾಡ್ತನೇ ಇರುತ್ತದೆ. ನೀನೇನು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿಂಗೇನು ಮಾಡಬೇಕು ಅನ್ನಿಸುತ್ತೋ ಹಾಗೆ ಮಾಡು. ನಾನು ನಿಮ್ಮಮ್ಮಂಗೆ ಸಮಾಧಾನ ಮಾಡತಿನಿ, ಸಧ್ಯ ಈ ಶಾಲೆ ಒಂದು ಶುರುವಾಗಿದ್ರಿಂದ ನೀಲಗೆ ಅದೆಷ್ಟು ಅನುಕೂಲ ಆಯ್ತು. ಮನೆಯಲ್ಲಿಯೇ ಕುಳಿತು ಸದಾ ಮೋಹನನ ಯೋಚ್ನೆ ಮಾಡ್ತ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಳು. ಸ್ಕೂಲಿಗೆ ಹೋಗೋಕೆ ಶುರುವಾದ ಮೇಲೆ ಒಂದಿಷ್ಟು ಗೆಲುವಾಗಿದ್ದಾಳೆ. ಹೇಗೊ ಈ ಮನೆಗೆ ಬಡಿದಿರೊ ರಾವು ನಿಧಾನಕ್ಕೆ ಹೋದ್ರೆ ಸಾಕು. ಬೆಳಗ್ಗೆ ನೀ ಹೋಗೊ ಅಷ್ಟರಲ್ಲಿ ತಿಂಡಿ ಮಾಡಿಬಿಡ್ತೀನಿ’ ಅಂಬುಜಮ್ಮ ಇಳಾಗೆ ಹೇಳಿ ಊಟದ ತಟ್ಟೆಗಳನ್ನು ಒಳಗೆ ತೆಗೆದುಕೊಂಡು ಹೋದರು.

ಮೊದಲು ಕಾಲೇಜಿಗೆ ಹೋಗಿ ಪ್ರಾಸ್ಪೆಕ್ಟ್ ತೆಗೆದುಕೊಂಡು ಬಂದು ನಂತರ ಮೀಟಿಂಗ್ ಇರುವ ಕಡೆ ಹೋಗಬೇಕು ಎಂದುಕೊಂಡು- ಬರುವುದು ಎಷ್ಟು ಹೊತ್ತಾಗುವುದೋ? ಕತ್ತಲಾಗಿಬಿಟ್ಟರೆ ಬರುವುದು ಹೇಗೆ? ಮೀಟಿಂಗ್ ಎಷ್ಟು ಹೂತ್ತಿಗಾದರೂ ಮುಗಿಯಲಿ ತಾನು ಬೇಗ ಹೊರಟುಬಿಡಬೇಕು. ಅಲ್ಲಿ ನೆಂಟರಿಷ್ಟರೂ ಯಾರ ಮನೆಗೂ ಹೋಗಿ ಉಳಿಯಲು ಇಷ್ಟವಿಲ್ಲ. ತಾನು ಹಾಸನಕ್ಕೆ ಹೋಗಿ ಬರುವುದೇ ಅವರಾರಿಗೂ ಗೊತ್ತಾಗುವುದು ಬೇಡ, ತಾನು ಖಾಸಗಿಯಾಗಿ ಓದುವುದು, ಅಲ್ಲಿ ಸಂಫಟನೆಗಳಲ್ಲಿ ಭಾಗವಹಿಸುವುದು ಸಧ್ಯಕ್ಕೆ ಯಾರಿಗೂ ತಿಳಿಯುವುದು ಬೇಡ. ಆದರ ಬಗ್ಗೆ ಅವರ ಅಭಿಪ್ರಾಯಗಳನ್ನು ನನ್ನ ಮೇಲೆ ಹೇರುವುದು. ಇದಾವುದೂ ತನಗೆ ಇಷ್ಟವಾಗದೇ ಇರುವ ವಿಚಾರ, ನೋಡೋಣ ಮುಂದೆ… ನನ್ನ ಬಗ್ಗೆ ಬೇರೆಯವರು ಆಸಕ್ತಿ ಯಾಕೆ ತೋರಬೇಕು. ಈಗ ಅಮ್ಮನ, ದೊಡ್ಡಪ್ಪನ ವಿರೋಧ ಸಹಿಸಿದರೆ ಸಾಕಾಗಿದೆ. ಅಜ್ಜಿ ಒಬ್ಬರೇ ನನ್ನನ್ನು ಬೆಂಬಲಿಸುವುದು- ಸಧ್ಯ ಅಜ್ಜಿಯಾದರೂ ನನ್ನ ಕಡೆ ಇದ್ದಾರಲ್ಲ ಸಾಕು ಎಂದು ಸಮಾಧಾನಗೊಂಡಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಾಡ ಹಬ್ಬ
Next post ಮಿಂಚುಳ್ಳಿ ಬೆಳಕಿಂಡಿ – ೪೬

ಸಣ್ಣ ಕತೆ

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…