ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ

ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ

೧.೫ ಆರ್ಥಿಕಾಭಿವೃದ್ಧಿಯಲ್ಲಿ ಹಣದ ಪಾತ್ರ

ಹಣವು ಸರಕು ಮತ್ತು ಸೇವೆಗಳನ್ನು ಕೊಳ್ಳುವ ಮತ್ತು ಮಾರಾಟ ಮಾಡುವ ಸಾಧನವಾಗಿದೆ. ಹಣವನ್ನು ಸಾರ್ವತ್ರಿಕ ವಿನಿಮಯ ಮಾಧ್ಯಮ ಮತ್ತು ಮೌಲ್ಯ ಮಾಪಕ ಸಾಧನವೆಂದು ವ್ಯಾಖ್ಯಾನಿಸಲಾಗುತ್ತದೆ. ಹಣದ ವರ್ತುಲ ಪ್ರವಾಹ ಆರ್ಥಿಕ ಚಟುವಟಿಕೆಗಳ ನಿರಂತರತೆಗೆ ಅತ್ಯಂತ ಅಗತ್ಯವಾದುದು. ಹಣ ಇಲ್ಲದಿದ್ದರೆ ಅನುಭೋಗ, ಉತ್ಪಾದನೆ, ವಿನಿಮಯ ಮತ್ತು ವಿತರಣೆ ನಡೆಸಲು ಸಾಧ್ಯವಿಲ್ಲ. ಹಣವು ಆಧುನಿಕ ಅರ್ಥವ್ಯವಸ್ಥೆಯಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತದೆ. “ಹಣವು ಆಧುನಿಕ ಜೀವನದಲ್ಲಿ ವಹಿಸುವ ಪಾತ್ರವನ್ನು ಅರ್ಥಮಾಡಿಕೊಳ್ಳಲು ನಾವು ಅರ್ಥಶಾಸ್ತ್ರಜ್ಞರಾಗಬೇಕಾಗಿಲ್ಲ; ನಮ್ಮ ಅನುಭವಗಳನ್ನಷ್ಟೇ ಯೋಚಿಸಿದರೆ ಸಾಕು” ಎಂದು ಚಾಂಡ್ಲರ್‌ ಮತ್ತು ಗೋಲ್ಡ್ ಫೀಲ್ಡ್ ತಮ್ಮ ದಿ ಎಕನಾಮಿಕ್ಸ್ ಓಫ್ ಮನಿ ಏಂಡ್ ಬ್ಯಾಂಕಿಂಗ್ ಕೃತಿಯಲ್ಲಿ ಹೇಳಿರುವುದು ಇಲ್ಲಿ ಉಲ್ಲೇಖನೀಯ.

ಹಣಕ್ಕೆ ಬಹಳ ಮಹತ್ತ್ವ ಲಭ್ಯವಾಗಲು ಕಾರಣ ಅದು ವಸ್ತು ವಿನಿಮಯ ವ್ಯವಸ್ಥೆಯ ಕುಂದುಕೊರತೆಗಳನ್ನು ನಿವಾರಿಸಲು ಶಕ್ತರಾಗಿರುವುದು. ಆಧುನಿಕ ಅರ್ಥವ್ಯವಸ್ಥೆಯಲ್ಲಿ ವಿನಿಮಯಕ್ಕೆ ಆಸೆಗಳ ದ್ವಿಮುಖ ಹೊಂದಾಣಿಕೆಯ ಅಗತ್ಯವಿರುವುದಿಲ್ಲ. ಹಣ ಇರುವಾಗ ಸರಕುಗಳನ್ನು ವಿಭಜಿಸಿ ಮೌಲ್ಯ ನಿರ್ಧಾರ ಮಾಡಬೇಕಾಗಿಲ್ಲ. ಮೌಲ್ಯದ ಸಂಚಯ ಮತ್ತು ವರ್ಗಾವಣೆ ಮಾಡುವುದು ಏನೇನೂ ಕಷ್ಟವಲ್ಲ. ಹಣವು ಮೌಲ್ಯ ನಿರ್ಧಾರಕ ವಿನಿಮಯ ಮಾಧ್ಯಮವಾಗಿ, ಸಾಲ ವ್ಯವಹಾರದ ಸಾಧನವಾಗಿ ಮತ್ತು ಮೌಲ್ಯ ಸಂಚಯನದ ಮಾಧ್ಯಮವಾಗಿ ಆಧುನಿಕ ಅರ್ಥವ್ಯವಸ್ಥೆಯಲ್ಲಿ ಬಹಳ ಮಹತ್ತ್ವಪೂರ್ಣವಾದ ಪಾತ್ರವನ್ನು ವಹಿಸುತ್ತದೆ.

ಹಣದ ಧನಾತ್ಮಕ ಪಾತ್ರ

ಹಣವು ಅರ್ಥವ್ಯವಸ್ಥೆಯಲ್ಲಿ ಅನೇಕ ಒಳಿತುಗಳನ್ನು ಉಂಟು ಮಾಡುವುದರ ಮೂಲಕ ಆಧುನಿಕ ವಿನಿಮಯ ವ್ಯವಸ್ಥೆಯಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸುತ್ತದೆ. ಹಣವು ಹೇಗೆ ಅರ್ಥವ್ಯವಸ್ಥೆಗೆ ಪ್ರಯೋಜನದಾಯಕವಾಗಿದೆ ಅನ್ನುವುದನ್ನು ಕೆಳಗೆ ಕಾಣಿಸಲಾಗಿದೆ

೧. ಅನುಭೋಗ: ಅನುಭೋಗಿಗೆ ಹಣವು ಅತ್ಯಂತ ಮಹತ್ವಪೂರ್ಣವಾದ ಅನಿವಾರ್ಯ ಸಾಧನವಾಗಿದೆ. ಅನುಭೋಗಿಯು ಸರಕು ಮತ್ತು ಸೇವೆಗಳನ್ನು ಬಳಸಿ ಗರಿಷ್ಠ ತೃಪ್ತಿ ಪಡೆಯಲು ಪ್ರಯತ್ನ ಮಾಡುತ್ತಾನೆ. ಹಣದ ಮೂಲಕ ತನಗೆ ಬೇಕಾದುದನ್ನು ಆತ ಪಡೆಯಬಲ್ಲ ತೃಪ್ತಿಯನ್ನು ಗರಿಷ್ಠಗೊಳಿಸಲು ಸೀಮಾಂತ ತುಷ್ಟಿಗುಣಗಳ ಸಮಾನತೆ ಸಾಧಿಸಬಲ್ಲ, ಅನುಭೋಗಿಯ ಆಸೆಗಳು ಅಸಂಖ್ಯಾತವಾಗಿದ್ದು ಹಲವು ಮಿತ ಪ್ರಮಾಣದಲ್ಲಿರುವುದರಿಂದ ತೃಪ್ತಿಯನ್ನು ಗರಿಷ್ಠಗೊಳಿಸಲು ತುಂಬಾ ಬುದ್ಧಿವಂತಿಕೆ ಅಗತ್ಯ. ಸರಕು ಸೇವೆಗಳ ಬೆಲೆಗಳು ಸೀಮಾಂತ ತುಷ್ಟಿಗುಣವನ್ನು ಪ್ರತಿನಿಧಿಸುತ್ತವೆ ಮತ್ತು ಹಣದ ಮೂಲಕ ಪ್ರಕಟಗೊಳ್ಳುತ್ತವೆ. ಹಾಗಾಗಿ ಹಣವು ಸೀಮಾಂತ ತುಷ್ಟಿಗುಣ ಸಮಾನತೆಗೆ ಸರಕುಗಳ ಬದಲಾವಣೆ ಅಥವಾ ಪರ್ಯಾಯತೆ ಅಗತ್ಯ. ಹಣವು ಅನುಭೋಗಿಯ ಮಿತ ಆದಾಯವನ್ನು ವಿವಿಧ ಸರಕು ಮತ್ತು ಸೇವೆಗಳ ಮೇಲೆ ವಿಚಾರಪೂರ್ಣವಾಗಿ ವಿನಿಯೋಗಿಸುವುದಕ್ಕೆ ಸಹಾಯ ಮಾಡುತ್ತದೆ. ಹೀಗೆ ಮಾಡುವುದರ ಮೂಲಕ ಹಣವು ಅನುಭೋಗಕ್ಕೆ ಮಾತ್ರವಲ್ಲದೆ ಉತ್ಪಾದನೆಗೂ ಮಾರ್ಗದರ್ಶನ ಮಾಡುತ್ತದೆ.

೨. ಉತ್ಪಾದನೆ : ಉತ್ಪಾದನೆಯು ಸರಕು ಮತ್ತು ಸೇವೆಗಳ ಸೃಷ್ಟಿಯ ಕ್ರಿಯೆಯಾಗಿದೆ. ಓರ್ವ ಅನುಭೋಗಿಯು ಆಸೆಗಳ ತೃಪ್ತಿಗೆ ಯತ್ನಿಸುವಂತೆ ಓರ್ವ ಉತ್ಪಾದಕನು ಗರಿಷ್ಠ ಲಾಭ ಗಳಿಸಲು ಯತ್ನಿಸುತ್ತಾನೆ. ಇದನ್ನೇ ವೈಚಾರಿಕತೆ (rationality) ಎಂದು ಕರೆಯುವುದು. ಉತ್ಪಾದಕನ ಉದ್ದೇಶ ಸಾಧನೆಗೆ ಹಣವು ಸಹಾಯ ಮಾಡುತ್ತದೆ. ಆತ ತನ್ನ ಉತ್ಪಾದನಾಂಗ (input) ಮತ್ತು ಉತ್ಪಾದನೆ (output) ಲೆಕ್ಕವನ್ನು ಹಣದ ರೂಪದಲ್ಲಿ ಇರಿಸಿಕೊಳ್ಳುತ್ತಾನೆ. ಕಚ್ಚಾ ಸರಕುಗಳನ್ನು ಕೊಳ್ಳಲು, ಕೂಲಿ ನೀಡಲು, ಬಂಡವಾಳ ಸಾಲ ಪಡೆಯಲು, ಗೇಣಿ ಪಾವತಿಸಲು, ಜಾಹೀರಾತು ವೆಚ್ಚ ಕೊಡಲು ಹಣವನ್ನು ಬಳಸುತ್ತಾನೆ. ಉತ್ಪಾದಿತ ಸರಕುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಾನೆ. ಹಣದ ಬಳಕೆಯ ಮತ್ತು ಗಳಿಕೆಯ ವ್ಯತ್ಯಾಸ ಆತನ ಲಾಭವನ್ನು ನಿರ್ಧಾರ ಮಾಡುತ್ತದೆ ಹಣದ ಮೂಲಕ ಲಾಭವನ್ನು ಸುಲಭವಾಗಿ ಲೆಕ್ಕ ಹಾಕಲು ಸಾಧ್ಯವಾಗುತ್ತದೆ. ಲಾಭ ಗರಿಷ್ಠಗೊಳಿಸಲು ಆದರ್ಶ ಉತ್ಪಾದನಾಂಗ ಸಂಯೋಜನೆ (optimum factor combination) ಮಾಡಬೇಕಾಗುತ್ತದೆ. ಇದಕ್ಕೆ ಹಣವು ಸಹಕಾರ ನೀಡುತ್ತದೆ.

೩. ಶ್ರಮವಿಭಜನೆ ಮತ್ತು ಉತ್ಪನ್ನ ವೈಶಿಷ್ಟ್ಯ: ಆಧುನಿಕ ಜಗತ್ತಿನಲ್ಲಿ ಬೃಹತ್ ಪ್ರಮಾಣದಲ್ಲಿ ಉತ್ಪಾದನೆ ನಡೆಯಬೇಕಾಗುತ್ತದೆ. ಹಣವು ಶ್ರಮ ವಿಭಜನೆಗೆ ಮತ್ತು ಉತ್ಪನ್ನ ವೈಶಿಷ್ಟಕ್ಕೆ ಸಹಾಯ ಮಾಡುತ್ತದೆ. ಶ್ರಮ ವಿಭಜನೆಯಿಂದಾಗಿ ಕಾರ್ಮಿಕರಲ್ಲಿ ಕೌಶಲ್ಯ ಅಧಿಕವಾಗುತ್ತದೆ. ಕೌಶಲ್ಯದ ಅಧಿಕ್ಯವು ಉತ್ಪಾದನೆಯ ಹೆಚ್ಚಳಕ್ಕೆ ಅವಕಾಶ ಮಾಡಿ ಕೊಡುತ್ತದೆ. ಕೌಶಲ್ಯಕ್ಕೆ ತಕ್ಕಂತೆ ಕೂಲಿ ನೀಡುವ ಉತ್ತೇಜಕ ಕೂಲಿ ಕ್ರಮವೊಂದಿದೆ (incentive Wage system), ಇದು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಅತ್ಯಾಧುನಿಕ ಯಂತ್ರೋಪಕರಣಗಳ ಬಳಕೆಗೆ ಹಣ ಬೇಕಾಗುತ್ತದೆ. ಹೀಗೆ ತಾವು ಶ್ರಮ ವಿಭಜನೆಗೆ ಮತ್ತು ಉತ್ಪನ್ನ ವೈಶಿಷ್ಟ್ಯಕ್ಕೆ ಸಹಾಯಕವಾಗಿದೆ ಮಾತ್ರವಲ್ಲದೆ ಆ ಮೂಲಕ ಉತ್ಪಾದನೆಯನ್ನು ಹೆಚ್ಚಿಸುತ್ತದೆ.

೪. ವಿನಿಮಯ : ಹಣವು ಒಂದು ವಿನಿಮಯ ಮಾಧ್ಯಮವಾಗಿರುವುದರಿಂದ ವಸ್ತು ವಿನಿಮಯ ವ್ಯವಸ್ಥೆಯ ಕುಂದು ಕೊರತೆಗಳನ್ನು ಅದು ನಿವಾರಿಸುತ್ತದೆ. ಹಣವು ಮೌಲ್ಯದ ಒಂದು ಸಾಮಾನ್ಯ ಮಾಪಕವಾದುದರಿಂದ ಹಣದ ಶೋಧದ ಬಳಿಕ ವಿನಿಮಯ ಸುಲಲಿತವಾಗಿ ಸಾಗುವಂತಾಗಿದೆ. ಹಣವು ಬೆಲೆಗಳ ಮುಕ್ತ ನಿರ್ಧಾರಕ್ಕೆ ಸಹಾಯಕವಾಗಿದೆ. ಬೆಲೆಯನ್ನು ಬೇಡಿಕೆ (ಸಿಮಾಂತ ಆದಾಯ) ಮತ್ತು ಪೂರೈಕೆ (ಸೀಮಾಂತ ವೆಚ್ಚ) ನಿರ್ಧರಿಸುತ್ತದೆ. ಬೇಡಿಕೆ ಮತ್ತು ಪೂರೈಕೆಗಳನ್ನು ಹಣದ ಮೂಲಕ ನಿರ್ಧರಿಸಲು ಸಾಧ್ಯವಾಗುತ್ತದೆ. ವ್ಯಾಪಾರ ವಹಿವಾಟುಗಳನ್ನು ಸುಲಭವಾಗಿ ಸಾಗಿಸಲು ಹಣದಿಂದಾಗಿ ಸಾಧ್ಯವಾಗಿದೆ.

೫. ಸಾಲ ವ್ಯವಹಾರ: ಆಧುನಿಕ ವ್ಯಾಪಾರ ವಹಿವಾಟುಗಳು ಸಾಲವನ್ನು ಅವಲಂಬಿಸಿವೆ ಮತ್ತು ಸಾಲವು ಹಣವನ್ನು ಆಧರಿಸಿದೆ. ಹಣದ ಎಲ್ಲಾ ವ್ಯವಹಾರಗಳು ಚೆಕ್ಕು, ಡ್ರಾಫ್ಟ್, ವಿಮಯದ ಹುಂಡಿ ಇತ್ಯಾದಿಗಳನ್ನು ಒಳಗೊಂಡಿವೆ. ಇವುಗಳನ್ನು ಉದರಿ ಸಲಕರಣೆಗಳು (credit instruments) ಎಂದು ಕರೆಯಲಾಗುತ್ತದೆ. ಬ್ಯಾಂಕುಗಳು ಇಂತಹ ಸಲಕರಣೆಗಳನ್ನು ವಿತರಿಸುತ್ತವೆ ಮತ್ತು ಉದರಿ ಸೃಷ್ಟಿ ಮಾಡುತ್ತವೆ. ಉದರಿ ಸೃಷ್ಟಿಯು ನಿಧಿಗಳನ್ನು ಠೇವಣಿದಾರರಿಂದ ಹೂಡಿಕೆ ದಾರರಿಗೆ ವರ್ಗಾಯಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಈ ಸಾಲ ವ್ಯವಹಾರಗಳಿಂದಾಗಿ ಬ್ಯಾಂಕಿನ ಠೇವಣಿಗಳು ಹೂಡಿಕೆಗಳಾಗಿ ಪರಿವರ್ತನೆಗೊಳ್ಳುತ್ತವೆ. ಸಾಲ ವ್ಯವಹಾರಗಳಿಂದಾಗಿ ಅರ್ಥವ್ಯವಸ್ಥೆಯಲ್ಲಿ ಆದಾಯದ ವರ್ತುಲ ಪ್ರವಾಹ ಉಳಿದುಕೊಳ್ಳುತ್ತದೆ.

೬. ಬಂಡವಾಳ ಸಂಚಯನ: ಹಣವು ಬಂಡವಾಳ ಸಂಚಯನ ಸಾಧನವಾಗಿ ಕಾರ್ಯವೆಸಗುತ್ತದೆ. ಹಣವು ದ್ರವರೂಪೀ ಆಸ್ತಿಯಾಗಿದ್ದು ಹಣವನ್ನು ಸಂಚಯನ ಮಾಡಿದಾಗ ಅದು ಉಳಿತಾಯವಾಗುತ್ತದೆ. ಬ್ಯಾಂಕಿನಲ್ಲಿ ಠೇವಣಿಯಾಗಿಟ್ಟ ಉಳಿತಾಯಕ್ಕೆ ಬಡ್ಡಿ ದೊರೆಯುತ್ತದೆ. ಉಳಿತಾಯವು ಬಂಡವಾಳ ಸಂಚಯನದ ಮೂಲವಾಗಿರುತ್ತದೆ. ಉಳಿತಾಯವು ವ್ಯಾಪಾರೋದ್ಯಮಗಳಿಗೆ ಹೂಡಿಕೆಯಾಗಿ ದೊರೆಯುತ್ತದೆ. ಹೀಗೆ ಹಣವು ಬಂಡವಾಳ ಸಂಚಯನಕ್ಕೆ ಕಾರಣೀಭೂತವಾಗಿದೆ.

೭. ಆರ್ಥಿಕ ಬೆಳವಣಿಗೆಯ ಸೂಚಿ: ಹಣವು ಬಂಡವಾಳ ಸಂಚಯನದ ಸಾಧನ ಮಾತ್ರವಲ್ಲದೆ ಆರ್ಥಿಕ ಬೆಳವಣಿಗೆಯ ಸೂಚಿ ಕೂಡಾ ಆಗಿದೆ. ಆರ್ಥಿಕ ಬೆಳವಣಿಗೆಯ ಸೂಚಿಗಳೆಂದು ರಾಷ್ಟ್ರೀಯ ಆದಾಯ, ತಲಾದಾಯ ಮತ್ತು ಆರ್ಥಿಕ ಕಲ್ಯಾಣವನ್ನು ಗುರುತಿಸಲಾಗುತ್ತದೆ. ಇವನ್ನು ಹಣದ ರೂಪದಲ್ಲಿ ಮಾಪನ ಮಾಡಲಾಗುತ್ತದೆ. ಹಣದ ಮೌಲ್ಯ ಅಥವಾ ಬೆಲೆಗಳ ಬದಲಾವಣೆಗಳು ಒಂದು ಅರ್ಥವ್ಯವಸ್ಥೆಯ ಬೆಳವಣಿಗೆಯನ್ನು ಬಿಂಬಿಸುತ್ತವೆ. ಹಣದ ಮೌಲ್ಯ ಕಡಿಮೆಯಾದರೆ ಅಥವಾ ಬೆಲೆಗಳ ಏರಿಕೆಯಾದರೆ ಅರ್ಥವ್ಯವಸ್ಥೆಯು ನೈಜ ಅರ್ಥದಲ್ಲಿ ಬೆಳೆವಣಿಗೆ ಹೊಂದುತ್ತಿಲ್ಲವೆಂದರ್ಥ. ಇದಕ್ಕೆ ಬದಲಾಗಿ ಹಣದ ಮೌಲ್ಯ ಅಧಿಕವಾದರೆ ಅಥವಾ ಬೆಲೆಗಳು ಇಳಿದರೆ ಅರ್ಥವ್ಯವಸ್ಥೆಯ ಬೆಳೆವಣಿಗೆ ಕುಂಠಿತವಾಗುತ್ತದೆ. ಆದುದರಿಂದ ಹಣದ ಮೌಲ್ಯ ಅಥವಾ ಬೆಲೆಗಳ ಸ್ಥಿರತೆ ಸಾಧಿಸುವುದು ಬಹಳ ಮುಖ್ಯವಾದ ವಿಷಯವಾಗಿದೆ. ಹಣವು ಆರ್ಥಿಕ ಬೆಳವಣಿಗೆಯ ಸೂಚಕವೆನಿಸಿದೆ.

೮. ವಿತರಣೆ: ಆಧುನಿಕ ಅರ್ಥವ್ಯವಸ್ಥೆಯಲ್ಲಿ ವಿವಿಧ ಉತ್ಪಾದನಾಂಗಗಳ ಪ್ರತಿಫಲವನ್ನು ಹಣದ ರೂಪದಲ್ಲಿ ನೀಡಲಾಗುತ್ತದೆ. ಒಬ್ಬ ಕಾರ್ಮಿಕ ಕೂಲಿಯನ್ನು, ಭೂಮಾಲಿಕ ಗೇಣಿಯನ್ನು, ಬಂಡವಾಳಗಾರ ಬಡ್ಡಿಯನ್ನು ಮತ್ತು ಸಂಘಟಕ ಲಾಭವನ್ನು ಹಣದ ರೂಪದಲ್ಲಿ ಪಡೆಯುತ್ತಾರೆ. ವಿತರಣೆಯ ಲೆಕ್ಕಾಚಾರವೆಂದರೆ ರಾಷ್ಟ್ರೀಯ ಆದಾಯದ ಲೆಕ್ಕಾಚಾರವಾಗಿದೆ. ರಾಷ್ಟ್ರೀಯ ಆದಾಯವು ಹೇಗೆ ಕೂಲಿ, ಗೇಣಿ, ಬಡ್ಡಿ ಮತ್ತು ಲಾಭದ ರೂಪದಲ್ಲಿ ಉತ್ಪಾದನಾಂಗಗಳಿಗೆ ಹಂಚಲ್ಪಡುತ್ತದೆ ಎನ್ನುವುದನ್ನು ವಿತರಣೆ ತಿಳಿಸುತ್ತದೆ.

೯. ಅಂತಾರಾಷ್ಟ್ರೀಯ ವ್ಯಾಪಾರ : ಹಣವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರವನ್ನು ಸುಗಮವಾಗಿ ಸಾಗುವಂತೆ ಮಾಡುತ್ತದೆ. ಹಣವು ವಿನಿಮಯ ಮಾಧ್ಯಮವಾಗುವುದರೊಂದಿಗೆ ಮೌಲ್ಯದ ಸಂಚಯನ ಮತ್ತು ವರ್ಗಾವಣೆಯ ಸಾಧನವಾಗಿ ಕಾರ್ಯವೆಸಗುವುದರಿಂದ ದೇಶೀಯ ಮತ್ತು ವಿದೇಶೀಯ ವ್ಯಾಪಾರ ಸುಲಭವಾಗಿ ಸಾಗುವಂತಾಗಿದೆ. ವ್ಯಾಪಾರವನ್ನು ಸರಳೀತಗೊಳಿಸಲು ಹಣದ ಮತ್ತು ಬಂಡವಾಳದ ಮಾರುಕಟ್ಟೆಗಳು ಸಹಾಯಕವಾಗಿವೆ. ಇವೆರಡು ಮಾರುಕಟ್ಟೆಗಳ ಹುಟ್ಟಿಗೆ ಹಣವೇ ಕಾರಣವಾಗಿದೆ. ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಸ್ಟಾಕ್ ಎಕ್ಸ್‌ಚೇಂಜ್‌ಗಳು, ಅಂತಾರಾಷ್ಟ್ರೀಯ ವಿತ್ತ ಸಂಸ್ಥೆಗಳು ವ್ಯಾಪಾರದ ಅಭಿವೃದ್ಧಿಗೆ ಕಾರಣವಾಗುತ್ತವೆ. ಇವೆಲ್ಲಾ ಹುಟ್ಟಿಕೊಳ್ಳಲು ಹಣದ ಶೋಧವು ಮೂಲಕಾರಣವಾಗಿದೆ.

೧೦. ಮೂಲ ಸಮಸ್ಯೆಗಳ ಪರಿಹಾರ : ಪ್ರತಿಯೊಂದು ಅರ್ಥವ್ಯವಸ್ಥೆಯು – ಏನನ್ನು, ಯಾರಿಗಾಗಿ, ಹೇಗೆ ಮತ್ತು ಎಷ್ಟು ಪ್ರಮಾಣದಲ್ಲಿ ಉತ್ಪಾದಿಸಬೇಕು ಎಂಬ ನಾಲ್ಕು ಮೂಲ ಸಮಸ್ಯೆಗಳನ್ನು ಸರಿಯಾದ ನೆಲೆಯಲ್ಲಿ ಪರಿಹರಿಸಿಕೊಳ್ಳಬೇಕಾಗುತ್ತದೆ. ಹಣವು ಈ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಹಣದ ಕಾರ್ಯಗಳ ಮೂಲಕ ಹಣವು ಅನುಭೋಗಿಗಳ, ಉತ್ಪಾದಕರ ಮತ್ತು ಸರಕಾರದನಡುವೆ ಸರಕು ಮತ್ತು ಸೇವೆಗಳ ಪ್ರವಹಿಸುವಿಕೆಯನ್ನು ಸುಲಲಿತಗೊಳಿಸುವುದರಿಂದಾಗಿ ಇದು ಸಾಧ್ಯವಾಗುತ್ತದೆ. ಈ ಬಗ್ಗೆ ಡಿ.ಎಚ್. ರಾಬರ್ಟ್‌ಸನ್ ತಮ್ಮ ಮನಿ ಎಂಬ ಕೃತಿಯಲ್ಲಿ ಹೀಗಂದಿದ್ದಾನೆ: “ವಿತ್ತೀಯ ಅರ್ಥವ್ಯವಸ್ಥೆಯ ಅಸ್ತಿತ್ವ ಜನರು ಏನನ್ನು ಬಯಸುತ್ತಾರೆ ಮತ್ತು ಎಷ್ಟು ಪ್ರಮಾಣದಲ್ಲಿ ಬಯಸುತ್ತಾರೆ ಎನ್ನುವುದನ್ನು ಕಂಡುಕೊಳ್ಳಲು ಮತ್ತು ತನ್ನ ಮಿತವಾದ ಉತ್ಪಾದಕ ಸಾಮರ್ಥ್ಯವನ್ನು ಸದುಪಯೋಗಗೊಳಿಸುವಂತೆ ಏನನ್ನು, ಎಷ್ಟು ಪ್ರಮಾಣದಲ್ಲಿ ಉತ್ಪಾದಿಸುವುದು ಎನ್ನುವುದು ನಿರ್ಧರಿಸಲು ಸಮಾಜಕ್ಕೆ ಸಹಾಯ ಮಾಡುತ್ತದೆ”.

೧೧. ಸಾರ್ವಜನಿಕ ಹಣಕಾಸು: ಸರಕಾರದ ವ್ಯವಹಾರಗಳಲ್ಲಿ ಹಣಕ್ಕೆ ಅತ್ಯಧಿಕ ಪ್ರಾಶಸ್ತ್ಯವಿದೆ. ಸರಕಾರವು ಸಾರ್ವಜನಿಕ ಆದಾಯವನ್ನು (ತೆರಿಗೆ, ದಂಡ, ಪೀಸು, ಸೇವಾ ವೆಚ್ಚ ಇತ್ಯಾದಿ) ಹಣದ ರೂಪದಲ್ಲಿ ಸಂಗ್ರಹಿಸುತ್ತದೆ. ಸಾರ್ವಜನಿಕ ವೆಚ್ಚಕ್ಕೆ ಹಣ ಅತ್ಯಂತ ಅಗತ್ಯ. ಸರಕಾರವು ಸಾರ್ವಜನಿಕ ಸಾಲವನ್ನು ಹಣದ ರೂಪದಲ್ಲಿ ಎತ್ತುತ್ತದೆ. ಹಣ ಇಲ್ಲದಿದ್ದರೆ ಸರಕಾರಗಳು ತಮ್ಮ ಕಾರ್ಯಗಳನ್ನು ಯಶಸ್ವಿಯಾಗಿ ಸಾಧಿಸಲು ಸಾಧ್ಯವೇ ಇಲ್ಲ.

೧೨. ಕಲ್ಯಾಣ ಕಾರ್ಯಕ್ರಮಗಳು: ಇಂದಿನ ಅರ್ಥವ್ಯವಸ್ಥೆಗಳು ಪ್ರಜೆಗಳ ಅಭಿವೃದ್ಧಿಗಾಗಿ ವ್ಯಾಪಕವಾದ ಕಲ್ಯಾಣ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿವೆ. ಅನುಸೂಚಿತ ಜಾತಿ ಮತ್ತು ಪಂಗಡಗಳ ಜನರ ಉದ್ಧಾರ, ಬುಡಕಟ್ಟು ಜನಾಂಗಗಳ ಅಭಿವೃದ್ಧಿ, ಆರೋಗ್ಯ ಮತ್ತು ಶಿಕ್ಷಣ ಕಾರ್ಯಕ್ರಮಗಳು ನಡೆಯದೆ ಇದ್ದರೆ ಸರಕಾರಗಳ ಅಸ್ತಿತ್ವಕ್ಕೆ ಅರ್ಥವಿಲ್ಲದಾಗುತ್ತದೆ. ಜನರ ಜೀವನ ಮಟ್ಟವನ್ನು ಸುಧಾರಿಸಲು ಕಲ್ಯಾಣ ಸರಕಾರಗಳು ಬಡತನ ಮತ್ತು ನಿರುದ್ಯೋಗ ನಿವಾರಣಾ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆ. ಆರ್ಥಿಕ ನೀತಿಯ ಈ ಉದ್ದೇಶಗಳನ್ನು ಸಾಧಿಸಲು ಹಣವು ಸಹಾಯ ಮಾಡುತ್ತದೆ. ಆದುದರಿಂದ ಪ್ರೊ. ಎ.ಸಿ. ಪಿಗೋ ತನ್ನ ದಿ ವೇಲ್ ಓಫ್ ಮನಿ ಎಂಬ ಕೃತಿಯಲ್ಲಿ “ಹಣವು ಸಂಪತ್ತು ಮತ್ತು ಕಲ್ಯಾಣ ವೃದ್ಧಿಯ ಒಂದು ಶಕ್ತಿಶಾಲೀ ಸಾಧನವಾಗಿದೆ” ಎಂದಿದ್ದಾನೆ.

೧೩. ಸಾಮಾಜಿಕ ಮಹತ್ವ : ಹಣವು ಒಟ್ಟು ಸಾಮಾಜಿಕ ಅಭಿವೃದ್ಧಿಗೆ ಸಹಾಯ ಮಾಡುತ್ತದೆ. ಸಮಾಜದ ಅನೇಕ ವ್ಯವಸ್ಥೆಗಳು ಸಾಲವನ್ನು ಆಧರಿಸಿದ್ದು, ಸಾಲವು ಹಣವನ್ನು ಆಧರಿಸಿದೆ. ಹಣ ಇಲ್ಲದಿರುತ್ತಿದ್ದರೆ ನಾಗರಿಕ ಜೀವನ ಅಸಾಧ್ಯವಾಗುತ್ತಿತ್ತು. ಹಿಂದೆ ವಸ್ತು ವಿನಿಮಯ ವ್ಯವಸ್ಥೆಯಲ್ಲಿ ರೈತರು ಮತ್ತು ಶ್ರಮಿಕವರ್ಗ ಅತ್ಯಂತ ಯಾತನೆಗೆ ಒಳಗಾಗಿತ್ತು. ಅವರಿಗೆ ಸರಿಯಾಗಿ ಪ್ರತಿಫಲ ನೀಡದೆ ಗುಲಾಮರಂತೆ ಅವರನ್ನು ದುಡಿಸಿಕೊಳ್ಳಲಾಗುತ್ತಿತ್ತು. ಹಣದ ಶೋಧನೆಯ ಬಳಿಕ ದುಡಿಮೆಗೆ ಪ್ರತಿಫಲವನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಸಾಧ್ಯವಾಗಿದೆ. ಈಗ ಕಾರ್ಮಿಕರು ಗುಲಾಮರಲ್ಲ. ತಮ್ಮ ಸೇವೆಯನ್ನು ಇತರರಿಗೆ ಹಣಕ್ಕೆ ಬದಲಾಗಿ ವಿನಿಮಯ ಮಾಡಿಕೊಳ್ಳುವ ಗೌರವಾನ್ವಿತ ನಾಗರಿಕರು. ಇಂದು ಹಣವು ಗೌರವದ, ಪ್ರತಿಷ್ಠೆಯ ಸಂಕೇತವಾಗಿದೆ. ದುಡ್ಡಿರುವವನೇ ದೊಡ್ಡಪ್ಪನೆಂಬ ಮಾತು ಹಣಕ್ಕಿರುವ ಸಾಮಾಜಿಕ ಮಹತ್ವವನ್ನು ತಿಳಿಯಪಡಿಸುತ್ತದೆ. ಹಣವು ಮಾನವನ ಸಾಧನೆಯ ಅಳತೆಗೋಲಾಗಿದೆ.

೧೪. ಸ್ವಾತಂತ್ರ್ಯ: ಹಣವು ಅನುಭೋಗಿಗಳಿಗೆ ಮತ್ತು ಉತ್ಪಾದಕರಿಗೆ ಗರಿಷ್ಠ ಸ್ವಾತಂತ್ರ್ಯ ನೀಡುತ್ತದೆ. ಹಣ ಇದ್ದರೆ ಯಾವುದನ್ನು ಬೇಕಾದರೂ ಅನುಭೋಗಿಸುವ ಸ್ವಾತಂತ್ರ್ಯ ಅನುಭೋಗಿಗಳಿಗೆ ಮತ್ತು ಯಾವುದನ್ನೂ ಬೇಕಾದರೂ ಉತ್ಪಾದಿಸುವ ಸ್ವಾತಂತ್ರ್ಯ ಉತ್ಪಾದಕರಿಗೆ ಇದ್ದೇ ಇರುತ್ತದೆ. ಹಣದಿಂದಾಗಿ ಪ್ರತಿಯೊಂದು ಶ್ರಮಕ್ಕೂ ಅದರದೇ ಆದ ಗೌರವ (dignity of labour) ಲಭ್ಯವಾಗಿದೆ.

೧೫. ರಾಷ್ಟ್ರೀಯ ಏಕತೆ : ಹಣವು ರಾಷ್ಟ್ರೀಯ ಏಕತೆಯನ್ನು ಉಂಟು ಮಾಡುತ್ತದೆ. ಹಣದ ಶೋಧದಿಂದಾಗಿ ರಾಷ್ಟ್ರಗಳ ಸಾಮಾಜಿಕ ಏಕಾಂತ (social isolation) ಮಾಯವಾಗಿದೆ. ಏಕೆಂದರೆ ಹಣದಿಂದಾಗಿ ವ್ಯಾಪಾರ ಮತ್ತು ವಾಣಿಜ್ಯ ರಾಷ್ಟ್ರಗಳ ನಡುವೆ ಬೆಳೆದಿದೆ. ಹಣವು ದೂರದೂರದ ಜನರನ್ನು ವ್ಯಾಪಾರ ಕೇಂದ್ರಗಳಿಗೆ, ಬಂಡವಾಳ ಮತ್ತು ಹಣದ ಮಾರುಕಟ್ಟೆಗೆ ಬರುವಂತೆ ಮಾಡಿ ಅವರ ನಡುವೆ ವ್ಯವಹಾರ ಬಾಂಧವ್ಯ ಉಂಟುಮಾಡುತ್ತದೆ. ಆ ಮೂಲಕ ಹಣವು ರಾಷ್ಟ್ರೀಯ ಏಕತೆಯನ್ನುಂಟು ಮಾಡಲು ಸಹಕಾರಿಯಾಗಿದೆ. ಪ್ರತಿಯೊಂದು ದೇಶವು ತನ್ನದೇ ಆದ ಕರೆನ್ಸಿ ವ್ಯವಸ್ಥೆಯನ್ನು ಕೂಡಾ ಹೊಂದಿದೆ. ಉದಾ: ಭಾರತದಲ್ಲಿ ರೂಪಾಯಿ, ಜಪಾನಿನಲ್ಲಿ ಯನ್, ರಶಿಯಾದಲ್ಲಿ ರೂಬಲ್, ಇಂಗ್ಲೆಂಡಿನಲ್ಲಿ ಪೌಂಡ್ ಸ್ಟರ್ಲಿಂಗ್, ಅಮೇರಿಕಾದಲ್ಲಿ ಡಾಲರ್ ಇತ್ಯಾದಿ. ದೇಶದ ಕರೆನ್ಸಿ ಅಂದರೆ ದೇಶದ ಹಣವಾಗಿದ್ದು ಅದು ದೇಶದ ಸಾರ್ವಭೌಮತೆಯ ಸಂಕೇತವೆನಿಸಿದೆ.

ಹಣದ ಋಣಾತ್ಮಕ ಪಾತ್ರ

“ಹಣದ ಮೇಲಣ ಮೋಹವೇ ಎಲ್ಲಾ ಕೆಡಕುಗಳಿಗೆ ಕಾರಣ” ಎಂದು ಬೈಬಲ್‌ನಲ್ಲಿ ಹೇಳಲಾಗಿದೆ. ಭಗವಾನ್ ಬುದ್ಧ “ಆಸೆಯೇ ದುಃಖಕ್ಕೆ ಮೂಲ” ಎಂದಿರುವುದು ಇದೇ ಅರ್ಥದಲ್ಲಿ. ಸಂಪ್ರದಾಯ ಪಂಥೀಯರು ಹಣಕ್ಕೆ ಹೆಚ್ಚು ಮಹತ್ವ ನೀಡಬಾರದೆಂದು ವಾದಿಸಿದ್ದರು. ಹಣವನ್ನು ವಿಧೇಯ ನೌಕರನಂತೆ ಬಳಸಿಕೊಳ್ಳಬೇಕೇ ಹೊರತು ಹಣಕ್ಕೆ ಯಜಮಾನತ್ವದ ಪಟ್ಟ ಕಟ್ಟಬಾರದೆಂದು ಅರ್ಥಶಾಸ್ತ್ರಜ್ಞರು ಹೇಳಿರುವುದು ಹಣದ ಕೆಡಕುಗಳನ್ನು ಗಮನದಲ್ಲಿರಿಸಿಕೊಂಡೇ

ಅರ್ಥ ವ್ಯವಸ್ಥೆಯಲ್ಲಿ ಹಣ ಉಂಟು ಮಾಡುವ ತೊಂದರೆಗಳನ್ನು

೧. ಆರ್ಥಿಕ ಅನಾಹುತಗಳು
೨. ಸಾಮಾಜಿಕ ಅನಾಹುತಗಳು ಮತ್ತು
೩. ನೈತಿಕ ಅನಾಹುತಗಳು – ಎಂದು ವಿಂಗಡಿಸಬಹುದು.

ಆರ್ಥಿಕ ಅನಾಹುತಗಳು : ಹಣವು ಉಂಟು ಮಾಡುವ ಆರ್ಥಿಕ ಅನಾಹುತಗಳಿವು :

೧. ವ್ಯಾಪಾರ ಆವರ್ತಗಳು : ಹಣವು ಅರ್ಥವ್ಯವಸ್ಥೆಯಲ್ಲಿ ವ್ಯಾಪಾರ ಆವರ್ತಗಳನ್ನು ಉಂಟುಮಾಡುತ್ತದೆ. ಹಣದ ಪೂರೈಕೆ ಅತಿಯಾದಾಗ ಹಣದುಬ್ಬರ ಮತ್ತು ಕಡಿಮೆಯಾದಾಗ ಹಣದಿಳಿತ ಉಂಟಾಗುತ್ತದೆ. ಹಣದುಬ್ಬರದ ಸಂದರ್ಭದಲ್ಲಿ ಉತ್ಪನ್ನ, ಉದ್ಯೋಗ ಮತ್ತು ಆದಾಯ-ಅಧಿಕವಾಗಿ ಹೆಚ್ಚುವರಿ ಅನುಭೋಗವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಹಣದಿಳಿತದ ಸಂದರ್ಭದಲ್ಲಿ ಎಲ್ಲವೂ ಇಳಿಯುತ್ತಾ ಹೋಗಿ ಅಪೂರ್ಣಾನುಭೋಗವುಂಟಾಗುತ್ತದೆ. ಈ ರೀತಿಯ ವ್ಯಾಪಾರದ ಆವರ್ತಗಳು ಜನರಿಗೆ ಹೇಳಲಸದಳವಾದ ಸಂಕಷ್ಟವನ್ನು ಉಂಟುಮಾಡುತ್ತವೆ ಆದುದರಿಂದ ಡಿ.ಹೆಚ್, ರಾಬರ್ಟ್‌ಸನ್ “ಮಾನವ ಜನಾಂಗಕ್ಕೆ ಅನೇಕ ವರಗಳ ಆಗರವೆನಿಸಿ ಕೊಂಡಿರುವ ಹಣವು ನಿಯಂತ್ರಿಸಲ್ಪಡದೆ ಇದ್ದರೆ ಅಪಾಯ ಮತ್ತು ಗೊಂದಲಗಳ ಒಂದು ಆಗರವಾಗಿ ಪರಿಣಮಿಸುತ್ತದೆ” ಎಂದಿದ್ದಾನೆ.

೨. ಹಣದ ಮೌಲ್ಯದಲ್ಲಿ ಅಸ್ಥಿರತೆ: ಹಣದ ಮೌಲ್ಯವು ಯಾವಾಗಲೂ ಒಂದೇ ರೀತಿಯಾಗಿ ಇಲ್ಲದಿರುವುದು ಅದರ ಬಹುದೊಡ್ಡ ತೊಂದರೆ ಎನಿಸಿದೆ. ಹಣದ ಮೌಲ್ಯ ಕುಸಿದಾಗ ಬೆಲೆಗಳು ಏರಿ ಹಣದುಬ್ಬರ ಉಂಟಾಗುತ್ತದೆ. ಹಣದ ಮೌಲ್ಯ ಏರಿದಾಗ ಬೆಲೆಗಳು ಕುಸಿದು ಹಣದಿಳಿತ ಉಂಟಾಗುತ್ತದೆ. ಹಣದ ಪೂರೈಕೆ ಮತ್ತು ಬೇಡಿಕೆಗಳ ಏರಿಳಿಕೆಗಳು ಅದರ ಮೌಲ್ಯದ ಅಸ್ಥಿರತೆಗೆ ಕಾರಣವಾಗಿವೆ. ಹಣದ ಮೌಲ್ಯದ ಏರಿಳಿತಗಳು ಅತ್ಯಂತ ಅನಾಹುತಕಾರಿಯಾಗಿ ಬಿಡುತ್ತವೆ. ಹಣದ ಮೌಲ್ಯದ ಅಸ್ಥಿರತೆಯು ಅನುಭೋಗಿ, ಉತ್ಪಾದಕ ಮತ್ತು ಸಮಾಜದ ಇತರ ಎಲ್ಲಾ ವರ್ಗಗಳ ಜನರ ಮೇಲೆ ಪ್ರತಿಕೂಲಕರ ಪರಿಣಾಮಗಳನ್ನು ಉಂಟುಮಾಡುತ್ತದೆ.

೩. ಆದಾಯ ಮತ್ತು ಸಂಪತ್ತಿನ ವಿಷಮ ಹಂಚಿಕೆ: ಹಣದ ಮೌಲ್ಯದ ಅಸ್ಥಿರತೆಯಿಂದಾಗಿ ಆದಾಯ ಮತ್ತು ಸಂಪತ್ತಿನ ವಿಷಮ ಹಂಚಿಕೆಯಾಗುತ್ತದೆ. ೧೯೧೪ ರಿಂದ ೧೯೨೦ ರ ನಡುವೆ ಹಣದ ಮೌಲ್ಯ ಕುಸಿದು ಆ ಬಳಿಕ ಒಮ್ಮೆಲೇ ಏರಿದುದರ ಪರಿಣಾಮವಾಗಿ ಇಂಗ್ಲೆಂಡೂ ಸೇರಿದಂತೆ ಅನೇಕ ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಾಮಾಜಿಕ ಮತ್ತು ಕೈಗಾರಿಕಾ ವರ್ಗಗಳ ನಡುವೆ ಮಾತ್ರವಲ್ಲದೆ ಒಂದೇ ವರ್ಗದ ವಿವಿಧ ಜನಗಳ ನಡುವೆ ಆದಾಯ ಮತ್ತು ಸಂಪತ್ತಿನ ವಿತರಣೆಯಲ್ಲಿ ವಿಪರೀತವಾದ ಅಸಮಾನತೆ ಉಂಟಾದುದನ್ನು ಡಿ.ಹೆಚ್. ರಾಬರ್ಟ್‌ಸನ್ ದಾಖಲಿಸಿದ್ದಾನೆ.

೪. ಸಾಲ ವಿಸ್ತರಣೆ : ಸಾಲವು ಪ್ರಗತಿಯ ಒಂದು ಮೂಲವೆನ್ನುವುದು ಒಂದು ಹಂತದವರೆಗೆ ಸರಿ, ಆದರೆ ಸಾಲದ ವಿಪರೀತ ವಿಸ್ತರಣೆಯು ನಿರ್ವಹಣೆಗೆ ಅಸದಳವಾದುದು. ಸಾಲದಹೆಚ್ಚಳದಿಂದಾಗಿ ಹಣದುಬ್ಬರ ಉಂಟಾಗುತ್ತದೆ ಹಣದಿಂದಾಗಿ ಆಂತರಿಕ ಸಾಲಮಾತ್ರವಲ್ಲದೆ ಬಾಹ್ಯ ಸಾಲದ ವ್ಯವಹಾರಗಳೂ ಕೂಡಾ ನಡೆಯುತ್ತವೆ. ಬಾಹ್ಯ ಸಾಲ ಅಧಿಕವಾದ ದೇಶವೊಂದು ತನ್ನ ಆರ್ಥಿಕ ಸಾರ್ವಭೌಮತೆಯನ್ನು ಕಳೆದುಕೊಳ್ಳಬೇಕಾದೀತು.

೫. ವರ್ಗ ಸಂಘರ್ಷ : ಹಣದಿಂದಾಗಿ ಆದಾಯ ಮತ್ತು ಸಂಪತ್ತಿನ ವಿಷಮ ವಿತರಣೆಯಾಗುತ್ತದೆ. ಇದು ಸಮಾಜದಲ್ಲಿ ವರ್ಗ ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಹಣವು ಮಾನವನನ್ನು ದುರಾಶಾಪೀಡಿತನನ್ನಾಗಿ ಮಾಡುತ್ತದೆ. ಹಾಗಾಗಿ ಹಣದ ವ್ಯವಸ್ಥೆಯಿರುವಲ್ಲಿ, ಎಲ್ಲರೂ ಹಣಗಳಿಸಲು ಬೇರೆ ಬೇರೆ ಮಾರ್ಗೋಪಾಯಗಳನ್ನು ಕಂಡುಕೊಳ್ಳುತ್ತಾರೆ. ಒಬ್ಬನ ಗಳಿಕೆಯು ಇನ್ನೊಬ್ಬನ ನಷ್ಟಕ್ಕೆ ಕಾರಣವಾಗಿರುತ್ತದೆ. ಆದುದರಿಂದ ಹಣವು ಸಮಾಜದಲ್ಲಿ ಶ್ರೀಮಂತ ಮತ್ತು ಬಡವ ಎಂಬ ಎರಡು ವರ್ಗಗಳನ್ನು ಹುಟ್ಟು ಹಾಕುತ್ತದೆ. ಮಾತ್ರವಲ್ಲದೆ ಇವೆರಡರ ನಡುವೆ ಆಗಾಗ ಸಂಘರ್ಷ ನಡೆದು ರಕ್ತಕ್ರಾಂತಿಗೆ ಎಡೆ ಮಾಡಿಕೊಡುವ ಅಪಾಯವಿದೆ.

೬. ಅನಿಯಂತ್ರಣ : ಹಣವನ್ನು ಎಲ್ಲಿಯವರೆಗೆ ನಿಯಂತ್ರಿಸಲು ಸಾಧ್ಯವೋ ಅಲ್ಲಿಯವರಗೆ ಅದು ಮಾನವನಿಗೆ ಉಪಕಾರಿಯಾಗಿರುತ್ತದೆ ಮತ್ತು ನಂಬಿಕಸ್ಥ ಸೇವಕನಾಗಿರುತ್ತದೆ. ಯಾವಾಗ ಅದನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲವೋ ಆಗ ಅದು ಅನಾಹುತಕಾರಿಯಾಗಿ ಬಿಡುತ್ತದೆ ಮತ್ತು ಅದು ಯಜಮಾನಿಕೆಯ ದರ್ಪ, ದಬ್ಬಾಳಿಕೆಗಳನ್ನು ಪ್ರದರ್ಶಿಸುತ್ತದೆ. ಅಂದರೆ ಹಣದ ಪೂರೈಕೆಯು ಅದರ ಬೇಡಿಕೆಗಿಂತ ಹೆಚ್ಚಾದರ ಅರ್ಥವ್ಯವಸ್ಥೆಯಲ್ಲಿ ಅತಿಭೀಕರವಾದ ಪರಿಣಾಮಗಳು ಉಂಟಾಗುತ್ತವೆ.

ಸಾಮಾಜಿಕ ಅನಾಹುತಗಳು: ಈವರೆಗೆ ನೋಡಿದ ಆರ್ಥಿಕ ಅನಾಹುತಗಳನ್ನಲ್ಲದೆ ಹಣವು ಸಾಮಾಜಿಕವಾಗಿ ಅನೇಕ ತೊಂದರೆಗಳನ್ನು ಉಂಟು ಮಾಡುತ್ತದೆ. ಹಣದ ಸಾಮಾಜಿಕ ಅನಾಹುತಗಳು ಇವು:

೧. ಪೊಳ್ಳು ಪ್ರತಿಷ್ಠೆ : ಹಣ ಉಳ್ಳವನನ್ನು ಸಮಾಜ ಗೌರವಿಸುತ್ತದೆ. ಆತ ಊರಿನ, ಜಾತಿಯ, ಧರ್ಮದ ಮತ್ತು ರಾಜಕೀಯದ ಮುಖಂಡನಾಗಿ ಬಿಡುತ್ತಾನೆ. ಹಣ ಉಳ್ಳವರು ಪೊಳ್ಳು ಪ್ರತಿಷ್ಠೆ ಬೆಳೆಸಿಕೊಳ್ಳುತ್ತಾರೆ. ಹಣದಿಂದ ಏನನ್ನು ಬೇಕಾದರೂ ಸಾಧಿಸಬಹುದೆಂದು ಭಾವಿಸುತ್ತಾರೆ. ಹಣ ಉಳ್ಳವರ ಮಕ್ಕಳು ಓದಿನಲ್ಲಿ ಹಿಂದುಳಿಯಲು ಹಣವೇ ಕಾರಣವಾಗಿರುತ್ತದೆ.

೨. ದುಂದುವೆಚ್ಚ : ಹಣದಿಂದಾಗಿ ದುಂದುವೆಚ್ಚ ಉಂಟಾಗುತ್ತದೆ. ವೈಭವೋಪೇತ ಆಡಂಬರದ ವಿಲಾಸೀ ಜೀವನ, ಸಂಪತ್ತಿನ ಪೋಲು, ಕ್ಲಬ್ಬು – ಬಾರು, ಕುದುರೆ ಜೂಜು, ವೇಶ್ಯಾವಾಟಿಕೆಗಳ ನಿರ್ಮಾಣ ಇತ್ಯಾದಿಗಳಿಗೆ ಹಣವು ಕಾರಣವಾಗುತ್ತದೆ. ಮದುವೆ, ಪೂಜೆ, ನಾಮಕರಣ, ನೂಲು ಹಾಕುವುದು, ಮುಂಜಿ, ಪ್ರಸ್ಥ, ದೇವರಿಗೆ ಚಿನ್ನದ ಕಿರೀಟ ಇತ್ಯಾದಿಗಳಿಗೆ ವಿಪರೀತವಾಗಿ ದುಂದುವೆಚ್ಚ ಮಾಡಿ ಸಂತೋಷ ಪಡುವವರನ್ನು ನಾವು ಸಮಾಜದಲ್ಲಿ ಸಾಕಷ್ಟು ಮಂದಿಗಳನ್ನು ಕಾಣುತ್ತೇವೆ. ಇಂಥ ಮಂದಿಗಳು ಆರ್ಥಿಕಾಭಿವೃದ್ಧಿಯ ಶತ್ರುಗಳಾಗಿದ್ದಾರೆ.

೩. ಶೋಷಣೆ: ಹಣವು ಮಾನವನಲ್ಲಿ ಲಾಭಬಡುಕ ಪ್ರವೃತ್ತಿಯನ್ನು ಉಂಟು ಮಾಡುತ್ತದೆ. ಲಾಭಗಳಿಸಲು ಒಬ್ಬನು ಇನ್ನೊಬ್ಬನನ್ನು ಶೋಷಿಸುವುದು ಅನಿವಾರ್ಯವಾಗುತ್ತದೆ. ಹಣ ಸಂಗ್ರಹಣೆಗೆ ಶೋಷಣೆ ಅಧಿಕವಾದಂತೆಲ್ಲಾ ಸಾಮಾಜಿಕ ಸುಖ, ಶಾಂತಿ, ನೆಮ್ಮದಿಗಳು ಮಾಯವಾಗಿ ಗೊಂದಲ ಮೂಡುತ್ತದೆ. ಮನುಷ್ಯನ ಜೀವನ ಪ್ರೀತಿ, ಪ್ರೇಮ ರಹಿತವಾದ ಶುಷ್ಕ ಯಾಂತ್ರಿಕ ನರಕವಾಗುತ್ತದೆ.

೪. ಅಪರಾಧಗಳು : ಹಣವು ಭ್ರಷ್ಟಾಚಾರ, ಲಂಚಕೋರತನ, ಕಳವು, ಕೊಲೆ, ಸುಲಿಗೆ ಮುಂತಾದವುಗಳಿಗೆ ಕಾರಣವಾಗಿದೆ. ತೆರಿಗೆ ಕಳ್ಳತನ, ಕಲಬೆರಕೆ, ಅರಣ್ಯನಾಶ, ವೇಶ್ಯಾವೃತ್ತಿ, ಕಳ್ಳಭಟ್ಟಿ ಮುಂತಾದವುಗಳಿಗೆ ಹಣ ಗಳಿಕೆಯ ವ್ಯಾಮೋಹ ಕಾರಣವಾಗಿದೆ.

ನೈತಿಕ ಅನಾಹುತಗಳು: ಹಣ ಗಳಿಕೆಯು ಸುಖೀ ಜೀವನಕ್ಕೆ ಅನಿವಾರ್ಯವೆಂದು ಭಾವಿಸುವ ಜನರು ನೈತಿಕವಾಗಿ ಅಧಃಪತನ ಹೊಂದುತ್ತಾರೆ. ಇಂದಿನ ಭಾರತದ ರಾಜಕೀಯ ರಂಗವನ್ನು ನೋಡಿದರೆ ನೈತಿಕ ಅಧಃಪತನಕ್ಕೆ ಹಣವು ಹೇಗೆ ಕಾರಣವಾಗಿದೆನ್ನುವುದು ಸ್ಪಷ್ಟವಾಗುತ್ತದೆ. ಭಾರತದ ವ್ಯಾಪಾರ ಮತ್ತು ಕೈಗಾರಿಕಾ ರಂಗ ಹಾಗೂ ರಾಜಕೀಯ ಕ್ಷೇತ್ರಗಳು ನೈತಿಕತೆಯನ್ನು ಗಾವುದ ದೂರವಿಟ್ಟಿರುವುದರಿಂದ ಈ ದೇಶ ಇಷ್ಟೊಂದು ಅನಾಹುತಗಳನ್ನು ಅನುಭವಿಸುತ್ತಿದೆ.

“ಹಣವು ಕಳ್ಳತನ, ಕೊಲೆ, ಮೋಸ ಮತ್ತು ವಿಶ್ವಾಸ ದ್ರೋಹಕ್ಕೆ ಕಾರಣವಾಗಿದೆ” ಎಂದು ವಾನ್ ಮೈಸಸ್ ಹೇಳಿರುವುದು ಗಮನಾರ್ಹ.

ಆದರೆ ಇವೆಲ್ಲಾ ಅನುಹುತಗಳು ಹಣದ ಆಂತರಿಕ ದೋಷದಿಂದಾಗಿ ಹುಟ್ಟಿಕೊಂಡವುಗಳಲ್ಲ. ಹಣದ ಬಳಕೆಯ ಮೇಲೆ ಮಾನವನಿಗೆ ನಿಯಂತ್ರಣವಿಲ್ಲದ ಕಾರಣ ಈ ತೊಂದರೆಗಳು ಕಾಣಿಸಿಕೊಂಡಿವೆ. ಇವನ್ನು ನಿಯಂತ್ರಿಸಲು ಸ್ಪಷ್ಟವಾದ ರಾಜಕೀಯ ಬದ್ಧತೆಯಿಂದ ಮಾತ್ರ ಸಾಧ್ಯ. ಸಮರ್ಪಕವಾದ ವಿತ್ತ ನೀತಿ ಮತ್ತು ಅದರ ಪ್ರಾಮಾಣಿಕ ಅನುಷ್ಠಾನದಿಂದ ಹಣದ ಎಲ್ಲಾ ತೊಂದರೆಗಳನ್ನು ನಿವಾರಿಸಬಹುದಾಗಿದೆ.

ಬಂಡವಾಳಶಾಹೀ ಆರ್ಥಿಕತೆಯಲ್ಲಿ ಹಣದ ಪಾತ್ರ

ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಎಲ್ಲರಿಗೂ ಪೂರ್ಣ ಆರ್ಥಿಕ ಸ್ವಾತಂತ್ರ್ಯವಿದ್ದು, ಖಾಸಗೀಕರಣ ಅದರ ಪ್ರಧಾನ ಲಕ್ಷಣವಾಗಿರುತ್ತದೆ. ಅನುಭೋಗಿ ಈ ವ್ಯವಸ್ಥೆಯಲ್ಲಿ ಸಾರ್ವಭೌಮನಾಗಿದ್ದು ಇದೊಂದು ಹಣ ಪ್ರಧಾನವಾದ ಅರ್ಥವ್ಯವಸ್ಥೆಯಾಗಿರುತ್ತದೆ. ಇಂತಹ ವ್ಯವಸ್ಥೆಯಲ್ಲಿ ಅನುಭೋಗಿಗಳು ಮತ್ತು ಉತ್ಪಾದಕರು ಹಣದ ರೂಪದಲ್ಲಿ ಆದಾಯಗಳಿಸುತ್ತಾರೆ. ಅನುಭೋಗಿಗಳು ತಮ್ಮ ಭೂಮಿ, ಶ್ರಮ, ಬಂಡವಾಳಗಳಿಗೆ ಗೇಣಿ, ಕೂಲಿ ಮತ್ತು ಬಡ್ಡಿಯ ರೂಪದಲ್ಲಿ ಅನುಕ್ರಮವಾಗಿ ಪ್ರತಿಫಲ ಪಡೆಯುತ್ತಾರೆ. ಹೀಗೆ ಗಳಿಸಿದ ಆದಾಯದಲ್ಲಿ ತಮಗಿಷ್ಟ ಬಂದಷ್ಟನ್ನು ಅನುಭೋಗಕ್ಕೆ ಬಳಸಿ ಉಳಿದುದನ್ನು ಉಳಿತಾಯ ಮಾಡುವ ಸ್ವಾತಂತ್ರ್ಯ ಅನುಭೋಗಿಗಳಿಗೆ ಇರುತ್ತದೆ.

ಉತ್ಪಾದನಾಂಗಗಳನ್ನು ಬಳಸಿ ಉತ್ಪಾದಕರು ಉತ್ಪಾದನೆ ನಡೆಸುತ್ತಾರೆ. ಉತ್ಪಾದನೆಯ ಹಿಂದಿನ ಪ್ರೇರಣೆ ಗರಿಷ್ಠ ಲಾಭಗಳಿಕೆಯಾಗಿರುತ್ತದೆ. ಲಾಭವು ವೆಚ್ಚ ಮತ್ತು ಗಳಿಕೆಯ ನಡುವಣ ವ್ಯತ್ಯಾಸವಾಗಿರುತ್ತದೆ. ವೆಚ್ಚ, ಗಳಿಕೆ ಮತ್ತು ಲಾಭವನ್ನು ಹಣದ ರೂಪದಲ್ಲಿ ಲೆಕ್ಕ ಹಾಕಲಾಗುತ್ತದೆ. ಬಂಡವಾಳಶಾಹೀ ಅರ್ಥವ್ಯವಸ್ಥೆಯಲ್ಲಿ ಹಣದ ವರ್ತುಲ ಪ್ರವಾಹವಿರುತ್ತದೆ. ಇಂತಹ ಮುಕ್ತ ಸ್ವಾತಂತ್ರ್ಯದ ಅರ್ಥವ್ಯವಸ್ಥೆಯಲ್ಲಿ ಹಣದ ಮಹತ್ವವನ್ನು ಕೆಳಗಿನ ಅಂಶಗಳು ತಿಳಿಯಪಡಿಸುತ್ತವೆ.

೧. ಹಣ ಮತ್ತು ಬೆಲೆಯಂತ್ರ: ಬೆಲೆಯನ್ನು ಹಣದ ಮೂಲಕ ಅಭಿವ್ಯಕ್ತಿಸಲಾಗುತ್ತದೆ. ಬೆಲೆ ಅಂದರೆ ಹಣರೂಪೀ ಮೌಲ್ಯ, ಬೆಲೆ ನಿರ್ಧಾರವಾಗುವುದು (ಬಂಡವಾಳಶಾಹಿ ವ್ಯವಸ್ಥೆಯಲ್ಲಿ) ಬೇಡಿಕೆ ಮತ್ತು ಪೂರೈಕೆಗಳ ಸಮನ್ವಯದಿಂದ. ಬೆಲೆಯು ಮಾರುಕಟ್ಟೆಯಲ್ಲಿ ನಿರ್ಧಾರಿತವಾಗುತ್ತದೆ. ಬಂಡವಾಳಶಾಹೀ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುವುದು ಈ ಬೆಲೆ ವ್ಯವಸ್ಥೆ (price mechanism). ಇದಕ್ಕೆ ಮಾರುಕಟ್ಟೆ ವ್ಯವಸ್ಥೆ ಎಂತಲೂ ಹೆಸರಿದೆ. ಬೆಲೆ ವ್ಯವಸ್ಥೆಯ ಕಾರ್ಯನಿರ್ವಹಣೆ ಹಣದಿಂದ ಆಗುತ್ತದೆ. ಆದುದರಿಂದ ಇಡೀ ಬಂಡವಾಳಶಾಹೀ ಅರ್ಥವ್ಯವಸ್ಥೆಯು ಹಣವನ್ನು ಆಧರಿಸಿದೆ.

ಬೆಲೆ ವ್ಯವಸ್ಥೆಯು ಬಂವಡಾಳಶಾಹೀ ಅರ್ಥವ್ಯವಸ್ಥೆಯ ಮೂರು ಮೂಲಭೂತ ಸಮಸ್ಯೆಗಳಿಗೆ ಈ ಕೆಳಗಿನಂತೆ ಪರಿಹಾರ ನೀಡುತ್ತದೆ.

ಮೊದಲನೆಯದು ಏನನ್ನು ಉತ್ಪಾದಿಸುವುದು ಎಂಬ ಸಮಸ್ಯೆ, ಇದು ಸರಕು ಮತ್ತು ಸೇವೆಗಳ ಆಯ್ಕೆಗೆ ಸಂಬಂಧಿಸಿದ ವಿಷಯ, ಉತ್ಪಾದಕರು ಏನನ್ನು ಉತ್ಪಾದಿಸಬೇಕು ಎಂದು ನಿರ್ಧರಿಸಲು ಬೆಲೆಯನ್ನು ಮಾರ್ಗದರ್ಶಕವಾಗಿ ಆಯ್ದುಕೊಳ್ಳುತ್ತಾರೆ. ಯಾವ ಸರಕಿಗೆ ಮತ್ತು ಸೇವೆಗೆ ಹೆಚ್ಚು ಬೆಲೆಯಿದೆ ಎಂದು ಮೊದಲು ಕಂಡುಕೊಳ್ಳುತ್ತಾರೆ. ಸರಕುಗಳಿಗೆ ಮತ್ತು ಸೇವೆಗಳಿಗೆ ಹೆಚ್ಚು ಬೆಲೆಯಿದ್ದರೆ ಅವುಗಳು ಕೊರತೆಯಲ್ಲಿದ್ದು ಅವುಗಳಿಗೆ ಹೆಚ್ಚು ಬೇಡಿಕೆ ಇದೆ ಎಂದರ್ಥ. ಬೆಲೆಯು ಅನುಭೋಗಿಗೆ ಏನು ಬೇಕು ಎನ್ನುವುದನ್ನು ತಿಳಿಸುತ್ತದೆ. ಅದನ್ನು ತಿಳಿದ ಮೇಲೆ ಏನನ್ನು ಉತ್ಪಾದಿಸುವುದು ಎಂದು ನಿರ್ಧರಿಸಲು ಏನು ಕಷ್ಟವಾಗುವುದಿಲ್ಲ.

ಎರಡನೆಯದು ಹೇಗೆ ಉತ್ಪಾದಿಸುವುದು ಎಂಬ ಸಮಸ್ಯೆ, ಇದು ಉತ್ಪಾದನೆಗೆ ಯೋಗ್ಯವಾದ ತಂತ್ರಜ್ಞಾನದ ಆಯ್ಕೆಯ ಪ್ರಶ್ನೆಯಾಗಿದೆ. ಪ್ರತಿಯೊಬ್ಬ ಉತ್ಪಾದಕನೂ ಅತ್ಯಂತ ಕನಿಷ್ಠ ಉತ್ಪಾದನಾ ವೆಚ್ಚದಲ್ಲಿ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಿ ಅತ್ಯಧಿಕ ಲಾಭಗಳಿಸಲು ಯತ್ನಿಸುತ್ತಾನೆ. ಉತ್ಪಾದನಾ ವೆಚ್ಚ ಕಡಿಮೆ ಮಾಡಲು ಉತ್ಪಾದನಾಂಗಗಳ ಅತ್ಯಂತ ದಕ್ಷ ಸಂಯೋಜನೆಯನ್ನು ಆತ ಬಳಸುತ್ತಾನೆ. ಅದಕ್ಕೆ ಅತ್ಯಂತ ಕಡಿಮೆ ಬೆಲೆಯ ಉತ್ಪಾದನಾಂಗಗಳನ್ನು ಕೊಂಡು ಕೊಳ್ಳುತ್ತಾನೆ. ಹೀಗೆ ಉತ್ಪಾದನೆಗೆ ಅಗತ್ಯವಿರುವ ಉತ್ಪಾದನಾಂಗಗಳ ಆಯ್ಕೆಯನ್ನು ಹಣವು ಬೆಲೆ ಯಂತ್ರದ ಮೂಲಕ ಮಾಡುತ್ತದೆ.

ಮೂರನೆಯದು ಯಾರಿಗಾಗಿ ಉತ್ಪಾದಿಸುವುದು ಎಂಬ ಸಮಸ್ಯೆ. ಇದು ವಿತರಣೆಗೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಬಂಡವಾಳಶಾಹೀ ವ್ಯವಸ್ಥೆಯಲ್ಲಿ ಕೊಳ್ಳುವ ಸಾಮರ್ಥ್ಯ ಇರುವವನಿಗಾಗಿ ಉತ್ಪಾದನೆ ಮಾಡಲಾಗುತ್ತದೆ. ಕೊಳ್ಳುವ ಸಾಮರ್ಥ್ಯವನ್ನು ಹಣದ ಮೌಲ್ಯ ನಿರ್ಧಾರ ಮಾಡುತ್ತದೆ. ಹಣದ ಮೌಲ್ಯ ಅಧಿಕವಾಗಬೇಕಾದರೆ ಸರಕು ಮತ್ತು ಸೇವೆಗಳ ಬೆಲೆ ಇಳಿದು, ಕೊಳ್ಳುವ ಶಕ್ತಿ ಹೆಚ್ಚಾಗಬೇಕು. ಹಣದ ಮೌಲ್ಯ ಕಡಿಮೆಯಾದರೆ ಸರಕು ಮತ್ತು ಸೇವೆಗಳ ಬೆಲೆ ಹೆಚ್ಚಿಕೊಳ್ಳುವ ಶಕ್ತಿ ಕಡಿಮೆಯಾಗುತ್ತದೆ. ಹೀಗೆ ಹಣವು ಬೆಲೆ ಯಂತ್ರದ ಮೂಲಕ ಯಾರಿಗಾಗಿ ಉತ್ಪಾದಿಸುವುದು ಎಂಬ ಪ್ರಶ್ನೆಗೆ ಉತ್ತರ ದೊರಕಿಸುತ್ತದೆ.

೨. ಅರ್ಥವ್ಯವಸ್ಥೆಗೆ ಮಾರ್ಗದರ್ಶನ: ಹಣವು ಅರ್ಥವ್ಯವಸ್ಥೆಯ ಮೂಲ ಸಮಸ್ಯೆಗಳಿಗೆ ಬೆಲೆಯಂತ್ರದ ಮೂಲಕ ಸ್ಪಷ್ಟ ಪರಿಹಾರ ಒದಗಿಸಿ ಮಾರ್ಗದರ್ಶನ ನೀಡುತ್ತದೆ. ಬೆಲೆಯಂತ್ರವು ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮತೋಲನ ಸಾಧಿಸುವ ಮೂಲಕ ಒಂದು ಸಂತುಲನ ಶಕ್ತಿಯಾಗಿ (balancing power) ಕಾರ್ಯ ನಿರ್ವಹಿಸಿ ಸಮಸ್ತ ಆರ್ಥಿಕ ಚಟುವಟಿಕೆಗಳು ಸುಸೂತ್ರವಾಗಿ ನಡೆದುಕೊಂಡು ಹೋಗುವಂತೆ ಮಾಡುತ್ತದೆ.

೩. ಅನುಭೋಗ ನಿಯಂತ್ರಣ : ಅನುಭೋಗವನ್ನು ನಿಯಂತ್ರಿಸುವುದರಲ್ಲಿ ಹಣದ ಮತ್ತು ಬೆಲೆ ಯಂತ್ರದ ಪಾತ್ರವು ಬಹಳ ಹಿರಿದಾದುದು. ಅನುಭೋಗಿಗೆ ಗರಿಷ್ಠ ತೃಪ್ತಿಗಳಿಕೆಗೆ ಸಂಪನ್ಮೂಲಗಳನ್ನು ಹೇಗೆ ನಿಯುಕ್ತಿಗೊಳಿಸಬೇಕೆಂಬ ಮಾರ್ಗದರ್ಶನವನ್ನು ಹಣವು ಬೆಲೆ ಯಂತ್ರದ ಮೂಲಕ ಮಾಡುತ್ತದೆ. ಬೆಲೆಯಲ್ಲಿ ಏರಿಕೆಯಾದಾಗ ಮತ್ತು ಕೈಯಲ್ಲಿರುವ ಹಣ ಕಡಿಮೆ ಯಾದಾಗ ಅನುಭೋಗವು ಕಡಿಮೆಯಾಗುತ್ತದೆ. ಬೆಲೆಗಳು ಇಳಿದಾಗ ಮತ್ತು ಕೈಯಲ್ಲಿ ಹಣ ಅಧಿಕವಾದಾಗ ಅನುಭೋಗ ಹೆಚ್ಚಾಗುತ್ತದೆ. ಹೀಗೆ ಹಲವು ಅನುಭೋಗವನ್ನು ನಿಯಂತ್ರಿಸುತ್ತದೆ.

೪. ಉತ್ಪಾದನೆಗೆ ಮಾರ್ಗದರ್ಶನ : ಹಣವು ಬೆಲೆಯಂತ್ರದ ಮೂಲಕ ಉತ್ಪಾದನೆಗೆ ಮಾರ್ಗದರ್ಶನ ಮಾಡುತ್ತದೆ. ಬೆಲೆ ಏರಿಕೆಯು ಉತ್ಪಾದನೆಯ ಹೆಚ್ಚಳಕ್ಕೆ ಉತ್ತೇಜನ ನೀಡಿದರೆ ಬೆಲೆ ಇಳಿಕೆಯಿಂದ ಉತ್ಪಾದನೆ ಕುಂಠಿತಗೊಳ್ಳುತ್ತದೆ. ಈಗಾಗಲೇ ನೋಡಿದಂತೆ, ಏನನ್ನು ಹೇಗೆ, ಯಾರಿಗಾಗಿ ಉತ್ಪಾದಿಸಬೇಕೆಂಬ ಅರ್ಥವ್ಯವಸ್ಥೆಯ ಮೂರು ಮೂಲ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ಬೆಲೆ ಯಂತ್ರವು ಉತ್ಪಾದನೆಯ ಪಥವನ್ನು ನಿರ್ದೇಶಿಸುತ್ತದೆ.

೫. ಉತ್ಪಾದನಾಂಗಗಳ ನಿಯುಕ್ತಿಯ ಸಮಸ್ಯೆಗೆ ಪರಿಹಾರ : ಹಣವು ಬೆಲೆ ಯಂತ್ರದ ಮೂಲಕ ಉತ್ಪಾದನಾಂಗಗಳ ನಿಯುಕ್ತಿಯ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಉತ್ಪದನಾಂಗಗಳು ಸಾಕಷ್ಟು ಲಭ್ಯವಾಗದೇ ಇರುವುದು ಉತ್ಪದನಾ ಕ್ಷೇತ್ರದ ಮುಖ್ಯ ಸಮಸ್ಯೆಯಾಗಿರುತ್ತದೆ. ಎಲ್ಲಿ ಪ್ರತಿಫಲ ಅಧಿಕವಾಗಿರುತ್ತದೋ ಅಲ್ಲಿ ಉತ್ಪಾದನಾಂಗಗಳು ಚಲಿಸುವುದು ಬಂಡವಾಳ ಶಾಹೀ ವ್ಯವಸ್ಥೆಯಲ್ಲಿ ತೀರಾ ಸಹಜವಾದುದು. ಉತ್ಪಾದನಾಂಗಗಳ ಪ್ರತಿಫಲವನ್ನು ಬೆಲೆಯ ಮೂಲಕ ವ್ಯಕ್ತಪಡಿಸಲಾಗುತ್ತದೆ. ಹೀಗೆ ಬೆಲೆ ಯಂತ್ರವು ಉತ್ಪಾದನಾಂಗಗಳ ನಿಯುಕ್ತಿಯನ್ನು (allocation) ನಿರ್ದೇಶಿಸುತ್ತದೆ.

೬. ಹೂಡಿಕೆಗೆ ಮಾರ್ಗದರ್ಶನ : ಹಣವು ಹೂಡಿಕೆದಾರರಿಗೆ ಬೆಲೆ ಯಂತ್ರದ ಮೂಲಕ ಮಾರ್ಗದರ್ಶನ ಮಾಡುತ್ತದೆ. ಬೆಲೆಗಳು ಏರಿದಾಗ ಲಾಭ ಹೆಚ್ಚಾಗುತ್ತದೆ ಮತ್ತು ಹೂಡಿಕೆದಾರರಿಗೆ ಅಧಿಕ ಲಾಭಾಂಶ ದೊರೆಯುತ್ತದೆ. ಹಾಗಾಗಿ ಬೆಲೆಗಳ ಏರಿಕೆಯಾದಾಗ ಸರಕು ಮತ್ತು ಸೇವಾ ಉದ್ಯಮಗಳ ಸ್ಟಾಕು ಮತ್ತು ಶೇರುಗಳಲ್ಲಿ ಹೂಡಿಕೆದಾರರು ಹೆಚ್ಚು ಹೆಚ್ಚು ಹಣ ತೊಡಗಿಸುತ್ತಾರೆ. ಬೆಲೆಗಳು ಇಳಿದಾಗ ಶೇರುಗಳಲ್ಲಿ ತೊಡಗಿಸುವ ಹಣದ ಪ್ರಮಾಣ ಕಡಿಮೆಯಾಗುತ್ತದೆ. ಹೀಗೆ ಬೆಲೆಯಂತ್ರವು ಹೂಡಿಕೆಗೆ ಮಾರ್ಗದರ್ಶಿಯಾಗಿದೆ.

೭. ಸಾಲದ ಮೂಲ: ಸಮಸ್ತ ಬಂಡವಾಳಶಾಹೀ ಉತ್ಪಾದನಾ ವ್ಯವಸ್ಥೆಯು ಸಾಲವನ್ನು ಆಧರಿಸಿದೆ. ಸಾಲದ ಸಲಕರಣೆಗಳಾದ ಚೆಕ್ಕು, ಬಿಲ್ಲು, ಡ್ರಾಫ್ಟ್, ಇತ್ಯಾದಿಗಳು ಹಣದ ವಿವಿಧ ರೂಪಾಂತರಗಳಾಗಿದ್ದು ಇವನ್ನು ಬ್ಯಾಂಕುಗಳು ನೀಡುತ್ತವೆ. ಇವುಗಳಿಂದಾಗಿ ವ್ಯಾಪಾರ, ವಾಣಿಜ್ಯ, ಕೃಷಿ, ಕೈಗಾರಿಕೆ ಸಾರಿಗೆ ಮುಂತಾದವುಗಳು ಸುಸೂತ್ರವಾಗಿ ನಡೆಯುತ್ತವೆ. ಸಾಲದ ಸಲಕರಣೆಗಳ ಆಧಾರದಲ್ಲಿ ಬ್ಯಾಂಕುಗಳು, ಬಂಡವಾಳಶಾಹೀ ಅರ್ಥವ್ಯವಸ್ಥೆಯ ವಿವಿಧ ಕ್ಷೇತ್ರಗಳಿಗೆ ಸಾಲವನ್ನು ನೀಡುತ್ತವೆ. ಸಾಲವನ್ನು ಹಣದ ರೂಪದಲ್ಲಿ ನೀಡಲಾಗುತ್ತದೆ ಮತ್ತು ಬಡ್ಡಿ ಪಾವತಿ ಕೂಡಾ ಹಣದ ರೂಪದಲ್ಲೇ ನಡೆಯುತ್ತದೆ. ಹೀಗೆ ಹಣವು ಸಾಲದ ಮೂಲವಾಗಿದೆ.

೮. ಬಂಡವಾಳ ಸಂಚಯನ : ಬಂಡವಾಳ ಶಾಹಿತ್ವಕ್ಕೆ ಬಂಡವಾಳವೇ ಆಧಾರವಾಗಿದ್ದು ಹಣವು ಬಂಡವಾಳದ ಅತ್ಯಧಿಕ ದ್ರವರೂಪವಾಗಿದೆ. ಬಂಡವಾಳಶಾಹೀ ಅರ್ಥವ್ಯವಸ್ಥೆಯ ಬೆಳವಣಿಗೆಯು ಬಂಡವಾಳ ಸಂಚಯನವನ್ನು ಅವಲಂಬಿಸಿದೆ. ಬಂಡವಾಳ ಸಂಚಯನಕ್ಕೆ ಜನರ ಆದಾಯವೇ ಮೂಲವಾಗಿರುತ್ತದೆ. ತಮ್ಮ ಆದಾಯದ ಒಂದಂಶವನ್ನು ಜನರು ಬ್ಯಾಂಕುಗಳಲ್ಲಿ ಉಳಿತಾಯ ಮಾಡಿಡುತ್ತಾರೆ. ಬ್ಯಾಂಕುಗಳು ಈ ಹಣವನ್ನು ಕೃಷಿಕ, ಉದ್ಯಮಿ, ಸಾರಿಗೆ ವ್ಯವಸ್ಥಾಪಕ, ವಾಣಿಜ್ಯಾಧಿಪತಿ ಮತ್ತಿತರರಿಗೆ ಸಾಲವಾಗಿ ನೀಡುತ್ತವೆ. ಆದಾಯ ಗಳಿಕೆ, ಉಳಿತಾಯ ಮತ್ತು ಹೂಡಿಕೆ ಬಂಡವಾಳ ಸಂಚಯನದ ವಿವಿಧ ಹಂತಗಳಾಗಿದ್ದು ಇವೆಲ್ಲಾ ಹಣದ ರೂಪದಲ್ಲೇ ನಡೆಯುತ್ತವೆ.

೯. ವರ್ತಮಾನ ಮತ್ತು ಭವಿಷ್ಯತ್ತುಗಳ ನಡುವಣ ಕೊಂಡಿ: ಬಂಡವಾಳಶಾಹಿತ್ವದಲ್ಲಿ ಉದ್ಯಮ ಮತ್ತು ಅನುಭೋಗ ಸ್ವಾತಂತ್ರ್ಯವಿರುತ್ತದೆ. ಇವುಗಳ ಮೂಲಕ ಹಣವು ವರ್ತಮಾನ – ಮತ್ತು ಭವಿಷ್ಯತ್ತುಗಳ ನಡುವೆ ಕೊಂಡಿಯಂತೆ ಕಾರ್ಯವೆಸಗುತ್ತದೆ. ಅನುಭೋಗಿಗೆ ಅನುಭೋಗ ಸ್ವಾತಂತ್ರ್ಯವಿರುವುದರಿಂದ ತನ್ನ ಆದಾಯದ ಒಂದಂಶವನ್ನು ಆತ ಉಳಿತಾಯ ಮಾಡುತ್ತಾನೆ. ಉಳಿತಾಯವು ಹೂಡಿಕೆಗಾಗಿ ಬಳಸಲ್ಪಡುವುದರಿಂದ ಬಂಡವಾಳ ಸರಕುಗಳ ಉತ್ಪತ್ತಿಯಾಗುತ್ತದೆ. ಬಂಡವಾಳ ಸರಕುಗಳು ಅರ್ಥವ್ಯವಸ್ಥೆಯ ಬೆಳವಣಿಗೆ ಸಾಧಿಸುತ್ತವೆ. ಹೀಗೆ ಹಣದ ಮೂಲಕ ಅನುಭೋಗಿಗಳು ವರ್ತಮಾನದಲ್ಲಿ ಉಳಿತಾಯ ಮಾಡುತ್ತಾರೆ. ಇದನ್ನು ಹೂಡಿಕೆದಾರರು ಭವಿಷ್ಯದಲ್ಲಿ ಹೂಡಿಕೆಯಾಗಿ ಪರಿವರ್ತಿಸುತ್ತಾರೆ. ಉದ್ಯಮ ಸ್ವಾತಂತ್ರ್ಯವು ಉದ್ಯಮಿಗಳಿಗೆ ವರ್ತಮಾನದಲ್ಲಿ ಕಂಡುಕೊಂಡ ಉತ್ಪಾದನಾಂಗ ಮತ್ತು ಸರಕುಗಳಿಗೆ ಭವಿಷ್ಯದಲ್ಲಿ ಒಂದು ದಿನ ಪಾವತಿ ಮಾಡಲು ಅವಕಾಶ ಕಲ್ಪಿಸಿಕೊಡುತ್ತದೆ. ಇಂದು ವಸ್ತುಗಳನ್ನು ಸಂಗ್ರಹಿಸಿ ಮುಂದೊಂದು ದಿನ ಮಾರಾಟಕ್ಕೆ ಹಣವು ಅವಕಾಶ ಕಲ್ಪಿಸುವುದರಿಂದ ಇದು ಸಾಧ್ಯವಾಗುತ್ತದೆ.

೧೦. ಆರ್ಥಿಕ ಏರಿಳಿತಗಳು: ಬಂಡವಾಳಶಾಹೀ ಅರ್ಥವ್ಯವಸ್ಥೆಯಲ್ಲಿ ಸರಕಾರಕ್ಕೆ ಆರ್ಥಿಕ ಚಟುವಟಿಕೆಗಳ ಮೇಲೆ ನಿಯಂತ್ರಣವಿರುವುದಿಲ್ಲ. ಹಾಗಾಗಿ ಆಗಾಗ ಆರ್ಥಿಕ ಏರಿಳಿತಗಳು ಉಂಟಾಗುತ್ತವೆ. ಇಂತಹ ಏರಿಳಿತಗಳಿಗೆ ಹಣದ ಪೂರೈಕೆಯೇ ಕಾರಣವಾಗಿರುತ್ತದೆ. ಹಣದ ಪೂರೈಕೆ ಅಧಿಕವಾದಾಗ ಹಣದುಬ್ಬರ ಮತ್ತು ಪೂರೈಕೆ ಕಡಿಮೆಯಾದಾಗ ಹಣದಿಳಿತ ಉಂಟಾಗುತ್ತದೆ. ಹೀಗೆ ಹಣವು ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆರ್ಥಿಕ ಅಸ್ಥಿರತೆಗೆ ಕಾರಣವಾಗಿರುತ್ತದೆ.

ಸಮಾಜವಾದೀ ಆರ್ಥಿಕತೆಯಲ್ಲಿ ಹಣದ ಪಾತ್ರ

ಸಮಾಜವಾದೀ ವ್ಯವಸ್ಥೆಯಲ್ಲಿ ಉತ್ಪಾದನೆ ಮತ್ತು ಅನುಭೋಗಗಳು ಸರಕಾರದಿಂದ ನಿಯಂತ್ರಿಸಲ್ಪಡುತ್ತವೆ. ಉತ್ಪಾದನಾಂಗಗಳು ಪೂರ್ಣವಾಗಿ ಸರಕಾರದ ಸ್ವಾಮ್ಯಕ್ಕೆ ಒಳಪಟ್ಟಿರುತ್ತವೆ. ಸಮುದಾಯದ ಅವಶ್ಯಕತೆಗಳಿಗೆ ಅನುಗುಣವಾಗಿ ಉತ್ಪಾದನೆಯನ್ನು ಪೂರ್ವಯೋಜಿಸಲಾಗುತ್ತದೆ. ಅನುಭೋಗಿಗಳು ಉತ್ಪಾದಿಸಲ್ಪಟ್ಟುದೆಲ್ಲವನ್ನು ಅನುಭೋಗಿಸಬಹುದಾದರೂ ಅರ್ಥವ್ಯವಸ್ಥೆಯಲ್ಲಿ ಮುಕ್ತ ಸ್ವಾತಂತ್ರ್ಯವಿರುವುದಿಲ್ಲ. ಬೆಲೆಯಂತ್ರಕ್ಕೆ ಈ ವ್ಯವಸ್ಥೆಯಲ್ಲಿ ಯಾವ ಮಹತ್ವವೂ ಇಲ್ಲ. ಉತ್ಪಾದನೆ ಮತ್ತು ಅನುಭೋಗಗಳು ಕೇಂದ್ರೀಯ ಯೋಜನಾ ಪ್ರಾಧಿಕಾರದ ನಿರ್ದೇಶನಕ್ಕೆ ಒಳಪಟ್ಟಿರುತ್ತವೆ. ಎಲ್ಲಾ ಸರಕುಗಳನ್ನು, ಎಲ್ಲಾ ಸಮುದಾಯಗಳಿಗೆ ಎಲ್ಲಾ ಕಾಲದಲ್ಲಿ ಪೂರೈಕೆ ಮಾಡಲು ಪ್ರಾಧಿಕಾರವು ಉತ್ಪಾದನಾ ಪ್ರಮಾಣವನ್ನು ನಿರ್ಧರಿಸಬೇಕಾಗುತ್ತದೆ. ಇಂತಹ ಅರ್ಥವ್ಯವಸ್ಥೆಯೊಂದರಲ್ಲಿ ಹಣದ ಮಹತ್ತ್ವವನ್ನು ಕೆಳಗಿನ ಅಂಶಗಳು ಸಾದರ ಪಡಿಸುತ್ತವೆ.

೧. ಹಣ ಮತ್ತು ಬೆಲೆಯಂತ್ರ: ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಬೆಲೆಯಂತ್ರ ಎಲ್ಲವನ್ನೂ ನಿರ್ಧರಿಸುತ್ತದೆ. ಆದರೆ ಸಮಾಜವಾದೀ ವ್ಯವಸ್ಥೆಯಲ್ಲಿ ಬೆಲೆಯಂತ್ರಕ್ಕೆ ಯಾವುದೇ ಮಹತ್ವವಿಲ್ಲ. ಏಕೆಂದರೆ ಯೋಜನೆಯ ಉದ್ದೇಶ ಮತ್ತು ಗುರಿಗಳಿಗೆ ಅನುಗುಣವಾಗಿ ಯೋಜನಾ ಪ್ರಾಧಿಕಾರವು ಬೆಲೆಯಂತ್ರದ ವಿವಿಧ ಅಂಶಗಳಾದ ವೆಚ್ಚ, ಲಾಭ ಮತ್ತು ಬೆಲೆಗಳನ್ನು ಯೋಜಿಸುತ್ತದೆ ಮತ್ತು ಲೆಕ್ಕ ಹಾಕುತ್ತದೆ. ಆದುದರಿಂದ ಲಾಭ ಆಧಾರಿತ ಆರ್ಥಿಕ ಲೆಕ್ಕಾಚಾರ ಅಥವಾ ಉತ್ಪಾದನಾಂಗಗಳ ನಿಯುಕ್ತಿ ಸಾಧ್ಯವಾಗುವುದಿಲ್ಲ.

ಸಮಾಜವಾದೀ ರಾಷ್ಟ್ರಗಳಲ್ಲಿ ಕೇಂದ್ರೀಯ ಯೋಜನಾ ಪ್ರಾಧಿಕಾರವು ಮಾರುಕಟ್ಟೆಯ ಕಾರ್ಯವನ್ನು ನಿರ್ವಹಿಸುತ್ತದೆ. ಎಲ್ಲಾ ಉತ್ಪಾದನಾಂಗಗಳು ಸರಕಾರದ ವಶದಲ್ಲಿರುವುದರಿಂದ ಏನನ್ನು ಉತ್ಪಾದಿಸುವುದು ಎನ್ನುವ ತೀರ್ಮಾನವನ್ನು ಒಂದು ಕೇಂದ್ರೀಯ ಯೋಜನೆಯ ಚೌಕಟ್ಟಿನೊಳಗೆ ಮಾಡಲಾಗುತ್ತದೆ. ಈ ತೀರ್ಮಾನವು ಯೋಜನಾ ಪ್ರಾಧಿಕಾರದ ಉದ್ದೇಶ, ಆದ್ಯತೆ ಮತ್ತು ಗುರಿಗಳನ್ನು ಅವಲಂಬಿಸಿರುತ್ತದೆ. ಈ ಪ್ರಾಧಿಕಾರವೇ ಎಲ್ಲಾ ಸರಕುಗಳ ಬೆಲೆಯನ್ನು ನಿಗದಿಪಡಿಸುತ್ತದೆ. ಬೆಲೆಗಳು ಶ್ರೀಸಾಮಾನ್ಯನ ಸಾಮಾಜಿಕ ಒಲವುಗಳನ್ನು ಪ್ರತಿಬಿಂಬಿಸುತ್ತವೆ. ಅನುಭೋಗಿಯು ಯೋಜನಾಬ್ರಹ್ಮರು ಉತ್ಪಾದಿಸಿ ನೀಡುವ ಸರಕುಗಳನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಆದುದರಿಂದ ಬೆಲೆಯಂತ್ರಕ್ಕೆ ಯಾವ ಮಹತ್ತ್ವವೂ ಸಮಾಜವಾದಿ ರಾಷ್ಟ್ರಗಳಲ್ಲಿ ಇರುವುದಿಲ್ಲ.

ಹೇಗೆ ಉತ್ಪಾದಿಸಬೇಕು ಎನ್ನುವುದರ ನಿರ್ಧಾರವನ್ನು ಕೂಡಾ ಕೇಂದ್ರೀಯ ಯೋಜನಾ ಪ್ರಾಧಿಕಾರ ಮಾಡುತ್ತದೆ. ಅದು ಉತ್ಪಾದನಾಂಗಗಳನ್ನು ಒಗ್ಗೂಡಿಸಲು, ಉತ್ಪಾದನಾ ಪ್ರಮಾಣ ನಿರ್ಧರಿಸಲು, ಒಟ್ಟು ಉತ್ಪನ್ನ ನಿರ್ಧರಿಸಿ ಸಂಪನ್ಮೂಲಗಳನ್ನು ನಿಯುಕ್ತಿಗೊಳಿಸಲು ನಿಯಮಗಳನ್ನು ರೂಪಿಸುತ್ತದೆ. ಕೇಂದ್ರೀಯ ಪ್ರಾಧಿಕಾರವು ಉದ್ದಿಮೆಗಳ ನಿರ್ದೇಶಕರಿಗೆ ಎರಡು ನಿಯಮಗಳನ್ನು ವಿಧಿಸುತ್ತದೆ: (೧) ಪ್ರತಿಯೊಬ್ಬ ನಿರ್ದೇಶಕನು ಉತ್ಪಾದಕ ಸರಕು ಮತ್ತು ಸೇವೆಗಳನ್ನು ಸರಾಸರಿ ವೆಚ್ಚವು ಕನಿಷ್ಠವಿರುವಂತೆ ಸಂಯೋಜಿಸಬೇಕು. ಮತ್ತು (೨) ಪ್ರತಿಯೊಬ್ಬ ನಿರ್ದೇಶಕನೂ ಸೀಮಾಂತ ವೆಚ್ಚವು ಬೆಲೆಗೆ ಸಮವಾಗುವ ಉತ್ಪನ್ನ ಪ್ರಮಾಣವನ್ನು ಆಯ್ದುಕೊಳ್ಳಬೇಕು. ಹೀಗೆ ಬೆಲೆಗಳು ಅತ್ಯಂತ ಕಡಿಮೆ ಇರುವಂತೆ ಯೋಜನಾ ಪ್ರಾಧಿಕಾರವು ನೋಡಿಕೊಳ್ಳುತ್ತದೆ.

೧. ಯಾರಿಗಾಗಿ ಉತ್ಪಾದಿಸಬೇಕು ಎಂಬ ಮೂರನೆಯ ಮೂಲಭೂತ ಸಮಸ್ಯೆಯನ್ನು ಕೂಡಾ ಕೇಂದ್ರೀಯ ಯೋಜನಾ ಪ್ರಾಧಿಕಾರ ಬಗೆಹರಿಸಬೇಕು. ಈ ತೀರ್ಮಾನವನ್ನು ಉಳಿದೆರಡು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಾಗಲೇ ಪರಿಹರಿಸಲಾಗುತ್ತದೆ. ಯಾರಿಗಾಗಿ ಉತ್ಪಾದಿಸುವುದು ಎಂಬ ಸಮಸ್ಯಾ ತೀರ್ಮಾನ ಸಂದರ್ಭದಲ್ಲಿ ಸಾಮಾಜಿಕ ಒಲವುಗಳಿಗೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಅಧಿಕ ಜನರಿಗೆ ಅಗತ್ಯವುಳ್ಳ ಸರಕು ಮತ್ತು ಸೇವೆಗಳಿಗೆ ಆದ್ಯತೆ ನೀಡಲಾಗುತ್ತದೆ. ಅಗತ್ಯದ ಸರಕುಗಳನ್ನು ಸ್ಥಿರ ಬೆಲೆಗಳಲ್ಲಿ ಸರಕಾರೀ ಸಂಸ್ಥೆಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಬೇಡಿಕೆಯನ್ನು ಅಂದಾಜಿಸಿಯೇ ಉತ್ಪಾದನೆ ನಡೆಸಲಾಗುತ್ತದೆ. ಒಂದು ವೇಳೆ ಬೇಡಿಕೆ ಅಧಿಕವಾದರೆ ಸರಕು ಮತ್ತು ಸೇವೆಗಳ ಕೊರತೆ ಉಂಟಾಗುತ್ತದೆ ಮತ್ತು ಆಗ ಸರಕಾರ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸುತ್ತದೆ.

ಹೀಗೆ ಸಮಾಜವಾದೀ ಅರ್ಥವ್ಯವಸ್ಥೆಯಲ್ಲಿ ಆದಾಯ ವಿತರಣೆಯ ಸಮಸ್ಯೆಯು ತನ್ನಿಂದ ತಾನಾಗಿಯೇ ಬಗೆಹರಿಯುತ್ತದೆ. ಎಲ್ಲಾ ಸಂಪನ್ಮೂಲಗಳನ್ನು ಸರಕಾರವೇ ಹೊಂದಿದ್ದು ಅವುಗಳ ಪ್ರತಿಫಲಗಳನ್ನು ಸರಕಾರವೇ ನಿರ್ಧರಿಸಿ ಪಾವತಿಸುವುದು ಇದಕ್ಕೆ ಕಾರಣ. ಬಂಡವಾಳ ಸಂಚಯನಕ್ಕಾಗಿ ಆರ್ಥಿಕ ಮಿಗುತೆಗಳನ್ನು ಇಚ್ಚಾಪೂರ್ವಕವಾಗಿ ಸೃಷ್ಟಿಸಿ, ಬಳಸಿ ಬೆಳೆವಣಿಗೆ ಸಾಧಿಸಲಾಗುತ್ತದೆ.

೨. ಬಂಡವಾಳ ಸಂಚಯನ: ಹಣದ ಮೂಲಕ ಬಂಡವಾಳ ಸಂಚಯನ ಸಮಾಜವಾದಿ ಅರ್ಥವ್ಯವಸ್ಥೆಯಲ್ಲೂ ಸಾಧ್ಯವಾಗುತ್ತದೆ. ಬಂಡವಾಳದ ಸಂಚಯನಕ್ಕೆ ಅಗತ್ಯವಾದ ದ್ರವ್ಯತೆ ಮತ್ತು ಚಲನೆಯನ್ನು ಹಣವು ಒದಗಿಸುತ್ತದೆ. ವ್ಯವಹಾರ ತೆರಿಗೆ (turn over tax) ಸಾರ್ವಜನಿಕ ಉದ್ದಿಮೆಗಳ ಯೋಜಿತ ಲಾಭ, ಅಪರವಶ್ಯದತ್ತಿ ಕೋಟಾ (amortisation quota) ಕೃಷಿ ಉತ್ಪನ್ನ ತೆರಿಗೆ ಮುಂತಾದವುಗಳನ್ನು ಹಣದ ರೂಪದಲ್ಲಿ ಅಭಿವ್ಯಕ್ತಿಸಲಾಗುತ್ತದೆ. ಇವೆಲ್ಲವೂ ಬಂಡವಾಳ ಸಂಚಯನಕ್ಕೆ ಸಹಾಯಕವಾಗಿವೆ.

೩. ವಿದೇಶೀ ವ್ಯಾಪಾರ: ಸರಕು ವ್ಯವಹಾರ ಆಧರಿತ ದ್ವಿಪಕ್ಷೀಯ ವಿದೇಶೀ ವ್ಯಾಪಾರವನ್ನು ಸಮಾಜವಾದೀ ರಾಷ್ಟ್ರಗಳು ನಡೆಸುವುದಿಲ್ಲ. ಅವು ಹಣದ ರೂಪದಲ್ಲೇ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತವೆ. ಹಾಗಾಗಿ ಹಣವು ಸಮಾಜವಾದಿ ರಾಷ್ಟ್ರಗಳಲ್ಲೂ ಮಹತ್ವ ಪಡೆದಿದೆ.

೪. ಹಣದ ವರ್ತುಲ ಪ್ರವಾಹ : ಸಮಾಜವಾದಿ ಅರ್ಥವ್ಯವಸ್ಥೆಯಲ್ಲೂ ಹಣವು ವರ್ತುಲಾಕಾರವಾಗಿ ಪ್ರವಹಿಸುತ್ತದೆ. ಉತ್ಪಾದನಾ ಸ್ಥಾವರಗಳು ಹೂಡಿಕೆಗಾಗಿ ಮುಂಗಡ ಪತ್ರದಿಂದ (budget) ಅನುದಾನವನ್ನು ಅಥವಾ ರಾಜ್ಯ ಬ್ಯಾಂಕಿನಿಂದ ಸಾಲವನ್ನು ಪಡೆಯುತ್ತದೆ. ಈ ಹಣವು ಉತ್ಪಾದನಾಂಗಗಳ ಕೊಳ್ಳುವಿಕೆಗೆ ಮತ್ತು ಕಾರ್ಮಿಕರಿಗೆ ಕೂಲಿ ನೀಡಿಕೆಗೆ ಬಳಸಲ್ಪಡುತ್ತದೆ. ಕಾರ್ಮಿಕರು ಅನುಭೋಗೀ ಸರಕುಗಳ ಮೇಲೆ ತಮ್ಮ ಕೂಲಿಯನ್ನು ಖರ್ಚು ಮಾಡುತ್ತಾರೆ. ಉತ್ಪಾದನಾ ಸ್ಥಾವರಗಳು ಮಾರಾಟದಿಂದ ಆದಾಯಗಳಿಸುತ್ತವೆ. ಈ ಆದಾಯವು ತೆರಿಗೆ ಪಾವತಿಗೆ, ಲಾಭಗಳಿಕೆಗೆ ಮತ್ತು ರಾಜ್ಯ ಬ್ಯಾಂಕಿನ ಸಾಲ ಮರುಪಾವತಿಗೆ ಸಂದಾಯವಾಗುತ್ತದೆ. ಈ ನಿಧಿಗಳು ಮತ್ತೆ ಮುಂಗಡಪತ್ರ ಮತ್ತು ರಾಜ್ಯ ಬ್ಯಾಂಕಿನಿಂದ ಉತ್ಪಾದನಾ ಸ್ಥಾವರಗಳಿಗೆ ಪ್ರವಹಿಸುತ್ತದೆ. ಹೀಗೆ ಹಣವು ಸಮಾಜವಾದೀ ಅರ್ಥವ್ಯವಸ್ಥೆಯಲ್ಲಿ ಸರಕು ಮತ್ತು ಸೇವೆಗಳ ವರ್ತುಲ ಪ್ರವಾಹಕ್ಕೆ ಸಹಾಯ ಮಾಡುತ್ತದೆ.

ಹಣವು ಬಂಡವಾಳಶಾಹೀ ಅರ್ಥವ್ಯವಸ್ಥೆಯಲ್ಲಿ ಉದ್ಧಟ ಯಜಮಾನನ ಪಾತ್ರ ನಿರ್ವಹಿಸಿದರೆ ಸಮಾಜವಾದೀ ಅರ್ಥವ್ಯವಸ್ಥೆಯಲ್ಲಿ ಅದು ವಿಶ್ವಾಸಾರ್ಹ ಸೇವಕನ ಪಾತ್ರ ವಹಿಸುತ್ತದೆ. ಹಣವು ಸಮಾಜವಾದೀ ವ್ಯವಸ್ಥೆಯಲ್ಲಿ ಏರಿಳಿತಗಳನ್ನು ಮತ್ತು ಉಹಾಪೋಹಗಳನ್ನು ಉಂಟು ಮಾಡುವುದಿಲ್ಲ. ಈ ನಿಟ್ಟಿನಲ್ಲಿ ನೋಡಿದರೆ ಸಮಾಜವಾದಿ ವ್ಯವಸ್ಥೆಯೇ ಬಂಡವಾಳಶಾಹೀ ವ್ಯವಸ್ಥೆಗಿಂತ ಉತ್ತಮವಾದುದು ಎನಿಸುತ್ತದೆ.


ಹಿಂದುಳಿದ ಆರ್ಥಿಕತೆಯಲ್ಲಿ ಹಣದ ಪಾತ್ರ

ಹಿಂದುಳಿದ ಅರ್ಥವ್ಯವಸ್ಥೆಗಳು ಸಾಮಾನ್ಯವಾಗಿ ಮಿಶ್ರ ಆರ್ಥಿಕತೆಯನ್ನು ಹೊಂದಿರುತ್ತವೆ. ಮಿಶ್ರ ಅರ್ಥವ್ಯವಸ್ಥೆಯಲ್ಲಿ, ಸಾರ್ವಜನಿಕ ರಂಗ ಮತ್ತು ಖಾಸಗಿ ರಂಗಗಳಿಗೆ ಸಮಾನ ಸ್ವಾತಂತ್ರ್ಯ ಮತ್ತು ಸಹ ಅಸ್ತಿತ್ವವಿರುತ್ತದೆ. ಖಾಸಗಿ ಒಡೆತನವಿದ್ದರೂ ಸರಕಾರದ ನಿಯಂತ್ರಣವೂ ಇರುತ್ತದೆ. ಸಾಮಾನ್ಯವಾಗಿ ಹಿಂದುಳಿದ ರಾಷ್ಟ್ರಗಳು ಕೃಷಿ ಪ್ರಧಾನ ಆರ್ಥಿಕತೆಗಳಾಗಿರುತ್ತವೆ. ಕೃಷಿಯ ಆಧುನೀಕರಣ ಮತ್ತು ವ್ಯಾಪಕ ಕೈಗಾರಿಕೀಕರಣದಿಂದ ಇವು ಪ್ರಗತಿ ಸಾಧಿಸಲು ಯತ್ನಿಸುತ್ತವೆ. ಹಣದ ಬಳಕೆಯು ಹಾಗಾಗಿ ಅನಿವಾರ್ಯವಾಗಿದೆ.

ಹಿಂದುಳಿದ ಅರ್ಥವ್ಯವಸ್ಥೆಯಲ್ಲಿ ಹಣವು ಈ ಕೆಳಗಿನ ಕಾರ್ಯಗಳನ್ನು ನಿರ್ವಹಿಸುತ್ತದೆ.

೧. ಅಭಿವೃದ್ಧಿಯ ಮೂಲ : ಹಣವು ಆರ್ಥಿಕಾಭಿವೃದ್ಧಿಗೆ ಅತ್ಯಂತ ಅಗತ್ಯವಾದ ಸಾಧನವಾಗಿದೆ. ಆರ್ಥಿಕಾಭಿವೃದ್ಧಿ ಸಾಧಿಸಲ್ಪಡಬೇಕಾದರೆ ಅರ್ಥವ್ಯವಸ್ಥೆಯ ಎಲ್ಲಾ ರಂಗಗಳ ಸಂತುಲಿತವಾದ ಏಕಕಾಲಿಕ ಬೆಳವಣಿಗೆಯಾಗಬೇಕು. ಕೃಷಿಯು ಆಧುನೀಕರಣದ ಪ್ರಕ್ರಿಯೆಗೆ ಒಳಗಾಗಬೇಕು. ದೇಶದಲ್ಲಿ ವ್ಯಾಪಕ ಕೈಗಾರಿಕೀಕರಣವಾಗಬೇಕು. ಸಾರಿಗೆ-ಸಂಪರ್ಕ ವ್ಯವಸ್ಥೆ ಅತ್ಯಾಧುನಿಕವಾಗಬೇಕು. ಇವೆಲ್ಲಾ ಪ್ರಗತಿ ಸಾಧಿಸಬೇಕಾದರೆ ಬೃಹತ್ ಪ್ರಮಾಣದ ಬಂಡವಾಳ ಬೇಕಾಗುತ್ತದೆ. ಹಣದ ರೂಪದಲ್ಲಿ ಜನರು ತಮ್ಮ ಉಳಿತಾಯವನ್ನು ಬ್ಯಾಂಕಲ್ಲಿ ಠೇವಣಿಯಾಗಿಡುತ್ತಾರೆ. ಹೂಡಿಕೆದಾರರು ಈ ಠೇವಣಿಗಳನ್ನು ಸಾಲ ರೂಪದಲ್ಲಿ ಪಡೆದುಕೊಂಡು ಅರ್ಥವ್ಯವಸ್ಥೆಯಲ್ಲಿ ಹೂಡಿಕೆ ನಡೆಸುತ್ತಾರೆ. ಇಂತಹ ಹೂಡಿಕೆಗಳಿಂದ ಆರ್‍ಥಿಕಾಭಿವೃದ್ಧಿ ಸಾಧಿತವಾಗುವುದರಿಂದ ಹಣವು ಆರ್‍ಥಿಕ ಪ್ರಗತಿಗೆ ಮೂಲ ಕಾರಣವಾಗುತ್ತದೆ.

೨. ಉದರಿ ಸೃಷ್ಟಿ: ಹಣವು ಉದರಿ ಸೃಷ್ಟಿಗೆ ಸಹಾಯ ಮಾಡುತ್ತದೆ. ಕೈಗಾರಿಕಾ ಮತ್ತು ವ್ಯವಹಾರಿಕ ಸಮಾಜಗಳು ಉದರಿಯನ್ನು ಆಧರಿಸಿ ಪ್ರಗತಿ ಸಾಧಿಸುತ್ತವೆ. ಬ್ಯಾಂಕು ಮತ್ತಿತರ ಹಣಕಾಸು ಸಂಸ್ಥೆಗಳು ತಮ್ಮ ಠೇವಣಿಗಳಿಂದ ಉದರಿಯನ್ನು ಸೃಷ್ಟಿಸುತ್ತವೆ. ಬ್ಯಾಂಕುಗಳು ಹಣವನ್ನು ಸಂಗ್ರಹಿಸುವುದರಿಂದಾಗಿ ಉದರಿ (ಸಾಲ) ನೀಡಲು ಸಾಧ್ಯವಾಗುತ್ತದೆ. ಸಾಲ ಮರುಪಾವತಿ ಸಾಮರ್‍ಥ್ಯವನ್ನು ಅಳೆಯುವ ಮತ್ತು ಹಳೆಬಾಕಿಯನ್ನು ತೀರಿಸುವ ಒಂದು ಮಾಧ್ಯಮವಾಗಿದೆ. ಹಣ ಇಲ್ಲದಿದ್ದರೆ ಉದರಿಸೃಷ್ಟಿ ಸಾಧ್ಯವಾಗುವುದಿಲ್ಲ.

೩. ಆಧುನಿಕ ಮಾರುಕಟ್ಟೆಗೆ ಆಧಾರ: ಹಣವು ಕೋಟಿಗಟ್ಟಲೆ ವಿನಿಮಯಗಳನ್ನು ಸಾಧ್ಯವಾಗಿಸುತ್ತದೆ. ಬೆಲೆಯಂತ್ರವು ಹಣದಿಂದಾಗಿ ಕಾರ್ಯವೆಸಗುತ್ತದೆ. ಹಣವು ಸರಕು ಮತ್ತು ಸೇವೆಗಳ ಸೃಷ್ಟಿಗೆ ಅನುಭೋಗಕ್ಕೆ ಮತ್ತು ವರ್ತುಲ ಪ್ರವಾಹಕ್ಕೆ ಸಹಕಾರಿಯಾಗಿದೆ. ಹಣವು ಸರಕು-ಸೇವೆಗಳ ಬೇಡಿಕೆಗೆ ಮತ್ತು ಪೂರೈಕೆಗೆ ಕಾರಣವಾಗಿದೆ. ಆಧುನಿಕ ವಿನಿಮಯ ವ್ಯವಸ್ಥೆ, ಸಾರಕು ಮಾರುಕಟ್ಟೆ, ವಿತ್ತ ಮಾರುಕಟ್ಟೆ, ಶ್ರಮ ಮಾರುಕಟ್ಟೆ ಮತ್ತು ಬಂಡವಾಳ ಮಾರುಕಟ್ಟೆ ಹಣವನ್ನೇ ಅವಲಂಬಿಸಿವೆ. ದೇಶೀಯ ಮತ್ತು ವಿದೇಶೀಯ ವ್ಯಾಪಾರಕ್ಕೂ ಹಣವು ಮೂಲ ಆಶ್ರಯ ಸ್ಥಾನವಾಗಿದೆ.

೪. ಬೆಳವಣಿಗೆಯ ಸೂಚಿ : ಹಣದ ಮೂಲಕ ರಾಷ್ಟ್ರದ ಪ್ರಗತಿಯನ್ನು ಸುಲಭವಾಗಿ ಆಳೆಯಲು ಸಾಧ್ಯವಾಗುತ್ತದೆ. ಹಣದ ಮೂಲಕ ರಾಷ್ಟ್ರಾದಾಯ, ತಲಾದಾಯ, ಕೂಲಿ, ಉದ್ಯೋಗ ಸಾಮರ್ಥ್ಯ, ಉತ್ಪಾದನೆಗಳ ಮೌಲ್ಯಮಾಪನ ಸಾಧ್ಯವಾಗುತ್ತದೆ. ರಾಷ್ಟ್ರದ ಮತ್ತು ವ್ಯಕ್ತಿಯ ಕಲ್ಯಾಣವನ್ನು ಹಣದ ಮೂಲಕ ಮಾಪನ ಮಾಡಲಾಗುತ್ತದೆ. ಯೋಜನೆ ಮತ್ತು ಆರ್ಥಿಕ ಚಟುವಟಿಕೆಗಳ ನಿಯಂತ್ರಣ ಕೂಡಾ ಹಣದಿಂದ ಸಾಧ್ಯವಾಗುತ್ತದೆ.

ಹೀಗೆ ಹಣ ಇಲ್ಲದಿದ್ದರೆ ಇಂದು ಏನೂ ಇಲ್ಲ ಎಂದಾಗಿದೆ. ಹಣ ಸರ್ವತ್ರ ಮಹತ್ತರ ಪಾತ್ರ ವಹಿಸುವ ವಿನಿಮಯ ಮಾಧ್ಯಮವಾಗಿದ್ದು ಮಾನವನಿಂದ ಸೃಷ್ಟಿಸಲ್ಪಟ್ಟ ಈ ಸಾಧನ ಇಂದು ಮಾನವನ ಮೇಲೆ ವಿಜಯ ಸಾಧಿಸಿ ಮೆರೆದಾಡುತ್ತಿದೆ. ಈ ಕಾರಣಕ್ಕಾಗಿ ಡಾ. ಆಲ್‌ಫ್ರೆಡ್ ಮಾರ್ಷಲ್ “ಹಣವೆಂಬ ತಿರುಗಾಣಿಯ ಸುತ್ತ ಆರ್ಥಿಕ ಚಟುವಟಿಕೆಗಳು ಗುಂಪುಗೂಡಿವೆ” ಎಂದಿದ್ದಾನೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಹರೆಪಟ್ಟಿ
Next post ಕಿಂಗ್‌ಸ್ಲಿಯ ಗಾಂಧಿ

ಸಣ್ಣ ಕತೆ

 • ಒಂದು ಹಿಡಿ ಪ್ರೀತಿ

  ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

 • ಕರಿಗಾಲಿನ ಗಿರಿರಾಯರು

  ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

 • ಧನ್ವಂತರಿ

  ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

 • ಕ್ಷಮೆ

  ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

 • ಗೋಪಿ

  ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

cheap jordans|wholesale air max|wholesale jordans|wholesale jewelry|wholesale jerseys