ರಿಕಾರ್ಡು ಬರೆದುಕೋ.
ನಾನು ಅರಬ.
ನನ್ನ ಕಾರ್ಡಿನ ನಂಬರು ಐವತ್ತುಸಾವಿರ.
ಎಂಟು ಮಕ್ಕಳು.
ಒಂಬತ್ತನೆಯದು ಈ ಬೇಸಗೆಯಲ್ಲಿ ಆಗಲಿದೆ.
ಇದಕ್ಕೆ ಕೋಪ ಯಾಕೆ?
ರಿಕಾರ್ಡು ಬರೆದುಕೋ.

ನಾನು ಅರಬ
ಗೆಳೆಯರೊಡನೆ ಕಲ್ಲಿನ ಕ್ವಾರಿಯಲ್ಲಿ ಕೆಲಸ.
ಎಂಟು ಮಕ್ಕಳು.
ಅವರ ಬ್ರೆಡ್ಡಿಗೆ, ಬಟ್ಟೆಗೆ, ಸ್ಕೂಲು ಪುಸ್ತಕಕ್ಕೆ
ಕಲ್ಲು ಕದಿಯುತ್ತೇನೆ.
ನಿಮ್ಮ ಮನೆ ಬಾಗಿಲಿಗೆ ಭಿಕ್ಷಕ್ಕೆ ಬಂದಿಲ್ಲವಲ್ಲ,
ನಿಮ್ಮಕಾಲಿಗೆ ಬಿದ್ದು ಬೇಡಿಲ್ಲವಲ್ಲ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ಬಿರುದಿಲ್ಲದ ಹೆಸರಿನವನು,
ಕೋಪದ ಸುಳಿಗೆ ಸಿಕ್ಕ ದೇಶದಲ್ಲಿ
ತಾಳ್ಮೆಯಿಂದ ಇರುವವನು.
ನನ್ನ ಬೇರು ಕಾಲದ ಆದಿಗಿಂತ ಹಳೆಯದು.
ಸಮುದ್ರಗಳು ಹುಟ್ಟುವ ಮುನ್ನ
ಸೈಪ್ರಸ್ಸು ಆಲಿವ್ವು ಮರಗಳು ಹುಟ್ಟುವ ಮುನ್ನ
ಜೊಂಡು ಬೆಳೆಯುವ ಮುನ್ನ
ಮುನ್ನ ಎಂಬ ಮುನ್ನ ಬೇರು ಬಿಟ್ಟಿದ್ದೆ.
ನಮ್ಮಪ್ಪ ನೇಗಿಲ ಕುಲದಿಂದ ಬಂದವನು,
ಶ್ರೀಮಂತ ಸರದಾರನಲ್ಲ,
ನಮ್ಮ ತಾತನೂ ರೈತ.
ವಂಶವೃಕ್ಷವಿಲ್ಲದವನು.
ನಮ್ಮ ಮನೆ
ಕೋಲು ಹೂತು ಹುಲ್ಲು ಹೊದಿಸಿದ ಗುಡಿಸಲು.
ನನ್ನ ಸ್ಥಿತಿಯಿಂದ ಸಮಾಧಾನವಾಯಿತೇ?
ನನ್ನ ಹೆಸರಿನ ಜೊತೆಗೆ ಮನೆತನದ ಹೆಸರು ಇಲ್ಲ.
ರಿಕಾರ್ಡು ಬರೆದುಕೋ.

ನಾನು ಅರಬ.
ಕೂದಲ ಬಣ್ಣ : ದಟ್ಟ ಕಪ್ಪು.
ಕಣ್ಣಿನ ಬಣ್ಣ : ಕಂದು.
ನನ್ನ ಗುರುತಿನ ಚಹರೆ : ನೆತ್ತಿಯ ಮೇಲೆ
ಮುಟ್ಟಿದವರ ಕೈ ಸೀಯಿಸಿಬಿಡುವ
ಮಂತ್ರಾಕ್ಷರಗಳಿವೆ ‘ಇಖಾಲ್’ ನೊಡನೆ ‘ಖೆಫಿಯೆ’
ನನ್ನವಿಳಾಸ : ದೂರದ, ಎಲ್ಲರೂ ಮರೆತ, ಹೆಸರಿಲ್ಲದ ಬೀದಿಗಳ,
ಎಲ್ಲರೂ ಕ್ವಾರಿಯಲ್ಲಿ ಹೊಲದಲ್ಲಿ ದುಡಿಯುವ
ಒಂದು ಹಳ್ಳಿ.
ಇದಕ್ಕೆ ಯಾಕೆ ಕೋಪ?
ರಿಕಾರ್ಡು ಬರೆದುಕೋ.

ನಾನು ಅರಬ.
ನೀವು ನಮ್ಮತಾತಂದಿರ ದ್ರಾಕ್ಷಿ ತೋಟ ಕದ್ದಿರಿ.
ನಾನು ದುಡಿಯುತ್ತಿದ್ದೆ
ನನ್ನಮಕ್ಕಳು ದುಡಿಯುತ್ತಿದ್ದರು.
ನನಗೆ ನನ್ನ ಮೊಮ್ಮಕ್ಕಳಿಗೆ
ಈ ಕಲ್ಲು ಬಂಡೆ ಮಾತ್ರ ಬಿಟ್ಟಿದ್ದೀರಿ.
ಸರ್ಕಾರ ಇದನ್ನೂ ತೆಗೆದುಕೊಳ್ಳುತ್ತೆಂದು ಹೇಳುತ್ತಾರೆ.
ಹೌದೆ ?

ಹೀಗೆ!
ರಿಕಾರ್ಡು ಬರೆದುಕೋ, ಮೊದಲ ಪುಟದ ಮೇಲುಗಡೆ :
ನನಗೆ ಜನರನ್ನು ಕಂಡರೆ ದ್ವೇಷವಿಲ್ಲ.
ನಾನು ಯಾರ ಜಮೀನಿನೊಳಗೂ ಕಾಲಿಡುವುದಿಲ್ಲ.
ಆದರೂ, ನನಗೆ ಹಸಿವಾದರೆ
ನನ್ನನ್ನು ಓಡಿಸಿದವರ ಮಾಂಸ ತಿನ್ನುತ್ತೇನೆ.
ಹುಷಾರು, ನನ್ನ ಹಸಿವಿನ ಬಗ್ಗೆಹುಷಾರು!
ನನ್ನ ಕೋಪದ ಬಗ್ಗೆ ಹುಷಾರು!
*****
ಮೂಲ: ಮಹಮೂದ್ ದರ್‍ವೇಶ್

ನಾಗಭೂಷಣಸ್ವಾಮಿ ಓ ಎಲ್
Latest posts by ನಾಗಭೂಷಣಸ್ವಾಮಿ ಓ ಎಲ್ (see all)