[ರಗಳೆಯ ಪ್ರಭೇದ]

ನಾಗರ ಹಾವೆ! ಹಾವೊಳು ಹೂವೆ! |
ಬಾಗಿಲ ಬಿಲದಲಿ ನಿನ್ನಯ ಠಾವೆ! ||
ಕೈಗಳ ಮುಗಿವೆ, ಹಾಲನ್ನೀವೆ |
ಬಾ ಬಾ ಬಾ ಬಾ ಬಾ ಬಾ ಬಾ ಬಾ ||೧||

ಹಳದಿಯ ಹೆಡೆಯನು ಬಿಚ್ಚೋ ಬೇಗಾ! |
ಹೊಳಹಿನ ಹೊಂದಲೆ ತೂಗೋ ನಾಗಾ! ||
ಕೊಳಲನ್ನೂದುವೆ ಲಾಲಿಸು ರಾಗಾ |
ನೀ ನೀ ನೀ ನೀ ನೀ ನೀ ನೀ ನೀ ||೨||

ಎಲೆ ನಾಗಣ್ಣ, ಹೇಳೆಲೊ ನಿನ್ನಾ |
ತಲೆಯಲಿ ರನ್ನವಿಹ ನಿಜವನ್ನಾ! ||
ಬಲು ಬಡವಗೆ ಕೊಪ್ಪರಿಗೆಯ ಚಿನ್ನಾ |
ತಾ ತಾ ತಾ ತಾ ತಾ ತಾ ತಾ ತಾ ||೩||

ಬರಿಮೈ ತಣ್ಣಗೆ, ಮನದಲ್ಲಿ ಬಿಸಿ ಹಗೆ |
ಎರಡೆಳೆ ನಾಲಗೆ ಇದ್ದರು ಸುಮ್ಮಗೆ ||
ಎರಗುವೆ ನಿನಗೆ, ಈಗಲೆ ಹೊರಗೆ |
ಪೋ ಪೋ ಪೋ ಪೋ ಪೋ ಪೋ ಪೋ ಪೋ || ೪||
*****
(ಪದ್ಯ ಪುಸ್ತಕ)

Latest posts by ಪಂಜೆ ಮಂಗೇಶರಾಯ (see all)