ಯಾಕೆ ಈ ಆನಂದ ಕಾಡುತ್ತಾನೋ ಹೀಗೆ
ಆಡುತ್ತಾನೆ ಆಡುತ್ತಾನೆ ಆಡುತ್ತಾನೆ ದೇವರೇ
ನಡುಬೀದಿಯಲ್ಲಿ ಬಟ್ಟೆ ಎಳೆದ ಹಾಗೆ ಥಟ್ಟನೆ
ಕಿಬ್ಬೊಟ್ಟೆ ಮೇಲೆ ಕೈಯಿಟ್ಟಂತೆ ಫಕ್ಕನೆ!
ಒಳಗೆ ಕತ್ತಲೆಯಲ್ಲಿ ಹುಗಿದ ಗುಟ್ಟಿಗೆ ಕಡ್ಡಿ ಗೀರಿ
ಭಾರಿ ಪಟಾಕಿ ಸಿಡಿಸಿ ಬೆಚ್ಚಿಸುತ್ತಾನೆ
ರೇಗಿದರು ಹೊರಗೆ ಕತ್ತಲು ಮುಚ್ಚಿದೊಳಗೆ
ಸಣ್ಣ ದೀಪಾವಳಿ
ಮುಖದ ಮೇಲೆಲ್ಲ ಬೆವರಿನ ಕಡಲೆ ಹನಿಮೂಡಿ
ನೆನೆಸಿಕೊಂಡರೆ ಈಗ ತಂಗಾಳಿ.

ಆಡುತ್ತ ಆಡುತ್ತ ಬೇಲಿದಾಟಿದ ಮಾತ
ನಾಲಿಗೆಯ ಮೇಲೆ ಎದೆ ಹಿಂಡಿ ಹರವುತ್ತಾನೆ,
ಹಾಡುತ್ತ ಹಾಡುತ್ತ ಹಂಸಧ್ವನಿಯ ಬಿಟ್ಟು
ಕಾಮವರ್ಧಿನಿ ಕಡೆಗೆ ಕೊರಳಾಗುತ್ತಾನೆ,
ಕಣ್ಣಲ್ಲಿ ಬ್ಲೇಡಿಟ್ಟು ಕಳ್ಳವೇಷಗಳನ್ನ
ಗೀರಿಕೊಯ್ಯುತ್ತಾನೆ ಮಾತಿನಲ್ಲೆ,
ಕತ್ತಿನ ಕಣ್ಣಿಯ ಕಿತ್ತು ಹುಟ್ಟಿದ ಹೊತ್ತಿಗೆ ಮುಟ್ಟಿಸಿ
ಪೂರ ತುಂಬಿದ ಕೆರೆಯ ತೂಬು ತೆರೆಯುತ್ತಾನೆ.

ಹತ್ತಿರ ಬಂದಾಗ ಇವನು ಕಣ್ಣಲ್ಲಿ ಕತ್ತಿ ಹಿರಿದು
ಎದೆಗೆ ಎತ್ತಿಬಡಿದು ದೂರ ಓಡಿದ್ದೇನೆ,
ತುಟಿಯ ಕೊಂಕಿನಲ್ಲಿ ಥೂಛೀಗಳನ್ನು ಬರೆದು
ಬೆಕ್ಕಿನುಗುರಾಗಿ ಕತ್ತೆ ಪರಚಿದ್ದೇನೆ,
ಉರಿಮಾತ ಕಾರಿ ಬೆಂಕಿ ಬಾಣಲೆಯಲ್ಲಿ
ಕರಿಕಾಗುವಷ್ಟು ಬೇಯಿಸಿದ್ದೇನೆ;

ಆದರೂ ಈ ಭಂಡ
ಎಚ್ಚರಿದ್ದಾಗೆಲ್ಲ ಕೀಚಕನಾಗಿ ಕಂಡು
ರೆಪ್ಪೆ ಮುಚ್ಚಿದ ಗಳಿಗೆ ಕೊಳಲು ಹಿಡಿದು ಬಂದು
ಬಿಗಿಯಾಗಿ ಮುಚ್ಚಿದ್ದ ಎದೆಯೊಳಗೆ ಬಾಗಿ-
ಲುಗಳ ತೆರೆದಿದ್ದಾನೆ.
‘ಅಂತರಾಳಗಳಲ್ಲಿ ನಿಂತ ನೀರುಗಳಲ್ಲಿ
ಕಂತಿ ಕೈಬಡಿವ ಬೀಜಾಣುವ’ನ್ನ
ಹಿಡಿದೆತ್ತಿ ದಡದಲ್ಲಿ ನೀರು ಗೊಬ್ಬರ ಉಣಿಸಿ
ಕಾಮಕಸ್ತೂರಿವನ ಬೆಳಯಿಸಿದ್ದಾನೆ.
*****
ದೀಪಿಕಾ ಕವನಗುಚ್ಛ

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)