ಕೇಳು ಕೇಳು ಓ ಜೀವಗೆಳತಿಯೇ,
ಲೋಕ ಮೀಟಿದೆ, ನಾ ಕ್ಲೇಶ ದಾಟಿದೆ.
ಗೆಜ್ಜೆ ಕಾಲಿಗೆ, ತುಳಸಿಮಾಲೆ ಕೊರಳಿಗೆ,
ಲಜ್ಜೆ ಬಿಟ್ಟೆನೇ, ಹೆಜ್ಜೆ ಹಾಕಿ ಕುಣಿದೆನೇ.
ರಾತ್ರಿ ಹಗಲಿಗೆ ಸೂತ್ರಧಾರಿ ಶ್ಯಾಮನ
ಮಾತ್ರ ನನೆದನೇ, ಪ್ರೀತಿಪಾತ್ರಳಾದೆನೇ
ಕಾಸು ಇಲ್ಲದೆ, ಚೂರೂ ಕ್ಲೇಶವಿಲ್ಲದೆ
ವಾಸುದೇವನ ಕೊಂಡೆ ಪ್ರೀತಿಯಿಂದಲೇ!
ಮೀರಾ ಬೆನ್ನಿಗೆ ಬಂದ ನೀರ ಗಿರಿಧರ
ಸೇರಿ ಅವನನು ಬಾಳು, ಏನು ಸುಂದರ!
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.