ಒಬ್ಬ ರಾಜನಿದ್ದನು. ಅವನಿಗೆ ಜಾಣನಾದ ಮಂತ್ರಿಯಿದ್ದನು. ಮಂತ್ರಿಯ ಸಹಾಯದಿಂದ ರಾಜ್ಯವಾಳುತ್ತ ರಾಜನು ಸುಖದಿಂದ ಇದ್ದನು.

ರಾಜನು ಒಂದು ದಿವಸ ಮಂತ್ರಿಮಾನ್ಯರೊಡನೆ ತನ್ನೋಲಗದಲ್ಲಿ ಕುಳಿತಾಗ ನೆರೆಯ ರಾಜನ ಕಡೆಯಿಂದ ಒಬ್ಬ ದೂತನು ಬಂದು, ತಾನು ತಂದ ಪತ್ರವನ್ನು ಮಂತ್ರಿಯ ಕೈಗೆ ಕೊಟ್ಟನು. ಮಂತ್ರಿ ಅದನ್ನೋದಿ ರಾಜನಿಗೆ ಹೇಳಿದನು – “ನೆರೆಯ ರಾಜನು ನಾಲ್ಕು ಪ್ರಶ್ನೆಗಳನ್ನು ಬರೆದು ಕಳಿಸಿದ್ದಾನೆ. ಆ ಪ್ರಶ್ನೆಗಳಿಗೆ ಸೂಕ್ತವಾದ ಉತ್ತರ ಕೊಡಬೇಕು. ಇಲ್ಲವೆ ಯುದ್ಧಕ್ಕೆ ಸಿದ್ಧರಾಗಬೇಕು.”

“ಯಾವುವು ಆ ನಾಲ್ಕು ಪ್ರಶ್ನೆಗಳು” ಎಂದು ರಾಜನು ಕೇಳಿದನು.

ಮಂತ್ರಿ ಹೇಳುತ್ತಾನೆ – “ಇವೇ ಆ ನಾಲು ಪ್ರಶ್ನೆಗಳು. (೧) ಒಳ್ಳೆಯದರಲ್ಲಿ ಕೆಟ್ಟದು ಯಾವುದು ? (೨) ಕೆಟ್ಟದರಲ್ಲಿ ಒಳ್ಳೆಯದು ಯಾವುದು ? (೩) ಅಂಗಡಿಯೊಳಗಿನ ನಾಯಿ ಯಾವುದು ? (೪) ಸಿಂಹಾಸನ ಮೇಲಿನ ಕತ್ತೆಯಾವುದು?”

“ಈ ಪ್ರಶ್ನೆಗಳಿಗೆ ಈಗಲೇ ಉತ್ತರ ಕೇಳಲಾಗಿದೆಯೆ ?”

“ಅಹುದು. ಆದರೆ ನಾನಿದಕ್ಕೆ ಮೂರುತಿಂಗಳ ಅವಧಿ ಕೇಳುವೆನು, ಆ ನೆರೆಯ ರಾಜನಿಗೆ. ಅಷ್ಟರಲ್ಲಿ ಉತ್ತರ ಸಿದ್ಧಪಡಿಸೋಣ” ಎಂದು ಮಂತ್ರಿಯು ರಾಜನಿಗೆ ಹೇಳಿ, ಬಂದ ದೂತನ ಕೈಯಲ್ಲಿ ಪ್ರತ್ಯುತ್ತರ ಬರಕೊಟ್ಟನು. ಅದರಲ್ಲಿ ಆ ನಾಲ್ಕು ಪ್ರಶ್ನೆಗಳಿಗೆ ಉತ್ತರ ಒದಗಿಸಲು ಮೂರುತಿಂಗಳ ಅವಧಿ ಬೇಕೆಂದು ತಿಳಿಸಿದನು.

ಮಂತ್ರಿಯು ನಾಗರಿಕನ ವೇಷದಿಂದ ನೆರೆಯ ರಾಜನ ಪಟ್ಟಣಕ್ಕೆ ಹೋಗಿ ಅಲ್ಲಿಯೇ ನೆಲೆಸಿದನು. ಪಟ್ಟಣದ ಪ್ರತಿಷ್ಠಿತ ಜನರೊಡನೆ ಸ್ನೇಹ ಬೆಳೆಸಿದನು. ಸಕಲರಿಗೂ ಪರಿಚಿತವ್ಯಕ್ತಿಯಾದನು. ಅಲ್ಲದೆ ಅಲ್ಲಿಯ ಒಬ್ಬ ಕಲಾವಂತಿಯಾದ ಪಾತ್ರದವಳೊಡನೆ ಸಂಪರ್ಕವನ್ನಿರಿಸಿಕೊಂಡನು. ಅಲ್ಲಿಯ ಕೊತವಾಲನೊಡನೆ ವಿಶೇಷ ಬಳಕೆ. ಅಪರ ಮನೆಗಳೂ ಹತ್ತಿರ ಹತ್ತಿರದಲ್ಲಿಯೇ ಇದ್ದವು. ತಿಂಗಳೊಪ್ಪತ್ತಿನಲ್ಲಿ ಅಲ್ಲಿಯ ಪರಿಚಿತರೆಲ್ಲರೂ ಸೇರಿ, ಅವನಿಗೊಂದು ಅನುರೂಪ ಕನ್ಯೆಯನ್ನು ಗೊತ್ತುಮಾಡಿ ಲಗ್ನವನ್ನೂ ಮಾಡಿದರು. ಅದರಿಂದ ಅವನು ಸುಖದಿಂದ ಬಾಳ್ವೆ ಮಾಡತೊಡಗಿದನು.

ನಾಗರಿಕನು ಸಾಯಂಕಾಲ ಮನೆಗೆ ಬರುವಾಗ ತನ್ನ ಕರವಸ್ತ್ರದಲ್ಲಿ ಕಲ್ಲಂಗಡಿ ಹಣ್ಣನ್ನು ಕಟ್ಟಿಕೊಂಡು ಮನೆಗೆ ತಂದನು. “ಇದೇನು ತಂದಿರಿ” ಎಂದು ಹೆಂಡತಿ ಕೇಳಿದಳು.

“ಇದು ಗೌಪ್ಯವಾಗಿರಬೇಕಾದ ಸಂಗತಿ. ಯಾರಮುಂದೆಯೂ ಹೇಳಬಾರದು. ಇದು ರಾಜನ ಮಗನ ತಲೆ. ಕೊಲೆಮಾಡಿಸಿದ್ದೇನೆ” ಎಂದು ಪಿಸುಮಾತಿನಲ್ಲಿ ಹೆಂಡತಿಗೆ ತಿಳಿಸಿದನು. ಆ ಬಳಿಕ ಕರವಸ್ತ್ರದಲ್ಲಿ ಕಟ್ಟಿದ ಗಂಟನ್ನು ಪೆಟ್ಟಗೆಯಲ್ಲಿಟ್ಟು ಕೀಲಿ ಹಾಕಿದನು.

ಯಾರ ಮುಂದೆಯೂ ಹೇಳಬಾರದೆಂದು ಗಂಡನು ಖಂಡಿತವಾಗಿ ಹೇಳಿದರೂ, ಆತನ ಹೆಂಡತಿಗೆ ಜೀವ ಕೇಳಲಾರದೆ, ನೆರೆಯಲ್ಲಿಯೇ ಇರುವ ಕೊತವಾಲನ ಮನೆಗೆ ಹೋದಾಗ ಆತನ ಹೆಂಡತಿಗೆ ಆ ಗೌಪ್ಯಸಂಗತಿಯನ್ನು ಸಹಜವಾಗಿ ಉಸುರಿದಳು, ಆ ಸಂಗತಿಯು ಕೊತವಾಲನಿಗೆ ಹೆಂಡತಿಯಿಂದ ತಿಳಿಯಲು ತಡವಾಗಲಿಲ್ಲ.

“ಸ್ನೇಹಿತ, ಜೀವದ ಗೆಳೆಯ ಆದರೇನಾಯಿತು ? ರಾಜಕುಮಾರನ ಕೊಲೆಯ ಕೃತಿಯನ್ನು ದಕ್ಕಿಸಿಕೊಳ್ಳುವುದೇ ?” ಎಂದು ಕೊತವಾಲನು ಆ ನಾಗರಿಕನನ್ನು ಕೈದು ಮಾಡಿ ಸೆರೆಮನೆಯಲ್ಲಿ ಇಡಿಸಿದನು. ಆ ನಾಗರಿಕನೊಡನೆ ಸಂಪರ್ಕವಿರಿಸಿಕೊಂಡ ಆ ಕಲಾವತಿ ಪಾತ್ರದವಳು ರಾಜನ ಆಸ್ಥಾನಕ್ಕೆ ಬಂದು ತನ್ನ ನೃತ್ಯದಿಂದ ಎಲ್ಲರನ್ನೂ ಹರ್ಷಗೊಳಿಸಿದಳು. “ಏನು ಪ್ರತಿಫಲ” ಎಂದು ರಾಜನು ಆಕೆಗೆ ಕೇಳಿದನು. ಆಕೆ – “ನನಗೆ ಯಾವ ಪ್ರತಿಫಲವೂ ಬೇಡ. ಬಂಧಿಸಿಟ್ಟ ಆ ನಾಗರಿಕನನ್ನು ಬಿಟ್ಟುಕೊಟ್ಟರೆ ಸಾಕು. ನನಗದೇ ಪ್ರತಿಫಲ” ಎಂದು ಮರು ನುಡಿಯಲು ರಾಜನು, ಆಕೆಯ ಬೇಡಿಕೆಯಂತೆ ಆ ನಾಗರಿಕನನ್ನು ಬಂಧಮುಕ್ತಗೊಳಿಸಿದನು.

ಸೆರೆಮನೆಯಲ್ಲಿದ್ದವನು ನಾಗರಿಕವೇಷದ ಮಂತ್ರಿಯಲ್ಲವೆ ? ಆತನು ತನ್ನ ರಾಜನಿಗೆ ಪತ್ರಕಳಿಸಿ – “ನಾಲ್ಲೂ ಪ್ರಶ್ನೆಗಳಿಗೆ ಉತ್ತರ ಸಿದ್ಧವಾಗಿವೆ. ತೀವ್ರ ಬನ್ನಿರಿ” ಎಂದು ತಿಳಿಸಿದನು.

ರಾಜನು ನೇರವಾಗಿ ನೆರೆಯ ರಾಜನ ಆಸ್ಥಾನಕ್ಕೆ ಹೋಗಿ – “ನಿಮ್ಮ ಉತ್ತರಗಳು ಸಿದ್ಧವಾಗಿವೆ. ಸೆರೆಮನೆಯಲ್ಲಿ ಬಂಧಿತನಾಗಿದ್ದ ಆ ನಾಗರಿಕನನ್ನು
ಕರೆಯಿಸಿರಿ” ಎಂದು ಹೇಳಿದನು.

ನೆರೆಯ ರಾಜನು ಕೊತವಾಲನ ಮುಖಾಂತರ ಆ ನಾಗರಿಕನನ್ನು ಕರೆಯಿಸಿದನು. ಆತನೇ ನಮ್ಮ ಮಂತ್ರಿಯೆಂದೂ ಅವನೇ ನಾಲ್ಕೂ ಪ್ರಶ್ನೆಗಳಿಗೆ ಈಗ ಉತ್ತರ ಹೇಳುವನೆಂದೂ ರಾಜನು ತಿಳಿಸಿದನು.

ಮಂತ್ರಿಯು ನೆರೆಯರಾಜನಿಗೆ ಆತನ ನಾಲ್ಕು ಪ್ರಶ್ನೆಗಳಿಗೆ ಕ್ರಮವಾಗಿ ಉತ್ತರ ಹೇಳಿದನು-

(೧) ಒಳ್ಳೆಯದರಲ್ಲಿ ಕೆಟ್ಟದಾವುದು ? ಈ ಪ್ರಶ್ನೆಗೆ ಉತ್ತರವೆಂದರ ನನ್ನ ಹೆಂಡತಿ ಗೌಪ್ಯಸಂಗತಿಯೆಂದು ತಿಳಿಸಿದ್ದರೂ ಆಕೆ ಕೊತವಾಲನ ಮನೆಯಲ್ಲಿ ಅದನ್ನು ಬಹಿರಂಗಪಡಿಸಿದಳು.

(೨) ಕೆಟ್ಟದರಲ್ಲಿ ಒಳ್ಳೆಯದಾವುದು ? ಈ ಪ್ರಶ್ನೆಗೆ ಉತ್ತರ ಆ ಪಾತ್ರದದಳು. ಆಕೆ ಸೂಳೆಯಾಗಿದ್ದರೂ ಋಣಾನುಬಂಧವನ್ನು ನೆನೆದು, ನನ್ನನ್ನು ಬಂಧಮುಕ್ತಗೊಳಿಸಿದಳು.

(೩) ಅಂಗಡಿಯೊಳಗಿನ ನಾಯಿ ಯಾವುದೆಂದರೆ – ಈ ಕೊತವಾಲ. ಈತನಿಗೆ ನಾನು ಪ್ರಾಣಸ್ನೇಹಿತನಾಗಿದ್ದರೂ ಸಂಪೂರ್ಣ ವಿಚಾರಿಸದೆ ನನ್ನನ್ನು ಸೆರೆಯಲ್ಲಿರಿಸಿದನು.

(೪) ಸಿಂಹಾಸನ ಮೇಲಿನ ಕತ್ತೆ ಯಾವುದೆಂದು ಹೇಳಲಿ ? ತಾವೇ ದೊರೆಗಳೇ. ರಾಜನ ಮಗ ಕೊಲೆಯೆಂದಕೂಡಲೇ ಕೊಲೆಗಾರನೆಂದು ಶಿಕ್ಷೆ ವಿಧಿಸಿಯೇ ಬಿಟ್ಟಿರಿ. ಯಾವ ರಾಜನ ಮಗನ ಕೊಲೆಯಾದದ್ದು – ಎಂಬುದನ್ನೇನೂ ನೀವು ವಿಚಾರಿಸಲಿಲ್ಲ.

ನೆರೆಯ ರಾಜನು ಉತ್ತರಗಳನ್ನು ಕೇಳಿಕೊಂಡು ಮಂತ್ರಿಯ ಜಾಣತನಕ್ಕೆ ತಲೆದೂಗಿ, ಆತನ ರಾಜನನ್ನು ಧನ್ಯವಾದಗಳೊಡನೆ ಬೀಳ್ಕೊಟ್ಟನು.
*****

ಪುಸ್ತಕ: ಉತ್ತರ ಕರ್ನಾಟಕದ ಜನಪದ ಕಥೆಗಳು

ಸಿಂಪಿ ಲಿಂಗಣ್ಣ
Latest posts by ಸಿಂಪಿ ಲಿಂಗಣ್ಣ (see all)