ನಾಟಕ! ನಾಟಕ!
ಇಂದು ಸಂಜೆ ನಾಟಕ
ಸರ್ವರಿಗೂ ಸುಸ್ವಾಗತ
ನೀವೆಲ್ಲರೂ ಬಂದು ನೋಡಿ
ಅತ್ಯಂತ ಮನೋಹರ ಸಹಜ ನಾಟಕ
ಯಾವ ಆಡಂಬರವಿಲ್ಲ
ನಿಯೋಜಿತ ಸ್ಥಳವಿಲ್ಲ
ಬಹಳ ನೈಜ ನಾಟಕ.
ಎಷ್ಟು ನೈಜತೆಯೆಂದು
ತಿಳಿಯ ಬಯಸುವಿರೇನು?
ನೋಡುತ್ತಲೇದ್ದರೂ
ನಿಮಗೇ ತಿಳಿಯದು
ನಾಟಕ ನೋಡುತ್ತಿರುವಿರೆಂದು!
ಅಷ್ಟೇ ಏಕೆ?
ನೀವೇ ಅದರ ನಟರು ಕೂಡ!
ನೋಡಲು ಮರೆಯದಿರಿ
ಮರತು ನಿರಾಶರಾಗದಿರಿ.
ಏನು, ಬರಲಾಗುವುದಿಲ್ಲವೇ?
ಹೋಗಲಿ ಬಿಡಿ,
ಮತ್ತೊಮ್ಮೆ ನೋಡಿದರಾಯ್ತು
ತಲೆತಲಾಂತರಗಳಿಂದ ನಡೆಯುತ್ತಿದೆ,
ಆಚಂದ್ರಾರ್ಕವಾಗಿ ನಡೆಯುತ್ತದೆ.
ಎಂದಾದರೂ ನೋಡಿದರಾಯ್ತು
ಮಾಡಿದರಾಯ್ತು
ಎನ್ನುತ್ತಲೇ ಮಾಡುವ,
ಸದಾ ನೋಡುತ್ತಲೇ ಇರುವ
ನಾಟಕ ಈ ಜೀವನ ನಾಟಕ.
*****
೧೦-೦೭-೧೯೭೫