ನನ್ನೊಲವು ರಾಜಕಾರಣಕೆ ಹುಟ್ಟಿದ್ದಿತೊ
ಕಾಲಕಾಲದ ಪ್ರೀತಿದ್ವೇಷಕ್ಕೆ ಪಕ್ಕಾಗಿ,
ಕಸದಲ್ಲಿ ಕಸವೊ, ಹೂರಾಶಿಯಲಿ ಬಿಡಿಹೂವೊ
ಆಗಿ ಅಳುತಿತ್ತು ತಬ್ಬಲಿ ಭ್ರಷ್ಟಹುಟ್ಟಾಗಿ.
ಅದರ ಅಡಿಗಿಲ್ಲ ಆಕಸ್ಮಿಕದ ತಳಪಾಯ,
ಆಡಂಬರದ ಮಂದಹಾಸಕದು ಬಲಿಯಲ್ಲ;
ಕಾಲಕಾಲಕ್ಕೆ ತಕ್ಕಂತೆ ಹೊರಳುವ ರುಚಿಯ
ಅದುಮಿಟ್ಟ ಅತೃಪ್ತಿ ಏಟಿಗುರುಳುವುದಲ್ಲ ;
ನಾಲ್ಕೆ ಗಳಿಗೆಗಳ ಅಲ್ಪಾವಧಿಯ ನರಿ ನೀತಿ-
ತಂತ್ರ, ಧರ್‍ಮ ವಿರೋಧಿ ರೀತಿಗಳ ಭಯವಿಲ್ಲ ;
ಬಿಸಿಲುರಿಗೆ ಬೆಳೆದು ಬಿರುಮಳೆಗೆ ಅಡಗದ ಛಾತಿ,
ಭವ್ಯ ಸ್ವತಂತ್ರ ಸ್ಮಾರಕ ಅದಕೆ ಎದುರಿಲ್ಲ.
ತಪ್ಪಿನ ಹೆಸರಿನಲ್ಲಿ ಶುಭಕ್ಕೆ ಮಡಿದವರನ್ನು
ಸಾಕ್ಷಿ ಕರೆವೆ ಇದಕ್ಕೆ ಕಾಲವಂಚಿತರನ್ನು
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 124
If my dear love were but the child of state
















