ಅವನು ನಿನ್ನವನೆ ಒಪ್ಪಿದೆ, ಆಯ್ತೆ? ನನ್ನನ್ನು
ಅಡವು ಇಟ್ಟಿದ್ದೇನೆ ನಿನ್ನ ಸುಭಗೇಚ್ಛೆಗೆ.
ಮುಟ್ಬುಗೋಲಾಗಿಸಿಕೊ ನನ್ನ, ಅವನನ್ನು
ಬಿಡಿಸಿಕೊಳ್ಳಲು ಬಿಡು ನನ್ನೊಂದು ನೆಮ್ಮದಿಗೆ.
ನೀನೊಲ್ಲೆ ಇದಕೆ, ನಾ ಬಲ್ಲೆ, ಅವನಿಗು ತಾನೆ
ಎಲ್ಲಿ ಬಿಡುಗಡೆ? ನೀನು ಲೋಭಿ, ಅವನಿಗೊ ಕರುಣೆ.
ನನ್ನ ಪರ ಆಧಾರ ನಿಂತು ಬರೆಯಲು ತಾನೆ
ಹೊರಟು ಈ ಬಂಧದಲಿ ಸಿಕ್ಕುಬಿದ್ದಿದ್ದಾನೆ.
ಚಕ್ರಬಡ್ಡಿ ಸಮೇತ ಅಸಲು ಕೀಳುವ ಹೆಣ್ಣೆ
ನಿನ್ನ ಚೆಲುವಿನ ಅಂಕೆಯೊಳಗಿಟ್ಬು ಅವನನ್ನು
ಶಿಕ್ಷಿಸುತ್ತಿರುವೆ. ತಪ್ಪಾಗಿ ಬಳಸಿದ ನಾನೆ
ಕಳೆದುಕೊಳ್ಳುತ್ತಿರುವೆ ಮರುಗಿದ ಮಿತ್ರನನ್ನು.
ನನಗಿಲ್ಲ ಅವನು; ಇದ್ದೇವೆ ನಿನಗಿಬ್ಬರೂ,
ಮುಕ್ತಿ ನನಗಿಲ್ಲ ಸಾಲವನವನು ತೆತ್ತರೂ!
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 134
So, Now I have confessed that he is thine