‘ಶಬ್ದ ಪ್ರಸಂಗ’ವೆಂಬ ಕಾವ್ಯದ ಮೋಜವಾನಿ’

‘ಶಬ್ದ ಪ್ರಸಂಗ’ವೆಂಬ ಕಾವ್ಯದ ಮೋಜವಾನಿ’

‘ಕಾವ್ಯ ಅಂದ್ರ
ಕವಿಯ ಮನಿ-
-ಯ ಮೇಜವಾನೀ’

– ಬೆಂಗಳೂರಿನ ಕ್ರೈಸ್ಟ್ ಕಾಲೇಜು ಕನ್ನಡ ಸಂಘ ಪ್ರಕಟಿಸಿರುವ ಆನಂದ ಝಂಜರವಾಡರ ‘ಶಬ್ದ ಪ್ರಸಂಗ’ ಸಂಕಲನ ಓದುಗನಿಗೆ ಮುಖಾಮುಖಿಯಾಗುವುದೇ ಮೇಲಿನ ಸಾಲುಗಳ ಮೂಲಕ. ಈ ಕವಿಯ ಮನೆಯ ಮೇಜವಾನಿ ಅಂತಿಂಥದಲ್ಲ- ಕವಿ ಸಾವಿರದ ಪಡಿ ಪದಾರ್‍ಥಾನ ಛಂದ ಬಡಿಸಿಟ್ಟದ್ದಾನೆ. ಇಲ್ಲಿ ವೈವಿಧ್ಯತೆಯಿದೆ. ನುರಿತ ಅಡುಗೆ ಕಲಾವಿದನ ಕೈಯಲ್ಲಿ ಒಣಗಸೋದು, ನೆನಸೋದು, ಬೇಯ್ಸೋದು, ಕರಿಯೋದು ಎಲ್ಲವೂ ಹದವಾಗಿದೆ. ‘ಖಮ್ಮಗ ವಾಸನೀ ಮನೀ ಎಲ್ಲಾ ತುಂಬೇದ/ ಯಾರ ಬಂದ್ರೂ ಕರೀತದ ಒಳಗ ಬರ್ರಿ’ ಎಂದು ಕವಿ ಆಶ್ವಾಸನೆ ನೀಡುತ್ತಾರೆ. ಸಂಕಲನದ ಆರಂಭದಲ್ಲಿ ನೀಡುವ ಈ ಭರವಸೆ ಸಂಕಲನದುದ್ದಕ್ಕೂ ಹುಸಿಯಾಗುವುದಿಲ್ಲ. ಅದು ಝಂಜರವಾಡರ ಕಾವ್ಯದ ಯಶಸ್ಸು.

ಕವಿತೆಯೆಂಬುದು ಅಂತರಂಗದ ವ್ಯಾಪಾರವಾಗಿರುವ ಸಾಧ್ಯತೆಗಳು ಕಡಿಮೆಯಾಗಿರುವ ಈ ದಿನಗಳಲ್ಲಿ ಕವಿತೆಯನ್ನು ಪ್ರೀತಿಸುವವರಿಗೆ ಝಂಜರವಾಡರ ‘ಶಬ್ದ ಪ್ರಸಂಗ’ ಕಾವ್ಯದ ಮೇಜವಾನಿ ಅನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಝಂಜರವಾಡ ನಮ್ಮ ನಡುವಿನ ಮಹತ್ವದ ಕವಿ ಅನ್ನುವುದನ್ನೂ ‘ಶಬ್ಬ ಪ್ರಸಂಗ’ ರುಜುವಾತು ಪಡಿಸುತ್ತದೆ. ‘ಶಬ್ಬ ಪ್ರಸಂಗ’ದ ಕುರಿತು ಕೆಲವು ಅನ್ನಿಸಿಕೆಗಳನ್ನು ಹಂಚಿಕೊಳ್ಳುವ ಮುನ್ನ ಒಂದು ವಿಷಯವನ್ನು ಸ್ಪಷ್ಟಪಡಿಸಬೇಕು. ಅದೆಂದರೆ ಝಂಜರವಾಡರ ಕವಿತೆಗಳನ್ನು ವಿಮರ್‍ಶಿಸುವುದು ಆಥವಾ ಅವುಗಳಿಗೆ ಬೆಲೆ ಕಟ್ಟುವುದು ಈ ಬರಹದ ಉದ್ದೇಶವಲ್ಲ. ಕವಿತೆಯನ್ನು ಪ್ರೀತಿಸುವ ಸಹೃದಯನಾಗಿ ‘ಶಬ್ಬ ಪ್ರಸಂಗ’ಕ್ಕೆ ಮುಖಾಮುಖಿಯಾದಾಗ ಉಂಟಾದ ಅನ್ನಿಸಿಕೆಗಳ ಕೆಲವು ಟಿಪ್ಪಣಿಗಳು ಇಲ್ಲಿವೆ.

ಪ್ರತಿ ಓದಿಗೂ ಹೊಸ ಅರ್‍ಥ ಸಾಧ್ಯತೆಗಳನ್ನು ಹೊಳೆಯಿಸುವ ‘ಶಬ್ಬ ಪ್ರಸಂಗ’ದ ಮಹತ್ವದ ಕವಿತೆಗಳು ಅರ್‍ಥವಾಗಿಯೂ ಮಿಗುವ ಸಂಕೀರ್‍ಣ ರಚನೆಗಳು. ಬೇಂದ್ರೆ ಹಾಗೂ ಅಡಿಗರನ್ನು ಎರಕ ಹೊಯ್ದಂತೆ ಕಾಣುವ ಝಂಜರವಾಡರ ಕವಿತೆಗಳ ಪಟ ಹಾರುವ ಮುಗಿಲ ವಿಸ್ತಾರ ಬಹು ದೊಡ್ಡದು. ‘ಶಬ್ಬ ಪ್ರಸಂಗ’ ದಲ್ಲಿನ ಕವಿತೆಗಳನ್ನು ಓದುವಾಗ ಆನೇಕ ಬಾರಿ ಬೇಂದ್ರೆ ಹಾಗೂ ಆಡಿಗ ನೆನಪಿಗೆ ಬರುವುದು ಇಲ್ಲಿನ ಕವಿತೆಗಳ ಶ್ರೇಷ್ಠತೆಯಿಂದಲೇ ಹೊರತು, ಕವಿತೆಗಳ ಬಗೆಗಿನ ಆನುಮಾನದಿಂದಲ್ಲ. ಇಡೀ ಕನ್ನಡ ಕಾವ್ಯವನ್ನು ಪ್ರಭಾವಿಸಿರುವ ಬೇಂದ್ರೆ ಹಾಗೂ ಅಡಿಗರ ನೆರಳು ‘ಶಬ್ಬ ಪ್ರಸಂಗ’ದ ಕವಿಯ ಮೇಲೆ ಬಿದ್ದಿಲ್ಲವೆಂದು ತರ್‍ಕ ಹೂಡುವ ಅಗತ್ಯವೂ ಇಲ್ಲ. ‘ಆಹೋ ಬೇಂದ್ರ ಮಾಸ್ತರ’, ‘ಅಡಿಗರೂ ಹೋದರು’, ‘ಆಡಿಗರನ್ನು ಮತ್ತೆ ಓದಿದಾಗ’- ಕವಿತೆಗಳನ್ನು ಓದಿದರೆ ಝಂಜರವಾಡರಿಗೆ ಇಬ್ಬರು ಮಹಾನ್ ಕವಿಗಳ ಮೇಲಿನ ಗೌರವ ಅರ್‍ಥವಾಗುತ್ತದೆ. ಒಂದರ್‍ಥದಲ್ಲಿ ಬೇಂದ್ರೆ ಹಾಗೂ ಅಡಿಗರ ಹಾದಿಯ ಮುಂದುವರೆದ ಕುರುಹಾಗಿ ‘ಶಬ್ಬ ಪ್ರಸಂಗ’ದ ಕವಿತೆಗಳು ಕಾಣಿಸುತ್ತವೆ. ಬೇಂದ್ರೆ, ಅಡಿಗರನ್ನು ಮೆಚ್ಚಿಯೂ ಅವರನ್ನು ಮೀರುವ ಮಹತ್ವಾಕಾಂಕ್ಷೆ, ಸಾಮರ್‍ಥ್ಯ ಹಾಗೂ ಆತ್ಮವಿಶ್ವಾಸ ಝಂಜರವಾಡರದು. ಅವರು ಬರೆಯುತ್ತಾರೆ:

ನಿನ್ನ ಮುಗಿಲಾಗ ನಿನ್ನ ಗಾಳೀಪಟಾ ಹಾರಸು
ಮಂದೀ ಹೆಗಲಮ್ಯಾಲ ಕೈ ಹಾಕಬ್ಯಾಡಾ

ಕವಿತೆ, ಕವಿ ಹಾಗೂ ಕವಿಯ ತೊಳಲಾಟಗಳ ಕುರಿತು ‘ಶಬ್ದ ಪ್ರಸಂಗ’ದ ಬಹುತೇಕ ಕವಿತೆಗಳು (ನನ್ನ ಕವಿತೆ, ಕವಿಯ ಸಾವು, ಗಾಳೀಪಟ, ಕಾವ್ಯ ಅಂದ್ರ, ನನ್ನ ಕವಿತೆಗೆ.. ಇತ್ಯಾದಿ) ಧ್ಯಾನಿಸಿರುವುದು ಗಮನಾರ್‍ಹ. ಮುಖಾಮುಖಿಯಾಗುವ ಕವಿ, ಆತ್ಮಕ್ಕೂ ಮುಖಾಮುಖಿಯಾಗೂತ್ತಾನೆ. ಇಲ್ಲಿ ಕವಿಯ ಆತ್ಮ ಕವಿತೆಯೇ ಆಗಿದೆ. ಆತ್ಮ ಕೇಂದ್ರಿತವಾದಾಗ ಅಥವಾ ಬಾಲ್ಯದ ನೆನಪು-ಅನುಭವಗಳತ್ತ ಹೊರಳಿದಾಗ ಕವಿ ಸ್ಥಳೀಯ ಭಾಷೆ ಬಳಸುವುದು, ಉಳಿದಂತೆ ಬರಹದ ರೂಢಿಭಾಷೆಗೆ ಮರಳುವ ಝಂಜರವಾಡರ ಕಾವ್ಯಭಾಷೆ ಕುತೂಹಲಕರವಾದುದು.

‘ಶಬ್ಬ ಪ್ರಸಂಗ’ದ ಕವಿ ನಾದಲೋಲ. ಝಂಜರವಾಡರ ಲೇಖನಿಯಲ್ಲಿ ಪದಗಳು ಬಾಗುವ ಬಳುಕುವ ಮೋಡಿಯೇ ಮೋಡಿ. ಇಲ್ಲಿನ ಬಹುತೇಕ ಕವಿತೆಗಳು ಹಾಡಬಾರದ ಭಾವಗೀತೆಗಳು. ಆಡು ಮಾತಿನ ಬಳಕೆಯ ಕವಿತೆಗಳನ್ನು ಕಟ್ಟುವಾಗಂತೂ ಝಂಜರವಾಡ ಆವರು ಮಾತುಗಳ ಮಾಯೆಯಲ್ಲಿ ಮೈಮರೆಯುತ್ತಾರೆ.

ಕವಿಯ ಪಾಲಿಗೆ ಕವಿತೆ ಎನ್ನುವುದು ಅಂತರಂಗದ ವ್ಯಾಪಾರವೋ ಇನ್ನೊಂದೋ ಅಲ್ಲ. ಇಲ್ಲಿನ ಕವಿತೆ ತೃಪ್ತ ಮನಸ್ಸಿನ ಗರ್‍ಭದಲ್ಲಿ ಹುಟ್ಟಿದುದೂ ಅಲ್ಲ ಆ ಕಾರಣದಿಂದಲೇ ‘ಶಬ್ದ ಪ್ರಸಂಗ’ದಲ್ಲಿನ ಕವಿತೆಗಳಲ್ಲಿ ಪ್ರಕೃತಿಯ ಸ್ಥಾನ ತೀರಾ ಗೌಣವಾದುದು.

ಝಂಜರವಾಡರ ಕವಿತೆ-

ಹೆಣಕ್ಕುಡಿಸಿದ ಸೀರೆಯನ್ನೇ ಉಟ್ಟು;
ಜೀವಂತ ಜನರನ್ನು ಕಾಮಿಸಿ ಕರೆಯುತ್ತಾಳೆ
ಸತ್ತವರ ಸುತ್ತ ಅಳುವವರನ್ನು ಕಂಡು
ನಗುತ್ತಾಳೆ ನನ್ನ ಕವಿತೆ
ನಗೆಯ ಬೂದಿಯಲ್ಲಿ ನಿಗಿನಿಗಿಸುವ ಚಿತೆ.

ವಿಷಾದವೇ ಸ್ಥಾಯಿಯಾದ ಸಂದರ್‍ಭದಲ್ಲಿ ‘ಶಬ್ಬ ಪ್ರಸಂಗ’ದ ಕವಿತೆಗಳು
ಹುಟ್ಟಿದ್ದರೂ, ಕವಿಯ ಆಶಯ ಸಹೃದಯನಿಗೆ ಸಂತೋಷ ನೀಡುವುದೇ ಆಗಿದೆ.
‘ನನ್ನ ಕವಿತೆಗೆ ಚಳಿಯಲ್ಲಿ ಸುಖಕೊಡುವ
ಬೆಚ್ಚಿಗಿನ ಮೊಲೆಗಳ ಮಾಂಸಲತೆ ಇರಲಿ
ಎರೆದು ಕೊಂಡವಳ ಕೇಶಗಳ ವಿಶಾಲ ಬೆನ್ನ ಹರವು
ಸಿಪ್ಪೆಯೊಡೆದ ಬಿಸಿತುಟಿಗಳ ಹುಳಿ ಹುಳಿಯಾದ ರುಚಿ ಇರಲಿ’

-ಎನ್ನುವುದು ಕವಿಯ ಆಶಯ.

ಕವಿತೆಯ ಬಗ್ಗೆ ಏನೆಲ್ಲಾ ಆತ್ಮ ವಿಶ್ವಾಸದ ಮಾತಾನಾಡಿದರೂ ತನ್ನ ಕವಿತೆ ಓದುಗನಿಗೆ ತಲುಪದೆ ಹೋದರೆ ಫಲವೇನು ಎನ್ನುವ ಎಲ್ಲ ಕವಿಗಳೆದೆಯ ಭಯದ ಬೀಜ ಝಂಜರವಾಡರದರದೂ ಆಗಿದೆ. ‘ಕವಿಯ ಸಾವು’ ಈ ಭಯವನ್ನು ಸಹೃದಯನ ಎದೆ ಚಿತ್ತಾಗುವಂತೆ ಚಿತ್ರಿಸಿದೆ. ಕವಿಯ ಸಾವಿನ ಹಿನ್ನೆಲೆಯಲ್ಲಿ ಆತನ ಬಗ್ಗೆ ಜನ ಮಾತನಾಡಿಕೊಳ್ಳುವ ವಿವರಗಳ ಕವಿತೆ ಮುಕ್ತಾಯವಾಗುವುದು- ‘ಕವಿತಾನ ಮರತಾವ್ರಿಗೆ, ಕವೀನ್ನ ಮರೀಲಿಕ್ಹೆಷ್ಟೊತ್ತು?’ ಎನ್ನುವ ವಿಷಾದದ ಸಾಲಿನೊಂದಿಗೆ.

‘ದ್ವೇಷ’, ‘ಕೊಂಡರು’, ’ಜೀವನ’ ಮುಂತಾದ ಅಷ್ಟೇನೂ ಮಹತ್ವವಾದುದನ್ನು ಹೇಳದ ಕವಿತೆಗಳೂ ‘ಶಬ್ಬ ಪ್ರಸಂಗ’ದಲ್ಲಿವೆ. ಆದರೆ- ‘ಸಂಸ್ಕೃತಿ ಸರಳರೇಖೆಯಲ್ಲ’, ‘ತಾರೆ ಮತು ವೃತ್ತಗಳು’, ‘ಜಂಗೀ-ಜಾತ್ರೆ’, ‘ಇದೇ ಹೊಳೆಯಲ್ಲಿ’, ‘ಆಟಾ’, ‘ಮುಟ್ಟಾಟ’ದಂಥ ಕವಿತೆಗಳ ಕವಿ ಝಂಜರವಾಡರ ಕಾವ್ಯ ಪ್ರತಿಭೆ ಮೇಲ್ಮಟ್ಟದ್ದೆನ್ನುವುದರಲ್ಲಿ ಅನುಮಾನವೇ ಇಲ್ಲ.

‘ಶಬ್ದ ಪ್ರಸಂಗ’ದ ಕವಿತೆಗಳಲ್ಲಿನ ವರ್‍ತಮಾನಕ್ಕೆ ಸ್ಪಂದನ, ಪಾರಮಾರ್‍ಥ ಚಿಂತನೆ, ಅಧ್ಯಾತ್ಮದ ವಾಸನೆ ಮುಂತಾದ ಅಂಶಗಳನ್ನು ಚರ್‍ಚಿಸಲು ಇಲ್ಲಿ ಪ್ರಯತ್ನಿಸಿಲ್ಲ. ಕೆಲವು ಕವಿತೆಗಳ ಪ್ರವೇಶವೇ ಕಠಿಣವಾಗಿದೆ. ಆದರೆ, ಝಂಜರವಾಡರ ಕವಿತೆಗಳೊಂದಿಗೆ ಗುದ್ದಾಡುವುದೂ ಸುಖವೇ.

‘ಶಬ್ಬ ಪ್ರಸಂಗ’ ಸಂಕಲನದ ಕೆಳಗಿನ ಸಾಲುಗಳೊಂದಿಗೆ ಈ ಬರಹವನ್ನು ಮುಗಿಸುತ್ತೇನೆ:

ಕವೀನೂ. ನಮ್ಮ – ನಿಮ್ಮ ಪ್ಯಾಟ್ಯಾಗ ಸಂತೀ ಮಾಡತಾನ
ನಮ್ಮ ಪಂಕ್ತ್ಯಾಗ ಕೂಡುತಾನ.
ಅವಂಗೂ ತನ್ನ ಸಾಹಿತ್ಯದ ಬಗ್ಗೇ ತಾನ ಹೇಳಬೇಕಾದ ಮಾತು
ಇದ್ದೇ ಇರ್‍ತಾವ.
ತಗದ ಒಗಿರಿ ಇನ್ನರೇ ಆ ನಿಮ್ಮ ‘ಪೋರ್ಕು’ ‘ಸ್ಪೂನೂ’
ಈ ಕೈಲೆ ಮಾಡಿದ್ದನ್ನ ಇದ ಕೈಲೇ ಉಣ್ಣೂಣು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಾಸತಿ
Next post ಹೋಮರ್ ಹಾಡಿದ ಹೆಣ್ಣು

ಸಣ್ಣ ಕತೆ

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಜಡ

  ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

 • ಪಾಠ

  ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

 • ಗುಲ್ಬಾಯಿ

  ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

cheap jordans|wholesale air max|wholesale jordans|wholesale jewelry|wholesale jerseys